ಪ್ರಸ್ತುತದ ತಾತ್ವಿಕ ರಾಜಕೀಯ ವಾಗ್ವಾದ ಗಾಂಧಿ ಮತ್ತು ಅಂಬೇಡ್ಕರರನ್ನು ವಿರುದ್ಧ ದಿಕ್ಕುಗಳಿಗೆ ಮುಖಮಾಡಿ ನಿಂತ ತತ್ವಜ್ಞಾನಿಗಳಾಗಿ ಮತ್ತು ಜನನಾಯಕರನ್ನಾಗಿ ಬಿಂಬಿಸುತ್ತದೆ. ಇದರಿಂದಾಗಿ, ಭಾರತದಲ್ಲಿ ಒಂದನ್ನೊಂದು ತೀವ್ರವಾಗಿ ವಿರೋಧಿಸುವ ಎರಡು ರಾಜಕೀಯ ಬಣಗಳು ರೂಪುಗೊಂಡಿವೆ.

ಈ ಎರಡು ಬಣಗಳು ಪರಸ್ಪರ ಮುಖಾಮುಖಿಯಾಗಿ ಒಂದರ ಜೊತೆ ಇನ್ನೊಂದು ಸಂವಾದ ನಡೆಸುತ್ತಾ ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಇರುವ ಅಥವಾ ಇವೆ ಎಂದು ನಾವು ತಿಳಿದುಕೊಂಡಿರುವ ತಾತ್ವಿಕ ಹಾಗೂ ರಾಜಕೀಯ ಭಿನ್ನಮತಗಳ ಅನೇಕ ಸೂಕ್ಷ್ಮ ಆಯಾಮಗಳನ್ನು ಗ್ರಹಿಸುವ ಮತ್ತು ವಿಶ್ಲೇಷಿಸುವ ಬದಲಾಗಿ, ಒಂದನ್ನೊಂದು ಡಿಕ್ಕಿ ಹೊಡೆದು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಹಾಗೆ ಕಂಡುಬರುತ್ತವೆ. ಇದು ದುರದೃಷ್ಟಕರ ಮತ್ತು ಸಾಂಸ್ಕೃತಿಕವಾಗಿ ಅಪಾಯಕಾರಿಯಾದ ಬೆಳವಣಿಗೆ.

ಈ ಮಾತಿನ ಅರ್ಥ ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಯಾವುದೇ ಬಗೆಯಾದ ಭಿನ್ನಮತಗಳಿರಲಿಲ್ಲವೆಂದಲ್ಲ ಅಥವಾ ಈ ಭಿನ್ನಮತಗಳು ಮಹತ್ವವಾದವುಗಳಲ್ಲ ಎಂದೂ ಅಲ್ಲ. ಗಾಂಧಿ ಮತ್ತು ಅಂಬೇಡ್ಕರ್ ಬದುಕಿದ ಕಾಲಘಟ್ಟದಲ್ಲಿ ಭಾರತ ಎದುರಿಸುತ್ತಿದ್ದ ಸಮಸ್ಯೆಗಳನ್ನು ಈರ್ವರು ಮಹಾನುಭಾವರು ಗ್ರಹಿಸಿದ ರೀತಿಗಳು ಮೂಲಭೂತವಾಗಿ ಭಿನ್ನವಾಗಿದ್ದವು ಎನ್ನುವುದು ಗಾಂಧಿ–ಅಂಬೇಡ್ಕರ್ ಕುರಿತು ಮೇಲ್ಸ್ತರದ ವೀಕ್ಷಣೆಯನ್ನು ನಡೆಸಿದ ಎಲ್ಲರಿಗೂ ಅರಿವಾಗುತ್ತದೆ.

ಇವರಿಬ್ಬರು ಭಾರತೀಯ ಸಮಾಜವನ್ನು ವಿಶ್ಲೇಷಿಸಿದ ರೀತಿ, ಅದು ಎದುರಿಸುತ್ತಿದ್ದ ಸಮಸ್ಯೆಗಳನ್ನು ಗ್ರಹಿಸಿದ್ದ ಕ್ರಮ, ವಸಾಹತುಶಾಹಿ ಹಾಗೂ ಆಧುನಿಕತೆಗಳಿಗೆ (ಅಥವಾ ವಸಾಹತುಶಾಹಿ ಆಧುನಿಕತೆಗೆ) ಪ್ರತಿಕ್ರಿಯಿಸಿದ ವೈಖರಿ ಭಿನ್ನವಾಗಿದ್ದವು. ಈ ಭಿನ್ನತೆ ಅವರುಗಳು ತಮ್ಮ ತಮ್ಮ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹಿನ್ನೆಲೆಗಳಿಂದ ರೂಪಿಸಿಕೊಂಡ ದೃಷ್ಟಿಕೋನಗಳಿಗೆ ಸಂಬಂಧಿಸಿದ್ದು.

ಈ ಭಿನ್ನತೆಗಳನ್ನು ಅವುಗಳ ಎಲ್ಲಾ ಸೂಕ್ಷ್ಮತೆಗಳಲ್ಲಿ ಅರಿಯುವ ಅಗತ್ಯವಿದೆ. ಅಂತೆಯೇ, ಅವರ ಚಿಂತನೆಗಳಲ್ಲಿ ನಾವು ಅಷ್ಟಾಗಿ ಗಮನಿಸದೇ ಇರುವ ಸಾಮ್ಯತೆಗಳನ್ನು ಗುರುತಿಸುವ ಅವಶ್ಯಕತೆಯಿದೆ. ಜೊತೆಯಲ್ಲಿಯೇ, ತತ್ವಜ್ಞಾನಿಗಳಾಗಿ ಮತ್ತು ಜನ ನಾಯಕರಾಗಿ ಅವರು ಪಟ್ಟ ಸಂಕಷ್ಟಗಳನ್ನು ಹಾಗೂ ಏಕಾಕಿತನವನ್ನು ನಾವು ವಿಶೇಷವಾಗಿ ಗುರುತಿಸಬೇಕಾಗುತ್ತದೆ.

ಎಲ್ಲದಕ್ಕಿಂತ ಮುಖ್ಯವಾಗಿ ಗಾಂಧಿ ಹಾಗೂ ಅಂಬೇಡ್ಕರ್ ತಮ್ಮ ನಡುವಿನ ಮೂಲಭೂತ ಭಿನ್ನಮತಗಳ ಹೊರತಾಗಿಯೂ ಪರಸ್ಪರರಿಂದ ಹೇಗೆ ಪ್ರಭಾವಿತರಾದರು ಮತ್ತು ಏನನ್ನು ಪಡೆದುಕೊಂಡರು ಎನ್ನುವುದನ್ನು ತಿಳಿಯುವ ಅವಶ್ಯಕತೆ ಇದೆ.

