ಹೌದು, ಕನಸುಗಾರರ, ಸಾಹಸಿಗಳ, ಏಕಾಂತ ಪ್ರಿಯರ ಮನಸ್ಸನ್ನು ಸೆಳೆಯುವ ನಿಗೂಢ ಶಕ್ತಿ ದ್ವೀಪಗಳಿಗಿದೆ; ಸಮುದ್ರಕ್ಕಿದೆ; ಸಮುದ್ರದಂತಹ ನದಿಗಿದೆ. ಬ್ರಹ್ಮಪುತ್ರವೆಂಬ ಉನ್ಮತ್ತ ನದಿಯ ಕಾಂತಶಕ್ತಿ ಇನ್ನೂ ವಿಸ್ತಾರವಾದದ್ದು. ಅಂತಹ ಕಾಂತಶಕ್ತಿಯ ಸೆಳೆತಕ್ಕೆ ಸಿಕ್ಕ ನಾನು ಮಜೂಲಿ ಎಂಬ ದ್ವೀಪಕ್ಕೆ ಹೋದೆ. ನನ್ನ ಪ್ರವಾಸದ ಪಟ್ಟಿಯಲ್ಲಿ ಮಜೂಲಿಯ ಹೆಸರಿರಲಿಲ್ಲ. ನನ್ನ ಗಮ್ಯ ಬ್ರಹ್ಮಪುತ್ರ ಎಂಬ ಮಹಾನದಿಯ ಚೊಚ್ಚಲ ಉತ್ಸವ ‘ನಮಾಮಿ ಬ್ರಹ್ಮಪುತ್ರ’ವನ್ನು ನೋಡುವುದಾಗಿತ್ತು. ಆದರೆ ನಾನವನ ಮಗುವಿನ ಮೋಹದಲ್ಲಿ ಬಿದ್ದೆ!

ಹೌದು! ಮಾಜೂಲಿ ಬ್ರಹ್ಮಪುತ್ರ ಸೃಜಿಸಿದ ದ್ವೀಪ. ನದಿಯೊಂದು ಹುಟ್ಟುಹಾಕಿದ ಜಗತ್ತಿನ ಅತ್ಯಂತ ದೊಡ್ಡ ದ್ವೀಪವಿದು. ಜಗತ್ತಿನ ಅತಿ ದೊಡ್ಡ ನದಿಗಳ ಪಟ್ಟಿಯಲ್ಲಿ ಬ್ರಹ್ಮಪುತ್ರವೂ ಸೇರಿದೆ. ಅದೊಂದು ಉನ್ಮತ್ತ ನದಿ. ಬ್ರಹ್ಮದೇವನ ಪುತ್ರನಾದ ಕಾರಣ ಇದು ಬ್ರಹ್ಮಪುತ್ರ. ಹಾಗಾಗಿಯೇ ಇದು ಗಂಡು ನದಿ, ಗಂಡಾದ ಕಾರಣದಿಂದಾಗಿಯೇ ಅಬ್ಬರ ಜಾಸ್ತಿ; ವಿಧ್ವಂಸಕತೆಯೆಡೆಗೆ ಒಲವೆನ್ನಬಹುದೇ? ಇದರ ಹರಹನ್ನು ನೋಡಿದವರು ಖಂಡಿತವಾಗಿಯೂ ಇದನ್ನು ನದಿಯೆನ್ನಲಾರರು: ಅದೊಂದು ಸಮುದ್ರ. ಅದರಲ್ಲಿಯೂ ಸಾಗರದಂತೆ ಅಲೆಗಳೇಳುತ್ತವೆ. ಸೊಕ್ಕಿ ಹರಿದರೆ ಅಪಾರ ಸಂಖ್ಯೆಯಲ್ಲಿ ಆಸ್ತಿ ಮತ್ತು ಜೀವ ಹಾನಿಯನ್ನು ಉಂಟುಮಾಡುತ್ತದೆ. ಪ್ರತಿ ವರ್ಷವೂ ಈ ನದಿ ಉಕ್ಕಿ ಹರಿಯುತ್ತದೆ; ಇಲ್ಲಿಯ ಜನರ ದುಃಖಕ್ಕೆ ಕಾರಣವಾಗುತ್ತದೆ.

