ಬೆಳಗಿನ ಸುತ್ತಾಟ ಮುಗಿಸಿ ಬರುವಷ್ಟರಲ್ಲಿ ಶಿವರಾಮು ಮೂರು ಸಲ ಕರೆ ಮಾಡಿದ್ದ. ಬೆಳಗಿನ ಸುತ್ತಾಟಕ್ಕೆ ಹೊರಟಾಗ ಮೊಬೈಲ್ ಒಯ್ಯದಿರುವುದು ನನ್ನ ಅಭ್ಯಾಸ. ಮೂರು ಸಲ ಕರೆ ಮಾಡಿದ್ದರಿಂದ ಬೇಗನೇ ನಿತ್ಯ ವಿಧಿಗಳನ್ನು ಮುಗಿಸಿ ಅವನನ್ನು ಸಂಪರ್ಕಿಸಿದೆ.
`ಇವತ್ತೇನಯ್ಯ ಪ್ರೋಗ್ರಾಮು..~ ಆ ಕಡೆಯಿಂದ ಲೋಕಾಭಿರಾಮದ ಪ್ರತಿಕ್ರಿಯೆ ಬಂತು. `ಅಲ್ಲಯ್ಯ.. ಬೆಳಿಗ್ಗೆಯಿಂದ ಮೂರು ಸಲ ಕಾಲ್ ಮಾಡಿದ್ದೆ.

ತುರ್ತು ಇರಬೇಕು ಅಂದುಕೊಂಡೆ. ಈಗ ನೋಡಿದರೆ ಏನೂ ಅರ್ಜೆಂಟು ಇಲ್ಲದವನ ತರ ಪ್ರೊಗ್ರಾಮ್ ಬಗ್ಗೆ ಕೇಳ್ತಾ ಇದೀಯಲ್ಲ..~ ಎಂದು ಅಸಮಾಧಾನ ತೋರಿಸಿದೆ. `ಶಾಂತಿ.. ಶಾಂತಿ.. ನಾನು ಯಾವ ಮನಃಸ್ಥಿತಿಯಲ್ಲಿ ಇದ್ದೀನಿ ಅಂತ ನಿನಗೇ ಗೊತ್ತಿದೆ. ನಿನ್ ಹತ್ರ ತುಂಬ ಅರ್ಜೆಂಟಾಗೇ ಮಾತಾಡೋದಿದೆ. ಆದರೆ, ವಾಕಿಂಗ್ ಹೋದಾಗ ಮೊಬೈಲ್ ಇಟ್ಟುಕೊಳ್ಳಬಾರದೇನಯ್ಯ..?~ ಎಂದು ಚಡಪಡಿಸಿದ.

`ಸಾರಿ ಶಿವು, ಏನು ವಿಷಯ.. ಈಗಲೇ ಹೊರಟು ಬರ್ತೀನಿ~ ಎಂದೆ. `ನೀನು ಬರೋದು ಬೇಡ. ಬೇಗ ರೆಡಿ ಆಗಿರು. ನಾನೇ ಬಂದು ಪಿಕಪ್ ಮಾಡ್ತೇನೆ. ನಿಮ್ಮ ಕ್ಲಬ್ ಕಡೆ ಹೋಗೋಣ. ಅಲ್ಲೇ ಮಾತಾಡೋಣ~ ಎಂದ. `ಆಯ್ತು ಬೇಗ ಬಾ~ ಎಂದು ಸಂಪರ್ಕ ಕಡಿದು ಬೇಗನೆ ಹೊರಡಲು ಸಿದ್ಧತೆ ನಡೆಸಿದೆ.

ನಾನು ನಿರೀಕ್ಷೆ ಮಾಡಿದ್ದಕ್ಕಿಂತಲೂ ಬೇಗನೇ ಬಂದ. ಕಾರಲ್ಲಿಯೇ ಕುಳಿತಿದ್ದವನನ್ನು `ಒಳಗಡೆ ಬಾರಯ್ಯ, ಅರ್ಧ ಕಪ್ ಚಾ ಕುಡಿದು ಹೋಗೋಣ~ ಎಂದೆ. `ಎಲ್ಲ ಮುಗಿಸಿ ಬಂದಿದ್ದೇನೆ. ಈಗ ನನಗೆ ಚಾ ಕುಡಿಯುವ ಹೊತ್ತಲ್ಲ~ ಎಂದು ನಿರಾಕರಿಸಿದ.

ಬೆಳಗಿನ ಹೊತ್ತು. ಕಾಲೇಜಿಗೆ, ಕಚೇರಿಗೆ, ವ್ಯವಹಾರಕ್ಕೆ ಹೋಗುವವರ ಧಾವಂತದ ನಡುವೆ ನಾವು ಬನಶಂಕರಿಯಿಂದ ಕಾರ್ಪೊರೇಷನ್ ವೃತ್ತ ತಲುಪುವ ವೇಳೆಗೆ ಒಂದೂವರೆ ಗಂಟೆ ಹಿಡಿದಿತ್ತು. ಮಾರ್ಗ ಮಧ್ಯೆ ನಡೆಸಿದ್ದೆಲ್ಲ ಲೋಕಾಭಿರಾಮದ ಮಾತು. ಭ್ರಷ್ಟಾಚಾರ, ಬೆಲೆ ಏರಿಕೆ, ಸಂಚಾರ ದಟ್ಟಣೆಯ ಬಗೆಹರಿಯದ ಸಮಸ್ಯೆ, ಮೆಟ್ರೋ ಕಾಮಗಾರಿಯ ಆಮೆ ನಡಿಗೆ ಇತ್ಯಾದಿ ಸಂಗತಿಗಳು ಉಭಯತ್ರರಲ್ಲಿ ಸುಳಿದಾಡಿದವು.

ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್ ಓದುತ್ತಿದ್ದಾಗ ಇದ್ದಾಗ ಜೊತೆಗೂಡಿದ್ದ ಶಿವಮೊಗ್ಗ ಕಡೆಯ ಶಿವರಾಮು ವಿಶ್ವವಿದ್ಯಾಲಯದ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದ ಕ್ರೀಡಾಪಟು. ಒಂದೇ ಬೆಂಚಿನಲ್ಲಿ ಕೂರುತ್ತಿದ್ದ ಸಲಿಗೆ ಇಬ್ಬರಲ್ಲೂ ಏಕವಚನದ ಗೆಳೆತನವನ್ನು ಉಳಿಸಿತ್ತು. ಕ್ರೀಡಾಪಟುವಾಗಿದ್ದ ಅರ್ಹತೆಯ ಮೇಲೆ ಅವನು ಕೇಂದ್ರ ಸರ್ಕಾರದ ಸುಂಕದ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ.