ಗಾಂಧಿ ಆಧುನಿಕ ಭಾರತದ ಒಬ್ಬ ವಿಶಿಷ್ಟ ತತ್ವಜ್ಞಾನಿ ಮತ್ತು ಜನನಾಯಕ. ಅವರ ಬಾಲ್ಯ, ಇಂಗ್ಲೆಂಡಿನಲ್ಲಿನ ವಿದ್ಯಾಭ್ಯಾಸ, ದಕ್ಷಿಣ ಆಫ್ರಿಕಾದಲ್ಲಿ ಕಳೆದ ದಿನಗಳು ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ವಹಿಸಿದ ನಾಯಕತ್ವ – ಇವುಗಳೆಲ್ಲದರ ಕುರಿತು ವಿಸ್ತೃತವಾದ ಹಾಗೂ ಪಾಂಡಿತ್ಯಪೂರ್ಣವಾದ ಬರವಣಿಗೆಗಳು ನಮಗೆ ಲಭ್ಯವಿದೆ. ಅಂತೆಯೇ, ಅವರ ಸಾಂಸ್ಕೃತಿಕ ಮತ್ತು ರಾಜಕೀಯ ಚಿಂತನೆಯ ವಿವಿಧ ಆಯಾಮಗಳ ಕುರಿತು ಅನೇಕ ವಿಮರ್ಶಾತ್ಮಕ ಬರಹಗಳೂ ನಮ್ಮ ಮುಂದೆ ಇವೆ.

ಒಂದು ಅರ್ಥದಲ್ಲಿ ಗಾಂಧಿ ವಿಶ್ವದಾದ್ಯಂತ ಅಧ್ಯಯನಶೀಲತೆಗೆ ಒಳಗಾದ ಚಿಂತಕ. ಇದರಿಂದಾಗಿ ಅವರ ಕುರಿತು ಒಂದು ಜಾಗತಿಕ ಮಟ್ಟದ ಪಾಂಡಿತ್ಯ ನಮ್ಮ ಎದುರಿಗೆ ಇದೆ.ಈ ಪಾಂಡಿತ್ಯದ ಸಮಕ್ಷಮದಲ್ಲಿ ಗಾಂಧಿಯವರ ಚಿಂತನೆ ಮತ್ತು ಕ್ರಿಯಾಚರಣೆಗಳಿಗೆ ಸಂಬಂಧಿಸಿದ ಕೆಲವು ಅಂಶಗಳನ್ನಷ್ಟೇ (ನನ್ನ ವಾದಕ್ಕೆ ಅನುಕೂಲವಾಗುವಂತೆ) ಮುಂದಿಡುತ್ತಿದ್ದೇನೆ.

ಗಾಂಧಿ 1908ರಲ್ಲಿ ಇಂಗ್ಲೆಂಡಿನಿಂದ ದಕ್ಷಿಣ ಆಫ್ರಿಕಾಕ್ಕೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ‘ಹಿಂದ್ ಸ್ವರಾಜ್’ ಎನ್ನುವ ಮಹತ್ವದ ಪುಸ್ತಕವನ್ನು ಬರೆದರು. ಅವರೇ ತಿಳಿಸುವಂತೆ ‘ಹಿಂದ್ ಸ್ವರಾಜ್’ ಅವರ ರಾಜಕೀಯ ಚಿಂತನೆಯ ಸಾರಾಂಶ. ಪಾಶ್ಚಿಮಾತ್ಯ ನಾಗರಿಕತೆ ಕುರಿತಾದ ಕಟು ವಿಮರ್ಶೆಯ ಹಿನ್ನೆಲೆಯಲ್ಲಿ ಗಾಂಧಿ ‘ಸ್ವರಾಜ್ಯ’ ಎನ್ನುವ ಒಂದು ವಿಶಿಷ್ಟವಾದ ಪ್ರತಿಪಾದನೆಯನ್ನು ಈ ಬರಹದ ಮೂಲಕ ಭಾರತ ಹಾಗೂ ಜಗತ್ತಿನ ಮುಂದಿಡುತ್ತಾರೆ.

ಅನೇಕ, ಭಿನ್ನ ಭಿನ್ನ ಬಗೆಯ ಪಾಶ್ಚಿಮಾತ್ಯ ಮತ್ತು ಪೌರಾತ್ಯ ಚಿಂತನೆಗಳ ನೆರಳಿನಲ್ಲಿ ಅಥವಾ ಬೆಳಕಿನಲ್ಲಿ ಗಾಂಧಿ ತಮ್ಮ ಸ್ವರಾಜ್ಯದ ಕಲ್ಪನೆಯನ್ನು ಮಾಡುತ್ತಾರೆ. ಈ ಘಟನೆ ನಡೆದ ಅನೇಕ ವರ್ಷಗಳ ಬಳಿಕ ಅವರು ಭಾರತಕ್ಕೆ ಹಿಂತಿರುಗಿ, ಈ ದೇಶದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸ್ವಾತಂತ್ರ್ಯ ಹೋರಾಟವನ್ನು ಪ್ರವೇಶಿಸುತ್ತಾರೆ ಮತ್ತು ಬಹುಬೇಗನೆ ಅದರ ಪ್ರಮುಖ ನಾಯಕರೆನಿಸಿಕೊಳ್ಳುತ್ತಾರೆ.

ರಾಷ್ಟ್ರೀಯ ಕಾಂಗ್ರೆಸ್ಸಿನ ತಾತ್ವಿಕ ರಾಜಕೀಯ ಸಂಘಟನೆಯ ಚೌಕಟ್ಟಿನಲ್ಲಿ ರೂಪುಗೊಂಡ ಭಾರತದ ಸ್ವಾತಂತ್ರ್ಯ ಹೋರಾಟ, ಗಾಂಧಿ ಪ್ರತಿಪಾದಿಸಿದ ಸ್ವರಾಜ್ಯದ ಕಲ್ಪನೆಗಿಂತ ಮೂಲಭೂತವಾಗಿ ಭಿನ್ನವಾದ ದಿಕ್ಕಿನಲ್ಲಿ ಸಂಚರಿಸಿತು. ಒಂದು ಅರ್ಥದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಅದು ಪ್ರತಿನಿಧಿಸಿದ ‘ರಾಷ್ಟ್ರ’ ಎನ್ನುವ ಆಧಿಕಾರಶಾಹಿ ಕಲ್ಪನೆಗೂ ಗಾಂಧಿಯವರ ಸ್ವರಾಜ್ಯದ ಕಲ್ಪನೆಗೂ ಅರ್ಥಾರ್ಥ ಸಂಬಂಧವಿಲ್ಲ.