ಬ್ರಹ್ಮಪುತ್ರನ ಪುಟ್ಟ ಮಗು ಮಜೂಲಿ. ಇದಕ್ಕಿರುವುದು ನಾಲ್ಕು ಶತಮಾನಗಳ ಇತಿಹಾಸ. ಇದರ ಹುಟ್ಟಿನ ಕಥೆ ಕೇಳಿ; ಮಜೂಲಿ ಅಂದರೆ ಅಸ್ಸಾಮಿ ಭಾಷೆಯಲ್ಲಿ ಸಮಾನಾಂತರವಾಗಿ ಹರಿಯುವ ಎರಡು ನದಿಗಳ ನಡುವಿನ ಭೂಮಿ ಎಂದರ್ಥ. ಈಗ ನಮಗೆ ಗೋಚರವಾಗುವ ಮಜೂಲಿ ದ್ವೀಪ ಹಿಂದೊಮ್ಮೆ ಬ್ರಹ್ಮಪುತ್ರನ ಒಡಲೊಳಗಿತ್ತು. ಡಿಬಾಂಗ್ ಮತ್ತು ಬ್ರಹ್ಮಪುತ್ರ ನದಿಗಳು ಪರಸ್ಪರ 190 ಕಿ.ಮೀ ದೂರದಲ್ಲಿ ಸಮಾನಾಂತರವಾಗಿ ಹರಿಯುತ್ತಿದ್ದವು. ಅದು 1750ರ ಸಮಯ. ಸತತ ಹದಿನೈದು ದಿನ ಮಳೆ ಸುರಿಯಿತು. ಜೊತೆಗೆ ಆ ಪ್ರದೇಶದಲ್ಲಿ ಭೂಕಂಪನ ಸಂಭವಿಸಿತು. ಎರಡೂ ನದಿಗಳು ಹುಚ್ಚೆದ್ದು ಕುಣಿದು ತಮ್ಮ ಪಾತ್ರಗಳ ಮೇರೆ ಮೀರಿ ಹರಿದು ಒಂದನ್ನೊಂದು ಅಪ್ಪಿಕೊಂಡವು. ಅವರಿಬ್ಬರೂ ಸೇರಿ ಬಳುಕಿದ ಜಾಗದಲ್ಲಿ ಭೂಭಾಗವೊಂದು ನಿರ್ಮಾಣವಾಯ್ತು, ಅದುವೇ ಮಜೂಲಿ ದ್ವೀಪ.

(ತುಳಸಿ ಮರದ್ದು ಎನ್ನಲಾದ ದಿಮ್ಮಿ!)

ಮಜೂಲಿ ದ್ವೀಪ ಉದಯವಾದ ಕಾಲಕ್ಕೆ ಅದರ ವಿಸ್ತೀರ್ಣ 1,225 ಚದರ ಕಿ.ಮೀ ಆಗಿತ್ತು. ಕ್ರಮೇಣ ಬ್ರಹ್ಮಪುತ್ರ ಅದನ್ನು ಕಬಳಿಸುತ್ತಾ ಬಂದು ಈಗ ಕೇವಲ 520 ಚದರ ಕಿ.ಮೀ ಭೂಭಾಗ ಉಳಿದುಕೊಂಡಿದೆ. ಇನ್ನೆರಡು ದಶಕಗಳಲ್ಲಿ ಮಜೂಲಿ ದ್ವೀಪ ಮತ್ತೆ ಬ್ರಹ್ಮಪುತ್ರನ ಒಡಲನ್ನು ಸೇರಲಿದೆ ಎಂದು ತಜ್ಞರು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ.

ಇದೇ ಮಾರ್ಚ್ 31ರಿಂದ ಏಪ್ರಿಲ್ 4ರತನಕ ಅಸ್ಸಾಂನಲ್ಲಿ ‘ನಮಾಮಿ ಬ್ರಹ್ಮಪುತ್ರ’ ಉತ್ಸವ ನಡೆಯಿತು. ಅದರಲ್ಲಿ ಭಾಗವಹಿಸುವುದಕ್ಕಾಗಿ ಅಸ್ಸಾಂನ ರಾಜಧಾನಿ ಗುವಾಹಟಿಗೆ ಹೋಗಿದ್ದೆ. ಉತ್ಸವದ ಉದ್ಘಾಟನೆಯಂದು ಆರಂಭವಾದ ಮಳೆ ಸಮಾರೋಪದ ತನಕ ಎಡೆಬಿಡದೆ ಸುರಿಯಿತು. ನಾನು ಮತ್ತು ನನ್ನ ಫ್ರೆಂಡ್, ಹೊರಗೆ ಸುರಿಯುತ್ತಿದ್ದ ಮಳೆ ನೋಡುತ್ತಾ ಎರಡು ದಿನ ಕಳೆದವು. ಎರಡನೆಯ ರಾತ್ರಿ, ಗುವಾಹಟಿಯ ಸುತ್ತಮುತ್ತ ಯಾವುದಾದರೂ ಪ್ರೇಕ್ಷಣೀಯ ಸ್ಥಳವಿದೆಯೇ ಎಂದು ಗೂಗಲ್ನಲ್ಲಿ ಹುಡುಕತೊಡಗಿದೆವು. ಆಗ ಸಿಕ್ಕಿದ್ದೇ ಮಜೂಲಿಯೆಂಬ ಸ್ವರ್ಗ.