ವೃತ್ತಿಯ ಬಹುಭಾಗವನ್ನು ರಾಜ್ಯದ ಹೊರಗಡೆಯೇ ಕಳೆದಿದ್ದರೂ ನನ್ನ ಸಂಪರ್ಕವನ್ನು ಕಳೆದುಕೊಂಡಿರಲಿಲ್ಲ. ಸಂಪರ್ಕ ವಿಧಾನಗಳು ಪತ್ರಗಳಿಂದ ಇ ಮೇಲ್ ಮತ್ತು ಮೊಬೈಲ್ ತಂತ್ರಜ್ಞಾನಕ್ಕೆ ತಿರುಗಿದ್ದವು. `ಕೇಂದ್ರ ಸರ್ಕಾರದ ನೌಕರಿ ಗಳಿಸಿದ್ದಕ್ಕೆ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಲಿಲ್ಲ ನೋಡು. ಕೇಂದ್ರೀಯ ವಿದ್ಯಾಲಯಗಳಲ್ಲಿ ಓದಿದರು. ಒಳ್ಳೇ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಪಡೆದರು. ಮೆರಿಟ್ನಲ್ಲಿ ಹೊರಗಡೆ ಬಂದರು. ಅವರಿಗೆ ಒಳ್ಳೇ ಕಡೆ ನೌಕರಿಗಳೂ ಸಿಕ್ಕಿವೆ ಕಣಯ್ಯ..~ ಎಂದು ಐದಾರು ವರ್ಷಗಳ ಹಿಂದೆ ಸಿಕ್ಕಿದಾಗ ಹೇಳಿ ಸಂಭ್ರಮಿಸಿದ್ದ.

`ಇನ್ನು ಎರಡು ವರ್ಷದಲ್ಲಿ ನಿವೃತ್ತಿ ಆಗ್ತೇನೆ. ಊರು ಕಡೆ ನನ್ನದೂ ಅಂತ ಏನೂ ಇಲ್ಲ. ಬೆಂಗಳೂರಿನಲ್ಲಿ ಹೆಚ್ಚು ಗಲಾಟೆ ಇಲ್ಲದೆ ಇರೋ ಕಡೆ ಒಂದು ಅಪಾರ್ಟ್ಮೆಂಟ್ ಕೊಂಡುಕೊಳ್ಳೋ ಯೋಚನೆ ಇದೆ~ ಎಂದು ಮೂರು ವರ್ಷಗಳ ಹಿಂದೆ ಸಿಕ್ಕಿದಾಗ ತಿಳಿಸಿದ್ದ. ವರ್ಷದ ಹಿಂದೆ ಸಿಕ್ಕಿದವನು `ನಿಮ್ಮ ಕಡೆನೇ ಒಂದು ಅಪಾರ್ಟ್ಮೆಂಟ್ ಕೊಂಡುಕೊಂಡೆ.

ಮಕ್ಕಳಿಬ್ಬರೂ ಅಮೆರಿಕ ಸೇರಿಬಿಟ್ಟಿದ್ದಾರೆ. ಒಳ್ಳೇ ಕಂಪೆನಿಗಳಂತೆ. ಆರ್ಥಿಕ ಹಿಂಜರಿತ ಇದ್ದರೂ ಇವರ ನೌಕರಿಗೆ ಏನೂ ತೊಂದರೆ ಇಲ್ಲವಂತೆ... ಇನ್ನೇನಯ್ಯ.. ಬೆಳೆದ ಹಕ್ಕಿಗಳು ಗೂಡು ಬಿಟ್ಟು ಹಾರಿ ಹೋದ ಹಾಗೆ. ಅದಕ್ಕೆ ನಾವು ಇಬ್ಬರೇ ವಾಪಸು ಬಂದಿದ್ದೇವೆ, ಹ್ಯಾಗೂ ನಾನು ರಿಟೈರ್ ಆಗಿದ್ದೇನಲ್ಲ~ ಎಂದು ಹೇಳಿದ್ದ.

ನಮ್ಮ ಮನೆಗೆ ಮೂರು ನಾಲ್ಕು ಕಿಲೋಮೀಟರ್ ದೂರದಲ್ಲಿಯೇ ಅವನು ಕೊಂಡಿದ್ದ ಅಪಾರ್ಟ್ಮೆಂಟ್ ಇದ್ದಿದ್ದರಿಂದ ನನ್ನನ್ನು ಆಹ್ವಾನಿಸಿದ್ದ. ನಾನು ಹನ್ನೊಂದು ಗಂಟೆ ಸುಮಾರಿಗೆ ಅಲ್ಲಿಗೆ ಹೋದೆ. ಮೂರು ಕೋಣೆಗಳ ಅನುಕೂಲಕರ ಮನೆ. ಎರಡನೆಯ ಮಹಡಿಯಲ್ಲಿತ್ತು. ಆಗಲೇ ಅವನ ಹೆಂಡತಿಯನ್ನು ನೋಡಿದ್ದು. ಗಂಡ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡ ಸಂತೃಪ್ತಭಾವ ಅವರ ಮುಖದಲ್ಲಿದ್ದಂತೆ ತೋರಿತ್ತು.

ಅಡುಗೆ ಕೆಲಸಕ್ಕೆ ನಡುವಯಸ್ಸಿನ ಸಹಾಯಕಿಯೂ ಒಬ್ಬಳಿದ್ದಳು. ಮಧ್ಯಾಹ್ನದ ಊಟಕ್ಕೆ ಕೋಳಿ ತರಿಸಿದ್ದರು. `ವಿಶಾಖಪಟ್ಟಣದಲ್ಲಿ ಮೂರು ವರ್ಷ ಇದ್ದೆವಲ್ಲ, ಆಂಧ್ರ ಸ್ಟೈಲ್ನಲ್ಲಿ ಕೋಳಿ ಫ್ರೈ ಮಾಡ್ತೀನಿ~ ಎಂದು ಆಕೆ ಹೇಳಿದ್ದರು. ಬೆಂಗಳೂರಿನ ಆಂಧ್ರ ಮಾದರಿ ಹೋಟಲುಗಳಲ್ಲಿ ಯಮಖಾರದ ಕೋಳಿಯ ರುಚಿ ನೋಡಿದ್ದವನು `ದಯವಿಟ್ಟು ನಿಮ್ಮೂರಿನ ಮಾದರಿಯನ್ನು ಮಾಡಿ..

ನನಗೆ ಖಾರ ತಿನ್ನಬಾರದು ಅಂತ ಡಾಕ್ಟರು ಹೇಳಿದ್ದಾರೆ..~ ಎಂದು ಗಾಬರಿಯನ್ನು ಪ್ರದರ್ಶಿಸಿದ್ದೆ. `ಇಲ್ಲ ಇಲ್ಲ, ಅಷ್ಟೊಂದು ಖಾರ ಇರಲ್ಲ. ನಾನು ಬೇರೇ ತರನೇ ಮಾಡ್ತೀನಿ.. ನೋಡ್ತಿರಿ~ ಎಂದು ಆಕೆ ನಗುತ್ತಾ ಹೇಳಿದ್ದರು. ಅವರು ಅಡಿಗೆ ಮನೆಯ ಕಡೆ ತಿರುಗಿದಾಗ ಇವನು ಮಕ್ಕಳಿಬ್ಬರ ಮದುವೆ ಆಲ್ಬಂಗಳನ್ನು ಹೊರಕ್ಕೆ ತೆಗೆದ. ಜೊತೆಗೆ ಫ್ರಿಜ್ನಿಂದ ಎರಡು ಚಿಲ್ಡ್ ಬಿಯರ್ ಬಾಟಲುಗಳನ್ನು ಹೊರತೆಗೆದು ಅಂದಿನ ಊಟವನ್ನು ರಸವತ್ತಾಗಿಸಿದ್ದ.