ಭಾರತದಲ್ಲಿ ರೂಪುಗೊಳ್ಳುತ್ತಿದ್ದ ರಾಷ್ಟ್ರಪ್ರಭುತ್ವದ ನೆಲೆಯ ಸ್ವಾತಂತ್ರ್ಯ ಹೋರಾಟದ ನಾಯಕ ಗಾಂಧಿ ಆಗಿದ್ದರು ಎನ್ನುವುದು ಒಂದು ಚಾರಿತ್ರಿಕ ವಿರೋಧಾಭಾಸವೂ ಹೌದು.ಭಾರತ ಬ್ರಿಟಿಷ್ ವಸಾಹತುಶಾಹಿಯ ಯಜಮಾನಿಕೆಯಿಂದ ಮುಕ್ತಗೊಂಡು ಒಂದು ನವೀನ ರಾಷ್ಟ್ರವಾಗಿ ಜನ್ಮ ತಳೆಯುತ್ತಿದ್ದ ಸ್ಥಿತ್ಯಂತರದ ಕಾಲಘಟ್ಟದಲ್ಲಿ, ಭಾರತದ ಸಂವಿಧಾನದ ರಚನೆಯ ಕೆಲಸವೂ ನಡೆಯಿತು ಹಾಗೂ ಭಾರತ ಮತ್ತು ಪಾಕಿಸ್ತಾನಗಳೆಂಬ ಎರಡು ರಾಷ್ಟ್ರಗಳ ಸೃಷ್ಟಿಯೂ ಆಯಿತು ಎನ್ನುವುದು ಇಂದು ಇತಿಹಾಸದ ಭಾಗ.

ಈ ಎರಡು ಅತ್ಯಂತ ಪ್ರಮುಖ ರಾಜಕೀಯ ಪ್ರಕ್ರಿಯೆಗಳಲ್ಲಿ ಗಾಂಧಿ ಬದಿಗೆ ಸರಿಸಲ್ಪಟ್ಟಿದ್ದರು ಎನ್ನುವುದು ನಮಗೆಲ್ಲ ತಿಳಿದಿರುವ ವಿಚಾರ. ಬಹುಶಃ ಭಾರತದ ರಾಷ್ಟ್ರೀಯ ಹೋರಾಟದ ರಾಜಕೀಯ ಗತಿಶೀಲತೆ ಗಾಂಧೀಜಿಯವರನ್ನು 1930ರ ದಶಕದ ಅಂತ್ಯದ ವೇಳೆಗೆ ಅಪ್ರಸ್ತುತಗೊಳಿಸಿತು ಎನ್ನುವುದು ಕಟು ವಾಸ್ತವವಾಗಿ ಕಾಣಿಸುತ್ತದೆ.

ಭಾರತದ ಸಂವಿಧಾನದ ಕರಡು ಪ್ರತಿಯನ್ನು ಗಾಂಧೀಜಿಯವರ ಮುಂದಿರಿಸಿದಾಗ, ‘ಇದು ತಾನು ಪರಿಭಾವಿಸಿದ ಸಂವಿಧಾನವಲ್ಲ’ ಎಂದು ಘೋಷಿಸಿದ ಅವರು, ತಮ್ಮ ಕಾರ್ಯದರ್ಶಿ ಶ್ರೀಮಾನ್ ನಾರಾಯಣ್ರನ್ನು ಕೂರಿಸಿಕೊಂಡು ಬೇರೆಯೇ ಒಂದು ಸಂವಿಧಾನವನ್ನು ಸಿದ್ಧಪಡಿಸಿದರು ಎನ್ನುವ ಕತೆಯನ್ನು ನಾವು ಕೇಳಿದ್ದೇವೆ.

ಅಂತೆಯೇ, 1947ರ ಆಗಸ್ಟ್ ವೇಳೆಗೆ ದೆಹಲಿಯಲ್ಲಿ ಕಾಂಗ್ರೆಸ್ ಧುರೀಣರು ಸ್ವಾತಂತ್ರ್ಯದ ವಿಜಯೋತ್ಸವವನ್ನು ಆಚರಿಸುತ್ತಿರುವಾಗ ಗಾಂಧೀಜಿ ತನ್ನ ಕೆಲವು ಆಪ್ತ ಸಂಗಡಿಗರ ಜೊತೆಗೆ ದೆಹಲಿಯಿಂದ ಬಹುದೂರದಲ್ಲಿರುವ ನೌಕಾಲಿಯಲ್ಲಿ ಕೋಮು ಉದ್ವಿಗ್ನತೆಯ ಸನ್ನಿವೇಶದಲ್ಲಿ ಹಿಂದೂ ಮುಸ್ಲಿಂ ಸೌಹಾರ್ದತೆಯ ಪ್ರಯತ್ನಗಳನ್ನು ನಡೆಸುತ್ತಿದ್ದರು.ಇದು ಒಬ್ಬ ವಿಭಿನ್ನ ಬಗೆಯ ತತ್ವಜ್ಞಾನಿಯಾಗಿ ಹಾಗೂ ರಾಜಕಾರಣಿಯಾಗಿ ಗಾಂಧಿ ಅನುಭವಿಸಿದ ತಾತ್ವಿಕ ಸಂಕಷ್ಟ ಹಾಗೂ ರಾಜಕೀಯ ಏಕಾಕಿತನ.

ಅಂಬೇಡ್ಕರ್ ಕೂಡ ಗಾಂಧೀಜಿಯವರಂತೆ ಪ್ರಖರ ವ್ಯಕ್ತಿತ್ವದ ತತ್ವಜ್ಞಾನಿ ಹಾಗೂ ಜನನಾಯಕ. ಅವರು ಕೇವಲ ದಲಿತ ಸಮುದಾಯದ ನಾಯಕರು ಮಾತ್ರವಾಗಿರಲಿಲ್ಲ, ಬದಲಾಗಿ ಒಂದು ವಿಶಿಷ್ಟ ಬಗೆಯ ಮೂಲಜಿಜ್ಞಾಸಿಕ ತಾತ್ವಿಕ ಚೌಕಟ್ಟಿನಲ್ಲಿ ಅವರು ಭಾರತದ ಸಮಾಜ ಮತ್ತು ಸಂಸ್ಕೃತಿಯ ತಳಸ್ಪರ್ಶಿಯಾದ ವಿಶ್ಲೇಷಣೆಯನ್ನು ನಡೆಸಿದವರು. ಅಂತೆಯೇ, ಭಾರತವನ್ನು ಒಂದು ವಿಮರ್ಶಾತ್ಮಕ ಆಧುನಿಕತೆಯ ಪರಿಪ್ರೇಕ್ಷದಲ್ಲಿ ಮರುಸಂಘಟಿಸುವ ಕಾಯಕವನ್ನು ಕೈಗೊಂಡವರು.