ಗುವಾಹಟಿಯಿಂದ ಮಜೂಲಿ 300 ಕಿ.ಮೀ ದೂರದಲ್ಲಿದೆ. ಮಜೂಲಿಗೆ ಹೋಗಲು ಎರಡು ಮಾರ್ಗಗಳಿವೆ, ಹತ್ತಿರದ ದಾರಿಯೆಂದರೆ ಗುವಾಹಟಿಯಿಂದ ಜೋರಾಟ್ಗೆ ಹೋಗಬೇಕು. ಬಸ್ಸಿನಲ್ಲಾದರೆ ಆರು ತಾಸು ಬೇಕು. ಅಲ್ಲಿಂದ ಶೇರ್ ಆಟೋ ಹಿಡಿದು ನಿಮಾಟಿ ಘಾಟ್ಗೆ ಬಂದರೆ ಅಲ್ಲಿ ಮಜೂಲಿಗೆ ಹೋಗುವ ಫೆರ್ರಿ ಸಿಗುತ್ತದೆ. ನಿಮಾಟಿ ಘಾಟ್ ಎಂಬುದು ಬ್ರಹ್ಮಪುತ್ರಾದ ನದಿ ಬಂದರು. ಗುವಾಹಟಿಯಿಂದ ಕಾರು ಮಾಡಿಕೊಂಡು ಬಂದರೆ ಕಾರು ಸಮೇತ ಫೆರ್ರಿಯಲ್ಲಿ ಸಾಗಬಹುದು. ನಿಮಾಟಿ ಘಾಟ್ನಿಂದ ಮಜೂಲಿ 20 ಕಿ.ಮೀ ದೂರದಲ್ಲಿದೆ.

ಇನ್ನೊಂದು ಹಾದಿ ಲಕಮಿಪುರದ ಮೂಲಕ ನೇರವಾಗಿ ಮಜೂಲಿ ತಲುಪುವುದು. ಇದು ಒಂಬತ್ತು ತಾಸುಗಳ ಪಯಣ.

ನಮ್ಮ ಗ್ರಹಚಾರ ನೆಟ್ಟಗಿರಲಿಲ್ಲ. ಮಧ್ಯರಾತ್ರಿಯಲ್ಲಿ ಯಾವುದೋ ಊರಲ್ಲಿ ಬಸ್ಸು ಕೆಟ್ಟು ನಿಂತಿತು. ಡ್ರೈವರ್ ರಿಪೇರಿ ಮಾಡಿದ, ಬಸ್ಸು ಮುಂದೆ ಹೋಗುತ್ತಿತ್ತು. ಮತ್ತೆ ಕೆಟ್ಟು ನಿಲ್ಲುತ್ತಿತ್ತು.. ಮತ್ತೆ.. ಮತ್ತೆ..
ಬೆಳಿಗ್ಗೆ ಮಜೂಲಿ ತಲುಪಬೇಕಾದವರು ಅಂತೂ ಇಂತೂ ಮಧ್ಯಾಹ್ನ ಒಂದೂವರೆಗೆ ತಲುಪಿದೆವು. ದಾರಿಯ ಎರಡೂ ಬದಿ ಹಸಿರೇ ಹಸಿರು. ಪೈರಿನಿಂದ ಕಂಗೊಳಿಸುವ ಹೊಲಗದ್ದೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದವು. ಅಲ್ಲಲ್ಲಿ ಸಿಗುತ್ತಿದ್ದ ಸ್ಥಳೀಯ ಮುಗ್ಧ ಜನ, ಅವರ ಪ್ರೀತಿ, ವಿಶ್ವಾಸದ ಮಾತುಗಳ ಮಧ್ಯೆ ಪ್ರಯಾಣ ಕಷ್ಟವೆನಿಸಲಿಲ್ಲ.

