ಮಾತೃ ಎಂಬ ಪರಿಕಲ್ಪನೆ ತಾಯಿಯನ್ನು ಮಾತ್ರವೇ ಅಲ್ಲ, ಸಮೀಪದ ಪರಿಸರವನ್ನು ಕೂಡ ಒಳಗೊಂಡುದು. ಮಕ್ಕಳು ಆಟದ ಮೂಲಕವೇ ಮಾತು ಕಲಿಯಬೇಕು. ಹಾಗೆ ಕಲಿತರೆ ಭಾಷೆ ಅನ್ನುವುದೊಂದು ಎಂದೂ ಮರೆಯದ ಅನುಭವವಾಗುತ್ತದೆ.

ವಿಶ್ವ ಮಾತೃಭಾಷಾ ದಿನ: ಇದೊಂದು ಒಳ್ಳೆಯ ಸಂಗತಿ. ಮಾತೃಭಾಷೆ ಎಂಬ ಕಲ್ಪನೆಯ ಮಹತ್ವವನ್ನು ಮತ್ತೆ ಮತ್ತೆ ನಮಗೆ ಮನದಟ್ಟು ಮಾಡಿಕೊಡುವಂಥದು. ಈ ಕುರಿತು ಯೋಚಿಸುವುದಕ್ಕೆ ಒಂದು ಅವಕಾಶ. ಯಾಕೆಂದರೆ ಇದರ ಕುರಿತು ಯೋಚಿಸುವ ಅಗತ್ಯ ಈಗ ಬಂದಿದೆ. ಮಾತೃಭಾಷೆಯೆಂದರೆ ಮಗುವಿಗೆ ತಾಯಿಯಿಂದ ಸಿಗುವ ಮೊದಲ ಭಾಷೆ. ಅದು ಪರಿಸರ ಭಾಷೆಯೂ, ಶಿಕ್ಷಣ ಮಾಧ್ಯಮವೂ ಆಗಿದ್ದರೆ ಬಹಳ ಒಳ್ಳೆಯದು; ಆದರೆ ನಿಜದಲ್ಲಿ ಹಾಗಿರುವುದಿಲ್ಲ.

ಈ ಕುರಿತು ಸಾಕಷ್ಟು ಚರ್ಚೆಗಳು ಈಗಾಗಲೇ ನಡೆದಿವೆ. ಮಕ್ಕಳಿಗೆ ಮಾತೃಭಾಷೆಯಲ್ಲೇ ಹೈಸ್ಕೂಲ್ ತನಕದ ಶಿಕ್ಷಣ, ಕನಿಷ್ಠ ಪ್ರಾಥಮಿಕ ಹಂತದವರೆಗಿನ ಶಿಕ್ಷಣವಾದರೂ ದೊರಕಬೇಕು, ಅದರಿಂದ ಮಕ್ಕಳ ಜ್ಞಾನವಿಕಾಸಕ್ಕೆ ಅನುಕೂಲವಾಗುತ್ತದೆ, ಅವರಲ್ಲಿ ತಬ್ಬಲಿತನ ಮೂಡುವುದಿಲ್ಲ... ಇತ್ಯಾದಿ ಜಿಜ್ಞಾಸೆಗಳು ನಡೆದಿವೆ. ಬಹು ಭಾಷಾ ಮತ್ತು ಉಪಭಾಷಾ ಜನಸಮೂಹಗಳಿರುವ ನಮ್ಮ ದೇಶದಲ್ಲಿ ಇದಕ್ಕಿರುವ ತೊಡಕುಗಳೂ ನಮಗೆ ಗೊತ್ತಿವೆ. ಎಲ್ಲರಿಗೂ ಗೊತ್ತಿರುವ ಈ ವಿಷಯಗಳ ಬಗ್ಗೆ ನಾನಿಲ್ಲಿ ಹೇಳಬಯಸುವುದಿಲ್ಲ; ಬದಲು, ಭಾಷೆಯೂ ಸೇರಿದಂತೆ ಚಿಕ್ಕ ಮಕ್ಕಳ ಆರಂಭದ ವಿದ್ಯಾಭ್ಯಾಸದ ಕುರಿತಾದ ಕೆಲವು ವಿಚಾರಗಳನ್ನು ಮಾತೃಭಾಷೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಲು ಬಯಸುತ್ತೇನೆ.

ಮೊತ್ತ ಮೊದಲನೆಯದಾಗಿ ಮಕ್ಕಳ ವಿಕಸನಕ್ಕೆ ಸಂಬಂಧಿಸಿದ ಒಂದು ವಿಷಯ: ಇಡೀ ಜೀವ ಸಮೂಹವನ್ನು ತೆಗೆದುಕೊಂಡರೆ, ಮನುಷ್ಯ ವರ್ಗದಲ್ಲಿ ಮಾತ್ರವೇ ಮಕ್ಕಳು ತಾಯಿ ತಂದೆಯರ ಮೇಲೆ, ಮುಖ್ಯವಾಗಿ ತಾಯಿಯ ಮೇಲೆ– ಹೆಚ್ಚಿನ ಕಾಲಾವಧಿ ಅವಲಂಬಿತರಾಗುತ್ತಾರೆ ಎಂದು ಜೀವವಿಜ್ಞಾನಿ ಡೆಸ್ಮಂಡ್ ಮೋರಿಸ್ ಒಂದೆಡೆ ಹೇಳುತ್ತಾನೆ. ಮನುಷ್ಯರ ಹೊರತಾದ ಇತರ ಪ್ರಾಣಿಗಳನ್ನು ನೋಡಿದರೆ ಅಲ್ಲಿ ಮರಿಗಳು ಬಹು ಬೇಗನೆ ಸ್ವತಂತ್ರರಾಗುವುದು ಕಂಡುಬರುತ್ತದೆ. ಮನುಷ್ಯ ವರ್ಗದಲ್ಲಿ ಮಕ್ಕಳು ಸುಮಾರು ಆರೇಳು ವರ್ಷಗಳ ತನಕ ಹೆತ್ತವರನ್ನು ಅವಲಂಬಿಸಿರುತ್ತಾರೆ.

