ಒಂದು ಊರಿನ ಜೀವ ನಿಜಕ್ಕೂ ಎಲ್ಲಿ ಅಡಕವಾಗಿರುತ್ತದೆ? ಎಂದೂ ಮುಗಿಯದಂತೆ ಕಾಣುವ ಆ ಊರಿನ ಉದ್ದಾನುದ್ದ ರಸ್ತೆಗಳಲ್ಲೇ? ಕೈಯಲ್ಲೊಂದು ನಕಾಶೆ ಹಿಡಿದುಕೊಂಡು ಅಹೋರಾತ್ರಿ ದೇಶ–ವಿದೇಶಗಳಿಂದ ನಿದ್ದೆಕಣ್ಣಲ್ಲೇ ಬಂದಿಳಿವ ಪ್ರವಾಸಿಗರ ಹುಮ್ಮಸ್ಸಿನಲ್ಲೇ? ಅದೇ ಪ್ರವಾಸಿಗರು ತಮ್ಮ ಸ್ಮಾರ್ಟುಫೋನುಗಳಲ್ಲಿ ಆವೇಶ ಬಂದವರಂತೆ ತೆಗೆದುಕೊಂಡ ಸಾವಿರಾರು ಛಾಯಾಚಿತ್ರಗಳಲ್ಲೇ?

ಅಥವಾ ಯಾರು ಬಂದರೂ ಹೋದರೂ ತನಗೆ ಸಂಬಂಧವೇ ಇಲ್ಲ ಅನ್ನುವ ಹಾಗೆ ರಸ್ತೆ ಬದಿಯ ಮನೆಯೊಂದರ ಬಾಲ್ಕನಿಯಲ್ಲಿ ನಿತ್ಯವೂ ನಿರಮ್ಮಳ ಒಣಗುವ ಬಟ್ಟೆಗಳ ಇನ್ನೂ ಆರದ ನೀರ ಪಸೆಯಲ್ಲೇ? ಸ್ಪೇನ್ ದೇಶದ ಬಾರ್ಸಿಲೋನಾ ಪಟ್ಟಣಕ್ಕೆ ಹೋದಾಗ ಈ ಪ್ರಶ್ನೆಯನ್ನು ಬೇರೆ ಬೇರೆ ಹೊತ್ತಿನಲ್ಲಿ, ಆ ನಗರದ ಬೇರೆ ಬೇರೆ ಬಿಂದುಗಳಲ್ಲಿ ನಿಂತು ಕೇಳಿಕೊಂಡೆ. ಸಾವಿರಾರು ವರ್ಷಗಳ ಹಿಂದೆ ಕಣ್ತೆರೆದ ಈ ಪುರಾತನ ಪಟ್ಟಣದ ಒಳಜೀವವನ್ನು ಒಂದು ವಾರದ ಮಟ್ಟಿಗೆ ಪ್ರವಾಸಿಗಳಾಗಿ ಹೋದ ನಾನು ಹೇಗೆ ತಾನೇ ಸ್ಪರ್ಶಿಸಲು ಸಾಧ್ಯ? ಕೊನೆಗೆ ಆ ಊರು ತಡವಿಲ್ಲದೇ ದಯಪಾಲಿಸಿದ ಕಂಪನವನ್ನಷ್ಟೇ ಉಡಿಯಲ್ಲಿ ಹಾಕಿಕೊಂಡು ಬರಲು ನನಗೆ ಸಾಧ್ಯವಾಯಿತು.

ಬಾರ್ಸಿಲೋನಾ ಶಹರ ಕುಳಿತಿರುವುದು ಮೆಡಿಟರೇನಿಯನ್ ಸಮುದ್ರದ ದಂಡೆಯ ಮೇಲೆ. ಹೀಗಾಗಿ ಕಡಲ ತೀರದ ಊರಿನ ಮೊರೆತ, ಉಪ್ಪು ನೀರಿನ ಹವೆ ಇಲ್ಲಿ ಭರಪೂರ ಲಭ್ಯ. ನಾವಲ್ಲಿ ಹೋಗಿದ್ದು ಚಳಿಗಾಲದಲ್ಲಾಗಿದ್ದರೂ ವಾತಾವರಣದಲ್ಲಿ ಕೊರೆಯುವ ಚಳಿಯೇನೂ ಇರಲಿಲ್ಲ. ಮುಖ್ಯವಾಗಿ ಸ್ಪ್ಯಾನಿಷ್ ಮತ್ತು ಕ್ಯಾಟಲೋನಿಯನ್ ಭಾಷೆಗಳಲ್ಲಿ ವ್ಯವಹರಿಸುವ ಇಲ್ಲಿನ ಜನ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಸ್ವಲ್ಪ ಮಟ್ಟಿನ ಇಂಗ್ಲಿಷನ್ನೂ ಮಾತನಾಡಬಲ್ಲರು.