ಅಂಬೇಡ್ಕರ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡಿರಲಿಲ್ಲ ಎನ್ನುವುದು ನಿಜ. ಅದಕ್ಕೆ ಅನೇಕ ಬಹುಮುಖ್ಯವಾದ ಕಾರಣಗಳಿದ್ದವು. ರಾಷ್ಟ್ರೀಯ ಕಾಂಗ್ರೆಸ್ ಪ್ರತಿನಿಧಿಸಿದ ಸ್ವಾತಂತ್ರ್ಯದ ಕಲ್ಪನೆಯನ್ನಾಗಲೀ, ಗಾಂಧೀಜಿ ಪ್ರತಿಪಾದಿಸುತ್ತಿದ್ದ ರಾಜಕೀಯ ಚಿಂತನೆಯನ್ನಾಗಲೀ ಅಥವಾ ಕಾಂಗ್ರೆಸ್ ಪಕ್ಷದ ಸಾಮಾಜಿಕ ಸ್ವರೂಪವನ್ನಾಗಲೀ ಆಂಬೇಡ್ಕರ್ ಒಪ್ಪಿಕೊಂಡಿರಲಿಲ್ಲ.

ಭಾರತದ ರಾಷ್ಟ್ರೀಯ ಹೋರಾಟವನ್ನು ಹಿಂದೂ ಸಮಾಜದ ಮೇಲುಜಾತಿಯ ಹಿತಾಸಕ್ತಿಗಳನ್ನು ಪ್ರತಿನಿಧಿಸಿದ ಹೋರಾಟವೆಂದು ಭಾವಿಸಿದ ಅಂಬೇಡ್ಕರರಿಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಸಾಧ್ಯವಾಗಿರಲಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದ ಸೈದ್ಧಾಂತಿಕ ಸ್ವರೂಪ ಮತ್ತು ಸಾಮಾಜಿಕ ನೆಲೆಗಟ್ಟಿನ ಕುರಿತು ಹಾಗೂ ಗಾಂಧಿಯವರ ರಾಜಕೀಯ ನಾಯಕತ್ವದ ಬಗ್ಗೆ ತಮಗಿದ್ದ ಮೂಲಭೂತ ಆಕ್ಷೇಪಗಳನ್ನು ಅವರು ವಿಸ್ತೃತವಾಗಿ ತಮ್ಮ ‘ಅಸ್ಪೃಶ್ಯರಿಗೆ ಕಾಂಗ್ರೆಸ್ ಮತ್ತು ಗಾಂಧಿ ಮಾಡಿದ್ದೇನು’ ಎನ್ನುವ ಬರಹದಲ್ಲಿ ಮುಂದಿಡುತ್ತಾರೆ.

ಭಾರತದಲ್ಲಿ ಕಾಂಗ್ರೆಸ್ ಹಾಗೂ ಗಾಂಧಿ ನಾಯಕತ್ವದಲ್ಲಿ ರೂಪುಗೊಳ್ಳುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ ಎದುರಾಗಿ ಅವರು, ಭಾರತದಲ್ಲಿ ಮೂಲೆಗೆ ತಳ್ಳಲಾದ ಸಮುದಾಯಗಳ ಮತ್ತು ಅಸ್ಮಿತೆಗಳ ಪ್ರತಿನಿಧಿಯಾಗಲು ನಿರ್ಧರಿಸಿದ್ದರು. ಅಸಮಾನತೆ, ಅನ್ಯಾಯ ಹಾಗೂ ಶೋಷಣೆಗಳಿಂದ ಜರ್ಝರಿತಗೊಂಡ ಸಮಾಜದಲ್ಲಿ ಧ್ವನಿ ಕಳೆದುಕೊಂಡವರ ಧ್ವನಿಯಾಗಲು ನಿರ್ಧರಿಸಿದರು.

ಭಾರತದ ಅಸಂಖ್ಯಾತ ಶೋಷಿತ ಸಮುದಾಯಗಳನ್ನು ಜಾತಿ, ವರ್ಗ ಹಾಗೂ ಲಿಂಗ ಅಸಮಾನತೆಗಳಿಂದ ಮುಕ್ತಗೊಳಿಸುವ ದಿಸೆಯಲ್ಲಿ ಶ್ರಮಿಸಿದರು. ಭಾರತದ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಾಸ್ತವದ ಕುರಿತು ಅವರು ನಡೆಸಿದ ತಳಸ್ಪರ್ಶಿ ಅಧ್ಯಯನಗಳು ಇಂದಿಗೂ ಅತ್ಯಂತ ಮೌಲಿಕವಾದವು. ಅಂಬೇಡ್ಕರ್ ಓರ್ವ ರಾಜಕೀಯ ತತ್ವಜ್ಞಾನಿಯಾಗಿ ಅತ್ಯಂತ ಪ್ರಖರವಾದ ಮಾನವಿಕ ನೆಲೆಯ ಸಮಾನತಾವಾದಿ ಸಮಾಜವೊಂದರ ಕನಸನ್ನು ಕಾಂಗ್ರೆಸ್ ಮತ್ತು ಗಾಂಧಿ ಪ್ರತಿಪಾದಿಸಿದ ಭಾರತಕ್ಕೆ ಪರ್ಯಾಯವಾಗಿ ಮುಂದಿರಿಸಿದರು.

ಭಾರತದ ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ್ ವಹಿಸಿದ ನಾಯಕತ್ವ ಹಾಗೂ ನಿರ್ವಹಿಸಿದ ಕೆಲಸಗಳು ಅವರನ್ನು ‘ಭಾರತದ ಸಂವಿಧಾನ ಶಿಲ್ಪಿ’ ಎಂದು ಬಣ್ಣಿಸುವಂತೆ ಮಾಡಿದೆ. ಆದರೆ ಭಾರತದ ಸಂವಿಧಾನದ ರಚನೆಯ ಚರಿತ್ರೆಯನ್ನು ಕೂಲಂಕಷವಾಗಿ ಗ್ರಹಿಸಿದಾಗ ಕೆಲವು ಮಹತ್ವದ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ.

ಸಂವಿಧಾನ ಸಭೆಯಲ್ಲಿ ನಡೆದ ಪ್ರಜಾತಾಂತ್ರಿಕ ವಾಗ್ವಾದಗಳು ಈ ಸಂಗತಿಗಳನ್ನು ಸ್ಫುಟಗೊಳಿಸುತ್ತವೆ. ಅಂಬೇಡ್ಕರ್ ಸಂವಿಧಾನದ ಕರಡು ಪ್ರತಿಯನ್ನು ರಚಿಸುವ ಸಮಿತಿಯ ಅಧ್ಯಕ್ಷರಾಗಿದ್ದರಿಂದ, ಸಂವಿಧಾನ ಸಭೆಯಲ್ಲಿ ವ್ಯಕ್ತಗೊಳ್ಳುತ್ತಿದ್ದ ವಿಭಿನ್ನ ವಿಚಾರಗಳನ್ನು ಹಾಗೂ ದೃಷ್ಟಿಕೋನಗಳನ್ನು ತಮ್ಮ ಕರಡು ಪ್ರತಿಯಲ್ಲಿ ಒಳಗೊಳ್ಳುವ ಜವಾಬ್ದಾರಿ ಅವರದ್ದಾಗಿತ್ತು.