ಮನುಷ್ಯ ವರ್ಗ ಸಹಸ್ರ ಸಹಸ್ರ ವರ್ಷಗಳಿಂದ ವಿಕಸನವಾದುದೇ ಈ ರೀತಿಯಲ್ಲಿ. ಇದು ಹೀಗಿರಬೇಕಾದರೆ ಒಂದು ನಿಶ್ಚಿತ ಕುಟುಂಬ ವ್ಯವಸ್ಥೆ ಅಗತ್ಯ: ಪರಂಪರಾಗತವಾದ ಈ ವ್ಯವಸ್ಥೆಯೇ ತಂದೆ ತಾಯಿಯರಲ್ಲದೆ, ಅಜ್ಜ ಅಜ್ಜಿ, ಚಿಕ್ಕಪ್ಪ ಚಿಕ್ಕಮ್ಮ, ಅತ್ತಿಗೆ ಮಕ್ಕಳು ಎಲ್ಲರೂ ಒಟ್ಟಾಗಿ ಒಂದೇ ಮನೆಯಲ್ಲಿ ಒಂದೇ ಕುಟುಂಬವಾಗಿ ವಾಸಿಸುವಂಥ ವಿಧಾನ. ಆದರೆ ಇದೆಲ್ಲ ಈಚಿನ ದಿನಗಳಲ್ಲಿ ಇಲ್ಲದಾಗಿಬಿಟ್ಟಿದೆ. ಕೂಡುಕುಟುಂಬವೆನ್ನುವುದು ಡೈನಸಾರಸ್‌ನಂತೆ ಅಸ್ಥಿಪಂಜರದಲ್ಲಿ ಮಾತ್ರ ದೊರಕುವುದು. ಕಳೆದ ಅರ್ಧ ಶತಮಾನದಲ್ಲಿ ಇಡೀ ಜೀವನ ವ್ಯವಸ್ಥೆಯೇ ಬದಲಾಗಿದೆ. ಒಟ್ಟಾರೆಯಾಗಿ ನಾವು ‘ನಗರೀಕರಣ’ಕ್ಕೆ ಒಳಗಾಗಿದ್ದೇವೆ.

ನಗರೀಕರಣವೆಂದರೆ, ನ್ಯೂಕ್ಲಿಯರ್ ಫ್ಯಾಮಿಲಿ, ಗಂಡ ಹೆಂಡತಿ ಇಬ್ಬರೂ ಉದ್ಯೋಗಕ್ಕೆ ಹೊರ ಹೋಗುವುದು, ಮಕ್ಕಳನ್ನು ಇನ್ನೂ ಶೈಶವಾವಸ್ಥೆಯಲ್ಲೇ ಕ್ರೆಶ್ ಅರ್ಥಾತ್ ಅಂಗನವಾಡಿಗಳಿಗೆ ಹಾಕುವುದು, ಆದಷ್ಟೂ ಬೇಗನೆ ಅಕ್ಷರ ಸಂಸ್ಕೃತಿಗೆ ಒಳಗಾಗಿಸುವುದು, ಇತ್ಯಾದಿ. ತಾಯ್ತನದ ಅವಧಿಯೂ ಕಡಿಮೆಯಾಗಿದೆ. ಮಕ್ಕಳಿಗೆ ಮೊಲೆಯೂಡುವುದನ್ನು ಬೇಗನೆ ನಿಲ್ಲಿಸಲಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಮಕ್ಕಳು ಮತ್ತು ತಾಯಂದಿರ ನೇರ ಸಂಪರ್ಕದ ಅವಧಿ ದಾರುಣವಾಗಿ ಕಡಿಮೆಯಾಗುವುದು ಸಹಜವೇ. ಸಂಜೆ ವೇಳೆ ಅಂಗಳದಲ್ಲಿ ಸಾವಧಾನವಾಗಿ ಒಟ್ಟಿಗೆ ಮಾತನಾಡುತ್ತ ಕಾಲ ಕಳೆಯುತ್ತಿದ್ದ ಪರಿಸರ ಈಗ ಇಲ್ಲ; ಜನರು ಸೊರಗಿ ಆದಷ್ಟು ಬೇಗ ನಿದ್ದೆಗೆ ಜಾರುತ್ತಾರೆ. ಹೀಗಿರುತ್ತ ಮಾತೃಭಾಷೆ ಮಕ್ಕಳಿಗೆ ಸಿಗುವುದು ಯಾವಾಗ?

ಯಾವುದೇ ಜೀವಂತ ಭಾಷೆಗೆ ಮಕ್ಕಳ ಬಾಲಭಾಷೆಯ ಸ್ತರವೊಂದು ಬೇಕಾಗುತ್ತದೆ. ಪುರಂದರ ದಾಸರ ‘ಗುಮ್ಮನ ಕರೆಯದಿರೆ’ ಇದಕ್ಕೊಂದು ಒಳ್ಳೆಯ ಉದಾಹರಣೆ. ಈ ಪದ್ಯದಲ್ಲಿ ಬರುವ ಹಲವು ಪದಗಳು (‘ಗುಮ್ಮ’, ‘ಅಮ್ಮಿ’, ‘ಮಮ್ಮು’, ‘ಚಿಣ್ಣ’, ‘ಆವು’) ಕನ್ನಡದ ಬಾಲಭಾಷೆಗೆ ಸೇರಿದವು. ಬಾಲ ಭಾಷೆ ಕರಗುವುದು ಭಾಷೆಯೊಂದರ ಅವನತಿಯ ಲಕ್ಷಣ ಎಂದು ಗುರುತಿಸಲಾಗಿದೆ. ಬಾಲ ಭಾಷೆಯೆಂದರೆ ಮಕ್ಕಳ ಜೊತೆ ತಾಯಿ ಮಾತಾಡುವ ಪ್ರಭೇದ; ಮಕ್ಕಳ ಜೊತೆ ತಾಯಿಗಿರುವ ಸಮಯವೇ ಕಡಿಮೆಯಾದಾಗ ಈ ಭಾಷಾಪ್ರಭೇದಕ್ಕೆ, ಹಾಗೂ ಅದು ರೂಪಿಸುವ ‘ಬಾಂಡಿಂಗ್’ಗೆ’ (ಕರುಳು ಸಂಬಂಧಕ್ಕೆ) ಅವಕಾಶವಾದರೂ ಎಲ್ಲಿದೆ? ಭಾಷೆಯನ್ನು ಮಕ್ಕಳು ಕಲಿಯುವುದು ಆಟ, ಊಟ, ಪಾಠ, ಸ್ನಾನ ಮುಂತಾದ ದೈನಂದಿನ ಚಟುವಟಿಕೆಗಳಲ್ಲಿ.