ಮಜೂಲಿ ಬಸ್ ನಿಲ್ದಾಣದಲ್ಲಿ ಇಳಿದ ಜಾಗದಲ್ಲಿ ಪುಟ್ಟ ಕಟ್ಟಡದ ಮಹಡಿ ಮೇಲೊಂದು ಊಟದ ಹೋಟೆಲ್ ಇತ್ತು. ಆ ಹೋಟೆಲಿನ ಓನರ್ ಒಬ್ಬ ನಗುಮೊಗದ ಯುವಕ, ಕೋಲ್ಕತ್ತಾದವನಂತೆ, ಅತ್ಯಂತ ಆದರದಿಂದ ಬಿಸಿ ಬಿಸಿಯಾದ ರುಚಿಯಾದ ಊಟ ಬಡಿಸಿದಾಗ ಆತನೊಬ್ಬ ದೇವದೂತನಂತೆ ನಮಗೆ ಕಂಡ. ಕಳೆದ ರಾತ್ರಿಯಲ್ಲಿ ಯಾವುದೋ ಊರಿನಲ್ಲಿ ಒಂದು ಮೀನು ಫ್ರೈ ತಿಂದಿದ್ದು ಬಿಟ್ಟರೆ ಏನನ್ನೂ ತಿಂದಿರಲಿಲ್ಲ. ಬ್ಯಾಗಲಿದ್ದ ಬಿಸ್ಕತ್ತು, ಕುರುಕಲು ತಿಂಡಿಗಳು ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗಿದ್ದವು.

(ಔನಿಯಟಿ (Auniati) ಸತ್ರದ ಒಳಗೆ...)

ಗುವಾಹಟಿಯಿಂದ ಹೊರಡುವಾಗಲೇ ಮಜೂಲಿಯಲ್ಲಿ ಒಂದು ವಾಹನ ತಗೊಂಡು ಇಡೀ ದಿನ ದ್ವೀಪ ಸುತ್ತುವ ಆಲೋಚನೆ ಮಾಡಿದ್ದೆವು. ಸಾಧ್ಯವಾದರೆ ಅಲ್ಲಿಯ ಮೂಲನಿವಾಸಿಗಳ ಮನೆಯಲ್ಲಿ ಅವರದೇ ಶೈಲಿಯ ಊಟ ಮಾಡಬೇಕೆಂದಿದ್ದೆವು. ಆದರೆ ಈ ಲಟಾರಿ ಬಸ್ಸಿನ ದೆಸೆಯಿಂದ ನಮ್ಮ ಯೋಚನೆ ಉಲ್ಟಾ ಆಗಿತ್ತು. ಈಗ ನಮ್ಮಲ್ಲಿ ಹೆಚ್ಚೆಂದರೆ ಎರಡು ತಾಸು ಸಮಯವಿತ್ತು. ನಮ್ಮ ಸಮಸ್ಯೆಯನ್ನು ನಮಗೆ ಅನ್ನ ನೀಡಿದ ಯುವಕನಲ್ಲಿ ತೋಡಿಕೊಂಡಾಗ ಆತ ಮಹಡಿ ಮೇಲಿನಿಂದಲೇ, ಕೆಳಗಿದ್ದ ಕಾರಿನವನಿಗೆ ಏನೋ ಹೇಳಿ ನಮ್ಮತ್ತ ತಿರುಗಿ ‘ಆ ಕಾರಿನಲ್ಲಿ ಹೋಗಿ, ಆತ ನಿಮ್ಮನ್ನು ಊರೆಲ್ಲಾ ಸುತ್ತಾಡಿಸಿ, ನಿಮ್ಮನ್ನು ಫೆರ್ರಿಗೆ ಸಕಾಲದಲ್ಲಿ ತಲುಪಿಸುತ್ತಾನೆ’ ಎಂದ.

