‘ನಮ್ಮ ದಿವಾಕರ್’ ಕಾರ್ಯಕ್ರಮ ಕತೆಗಾರ ಎಸ್. ದಿವಾಕರ್ ಅವರು ಎಂಬತ್ತನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಲು ನವೆಂಬರ್ 26ರ ಭಾನುವಾರ ಬೆಳಿಗ್ಗೆ 10.15ಕ್ಕೆ ಬೆಂಗಳೂರಿನ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್’ ಸಭಾಂಗಣದಲ್ಲಿ ‘ನಮ್ಮ ದಿವಾಕರ್’ ಕಾರ್ಯಕ್ರಮ ನಡೆಯಲಿದೆ. ‘ಪರಿಮಳದ ಪಡಸಾಲೆ’ ಎಂಬ ದಿವಾಕರ್ ಅವರನ್ನು ಕುರಿತ ವಿಶೇಷ ಸಂಚಿಕೆ ಈ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ. ಪಂಡಿತ್ ಪರಮೇಶ್ವರ ಹೆಗಡೆ ಅವರು ಸ್ವರ ಸಂಯೋಜಿಸಿರುವ ದಿವಾಕರ್ ಅವರದ್ದೇ ರಚನೆಯ ಗೀತೆಗಳ ಗಾಯನ ಕಾರ್ಯಕ್ರಮವೂ ಇದೆ.

ಯಾವ ಉಪಮೆಯಿಂದಲೂ ಎಸ್. ದಿವಾಕರ್ ಅವರನ್ನು ವರ್ಣಿಸಲು ಸಾಧ್ಯವಿಲ್ಲ. ಕವಿ, ಕತೆಗಾರ, ಸಂಪಾದಕ, ಚಿತ್ರಕಾರ, ಅನುವಾದಕ, ಅಂಕಣಕಾರ, ಸಂಗೀತಪ್ರಿಯ, ಸಂಗೀತಾಭ್ಯಾಸಿ, ಚಲನಚಿತ್ರ ನಿರ್ದೇಶಕ ಮತ್ತು ಅತ್ಯಂತ ವಿಶೇಷ ಓದುಗ–ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅವರಿಗೆ ಅವರೇ ಹೋಲಿಕೆ. ದಿವಾಕರ್ ಜೊತೆ ಮಾತಿಗೆ ಕೂತರೆ ಅಥವಾ ಅವರ ಲೇಖನ ಸರಣಿಗಳನ್ನು ಗಮನಿಸಿದರೆ ಅವರು ಒಂದಕ್ಕೊಂದು ಕುಣಿಕೆ ಹಾಕುವ ಸಂಗತಿಗಳು ವಿವಿಧ ರಂಗಗಳಲ್ಲಿ ಅವರಿಗಿರುವ ಒಳನೋಟಗಳಿಂದ ಬೆಳಗುತ್ತ, ಫಾರ್‌ಸ್ಟರ್ ಹೇಳಿದ ‘ಓನ್ಲಿ ಕನೆಕ್ಟ್’ ಅನ್ನುವುದಕ್ಕೆ ಒಂದು ಪ್ರಾತ್ಯಕ್ಷಿಕೆಯಂತೆ ಇರುತ್ತವೆ.