ಈ ಚಟುವಟಿಕೆಗಳು ಅಂಗನವಾಡಿಗಳಲ್ಲಿ ಇರಬಹುದಾದರೂ ಅಲ್ಲಿ ‘ತಾಯಿ’ ಇರುವುದಿಲ್ಲ. ಆರೈಕೆ ಇರಬಹುದು, ಆದರೆ ಮಮತೆ ಇರುವುದಿಲ್ಲ. ಅದೇ ರೀತಿ, ಮಕ್ಕಳನ್ನು ಹತ್ತಿರ ಕೂಡಿಸಿ ಕತೆ ಹೇಳುವ, ಪದ್ಯ ಕಲಿಸುವ ಅಜ್ಜ ಅಜ್ಜಿ ಈಗ ಅಪರೂಪ. ಹೀಗೆ ಮಕ್ಕಳು ಭಾವನೆಯ ಒಂದು ಮುಖ್ಯ ಆಯಾಮದಿಂದ ಆರಂಭದಲ್ಲೇ ವಂಚಿತರಾಗುತ್ತಿದ್ದಾರೆ. ಇದರರ್ಥ ತಾಯಿಯ ಸಂಪರ್ಕ ಕಡಿಮೆಯಾಗಿರುವುದರ ಜೊತೆಯಲ್ಲೇ ಅದರ ಗುಣಮಟ್ಟ ಕೂಡ ಕಡಿಮೆಯಾಗಿದೆ ಎಂದು. ಇದು ಇಂದಿನ ಮಕ್ಕಳಿಗೆ ಆಗಿರುವ ಇಮ್ಮಡಿ ನಷ್ಟ. ಇದರಿಂದಾಗಿ ಮಗುವಿನ ಮಾನಸಿಕ ವಿಕಸನಕ್ಕೆ ಆಘಾತವುಂಟಾಗಿದೆ ಎನಿಸುತ್ತದೆ.

ಮಕ್ಕಳ ಪ್ರಶ್ನೆ ಬಂದಾಗ ನಮಗೆ ನಮ್ಮದೇ ಬಾಲ್ಯದ ನೆನಪಾಗುವುದು ಸಹಜ. ನನ್ನ ಕಾಲದಲ್ಲಿ ನನ್ನ ಪರಿಸರದಲ್ಲಿ ನಮ್ಮ ಆಟಿಕೆಗಳನ್ನು ನಾವೇ ತಯಾರು ಮಾಡಿಕೊಳ್ಳುತ್ತಿದ್ದೆವು. ಅದು ‘ರೆಡಿ ಮೇಡ್’ ವಸ್ತುಗಳ ಸಂಸ್ಕೃತಿಯಾಗಿರಲಿಲ್ಲ. ನಾವು ರಬ್ಬರ್ ಚೆಂಡುಗಳನ್ನು ಕಾಣುತ್ತಿದ್ದುದು ವಾರ್ಷಿಕ ಸಂತೆಗಳಲ್ಲಿ ಮಾತ್ರ; ಅಲ್ಲಿ ಬೆಲೂನುಗಳನ್ನು, ಪೀಪಿಗಳನ್ನು ಕೊಳ್ಳುತ್ತಿದ್ದೆವು. ಬೆಲೂನು ಊದಿಕೊಂಡು ಮನೆ ತಲಪುವಷ್ಟರ ಹೊತ್ತಿಗೆ ಅವು ಒಡೆದೂ ಹೋಗುತ್ತಿದ್ದವು. ನಾವು ಕೂಡ ಚೆಂಡಾಡುತ್ತಿದ್ದೆವು, ಆದರೆ ಬಾಳೆ ನಾರಿನಿಂದ ನಾವು ಸ್ವತಹ ಕಟ್ಟಿದ ಚೆಂಡನ್ನು ಉಪಯೋಗಿಸಿ. ಬಿದಿರು ಅಥವಾ ಗಾಮಟೆ ಗೆಲ್ಲಿನಿಂದ ‘ಬೆಡಿ’ ತಯಾರಿಸುತ್ತಿದ್ದೆವು.

ಇಂಥ ಬೆಡಿಗೆ ಗುಂಡುಗಳಾಗಿ ಬಳಸುತ್ತಿದ್ದುದು ಕಾಡು ಗಿಡಗಳಲ್ಲಿ ತಾವಾಗಿ ಲಭಿಸುತ್ತಿದ್ದ ಕಾಯಿಗಳನ್ನು. ಇಲ್ಲವೇ ಕಾಗದವನ್ನು ಒದ್ದೆ ಮಾಡಿ ನಾವೇ ತಯಾರಿಸಿದ ಹರಳುಗಳನ್ನು. ಇನ್ನು ಬಿಲ್ಲು, ಬಾಣ, ಕವಣೆ, ಗಿರಿಗಿಟಿ, ತೆಂಗಿನ ಗರಿಯ ರುಂ ರುಂ ಎಲ್ಲವೂ ನಮ್ಮ ತಯಾರಿಕೆಗಳೇ. ಮನುಷ್ಯರ ಮುಂಗೈಗಳಲ್ಲಿ ಅನೇಕಾನೇಕ ನರಗಳಿವೆ ಎಂದು ಜೀವವಿಜ್ಞಾನಿಗಳು ಹೇಳುತ್ತಾರೆ. ಅಂದಿನ ಮಕ್ಕಳು ಈ ನರಗಳಿಗೆ ಸಾಕಷ್ಟು ಕೆಲಸ ಕೊಡುತ್ತಿದ್ದರು. ಈ ಹಿನ್ನೆಲೆಯ ವೈವಿಧ್ಯ ಕೇವಲ ಆಟಿಕೆಗಳ ತಯಾರಿಕೆಗಳಿಗಷ್ಟೇ ಸೀಮಿತವಾಗಿರಲಿಲ್ಲ; ಇವುಗಳ ಜೊತೆಗೆ ನಾವು ಭಾಷೆಯನ್ನೂ ಕಲಿತುಕೊಳ್ಳುತ್ತಿದ್ದೆವು. ಅದೇ ನಮ್ಮ ಮಾತೃಭಾಷೆ– ಯಾಕೆಂದರೆ ಮಾತೃ ಎಂಬ ಪರಿಕಲ್ಪನೆ ತಾಯಿಯನ್ನು ಮಾತ್ರವೇ ಅಲ್ಲ, ಸಮೀಪದ ಪರಿಸರವನ್ನು ಕೂಡ ಒಳಗೊಂಡುದು. ಮಕ್ಕಳು ಆಟದ ಮೂಲಕವೇ ಮಾತು ಕಲಿಯಬೇಕು. ಹಾಗೆ ಕಲಿತರೆ ಭಾಷೆಯೆನ್ನುವುದೊಂದು ಎಂದೂ ಮರೆಯದ ಅನುಭವವಾಗುತ್ತದೆ.

