1
‘ಎಲ್ಲವನ್ನೂ ಹೇಳುತ್ತೇನೆ...’
ಭಾಸ್ಕರರಾವ್ ಆಡಿದ್ದೆನ್ನಲಾದ ಈ ಮಾತಿನ ಕುರಿತು ನಮ್ಮೊಳಗೆ ತೀವ್ರ ಚರ್ಚೆ ಶುರುವಾಗಿತ್ತು. ಈ ಎರಡು ಶಬ್ದಗಳು ಒಂದು ಕಂಪನಿಯ ಕಾರ್ಪೊರೇಟ್ ಆಫೀಸಿನಲ್ಲಿ ಎಷ್ಟು ಕ್ರಾಂತಿಕಾರಿಯಾದ, ಭೀಕರ ಘೋಷಣೆಯಾಗಿ ಕೇಳಬಹುದೆನ್ನುವುದು ಇಂಥ ಜಗತ್ತಿನ ಬಗ್ಗೆ ಗೊತ್ತಿದ್ದವರಿಗೇ ಗೊತ್ತು. ಅಲ್ಲಿ ಮಾತ್ರ ಯಾಕೆ, ಕುಟುಂಬ ಅಥವಾ ರಾಜಕೀಯದಂಥ ಯಾವುದೇ ವ್ಯವಸ್ಥೆಯೂ ಅಂಜುವ ಶಬ್ದಗಳಿವು.

ಎಲ್ಲವನ್ನೂ ಹೇಳುತ್ತೇನೆಂಬುದೇ ಭಿನ್ನಮತದ ಅತ್ಯಂತ ಶಕ್ತಿಶಾಲಿ ಅಸ್ತ್ರ ತಾನೇ? ಪಕ್ಷ ತೊರೆದ ಧುರೀಣರು, ತಂಡದಿಂದ ಕೈಬಿಟ್ಟ ಆಟಗಾರರು, ಹೊಡೆದಾಡಿದ ವ್ಯಾಪಾರದ ಪಾಲುದಾರರು, ಜಗಳಾಡಿದ ಪ್ರೇಮಿಗಳು, ಬೇರೆಯಾದ ದಂಪತಿಗಳು – ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ, ಒಂದಲ್ಲ ಒಂದು ರೂಪದಲ್ಲಿ ಈ ಅಸ್ತ್ರ ಎತ್ತಿಕೊಂಡವರೇ. ಈ ಎರಡು ಮಾತಿನಲ್ಲಿ ಎದೆಗಾರಿಕೆ, ಇಷ್ಟು ದಿನ ಸಾಧ್ಯವಾಗದ್ದನ್ನು ಈಗಲಾದರೂ ಮಾಡುತ್ತಿದ್ದೇನೆನ್ನುವ ಆತ್ಮಸಮಾಧಾನ, ತುಸು ಹುತಾತ್ಮತೆ ಇರುವಂತೆಯೇ ಸ್ವಲ್ಪ ವಿಶ್ವಾಸಘಾತುಕತನವೂ ಇದೆ.

ಕಂಪನಿಯ ವೈಸ್ ಪ್ರೆಸಿಡೆಂಟ್ ಆಗಿರುವ ಭಾಸ್ಕರರಾವ್ ಅವಧಿಗಿಂತ ಮುನ್ನ ನಿವೃತ್ತಿ ಪಡೆಯುತ್ತಾರೆ ಎಂಬುದು ಬೆಳಗಿನ ಮುಖ್ಯ ಸುದ್ದಿಯಾಗಿತ್ತು. ಅದು ಜೀರ್ಣವಾಗುವ ಮೊದಲೇ ಅವರು ಹೇಳಿದ್ದಾರೆನ್ನಲಾದ ‘ಎಲ್ಲವನ್ನೂ ಹೇಳುತ್ತೇನೆ...’ ಎಂಬ ಶಬ್ದಗಳು ನಮ್ಮ ಆಫೀಸಿನಾದ್ಯಂತ ಕಂಪನಗಳನ್ನು ಎಬ್ಬಿಸಿದವು. ‘ಎಲ್ಲವನ್ನೂ’ ಅಂದರೆ ಅದು ಏನೇನನ್ನು ಒಳಗೊಳ್ಳಬಹುದು ಎಂದು ಕೆಲವರು ಚರ್ಚಿಸಿದರು.

‘ಹೇಳುತ್ತೇನೆ’ ಎಂಬುದರ ಬಗ್ಗೆಯೇ ಆಸಕ್ತಿ ಹುಟ್ಟಿದವರು ರಾವ್‌ಸಾಹೇಬರು ಎಲ್ಲವನ್ನೂ ಹೇಳುವದು ಯಾರಿಗೆಂಬ ಬಗ್ಗೆ ಮಾತಾಡಿದರು. ಮೇಲಿನಿಂದ ಕೆಳಗಿನವರೆಗೂ, ಯಾರನ್ನಾದರೂ ಯಾವಾಗಲಾದರೂ ಮಾತಾಡಿಸಬಲ್ಲ ರಾವ್ ಇಷ್ಟು ದಿನ ಯಾಕೆ ಹೇಳದೇ ಇದ್ದರು ಎಂಬುದೂ, ಈಗ ಯಾರುಯಾರಿಗೆ ಎಲ್ಲವನ್ನೂ ಹೇಳಬಹುದು ಎಂಬುದೂ ಬಗೆಹರಿಯದ ಸಂಗತಿಯಾಯಿತು. ಇನ್ನು ಹಲವರ ಪ್ರಕಾರ ಹೇಗೆ ಹೇಳುತ್ತಾರೆ ಅನ್ನುವುದು ಮುಖ್ಯವಾಗಿತ್ತು. ಅವರು ಭಾಷಣ ಮಾಡುವರೇ, ಪತ್ರ ಬರೆದು ಹೇಳುವರೇ, ಒಬ್ಬೊಬ್ಬರನ್ನೇ ಕರೆದು ಕೂರಿಸಿ ತಿಳಿಸುವರೇ ಎಂಬ ಬಗ್ಗೆ ಪ್ರತಿಯೊಬ್ಬರಿಗೂ ಅವರದೇ ಅನಿಸಿಕೆಗಳಿದ್ದವು.

ಮಾತುಮಾತಲ್ಲಿ ಅದಕ್ಕೆ ರಾವ್‌ಬಾಂಬ್ ಎಂಬ ಹೆಸರೂ ಹುಟ್ಟಿಕೊಂಡಿತು. ಈ ಬಾಂಬ್ ಯಾರೆಲ್ಲರ ಬುಡ ಭೇದಿಸಬಹುದೆಂದು ತಮಾಷೆಯಾಗಿ ಆಡಿಕೊಂಡರು. ‘ಮೊಟ್ಟಮೊದಲು ಅವರದೇ ಬುಡ ಹಾರೋದು. ಇದೊಂದು ಆತ್ಮಹತ್ಯಾದಾಳಿ’.
‘ಬಾಂಬ್ ದಾಳಿಗಳಲ್ಲಿ ಅಮಾಯಕರು ಸಾಯುವುದೇ ಹೆಚ್ಚು. ಹಾಗಾಗಿ ನಾವೆಲ್ಲ ಇಲ್ಲಿಂದ ಪರಾರಿಯಾಗೋದು ಒಳ್ಳೆಯದು’.
‘ಕ್ರಾಂತಿ ಆಗೇಬಿಡತ್ತೋ ಹಾಗಾದರೆ? ಇಲ್ಲಿ ಪಟಾಕೀನು ಉರಿಯೋದಕ್ಕೆ ಬಿಡಲ್ಲ. ಇನ್ನು ಬಾಂಬೆಲ್ಲಿ ಬಂತು’.