ಅಂತೆಯೇ, ತಾನು ವೈಯಕ್ತಿಕವಾಗಿ ಇಷ್ಟಪಡದ ಅನೇಕ ಸಂಗತಿಗಳನ್ನು, ವಿಚಾರಗಳನ್ನು ಅಥವಾ ನಿಲುವುಗಳನ್ನು ಅಂಬೇಡ್ಕರ್ ತಾವು ಪರಿಕಲ್ಪಿಸಿದ ಸಂವಿಧಾನದಲ್ಲಿ ಒಳಗೊಳ್ಳಬೇಕಾಯಿತು. ಉದಾಹರಣೆಗೆ, ಪಂಚಾಯತ್ ರಾಜ್ ಪರಿಕಲ್ಪನೆಯ ಕುರಿತು ಅವರಿಗೆ ತೀವ್ರ ವಿರೋಧವಿತ್ತು. ಹಾಗಿದ್ದೂ ಸಂವಿಧಾನ ಸಭೆಯಲ್ಲಿ ನಿರ್ದಿಷ್ಟ ಹಿತಾಸಕ್ತಿಗಳನ್ನು ಪ್ರತಿನಿಧಿಸಿದ ಗುಂಪಿನ ಒತ್ತಾಯಕ್ಕೆ ತಲೆಬಾಗಿ ಅಂಬೇಡ್ಕರ್ ಸ್ವತಃ ಪಂಚಾಯತ್ ವಿಧೇಯಕವನ್ನು ಸಂವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದರು ಹಾಗೂ ಅದನ್ನು ಸಂವಿಧಾನದ ಅವಿಭಾಜ್ಯ ಭಾಗವನ್ನಾಗಿಸಿದರು.

ಸಂವಿಧಾನದ ರಚನೆಯನ್ನು ಒಂದು ಪ್ರಜಾತಾಂತ್ರಿಕ ಜರುಗುವಿಕೆ ಎಂದು ತಿಳಿಯದಾದ ಪಕ್ಷದಲ್ಲಿ ಅಂತಹುದೊಂದು ವಿದ್ಯಮಾನ ಭಾರತದಲ್ಲಿ ಸಂಭವಿಸಿದಾಗ ಅದರ ನಾಯಕತ್ವವನ್ನು ಅಂಬೇಡ್ಕರ್ ವಹಿಸಿದ್ದರೆನ್ನುವುದು ನಿಜ. ಆದರೆ, ಅವರ ಉದ್ದೇಶಗಳನ್ನು ಮೀರಿ, ಅಭಿಲಾಷೆಗಳಿಗೆ ವಿರುದ್ಧವಾಗಿ ಅವರು ಸುತರಾಮ್ ಒಪ್ಪದ ಅನೇಕ ತಾತ್ವಿಕ ನಿಲುವುಗಳು ಸಂವಿಧಾನದ ಭಾಗಗಳಾಗಿಬಿಟ್ಟವು.

ಆದ್ದರಿಂದಲೇ, ಭಾರತದ ಸಂವಿಧಾನ ಒಂದು ಮೂರ್ತ ಸ್ವರೂಪವನ್ನು ಪಡೆದುಕೊಂಡಾಗ ಅಂಬೇಡ್ಕರರಿಗೆ ‘ತಾನು ಪರಿಭಾವಿಸಿದ ಸಂವಿಧಾನ ಇದಲ್ಲ’ ಎನ್ನಿಸಿಬಿಟ್ಟಿತ್ತು. ಹೀಗಾಗಿ, ತನ್ನ ಉದ್ದೇಶಗಳಿಗೆ ಹೆಚ್ಚು ಸ್ಪಷ್ಟವಾದ ಅಭಿವ್ಯಕ್ತಿಯನ್ನು ನೀಡಬಲ್ಲ ಇನ್ನೊಂದು ಬದಲೀ ಸಂವಿಧಾನವನ್ನು ಅಂಬೇಡ್ಕರ್ ತಮ್ಮ ‘ಸ್ಟೇಟ್ಸ್ ಅಂಡ್ ಮೈನಾರಿಟಿಸ್’ ಎನ್ನುವ ಗ್ರಂಥದ ಮೂಲಕ ಭಾರತದ ಜನ ಸಮುದಾಯದ ಮುಂದಿಟ್ಟರು. ಇದು ಗಾಂಧಿಯವರಂತೆಯೇ ಅಂಬೇಡ್ಕರ್ ತತ್ವಜ್ಞಾನಿಯಾಗಿ ಎದುರಿಸಿದ ಸಂಕಷ್ಟ ಹಾಗೂ ರಾಜಕಾರಣಿಯಾಗಿ ಅನುಭವಿಸಿದ ಏಕಾಕಿತನ.

ಗಾಂಧಿ ಮತ್ತು ಅಂಬೇಡ್ಕರ್ ಸಮನಾಗಿ ಅನುಭವಿಸಿದ ಸೈದ್ಧಾಂತಿಕ ಸಂಕಷ್ಟ ಹಾಗೂ ರಾಜಕೀಯ ಏಕಾಕಿತನದ ಜೊತೆಗೆ ಅವರು ಪರಸ್ಪರರಿಂದ ಪ್ರಭಾವಿತರಾಗಿದ್ದರು ಮತ್ತು ತಮಗೆ ಗೊತ್ತಿಲ್ಲದೆಯೇ ಅನೇಕ ಅರಿವುಗಳನ್ನು ಒಬ್ಬರಿಂದ ಒಬ್ಬರು ಪಡೆದುಕೊಂಡಿದ್ದರು ಎನ್ನುವುದನ್ನು ಇಂದು ನಾವು ಹೆಚ್ಚು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದ ಅಗತ್ಯವಿದೆ.