ಮಜೂಲಿ ಜಿಲ್ಲೆಯ ಜನಸಂಖ್ಯೆ ಸುಮಾರು ಒಂದು ಲಕ್ಷದ ಅರವತ್ತೇಳು ಸಾವಿರ. ಕಾರಲ್ಲಿ ಕೂತ ಒಡನೆಯೇ ನಾವು ಭೇಟಿ ಕೊಟ್ಟದ್ದು ಇಲ್ಲಿಯ ಸತ್ರಗಳಿಗೆ. ಸತ್ರಗಳು ಮಜೂಲಿಯ ವೈಶಿಷ್ಟ್ಯಗಳಲ್ಲೊಂದು. 16ನೇ ಶತಮಾನದ ಸಮಾಜ ಸುಧಾರಕ ಶಂಕರದೇವ ಈ ದ್ವೀಪಕ್ಕೆ ಭೇಟಿ ನೀಡಿ 65 ಸತ್ರಗಳನ್ನು (ಧಾರ್ಮಿಕ ಕೇಂದ್ರ) ಸ್ಥಾಪಿಸಿ ವೈಷ್ಣವ ಧರ್ಮವನ್ನು ಪ್ರಚುರಪಡಿಸಿದರಂತೆ. ಈಗ ಅಲ್ಲಿ 22 ಸತ್ರಗಳಿವೆ. ಇವುಗಳು ಪುರಾತನ ಸಾಹಿತ್ಯ, ಸಂಸ್ಕೃತಿ, ಆಚಾರ–ವಿಚಾರಗಳನ್ನು ಪೋಷಿಸುತ್ತವೆ ಮಾತ್ರವಲ್ಲ ದ್ವೀಪದ ಪರಂಪರೆಯ ಗುರುತುಗಳಾದ ಕಲಾಕೃತಿ, ಆಯುಧಗಳನ್ನು ಸಂರಕ್ಷಿಸಿ ಇಡುವ ತಾಣಗಳಾಗಿವೆ.

ನನ್ನನ್ನು ಹೆಚ್ಚು ಆಕರ್ಷಿಸಿದ್ದು ಔನಿಯಟಿ (Auniati) ಸತ್ರ. ನಾವು ಹೋದಾಗ ಪುಟ್ಟ ಮಕ್ಕಳಿಗೆ ಗುರುಕುಲ ಮಾದರಿಯಲ್ಲಿ ಸ್ಥಳೀಯ ಜಾನಪದ ಶೈಲಿಯ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅಲ್ಲಿ ಅಭ್ಯಾಸ ಮಾಡುತ್ತಿದ್ದ ಸಂಗೀತದ ಆಲಾಪನೆ ಮತ್ತು ದೀಪದ ಪರಿಕರಗಳು ತುಂಬಾ ಆಸಕ್ತಿದಾಯಕವಾಗಿದ್ದವು. ಇದೆಲ್ಲಕ್ಕಿಂತಲೂ ನನಗೆ ಅಚ್ಚರಿಯನ್ನು ಉಂಟು ಮಾಡಿದ್ದು ಅಲ್ಲಿನ ಮುಖ್ಯ ಪೂಜಾರಿ\ಮೇಲ್ವಿಚಾರಕರು ಪರಿಚಯಿಸಿದ್ದ ತುಳಸಿ ಮರದ ದಿಮ್ಮಿಗಳು. ನನ್ನ ಜೀವಮಾನದಲ್ಲೇ ಮೂರಡಿಗಿಂತ ಎತ್ತರದ ತುಳಸಿ ಗಿಡವನ್ನು ನೋಡಿರಲಿಲ್ಲ. ಹಾಗಿರುವಾಗ ಅಷ್ಟು ದೊಡ್ಡ ಗಾತ್ರದ ಮರದ ದಿಮ್ಮಿಗಳನ್ನು ತೋರಿಸಿ ಇವು ತುಳಸಿ ಮರಗಳದ್ದು ಎಂದು ತೋರಿಸಿದರೆ ನನಗೆ ಹೇಗಾಗಬೇಡ!