ಅಷ್ಟಕ್ಕೂ ಈ ಮಾತುಗಳನ್ನು ರಾವ್ ಹೇಳಿದ್ದು ಯಾರಿಗೆನ್ನುವುದು ಮಾತ್ರ ಸರಿಯಾಗಿ ಗೊತ್ತಿರಲಿಲ್ಲ. ನಾಲ್ಕು ಜನ ಇಂತಹ ಸುದ್ದಿಗಳನ್ನು ಮಾತಾಡಿದರೆ ಸಾಕು, ಅದರ ನಂತರ ಸುದ್ದಿಯ ಮೂಲವನ್ನು ಕಂಡುಹಿಡಿಯಲು ಬ್ರಹ್ಮನಿಗೂ ಸಾಧ್ಯವಿಲ್ಲ. ಈ ಮಾತುಗಳನ್ನು ಅವರ ಸೆಕ್ರೆಟರಿ ವ್ಯಾಂಡಿ ಶೆನೊಯ್‌ಗೆ ಹೇಳಿದ್ದಿರಬಹುದು ಎಂಬುದು ಅನೇಕರ ಊಹೆಯಾಗಿತ್ತು. ಅವಳು ಬೆಳಿಗ್ಗೆ ಆಫೀಸಿಗೆ ಬಂದವಳು ಮುಕ್ಕಾಲು ಗಂಟೆಯ ಬಳಿಕ ರಜೆ ಹಾಕಿ ಮನೆಗೆ ಹೋದಳು ಎನ್ನುವುದು ತಿಳಿದಾಗ ಸುದ್ದಿಗೆ ಇನ್ನಷ್ಟು ಬಲ ಸೇರಿತು.

ಈ ‘ಎಲ್ಲವನ್ನೂ’ ಎಂಬುದರಲ್ಲಿ ವ್ಯಾಂಡಿ ಶೆನೊಯ್ ವಿಷಯವೂ ಇರಬಹುದೇ ಎಂದು ಊಹಿಸಿ ಒಂದಿಷ್ಟು ಮಂದಿ ನಸುನಕ್ಕರು. ಅವಳು ಮತ್ತು ರಾವ್ ಎಷ್ಟೋ ವರ್ಷಗಳಿಂದ ಒಟ್ಟಿಗೇ ಕೆಲಸ ಮಾಡಿದ್ದಾರೆ. ಎಚ್‌ಆರ್ ಡಿಪಾರ್ಟಮೆಂಟಿನ ರಹಸ್ಯಗಳನ್ನು, ಸಹಕೆಲಸಗಾರರ ಮೇಲಿನ ರಿಪೋರ್ಟಿನ ಗುಟ್ಟುಗಳನ್ನು ಒಟ್ಟಿಗೇ ಕಾಪಾಡಿದ್ದಾರೆ.

ಕೆಲಸಕ್ಕೆ ಸೇರುವಾಗ ವಂದನಾ ಶೆಣೈ ಆಗಿದ್ದವಳು ಬರಬರುತ್ತ ವ್ಯಾಂಡಿ ಶೆನೊಯ್ ಎಂದು ಕರೆಸಿಕೊಳ್ಳುವ ಹಂತ ತಲುಪಿದ್ದು ಭಾಸ್ಕರರಾವ್ ಪ್ರಭಾವದಿಂದಲೇ ಎಂದು ನಂಬಿದ ಒಂದು ಗುಂಪು ನಮ್ಮ ಆಫೀಸಿನಲ್ಲಿದೆ. ರಾವ್‌ಗೇ ವಿಶಿಷ್ಟವಾದ, ಅವರದೇ ಆದ ಶೈಲಿಯು ಅವರಾಡುವ ಇಂಗ್ಲಿಷ್ ಮೂಲಕ, ವೇಷಭೂಷಣ, ಹಾವಭಾವಗಳ ಮೂಲಕ ಮಾತ್ರವಲ್ಲ ಅವರು ಇಡುವ ಅಡ್ಡ ಹೆಸರುಗಳ ಮೂಲಕವೂ ವ್ಯಕ್ತವಾಗುತ್ತಿತ್ತು.

ಅವರನ್ನು ಬಿಟ್ಟರೆ ಬೇರೆ ಯಾರ ಬಾಯಲ್ಲಿಯೂ ವಂದನಾ ಎಂಬ ಹೆಸರು ವ್ಯಾಂಡಿ ಆಗುತ್ತಿರಲಿಲ್ಲ. ಇನ್ನು ಮುಂದಿನ ಶೆನೊಯ್ ಅನ್ನುವುದನ್ನು ಅವಳಷ್ಟು ಚುರುಕಾದ ಹೆಂಗಸಿಗೆ ಯಾರೂ ಹೇಳಿಕೊಡಬೇಕಾಗಿರಲಿಲ್ಲ. ಅವಳು ಅದನ್ನು ತಾನಾಗಿಯೇ ಸಂತೋಷದಿಂದ ಧರಿಸಿಕೊಂಡಳು. ಭಾಸ್ಕರ್‌ರಾವ್‌ರನ್ನು ಮೆಚ್ಚಿಸುವ ಭರದಲ್ಲಿ ಅವಳ ಇಂಗ್ಲಿಷ್ ಪದಗಳ ಉಚ್ಛಾರವೇ ಬದಲಾಗಿಹೋಯಿತು. ಈಗ ನಲವತ್ತು ದಾಟಿರುವ ವ್ಯಾಂಡಿಯಲ್ಲಿ ಯೌವನದ ಕುರುಹುಗಳು ಇನ್ನೂ ಇವೆ. ಅವುಗಳನ್ನು ಹೇಗೆ ಉದ್ದೀಪಿಸಿಕೊಳ್ಳಬೇಕು ಅನ್ನುವುದು ಸಹ ಅವಳಿಗೆ ತಿಳಿದಿದೆ.

ಈವತ್ತು ಅವಳು ಯಾರಿಗೂ ಮಾತಿಗೆ ಸಿಗದೇ ಮನೆಗೆ ಹೋಗಿದ್ದು ಎಲ್ಲದಕ್ಕೂ ಪುರಾವೆಯ ಹಾಗೆ ತೋರಿತು. ರಾವ್ ಅವಧಿಗೆ ಮುನ್ನವೇ ನಿವೃತ್ತಿಯಾಗುವ ವಿಷಯ ಅದರಷ್ಟಕ್ಕೇ ಅಂಥ ಮಹತ್ವದ ಸುದ್ದಿಯಾಗುತ್ತಿರಲಿಲ್ಲ. ಕಂಡವರನ್ನೆಲ್ಲ ವಿಆರ್‌ಎಸ್‌ಗೆ ನೂಕಿದ ಅವರ ಬಗ್ಗೆ ಯಾರಿಗೂ ಹೆಚ್ಚು ಸಹಾನುಭೂತಿ ಇರಲಿಲ್ಲ. ಆದರೆ ಈ ಎರಡು ಶಬ್ದಗಳು ಅವರ ಬಾಯಿಂದ ಬಂದಾಗ ಜನಮಾರಣದಲ್ಲಿ ಪಾಲ್ಗೊಂಡ ಹಿಟ್ಲರ್‌ನ ಪಡೆಯ ಹಿರಿಯ ಅಧಿಕಾರಿ ಎಲ್ಲವನ್ನೂ ಹೇಳುತ್ತೇನೆಂದು ಘೋಷಿಸಿದಂತಾಯಿತು.

2
ಆಫೀಸಿನಲ್ಲಿ ಈ ಭರದ ಚಟುವಟಿಕೆಗಳು ನಡೆದ ದಿನವೇ ಮಧ್ಯಾಹ್ನ ನನ್ನ ಸಹೋದ್ಯೋಗಿ ಸಮೀರ ಸಾಹು ಫೋನ್ ಮಾಡಿ ಆ ಸಂಜೆ ಅವನ ಮನೆಯ ಗೃಹಪ್ರವೇಶಕ್ಕೆ ಬರಬೇಕೆನ್ನುವುದನ್ನು ಮತ್ತೆ ನೆನಪಿಸಿದ. ಒಂದು ವಾರದ ಹಿಂದೆ ಆಮಂತ್ರಣ ಪತ್ರ ಕೊಡುತ್ತ, ‘ನಿಮ್ಮ ಮಿಸೆಸ್ ಕರಕೊಂಡು ಬರಬೇಕು ಸರ್... ತಪ್ಪಿಸಬಾರದು...’ ಎಂದು ಒತ್ತಾಯಪೂರ್ವಕ ಹೇಳಿದ್ದ. ‘ನನ್ನ ಹೆಂಡತಿಗೆ ಬರಲಿಕ್ಕಾಗದೇ ಹೋಗಬಹುದು. ನಾನಂತೂ ಖಂಡಿತ ಬರುತ್ತೇನೆ’ ಎಂದು ಹೇಳಿದ್ದರೂ ಹೋಗುವುದು ಬೇಡವೆಂದೇ ನಿರ್ಧರಿಸಿದ್ದೆ. ಆದರೆ ರಜೆಯ ಮೇಲಿದ್ದರೂ ಅವನು ಮರೆಯದೇ ಮತ್ತೆ ಫೋನ್ ಮಾಡಿದ್ದರಿಂದ ಕೊನೆಯ ಗಳಿಗೆಯಲ್ಲಿ ಮನಸ್ಸು ಬದಲಾಯಿಸಿ ಹೊರಟೆ.