ಉದಾಹರಣೆಗೆ, ಭಾರತದ ಒಂದು ಪ್ರಮುಖ ರಾಜಕೀಯ ಸಮಸ್ಯೆಗೆ ಸಂಬಂಧಿಸಿದಂತೆ ಅವರುಗಳ ನಡುವೆ ಒಂದು ವಿಸ್ಮಯಕಾರಿಯಾದ ಸಹಾನುಭೂತಿಯನ್ನು ನಾವು ಗುರುತಿಸಬಹುದು. ಅದು ಭಾರತದಲ್ಲಿ ಧರ್ಮ ಮತ್ತು ರಾಜಕಾರಣಗಳ ನಡುವಿನ ಸಂಬಂಧದ ಕುರಿತಾದದ್ದು. ಆಶ್ಚರ್ಯಕರವೆನ್ನುವಂತೆ ಗಾಂಧಿ ಮತ್ತು ಅಂಬೇಡ್ಕರ್, ತಮ್ಮ ಕಾಲದ ಇತರ ಅನೇಕರಿಗಿಂತ ಭಿನ್ನವಾಗಿ, ಧರ್ಮ ಮತ್ತು ರಾಜಕಾರಣಗಳನ್ನು ಪರಸ್ಪರಾವಲಂಭಿಯಾದ ಮತ್ತು ಪೂರಕವಾದ ವಿದ್ಯಮಾನಗಳೆಂದು ಭಾವಿಸಿದ್ದರು.

ಗಾಂಧಿ ಆಳವಾದ ಧಾರ್ಮಿಕ ಶ್ರದ್ಧೆಯನ್ನು ಹೊಂದಿದ ಹಾಗೂ ತಮ್ಮ ಧಾರ್ಮಿಕ ನಂಬಿಕೆಗಳನ್ನು ಸಾರ್ವಜನಿಕವಾಗಿ ಮುಂದಿಡಲು ಸಂಕೋಚಪಡದ ನಾಯಕರೆಂದು ನಮಗೆ ಗೊತ್ತು. ಅಂತೆಯೇ, ಧರ್ಮದಿಂದ ರಾಜಕಾರಣವನ್ನು ಪ್ರತ್ಯೇಕಗೊಳಿಸುವ ಅಥವಾ ರಾಜಕಾರಣವನ್ನು ಒಂದು ಸ್ವಾಯತ್ತವಾದ ವಲಯವನ್ನಾಗಿ ಪರಿಭಾವಿಸುವ ಆಧುನಿಕ ಸೆಕ್ಯುಲರ್ ದೃಷ್ಟಿಕೋನದ ಕುರಿತು ಗಾಂಧೀಜಿಯವರು ತಲೆಕೆಡಿಸಿಕೊಂಡವರಲ್ಲ.

ಸ್ವಾತಂತ್ರ್ಯ ಹೋರಾಟದ ತಮ್ಮ ವಿಮೋಚನ ರಾಜಕೀಯವನ್ನು ಧಾರ್ಮಿಕ ಪರಿಪ್ರೇಕ್ಷದಲ್ಲಿ ನಿರ್ವಹಿಸಲು ಅವರಿಗೆ ಯಾವ ಸಮಸ್ಯೆಯೂ ಇರಲಿಲ್ಲ. ಒಂದು ಅರ್ಥದಲ್ಲಿ ಗಾಂಧೀಜಿಯವರು ಭಾರತದಲ್ಲಿ ಸಂಘಟಿಸಿದ ವಸಾಹತುಶಾಹಿ ವಿರೋಧಿ ನೆಲೆಯ ವಿಮೋಚನಾ ರಾಜಕಾರಣ ಅವರು ಗ್ರಹಿಸಿದ ಭಾರತೀಯ ಸಂಸ್ಕೃತಿ, ನಾಗರೀಕತೆ ಹಾಗೂ ಧಾರ್ಮಿಕ ಸಂಪ್ರದಾಯಗಳ ದಟ್ಟತೆಯಲ್ಲಿ ರೂಪುಗೊಂಡದ್ದು. ಧರ್ಮವೇ ರಾಜಕಾರಣವಾಗುವ ಅಥವಾ ರಾಜಕಾರಣವೇ ಧರ್ಮವಾಗುವ ಗಾಂಧೀಜಿಯವರ ಚಿಂತನೆ ಹಾಗೂ ಕ್ರಿಯಾಚರಣೆ ಆಧುನಿಕ ಸೆಕ್ಯುಲರ್ ಧೋರಣೆಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುವಂತಹುದು.

ಗಾಂಧಿಜೀಯವರಂತೆ ಅಂಬೇಡ್ಕರ್ಗೆ ಕೂಡ ಧರ್ಮ ರಾಜಕೀಯ ಸಂಘಟನೆಯ ಪ್ರಮುಖ ನೆಲೆಗಟ್ಟು. ಒಂದು ಅರ್ಥದಲ್ಲಿ ಅಂಬೇಡ್ಕರ್ ಪರಿಭಾವಿಸಿದ ಮೂಲ ಜಿಜ್ಞಾಸಿಕ ವಿಮೋಚನಾ ರಾಜಕೀಯ ಹಿಂದೂ ಧರ್ಮದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಸಮಾನತೆಗಳ ಕುರಿತು ಅವರು ಒದಗಿಸಿದ ವಿಮರ್ಶೆಯಿಂದ ಹೊರಹೊಮ್ಮುತ್ತದೆ.

ಅಂಬೇಡ್ಕರ್ರಿಗೆ ಧರ್ಮ ಯಾವತ್ತೂ ನಿರಾಕರಿಸಬೇಕಾದ ಸಂಗತಿಯಲ್ಲ. ಹಿಂದೂ ಧರ್ಮದ ಕುರಿತು ಅವರು ಎತ್ತಿದ ಪ್ರಶ್ನೆಗಳು ಹಾಗೂ ಮಾಡಿದ ಆಕ್ಷೇಪಗಳು ಅದರ ಅಮಾನವೀಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಯಾಮಗಳಿಗೆ ಸಂಬಂಧಪಟ್ಟದ್ದೇ ಹೊರತು ಧರ್ಮದ ಮಾನವಿಕ ನೆಲೆ ಹಾಗೂ ಸೆಲೆಗಳನ್ನು ನಿರಾಕರಿಸುವಂತಹುದಲ್ಲ.

ಧರ್ಮವನ್ನು ಸಾರ್ವಜನಿಕ ಸಂಘಟನೆಯ ಹಾಗೂ ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯ ಮಹಾನ್ ಸಾಧನವಾಗಿ ಅಂಬೇಡ್ಕರ್ ಗ್ರಹಿಸಿದ್ದರಿಂದಲೇ ಬೌದ್ಧ ಧರ್ಮವನ್ನು ಅವರು ಸಾರ್ವಜನಿಕವಾಗಿ ತಮ್ಮ ಸ್ವಧರ್ಮವಾಗಿ ಆಯ್ಕೆ ಮಾಡಿಕೊಂಡಿದ್ದರು. ಬೌದ್ಧ ಧರ್ಮವನ್ನು ತಮ್ಮ ಅನುಯಾಯಿಗಳೊಂದಿಗೆ ಸಾರ್ವಜನಿಕವಾಗಿ ಆಯ್ಕೆ ಮಾಡಿಕೊಂಡ ಅಂಬೇಡ್ಕರರ ನಿರ್ಧಾರ ಅವರು ಅತ್ಯಂತ ಎಚ್ಚರದಿಂದ ಹಾಗೂ ಸ್ವಪ್ರಜ್ಞೆಯಿಂದ ಮಾಡಿದ ತೀರ್ಮಾನವಾಗಿತ್ತು.