ಅವರಿಗೆ ಫುಟ್‌ಬಾಲ್ ಆಟದ ಕುರಿತು ಅದೆಷ್ಟು ಹುಚ್ಚೆಂದರೆ ತಮ್ಮ ತಂಡ ಗೆದ್ದ ದಿನ ಇಡೀ ಶಹರವೇ ಮೊಗದ ಮೇಲೆ ನಗೆಯ ಕಳೆ ಹೊತ್ತು ನಡೆಯುತ್ತಿರುತ್ತದೆ. ಆ ದಿನ ನಗರದ ಮುಖ್ಯರಸ್ತೆ ‘ಲಾ ರಾಂಬ್ಲಾ’ದಲ್ಲಿ ಭರ್ಜರಿ ಸಂತೋಷಕೂಟಗಳೂ ನಡೆದಿರುತ್ತವೆ.

ಬಾರ್ಸಿಲೋನಾ ಮುಖ್ಯವಾಗಿ ಪ್ರವಾಸೀ ತಾಣ. ಇಲ್ಲಿ ದಿನವೂ ಸಾವಿರಾರು ಪ್ರವಾಸಿಗರು ಊರು ನೋಡಲೆಂದೇ ಬಂದಿಳಿಯುತ್ತಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಲ್ಲಿ ಒಂದೇ ಚೌಕದಲ್ಲಿ ನಮಗೆ ಎರಡೂವರೆ ಸಾವಿರ ವರ್ಷಗಳ ಹಿಂದೆ ರೋಮನ್ನರು ಕಟ್ಟಿದ ಪಟ್ಟಣದ ಪಳಿಯುಳಿಕೆಗಳೂ, ಮೂರನೇ ಶತಮಾನದ ಕ್ಯಾಥಾಡ್ರೆಲ್‌ಗಳೂ, ಹದಿನಾಲ್ಕನೇ ಶತಮಾನದ ಇಮಾರತುಗಳೂ ಮತ್ತು ಕಳೆದ ಕೆಲವೇ ವರ್ಷಗಳಲ್ಲಿ ಹೆಚ್ಚಿಕೊಂಡ ಕಾಫೀ ಕೆಫೆಗಳೂ ಶ್ರಮವಿಲ್ಲದೇ ಕಾಣಸಿಗುವವು.

ವಿಶೇಷವೆಂದರೆ ಈ ಭೂತ – ವರ್ತಮಾನದ ಮಿಶ್ರಣ ಯಾರನ್ನೂ ಕಿರಿಕಿರಿಗೊಳಿಸದೇ ಒಂದಕ್ಕೊಂದು ಪೂರಕವಾಗಿವೆ, ಆ ಕಾರಣಕ್ಕಾಗಿಯೇ ನಗರದ ಅಂದ ಹೆಚ್ಚಿಸಿವೆ. ಇಲ್ಲಿ ನಗರದ ಒಂದು ಜಾಗದಿಂದ ಇನ್ನೊಂದಕ್ಕೆ ಸಾಗಲು ಜನ ಬಹುತೇಕವಾಗಿ ಮೆಟ್ರೋ ರೈಲನ್ನೇ ಬಳಸುವುದ ಕಂಡೆ. ಜೊತೆಗೆ ಬಸ್ಸುಗಳೂ ಟ್ಯಾಕ್ಸಿಗಳೂ ಲಭ್ಯವಿದ್ದರೂ ಅವು ಎರಡನೆಯ ಆಯ್ಕೆಯೇ. ಮೇಲೆ ಚೆನ್ನಾದ ಸಿಟಿ ಇದ್ದರೂ ನೆಲದ ಒಳ ಸುರಂಗದಲ್ಲಿ ವೇಗವಾಗಿ ಚಲಿಸುವ ಮೆಟ್ರೋಗಳೇ ಈ ಊರಿನ ಜೀವನಾಡಿ. ಈ ಮೆಟ್ರೋ ಸುರಂಗದ ಸರೀ ಮೇಲೆ ಬರುವ ಮನೆಗಳಿಗೆ ಬಾಡಿಗೆಯೂ ತುಸು ಕಡಿಮೆ ಎನ್ನುವುದು ಇನ್ನೊಂದು ಸ್ವಾರಸ್ಯಕರ ವಿಚಾರ.