ಸಮೀರ ಸಾಹು ಕಲ್ಕತ್ತಾದಲ್ಲಿ ಹುಟ್ಟಿ ಬೆಳೆದವನು. ಕಲಾವಿದರ ಜೊತೆ ಸ್ನೇಹ ಸಂಪರ್ಕ ಇರುವವನು. ಅವನಿಗೆ ಪೇಂಟಿಂಗ್‌ನಲ್ಲಿ ತುಂಬ ಆಸಕ್ತಿ. ವಯಸ್ಸಿನಲ್ಲಿ ನನಗಿಂತ ಹಿರಿಯನಾದರೂ ನನ್ನ ಕೈಕೆಳಗೆ ಕೆಲಸ ಮಾಡುವ ಸಾಹು, ನನ್ನ ಹಿಂದೆ ನನ್ನ ಬಗ್ಗೆ ಹಗುರವಾಗಿ ಮಾತಾಡುತ್ತಾನೆ ಎಂಬ ಅನುಮಾನ ನನಗೆ. ಇದಕ್ಕೆ ಪುರಾವೆಯೇನೂ ಇರದಿದ್ದರೂ ಕಾರ್ಪೋರೇಟ್ ಕ್ಷುದ್ರತೆಯನ್ನು ಮೀರಲು ನಾನು ಬಳಸುವ ತಂತ್ರಗಳನ್ನೇ ನನ್ನ ವಿರುದ್ಧ ಅವನೂ ಬಳಸುತ್ತಾನೆ ಎಂದು ನನಗೆ ಸಂಶಯ.

ಅವನೊಂದು ಕಾಲದಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಸದಸ್ಯನಾಗಿದ್ದವನು. ಅವನ ಜೊತೆ ಮಾತನಾಡುವಾಗ, ಅವನಿಗಿಂತ ಉಗ್ರವಾಗಿ ಎಡಪಂಥವನ್ನು ಬೆಂಬಲಿಸಿ, ‘ಒಂದಲ್ಲ ಒಂದು ದಿನ ಈ ಕಾರ್ಪೊರೇಟ್ ಶೋಷಣೆಯನ್ನು ಸದೆಬಡಿಯುವ ಕಾಲ ಬಂದೇ ಬರುತ್ತದೆ ನೋಡುತ್ತಿರು...’ ಎಂಬ ಮಾತುಗಳನ್ನು ಹೇಳಿ ಅವನನ್ನು ಬೆಚ್ಚಿಬೀಳಿಸುವ ನನ್ನ ರೀತಿಯನ್ನು ಕೇವಲ ತಂತ್ರವೆಂದು ನೋಡುತ್ತಾನೆ ಎಂಬ ಸಂದೇಹ ನನಗೆ. ಆದ್ದರಿಂದಲೇ ಅವನ ಕೋಟೆಯನ್ನು ಪ್ರವೇಶಿಸಲು ಕೊಂಚ ಹಿಂಜರಿದಿದ್ದೆ. ಆದರೆ ಗೃಹಪ್ರವೇಶದ ದಿನ, ರಾವ್ ಕುರಿತ ಸುದ್ದಿಗಳು ಮನಸ್ಸನ್ನು ತುಂಬಿದ ದಿನ, ನನ್ನ ಕೈಕೆಳಗೆ ಕೆಲಸ ಮಾಡುವವರ ಜೊತೆ ಸ್ಪರ್ಧೆಗೆ ಇಳಿಯದೇ ಉದಾರವಾಗಿರಬೇಕೆಂದು ಅನಿಸಿ ಸಾಹು ಮನೆಯತ್ತ ಹೊರಟೆ.

ಅವನ ಹೊಸ ಮನೆ ನಗರದ ಹೊರವಲಯದ ಬಡಾವಣೆಯಲ್ಲಿ. ಅಲ್ಲಿ ತಲುಪಿದಾಗ ಕತ್ತಲಾಗಿತ್ತು. ಬಡಾವಣೆಯ ವಿರಳ ಮನೆಗಳ ಸಾಲಿನಲ್ಲಿ ಹೊಸ ಮನೆ ಹುಡುಕುವುದೇನೂ ತಡವಾಗಲಿಲ್ಲ. ಮನೆಯೆದುರಿನ ರಸ್ತೆಯಲ್ಲಿ ಕಾರು ಸ್ಕೂಟರುಗಳ ಸಾಲಿತ್ತು. ಆಗಷ್ಟೇ ಅವನ ಮನೆಯೆದುರಿನಿಂದ ವ್ಯಾನೊಂದು ಹೊರಟು, ಆ ಖಾಲಿಯಾದ ಜಾಗದಲ್ಲಿ ನನ್ನ ಕಾರು ನಿಲ್ಲಿಸಿದೆ. ಇನ್ನೂ ಕಟ್ಟುವುದು ಉಳಿದಿದೆ ಅನ್ನುವ ಭಾವನೆ ಕೊಡುವ ಮನೆಯ ಹೊರಭಾಗ ಮತ್ತು ಕಂಪೌಂಡ್‌ಗೆ ಹಾಕಿದ ಕಟ್ಟಿಗೆಯ ಬೇಲಿ ಮನೆಗೆ ವಿಶಿಷ್ಟವಾದ ಕಳೆ ಕೊಟ್ಟಿದ್ದವು.

ಒಳಗೆ ಸೇರಿದ ಜನರ ಗಿಜಿಗಿಜಿ ಮಾತು ಮತ್ತು ನಡುನಡುವೆ ಸ್ಫೋಟಿಸುವ ನಗು ಹೊರಗೂ ಕೇಳಿಸುತ್ತಿತ್ತು. ಒಳಗೆ ಹೋಗುತ್ತಿದ್ದಂತೆ ಸಾಹು ಎದುರಾದ. ಆತ್ಮೀಯವಾಗಿ ನಗುತ್ತ ಕೈಕುಲುಕಿ ‘ಬನ್ನಿ, ಬನ್ನಿ’ ಅನ್ನುತ್ತ ಒಳಗೆ ಕರೆದೊಯ್ದ. ಭಾರೀ ಸೀರೆ ಮತ್ತು ಬೆವರಿನಿಂದ ತೊಯ್ದ ಕುಪ್ಪುಸದೊಳಗೆ ಹೆಣಗಾಡುತ್ತಿದ್ದ ಕುಳ್ಳ ಹೆಂಗಸೊಬ್ಬಳನ್ನು ತನ್ನ ಹೆಂಡತಿಯೆಂದು ಪರಿಚಯಿಸಿದ. ಅವಳ ಸ್ವಾಗತದ ನಗೆಗೆ ದಣಿವು ಹತ್ತಿಕೊಂಡಿತ್ತು. ತುಟಿಯ ರಂಗು ಸೋತಿತ್ತು.