ಆ ನಂತರ ಆಗಾಗ ಮೊಬೈಲ್ನಲ್ಲಿ ಸಂಪರ್ಕಿಸುತ್ತಿದ್ದ. ಅದೂ ಇದೂ ಲೋಕಾಭಿರಾಮದ ಮಾತು. `ಅಮೆರಿಕದಲ್ಲಿರುವ ಮಕ್ಕಳು ಕರೀತಾ ಇದ್ದಾರಯ್ಯ, ನಾನು ಇನ್ನೂ ಪಾಸ್ಪೋರ್ಟ್ ಮಾಡಿಸಿಲ್ಲ ಅಂದರೆ ನೀನು ನಂಬಬೇಕು. ಯಾಕೋ ನನಗೆ ಈ ಪ್ರವಾಸ ಅಂದರೆ ಆಗ್ತಾ ಇಲ್ಲ. ಸರ್ವಿಸ್ನಲ್ಲಿ ಇದ್ದಾಗ ನಾಯೀ ತರ ಅಲೆದಿದ್ದೀನಿ, ಅದಕ್ಕೇ ಇರಬೇಕೇನೋ..~ ಎಂದು ಒಮ್ಮೆ ಹೇಳಿದ್ದ.

`ಮಾಡಿಸಯ್ಯ, ಮಕ್ಕಳು ಕರೀತಾ ಇರೋದರಿಂದ ಒಂದು ಸಲ ಹೋಗಿ ಬನ್ನಿ.. ಎಷ್ಟೋ ಜನ ಪಾಸ್ಪೋರ್ಟ್ ಮಾಡಿಸಿಕೊಂಡು ಇರ್ತಾರೆ. ತಮ್ಮನ್ನು ಮಕ್ಕಳು ಕರೀತಾ ಇಲ್ವಲ್ಲ ಅಂತ ಪೇಚಾಡ್ತಾ ಇರ್ತಾರೆ. ನೀನು ಅದೃಷ್ಟವಂತ. ಮೊದಲು ಪಾಸ್ಪೋರ್ಟ್ ಮಾಡಿಸು. ಅವರು ಕರೆದಾಗ ಹೋಗದೇ ಇದ್ರೆ ಮುಂದೆ ಅವರು ಕರೀದೇನೇ ಹೋಗಬಹುದು..~ ಎಂದೇನೋ ನಾನು ಹೇಳಿದ್ದೆ.

ಮೂರು ತಿಂಗಳ ಹಿಂದೆ ಬೆಳಗಿನ ಐದು ಗಂಟೆ ಸುಮಾರಿಗೆ ಅವನಿಂದ ತುರ್ತು ಕರೆ ಬಂತು. `ಏನೂ ಅಂತ ತೋಚ್ತಾ ಇಲ್ಲ. ನನ್ನ ಹೆಂಡ್ತಿ ಉಸಿರಾಡ್ತಾ ಇಲ್ಲ. ಸತ್ತು ಹೋಗಿರಬಹುದು ಅಂತ ಅನ್ನಿಸುತ್ತೆ, ಬೇಗ ಬರ್ತೀಯಾ..?~ ಎಂದು ಹೇಳಿ ಸಂಪರ್ಕ ಸ್ತಬ್ದಗೊಳಿಸಿದ್ದ. ಗಡಿಬಿಡಿಯಿಂದ ಎದ್ದು ಸ್ಕೂಟರ್ನಲ್ಲಿ ಅಲ್ಲಿಗೆ ಹೋದೆ. ದಿಕ್ಕು ತೋಚದಂತೆ ಕುಳಿತಿದ್ದ. ನಾನು ಹೋಗುತ್ತಲೂ ಧೈರ್ಯ ತೆಗೆದುಕೊಂಡ.

`ರಾತ್ರಿ ಚೆನ್ನಾಗಿಯೇ ಇದ್ದರು. ವಾಡಿಕೆಯಂತೆ ಒಂಬತ್ತೂವರೆಗೆಲ್ಲ ಊಟ ಮುಗಿಸಿ ಹತ್ತು ಗಂಟೆಯ ಟೀವಿ ಕಾರ್ಯಕ್ರಮ ನೋಡಿ ಮಲಗಲು ಬಂದರು. ಎದೆ ನೋವು ಅದೂ ಇದೂ ಅಂತ ಏನೂ ಹೇಳಲಿಲ್ಲ. ಬೆಳಗಿನ ಜಾವ ಎಚ್ಚರವಾಗಿ ಮೈ ಮೇಲೆ ಕೈ ಹಾಕಿದರೆ ತಣ್ಣಗೆ ಅನಿಸಿತು. ತಕ್ಷಣ ಗಾಬರಿಯಾಗಿ ಎದ್ದು ನೋಡಿದರೆ ಉಸಿರೇ ನಿಂತು ಹೋಗಿತ್ತು..~ ಎಂದು ಹೇಳುತ್ತಿದ್ದಾಗ ಅವನ ಧ್ವನಿ ನಡುಗುತ್ತಿತ್ತು. ಹೃದಯ ಸ್ಥಂಭನ ಆಗಿರಬೇಕು ಎನಿಸಿತು.

ಅಡುಗೆ ಸಹಾಯಕಿಯ ನೆರವಿನಿಂದ ಅವರನ್ನು ಕಾರಲ್ಲಿ ಹಾಕಿಕೊಂಡು ಮುಖ್ಯ ರಸ್ತೆಯಲ್ಲಿನ ಖಾಸಗಿ ಆಸ್ಪತ್ರೆಗೆ ತಂದೆವು. `ತರುವಾಗಲೇ ಜೀವ ಹೋಗಿತ್ತು~ ಎಂಬರ್ಥದ ಪತ್ರವನ್ನು ಆಸ್ಪತ್ರೆಯಿಂದ ತಂದು ಮನೆಯತ್ತ ಕಾರು ತಿರುಗಿಸಿದೆವು. ಹತ್ತಿರದ ಸಂಬಂಧಿಗಳ ನಂಬರ್ ಇದ್ದ ಚಿಕ್ಕ ಪುಸ್ತಕವೊಂದನ್ನು ನೀಡಿದ. ನನ್ನ ಮೊಬೈಲ್ನಲ್ಲಿ ಕೆಲವರಿಗೆ ಮಾಹಿತಿ ತಿಳಿಸಿದೆ. ಅವನ ಹೆಂಡತಿ ಮಂಡ್ಯ ಕಡೆಯವರು. ಅವರ ಸಂಬಂಧಿಕರಿಗೂ ತಿಳಿಸಿಯಾಯಿತು.

