ಪ್ರಕೃತಿಯಲ್ಲಿ ಯಾವುದೆಲ್ಲಾ ದೊಡ್ಡದು, ಘನವಾದದ್ದು ಎಂದು ಭಾವಿಸುತ್ತೇವೆಯೋ ಅದಕ್ಕಿಂತ ದೊಡ್ಡದು ಕೃತಜ್ಞರಾಗಿರುವುದು ಎಂದು ತಿರುಕ್ಕುರಳ್ ಅಭಿಪ್ರಾಯ...

ತಿರುಕ್ಕುರಳ್ ಪದ್ಯಗಳನ್ನು / ಕುರಳ್‌ಗಳನ್ನು ಮೂರು ಭಾಗವಾಗಿ ವಿಭಾಗಿಸಿದ್ದಾರೆ. ಅರಮ್, ಪೊರುಳ್ ಮತ್ತು ಕಾಮಮ್! ಅಂದರೆ, ಧರ್ಮ, ಅರ್ಥ ಮತ್ತು ಕಾಮ. ಧರ್ಮವೆಂದರೆ ಅರ್ಥ ಕಾಮಗಳನ್ನು ಪಡೆಯಲು ಸಮಾಜ ಒಪ್ಪುವಂತಹ ಹಾದಿ ಎಂದು ಸುಲಭವಾಗಿ ಹೇಳಬಹುದು. ಯಾವುದೇ ಅರ್ಥಸಂಬಂಧಿಯಾದ ಮತ್ತು ಕಾಮಸಂಬಂಧವಾದ ವಸ್ತುಗಳನ್ನು ಹೇಗೆ ಧರ್ಮಯುತವಾಗಿ ಪಡೆದುಕೊಳ್ಳಬಹುದು ಎಂದು ನಮ್ಮ ಹೆಚ್ಚಿನ ಪುರಾಣ, ಶಾಸ್ತ್ರ, ರಾಮಾಯಣ–ಮಹಾಭಾರತ ಕೃತಿಗಳು ಹೇಳುತ್ತವೆ. ಅದೇ ರೀತಿ ವಳ್ಳುವರ್ ಕೂಡ ತಮ್ಮ ಕುರಳ್’ಗಳಲ್ಲಿ ಸಮಾಜಧರ್ಮವನ್ನು ಮೊದಲು ಹೇಳಿದ್ದಾರೆ.

ಅರಮ್ ಅಧ್ಯಾಯದಲ್ಲಿ ಬಹಳಷ್ಟು ವಿಷಯಗಳಿದ್ದಾವೆ. ದೈವಚಿಂತನೆ ಮೊದಲು, ನಂತರ ಪ್ರಕೃತಿಯ ಕೊಡುಗೆಗಳ ಬಗ್ಗೆ, ಮಾನವನ ಶೀಲ, ಶುದ್ಧತೆಗಳ ಬಗೆಗೆ, ಆತನ ಆಚಾರ–ವಿಚಾರಗಳ ಬಗೆಗೆ ಕೆಲವು ಕುರಳ್ ಇದೆ. ಹಾಗೆಯೇ ಪತ್ನಿ, ಮಕ್ಕಳು, ಸ್ನೇಹಿತರ ಬಗೆಗೂ ಹೇಗೆ ನಡೆದುಕೊಳ್ಳಬೇಕು ಎಂಬುದು ಇದೆ. ಉದಾಹರಣೆಗೆ, ಕೃತಜ್ಞನಾಗಿರುವಿಕೆ ಎನ್ನುವುದು ಬಹಳ ದೊಡ್ಡ ಆದರ್ಶ. ರಾಮಾಯಣದಲ್ಲಿಯೂ ರಾಮನ ಬಗೆಗೆ ಹೇಳುವಾಗ ’ಕೃತಜ್ಞನಾಗಿ ಸಹಾಯವನ್ನು ನೆನೆಯುವವನು’ ಎಂದು ಹೇಳಿದ್ದಾರೆ ಮಹರ್ಷಿ ವಾಲ್ಮೀಕಿಗಳು.