ನಾವಲ್ಲಿ ಮೊದಲು ಹೋದದ್ದು ‘ಲಾ ಸಗ್ರಾದಾ ಫ್ಯಾಮಿಲಿಯಾ’ ಎಂಬ ವಿಶ್ವಪ್ರಸಿದ್ಧ ದೇವಾಲಯಕ್ಕೆ. ಅಂಥೋನಿ ಗೌದಿ ಎಂಬ ಶ್ರೇಷ್ಠ ವಾಸ್ತುಶಿಲ್ಪಿಯ ಮೇರು ಕೃತಿಯೆಂದೇ ಪರಿಗಣಿಸಲಾಗುವ ಈ ದೇವಾಲಯದಲ್ಲಿ ಕ್ರಿಸ್ತನ ಬದುಕಿನ ನಾನಾ ಘಟನೆಗಳನ್ನು ಕಲ್ಲಿನಲ್ಲಿಯೇ ಕಲಾತ್ಮಕವಾಗಿ ಕೆತ್ತಲಾಗಿದೆ. ಈ ಕಟ್ಟಡದ ಕುರಿತು ಇನ್ನೊಂದು ವಿಶಿಷ್ಟ ಸಂಗತಿಯೆಂದರೆ ಕಳೆದ ನೂರಾಮೂವತ್ನಾಲ್ಕು ವರ್ಷಗಳಿಂದಲೂ ಈ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂಬುದು.

ಎಲ್ಲ ಸರಿಹೋದರೆ ಈ ಕಟ್ಟಡ 2026ರಲ್ಲಿ ಕಟ್ಟಿ ಮುಗಿಯುತ್ತದಂತೆ. ಮುಖ್ಯವಾಸ್ತುಶಿಲ್ಪಿ ಅಂಥೋನಿ ಗೌದಿ 1926ರಲ್ಲೇ ವಿಧಿವಶರಾದರೂ ಅವರ ಯೋಜನೆಯನ್ನೇ ಇಂದಿನ ವಾಸ್ತುಶಿಲ್ಪಿಗಳ ತಂಡ ಕಾರ್ಯರೂಪಕ್ಕೆ ತರುತ್ತಿದೆ.

ಕಟ್ಟಡ ಕಾರ್ಯದಿಂದ ಈ ದೇಗುಲಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಪ್ರತೀ ವರ್ಷ ಜಗತ್ತಿನ ಮೂಲೆಮೂಲೆಗಳಿಂದ ಜನಸಾಗರ ಈ ದೇಗುಲದ ಅತ್ಯುನ್ನತ ವಾಸ್ತುಶಿಲ್ಪವನ್ನು ಕಣ್ಣುತುಂಬಿಕೊಳ್ಳಲೆಂದೇ ಇಲ್ಲಿಗೆ ಹರಿದುಬರುತ್ತದೆ. ಗೌದಿ ವಾಸ್ತುಶಿಲ್ಪದ ವಿಶೇಷತೆಯೆಂದರೆ ಅವರು ಯೋಜನೆ ಹಾಕಿದ ಕಟ್ಟಡಗಳು ಚಚ್ಚೌಕವಾಗಿರದೇ ತಿರುವು-ಮುರುವಾಗಿರುತ್ತವೆ.