ಮಕ್ಕಳಿಬ್ಬರನ್ನೂ ಸಂಪರ್ಕಿಸಲಾಯಿತು. ಅವರಿಬ್ಬರೂ ತಮ್ಮ ತಮ್ಮ ಕಂಪೆನಿಗಳ ಕೆಲಸದಲ್ಲಿ ಯೂರೋಪ್ ಪ್ರವಾಸದಲ್ಲಿದ್ದಾರೆಂದು ತಿಳಿಯಿತು. ಅವರಿಂದ ಏನಾದರೂ ಸುದ್ದಿ ಬರಲೆಂದು ಮಧ್ಯಾಹ್ನದವರೆಗೆ ಕಾಯುತ್ತಿದ್ದಾಗ ಇವನಿಗೆ ಮಕ್ಕಳಿಂದ ದೂರವಾಣಿ ಕರೆ ಬಂತು. `ಸಾರಿ, ಡ್ಯಾಡ್.. ನಾವು ತಕ್ಷಣ ಹೊರಟರೂ 24 ಗಂಟೆ ಒಳಗೆ ತಲುಪಲು ಸಾಧ್ಯವಿಲ್ಲ. ಬಿ ಪ್ರ್ಯಾಕ್ಟಿಕಲ್.. ಮುಂದಿನ ಕೆಲಸ ಮಾಡಿಬಿಡಿ~. ಅದೇ ದಿನ ಸಂಜೆ ವೇಳೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ಮಾರನೇ ದಿನ ಕೂಡ ನಾನು ಅವನ ಅಪಾರ್ಟ್ಮೆಂಟ್ಗೆ ಭೇಟಿ ಕೊಟ್ಟಿದ್ದೆ. ಅವನ ಸಂಬಂಧಿಕರೆಲ್ಲ ನೆರೆದಿದ್ದರು. ಸ್ವಲ್ಪ ಹೊತ್ತು ಇದ್ದು ನನ್ನ ಅವಶ್ಯಕತೆ ಬೀಳಲಾರದೆಂದು ವಾಪಸಾಗಿದ್ದೆ. ಮರುದಿನ ಅವನೇ ಸಂಪರ್ಕಿಸಿ ಇಬ್ಬರೂ ಮಕ್ಕಳು ಬಂದಿರುವ ವಿಷಯ ತಿಳಿಸಿದ್ದ. ಐದನೇ ದಿನಕ್ಕೆ ಹಾಲುತುಪ್ಪ ಇದೆ ಎಂದು ಅವನು ಹೇಳಿದ. ಅವೆಲ್ಲ ಹತ್ತಿರದ ಬಂಧುಗಳು ಪಾಲ್ಗೊಳ್ಳುವ ಕ್ರಿಯೆಗಳೆಂದು ಸುಮ್ಮನಾದೆ.

ಮುಂದಿನ ಎರಡು ಮೂರು ವಾರ ಕಳೆದರೂ ಆತನಿಂದ ಕರೆ ಬರಲಿಲ್ಲ. ನಾನೂ ಸಂಪರ್ಕಿಸಲು ಹೋಗಲಿಲ್ಲ. ನಿವೃತ್ತಿ ನಂತರದ ಬದುಕನ್ನು ರೂಪಿಸಿಕೊಳ್ಳಲು ಬಂದವನು ಹೀಗೆ ಒಂಟಿಯಾಗಿ ಬಿಟ್ಟನಲ್ಲ ಎನಿಸಿತ್ತು. ನೌಕರಿಯಲ್ಲಿದ್ದಾಗ ನೂರಾರು ಜನರನ್ನು ನೋಡಿದ್ದವನು. ಹಣಕಾಸಿನ ತೊಂದರೆಯೇನೂ ಇಲ್ಲ. ಚೇತರಿಸಿಕೊಳ್ಳುತ್ತಾನೆ ಎಂದುಕೊಂಡೆ. ನನ್ನ ಕೆಲಸಗಳಲ್ಲಿ ತೊಡಗಿಕೊಂಡೆ.

ಕಾರು ಕಾರ್ಪೊರೇಷನ್ ಎದುರು ಸಾಗುತ್ತಿದ್ದಾಗ ಅವನು `ಕಬ್ಬನ್ ಪಾರ್ಕ್ ಒಳಗಡೆಯಿಂದ ಹೋಗಬಹುದೇನಯ್ಯ?~ ಎಂದ. `ಏನೋ ಗೊತ್ತಿಲ್ಲ. ಮೆಟ್ರೋ ಕಾಮಗಾರಿ ಬೇರೆ ನಡೀತಿದೆಯಲ್ಲ. ಎಲ್ಲೆಲ್ಲಿ ಸಂಚಾರ ನಿಲ್ಲಿಸಿದ್ದಾರೋ, ಎಲ್ಲೆಲ್ಲಿ ತಿರುಗಿಸಿದ್ದಾರೋ ಗೊತ್ತಿಲ್ಲ. ನಾನೂ ಈ ಕಡೆ ಬರದೆ ತುಂಬ ದಿನವೇ ಆದವು~ ಎಂದೆ. `ಮುಂದೆ ಎಲ್ಲಾದರೂ ಸಂಚಾರಕ್ಕೆ ನಿಷೇಧ ಹಾಕಿದ್ದರೆ ವಾಪಸು ಬರೋಣ.

ಆದರೆ, ಅಲ್ಲಿ ಎಲ್ಲಾದರೂ ನಿಲ್ಲಿಸಿಕೊಂಡು ಇರಬಹುದಲ್ಲವಾ~ ಎಂದ. ಅವನು ತುರ್ತಾಗಿ ಮಾತಾಡುವುದಿದೆ ಎಂದೇ ಕರೆದುಕೊಂಡು ಬಂದಿದ್ದರಿಂದ ಪಾರ್ಕಿನ ಒಳಗಡೆಯೇ ಕಾರಲ್ಲಿ ಕುಳಿತು ಮಾತಾಡಬಹುದು ಎನ್ನಿಸಿತು. `ಸರಿ ಹಾಗೆಯೇ ಪಾರ್ಕ್ ಒಳಗಡೆಯೇ ಹೋಗೋಣ~ ಎಂದೆ.

ಸಾರ್ವಜನಿಕ ಗ್ರಂಥಾಲಯದ ಎದುರು ಇದ್ದ ಜಾಗದಲ್ಲಿ ಕಾರು ನಿಲ್ಲಿಸಿದ. ಮಕ್ಕಳಿಬ್ಬರು ಬಂದ ಮೇಲೆ ಏನೇನಾಯಿತು ಎಂಬುದೇನೂ ನನಗೆ ಗೊತ್ತಿರಲಿಲ್ಲ. ಇವನು ಪತ್ನಿ ವಿಯೋಗದ ಆಘಾತದಿಂದ ಹೊರಬಂದಿರುವಂತೆ ತೋರುತ್ತಿತ್ತು. ಆದರೂ ಅವನಾಗಿಯೇ ಬಾಯಿ ಬಿಡಲಿ ಎಂದು ಸುಮ್ಮನೆ ಕುಳಿತೆ.

`ನಿಮ್ಮ ಕ್ಲಬ್ನಲ್ಲಿ ನನಗೂ ಸದಸ್ಯತ್ವ ಸಿಗುತ್ತೇನೋ.. ಸುಮ್ಮನೆ ಹೊತ್ತು ಕಳೆಯುವುದಕ್ಕೆ..~ ಮಾತನ್ನು ಆರಂಭಿಸಿದ. ಅದು ಸುಮ್ಮನೆ ಆಡಿದ ಮಾತು ಎಂದು ಗೊತ್ತಾದರೂ `ಅದು ವೃತ್ತಿಪರರಿಗೆ ಅಂತ ಮಾಡಿರೋ ಕ್ಲಬ್ಬು. ವೃತ್ತಿಗೆ ಸಂಬಂಧಪಟ್ಟವರಿಗೆ ಮಾತ್ರ ಸದಸ್ಯತ್ವ ಅಂತ ಇದೆ. ಆದರೆ, ನಿನಗೆ ಹೋಗಬೇಕೂ ಅಂದಾಗ ನಾನು- ಅದರ ಆಜೀವ ಸದಸ್ಯ- ಇದ್ದೀನಲ್ಲ. ನಾನು ನಿತ್ಯ ಮೂವರು ಅತಿಥಿಗಳನ್ನು ಕ್ಲಬ್ಬಿಗೆ ಕರೆದೊಯ್ಯಬಹುದು~ ಅಂದೆ. ಅವನು ವಿಷಯಕ್ಕೆ ಬರಲು ತಡವರಿಸುತ್ತಿರುವುದು ಸ್ಪಷ್ಟವಿತ್ತು. ಆದರೂ ಅವನೇ ಮುಂದುವರಿಸಲೆಂದು ಸುಮ್ಮನಾದೆ.