ಸೆಯ್ಯಾಮಲ್ ಸೈದ ಉದವಿಕ್ಕು ವೈಯ್ಯಾಕಮುಮ್

ವಾನಾಕಮುಮ್ ಆಟ್ರಾಲ್ ಅರಿದು

ಈ ಕುರಳ್ ಅರ್ಥ ಬಹಳ ನಾಜೂಕಾಗಿದೆ. ನಾವು ಉಪಕಾರ ಮಾಡದೇ ಇದ್ದಾಗಲೂ ಇನ್ನೊಬ್ಬರು ನಮಗೆ ಉಪಕಾರ ಮಾಡಿದ್ದು ಭೂಮಿ, ಬಾನಿಗಿಂತಲೂ ಹಿರಿದು ಎನ್ನುವುದು. ಅದೆಷ್ಟು ಕೃತಜ್ಞರಾಗಿರಬೇಕೆಂದು ಈ ಕುರಳ್ ಹೇಳುತ್ತದೆ. ಹೀಗೇ ಇನ್ನೊಂದು ಕುರಳ್ ತಕ್ಕ ಸಮಯದಲ್ಲಿ ಮಾಡಿದ ಉಪಕಾರ ಆಕೃತಿಯಲ್ಲಿ ಸಣ್ಣದಾದರೂ ಮಹತ್ತರವಾದದ್ದು ಎನ್ನುವುದು. ನಾವು ಪ್ರಕೃತಿಯಲ್ಲಿ ಯಾವುದೆಲ್ಲಾ ದೊಡ್ಡದು, ಘನವಾದದ್ದು ಎಂದು ಭಾವಿಸುತ್ತೇವೆಯೋ ಅದಕ್ಕಿಂತ ದೊಡ್ಡದು ಕೃತಜ್ಞರಾಗಿರುವುದು ಎಂದು ತಿರುಕ್ಕುರಳ್ ಅಭಿಪ್ರಾಯ. ಭೂಮಿ, ಆಕಾಶ, ಸಮುದ್ರ ಬೆಟ್ಟಗಳು ಕೃತಜ್ಞತೆಗೆ ಉಪಮೆಗಳಾಗಿ, ಉತ್ಪ್ರೇಕ್ಷೆಗಳಾಗಿ ಬರುತ್ತವೆ.

ಜೀವನದ ಹಾದಿಯಲ್ಲಿ ಇನ್ನೊಂದು ಬಹಳ ಮುಖ್ಯವಾದ ಅಂಶ ತಾಳ್ಮೆ. ತಾಳ್ಮೆ ಎಂದಕೂಡಲೇ ನೆನಪಿಗೆ ಬರುವುದು ಕೋಪದ ವಿರುದ್ಧಪದವೆಂದು. ಆದರೆ ಇದು ಸ್ವಯಂ ನಿಯಂತ್ರಣ, ನಿಧಾನಿಸುವಿಕೆ ಎನ್ನುವ ಅರ್ಥಗಳನ್ನೂ ಹೊಂದಿದೆ. ಇದೂ ಒಂದು ಪ್ರಮುಖವಾದ ಗುಣ ಮತ್ತು ಇದಕ್ಕೆ ಕುರಳ್ ಬಹಳಷ್ಟು ಅವಕಾಶವನ್ನು ಕೊಟ್ಟಿದೆ.

