ಪ್ರೀತಿ ಹೃದಯದ ಭಾಷೆಯೆನ್ನುವುದು ಲೋಕಾರೂಢಿ . ಆದರೆ, ಕಾಲಕಳೆದಂತೆ ಜಗತ್ತಿನ ಹೆಚ್ಚಿನ ವ್ಯವಹಾರಗಳು ವಸ್ತುನಿಷ್ಠವಾಗುತ್ತಿದ್ದಂತೆಯೇ ಪ್ರೀತಿ ಹುಟ್ಟುವ ಹೃದಯವೂ ವ್ಯಾವಹಾರಿಕವಾಗಿ ಪ್ರೀತಿಯ ಹುಡುಕಾಟದಲ್ಲಿ ತೊಡಗಿದೆಯೆಂದು ಹೇಳಬಹುದು. ಹೃದಯದಲ್ಲಿ ಅರಳಿದ ಪ್ರೀತಿಗೆ ಕೆಲವೊಮ್ಮೆ ಜಾತಿ, ಧರ್ಮ, ಅಂತಸ್ತು, ಮನೆತನ, ಸಂಪ್ರದಾಯ, ಗೌರವ ಇತ್ಯಾದಿ ಮನುಷ್ಯನಿರ್ಮಿತ ಗೋಡೆಗಳು ಅಡ್ಡಿಯಾಗಿ ಪ್ರೀತಿ ಕಮರಿ ಹೋಗಿರುವ ಉದಾಹರಣೆಗಳು ನಮ್ಮ ಮುಂದಿವೆ. ದುರಂತ ಪ್ರೇಮಿಗಳೆನಿಸಿದ ರೋಮಿಯೊ-ಜೂಲಿಯೆಟ್, ಸಲೀಮ್-ಅನಾರ್ಕಲಿ... ಹೀಗೆ ಅಸಂಖ್ಯಾತ ಪ್ರೇಮಿಗಳನ್ನು ಸಾಮಾಜಿಕ ಕಟ್ಟುಪಾಡುಗಳು ಬೇರ್ಪಡಿಸಿದ್ದರೆ, ಇಂದಿನ ಪ್ರೇಮಿಗಳು ಹೆಚ್ಚಾಗಿ ಬೇರೆಯಾಗುವುದು ಹೊಂದಾಣಿಕೆಯ ಸಮಸ್ಯೆಯಿಂದ.

ಆಶ್ಚರ್ಯವೆಂದರೆ, ಹಲವಾರು ವರುಷ ಗಾಢವಾಗಿ ಒಬ್ಬರನ್ನೊಬ್ಬರು ಪ್ರೇಮಿಸಿ ಮದುವೆಯಾಗಿದ್ದರೂ, ಹಸೆಮಣೆ ಏರಿದ ಮೇಲೆ ನಿಧಾನವಾಗಿ ಪ್ರೀತಿ ಕರಗಿ ದೋಷಾರೋಪಣೆ ಮಾಡುತ್ತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ, ಪ್ರಸ್ತುತ ಸಂದರ್ಭದಲ್ಲಿ ಪ್ರೀತಿಯ ವಿಷಯವಾಗಿ ನಾವು ಕೇಳಬೇಕಾದ ಮುಖ್ಯ ಪ್ರಶ್ನೆಗಳೆಂದರೆ; ವ್ಯಾಲೆಂಟೈನ್ಸ್ ಡೇಯನ್ನು ಸಂಭ್ರಮದಿಂದ ಆಚರಿಸುವವರಿಗೆ ಪ್ರೀತಿಯ ಅರ್ಥ ತಿಳಿದಿದೆಯೇ? ವೈವಾಹಿಕ ಸಂಬಂಧದಲ್ಲಿ ಪ್ರೀತಿ ಯಾಕೆ ಕಣ್ಮರೆಯಾಗುತ್ತದೆ? ಪ್ರೀತಿಗೆ ದೈಹಿಕ ಆಕರ್ಷಣೆ ಮುಖ್ಯವೋ ಅಥವಾ ಸಮಾನ ಹಿತಾಸಕ್ತಿಗಳೋ? ಹೆಚ್ಚುತ್ತಿರುವ ಮಹಿಳಾ ಸಬಲೀಕರಣ ಗಂಡು-ಹೆಣ್ಣು ನಡುವಿನ ಪ್ರೀತಿಯ ವ್ಯಾಖ್ಯಾನವನ್ನು ಬದಲಾಯಿಸಿದೆಯೇ?