`ಒಂಟಿಯಾಗಿರೋದು ತುಂಬ ಕಷ್ಟ ಕಣೋ..~ ಇದು ಪೀಠಿಕೆ ಇರಬಹುದು ಅನ್ನಿಸಿತು. ನನಗೂ ಅದರ ಅನುಭವ ಆಗುತ್ತಾ ಇರುವುದರಿಂದ `ಹೌದು ಮಾರಾಯ, ನಾನೇ ಈಗ ಅನುಭವಿಸ್ತಾ ಇದೀನಲ್ಲ. ಸರ್ವಿಸ್ನಲ್ಲಿ ಇದ್ದಾಗ ಕಚೇರಿ ಕೆಲಸ, ಟಾರ್ಗೆಟ್ಟು, ವಾರ್ಷಿಕ ಪ್ರಗತಿ ಅಂತ ಅದೇ ತಲೆಯಲ್ಲಿ ತುಂಬಿಕೊಂಡಿರೋದು.

ಈಗ ನಿವೃತ್ತಿ ಆಗಿದೀನಲ್ಲ. ಎಲ್ಲ ಖಾಲಿ ಖಾಲಿ. ಓದೋ ಅಭ್ಯಾಸ ಇದೆ ಹೌದು. ಆದರೆ ಎಷ್ಟು ಅಂತ ಓದ್ತಾ ಇರೋದು? ಒಂದು ಪರೀಕ್ಷೆಗೆ ಸಿದ್ಧತೆ ಮಾಡೋದಲ್ಲ, ಒಂದು ಲೇಖನ ಬರೆಯುವುದಕ್ಕಲ್ಲ. ಒಂದು ನಿರ್ದಿಷ್ಟ ಗುರಿ ಅಂತ ಇಟ್ಟುಕೊಳ್ಳದೆ ಇದ್ದರೆ ನಿವೃತ್ತ ಜೀವನ ಕೂಡ ಬೇಜಾರಾಗಿ ಬಿಡುತ್ತೆ. ಅದರಲ್ಲೂ ನಿನಗೆ ಈಗ ಈ ವಯಸ್ಸಲ್ಲಿ ಬದುಕಲ್ಲೂ ಒಂಟಿಯಾಗಿರುವ ಸ್ಥಿತಿ. ನನಗೆ ನಿಜಕ್ಕೂ ನಿನ್ನ ಬಗ್ಗೆ ವ್ಯಥೆ ಆಗ್ತಿದೆ...~ ಎಂದೆ.

`ನನಗೆ ಇಂಥ ಪರಿಸ್ಥಿತಿ ಬರುತ್ತೆ ಅಂತ ಯಾವತ್ತೂ ಅಂದ್ಕೊಂಡಿರಲಿಲ್ಲ. ನನ್ನ ಮಿಸೆಸ್ಸಿಗೆ ಹೆಚ್ಚು ವಿದ್ಯೆ ಇರಲಿಲ್ಲ. ಆದರೆ, ಮನೆಯನ್ನು ಎಷ್ಟು ಚೆನ್ನಾಗಿ ನಿರ್ವಹಿಸ್ತಾ ಇದ್ಲು ಅಂದರೆ ಈಗ ನನಗೆ ಅರ್ಥ ಆಗ್ತಾ ಇದೆ. ಅವಳಿದ್ದಾಗ ಅವಳ ಮಹತ್ವ ಏನೂ ಅಂತ ಅರ್ಥವಾಗಿರಲಿಲ್ಲ. ಅವಳಿಗೆ ಯಾಕೆ ಹಾಗೆ ಸಡನ್ನಾಗಿ ಆಯ್ತು ಅನ್ನೋದು ನನಗೆ ಈವರೆಗೂ ಅರ್ಥ ಆಗ್ತಿಲ್ಲ... ಮಕ್ಕಳು ಬಂದಿದ್ರಲ್ಲ, `ಏನ್ರೋ ಮಾಡೋದು ಈಗ~ ಅಂತ ಕೇಳಿದೆ.

`ನಮ್ಮಟ್ಟಿಗೆ ಬಂದು ಬಿಡಿ, ಕೆಲವು ದಿನ ಸ್ಥಳ ಬದಲಾವಣೆ ಆಗುತ್ತೆ~ ಅಂತ ಅಂದ್ರು. ಸ್ವಲ್ಪ ದಿನ ಅಲ್ಲಿಗೆ ಹೋಗಿ ಇರಬಹುದು. ಅಲ್ಲಿ ಅವರು, ಅವರ ಹೆಂಡತಿ-ಮಕ್ಕಳು, ಕೆಲಸ ಅಂತ ಅವರು ಮುಳುಗಿದ್ದರೆ ಅಲ್ಲಿ ಕೂಡ ನಾನು ಒಂಟಿ ತಾನೇ.. ಅದಕ್ಕೆ `ಸ್ವಲ್ಪ ದಿನ ಅಭ್ಯಾಸ ಮಾಡ್ಕೊಳ್ತೀನಿ~ ಅಂತ ಹೇಳಿ ಅವರನ್ನು ಕಳಿಸಿಬಿಟ್ಟೆ. ನನ್ನ ಪಾಸ್ಪೋರ್ಟ್ ಬೇರೆ ಆಗಿರಲಿಲ್ಲ..~ ಎಂದು ಮುಂದೆ ಹೇಳಲಾಗದೆ ನಿಲ್ಲಿಸಿದ.

`ಪಾಸ್ಪೋರ್ಟಿಗೆ ಇಬ್ಬರೂ ಅರ್ಜಿ ಸಲ್ಲಿಸಿದ್ದಿರಲ್ಲವಾ..?~ ಅವನು ಚೇತರಿಸಿಕೊಳ್ಳಲು ಅವಕಾಶವಾಗುವಂತೆ ವಿಷಯ ಬದಲಿಸಿದೆ. `ಕೊಟ್ಟಿದ್ದೆವಲ್ಲ, ನಿನ್ನನ್ನು ಕೇಳಿ ಅಡ್ರೆಸ್ ತಗೊಂಡಿದ್ದೆನಲ್ಲ. ಅವಳು ಸಾಯುವ ಹಿಂದಿನ ದಿನ ಪೊಲೀಸ್ ಸ್ಟೇಷನ್ನಿಂದ ಫೋನು ಬಂದಿತ್ತು. ನಾವು ಮಾರನೇ ದಿನ ಸ್ಟೇಷನ್ನಿಗೆ ಹೋಗಬೇಕು ಅಂತ ಮಾತಾಡಿಕೊಂಡಿದ್ದೆವು..~ ಎಂದು ಮತ್ತೆ ನಿಲ್ಲಿಸಿದ.