ಸಾಮಾನ್ಯವಾಗಿ ಎಲ್ಲಿಯೂ ಚೂಪು ಅಂಚುಗಳೂ, ಕೋನಗಳೂ ಕಾಣದೇ ಕಟ್ಟಡದ ತುದಿಗಳೆಲ್ಲ ಗೋಲಕ್ಕಿರುತ್ತವೆ. ‘‘ನಾನು ನಿಸರ್ಗದ ನಿಯಮಗಳ ಆರಾಧಕ. ನಿಸರ್ಗ ಯಾವುದನ್ನೂ ಚೂಪಾಗಿ, ಗೆರೆ ಕೊರೆದಂತೆ ರಚಿಸುವುದಿಲ್ಲ. ಹೀಗಾಗಿ ನನ್ನ ಕೃತಿಗಳಲ್ಲೂ ಚೂಪು ಅಂಚುಗಳಿಲ್ಲ’’ ಅಂತ ಒಂದು ಸಂದರ್ಶನದಲ್ಲಿ ಹೇಳಿಕೊಂಡ ಗೌದಿ, ಇದೇ ಊರಿನಲ್ಲಿ ‘ಕಾಸಾ ಮಿಲಾ’, ‘ಕಾಸಾ ಬಟ್ಲು’ವಿನಂತಹ ಆಧುನಿಕ ಶಿಲ್ಪಗಳನ್ನೂ ರಚಿಸಿದ್ದಾರೆ.

ಬಾರ್ಸಿಲೋನಾ ನಗರದಲ್ಲಿ ಹತ್ತಾರು ಮಹತ್ವದ ಮ್ಯೂಸಿಯಂಗಳಿವೆ. ಅವುಗಳಲ್ಲಿ ‘ರಾಷ್ಟ್ರೀಯ ಕಲಾ ಮ್ಯೂಸಿಯಂ’ ಪ್ರಮುಖವಾದುದು. ರೋಮನ್ನರ ಕಾಲದಿಂದ ಶುರುವಾಗಿ ಇಂದಿನ ಕಲಾವಿದ್ಯಾರ್ಥಿಗಳ ಚಿತ್ರಕಲೆಯ ತನಕ ಇಲ್ಲಿ ಚಿತ್ರ ಪ್ರದರ್ಶನವಿದೆ. ಸೂಕ್ಷ್ಮವಾಗಿ ಗಮನಿಸಿದರೆ ಸ್ಪೇನ್ ದೇಶದ ಸಾವಿರ ವರ್ಷಗಳ ಕಲಾ ಇತಿಹಾಸ ಈ ಮ್ಯೂಸಿಯಂನಲ್ಲಿ ನಮ್ಮ ಮುಂದೆ ಅನಾವರಣಗೊಳ್ಳುತ್ತದೆ. ಅಲ್ಲದೇ ಈ ಕಟ್ಟಡದ ತಾರಸಿ ಹತ್ತಿ ನೋಡಿದರೆ ಇಡೀ ಬಾರ್ಸಿಲೋನಾ ಶಹರದ ಮನೋಹರ ನೋಟ ಕಾಣಸಿಗುವುದು.

ಇನ್ನು ನಗರದ ಹೃದಯಭಾಗದಲ್ಲಿರುವ ‘ಲಾ ರಾಂಬ್ಲಾ’ ರಸ್ತೆಯ ಕುರಿತು ಬರೆಯದೇ ಇರುವುದು ಹೇಗೆ? ಸುಪ್ರಸಿದ್ಧ ನಾಟಕಕಾರ ಲೋರ್ಕಾ ಈ ರಸ್ತೆಯ ಕುರಿತು ‘ಇದೊಂದು ಮುಗಿಯದ ಬೀದಿ’ ಅಂತ ಕೊಂಡಾಡಿದ್ದರಂತೆ. ಆಶ್ಚರ್ಯವೆಂದರೆ ಲಾ ರಾಂಬ್ಲಾದಲ್ಲಿ ಓಡಾಡುವಾಗ ಲೋರ್ಕಾ ಹೇಳಿದ ಆ ಮಾತು ಯಥಾವತ್ತಾಗಿ ದರ್ಶನವಾಗುವುದು ಸುಳ್ಳಲ್ಲ.

ಸುಮಾರು ಒಂದೂವರೆ ಕಿಲೋಮೀಟರ್ ಉದ್ದಕ್ಕೆ ಹರಡಿಕೊಂಡಿರುವ ಈ ಬೀದಿಯ ಇಕ್ಕೆಲಗಳಲ್ಲಿ ಪ್ರವಾಸಿಗರಿಗೆಂದೇ ಹೇಳಿಮಾಡಿಸಿದ ಹೊಟೇಲುಗಳೂ ಗಿಫ್ಟ್ ಅಂಗಡಿಗಳೂ ಅವುಗಳಲ್ಲಿ ತೂಗಾಡುವ ಮೇಡ್ ಇನ್ ಚೈನಾ ಕೀಚೈನುಗಳೂ ಭರಪೂರ ಕಾಣಲು ಸಿಗುವವು. ಇಲ್ಲೇ ನಗರದ ಬಹುದೊಡ್ಡ ಮಾರುಕಟ್ಟೆ ‘ಲಾ ಬೊಕರಿಯಾ’ ಕೂಡ ಇರುವುದು.