ಮೊದಲನೆಯದಾಗಿ, ಮದುವೆಯ ಪರಿಕಲ್ಪನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮೊದಲು ಗಂಡ-ಹೆಂಡತಿಯ ಸಂಬಂಧವನ್ನು ಜಾತಕ, ಗೋತ್ರ ಮತ್ತು ಹಿರಿಯರು ನಿರ್ಧರಿಸುತ್ತಿದ್ದುದು ಮಾತ್ರವಲ್ಲ, ದಾಂಪತ್ಯವನ್ನು ಒಂದು ಸಾಮಾಜಿಕ ಹೊಣೆಗಾರಿಕೆ ಅಥವಾ ಪೀಳಿಗೆಯನ್ನು ಮುಂದುವರಿಸುವ ಸಂಕಲ್ಪವೆನ್ನುವಂತೆ ಕಾಣುವ ಕಾಲವೊಂದಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮತ್ತು ವೃತ್ತಿಗಾಗಿ ಮನೆಯ ಹೊಸ್ತಿಲಿಂದಾಚೆಗೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಹಿರಿಯರ ಹದ್ದುಬಸ್ತಿನಿಂದಾಚೆಗೆ ಪ್ರೀತಿ ಅರಳುವ ಸಾಧ್ಯತೆ ಹೆಚ್ಚಾಗಿದೆ. ತಮ್ಮ ಬಾಳಸಂಗಾತಿಯನ್ನು ತಾವೇ ಆಯ್ಕೆಮಾಡಿಕೊಳ್ಳುವುದು ಒಳ್ಳೆಯ ಬೆಳವಣಿಗೆಯೇನೋ ನಿಜ. ಆದರೆ ಇಲ್ಲಿನ ಪ್ರಮುಖ ಸಮಸ್ಯೆ, ಹದಿಹರೆಯದವರಿಗೆ ತಮ್ಮ ಬಾಳಿನ ಉಳಿದ ದಿನಗಳನ್ನು ಹಂಚಿಕೊಳ್ಳಲು ಯೋಗ್ಯರಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಬುದ್ಧತೆ ಇರುತ್ತದೆಯೇ?

ಯಾಕೆಂದರೆ, ಹೆಚ್ಚಾಗಿ ಆ ವಯಸ್ಸಿನಲ್ಲಿ ಕಟುವಾಸ್ತವ ಜಗತ್ತಿನ ಸತ್ಯಗಳಿನ್ನೂ ಅಂತರ್ಗತವಾಗಿರುವುದಿಲ್ಲ. ಹಾಗಾಗಿ ಕಣ್ಣಿಗೆ ಕಾಣುವ ಸುಂದರ ಬದುಕಿನ ಕಲ್ಪನೆಯ ಜೊತೆಯಾಗಿರಲು ಬೆಚ್ಚಗಿನ ಪ್ರೀತಿ ಆಹ್ಲಾದಕರವಾಗಿ ಕಾಣಿಸುತ್ತದೆ. ಆದ್ದರಿಂದ, ಸಿನಿಮಾದಲ್ಲಿ ತೋರಿಸಿದಂತೆ ‘ಪ್ರೀತಿಸೋದು ತಪ್ಪಾ?’ ಎಂದು ಅಡ್ಡಿಪಡಿಸುವವರನ್ನೆಲ್ಲ ಪ್ರಶ್ನಿಸಿ, ಅವರ ಬಾಯಿ ಮುಚ್ಚಿಸಿ, ಮದುವೆಯಾದ ಮೇಲೆಯೇ ಬದುಕು ಕಪ್ಪು ಬಿಳುಪಿನಂತೆ ಅರಿವಿಗೆ ಬರಲಾರಂಭಿಸುತ್ತದೆ.