ಮಕ್ಕಳು ಮೊದಲು ಮೌಖಿಕ ಭಾಷೆಗೆ (ಬಾಯಿಮಾತಿಗೆ), ನಂತರ ಅಕ್ಷರ ಭಾಷೆಗೆ (ಓದು ಬರಹಕ್ಕೆ) ತೆರೆದುಕೊಳ್ಳುವುದು ಸರಿಯಾದ ಕ್ರಮ; ಅಕ್ಷರ ಕಲಿಸುವ ಆತುರದಲ್ಲಿ ಮೌಖಿಕ ಭಾಷೆಯ ಕಾಲಾವಧಿ ಕುಂಠಿತಗೊಳ್ಳಬಾರದು. ಯಾಕೆಂದರೆ ಮೌಖಿಕ ಭಾಷೆ ಒಂದು ಇಡೀ ಸಂಸ್ಕೃತಿಯನ್ನು, ಜ್ಞಾನವಿಧಾನವನ್ನು ಮಗುವಿನ ಮುಂದೆ ನಿದನಿಧಾನವಾಗಿ ತೆರೆದಿಡುವ ಕೆಲಸ ಮಾಡುತ್ತದೆ. ಕತೆಗಳು, ಪುರಾಣಗಳು, ಪಳಮೆಗಳು, ಹಾಡುಗಳು, ಒಗಟುಗಳು, ಬೆಡಗಿನ ಪದಗಳು, ಗಾದೆಗಳು ಮಗುವಿಗೆ ಸಿಗುವುದೇ ಮೌಖಿಕ ಪರಂಪರೆಯಿಂದ ಅರ್ಥಾತ್ ಮಾತೃಭಾಷೆಯಿಂದ.

ಇಂಥ ಹಿನ್ನಲೆಯಿಲ್ಲದೆ ಬೆಳೆದ ಜನರಿಗೆ ಯಾವ ಗಾದೆಯೂ ಗೊತ್ತಿರುವುದಿಲ್ಲ; ಮಾತ್ರವಲ್ಲ, ಗಾದೆಗಳನ್ನು ಮಾತಿನ ಮಧ್ಯೆ ಹೇಳುವುದು ಕೀಳು ಅಭಿರುಚಿ, ಯಾಕೆಂದರೆ ಅದು ಗ್ರಾಮ್ಯ– ಎಂಬ ಭಾವನೆಯೂ ಇಂಥ ಜನರಲ್ಲಿ ಇದೆ. ಆದರೆ ಮಾತೃಭಾಷೆಯೆಂದರೆ ಮಗುವಿಗೆ ಒಂದು ಆಟವೂ ಹೌದು; ಇತರ ಭಾಷೆಗಳಲ್ಲಿ ಅದಕ್ಕೆ ಅಂತಹ ಸುಖ ಸಿಗುವುದಿಲ್ಲ. ಒಳಿತು ಕೆಡುಕು, ನ್ಯಾಯ ಅನ್ಯಾಯ, ಉಪಕಾರ ಅಪಕಾರ, ಬಡವ ಬಲ್ಲಿದ, ಸತ್ಯ ಅಸತ್ಯ ಮುಂತಾದ ಸರಳ ವೈರುಧ್ಯಗಳು ಮಗುವಿನ ಅರಿವಿಗೆ ಬರುವುದು ಅದು ಆಲಿಸುವ ಕಥನಗಳ ಮೂಲಕ, ಅರ್ಥಾತ್ ಮೌಖಿಕ ಸಂಸ್ಕೃತಿಯ ಮೂಲಕ. ಈ ತರದ ಮೌಖಿಕ ಹಿನ್ನೆಲೆ ಮನುಷ್ಯನ ವ್ಯಕ್ತಿತ್ವಕ್ಕೆ ಒಂದು ಭದ್ರವಾದ ಬುನಾದಿ. ನೇ ಪುಟಕ್ಕೆ...

ಮೌಖಿಕ (Orality) ಮತ್ತು ಅಕ್ಷರ (Literacy) ಸಂಸ್ಕೃತಿಗಳ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಅಮೆರಿಕನ್ ವಿದ್ವಾಂಸ ವಾಲ್ಟರ್ ಜೆ. ಓಂಗ್ ಪ್ರಕಾರ ಈ ಎರಡೂ ಕಥನ ಶೈಲಿಗಳ ನಡುವೆ ಸ್ಪಷ್ಟವಾದ ಭಿನ್ನತೆಗಳಿವೆ. ಉದಾಹರಣೆಗೆ, ಮೌಖಿಕ ಶೈಲಿ ಹೆಚ್ಚಾಗಿ ಒಂದಕ್ಕೊಂದು ಕೂಡಿಸುವ ರೀತಿಯದು (Additive), ಅಕ್ಷರ ಶೈಲಿ ಒಂದಕ್ಕೆ ಇನ್ನೊಂದನ್ನು ಅಧೀನವಾಗಿಸುವಂಥದು (Subordinate). ಓಂಗ್ ಬೈಬಲಿನ ಹಳೆ ಅನುವಾದ ಮತ್ತು ಹೊಸ ಅನುವಾದಗಳ ಹೋಲಿಕೆಗಳನ್ನು ಕೊಡುತ್ತ, ಇನ್ನೂ ಮೌಖಿಕ ಸಂಪ್ರದಾಯಕ್ಕೆ ಹತ್ತಿರವಿರುವ ಹಳೆ ಅನುವಾದದಲ್ಲಿ, ಕೂಡಿಸುವುದರ ಸೂಚನೆಯಾದ ‘and’ ಎಂಬ ಪದವನ್ನು ವಾಕ್ಯಗಳ ಮೇಲೆ ವಾಕ್ಯಗಳನ್ನು ಕೂಡಿಸಲು ಹೇಗೆ ಬಳಸಲಾಗಿದೆ, ಇದಕ್ಕೆ ವಿರುದ್ಧವಾಗಿ ಹೊಸ ಅನುವಾದದಲ್ಲಿ ಒಂದು ಪ್ರಧಾನ ವಾಕ್ಯಕ್ಕೆ ಇತರ ವಾಕ್ಯಗಳನ್ನು ಅಧೀನ ವಾಕ್ಯಗಳಾಗಿ ಜೋಡಿಸುವುದು ಹೇಗೆ ಕಂಡುಬರುತ್ತದೆ ಎನ್ನುವುದನ್ನು ತೋರಿಸಿಕೊಡುತ್ತಾನೆ.