`ಹಾಗಾದರೆ ಇನ್ನೂ ನೀನು ಪೊಲೀಸ್ ಸ್ಟೇಷನ್ನಿಗೆ ಹೋಗಿಲ್ಲ..?~ ಕೆಲಸ ಮತ್ತೆ ಅರ್ಧಕ್ಕೆ ನಿಂತಿದೆಯಲ್ಲ ಎಂಬ ಆತಂಕದಿಂದ ಕೇಳಿದೆ. `ಇಲ್ಲ. ಹೋದವಾರ ಹೋಗಿ ಹೇಳಿಕೆ ಕೊಟ್ಟು ಬಂದೆ. ಅದು ಇನ್ನು ಎರಡು ಮೂರು ವಾರಗಳಲ್ಲಿ ಬರಬಹುದು ಅಂದರು.. ಈಗೆಲ್ಲ ಬೇಗ ವಿಲೇವಾರಿ ಆಗುವಂತೆ ವ್ಯವಸ್ಥೆ ಮಾಡಿದ್ದಾರಂತಲ್ಲ~ ಅಂದ.

`ಪಾಸ್ಪೋರ್ಟ್ ಬಂದ ಮೇಲೆ ಒಂದು ಸಲ ಮಕ್ಕಳಲ್ಲಿ ಹೋಗಿ ಬಾ. ಬದಲಾವಣೆ ಅಂತ ಆಗುತ್ತೆ. ಹೊಸ ದೇಶ, ಹೊಸ ಜನ ನೋಡಿ ಉತ್ಸಾಹವೂ ಬರಬಹುದು~ ಎಂದೆ.
`ನಾನು ಮೊದಲೇ ಹೇಳಿದ್ದೆನಲ್ಲ. ನನಗೆ ಪ್ರವಾಸ ಅಂದರೆ ಅಷ್ಟಕ್ಕಷ್ಟೆ ಅಂತ. ಎಲ್ಲಿಗೂ ಹೋಗೋದು ಬೇಡ ಅನ್ನಿಸಿದೆ. ಎಲ್ಲ ಕ್ರಿಯಾ ಕರ್ಮ ಮುಗಿದ ಮೇಲೆ ನಮ್ಮತ್ತೆ ಉಳಿದುಕೊಂಡಿದ್ದರು.

ನಮ್ಮಲ್ಲಿ ಅಡುಗೆಗೆ ಸಹಾಯಕ್ಕೆ ಅಂತ ಇದಾಳಲ್ಲ, `ಅವಳನ್ನು ಕಳಿಸಿ ಬಿಡಿ~ ಅಂತ ಹೇಳಿದರು. `ನನ್ನ ಮಿಸೆಸ್ ಇದ್ದಾಗ ಇವಳೇ ಅಡುಗೆ ಕೆಲಸ ಮಾಡ್ತಾ ಇದ್ದದ್ದು. ಈಗ ಮಿಸೆಸ್ ಇಲ್ಲದೇ ಇರೋವಾಗ ಇವಳನ್ನೂ ಕಳಿಸಿದರೆ ನಾನೇನು ಮಾಡಲಿ~ ಅಂದೆ. `ಅದೂ ಸರಿಯೇ~ ಅಂದರು..~ ಎಂದು ಯಾವುದೋ ವಿಷಯವನ್ನು ವಿಸ್ತರಿಸುವ ಧಾಟಿಯಲ್ಲಿ ಹೇಳಿ ನಿಲ್ಲಿಸಿದ.

`ನಿನ್ನ ಅತ್ತೆ ಅಂದರೆ, ನಿಮ್ಮ ಹೆಂಡತಿಯ ತಾಯಿ ಅಲ್ಲವಾ, ಅವರ ಊರು ಯಾವುದು? ನಾನು ಅವತ್ತು ಬಂದಾಗ ನಿನ್ನ ಹೆಂಡತಿ ಯಾವ ಕಡೆಯವರು ಅಂತ ಕೇಳಲೇ ಇಲ್ಲ. ಬರೀ ಚಿಲ್ಡ್ ಬಿಯರ್ ಹೀರುವುದರಲ್ಲಿ ಹೊತ್ತು ಕಳೀತು..~ ಎಂದೆ ಮಾತಿಗೆ ಲಘುತ್ವ ತರುವುದಕ್ಕೆ.
`ಅವರು ಮಂಡ್ಯದ ಕಡೆಯವರು. ಅವರದು ದೊಡ್ಡ ಕುಟುಂಬವಂತೆ. ನಮ್ಮ ಅತ್ತೆ ಅವರ ಅಕ್ಕನ ಮಗಳೊಬ್ಬಳು..~ ಎಂದು ಅಲ್ಲಿಗೆ ನಿಲ್ಲಿಸಿ, `ಅವತ್ತು ತಗೊಂಡಿದ್ದೇ ಕೊನೆ ಕಣೊ. ಮತ್ತೆ ಬಿಯರ್ ತಗೊಳ್ಳೋದಕ್ಕೆ ಅವಕಾಶವೇ ಬರಲಿಲ್ಲ~ ಎಂದ.

`ಇವತ್ತು ತಗೊಳ್ಳುವಂತೆ ನಮ್ಮ ಕ್ಲಬ್ಬಿನಲ್ಲಿ...~ ಎಂದೆ. ಮತ್ತೆ ಮುಂದುವರಿಸಿ, `ಅದೇನೋ ಅಭ್ಯಾಸ ಮಾಡಿಕೊಳ್ಳಬೇಕು ಅಂದ್ಯಲ್ಲ. ನಾನು ಕೆಲಸದಲ್ಲಿದ್ದಾಗ ನಿವೃತ್ತಿ ಆಗ್ತಿದ್ದ ನನ್ನ ಸಹೋದ್ಯೋಗಿಗಳಿಗೆ `ಏನಾದರೂ ಹವ್ಯಾಸ ಬೆಳೆಸಿಕೊಳ್ಳಿ, ಯಾವುದಾದರೂ ಸಂಘ ಸಂಸ್ಥೆಗಳೊಂದಿಗೆ ಸೇರಿಕೊಂಡು ಸೇವೆ ಸಲ್ಲಿಸಿ~ ಅಂತೆಲ್ಲ ಉಪದೇಶ ಕೊಡ್ತಾ ಇದ್ದೆ.

ಅದೆಲ್ಲ ಎಷ್ಟು ಕಷ್ಟ ಅಂತ ನನಗೆ ಈಗ ಅರ್ಥ ಆಗ್ತಾ ಇದೆ. ಹವ್ಯಾಸ ಕಲಿಯುವುದಕ್ಕೆ ವಯಸ್ಸು ಸಹಕಾರ ನೀಡೋದಿಲ್ಲ. ಸಂಘ ಸಂಸ್ಥೆಗಳಲ್ಲಿ ಪರಿಚಾರಕರಾಗಿ ಕೆಲಸ ಮಾಡೋದಕ್ಕೆ ಹೋದರೆ, ಮೊದಲೇ ಅಲ್ಲಿ ಸೆಟ್ಲ್ ಆಗಿರೋ ಪಟ್ಟಭದ್ರರು ನಿಮ್ಮನ್ನು ಹತ್ರಕ್ಕೂ ಸೇರಿಸಿಕೊಳ್ಳೋದಿಲ್ಲ.. ನಿಮ್ಮ ಪ್ರಾಮಾಣಿಕತೆಯನ್ನು ಅನುಮಾನಿಸ್ತಾರೆ. ಸರಿಯಾಗಿ ಯೋಜನೆ ಹಾಕಿಕೊಳ್ಳದೆ ಇದ್ದರೆ ನಿಮಗೆ ಲಕ್ಷಗಟ್ಟಲೆ ಹಣ ಬ್ಯಾಂಕಲ್ಲಿ ಇದ್ದರೂ ನಿವೃತ್ತಿ ಜೀವನ, ಮಾಡುವುದಕ್ಕೆ ಯಾವ ಕೆಲಸವೂ ಇಲ್ಲದೆ ನರಕ ಆಗಬಹುದು..~ ಎಂದೆ.