ತಾವು ಭಾರತದಲ್ಲಿ ಸಾಧಿಸಲು ಯತ್ನಿಸಿದ ಆಳವಾದ ಮಾನವೀಯ ಮೌಲ್ಯಗಳ ಬೆಸೆಯುವಿಕೆಯಲ್ಲಿ ಹೊರಹೊಮ್ಮಬೇಕಾಗಿದ್ದ ವಿಮೋಚನಾ ಆಂದೋಲನಕ್ಕೆ ಒಂದು ನೈತಿಕ ಹಾಗೂ ಪಾರಮಾರ್ಥಿಕ ನೆಲೆಗಟ್ಟು ಅಂಬೇಡ್ಕರ್ರಿಗೆ ಅಗತ್ಯವಿತ್ತು. ಬೌದ್ಧ ಧರ್ಮ ಅಂತಹದೊಂದು ನೈತಿಕ ಹಾಗೂ ಪಾರಮಾರ್ಥಿಕ ನೆಲೆಗಟ್ಟಿನ ಸಾಧ್ಯತೆಯಾಗಿ ಅವರಿಗೆ ಕಾಣಿಸಿತು.

ಅಷ್ಟು ಮಾತ್ರವಲ್ಲದೆ ತಾನು ಪ್ರತಿಪಾದಿಸಿದ ಸಾಮುದಾಯಿಕ ಉದ್ದೇಶಗಳು ಹಾಗೂ ಮಾನವಿಕ ಅಭಿಲಾಷೆಗಳು ಹಿಂದೂ ಧರ್ಮದ ನೈತಿಕ ಮತ್ತು ಪಾರಮಾರ್ಥಿಕ ನೆಲೆಗಟ್ಟಿನಲ್ಲಿ ಸಾಕಾರಗೊಳ್ಳಲಾರವು ಎನ್ನುವುದನ್ನು ಸಾರ್ವಜನಿಕವಾಗಿ ಘೋಷಿಸುವ ರಾಜಕೀಯ ಅಗತ್ಯ ಅಂಬೇಡ್ಕರ್ರಿಗೆ ಇತ್ತು. ಒಟ್ಟಿನಲ್ಲಿ, ಬೌದ್ಧ ಧರ್ಮ ಸ್ವೀಕಾರದ ಅವರ ಸಾರ್ವಜನಿಕ ಹೆಜ್ಜೆ ಒಂದು ನೇತ್ಯಾತ್ಮಕ ರಾಜಕಾರಣದ ಪ್ರಕಟಣೆ ಆಗಿತ್ತು.

ಗಾಂಧಿ ತಮ್ಮ ‘ಹಿಂದ್ ಸ್ವರಾಜ್’ ಮೂಲಕ ಪ್ರತಿಪಾದಿಸಿದ ಸಾಂಸ್ಕೃತಿಕ ಸ್ವಾತಂತ್ರ್ಯ ಮತ್ತು ಅಂಬೇಡ್ಕರ್ ತಮ್ಮ ಅನೇಕ ಬರವಣಿಗಳ ಮೂಲಕ ಪ್ರಕಟಪಡಿಸಿದ ಸಮಾನತೆಯ ಪ್ರತಿಪಾದನೆ ಅವುಗಳ ತಾತ್ವಿಕ ರೂಪುರೇಷೆಗಳಲ್ಲಿ ಬೇರೆ ಬೇರೆಯಾಗಿ ಕಂಡು ಬರುತ್ತವೆ ಎನ್ನುವುದು ನಿಜ.

ಭಾರತೀಯ ಸಮಾಜದ ಮತ್ತು ಸಂಸ್ಕೃತಿಯ ಆಳವಾದ ವಿಶ್ಲೇಷಣೆಯನ್ನು ಈ ಇಬ್ಬರು ತತ್ವಜ್ಞಾನಿಗಳು ಸಂಪೂರ್ಣವಾಗಿ ತಮ್ಮ ಆಯ್ಕೆ ಅಲ್ಲದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಪ್ರೇಕ್ಷ್ಯದಿಂದ ನಡೆಸಿದ್ದರು ಅನ್ನುವುದೂ ನಿಜ. ಗಾಂಧಿ ಪ್ರತಿಪಾದಿಸಿದ ‘ಸಾಂಸ್ಕೃತಿಕ ಸ್ವಾತಂತ್ರ್ಯದ ನೆಲೆಯ ಸ್ವರಾಜ್ಯ’ ಮತ್ತು ಅಂಬೇಡ್ಕರ್ ಮುಂದಿಟ್ಟ ‘ಸಮಾನತೆಯ ನೆಲೆಯ ಪ್ರಜಾತಂತ್ರ’ ಒಂದು ಸಿರಿವಂತಿಕೆಯ ರಾಜಕೀಯ ವಿಶ್ವದಲ್ಲಿ ಒಂದಾಗಬಾರದು ಎಂದೇನೂ ಇಲ್ಲ.

ಧರ್ಮ ಮತ್ತು ರಾಜಕಾರಣಗಳ ಸಂಬಂಧದ ಕುರಿತು ಗಾಂಧಿ ಮತ್ತು ಅಂಬೇಡ್ಕರ್ ನಡೆಸಿದ ಸೂಕ್ಷ್ಮ ಚಿಂತನೆಗಳನ್ನು ನಾವು ಇಂದು ಮುನ್ನೆಲೆಗೆ ತರಬೇಕಾಗಿದೆ ಮತ್ತು ಅವುಗಳ ನೆಲೆಗಟ್ಟಿನಲ್ಲಿ ನಮ್ಮ ಸೆಕ್ಯುಲರ್ ರಾಜಕಾರಣದ ತಾತ್ವಿಕತೆಯನ್ನು ಮರುಪರಿಶೀಲಿಸಬೇಕಾಗಿದೆ.