ಎಲ್ಲಾ ಭಾಷೆಗಳಲ್ಲಿನ ಜಾನಪದ ಕತೆಗಳಲ್ಲೂ ನಾವೀ ಕೂಡಿಸುವ ಪ್ರಕ್ರಿಯೆಯನ್ನು ಕಾಣಬಹುದಾಗಿದೆ. ಅದೇ ರೀತಿ ಭಾಷಾಭೇದವಿಲ್ಲದೆ ಅಕ್ಷರ ಶೈಲಿಯ ಕಥನದಲ್ಲಿ ವಾಕ್ಯಗಳನ್ನು ಜೋಡಿಸಲು ಅಧೀನತೆಯ ವಿನ್ಯಾಸವೇ ಸರ್ವತ್ರ ಬಳಕೆಯಾಗುವುದನ್ನೂ ನೋಡಬಹುದು. ಮೌಖಿಕ ಶೈಲಿಯನ್ನು ದೇಸೀ ಎಂದು ಕರೆಯುವುದೂ ಇದೆ: ಇದರಲ್ಲಿ ಕೇವಲ ವಾಕ್ಯ ವಿಧಾನವೇ ಅಲ್ಲ, ಪದಗಳು ಸಹಾ ಹೆಚ್ಚೆಚ್ಚು ಆಡು ಮಾತಿನವು. ಒಂದು ಭಾಷೆಯ ಮೂಲ ಪದಗಳನ್ನು ಬಳಸಲು ಈ ಶೈಲಿ ಇಷ್ಟಪಡುತ್ತದೆ. ಅಕ್ಷರ ಶೈಲಿಗೆ ಮೂಲದ ಹಂಗಿಲ್ಲ; ಅದು ಯಾವುದು ಅಗತ್ಯವೋ ಅದನ್ನು ಎಲ್ಲಿಂದ ಬೇಕಾದರೂ ಪಡೆಯುತ್ತದೆ, ಬಳಸುತ್ತದೆ; ಕೆಲವು ಸಲ ಹೊಸ ಹೊಸ ಪರಿಕಲ್ಪನೆಗಳನ್ನು ರೂಪಿಸಲು ನವೀನ ಪದಗಳನ್ನು ಹೊಸೆಯುತ್ತದೆ ಕೂಡ.

ಇನ್ನು ಮೌಖಿಕ ಶೈಲಿ ಸ್ಮೃತಿಯನ್ನು ಆಧರಿಸಿರುವುದರಿಂದ, ಸ್ಮೃತಿ ಸಹಾಯಕವಾದ ಸಮತೋಲ, ಅನುಪ್ರಾಸವೇ ಮುಂತಾದ ತಂತ್ರಗಳನ್ನು ಬಳಸುತ್ತದೆ; ಅಕ್ಷರ ಶೈಲಿ ಸ್ಮೃತಿಯ ಕಡೆ ಗಮನ ಕೊಡುವುದಿಲ್ಲ. ಅದಕ್ಕೆ ಯಾವಾಗ ಬೇಕಾದರೂ ಹಿಂದಕ್ಕೆ ಬಂದು ನೋಡಿಕೊಳ್ಳುವ ಸಾಧ್ಯತೆಯಿದೆ. ಹೀಗೆ ಈ ಎರಡೂ ಶೈಲಿಗಳು ಭಿನ್ನ ಭಿನ್ನವಾಗಿವೆ ಎನ್ನುವುದರಲ್ಲಿ ಸಂದೇಹವಿಲ್ಲ. ಒಟ್ಟಾರೆಯಾಗಿ, ಮೌಖಿಕ ಶೈಲಿ ತೌಲನಿಕವಾಗಿ ಹೆಚ್ಚು ಸರಳ, ಅಕ್ಷರ ಶೈಲಿ ಹೆಚ್ಚು ಸಂಕೀರ್ಣ. ನಾವಿಲ್ಲಿ ಒಂದು ಶೈಲಿಯನ್ನು ಎತ್ತಿ ಹಿಡಿದು ಇನ್ನೊಂದನ್ನು ಕೆಳಗಿಳಿಸುವುದು ಬೇಡ. ಎರಡೂ ಶೈಲಿಗಳಿಗೆ ಅವುಗಳದೇ ಅದ ಅಗತ್ಯವಿದೆ. ಚಿಕ್ಕ ಮಕ್ಕಳ ದೃಷ್ಟಿಯಿಂದ ನೋಡುವುದಾದರೆ, ಅವರು ಅಕ್ಷರ ಶೈಲಿಯನ್ನು ಶಾಲೆಗಳಲ್ಲಿ ಓದಿ ಬರೆದು ಕಲಿಯಬೇಕಾಗುತ್ತದೆ; ಬರೇ ಕೇಳುವುದರಿಂದ, ನುಡಿಯುವುದರಿಂದ ಅದು ಬರುವುದಿಲ್ಲ.

ಇದರರ್ಥ ಮಕ್ಕಳನ್ನು ಅಕ್ಷರ ವಿದ್ಯೆಯಿಂದ ದೂರವಿಡಬೇಕೆಂದೋ, ಆದಷ್ಟೂ ಬೇಗನೆ ಅವರನ್ನು ಅದಕ್ಕೆ ಒಳಪಡಿಸಬೇಕೆಂದೋ ಅಲ್ಲ; ಮೌಖಿಕ ಶೈಲಿಯಿಂದ ದೊರಕುವುದೆಲ್ಲವನ್ನೂ ಪಡೆದುಕೊಳ್ಳಲು ಅವರಿಗೆ ಅನುವು (ಕಾಲಾವಧಿ) ನೀಡಬೇಕು ಎಂದು. ಸದ್ಯದ ಪರಿಸ್ಥಿತಿಯಲ್ಲಿ ಈ ಅವಧಿ ಬಹಳ ಕಿರಿದಾಗುತ್ತಿದೆ. ಹಿಂದಣ ವಿದ್ಯಾಭ್ಯಾಸದ ಜೊತೆ ಹೋಲಿಸಿದರೆ ಇದು ಗೊತ್ತಾಗುತ್ತದೆ. ಹಿಂದಣ ಕಾಲದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದುದು ಐದನೇ ವಯಸ್ಸಿನಲ್ಲಿ. ಅಷ್ಟರಲ್ಲಿ ಅವರಿಗೆ ಮನೆಮಾತು ಚೆನ್ನಾಗಿ ಬರುತ್ತಿತ್ತು; ಕೆಲವು ಮನೆಗಳಲ್ಲಿ ಸ್ವಲ್ಪ ಅಕ್ಷರಾಭ್ಯಾಸವೂ ಸಿಕ್ಕಿರುತ್ತಿತ್ತು. ಮನೆಯಿಂದಲೇ ಶಾಲೆಗೆ ಹೋಗಿ ಬರುವ ಮಕ್ಕಳಿಗಾದರೆ, ಮೌಖಿಕ ಭಾಷೆಯ ಒಂದು ಪ್ರಬಲವಾದ ಸೆಲೆ ಮನೆಯಲ್ಲಿ ಮತ್ತು ಪರಿಸರದಲ್ಲಿ ಯಾವಾಗಲೂ ಲಭ್ಯವಿರುತ್ತಿತ್ತು;