ಅವಳು ತೋರಿಸಿದ ಗೌರವ ಸಾಲಲಿಲ್ಲವೋ ಎಂಬಂತೆ ‘ಗೊತ್ತಾಯಿತಲ್ಲ, ಇವರು ಗೊತ್ತಲ್ಲ... ಇವರೇ ಮಿಸ್ಟರ್ ಮನಮೋಹನ್’ ಎಂದು ಹೆಂಡತಿಯನ್ನುದ್ದೇಶಿಸಿ ಮತ್ತೆ ಮತ್ತೆ ಹೇಳಿದ. ಸುಸ್ತಾಗಿದ್ದ ಅವಳು ನಾಲ್ಕು ವರ್ಷಗಳ ಹಿಂದೆ ಯಾವುದೋ ಎಕ್ಸಿಬಿಶನ್‌ನಲ್ಲಿ ಭೇಟಿಯಾಗಿದ್ದನ್ನು ನನಗೆ ನೆನಪಿಸಿಕೊಡಲು ಪ್ರಯತ್ನಿಸಿದಳು. ‘ಆವಾಗ ನೀವು ಸಿಕ್ಕಿದ್ದೀರಲ್ಲ. ನೀಲಿ ಶರ್ಟ ಹಾಕಿಕೊಂಡು ಬಂದಿದ್ದೀರಲ್ಲ... ಸಂಜೆ ಹೊತ್ತಿಗೆ... ನಿಮಗೆ ನೆನಪಿರಬೇಕಲ್ಲ...’ ಎಂದು ವಿಚಿತ್ರ ಉಚ್ಛಾರದ ಇಂಗ್ಲೀಷಿನಲ್ಲಿ ಹೇಳಿದಳು.

ಅವಳು ನೀಲಿ ಶರ್ಟ್ ಎಂದೆಲ್ಲ ಮಾತನಾಡುವಾಗ ಸಾಹು ಚಡಪಡಿಸುತ್ತಿದ್ದುದನ್ನು ಕಣ್ಣಂಚಿನಲ್ಲಿಯೇ ಗಮನಿಸಿ, ಹಾಗೇ ಆಗಬೇಕು ನಿನಗೆ ಎಂಬ ಒಂದು ರೀತಿಯ ದುರುಳ ಸಂತೋಷದಲ್ಲಿ ಅವನ ಹೆಂಡತಿಯ ಪೆದ್ದು ಮಾತುಗಳನ್ನು ಆನಂದಿಸಿದೆ. ಅವಳಿಗೆ ಹೆಚ್ಚು ಮಾತಾಡಲು ಆಸ್ಪದ ಕೊಟ್ಟರೆ ಅವಘಡವಾದೀತೆಂದೋ ಏನೋ, ‘ಬನ್ನಿ, ನನ್ನ ಮನೆ ತೋರಿಸುತ್ತೇನೆ’ ಅನ್ನುತ್ತ ಸಾಹು ನನ್ನನ್ನು ಮನೆಯೊಳಗೆ ನಡೆಸಿದ. ಅವನ ಸೌಜನ್ಯವನ್ನು ಮತ್ತು ನನಗೆ ತೋರಿಸುತ್ತಿರುವ ಗೌರವವನ್ನು ಅನುಮಾನಪಡದ ಹಾಗೆ ಸ್ವೀಕರಿಸಲು ಪ್ರಯತ್ನಿಸಿದೆ.

‘ಈ ಮನೆಗೆ ಬಂದು ತಿಂಗಳ ಮೇಲಾಯಿತು. ಆದರೂ ಎಲ್ಲವೂ ಅಸ್ತವ್ಯಸ್ತವಾಗಿ ಬಿದ್ದಿದೆ. ನಾವಿನ್ನು ಮನೆಗೆ ನಿಧಾನವಾಗಿ ಹೊಂದಿಕೋಬೇಕು. ಗೃಹಪ್ರವೇಶದ ಶಾಸ್ತ್ರಗಳಲ್ಲಿ ನನಗೆ ನಂಬಿಕೆಯಿಲ್ಲ. ಈವತ್ತಿನ ಪಾರ್ಟಿ ಹೊಸಮನೆಯ ನೆಪದಲ್ಲಿ ಸ್ನೇಹಿತರನ್ನು ಒಟ್ಟುಗೂಡಿಸುವ ಉಪಾಯ ಅಷ್ಟೇ...’ ಮಾತಾಡುತ್ತ ಸಾಹು ನನ್ನನ್ನು ಪ್ರತಿ ಕೋಣೆಗೂ ಕರಕೊಂಡು ಹೋದ.

ಮನೆಗೆ ಹಳೆಯ ರೇಲ್ವೆ ಹಳಿಗಳನ್ನೂ, ಕಬ್ಬಿಣದ ತಗಡುಗಳ ಬಾಗಿಲುಗಳನ್ನೂ ಬಳಸಿದ್ದರು. ಹಸಿರು ಬಣ್ಣ ಬಳಿದ ಕಟಾಂಜನ ಆಕರ್ಷಕವಾಗಿತ್ತು. ಸಾಮಾನ್ಯವಾಗಿ ಮನೆಯೊಳಗೆ ಹಚ್ಚಲು ಹಿಂಜರಿಯುವ ಢಾಳಾದ ಬಣ್ಣಗಳನ್ನು ಯಾವ ಅಳುಕೂ ಇಲ್ಲದೇ ಬಳಸಲಾಗಿತ್ತು. ಎರಡು ಅಂತಸ್ತುಗಳಲ್ಲಿ ಹರಡಿಕೊಂಡ ಮನೆ ಬಹಳ ಭವ್ಯವೆನಿಸುವ ಭಾವನೆ ಕೊಡುತ್ತಿತ್ತು. ಮೇಲೆ ಸೂರ್ಯನ ಬೆಳಕಿಗೆಂದು ಕಿಂಡಿ, ಕೆಳಗೆ ಚಿಕ್ಕ ಗಾರ್ಡನ್ ಹೀಗೆ ಎಲ್ಲ ವಾಸ್ತುವೈವಿಧ್ಯವೂ ಅಲ್ಲಿತ್ತು.

ಕಳೆದೆರಡು ಗಂಟೆಗಳಲ್ಲಿ ಮತ್ತೆಮತ್ತೆ ವಿವರಿಸಿ ಮನೆಯ ಪ್ರತಿ ಭಾಗದ ವೈಶಿಷ್ಟ್ಯವೂ ಬಾಯಿಪಾಠವಾಗಿ ಕೆಲವೇ ವಾಕ್ಯಗಳಲ್ಲಿ ಮನೆಯನ್ನು ವರ್ಣಿಸುವ ಕಲೆಯೂ ಅವನಿಗೆ ಸಿದ್ಧಿಸಿತ್ತು. ‘ನೋಡಿ ಈ ಕಿಟಕಿಯ ಚೌಕಟ್ಟುಗಳೆಲ್ಲ ಸೆಕೆಂಡ್ ಹ್ಯಾಂಡ್. ಕೆಡವಿದ ಹಳೆಯ ಮನೆಗಳಿಂದ ಬಂದವುಗಳು. ಅವು ಒಂದೇ ಅಳತೆಯಲ್ಲಿ ಸಿಗಲ್ಲ. ಆದರೆ ಬೇರೆ ಬೇರೆ ಕೋಣೆಯಲ್ಲಿ ಉಪಯೋಗಿಸಿರುವುದರಿಂದ ಅವುಗಳ ವ್ಯತ್ಯಾಸ ಗೊತ್ತಾಗಲ್ಲ... ಇದು ಕೇರಳದ ಹಾಲೋ ಬ್ರಿಕ್ಸ್. ಸೆಕೆಯಾಗಲ್ಲ. ಈಗೆಲ್ಲ ಬೆಂಗಳೂರಲ್ಲೇ ಸಿಗತ್ತೆ. ಇಲ್ಲಿ ನೋಡಿ ಈ ಕಲ್ಲುಗಳೆಲ್ಲ ಹಳೆಯ ಕಟ್ಟಡದ್ದೇ.... ಬಾತ್‌ರೂಂ ಮಾತ್ರ ಏನೂ ಕಾಂಪ್ರಮೈಸ್ ಮಾಡದೇ ಕಟ್ಟಿಸಿದೆ...’