ಆದರೆ ನಿಜಕ್ಕೂ ಈ ಊರಿನ ನಾಡಿಮಿಡಿತ ಹಿಡಿಯುವ ಮನಸ್ಸಿದ್ದರೆ ಮುಖ್ಯರಸ್ತೆ ಬಿಟ್ಟು ಒಳದಾರಿಯಲ್ಲಿ ಸಾಗಬೇಕು. ಲಾ ರಾಂಬ್ಲಾ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಯಾವುದೇ ಬೀದಿ ಹೊಕ್ಕರೂ ನಮಗೆ ತಳುಕು ಬಳುಕಿಲ್ಲದ ಬೇರೆಯದೇ ದೃಶ್ಯಗಳು ಕಾಣಲು ಸಿಕ್ಕವು. ನೂರಾರು ವರ್ಷಗಳಷ್ಟು ಹಳೆಯ ಕಲ್ಲಿನ ಮನೆಗಳು, ಗಾಥಿಕ್ ವೃತ್ತದಲ್ಲಿ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡು ಊರಿನ ಘನತೆ ಹೆಚ್ಚಿಸುವ ಪಾರಿವಾಳಗಳು, ಪುಟ್ಟ ಪುಟ್ಟ ಬಾಲ್ಕನಿಗಳಲ್ಲಿ ಬಟ್ಟೆಗಳನ್ನು ಹರವಿಹಾಕುತ್ತ ಪ್ರವಾಸಿಗರ ಕಡೆಗೆ ಒಂದು ನಮೂನೆ ಉದಾಸೀನವಾಗಿಯೇ ಕಣ್ಣು ಹಾಯಿಸುವ ಹೆಂಗಸರು, ಎಲ್ಲೆಂದರಲ್ಲಿ ಸಣ್ಣದೊಂದು ಜಮಖಾನೆ ಹಾಸಿಕೊಂಡು ತಾದಾತ್ಮ್ಯದಲ್ಲಿ ವಾದ್ಯ ನುಡಿಸಿ ಆವರಣದ ಸೌಂದರ್ಯ ಹೆಚ್ಚಿಸುವ ಸಂಗೀತಗಾರರು... ಇವರೆಲ್ಲ ಈ ಪಟ್ಟಣದ ಜೀವಂತ ಸ್ವತ್ತುಗಳು.

ಬಾರ್ಸಿಲೋನಾ, ಜಗತ್ತಿನ ಎಲ್ಲಾ ಕಲಾ ಪ್ರೇಮಿಗಳ ಕಣ್ಮಣಿ ಪಾಬ್ಲೋ ಪಿಕಾಸೊ ತನ್ನ ಎಳವೆಯ ದಿನಗಳಲ್ಲಿ ಸಮಯ ಕಳೆದ ಊರು. ತನ್ನ ಹದಿಹರೆಯದಲ್ಲಿ ಪಿಕಾಸೊ ಇಲ್ಲಿದ್ದು ತನ್ನ ಮೊದಮೊದಲ ಪೇಂಟಿಂಗುಗಳಲ್ಲಿ ತೊಡಗಿಕೊಂಡಿದ್ದ. ಜಗತ್ತಿನಲ್ಲಿಯೇ ಅತಿದೊಡ್ಡ ಪಿಕಾಸೊ ಪೇಂಟಿಂಗುಗಳ ಸಂಗ್ರಹವಿರುವ ‘ಪಿಕಾಸೋ ಮ್ಯೂಸಿಯಂ’ನಲ್ಲಿ ಚಿತ್ರಗಳ ಮುಂದೆ ಮೈಮರೆಯುತ್ತ, ಅವನು ಕಾಫಿ ಕುಡಿಯುತ್ತಿದ್ದ ಕೆಫೆಯಲ್ಲೇ ಧನ್ಯತೆಯಿಂದ ಕಾಫಿ ಕುಡಿಯುತ್ತಾ, ಜಗತ್ತು ಕಂಡ ಅಂಥ ಶ್ರೇಷ್ಠ ಕಲಾವಿದ ಓಡಾಡಿದ ಬೀದಿಗಳಲ್ಲಿ ತಿರುಗಾಡುವುದೇ ಒಂದು ರೋಮಾಂಚನ.