ಹಾಗೂ ಅಕ್ಷರ ವಿದ್ಯೆಯನ್ನು ಅವರು ನಿಧಾನವಾಗಿ ಶಾಲೆಯಲ್ಲಿ ಕರಗತ ಮಾಡಿಕೊಳ್ಳುತ್ತಿದ್ದರು. ಈಗ ಅಂಥ ನಿಧಾನ ಮಕ್ಕಳ ಜೀವನದಿಂದ ಮಾಯವಾಗಿಬಿಟ್ಟಿದೆ. ದೊಡ್ಡವರ ಜೀವನದಿಂದಲೂ! ಹುಟ್ಟಿದಾಗಲೇ ಮಕ್ಕಳನ್ನು ದೊಡ್ಡವರನ್ನಾಗಿ ಹೇಗೆ ಮಾಡುವುದು ಎಂಬ ಆತುರ ಎಲ್ಲೆಡೆ ಕಾಣಿಸುತ್ತಿದೆ. ಈ ಒತ್ತಡ ಮಕ್ಕಳಿಗೆ ಅವರ ಬಾಲ್ಯ ಜೀವನ ಸಿಗದಂತೆ ಮಾಡುತ್ತಿದೆ. ಹಿಂದೆ ನರ್ಸರಿ, ಪ್ರಿಸ್ಕೂಲ್, ಎಲ್‌ಕೆಜಿ, ಕೆಜಿ ಎಂಬ ಸಂಗತಿಗಳೇ ಇರಲಿಲ್ಲ ಎನ್ನುವುದನ್ನು ನೆನಪಿಸಿಕೊಳ್ಳೋಣ. ಅಷ್ಟಕ್ಕೆ ಅವು ಕೆಟ್ಟವು ಎಂದೋ ಅಗತ್ಯವಿಲ್ಲ ಎಂದೋ ಅರ್ಥವಲ್ಲ. ಆದರೆ ಇವೆಲ್ಲವೂ ಮಕ್ಕಳನ್ನು ಮಾತೃಭಾಷೆಯಿಂದ (ಮನೆಮಾತಿನಿಂದ) ದೂರ ಒಯ್ಯುತ್ತಿವೆ. ಇಲ್ಲಿ ನಾನು ‘ಮಾತೃಭಾಷೆ’ (ಅಥವಾ ‘ಮನೆಮಾತು’) ಎಂಬ ಪ್ರಮೇಯವನ್ನು ವಿಶಾಲವಾದ ಅರ್ಥದಲ್ಲಿ ಬಳಸುತ್ತಿದ್ದೇನೆ. ಮಾತೃಭಾಷೆ ಒಂದು ಮಾತೃಕೆ.

ಮಕ್ಕಳ ಶೈಶವ ಮತ್ತು ಬಾಲ್ಯಕಾಲವೆಂದರೆ ವಿದ್ಯಮಾನೀಯ (Phenomenal) ಜಗತ್ತನ್ನು ವೀಕ್ಷಿಸುವ ಕಾಲವೂ ಹೌದು: ಸೂರ್ಯ ಮೂಡುವುದು, ಮುಳುಗುವುದು, ಮೋಡ ಕಾಣಿಸುವುದು, ಮಳೆಯಾಗುವುದು, ಮಿಂಚು ಮಿಂಚುವುದು, ಗುಡುಗು ಕೇಳಿಸುವುದು, ಮುಂತಾದ ವಿದ್ಯಮಾನಗಳನ್ನು ಮಕ್ಕಳು ಗಮನಿಸುತ್ತಾರೆ. ಬಲೆ ಕಟ್ಟುವ ಜೇಡ, ಹುತ್ತ ಕಟ್ಟುವ ಇರುವೆ, ಜೇನು ಮಾಡುವ ಜೇನ್ನೊಣ, ಆಕಾಶದ ನಕ್ಷತ್ರಗಳು, ಮತ್ತು ನಕ್ಷತ್ರದಂತೆಯೇ ಮಿಂಚುವ ಆದರೆ ನಕ್ಷತ್ರವಲ್ಲದ ಬೆಂಕಿ ಹುಳ, ಇತ್ಯಾದಿ ಸಾವಿರಾರು ಸಂಗತಿಗಳು ಮಕ್ಕಳ ಕುತೂಹಲವನ್ನು ಕೆರಳಿಸುತ್ತವೆ. ವಿದ್ಯಮಾನೀಯ ಜಗತ್ತೆಂದರೆ ಇದೇ;

ಇದರ ಬಗ್ಗೆ ಅವರಿಗೆ ಸರಿಯಾದ (ಎಂದರೆ ಕಾರ್ಯ ಕಾರಣ ಸಂಬಂಧದ) ವಿವರಗಳು ಇರಲಾರವು. ವಿವರಗಳು ಸಿಗುವುದು ‘ಯಾಕೆ?’ ಎಂಬ ಪ್ರಶ್ನೆಯೊಂದಿಗೆ. ಇದು ಮುಂದೆ ಸಿಗುವ, ಸಿಗಬೇಕಾದ ಅರಿವು. ಆದರೆ ಈ ಅರಿವು ಮೂಡುವುದಕ್ಕೆ ಸಹಕಾರಿಯಾಗಿ ಮೊದಲಿನ ಜೀವನನುಭವಗಳು ಮುಖ್ಯ. ಹಳ್ಳಿಯ ಮಕ್ಕಳಿಗೆ ಈ ಅನುಭವಗಳು ಸಹಜವೆಂಬಂತೆ ಬರುತ್ತವೆ; ನಗರದ ಮಕ್ಕಳು ಈ ನಿಟ್ಟಿನಿಂದ ವಂಚಿತರೇ ಸರಿ. ಅಕ್ಷರ ಸಂಸ್ಕೃತಿಗೆ ಕಾಲಿಡುವ ಮೊದಲೇ ಮಕ್ಕಳಿಗೆ ಇಂಥ ಐಂದ್ರಿಯಜನ್ಯ ಅನುಭವಗಳು ದೊರಕಿರಬೇಕು. ಮಕ್ಕಳ ಪೂರ್ಣ ಪ್ರಮಾಣದ ಬಾಲ್ಯದಿಂದ ಮಾತ್ರ ಇದು ಸಾಧ್ಯ. ಅಂಥ ಮಕ್ಕಳಿಗೆ ಮುಂದೆ ಅಕ್ಷರ ಸಂಸ್ಕೃತಿಗೆ ತೆರೆದುಕೊಳ್ಳಲು ಸುಲಭವಾಗುತ್ತದೆ, ಯಾಕೆಂದರೆ ಅದು ಅವರಿಗೆ ಹೆಚ್ಚು ಅರ್ಥಪೂರ್ಣವಾಗಿ ತೋರುತ್ತದೆ. ನನ್ನ ದೃಷ್ಟಿಯಲ್ಲಿ ‘ಮಾತೃಭಾಷೆಯ ಪ್ರಣಾಳಿಕೆ’ (ಪ್ಯಾರಡೈಮ್) ಈ ಆಯಾಮವನ್ನೂ ಒಳಗೊಂಡಿದೆ.