‘ಚೆನ್ನಾಗಿದೆ ನಿಮ್ಮ ಮನೆ. ಯಾರು ಇದನ್ನು ಡಿಸೈನ್ ಮಾಡಿದ್ದು?’ ‘ನನ್ನ ಸ್ನೇಹಿತನೇ ಡಿಸೈನರ್. ಸುದೇಶ್ ಅಂತ. ಅವನೂ ಇಲ್ಲಿಯೇ ಇದ್ದಾನೆ. ನಿಮಗೆ ಪರಿಚಯಿಸುತ್ತೇನೆ’. ಸಾಹು ನನ್ನನ್ನು ಮನೆಯ ಹಿಂದಿನ ಕೈತೋಟದತ್ತ ಕರೆದೊಯ್ದ. ಅಲ್ಲಿ ಅವನ ಸ್ನೇಹಿತರ ಗುಂಪು ಸೇರಿತ್ತು. ಕಿವಿತುಂಬ ಬೆಂಗಾಲಿ ಕಲರವ. ಜೀನ್ಸ್ ಮತ್ತು ಕಂದು ಜುಬ್ಬ ತೊಟ್ಟ ನಡುವಯಸ್ಸಿನವನೊಬ್ಬ ತನ್ನ ಸುತ್ತ ಸೇರಿದ ಜನರಿಗೆ ಮನೆಯನ್ನು ವಿವರಿಸುತ್ತಿದ್ದ. ಅವನ ಒಟ್ಟೂ ಲಹರಿಯಿಂದಲೇ ಅವನು ಈ ಮನೆಯ ವಿನ್ಯಾಸಕಾರನೆಂಬುದು ಗೊತ್ತಾಗುತ್ತಿತ್ತು.

ಸಾಹು ಆತನನ್ನು ನನಗೆ ಪರಿಚಯಿಸಿದ. ‘ಇವರು ಸುದೇಶ ಗೋಸ್ವಾಮಿ. ಈ ಮನೆಯನ್ನು ವಿನ್ಯಾಸ ಮಾಡಿದವರು’.
ನನ್ನ ಬಗ್ಗೆ ಹೇಳುವಾಗ ಅವನ ಮಾತಿನಲ್ಲಿದ್ದ ಹೊಗಳಿಕೆಯ ಹಿಂದೆ ವ್ಯಂಗ್ಯದ ಲೇಪವಿದೆಯೇ ಎಂದು ಹುಡುಕಿದೆ. ‘ಇವರು ಮಿಸ್ಟರ್ ಮನಮೋಹನ್... ನನ್ನ ಬಾಸ್. ಅದಕ್ಕೂ ಮುಖ್ಯವಾಗಿ ಕನ್ನಡದ ಲೇಖಕರು. ಕಥೆಗಳನ್ನು ಬರೆಯುತ್ತಾರೆ. ನಮ್ಮ ಕೆಲಸದ ಜಗತ್ತಲ್ಲಿ ಈ ರೀತಿಯ ಸಂವೇದನೆಯುಳ್ಳವರು ಬಹಳ ಕಡಿಮೆ. ಅಷ್ಟೇ ಅಲ್ಲ, ಇವರಿಗೆ ಕಲೆಯ ಬಗ್ಗೆ ಕೂಡ ಬಹಳ ಆಸಕ್ತಿ. ನಮ್ಮ ಆಫೀಸಿನಲ್ಲಿರುವ ಆರ್ಟ್‌ಗ್ಯಾಲರಿ ಮಾಡಲು ಇವರದೇ ಕುಮ್ಮಕ್ಕು...’

ಅವನ ನಾಟಕೀಯ ಮಾತು ಎತ್ತ ಕಡೆ ಎಳೆಯುವ ಹುನ್ನಾರೆಂದು ಯೋಚಿಸಿದೆ. ಆದರೆ ಆ ಮಾತುಗಳನ್ನು ಅಲ್ಲಿದ್ದ ಯಾರೂ ಸಂಶಯಿಸಲಿಲ್ಲ. ಬದಲಿಗೆ ಅವರಿಗೆಲ್ಲ ನಾನು ಬಹಳ ಮಹತ್ವದ ವ್ಯಕ್ತಿಯಂತೆ ತೋರಿದ್ದು ಅವರ ಮುಂದಿನ ವರ್ತನೆಗಳಲ್ಲಿ ಗೊತ್ತಾಯಿತು. ಅದು ಸಾಹಿತ್ಯ ಮತ್ತು ಕಲೆಯಲ್ಲಿರುವ ನನ್ನ ಆಸಕ್ತಿಗೋ ಅಥವಾ ನಾನು ಸಾಹುನ ಬಾಸ್ ಎಂಬ ಕಾರಣಕ್ಕೋ ಸರಿಯಾಗಿ ಗೊತ್ತಾಗಲಿಲ್ಲ. ಅವರಲ್ಲಿ ಸೇನ್‌ಹೆಸರಿನ ಮುದುಕನೊಬ್ಬ ನನ್ನ ಸಂದರ್ಶನಕ್ಕೇ ತೊಡಗಿಬಿಟ್ಟ.

‘ನಿಮ್ಮ ಕತೆಗಳು ಯಾವ ರೀತಿಯವು? ಅಂದರೆ ಸಾಮಾಜಿಕವೋ, ಸಯನ್ಸ್ ಫಿಕ್ಷನ್ನೋ, ಪತ್ತೇದಾರಿಯೋ?’
ಮೊದಲ ಪ್ರಶ್ನೆಯಲ್ಲೇ ಅವನ ಆಳ ಗೊತ್ತಾಗಿಹೋಯಿತು. ದುರದೃಷ್ಟವಶಾತ್ ಇಂಥ ಜನರೇ ಪಾರ್ಟಿಗಳಲ್ಲಿ ಗಂಟುಬೀಳುತ್ತಾರೆ. ಮತ್ತು ನಾವು ಎಂದೂ ಕೇಳಿಕೊಳ್ಳದಿದ್ದ ಸರಳ ಪ್ರಶ್ನೆಗಳಿಂದ ಜೀವ ತಿನ್ನುತ್ತಾರೆ. ‘ಗಂಭೀರ ಸೃಜನಾತ್ಮಕ ಸಾಹಿತ್ಯ ಅನ್ನುವ ಒಂದು ವರ್ಗ ಇದ್ದರೆ ಅಲ್ಲಿ ಅವುಗಳನ್ನು ಸೇರಿಸಬಹುದು’ ಅಂದೆ. ಅವನಿಗೆ ನನ್ನ ವ್ಯಂಗ್ಯ ಗೊತ್ತಾಗಲಿಲ್ಲ. ಆದರೆ ಸಾಹುಗೆ ಗೊತ್ತಾಯಿತು. ಅವನು ತಕ್ಷಣ ನನ್ನ ಸಹಾಯಕ್ಕೆ ಬಂದ.

‘ಅರೇ ದಾದಾ, ಮನಮೋಹನ್ ಅವರದು ಬೇರೆಯದೇ ರೀತಿಯ ಬರವಣಿಗೆ. ಇಂಟಲೆಕ್ಚುಯಲ್ ಬರವಣಿಗೆ ಅಂತಾರಲ್ಲ ಆ ಥರ... ಅವರು ಸಾಹಿತ್ಯವನ್ನು ಬಹಳ ಓದಿಕೊಂಡಿದ್ದಾರೆ ಕೂಡ... ನಮ್ಮಲ್ಲಿ ಆಡಿಟ್ ವಿಭಾಗದ ಮುಖ್ಯಸ್ಥರಿವರು...’
ಸಾಹುನ ವಿವರಣೆಯಂತೂ ನನಗೆ ಏನೇನೂ ಸೇರಲಿಲ್ಲ. ಆದರೆ ಅದನ್ನು ತಿದ್ದುವ ಹೊತ್ತು ಇದಲ್ಲವೆಂದು ಸುಮ್ಮನಾದೆ.
ಆದರೆ ಸೇನ್ ಅಷ್ಟಕ್ಕೆ ಬಿಡುವವನ ಹಾಗೆ ಕಾಣಲಿಲ್ಲ. ಸಾಹು ಮತ್ತೆ ಯಾರನ್ನೋ ಕಂಡು ಅವರಿಗೆ ಉಪಚಾರ ಮಾಡಲು ನನ್ನನ್ನು ಸೇನ್‌ನ ಕೈಯಲ್ಲಿಟ್ಟು ಹೋದ.