`ಅದರಲ್ಲೂ ಹೆಂಡತಿ ಇಲ್ಲದಿದ್ದರೆ ಇನ್ನೂ ನರಕ ಆಗಿ ಬಿಡುತ್ತೆ. ನಾನು ಹಗಲು ಹೊತ್ತು ಧೈರ್ಯದಿಂದ ಇರುವಂತೆ ಎಷ್ಟೇ ಮುಖವಾಡ ಹಾಕಿಕೊಂಡರೂ ರಾತ್ರಿ ಮಲಗಿದಾಗ ಪಕ್ಕದಲ್ಲಿನ ಖಾಲಿ ಜಾಗ ಬದುಕಿನ ಶೂನ್ಯತೆಯನ್ನೇ ತೆರೆದುಬಿಡುತ್ತೆ. ಹೆಂಡತಿ ಪಕ್ಕದಲ್ಲಿ ಮಲಗುವುದೆಂದರೆ ಸೆಕ್ಸು ಅಂತ ಅಲ್ಲ. ಹಾಗೆ ದಿನವೂ ಸೆಕ್ಸು ಸಾಧ್ಯವೂ ಇಲ್ಲ. ಆದರೆ ಪಕ್ಕದಲ್ಲಿರೋ ಖಾಲಿ ಜಾಗ ಸದಾ ಖಾಲಿಯೇ ಇರುತ್ತೆ ಅನ್ನುವ ಭಾವದಿಂದ ಜೀವನವೇ ಖಾಲಿ ಖಾಲಿ ಅನ್ನಿಸಿಬಿಡುತ್ತೆ.

ಅದನ್ನು ನಾನು ಈ ಎರಡು ತಿಂಗಳಲ್ಲಿ ಅನುಭವಿಸಿಬಿಟ್ಟಿದೀನಿ..~ ಎಂದು ನನ್ನ ಮಾತನ್ನು ಮುಂದುವರಿಸಿ ನಿಲ್ಲಿಸಿದ.ಅದಕ್ಕೆ ಪ್ರತಿಕ್ರಿಯಿಸಲು ಹೋಗಲಿಲ್ಲ. ಅವನೂ ಸ್ವಲ್ಪ ಹೊತ್ತು ಸುಮ್ಮನಾದ. ಅವನು ನನ್ನಲ್ಲಿ ಮಾತನಾಡಬೇಕು ಎಂದಿದ್ದ ವಿಷಯಕ್ಕೆ ಇನ್ನೂ ಬಂದಿಲ್ಲ ಎನ್ನಿಸಿತು. ಅವನಿಗೆ ಒತ್ತಾಸೆಯಾಗಬಹುದೇನೋ ಅನ್ನಿಸಿ `ನಿನ್ನ ಮಕ್ಕಳು ಇಂಡಿಯಾಕ್ಕೆ ಸದ್ಯಕ್ಕೆ ಬರೋ ಸೂಚನೆ ಇಲ್ಲವಾ? ಇದ್ದರೆ ಅವರ ಜೊತೆ ಇದ್ದುಕೊಂಡು ಮೊಮ್ಮಕ್ಕಳನ್ನು ಆಡಿಸ್ತಾ ಇರಬಹುದಲ್ಲವಾ? ಅವರಿಗೂ ಮನೆಯಲ್ಲಿ ಹಿರೀಕನೊಬ್ಬ ಇದ್ದ ಹಾಗೆ ಆಗ್ತದಲ್ಲ~ ಅಂದೆ.

`ಇಲ್ಲ, ಅದನ್ನೂ ಕೇಳಿ ನೋಡಿದೆ. ಇನ್ನೂ ಹತ್ತು ವರ್ಷ ಆ ಚಾನ್ಸೇ ಇಲ್ಲ ಅಂದರು ಇಬ್ಬರೂ~ ಎಂದ ಹತಾಶೆಯಿಂದ ಕೈ ಚೆಲ್ಲಿದವನಂತೆ.`ಅಂದರೆ.., ನಿನ್ನ ಪಾಡನ್ನು ನೀನೇ ನೋಡ್ಕಬೇಕು ಅಂದಹಾಗೆ ಆಯಿತು. ನಿನ್ನ ಒಂಟಿತನ ನಿವಾರಣೆಗೆ ಮಕ್ಕಳು ಏನಾದರೂ ಪರಿಹಾರ ಸೂಚಿಸಿದರಾ? ನಿನ್ನ ಸೊಸೆ ಒಬ್ಬಳು ಎಂಬಿಎ ಗ್ರಾಜ್ಯುಯೇಟ್ ಅಂತ ನಿಮ್ಮ ಮನೆಗೆ ಬಂದಿದ್ದಾಗ ಹೇಳಿದ್ದೆಯಲ್ಲ~ ಎಂದೆ.

`ಅವರೇನು ಹೇಳ್ತಾರೆ. ಒಬ್ಬ `ಧ್ಯಾನ -ಯೋಗ ಮಾಡು~ ಅಂದ. ಇನ್ನೊಬ್ಬ `ಯಾವುದಾದರೂ ಹೈಟೆಕ್ ಆಶ್ರಮ ಸೇರ್ಕ. ಎಲ್ಲ ಸೌಲಭ್ಯವೂ ಇರುತ್ತೆ. ಒಂಟಿತನವೂ ಹೋಗುತ್ತೆ~ ಅಂದ. ಅವರ ಮಾತು ಕೇಳಿದರೆ ಆಯ್ತು. ಇನ್ನು ಸೊಸೆಯರು. `ಸದ್ಯ ಪೀಡೆ ಹೇಗಾದರೂ ತೊಲಗಲಿ~ ಎಂದಾರು..

ಅಷ್ಟಕ್ಕೂ ಅವರೊಂದಿಗೆ ನಾವು ಹೆಚ್ಚು ಕಾಲ ಕಳೆದವರೇ ಅಲ್ಲ.. ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡ್ಕೋಬೇಕು..~ ಅಂದ.`ನಿಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಹೆಂಗಸನ್ನು ಬಿಡಿಸಿ ಅಂತ ನಿಮ್ಮತ್ತೆ ಹೇಳಿದರು ಅಂದ್ಯಲ್ಲ. ಅವರು ನಿನ್ನ ಸಮಸ್ಯೆಗೆ ಏನಾದರೂ ಪರಿಹಾರ ಹೇಳಿರಬೇಕಲ್ಲವಾ? ಏನು ಮಾಡಲಿ~ ಅಂತ ನೀನು ಕೇಳಬೇಕಿತ್ತು~ ಎಂದೆ.