ಇದರ ಜೊತೆಗೇ, ನಮ್ಮ ‘ರೆಡಿ ಮೇಡ್’ ಸಂಸ್ಕೃತಿಯಿಂದಾಗಿ, ಮಕ್ಕಳು ಸ್ವತಹ ಕೈ ಉಪಯೋಗಿಸಿ ವಸ್ತುಗಳನ್ನು ತಯಾರಿಸುವುದು ಈಗ ಬಹಳ ಅಪರೂಪ. ಅಂಗಿಗೆ ಒಂದು ಗುಂಡಿ ಹೊಲಿಯುವುದಕ್ಕೆ ಕೂಡ ಅವರಿಗೆ ಬರುವುದಿಲ್ಲ; ಗುಂಡಿಯ ಬದಲು ಝಿಪ್ ಬಂದಿರುತ್ತೆ. ಅವರಿಗೆ ಬಹುಶಃ ಅದರ ಅಗತ್ಯವೂ ಇರುವುದಿಲ್ಲ! ನಾನು ಪ್ರಥಮವಾಗಿ ಇಂಗ್ಲೆಂಡಿಗೆ ಹೊರಟಾಗ ನನ್ನ ಸೂಟ್‌ಕೇಸಿನಲ್ಲಿ ಸೂಜಿ ಮತ್ತು ದಾರದ ಉಂಡೆಯನ್ನು ಇರಿಸಿಕೊಂಡದ್ದು ನೆನಪಾಗುತ್ತದೆ! ಯಾಕೆಂದರೆ ನಾನು ಹಳ್ಳಿಯಲ್ಲಿ ಬೆಳೆದವನು. ಹಲವು ಕೆಲಸಗಳನ್ನು ಸ್ವಂತ ಕೈಯಿಂದಲೇ ಮಾಡಿದವನು. ಶಾಲೆಗೆ ಹೋಗುತ್ತಿರುವಾಗಲೂ ಅದೆಷ್ಟು ‘ಮ್ಯಾನ್ಯುವಲ್’ ಕೆಲಸಗಳಿದ್ದವು! ಉದಾಹರಣೆಗೆ, ಪೆನ್ನಿಗೆ ಶಾಯಿ ತುಂಬಿಸುವುದೂ ಒಂದು ಕೌಶಲ್ಯವೇ ಸರಿ!

ಇಂದಿನ ಮಕ್ಕಳ ಮಟ್ಟಿಗೆ ಕರಕುಶಲತೆಯ ಕೊರತೆಯೂ ಒಂದು ಬಹು ದೊಡ್ಡ ಕೊರತೆಯೇ ಎಂದು ನನಗನಿಸುತ್ತದೆ. ಅವರು ಕೈ ಬಳಸುವುದಿಲ್ಲವೇ? ಖಂಡಿತ ಬಳಸುತ್ತಾರೆ, ಆದರೆ ಅದು ಕಂಪ್ಯೂಟರ್ ಕೀಬೋರ್ಡ್ ಕುಟ್ಟುವುದಕ್ಕೇ ಹೆಚ್ಚು ಬಳಕೆಯಾಗುತ್ತಿದೆ. ಇದೂ ಒಂದು ಕುಶಲತೆಯೇ, ಹಾಗೂ ಇಂದಿನ ಮಕ್ಕಳಿಗೆ ಅತ್ಯಗತ್ಯವಾದ ಕುಶಲತೆ. ಆದರೆ ಕೈಯ ಬಳಕೆ ಇಷ್ಟಕ್ಕೆ ಸೀಮಿತವಾಗಬಾರದು. ಇದು ಮಾಹಿತಿ ಯುಗ. ಅತ್ಯಂತ ವೇಗವಾದುದು ಕೂಡ. ಸಂವಹನವೆಂಬುದು ಬಹಳ ಸುಲಭವಾಗಿದೆ. ಕಾಗದದ ಯುಗದಿಂದ ಕಾಗದವಿನಾ ಯುಗಕ್ಕೆ ಕಾಲಿಡುತ್ತಿದ್ದೇವೆ. ಜ್ಞಾನಗ್ರಹಿಕೆಗೆ ಮತ್ತು ಪ್ರಸರಣಕ್ಕೆ ಮಲ್ಟಿಮೀಡಿಯಾ ವಿಧಾನವನ್ನು ಬಳಸುತ್ತಿದ್ದೇವೆ.

ಮೊಬೈಲ್ ಎಂಬ ಬಹೂಪಯೋಗಿ ಅದ್ಭುತ ಸಾಧನವೊಂದು ಎಲ್ಲೆಡೆ ಕಾಣಿಸಿಕೊಂಡಿದೆ. ಇಂದಿನ ಮಕ್ಕಳಿಗೂ ಇವೆಲ್ಲ ಲಭ್ಯ. ಅವರು ವ್ಯವಹರಿಸಬೇಕಾದುದು ಮನುಷ್ಯರಿಗಿಂತ ಹೆಚ್ಚಾಗಿ ‘ಜಾಣ’ (smart) ಯಂತ್ರಗಳೊಂದಿಗೆ. ‘ಕೃತಕ ಜ್ಞಾನ’ (Artificial Intelligence), ‘ಕಾಲ್ಪನಿಕ ಸತ್ಯ’ (Virtual Reality) ಮುಂತಾದ ಪ್ರಮೇಯಗಳು ಬಂದು ಅರ್ಧ ಶತಮಾನವೇ ಕಳೆದಿದೆ. ಮಕ್ಕಳ ಮುಂದೆ ಇದೊಂದು ಅದ್ಭುತ ಲೋಕ ತೆರೆದುಕೊಂಡಿದೆ. ನಾವೇ ಅವರನ್ನು ಈ ಲೋಕಕ್ಕೆ ತಳ್ಳಲು ಆತುರರಾಗಿದ್ದೇವೆ. ಇದರ ಪರಿಣಾಮವೇನು? ಎಲ್ಲಿಗೆ ಕರೆದೊಯ್ಯುತ್ತದೆ? ಎನ್ನುವುದು ಯಾರಿಗೂ ತಿಳಿಯದು. ನಾವು ಕಳೆದುಕೊಂಡದ್ದು ಹೆಚ್ಚೋ ಗಳಿಸಿರುವುದು ಹೆಚ್ಚೋ ಸ್ಪಷ್ಟವಿಲ್ಲ. ಸಹಜತೆ ಮತ್ತು ಕೃತಕತೆ ಎಂಬ ಭಿನ್ನತೆ ಪ್ರಶ್ನೆಗೆ ಒಳಗಾಗಿದೆ.