‘ಸಂತೋಷ ಸಂತೋಷ.... ನಿಮ್ಮ ಕತೆಗಳು ಇಂಗ್ಲೀಷಿಗೆ ಅನುವಾದ ಆಗಿವೆಯೇ?’
‘ಕೆಲವು ಆಗಿವೆ.’
’ನಿಮ್ಮ ಪುಸ್ತಕದ ಹೆಸರು ಹೇಳಿದರೆ ಕೊಂಡುಕೊಳ್ಳುತ್ತೇನೆ. ಇಲ್ಲಿ ಅದು ಸಿಕ್ಕೇ ಸಿಗುತ್ತದೆ ಅಲ್ಲವೇ?’
‘ಇಂಗ್ಲೀಷಿನಲ್ಲಿ ಇನ್ನೂ ಪುಸ್ತಕ ಬಂದಿಲ್ಲ. ಕೆಲವು ಬಿಡಿ ಕತೆಗಳು ಅನುವಾದವಾಗಿವೆ...’
‘ಹಾಗಾದರೆ ನೀವೇ ಅವುಗಳನ್ನು ನನಗೆ ಕೊಡಬೇಕಾಗಬಹುದು... ನಾನು ಓದಿ ಹಿಂತಿರುಗಿಸುತ್ತೇನೆ... ನನ್ನ ವಿಳಾಸ ಈಗಲೇ ಕೊಡುತ್ತೇನೆ...’– ತನ್ನ ವಿಳಾಸವಿರುವ ಕಾರ್ಡ್ ಒಂದನ್ನು ನನ್ನ ಕೈಯಲ್ಲಿಡುತ್ತ, ‘ನಾನು ಸೆಂಟ್ರಲ್ ಎಕ್ಸೈಜ್ ಡಿಪಾರ್ಟಮೆಂಟಿನಲ್ಲಿದ್ದೆ.

ಈ ಊರಿನಲ್ಲೇ ರಿಟಾಯರ್ ಆಯಿತು. ಇದ್ದಲ್ಲೇ ಊರಲ್ಲವೇ ಎಂದು ಇಲ್ಲೇ ಸೆಟಲ್ ಆಗಿಬಿಟ್ಟೆ. ಕನ್ನಡ ಸ್ವಲ್ಪ ಮಾತಾಡುತ್ತೇನೆ ಆದರೆ ಓದಲು ಬರುವುದಿಲ್ಲ... ನನಗೆ ಸಾಹಿತ್ಯದಲ್ಲಿ ತುಂಬಾ ಆಸಕ್ತಿ... ನಿಮ್ಮಂಥವರು ಇಂಗ್ಲೀಷಿನಲ್ಲಿ ಬರೆಯಬೇಕಪ್ಪ... ನಮ್ಮ ಸಂಸ್ಕೃತಿಯನ್ನು ಎಲ್ಲರಿಗೂ ತಿಳಿಸಬಹುದು... ನಮ್ಮಂಥವರಿಗೂ ಓದಲು ಅನುಕೂಲ...’ ಅಂದರು.
‘ಇಂಗ್ಲಿಷಿನಲ್ಲಿ ಬರೆಯುವವರು ಬೇಕಾದಷ್ಟಿದ್ದಾರೆ... ನನಗೆ ಕನ್ನಡವೇ ಇರಲಿ ಬಿಡಿ...’
‘ಆದರೆ ಇಂಗ್ಲೀಷಿನಲ್ಲಿ ಬಂತು ಅಂದರೆ ಬಹಳ ಜನರಿಗೆ ತಲುಪುತ್ತದೆ ನೋಡಿ... ಅಲ್ಲವೇ? ಏನಂತೀರಿ?’ ಎಂದು ಗೆದ್ದವರಂತೆ ನಕ್ಕರು.

‘ಒಬ್ಬೊಬ್ಬರಿಗೆ ಒಂದೊಂದು ಭ್ರಮೆ’ ಅಂದೆ. ಅದು ಅಪೂರ್ಣ ವಾಕ್ಯವೆಂದು, ನಾನು ಇನ್ನೂ ಮಾತು ಮುಂದುವರಿಸಬಹುದೆಂದು ಅವರು ಕಾದರು. ಏನೂ ಹೇಳದೇ ಕಾಯಿಸಿದೆ, ಅತ್ತಿತ್ತ ನೋಡುತ್ತ.
ಅವನಿಂದಾಗಿಯೋ ಅಥವಾ ಮಾತಿನ ಮಧ್ಯೆ ಮೂಗು ತೂರಿಸಬಾರದೆಂದೋ ಸುತ್ತಲಿದ್ದವರು ಯಾರೂ ಮಾತಾಡಲಿಲ್ಲ. ಇದನ್ನು ಕೊನೆಗಾಣಿಸಬೇಕೆಂದು ಪಕ್ಕದವನತ್ತ ತಿರುಗಿ ‘ನೀವು ತಿಂಡಿ ತಿಂದಿರಾ?’ ಅಂದೆ.

‘ಇಲ್ಲ... ಇಲ್ಲ... ಬನ್ನಿ ಒಟ್ಟಿಗೇ ತಿನ್ನೋಣ...’ ಎಂದು ಅವರು ನನ್ನನ್ನು ಕಾಪಾಡಿದರು. ಅಷ್ಟರಲ್ಲಿ ಸಾಹು ಕೂಡ ಮತ್ತೆ ಪ್ರತ್ಯಕ್ಷನಾದ.
ಗೃಹಪ್ರವೇಶದ ತಿಂಡಿ ಸರಳವಾಗಿ ರುಚಿಯಾಗಿತ್ತು. ಉಪ್ಪಿಟ್ಟು, ಖಾರ, ಕಾಫಿ ಮತ್ತು ಒಂದೊಂದು ಮೈಸೂರಪಾಕು. ಅಲ್ಲಿ ಬಂದ ಎಲ್ಲರಿಗೂ ಅದು ಬಹಳ ಸೇರಿತು. ‘ಸೌತ್ ಇಂಡಿಯನ್ ಮೆನು’ ಎಂದು ಸಾಹುನ ಹೆಂಡತಿ ತನ್ನ ಬೆಂಗಾಲಿ ಅತಿಥಿಗಳಿಗೆ ಪದೇಪದೇ ಹೇಳುತ್ತಿದ್ದುದು ಕಿವಿಗೆ ಬಿತ್ತು. ಕೆಲವರು ಸೌತ್ ಇಂಡಿಯನ್ಸ್ ಥರ ಕಾಫಿ ಮಾಡುವ ಸರಿಯಾದ ಕ್ರಮ ಯಾವುದೆಂದು ಚರ್ಚಿಸುತ್ತಿದ್ದರು.

ತಿಂಡಿಯನ್ನೆತ್ತಿಕೊಂಡು ಆಫೀಸಿನ ಜನರ ಗುಂಪಿನಲ್ಲಿ ಸೇರಿಕೊಂಡೆ. ಅಲ್ಲಿ ಬರೇ ಭಾಸ್ಕರರಾವ್ ಕುರಿತ ಮಾತುಗಳೇ.
‘ನೀವು ಏನೇ ಹೇಳಿ ಸರ್, ಎಲ್ಲಾ ಹೇಳುತ್ತೇನೆಂದಿದ್ದೂ ಕೂಡ ಭಾಸ್ಕರ್‌ರಾವ್ ಅವರ ಒಂದು ಸ್ಟ್ರಾಟೆಜಿಯೇ’. ಒಬ್ಬ ತನ್ನದೇ ವ್ಯಾಖ್ಯಾನ ಕೊಡುತ್ತಿದ್ದ. ಸಾಹು ನಡುವೆ ತಲೆಹಾಕಿದ. ‘ನೀವು ಜನರನ್ನು ನಂಬಬೇಕು. ನಂಬದೇ ಇದ್ದರೆ ಅವರು ಸತ್ಯ ಹೇಳಿದರೂ ನಿಮಗದು ಗೊತ್ತಾಗುವುದಿಲ್ಲ’.