ಇಲ್ಲಿನ ಮುಖ್ಯ ಸಮಸ್ಯೆಯೆಂದರೆ ಹದಿಹರೆಯದವರು ತಪ್ಪಾಗಿ ಗ್ರಹಿಸಿಕೊಳ್ಳುವ ಪ್ರೀತಿಯ ಪರಿಕಲ್ಪನೆ. ಮಾಧ್ಯಮಗಳು, ಸಂಗಾತಿಯ ಆಯ್ಕೆಯಲ್ಲಿ ಪ್ರಮುಖವೆಂದು ಬಿಂಬಿಸುವಂತೆ, ಒಬ್ಬ ಆದರ್ಶ ಯುವಕನಾದವನು ದೈಹಿಕವಾಗಿ ಹೀಗಿರಬೇಕು, ಇಷ್ಟು ಅಸ್ತಿ ಹೊಂದಿರಬೇಕು, ಇಂತಹ ಉದ್ಯೋಗ ಹೊಂದಿರಬೇಕು, ಇತ್ಯಾದಿಗಳೇ ಹುಡುಗಿಯರ ಗಮನಸೆಳೆಯುತ್ತವೆ. ಅದೇ ರೀತಿ, ಹುಡುಗಿಯು ಕೂಡ ದೈಹಿಕವಾಗಿ ಹೀಗೆಯೇ ಕಾಣಿಸಬೇಕು, ನಡತೆ ಹೀಗೇ ಇರಬೇಕೆಂಬ ನಿರೀಕ್ಷೆಗಳಿವೆ. ಆದ್ದರಿಂದ, ಈ ಬಾಹ್ಯ ಸಂಗತಿಗಳೇ ಮುಖ್ಯವೆನಿಸಿ ಪರಸ್ಪರ ಆಕರ್ಷಣೆಗೊಳಗಾಗಿ ಹುಟ್ಟುವ ಪ್ರೀತಿ, ದೈನಂದಿನ ಕಟು ವಾಸ್ತವದ ಬದುಕಿನಲ್ಲಿ ಕಮರಿಹೋಗುವುದು ಸಹಜ.

ಇನ್ನು, ಪ್ರೀತಿ ಅಂತ್ಯವಾದರೂ ದಾಂಪತ್ಯ ಮುಂದುವರಿಯುವಂತೆ ನೋಡಿಕೊಳ್ಳುವ ಕಟ್ಟುನಿಟ್ಟಿನ ವ್ಯವಸ್ಥೆ ನಮ್ಮಲ್ಲಿದೆ. ವಿಶೇಷವಾಗಿ, ಹೊಂದಾಣಿಕೆಯ ಮಂತ್ರದ ಮೂಲಕ ವಿಚ್ಛೇದನವನ್ನು ಹತ್ತಿಕ್ಕುವ ಪ್ರಯತ್ನಗಳು ವಿವಿಧ ಮಟ್ಟದಲ್ಲಿ ನಡೆಯುತ್ತವೆ. ಹಾಗಾಗಿ, ಇಷ್ಟವಿಲ್ಲದಿದ್ದರೂ ಮಕ್ಕಳಿಗಾಗಿಯೋ ಅಥವಾ ಸಮಾಜಕ್ಕಾಗಿಯೋ ಜೊತೆಯಾಗಿರುವ ದಂಪತಿಗಳು ಬಹಳಷ್ಟಿದ್ದಾರೆ.