ಪೊರುತ್ತಾಲ್ ಇರಪ್ಪಿನೈ ಎಂಡ್ರುಂ ಅದನೈ

ಮರತ್ತಾಲ್ ಅದನಿನುಂ ನಂಡ್ರು

‘ಕ್ಷಮಿಸಿ ಬಿಡುವುದು’ ಬಹಳ ದೊಡ್ಡ ವಿಷಯ. ಆದರೆ ಆದುದನ್ನು ಕ್ಷಮಿಸಿ, ಮರೆಯುವುದು ಇನ್ನೂ ಮಹತ್ತಿನದ್ದು. ಹೆಚ್ಚಾಗಿ ಯಾವುದೋ ಸಂದರ್ಭಗಳಲ್ಲಿ ನಾವು ತಪ್ಪನ್ನು ಕ್ಷಮಿಸಿದಂತೆ ನಟಿಸಿ ಅದನ್ನು ತಲೆಯಲ್ಲಿಟ್ಟುಕೊಳ್ಳುತ್ತೇವಲ್ಲಾ, ಅದಕ್ಕಿಂತ ಮರೆತುಬಿಡುವುದು ದೊಡ್ಡದು. ತಾಳ್ಮೆಯ ಬಗೆಗೆ ಬಹಳಷ್ಟು ಕುರಳ್ ಇದೆ. ನಾನು ನೋಡಿದಂತೆ, ಇಂತಹ ಪದ್ಯಗಳಲ್ಲಿ ತಾಳ್ಮೆಯ, ಸ್ವನಿಯಂತ್ರಣದ ಬಗೆಗೆ ಮಾತುಗಳು ಇರುವುದು ಬಹಳ ಕಡಿಮೆ. ಆದರೆ ಕುರಳ್ ಈ ರೀತಿಯ ಹತ್ತು ಪದ್ಯಗಳನ್ನು ಹೊಂದಿದೆ / ಅಥವಾ ಈ ರೀತಿ ವಿಭಾಗಿಸಿದ್ದಾರೆ.

ಇನ್ನೊಂದು ಮಹತ್ತಾದ ವಿಭಾಗವೆಂದರೆ ದುಷ್ಟತನವಿಲ್ಲದಿರುವಿಕೆ. ಇದು ನಮ್ಮ ಆಚರಣೆಯ ಬಹಳ ಮಹತ್ವದ ಸಂಗತಿಗಳಲ್ಲೊಂದು. ಎಲ್ಲಾ ದೊಡ್ಡ ಕಾವ್ಯಗಳು, ಕಥೆಗಳು ಹೇಳುವ ಸಾರವೂ ಇದೇ. ಅಧರ್ಮ ಅಂದ್ರೆ ದುಷ್ಟತನ. ತಿರುಕ್ಕುರಳ್ ಕೂಡ ಹೇಗೆ ಒಳ್ಳೆಯದನ್ನು ಪ್ರತಿಪಾದಿಸಿದೆಯೋ ಹಾಗೆಯೇ ಕೆಟ್ಟದ್ದು ಇರಬಾರದೆಂದೂ ಹೇಳಿದೆ. ಅಹಿಂಸೆಯ ಬಗೆಗೂ ಕೆಲವೊಂದು ಮಾತಿದೆ. ಉದಾಹರಣೆಗೆ,

ಇನ್ನಾಸೈ ತಾರೈ ಒರುತ್ತಾಲ್ ಅವರ್ನಾನ

ನನ್ನಯಾನ್ ಸೈದು ವಿಟ್ಟಾಲ್

ನಮ್ಮ ಮೇಲೆ ಕೆಟ್ಟದ್ದನ್ನು ಭಾವಿಸಿದವರಿಗೆ, ಮಾಡಿದವರಿಗೆ ಕರುಣೆಯನ್ನು ತೋರಿದರೆ ಅದರ ಪರಿಣಾಮ ತುಂಬಾ ಒಳ್ಳೆಯದಿರುತ್ತದೆ ಎನ್ನುವುದು ತಾತ್ಪರ್ಯ. ಇನ್ನೊಂದು ಕುರಳ್ ಹೇಳುತ್ತದೆ, ಯಾರು ತಿಳಿದೂ ಕೆಟ್ಟದ್ದನ್ನೇ ಮಾಡುತ್ತಾನೋ ಅದು ಅತ್ಯಂತ ನಿಕೃಷ್ಟತೆಯ ಪರಮಾವಧಿ ಎಂದು.

ಒಟ್ಟಿನಲ್ಲಿ ತಿರುಕ್ಕುರಳ್ ಅತ್ಯಂತ ಸಾರವತ್ತಾಗಿ ಧರ್ಮಾಚರಣೆಯ ಬಗೆಗೆ ಹೇಳುತ್ತಾ ಬಂದಿದೆ. ಕೆಲವೊಂದು ಗೂಢಾರ್ಥವಾಗಿಯೂ, ಕೆಲವೊಂದು ಬಹಳ ನೇರ, ಸ್ಪುಟವಾಗಿಯೂ ಹೇಳಿದೆ. ಇನ್ನೂ ಕೆಲವು ಪದ್ಯಗಳಲ್ಲಿ ಒಳ್ಳೆಯ ಉಪಮೆಗಳೂ, ಅರ್ಥವಾಗುವ ರೀತಿಯ ಹೋಲಿಕೆಗಳೂ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.