ಅಲ್ಲಿನ ಸಾಂಪ್ರದಾಯಿಕ ತಿನಿಸುಗಳಾದ ಪಯೆಯಾ ಮತ್ತು ಕ್ರೆಮ್ ಕೆಟಲಾನಾಗಳ ರುಚಿ ಮರೆಯಲಸಾಧ್ಯ. ಅನ್ನದ ಜೊತೆಗೆ ಎಲ್ಲ ಬಗೆಯ ತರಕಾರಿಗಳನ್ನೂ ಇಷ್ಟವಿದ್ದವರಿಗೆ ವಿವಿಧ ಬಗೆಯ ಮೀನನ್ನೂ ಬೆರೆಸಿ ತಟ್ಟೆಯಲ್ಲಿಯೇ ಬೇಯಿಸಿ ಸುಡುಸುಡುವಾಗಲೇ ಮುಂದೆ ತಂದಿಡುವ ‘ಪಯೆಯಾ’ ಕಾಣಲೆಷ್ಟು ಚೆನ್ನವೋ ತಿನ್ನಲೂ ಅಷ್ಟೇ ರುಚಿ. ಇನ್ನು ಹಾಲಿನ ಕೆನೆಯಿಂದ ತಯಾರಿಸುವ ಸಿಹಿ ತಿಂಡಿ ಕ್ರೆಮ್ ಕೆಟಲಾನಾ ಕುರಿತಾಗಿ ಕೂಡ ಈ ಮಾತು ಸತ್ಯ.

ಕೊನೆಯ ದಿನ ನಮ್ಮ ಹೊಟೇಲಿನಿಂದ ಮರಳುವಾಗ ರಸ್ತೆಯ ಪಕ್ಕ ಕಾಲುದಾರಿಯಲ್ಲಿ ಸಾಲು ಸಾಲು ಕಿತ್ತಲೆಯ ಮರಗಳು ಹಣ್ಣು ತುಂಬಿ ನಿಂತಿದ್ದನ್ನು ಕಂಡೆ. ಅಲ್ಲೇ ಉದುರಿದ ಎಲೆಗಳನ್ನು ಸ್ವಚ್ಛ ಮಾಡುತ್ತ ಕೂತ ಮಾಲಿಗೆ ನನ್ನ ಹರುಕು–ಮುರುಕು ಸ್ಪ್ಯಾನಿಶ್ ಭಾಷೆಯಲ್ಲಿ ತೊದಲುತ್ತ ಕೇಳಿದೆ– ‘‘ಹೀಗೆ ಫೂಟ್‌ಪಾತಿನ ಮೇಲೆ ಮರಗಳಿದ್ದರೆ ಯಾರೂ ಹಣ್ಣು ಕೀಳುವುದಿಲ್ಲವೇ?’’ ಅಂತ. ಅದಕ್ಕೆ ಅವನು ಮಾರ್ಮಿಕವಾಗಿ ನಗುತ್ತ ‘‘ಸಾಧ್ಯವಾದರೆ ಕಿತ್ತುಕೋ ನೋಡೋಣ’’ ಅಂದ.

ಅರೇ, ಹೌದು. ಆ ಕಿತ್ತಲೆಯ ಮರಗಳು ಗಿಡ್ಡವಾಗಿ ಕಂಡರೂ ಅಲ್ಲಿನ ಒಂದು ಹಣ್ಣೂ ಕೈಗೆಟಕುವಂತಿರಲಿಲ್ಲ. ಇಡೀ ಊರಿನ ಉಸಿರೇ ತಮ್ಮಲ್ಲಿದೆಯೇನೋ ಎಂಬಂತೆ ಹೆಮ್ಮೆಯಿಂದ ಆ ಕಿತ್ತಲೆಗಳು ಅತೀ ಎತ್ತರದಲಿ ಜೀವ ತುಂಬಿ ನಿಂತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.