‘ನಂಬಿಕೆ? ಹ್ಹಂ... ಭಾಸ್ಕರ್‌ರಾವ್ ಮೇಲೆ? ನೀವು ನಂಬಲು ತಯಾರಿದ್ದೀರೇನು?’ ಎಂಬಾತನ ಮರುಪ್ರಶ್ನೆಗೆ ಸಾಹು ಉತ್ತರಿಸದೇ ಸುಮ್ಮನೇ ನಕ್ಕ. ಸಾಹು ಸುಮ್ಮನಿದ್ದುದನ್ನು ನೋಡಿ ಆತ ಭಾಸ್ಕರರಾವ್ ಬಗ್ಗೆ ಹರಿತವಾದ ಮಾತುಗಳನ್ನು ಹರಿಯಬಿಟ್ಟ. ‘ಏನಾಯಿತು, ನಮ್ಮ ಅಶೋಕ ಗಾಂಗೂಲಿಗೆ? ಅವನ ದೌರ್ಬಲ್ಯಗಳ ಬಗ್ಗೆ ಕತೆಗಳನ್ನು ಹುಟ್ಟಿಸಿ, ಕೊನೆಗೆ ಸ್ವತಃ ಗಾಂಗೂಲಿಯೂ ಅದನ್ನು ನಂಬುವಂತೆ ಮಾಡಿದ್ದು ಇದೇ ಭಾಸ್ಕರರಾವ್ ತಾನೇ?

ಆಮೇಲೆ ಅವನಾಗಿಯೇ ಬಿಟ್ಟು ಹೋಗುವಂಥ ಸನ್ನಿವೇಶ ಸೃಷ್ಟಿಸಿದ... ಬೀಳ್ಕೊಡುವ ಭಾಷಣದಲ್ಲಿ ನಮ್ಮ ಮುಗ್ಧ ಗಾಂಗೂಲಿ ಭಾಸ್ಕರ್‌ರಾವನ್ನೇ ಹೊಗಳಿದ... ಈಗ ತನ್ನ ಕುಂಡೆಗೆ ಬೆಂಕಿ ಬಿದ್ದಾಗ ಎಲ್ಲಾ ಹೇಳುತ್ತಾನಂತೆ... ಈಗ ಹೇಳಿ ಏನು ಮಾಡುವದಿದೆ?’ ಇಂಥ ಮಾತುಗಳನ್ನು ಮುಂದೆ ಬೆಳೆಸಲು ಬಹಳ ಜನ ಇದ್ದರು. ಪ್ರತಿಯೊಬ್ಬರಿಗೂ ಅವರದೇ ಅಭಿಪ್ರಾಯಗಳಿದ್ದವು. ಭಾಸ್ಕರರಾವ್ ಬಗ್ಗೆ ಸಿಟ್ಟಿತ್ತು.

‘ನನಗೆ ಇವರ ನೈತಿಕ ಶುದ್ಧತೆಯ ನಾಟಕ ಕಂಡರೆ ಆಗುವುದಿಲ್ಲ. ತಮ್ಮ ಕತ್ತು ಹೋಗುವ ಪ್ರಸಂಗ ಬಂತೋ ಎಲ್ಲದಕ್ಕೆ ಬೇರೆಯೇ ಅರ್ಥ. ಅಲ್ಲಿಯವರೆಗೆ ಅವರಿಗೆ ವ್ಯವಸ್ಥೆಯಲ್ಲಿ ಯಾವ ತಪ್ಪೂ ಕಾಣಿಸುವುದಿಲ್ಲ. ಎಲ್ಲವನ್ನೂ ಹೇಳಲಿಕ್ಕೆ ಮನುಷ್ಯ ಒದೆಸಿಕೊಂಡು ಹೊರಹಾಕಿಸಿಕೊಳ್ಳುವವರೆಗೂ ಯಾಕೆ ಕಾಯಬೇಕು? ಇರೋದನ್ನ ಕಳಕೊಳ್ಳೋ ರಿಸ್ಕ್ ತಗೋಬೇಕು. ಇಲ್ಲವಾದರೆ ಇಂಥ ಮಾತುಗಳನ್ನು ಆಡುವುದೇ ಪೂರಾ ನೈತಿಕ ಅಧಃಪತನದ ಸೂಚನೆ...’

‘ಎಲ್ಲಿಯ ನೈತಿಕತೆ? ನಮ್ಮ ಯೂನಿಯನ್‌ಗಳಿಗೇನಾಯಿತು ನೋಡಿ. ದುಡ್ಡು ಏನೇನನ್ನೆಲ್ಲ ಮಾಡಿಸಿತು. ಸಂಬಳವನ್ನು ಅವರಾಗೇ ಜಾಸ್ತಿ ಮಾಡುತ್ತ ಹೋದರೆ ಯಾರಿಗೆ ಬೇಕು ಯೂನಿಯನ್ ಜಂಜಾಟ ಅಂತ ಎಲ್ಲರಿಗೂ ಅನಿಸಿಬಿಡಲಿಲ್ಲವೇ? ಆದರೆ ಯೂನಿಯನ್ ಅಂದರೆ ಅಷ್ಟೇ ಅಲ್ಲ ಅನ್ನೋದು ಮಾತ್ರ ಯಾರಿಗೂ ಗೊತ್ತಾಗಲಿಲ್ಲ...’
‘ಜಾಗತೀಕರಣದ ಸವಲತ್ತು ಬೇಕೆಂದರೆ ಇದೂ ಬರತ್ತಪ್ಪ ಜೊತೆಗೆ...’

‘ನಾನು ಕೇಳಿದ ಸುದ್ದಿ ಹೇಳಿದರೆ ನೀವೇನಂತೀರೋ ಏನೋ!’ ಎಂದೊಬ್ಬ ಎಲ್ಲರ ಕುತೂಹಲ ಕೆರಳಿಸಿದ. ‘ಹೇಳು ಹೇಳು’ ಎಂದು ಅವನ ಸುತ್ತ ನಿಂತವರು ಪ್ರಚೋದಿಸಿದರು. ‘ನಮ್ಮ ಎಂ.ಡಿ.ಯ ಪ್ರಚಂಡ ಬುದ್ಧಿಗೆ ಅವಾರ್ಡ್ ಕೊಡಬೇಕು. ಅದೇನಾಯ್ತು ಅಂದರೆ, ಸೀನಿಯರ್ ಮ್ಯಾನೇಜ್‌ಮೆಂಟ್ ರಚನೆಯನ್ನು ಬದಲಾಯಿಸಿ, ಹುದ್ದೆಗಳನ್ನು ಕಡಿತಗೊಳಿಸಿ ಹೆಚ್ಚು ಎಫಿಶಿಯೆಂಟ್ ಮಾಡಬೇಕೆಂದು, ಹೊಸಬರನ್ನು ಮೇಲೆ ತರಬೇಕೆಂದು, ಒಂದು ಪ್ರಾಜೆಕ್ಟ್ ಶುರುಮಾಡಿದರಂತೆ.

ಅದರ ಜವಾಬ್ದಾರಿಯನ್ನ ರಾವ್ ಅವರಿಗೇ ವಹಿಸಿ, ಅವರ ಹುದ್ದೆಯನ್ನೂ ಸಹ ಹೊಸ ಸಂದರ್ಭದಲ್ಲಿಟ್ಟು ನೋಡಿ ಅದರ ಅಗತ್ಯದ ಬಗ್ಗೆ ಕೂಲಂಕಶ ವಿಚಾರ ಮಾಡಿದರೆ ಈ ಪ್ರಾಜೆಕ್ಟ್‌ಗೊಂದು ವಿಶ್ವಾಸಾರ್ಹತೆ ಬರುತ್ತದೆ ಅಂದರಂತೆ. ತನ್ನನ್ನು ಈ ಹುದ್ದೆಯಿಂದ ಮೇಲಕ್ಕೆತ್ತಿ ಬೋರ್ಡ್ ಮೆಂಬರ್ ಮಾಡುತ್ತಾರೆಂಬ ಭರವಸೆಯಲ್ಲಿ ರಾವ್ ಕೆಲಸ ಮಾಡಿದ್ದಾರೆ. ರಿಪೋರ್ಟ್ ತಯಾರಿಸಿ ಕೊಟ್ಟ ಮೇಲೆ ಬೋರ್ಡ್ ಅದನ್ನು ಒಪ್ಪಿಕೊಂಡಿದೆಯಂತೆ. ಆದರೆ ರಾವ್ ಅವರನ್ನು ಮೇಲಕ್ಕೇರಿಸುವ ಪ್ರಸ್ತಾಪ ಮಾತ್ರ ಪಾಸಾಗಲಿಲ್ಲವಂತೆ.