ಸಮಯ ಕಮ್ಮಿ ಇತ್ತು. ಆದರೂ ಅದರ ಫೋಟೊ ಮತ್ತು ವಿಡಿಯೋ ತಗೊಂಡೆ. ಅಲ್ಲಿಂದ ಇನ್ನೊಂದು ಸತ್ರಕ್ಕೆ ಹೋದೆ ಅಲ್ಲಿಯ ಕಟ್ಟಡವನ್ನು ತುಳಸಿ ಮರದ ದಿಮ್ಮಿಗಳಿಂದಲೇ ಕಟ್ಟಿದ್ದರು!
ಅಲ್ಲಿಯ ಮೂಲನಿವಾಸಿಗಳು ಸರಳರು. ಸ್ಥಳೀಯವಾಗಿ ಹೇರಳವಾಗಿ ಸಿಗುವ ಬಿದಿರಿನಿಂದ ಕಟ್ಟಿರುವ ತಟ್ಟಿ ಮನೆಗಳು. ಅವು ನೆಲದಿಂದಲೇ ಗೋಡೆಯೆಬ್ಬಿಸಿ ಕಟ್ಟಿದ ಮನೆಗಳಲ್ಲ; ಸದಾ ನೀರಲ್ಲಿ ಮುಳುಗುವ ಪ್ರದೇಶವಾದ ಕಾರಣ ಎತ್ತರದ ಕಂಬಗಳ ಮೇಲೆ ಮನೆ ಕಟ್ಟಿಕೊಂಡಿರುತ್ತಾರೆ.

ಮಜೂಲಿ ಜನರಿಗೆ ವ್ಯವಸಾಯವೇ ಮುಖ್ಯ ವೃತ್ತಿ. ಭತ್ತ ಬಹುಮುಖ್ಯ ಬೆಳೆ. ಇಲ್ಲಿ ನೂರಕ್ಕೂ ಹೆಚ್ಚಿನ ಭತ್ತದ ತಳಿಗಳಿವೆ. ಯಾವುದೇ ರಾಸಾಯನಿಕ ಉಪಯೋಗಿಸದೆ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡುತ್ತಾರೆ. ಡೈರಿ, ಕುಂಬಾರಿಕೆ, ಕೈಮಗ್ಗ ನೇಕಾರಿಕೆ ಇತರ ಉಪ ಉದ್ಯೋಗಗಳು. ಸಾಲ್ಮರ ವಿಲೇಜ್ನಲ್ಲಿ ಕೈಗಳಿಂದಲೇ ಮಡಿಕೆ ಮತ್ತು ಮುಖವಾಡಗಳನ್ನು ತಯಾರಿಸುವ ಕುಶಲಕರ್ಮಿಗಳಿದ್ದಾರೆ. ಈ ಕಲೆಗಾರಿಕೆಯ ಬಗ್ಗೆ ಪುರಾತತ್ವ ಶಾಸ್ತ್ರಜ್ಞರು ಆಳವಾದ ಸಂಶೋಧನೆ ಮಾಡುತ್ತಿದ್ದಾರೆ. ಅವರ ಪ್ರಕಾರ ಇದು ಹರಪ್ಪಾ ಮೊಹೆಂಜೊದಾರೊ ನಾಗರಿಕತೆಯ ನಡುವಿನ ಮಿಸ್ಸಿಂಗ್ ಲಿಂಕ್.

ಮಜೂಲಿಯಲ್ಲಿ ನಡೆಯುತ್ತಿದ್ದ ನಮಾಮಿ ಬ್ರಹ್ಮಪುತ್ರ ಉತ್ಸವವನ್ನು ಕಾರಿನಲ್ಲೇ ನೋಡುತ್ತಾ ಫೆರ್ರಿ ನಿಲ್ಲುವ ಜಾಗಕ್ಕೆ ಬಂದೆವು. ಹಾಗೆ ಬರುತ್ತಿರುವಾಗ ಗೊತ್ತಾಯ್ತು, ಬ್ರಹ್ಮಪುತ್ರದ ಹರವು ಎಷ್ಟು ದೊಡ್ಡದೆಂದು. ನದಿ ದಂಡೆಯ ಮೇಲೆಯೇ ನಾವು ಆರು ಕಿ.ಮೀ ಬಂದೆವು. ಫೆರ್ರಿ ನಿಲ್ಲುವ ಜಾಗದಲ್ಲಿ ಚಹಾ ಅಂಗಡಿ ಸೇರಿದಂತೆ ಹಲವಾರು ಅಂಗಡಿಗಳಿದ್ದವು.

ಫೆರ್ರಿಯಲ್ಲಿ ಕುಳಿತು ನೋಡಿದಾಗ, ನೀರು ಎಲ್ಲೆಲ್ಲೂ ನೀರು... ಹಿಂದೆ ತಿರುಗಿದರೆ ಮಜೂಲಿ ಬರಬರುತ್ತಾ ಚುಕ್ಕೆಯಾಗಿ ನೀರಿನಲ್ಲಿ ಲೀನವಾಯ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.