ಸೆಕ್ಯುಲರ್ ವಾದದ ಕುರಿತಾದ ಈ ಮರುಪರಿಶೀಲನೆ ನಮ್ಮ ದೇಶದಲ್ಲಿ ಅದರ ಔಚಿತ್ಯವನ್ನಾಗಲಿ ಅಥವಾ ಅನಿವಾರ್ಯತೆಯನ್ನಾಗಲೀ ಪ್ರಶ್ನಿಸದೆ, ಭಾರತದಂತಹ ಸಾಂಸ್ಕೃತಿಕ ದಟ್ಟತೆಯ ಸಮಾಜದಲ್ಲಿ ಸೆಕ್ಯುಲರ್ ಕಾರ್ಯಸೂಚಿಯ ತಾತ್ವಿಕ ಸ್ವರೂಪವನ್ನು ಮರುನಿರ್ವಚಿಸುವ ಹಾಗೂ ಅದರ ರಾಜಕೀಯ ಕ್ರಿಯಾಚರಣೆಗೆ ಪುನಶ್ಚೇತನವನ್ನು ಒದಗಿಸುವ ನೆಲೆಯಲ್ಲಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಪ್ರತಿಪಾದಿಸಿದ ಧರ್ಮ ಮತ್ತು ರಾಜಕಾರಣಗಳ ಅವಿನಾಭಾವದ ಬೆಳಕಿನಲ್ಲಿ ಭಾರತದ ಸೆಕ್ಯುಲರ್ವಾದಿ ರಾಜಕಾರಣದ ಮೂರು ಸಮಸ್ಯೆಗಳನ್ನು ನನ್ನ ಕೊನೆಯ ಮಾತುಗಳಾಗಿ ಮುಂದಿಡಬಯಸುತ್ತೇನೆ.

1. ಭಾರತದ ಸೆಕ್ಯುಲರ್ ರಾಜಕಾರಣದ ತಾತ್ವಿಕತೆ ಈ ದೇಶದ ಬಹುಧಾರ್ಮಿಕತೆ ಮತ್ತು ಬಹುಸಂಸ್ಕೃತೀಯತೆಯ ಅರಿವಿನಲ್ಲಿ ರೂಪುಗೊಂಡ ವಿದ್ಯಮಾನವಾದರೂ ಕೆಲವೊಮ್ಮೆ ಅದು ಐರೋಪ್ಯ ಪ್ರಣೀತ ಸೆಕ್ಯುಲರ್ವಾದದ ಧರ್ಮ ನಿರಪೇಕ್ಷತೆಯ ಮತ್ತು ಧಾರ್ಮಿಕ ಹಿತಾಸಕ್ತಿಗಳಿಂದ ಸಮಾನಂತರ ಎನ್ನುವ ನಿಲುವಿಗೆ ವಾಲಿಕೊಂಡಂತೆ ಕಾಣಿಸುತ್ತದೆ. ಇದರಿಂದಾಗಿ, ಧಾರ್ಮಿಕ ಅಸ್ಮಿತೆ ಮತ್ತು ಹಿತಾಸಕ್ತಿಗಳ ನಡುವೆ ಉದ್ಭವಿಸುವ ಸಮಸ್ಯೆಗಳನ್ನು ಪ್ರಜಾತಾಂತ್ರಿಕವಾಗಿ ನಿರ್ವಹಿಸುವಲ್ಲಿ ಅದು ಶಕ್ತವಾಗಿಲ್ಲ.

ಅಂತೆಯೇ, ಧಾರ್ಮಿಕ ಸಮುದಾಯಗಳ ನಡುವೆ ಉದ್ಭವಿಸಿದ ಸಂಘರ್ಷ ಮತ್ತು ಹಿಂಸೆಗಳನ್ನು ರಾಜತಾಂತ್ರಿಕವಾಗಿ ನಿಗ್ರಹಿಸಲು ಅದಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ, ಭಾರತದ ಪ್ರಮುಖ ರಾಜಕೀಯ ಚಿಂತಕ ರಾಜೀವ್ ಭಾರ್ಗವ್ ಪ್ರತಿಪಾದಿಸುವಂತೆ – ಭಾರತದ ಸೆಕ್ಯುಲರ್ವಾದ ಹೆಚ್ಚು ಸಾಂದರ್ಭಿಕವಾದ ಮೌಲ್ಯನಿರ್ದಿಷ್ಟವಾದ ಧರ್ಮ ನಿರಪೇಕ್ಷತೆಯನ್ನು ತನ್ನಲ್ಲಿ ಒಳಗೊಳ್ಳಬೇಕಾಗುತ್ತದೆ. ಅಂದರೆ, ಭಾರತದ ಸೆಕ್ಯುಲರ್ವಾದದ ಧರ್ಮ ನಿರಪೇಕ್ಷತೆ ಒಂದು ಘನವಾದ, ಎಲ್ಲ ಸಂದರ್ಭಗಳಲ್ಲಿಯೂ ಒಂದೇ ರೀತಿ ಇರುವ ಕಟ್ಟುನಿಟ್ಟಿನ ದೃಷ್ಟಿಕೋನವಾಗಿರದೆ, ಸಾಂದರ್ಭಿಕವಾಗಿ ಬದಲಾಗುವ ಮತ್ತು ಪ್ರಜಾತಾಂತ್ರಿಕವಾಗಿ ಮರು ನಿರ್ವಚನಗೊಳ್ಳುವ ವಿದ್ಯಮಾನವಾಗಿರಬೇಕಾಗುತ್ತದೆ.

2. ಭಾರತದ ಸೆಕ್ಯುಲರ್ವಾದದ ಸಾಮಾಜಿಕ ಚಿಂತನೆ ಕೋಮುವಾದ ಮುಂದಿಡುವ ಸಂಕುಚಿತವಾದ, ಅಸಮಾನವಾದ, ಅಪ್ರಜಾತಾಂತ್ರಿಕವಾದ ಮತ್ತು ಘನವಾದ ಸಮುದಾಯದ ಕಲ್ಪನೆಗೆ ಬದಲಾಗಿ, ಗಾಂಧಿ ಮತ್ತು ಅಂಬೇಡ್ಕರ್ ಪ್ರತಿಪಾದಿಸುವ, ತೆರೆದ ಅಂಚಿನ, ಗತಿಶೀಲವಾದ ಮತ್ತು ಪ್ರಜಾತಾಂತ್ರಿಕವಾದ ಸಾಂಸ್ಕೃತಿಕ ಸಮುದಾಯದ ಕಲ್ಪನೆಯನ್ನು ಮುಂದಿಡಬೇಕಾಗುತ್ತದೆ.

3. ಭಾರತದ ಸೆಕ್ಯುಲರ್ವಾದ ಈ ದೇಶದ ಸಾಂಸ್ಕೃತಿಕ ಸಿರಿವಂತಿಕೆಯನ್ನು ಒಳಗೊಳ್ಳುವ ಧಾರ್ಮಿಕ ಸಂವೇದನೆಗಳನ್ನು ಗೌರವಿಸುವ, ಆದರೆ ಅಸಮಾನತೆಯನ್ನು ವಿರೋಧಿಸುವ ಸಂಪನ್ಮೂಲದ ಪ್ರಜಾತಾಂತ್ರಿಕ ವಿತರಣೆಯನ್ನು ನಿರ್ವಹಿಸುವ ಸಾಧನವಾಗಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.