ಜಾಗತಿಕ ಸಾಹಿತ್ಯದ ಎಂಥ ವಿಸ್ತಾರವಾದ ಓದೇ ಇರಲಿ ಅದನ್ನು ಕನ್ನಡದ ಮನಸ್ಸಿನಿಂದ, ಕನ್ನಡದ ಒಳಗೆ ಇಟ್ಟು ನೋಡದ ಹೊರತು ಅದು ಹೋಗದೂರಿನ ಹಾದಿ ತಿಳಿದಷ್ಟೇ ಪ್ರಯೋಜನಕರ. ಅಂಥ ಅರ್ಥಪೂರ್ಣ ಸಂವಾದ ಸಾಧ್ಯವಾಗಲು ಕನ್ನಡದ ಓದು ಕೂಡ ಗಾಢವಾಗಿಯೇ ಇರಬೇಕು. ಈ ಎರಡೂ ಕರಗತವಾಗಿರುವ ದಿವಾಕರರಿಗೆ ಸಂಗೀತ ಹಾಗೂ ಆಧುನಿಕ ಕಲಾಪ್ರಕಾರಗಳ ಆಳವಾದ ಜ್ಞಾನ ಕೂಡ ಇದೆ. ಅವರ ಬರವಣಿಗೆಯೊಳಗೆ, ಅಗೋ ಅಲ್ಲಿ ನೋಡು, ಇಲ್ಲಿ ನೋಡು ಎಂದು ಸಹಯಾತ್ರಿಗೆ ಬೊಟ್ಟು ಮಾಡಿ ಸೂಚಿಸುತ್ತ, ಜೊತೆಯಾಗಿ ಆ ವಿಶೇಷ ದೃಶ್ಯವನ್ನು ಸವಿಯುವ ಪಯಣಿಗನಂತೆ ಅವರು ಕಾಣಿಸುತ್ತಾರೆ. ಹಾಗೆ ಗಮನ ಸೆಳೆಯದೇ ಹೋಗಿದ್ದರೆ, ನಾವು ನಿಂತ ಕನ್ನಡದ ಜಾಗದಿಂದ ಎಷ್ಟೊಂದನ್ನು ಕಾಣದೇ ಹೋಗುತ್ತಿದ್ದೆವಲ್ಲ ಎಂಬುದು ಹೊಳೆಯುತ್ತದೆ. ಹೀಗೆ ಕಾಣಿಸಲು ವಿಭಿನ್ನ ಬಗೆಯ ಸೃಜನಶೀಲತೆ ಮತ್ತು ಸಾಹಿತ್ಯವನ್ನು ಪ್ರಾಂಜಲವಾದ ಮನಸ್ಸಿನಿಂದ ಆನಂದಿಸುವ ಗುಣ ಅತ್ಯವಶ್ಯ. ಹಂಚಿಕೊಳ್ಳುವ ಸಂತೋಷವಲ್ಲದೇ ಬೇರೆ ಯಾವುದೂ ಮುಖ್ಯವಲ್ಲವೆನ್ನುವ ನಿಲುವು ಬೇಕಾಗುತ್ತದೆ. ಇವೆಲ್ಲವೂ ದಿವಾಕರರಲ್ಲಿ ಧಾರಾಳವಾಗಿ ಇರುವುದರಿಂದ ಅವರ ಒಡನಾಟ ಮತ್ತು ಬರವಣಿಗೆ ನಮ್ಮಲ್ಲೊಂದು ಬಗೆಯ ಹೊಸ ತಿಳಿವಳಿಕೆಯನ್ನು ಮೂಡಿಸಿ, ಕೃತಜ್ಞತೆಯ ಭಾವನೆಯನ್ನು ಹುಟ್ಟಿಸುತ್ತದೆ.