ವಿವಿಧ ಅಧ್ಯಯನ ವರದಿಗಳು ಹೇಳಿರುವಂತೆ, ಜೀವನ ಸಂಗಾತಿಗಳ ಸಮಾನ ಆಸಕ್ತಿಗಳು ಅವರ ಪ್ರೀತಿಯನ್ನು ಗಟ್ಟಿಯಾಗಿಸುತ್ತವೆ. ಹೆಣ್ಣು ವಿದ್ಯಾವಂತಳಾದಂತೆ, ಲೋಕಜ್ಞಾನ ಬೆಳೆಸಿಕೊಂಡಂತೆ ಮತ್ತು ಉದ್ಯೋಗಸ್ಥಳಾದಂತೆ ಅವಳೊಂದಿಗೆ ಪ್ರಾಪಂಚಿಕ ಚರ್ಚೆ ಅಥವಾ ವಿಚಾರ ವಿನಿಮಯ ಮಾಡಿಕೊಳ್ಳುವುದು ಗಂಡನಿಗೆ ಸಾಧ್ಯವಾಗುತ್ತಿದೆ. ಇಂತಹ ಸಮಾನ ಆಸಕ್ತಿ ಮತ್ತು ಅಭಿರುಚಿ, ದಂಪತಿಗಳ ಪ್ರೀತಿಯನ್ನು ಭದ್ರಗೊಳಿಸುವುದು ಪ್ರಸ್ತುತದ ವಾಸ್ತವ. ಪ್ರಾಯ ಕಳೆದಂತೆ ಹೆಚ್ಚಿನ ದಂಪತಿಗಳ ಬೇಡಿಕೆಯೆಂದರೆ, ಚೆನ್ನಾಗಿ ಪರಸ್ಪರ ಮಾತನಾಡುವ ಸಾಂಗತ್ಯದ ಅಗತ್ಯ. ಆದರೆ, ಹೆಚ್ಚುತ್ತಿರುವ ವಿವಾಹ ವಿಚ್ಛೇದನಕ್ಕೆ ಮಹಿಳಾ ಸಬಲೀಕರಣವೇ ಕಾರಣವೆಂದು ಕೆಲವೊಮ್ಮೆ ಸಂಪ್ರದಾಯಸ್ಥರು ದೂರುವುದಿದೆ. ವೈವಾಹಿಕ ಬಂಧವು ಉಸಿರು ಕಟ್ಟಿಸುವ ಬಂಧನವೆನಿಸಿದಾಗ ಬಿಡುಗಡೆ ಪಡೆಯಬೇಕೆಂಬ ಹೊಸ ಅರಿವು ಅವಳಲ್ಲಿ (ಅವನಲ್ಲಿ ಕೂಡ) ಮೂಡಿದ್ದಲ್ಲಿ, ಅದನ್ನು ಅರ್ಥಮಾಡಿಕೊಳ್ಳಬೇಕೇ ಹೊರತು, ಸಂಸ್ಕೃತಿ ಸಂಪ್ರದಾಯಗಳ ಹೆಸರಲ್ಲಿ ವ್ಯಕ್ತಿಯ ಬದುಕನ್ನು ಹತ್ತಿಕ್ಕುವುದಲ್ಲ.

ಒಂದು ಸಾಮಾನ್ಯ ಪ್ರಶ್ನೆಯೆಂದರೆ, ಪ್ರೀತಿಗೆ ವಿವಾಹದ ಹಂಗಿನ ಅಗತ್ಯವಿದೆಯೇ? ಯಾಕೆಂದರೆ, ಪರಸ್ಪರ ಪ್ರೀತಿಸದೆಯೂ, ಲೋಕದ ದೃಷ್ಟಿಯಲ್ಲಿ ಸಾಂಸಾರಿಕ ಕರ್ತವ್ಯಗಳನ್ನು ಚೆನ್ನಾಗಿ ನಿರ್ವಹಣೆ ಮಾಡಿದ ಸಾಕಷ್ಟು ದಂಪತಿಗಳು ನಮ್ಮ ನಡುವೆ ಇದ್ದಾರೆ. ಹಾಗಾಗಿ, ಸ್ವಚ್ಛಂದ ಬಯಲಲ್ಲಿ ಹುಟ್ಟುವ ಪ್ರೀತಿ, ವಿವಾಹದ ಮೂರು ಗಂಟಲ್ಲಿ ಕಳೆದುಹೋಗುವ ಪರಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಹೊಳೆಯುವುದಿಷ್ಟೇ- ಕಾಲಕಳೆದಂತೆ ಪ್ರೀತಿ ಕಡಿಮೆಯಾಗುವ ಸಾಧ್ಯತೆಯನ್ನು ತಪ್ಪಿಸಲು ವಿವಾಹದಲ್ಲಿ ಬಂಧಿಸುತ್ತಾರೆ ಎಂದು. ಒಂದುವೇಳೆ ಪ್ರೀತಿ ನಿಜವಾಗಿದ್ದಲ್ಲಿ, ಕಳೆದುಕೊಳ್ಳುವ ಅಥವಾ ಬಿಟ್ಟು ಹೋಗುವ ಭಯವಿಲ್ಲದೆ, ವಿವಾಹದ ಹಂಗಿಲ್ಲದೆ ಉಳಿಯಲಾರದೇ? ಇಂತಹ ಸಾಮಾಜಿಕ ಕಟ್ಟುಪಾಡುಗಳ ಹಂಗನ್ನು ಮೀರಿ, ವಿವಾಹವಾಗದೆ ಪ್ರೀತಿಯಲ್ಲಿ ಜೊತೆಯಾಗಿ 51 ವರ್ಷಗಳು ಬದುಕಿದ ಒಂದು ಜೋಡಿಯೆಂದರೆ ತತ್ವಶಾಸ್ತ್ರಜ್ಞ ಸಾರ್ತ್ರೆ ಮತ್ತು ಸ್ತ್ರೀವಾದಿ ಸಿಮೊನ್ ದ ಬೋವಾ.