ಹಾಗಾಗಿ ಈಗ ರಾವ್ ತಾವೇ ತೋಡಿದ ಹಳ್ಳದಲ್ಲಿ ಬಿದ್ದಿದ್ದಾರೆ. ಅದಕ್ಕೇ ಇಷ್ಟೆಲ್ಲ ರೋಷಾವೇಶ...’ ಇದನ್ನೊಪ್ಪದವರು ‘ನಾನು ಕೇಳಿದ ಸುದ್ದಿಯೇ ಬೇರೆ’ ಎಂದು ಹೊಸ ಕತೆ ಶುರುಮಾಡಿದರು. ಆಮೇಲೆ ಮಾತು ಎತ್ತೆತ್ತಲೋ ಹೋಯಿತು. ಸುಖದ, ಸಂಬಳದ ಆಮಿಷಗಳಲ್ಲಿ ನಾವೆಲ್ಲರೂ ನೈತಿಕ ಅನ್ಯಾಯಗಳನ್ನು ಎಷ್ಟು ಸಹಿಸಿಕೊಳ್ಳುತ್ತೇವೆ ಅನ್ನುವುದರ ಬಗ್ಗೆಯೇ ಹೆಚ್ಚು ಮಾತುಕತೆ. ಕಾಮ್ರೇಡರಿಯೇ ಇಲ್ಲ; ತನಗೆ ಹೊಡೆತ ಬೀಳುವವರೆಗೂ ದನಿ ಎತ್ತುವುದಿಲ್ಲ ಅನ್ನುವದರ ಬಗ್ಗೆ.

‘ನೀವೇನು ಹೇಳ್ತೀರಿ ಸರ್?’ ಎಂದೊಬ್ಬ ನನ್ನ ಹಿಂದೆ ಬಿದ್ದ. ‘ನಾನೂ ಎಲ್ಲರ ಹಾಗೆ ಭಾಸ್ಕರ್‌ರಾವ್ ಎಲ್ಲವನ್ನೂ ಹೇಳೋದನ್ನೇ ಕಾಯ್ತಾ ಇದೀನಿ’. ಎಲ್ಲ ಘೊಳ್ಳೆಂದು ನಕ್ಕರು. ನಂತರ ಗುಂಪು ಚೆದುರಿತು. ಮತ್ತೊಂದಷ್ಟು ಜನರ ಜೊತೆ ಹರಟೆ, ತಿಂಡಿ ಮುಗಿಸಿ ಹೊರಟೆ.
ನಾನು ಹೊರಡುವ ಹೊತ್ತಿಗೂ ಜನ ಬರುತ್ತಲೇ ಇದ್ದರು. ಆಫೀಸಿನ ಸಹೋದ್ಯೋಗಿಗಳ ಹೊರತಾಗಿಯೂ ಸಾಹುಗೆ ದೊಡ್ಡ ಸ್ನೇಹಿತ ಸಮುದಾಯವಿತ್ತು. ಸಾಹುನ ಹೆಂಡತಿ ಸುಸ್ತಾಗಿ ಒಂದು ಕುರ್ಚಿಯಲ್ಲಿ ಕೂತು ಸೆರಗಿನಿಂದ ಗಾಳಿಹಾಕಿಕೊಳ್ಳುತ್ತಿದ್ದರು. ಎಷ್ಟು ದಣಿದಿದ್ದಳೆಂದರೆ ಕೂತಲ್ಲಿಂದಲೇ ಕೈಬೀಸಿ ನನ್ನನ್ನು ಬೀಳ್ಕೊಟ್ಟಳು.

ಸಾಹು ನನ್ನನ್ನು ಕಳಿಸಲು ಗೇಟಿನಾಚೆಯವರೆಗೂ ಬಂದ. ನನ್ನ ಕಾರಿನ ಎದುರು ಇನ್ನೊಂದು ಕಪ್ಪು ಕಾರು ತೀರ ಹತ್ತಿರ ನಿಂತಿತ್ತು. ಅದರ ಎಲ್ಲ ಬಾಗಿಲುಗಳೂ ತೆರೆದಿದ್ದು ಹೊರಡುವ ಸೂಚನೆಯಂತೆ ಕಂಡಿತು. ಅದು ಹೊರಡಲೆಂದು ಕಾದೆ. ನೋಡನೋಡುತ್ತಿದ್ದಂತೆ ಆರು ಜನ ತರುಣ ತರುಣಿಯರು ಅದರೊಳಗೆ ತುರುಕಿಕೊಂಡರು. ಕೊನೆಯಲ್ಲಿ ಉಳಿದ ಒಬ್ಬ ಹುಡುಗಿ ಒಳಗೆ ಹೇಗೆ ನುಗ್ಗುವುದೋ ತಿಳಿಯದ ಸಂಕೋಚದಿಂದ ಕಾರೊಳಗೆ ಬಗ್ಗಿಬಗ್ಗಿ ನೋಡುತ್ತಿದ್ದಳು.

ಅವಳು ಆ ಗುಂಪಿಗೆ ಸೇರಿದವಳಲ್ಲವೆಂಬುದು ಅವಳ ದೇಹಭಾಷೆಯಲ್ಲೇ ಗೊತ್ತಾಗುತ್ತಿತ್ತು. ಸಾಹು ಅವಳನ್ನು ಕರೆದು, ‘ಬೇಡ ಬಿಡು. ನಿನ್ನನ್ನು ಬೇರೆ ಯಾರಾದರೊಬ್ಬರ ಜೊತೆ ಕಳಿಸುತ್ತೇನೆ. ಅವರೆಲ್ಲ ಹೋಗಲಿ’ ಅಂದ. ಅವಳು ಬರುವುದಿಲ್ಲವೆಂದು ಹೇಳಿದ್ದೇ ಒಳಗೆ ಕೂತವರು ಕಾರಿನ ಬಾಗಿಲುಗಳನ್ನು ಪ್ರಯಾಸದಿಂದ ಒತ್ತಿ ಮುಚ್ಚಿ ಹೊರಟುಬಿಟ್ಟರು.

ನಾನು ಕಾರಿನತ್ತ ಹೋಗುವಾಗ ಸಾಹುನ ಕಡೆ ತಿರುಗಿ ಹೇಳಿದೆ. ‘ಅವರು ನನ್ನ ಜೊತೆ ಬರಬಹುದು... ಎಲ್ಲಿಗೆ ಹೋಗಬೇಕು?’
ಅದನ್ನು ಕೇಳಿಸಿಕೊಂಡ ಅವಳು ‘ಸಿಟಿಯಲ್ಲಿ ಎಲ್ಲಾದರೂ ಡ್ರಾಪ್ ಮಾಡಿದರೆ ಸಾಕು’ ಅಂದಳು. ಕಾರಿನ ಬೀಗ ತೆಗೆಯುತ್ತ ‘ಬನ್ನಿ, ನಾನು ಡ್ರಾಪ್ ಕೊಡುತ್ತೇನೆ’ ಅಂದೆ. ಸಾಹು ಕೃತಜ್ಞತೆಯ ನಗೆ ನಕ್ಕು ನಮ್ಮಿಬ್ಬರನ್ನೂ ಬೀಳ್ಕೊಟ್ಟ. ನೀಲಿ ಜೀನ್ಸ್ ಮತ್ತು ಹತ್ತಿಯ ಬಟ್ಟೆಯ ಕೇಸರಿ ಬಣ್ಣದ ಶರ್ಟು ತೊಟ್ಟ ಆ ಹುಡುಗಿ ‘ಥ್ಯಾಂಕ್ಸ್’ ಎಂದೆನ್ನುತ್ತ ಇನ್ನೊಂದು ಬದಿಯ ಬಾಗಿಲು ತೆರೆದು ನನ್ನ ಪಕ್ಕ ಕೂತಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.