ದಿವಾಕರ್ ಕಟ್ಟಿಕೊಡುವ, ಮೌಖಿಕ ಪರಂಪರೆಯಿಂದ ಸತ್ವ ಪಡೆದ, ಓದುಗ ಕೇಂದ್ರಿತ ಸಾಹಿತ್ಯ ಚರಿತ್ರೆಗೆ ವಿಶೇಷ ಸ್ವಾರಸ್ಯವಿದೆ. ಅವರದೇ ಅಭಿರುಚಿಯ, ಆಯ್ಕೆಯ ಸ್ಪರ್ಶವಿರುವ ಅದು ಬಿಡಿಬಿಡಿಯಾಗಿ ಲೇಖನದಲ್ಲೋ ಸಾಹಿತ್ಯಪ್ರಿಯರ ಜೊತೆ ಹೂಡಿದ ಹರಟೆಯಲ್ಲೋ ಮೈದಳೆಯುತ್ತದೆ. ಈ ಹೊತ್ತಿಗೆ ಥಟ್ಟನೆ ನೆನಪಾಗುವ ಹೆಸರುಗಳೆಂದರೆ ಕುರ್ತಕೋಟಿ ಮತ್ತು ಕಿ.ರಂ. ನಾಗರಾಜ. ಕುರ್ತಕೋಟಿಯವರು ಸಂಸ್ಕೃತ, ಕನ್ನಡ, ಇಂಗ್ಲಿಷ್ ಸಾಹಿತ್ಯದ ತಮ್ಮ ಅಪಾರವಾದ ಜ್ಞಾನದಿಂದ ಕನ್ನಡವನ್ನು ಬೆಳಗಿದರು. ಕಿ.ರಂ. ತಮ್ಮ ಕಾವ್ಯಪ್ರೀತಿಯಿಂದ, ಸಂಗೀತದಲ್ಲಿರುವ ಅಭಿರುಚಿಯಿಂದ ಮತ್ತು ವಿಸ್ತಾರವಾದ ಓದಿನಿಂದ ಕನ್ನಡ ಸಾಹಿತ್ಯದ ಮೆರುಗು ಹೆಚ್ಚಿಸಿದರು. ಅಂತೆಯೇ ದಿವಾಕರ್ ಆಧುನಿಕ ವಿಶ್ವಸಾಹಿತ್ಯದ ನೆಲೆಯಿಂದ ಕನ್ನಡವನ್ನು ಕಂಡು ಹೊಸ ಓದಿನ ಸಾಧ್ಯತೆಗಳನ್ನು ತೋರಿಸಿದರು. ಈ ಮೂವರೂ ಸ್ವಾರಸ್ಯಕರ ಸಾಹಿತ್ಯ ಸಂದರ್ಭಗಳನ್ನು, ಸಾಹಿತಿಗಳ ಒಡನಾಟವನ್ನು ಕಥಿಸುವುದರಲ್ಲಿ ಸಿದ್ಧಹಸ್ತರು. ಹರಟೆಯಲ್ಲಿ ನಿಸ್ಸೀಮರು. ಕಾವ್ಯಮೋಹಿಗಳು ಹಾಗೂ ಅತ್ಯಪರೂಪದ ಜ್ಞಾಪಕಶಕ್ತಿಯ ವರ ಪಡೆದವರು. ವಿಶೇಷವೆಂದರೆ, ತೀರಾ ಹಟಕ್ಕೆ ಬಿದ್ದ ಹೊರತು ಈ ಮೂವರನ್ನೂ ಯಾವುದೇ ಒಂದು ನಿರ್ದಿಷ್ಟ ಸಾಹಿತ್ಯಿಕ ಚಳವಳಿಯ ಚೌಕಟ್ಟಿನಲ್ಲಿ ಕೂರಿಸುವುದು ಕಷ್ಟ. ಅವರು ಯಾವುದಕ್ಕೂ ಅತಿಯಾಗಿ ಅಂಟಿಕೊಂಡವರಲ್ಲ. ತಮ್ಮ ತುಸು ಸಾಂಪ್ರದಾಯಿಕ ಗುಣದಿಂದ, ಅಥವಾ ಕ್ಲಾಸಿಕಲ್ ರುಚಿ ಎಂದೂ ಅನ್ನಬಹುದೇನೋ, ಇವರಿಗೆ ಹೀಗೆ ಅತೀತವಾಗುವುದು ಸಾಧ್ಯವಾಗಿದೆ. ಆದ್ದರಿಂದಲೇ ಇವರ ಗ್ರಹಿಕೆ ವಿಶಾಲವಾದುದು. ಇಲ್ಲಿ ಕಾವ್ಯದ ಸಾಲುಗಳು ಮುಖ್ಯವೇ ಹೊರತು ಅದು ಅನುವಾದವೇ ಅಥವಾ ಕುವೆಂಪು, ಬೇಂದ್ರೆ, ಸಿದ್ಧಲಿಂಗಯ್ಯನವರದೇ ಅನ್ನುವುದು ಮುಖ್ಯವಾಗುವುದಿಲ್ಲ.