ಆಧುನಿಕ ಮಹಿಳಾ ಚಳವಳಿಗೆ ಮುನ್ನುಡಿ ಬರೆದ ‘ದಿ ಸೆಕೆಂಡ್ ಸೆಕ್ಸ್’ನ ಲೇಖಕಿ ಸಿಮೊನ್ ದ ಬೋವಾ ಮತ್ತು ‘ಅಸ್ತಿತ್ವವಾದ’ದ ಹರಿಕಾರ ಸಾರ್ತ್ರೆಯವರ ದೀರ್ಘ ಕಾಲದ ಸಾಂಗತ್ಯದ ವಿಶೇಷವೆಂದರೆ, ಅವರನ್ನು ಸದಾ ಜೊತೆಯಾಗಿಸಿದ್ದ ಬೌದ್ಧಿಕ ಸಂಭಾಷಣೆಗಳು, ವಿಚಾರಧಾರೆಗಳು, ಕಲ್ಪನೆಗಳು ಮತ್ತು ಬರೆದ ಪುಸ್ತಕಗಳು. ಇವುಗಳು ಅವರ ಜೀವನವನ್ನು ನಿರಂತರ ಚಲನಶೀಲವಾಗಿಸಿ ಸಮೃದ್ಧಗೊಳಿಸಿದ್ದವು. ಅವರಿಬ್ಬರೂ ಈ ವಿನೂತನ ಪ್ರಾಯೋಗಿಕ ಸಾಂಗತ್ಯವನ್ನು, ಪರಸ್ಪರ ಸಂಶಯದಿಂದ ನೋಡದೆ ವಿಶ್ವಾಸದಿಂದ ಜೊತೆಯಾಗಿದ್ದರು. ಬೋವಾ ಅವರ ಕೊನೆಯ ಪುಸ್ತಕ, ‘ಫೇರ್ವೆಲ್ ಟು ಸಾರ್ತ್ರೆ’ ಹೊರತುಪಡಿಸಿ ಬೇರೆಲ್ಲಾ ಪುಸ್ತಕಗಳ ಮೊದಲ ಓದುಗರಾಗಿದ್ದ ಸಾರ್ತ್ರೆ ಬಗ್ಗೆ ಸ್ವತಃ ಬೋವಾ ಹೇಳಿಕೊಂಡಂತೆ ಅವರ ಜೀವನದ ಅತ್ಯುತ್ತಮ ಸಾಧನೆಯೆಂದರೆ ಸಾರ್ತ್ರೆಯೊಂದಿಗಿನ ಬೌದ್ಧಿಕ ಸಂಬಂಧ.

ಹೀಗೇ, ಪ್ರೇಮಿಗಳ ದಿನವನ್ನು ಒಂದು ದಿನ ಅಥವಾ ವಾರಕ್ಕೆ ಸೀಮಿತಗೊಳಿಸದೆ, ಜೊತೆಯಾಗಿರುವಷ್ಟು ದಿನ ಪ್ರೀತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಅಂತೆಯೇ, ಬಾಹ್ಯ ಆಡಂಬರ ಮತ್ತು ದೈಹಿಕ ಸೆಳೆತಕ್ಕಿಂತ ಪರ್ಯಾಯವಾಗಿ, ಎರಡು ಸಮಾನ ಮನಸ್ಸುಗಳ ನಡುವೆ ಹುಟ್ಟುವ ಪ್ರೀತಿ, ಸಂಬಂಧದಲ್ಲಿ ಹೆಚ್ಚು ಸಂಯಮ, ತಾಳ್ಮೆ, ನಿಷ್ಠೆ ಮತ್ತು ವಿವೇಚನೆಯನ್ನು ಉಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.