ಮಾತಿಗೆ ಖಚಿತವಾದ ಎಳೆ ಸಿಕ್ಕಂತಾಗಿ `ಅದನ್ನೇ ಕೇಳಬೇಕು ಅಂತಲೇ ನಾನು ನಿನ್ನ ಹತ್ರ ಬಂದಿದ್ದು. ನಮ್ಮತ್ತೆ ನನ್ನ ಮಕ್ಕಳು ಹೇಳಿದ್ದನ್ನು ಕೇಳಿಕೊಂಡರು. `ನಿಮಗೆಷ್ಟು ವಯಸ್ಸು~ ಅಂತಲೂ ಕೇಳಿದರು. 61 ಅಂದೆ. ಅವರ ಸ್ವಂತ ಅಕ್ಕನ ಮಗಳೊಬ್ಬಳು ಇದ್ದಾಳಂತೆ. ಆಕೆಗೆ 58 ವರ್ಷವಂತೆ. ಗಂಡ ತೀರಿ ಹೋಗಿ ಹತ್ತು ವರ್ಷ ಆಯ್ತಂತೆ. ಇದ್ದ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿ ಸೆಟ್ಲ್ ಆಗಿದ್ದಾರೆ.

`ಒಂಟಿ ಬಾಳು ಬಾಳತಾ ಇದ್ದಾಳೆ, ಆ ಕಾಲದಲ್ಲಿ ನನ್ನ ಮಗಳಿಗಿಂತಲೂ ಹೆಚ್ಚು ಓದಿದ್ದಳು. ಒಳ್ಳೇ ಸಂಸ್ಕಾರ ಇರೋಳು. ಈಗ ಹೇಗೂ ನೀವು ಒಂಟಿಯಾಗಿದೀರಿ. ಅವಳನ್ನು ಮದುವೆ ಆಗಿಬಿಡಿ. ಈ ವಯಸ್ಸಲ್ಲಿ ಅವಳಿಗಂತೂ ಮಕ್ಕಳಾಗೋದಿಲ್ಲ. ನಿಮಗೂ ಕೊನೆಗಾಲದಲ್ಲಿ ಒಂದು ಆಸರೆ ಇದ್ದ ಹಾಗೆ ಆಗುತ್ತೆ ಅಂತ ಹೇಳಿದರು. ಅದನ್ನೇ ನಿನ್ನ ಹತ್ರ ಮಾತಾಡಾಣ ಅಂತ ಬಂದೆ..~ ಅಂದ.

`ಇದರ ಬಗ್ಗೆ ನಾನು ಹೇಳುವುದಕ್ಕಿಂತ ನಿನ್ನ ಮಕ್ಕಳು ಏನು ಹೇಳ್ತಾರೆ ಅನ್ನೋದು ಮುಖ್ಯವಾಗಲ್ಲವಾ..? ಅವರ ವಿರೋಧ ಇದ್ದರೆ ಮುಂದೆ ಕಷ್ಟ ಆಗಲ್ಲವಾ?~ ಅಂದೆ.
`ಅವರಾ.. ಇಲ್ಲಿ ಅಮೆರಿಕದಲ್ಲಿ ಇಂಥವೆಲ್ಲ ನಡೀತಾನೆ ಇರ್ತವೆ. ಒಳ್ಳೆ ಸಂಬಂಧ ಸಿಕ್ಕರೆ ಆಗಿ ಬಿಡಿ ಅಂತ ಹೇಳಿ ಕೈ ತೊಳೆದುಕೊಂಡರು..~ ಎಂದು ಸಿಡುಕಿದ.

`ಆದರೆ ನಿಮ್ಮತ್ತೆ ಹೇಳಿದ ಹೆಂಗಸನ್ನೂ ಕೇಳಬೇಕಲ್ಲವಾ.. ಅವರ ಒಪ್ಪಿಗೆಯೂ ಇದೆಯೋ.. ಆಗಲೇ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿ ಸೆಟ್ಲ್ ಆಗಿದ್ದಾರೆ ಅಂತೀಯಾ, ಅವರ ವಿರೋಧ ಇದ್ದರೆ.. ಅದರಲ್ಲೂ 58 ವರ್ಷದ ತಾಯಿ ಮದುವೆ ಆಗೋದನ್ನು ಮಕ್ಕಳು ಒಪ್ಪಿಕೊಳ್ಳೋದು ಅಷ್ಟು ಸುಲಭವಲ್ಲ~ ಎಂದು ನನ್ನ ಅನುಮಾನವನ್ನು ವ್ಯಕ್ತಪಡಿಸಿದೆ.

`ನಮ್ಮತ್ತೆ ಅದನ್ನೆಲ್ಲ ವಿಚಾರಿಸಿ ಖಚಿತ ಪಡಿಸಿದ್ದಾರೆ. ಅವರೇ ಮುಂದೆ ನಿಂತು ಮಾಡ್ತಾ ಇರೋದರಿಂದ ಸಮಸ್ಯೆ ಇದ್ದ ಹಾಗಿಲ್ಲ. ಆದರೆ, ಈ ವಯಸ್ಸಲ್ಲಿ ನಾನು ಮದುವೆ ಆಗೋದು ಸರಿಯೋ ತಪ್ಪೋ ಅಂತ ನಿನ್ನನ್ನು ಕೇಳಬೇಕಿತ್ತು.. ನಾನು ಮಾಡ್ತಿರೋದು ತಪ್ಪಲ್ಲ ತಾನೇ?~ ಎಂದು ನನ್ನ ಕಣ್ಣಲ್ಲಿ ಕಣ್ಣಿಟ್ಟ.

ಒಂದು ಕ್ಷಣ ನನಗೆ ಏನು ಹೇಳುವುದಕ್ಕೂ ತೋಚದಾಯಿತು. ಕ್ಷುಲ್ಲಕ ಕಾರಣಗಳಿಗಾಗಿ ಮದುವೆಯನ್ನು ಮುರಿದುಕೊಂಡು ವಿವಾಹದ ಚೌಕಟ್ಟನ್ನು ದುರ್ಬಲಗೊಳಿಸುತ್ತಿರುವ ಪ್ರವೃತ್ತಿ ಯುವ ಜನಾಂಗದಲ್ಲಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಾಂಗತ್ಯದ ಅವಶ್ಯಕತೆಗಾಗಿ ಮದುವೆಯ ಚೌಕಟ್ಟನ್ನು ಬಲಪಡಿಸಲು ಮುಂದೆ ಬಂದ ಗೆಳೆಯನ ಜೀವನೋತ್ಸಾಹಕ್ಕೆ ಮೆಚ್ಚುಗೆಯಾಗಿ, `ಖಂಡಿತಾ ತಪ್ಪಲ್ಲ ಶಿವರಾಮು. ಇದು ಖುಷಿಯಿಂದ ಸಂಭ್ರಮಿಸುವ ನಿರ್ಧಾರ. ಕಾರು ಸ್ಟಾರ್ಟ್ ಮಾಡು, ನಮ್ಮ ಕ್ಲಬ್ಬಿನಲ್ಲಿ ಇದನ್ನು ಸೆಲೆಬ್ರೇಟ್ ಮಾಡೋಣ~ ಎಂದು ಅವನು ಬಲಗೈಯನ್ನು ಬಿಗಿಯಾಗಿ ಹಿಡಿದು ಕುಲುಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.