ದಿವಾಕರ್ ತಮ್ಮ ಕಥೆಗಳಲ್ಲಿ ಮಾಡಿದ ಪ್ರಯೋಗಗಳಿಗೆ ಎಣೆಯಿಲ್ಲ. ಹೊಸದನ್ನು ಹೇಳಲು ಹೊಸ ಕಥಾಸ್ವರೂಪ ಬೇಕು ಎನ್ನುವ ನಿಲುವು ಅವರದು. ಪ್ರಕಟವಾದ ಕಾಲಕ್ಕೆ ಬಹುಚರ್ಚೆಗೆ ಒಳಗಾದ ಅವರ ‘ಕ್ರೌರ್ಯ’ ಕತೆಯಲ್ಲಿ ಸಂಪ್ರದಾಯವಾದಿ ಕುಟುಂಬದೊಳಗಿನ ತಣ್ಣನೆಯ ಕ್ರೌರ್ಯವನ್ನು ಹೊರಜಗತ್ತಿನ ಭೌತಿಕ ಹಿಂಸೆಯೊಡನೆ ಇಟ್ಟು ಶೋಧಿಸಿದ ಪರಿ ಅನನ್ಯವಾದುದು. ಇಬ್ಬಗೆಯ ಜಗತ್ತಿನಲ್ಲಿ ಸಿಲುಕಿದವರ ದುರಂತವು ಅವರ ಕತೆಗಳಲ್ಲಿ ಮರುಕಳಿಸುತ್ತದೆ.

ತಮ್ಮ ಲೇಖನಗಳಲ್ಲಿ ದಿವಾಕರ್ ಸಂಗೀತ–ಸಾಹಿತ್ಯ ಮೂಲವಾದ ಸಂವೇದನೆಯ ಮುಖೇನ ಜಗತ್ತನ್ನು ಒಂದಕ್ಕೊಂದು ಸಂಬಂಧಪಟ್ಟ ಸಾಂಸ್ಕೃತಿಕ ಸಂಗತಿಗಳ ವಿಸ್ತೃತ ಜಾಲವನ್ನಾಗಿ ಕಾಣುತ್ತಾರೆ. ಇದು, ವಿಭಿನ್ನ ಗ್ರಹಿಕೆಗಳನ್ನು ಒಟ್ಟುಗೂಡಿಸುವ ಮೂಲಕ ಜಗತ್ತನ್ನು ಎಂದೂ ನೋಡಿರದ ರೀತಿಯಲ್ಲಿ ಕಾಣಿಸುವ ಪ್ರತಿಭೆ. ಹೀಗೆ ಕಂಡಾಗ ಬೇಂದ್ರೆ, ಕೆಎಸ್‌ನ ಮತ್ತು ಉಂಬೆರ್ತೊ ಎಕೊ ಒಟ್ಟಿಗೇ ಇರುತ್ತಾರೆ. ಬಾಲಮುರಳಿ, ಶೆಮ್ಮಂಗುಡಿ ಮತ್ತು ಭೀಮಸೇನ ಜೋಶಿಯವರ ಜೊತೆ ಲೇಖಕ ಸಿಂಗರ್ ಕೂಡ ಇದ್ದಾನೆ. ಇಂಥ ಕಥನವನ್ನು ನೇಯುವ ಶಕ್ತಿಯೇ ಅವರ ಬರವಣಿಗೆಯ ವಿಶೇಷ.