ಮಾತೃಭಾಷೆಯ ಮೌಖಿಕ ಸಂಸ್ಕೃತಿ ಮಕ್ಕಳ ಮನಸ್ಸಿಗೆ ಒಂದು ಅತ್ಯವಶ್ಯವಾದ ಸುರಕ್ಷಿತಾ ಭಾವವನ್ನು ಕೊಡುತ್ತಿತ್ತು. ಕೊಡುತ್ತಿತ್ತು ಎಂದು ಭೂತಕಾಲವನ್ನು ಬಳಸುತ್ತಿದ್ದೇನೆ, ಯಾಕೆಂದರೆ ಅದೀಗ ಬಹುತೇಕ ಮಾಯವಾಗಿದೆ. ಆದ್ದರಿಂದ ಮಕ್ಕಳ ಮನಃಸ್ವಾಸ್ಥ್ಯ ಇಲ್ಲದಾಗಿದೆ. ಜೀವನವು, ಕೀಲಿ ಕೊಟ್ಟು ಅತಿ ವೇಗದಲ್ಲಿ ಚಲಿಸಲು ಬಿಟ್ಟ ಒಂದು ಕಟ್ಟು ನಿಟ್ಟಿನ ಯಂತ್ರದಂತಾದರೆ ಇಂದಿನ ಇಲೆಕ್ಟ್ರಾನಿಕ್ ಯುಗದಲ್ಲಿ ನಮ್ಮ ಕಣ್ಣ ಮುಂದೆಯೇ ಅದು ಹಾಗಾಗುತ್ತಿದೆ. ಮನುಷ್ಯರು ಬಹು ಬೇಗನೆ ಸುಸ್ತಾಗುತ್ತಾರೆ. ಅಂಥಲ್ಲಿ ಸಹಜ ವಿರಾಮಕ್ಕೆ ಆಸ್ಪದವೇ ಇರುವುದಿಲ್ಲ, ಅಥವಾ ಇದ್ದರೆ ಅದು ಕೂಡ ವೇಳಾಪಟ್ಟಿಗೆ, ಪೂರ್ವನಿರ್ಧರಿತ ಯೋಜನೆಗಳಿಗೆ ಅನುಸಾರ ಇರುತ್ತದೆ.

ಆಕಸ್ಮಿಕಗಳಿಗೆ ಅವಕಾಶವೇ ಇರದ ಜೀವನ ಶುಷ್ಕವಾದುದು. ಅಂಥ ಕಡೆ ಮನುಷ್ಯರು ಬಹು ಬೇಗನೆ ಮಾನಸಿಕ ರೋಗಿಗಳಾಗಿ ಮಾರ್ಪಡುತ್ತಾರೆ. ಅವರಿಗೆ ಒಂದೆಡೆ ಕೂತು ಕನಸು ಕಾಣುವುದಕ್ಕೆ ಬಿಡುವಿರುವುದಿಲ್ಲ, ಯಾವ ಹೊಸ ಕಲ್ಪನೆಗಳಾಗಲಿ, ಸೃಜನಶೀಲ ಕ್ರಿಯೆಗಳಾಗಲಿ ಅವರಿಂದ ಸಾಧ್ಯವಾಗುವುದಿಲ್ಲ. ಬದುಕುವುದಕ್ಕೂ ಒಂದು ಕೈಪಿಡಿ ಬೇಕು ಎಂದಾದರೆ ಅದೆಂಥಾ ಬದುಕು ಎನಿಸುತ್ತದೆ. ಇಲ್ಲಿ ನಾನು ನೆನಪು ಮಾಡಿಕೊಳ್ಳುವುದು ಒಂದು ಘಟನೆ: ಕಾಲೇಜಿನಲ್ಲಿ ಒಮ್ಮೆ ನನಗೆ ಸ್ಪರ್ಧೆಯೊಂದರಲ್ಲಿ ಬಹುಮಾನವಾಗಿ ಬರ್ಟ್ರೆಂಡ್ ರಸೆಲ್ ಬರೆದ ’In Praise of Idleness’ ಎಂಬ ಪ್ರಬಂಧ ಸಂಕಲನ ದೊರಕಿತ್ತು. ನನಗೆ ಈ ಶೀರ್ಷಿಕೆಯೇ ಇಷ್ಟವಾಗಲಿಲ್ಲ;

ಯಾಕೆಂದರೆ ಸೋಮಾರಿತನ ನಮಗೆ ಸಹಜವಾಗಿ ಇದ್ದಂಥ ಗುಣವಾಗಿತ್ತು! ಬಟ್ರೆಂಡ್ ರಸೆಲ್ ಅದನ್ನು ನಮಗೆ ಕಲಿಸಬೇಕೇ, ಇದು ನಿದ್ದೆ ತೂಗುವವನಿಗೆ ಚಾಪೆ ಹಾಸಿಕೊಟ್ಟಂತಲ್ಲವೇ ಎನಿಸಿತು. ಆದರೆ ಆ ಶೀರ್ಷಿಕಾ ಲೇಖನದಲ್ಲಿ ರಸೆಲ್ ಹೇಳುವುದು ಸೃಜನಶೀಲ ವಿರಾಮದ ಬಗ್ಗೆ, ಹಾಗೂ ಅವನ ಮಾತಿನ ಅರ್ಥ ನನಗೀಗ ಗೊತ್ತಾಗುತ್ತದೆ. ‘ವಿಶ್ವ ಮಾತೃಭಾಷಾ ದಿನ’ದ ನೆಪದಲ್ಲಾದರೂ ನಾವು ಇಂಥ ಸಂಗತಿಗಳ ಕುರಿತು ಯೋಚಿಸಬೇಕಾಗಿದೆ. ಮುಖ್ಯವಾಗಿ ಮಕ್ಕಳನ್ನು ಮಾತೆಯರಿಗೆ ಮರಳಿಸುವುದು ಹೇಗೆಂದು, ಮಕ್ಕಳಿಗೆ ಸಹಜ ಬಾಲ್ಯ ಮತ್ತು ಮಾತೃಭಾಷೆಯ ಮೌಖಿಕ ಸಂಸ್ಕೃತಿ ದೊರಕಲೆಂದು. ಅದು ಸಾಧ್ಯವಾದರೆ ಮಾತೃಭಾಷೆ ತಾನಾಗಿಯೇ ಉಳಿದುಕೊಳ್ಳುತ್ತದೆ, ಅದರ ಜೊತೆಗೆ ಮಕ್ಕಳ ಜಗತ್ತು ಕೂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.