ಕನ್ನಡ ಸಾಹಿತ್ಯಕ್ಕೆ ದಿವಾಕರರ ಕೊಡುಗೆಯನ್ನು ಗಣಿಸುವಾಗ ಲೇಖನಗಳನ್ನು, ಸೃಜನಾತ್ಮಕ ಬರಹಗಳನ್ನು ಮಾತ್ರವಲ್ಲದೇ, ಸಂಪಾದಕರಾಗಿ ಅವರು ರೂಪಿಸಿದ ಸಾಹಿತ್ಯಿಕ ವಾತಾವರಣ, ವಿಶ್ವಸಾಹಿತ್ಯದ ಮುಖ್ಯ ಕೃತಿಗಳನ್ನು ಅನುವಾದಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಹೊಸ ಕಥನಕ್ರಮಗಳು, ಸಂದರ್ಭಾನುಸಾರ ಮುನ್ನೆಲೆಗೆ ತಂದ ಹಲವು ಸಾಂಸ್ಕೃತಿಕ ಸ್ಮೃತಿಗಳು, ಪುಸ್ತಕ ವಿಮರ್ಶೆಗಳು, ಸಾಹಿತ್ಯ ಸಲಹೆಗಾರರಾಗಿ ಪ್ರಕಾಶನ ಸಂಸ್ಥೆಗಳ ಮೂಲಕ ಹೊರತಂದ ಪುಸ್ತಕಮಾಲೆಗಳು ಹಾಗೂ ಹೊಸ ಬರಹಗಾರರಿಗೆ ಅವರಿಂದಾಗಿ ಒದಗಿ ಬಂದ ಓದಿನ ಸಂಸ್ಕಾರ ಇವೆಲ್ಲವನ್ನೂ ಗ್ರಹಿಸಬೇಕಾಗುತ್ತದೆ.

ಹಲವು ದಶಕಗಳ ಅವರ ಸ್ನೇಹಮಯ ಒಡನಾಟದಲ್ಲಿ ನನಗೆ ದೊರೆತ ವೈಚಾರಿಕ, ಸೃಜನಶೀಲ ಪ್ರಚೋದನೆಯನ್ನು ನೆನೆಸಿಕೊಂಡರೆ ನಾನು ಭಾಗ್ಯಶಾಲಿಯೆನಿಸುತ್ತದೆ. ನನ್ನಂಥ ಅನೇಕರು ಜೊತೆಗೂಡಿ ಈ ಅಪೂರ್ವ ಸಾಹಿತ್ಯೋತ್ಸಾಹಿಯ ಎಂಬತ್ತರ ಹುಟ್ಟುಹಬ್ಬಕ್ಕೆ ಇಂದು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.

‘ನಮ್ಮ ದಿವಾಕರ್’ ಕಾರ್ಯಕ್ರಮ

ಕತೆಗಾರ ಎಸ್. ದಿವಾಕರ್ ಅವರು ಎಂಬತ್ತನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಲು ನವೆಂಬರ್ 26ರ ಭಾನುವಾರ ಬೆಳಿಗ್ಗೆ 10.15ಕ್ಕೆ ಬೆಂಗಳೂರಿನ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್’ ಸಭಾಂಗಣದಲ್ಲಿ ‘ನಮ್ಮ ದಿವಾಕರ್’ ಕಾರ್ಯಕ್ರಮ ನಡೆಯಲಿದೆ. ‘ಪರಿಮಳದ ಪಡಸಾಲೆ’ ಎಂಬ ದಿವಾಕರ್ ಅವರನ್ನು ಕುರಿತ ವಿಶೇಷ ಸಂಚಿಕೆ ಈ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ. ಪಂಡಿತ್ ಪರಮೇಶ್ವರ ಹೆಗಡೆ ಅವರು ಸ್ವರ ಸಂಯೋಜಿಸಿರುವ, ದಿವಾಕರ್ ಅವರದ್ದೇ ರಚನೆಯ ಗೀತೆಗಳ ಗಾಯನ ಕಾರ್ಯಕ್ರಮವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.