ಸಾಮಾನ್ಯವಾಗಿ ಲಿಪಿಶಾಸ್ತ್ರದ ಅಧ್ಯಯನದ ಒಂದಲ್ಲ ಒಂದು ಹಂತದಲ್ಲಿ ಲಲಿತವಿಸ್ತರದ ಹೆಸರನ್ನು ಕೇಳಿರುತ್ತೇವೆ. ಬುದ್ಧನ ಜೀವನಗಾಥೆಯಾದ ಲಲಿತವಿಸ್ತರವು ಬುದ್ಧನ ಅಕ್ಷರಾಭ್ಯಾಸದ ವಿಷಯವನ್ನು ಹೆಸರಿಸುತ್ತಾ, ಅವನು 64 ಲಿಪಿಗಳನ್ನು ಬಲ್ಲವನಾಗಿದ್ದ ಎಂಬ ಮಾಹಿತಿ ನೀಡುವುದಲ್ಲದೆ, ಅವುಗಳ ಹೆಸರುಗಳನ್ನೂ ತಿಳಿಸುತ್ತದೆ. ಲಿಪಿಯ ಅಭ್ಯಾಸಿಗಳಿಗೆ ಮಾತ್ರವೇ ಅಲ್ಲದೆ, ಗಣಿತದ ಅಭ್ಯಾಸಿಗಳಿಗೂ ಇಂತಹುದೇ ಮಾಹಿತಿಯನ್ನು ಲಲಿತವಿಸ್ತರ ನೀಡುತ್ತದೆ. ಹಲವು ಕೋಟಿಗಳವರೆಗಿನ ಹೆಸರುಗಳನ್ನು ಅದು ಉಲ್ಲೇಖಿಸುತ್ತದೆ. ಇದೆಲ್ಲವೂ ಕೇಳಿದ್ದ ಮತ್ತು ಓದಿದ್ದ ಮಾತು. ಇದನ್ನು ಪರಿಶೀಲಿಸಲು ಲಲಿತವಿಸ್ತರ ಗ್ರಂಥ ಕನ್ನಡದಲ್ಲಿ ಲಭ್ಯವಿರಲಿಲ್ಲ. ಈಗ ಲಲಿತವಿಸ್ತರವು ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡು ಕನ್ನಡ ಓದುಗರನ್ನು ತಲುಪಿದೆ.

ಸಂಸ್ಕೃತ ಭಾಷೆಯ ಲಲಿತವಿಸ್ತರವು ನಂತರ ಟಿಬೆಟಿಯನ್, ಫ್ರೆಂಚ್, ಇಂಗ್ಲಿಷ್ ಮತ್ತು ಚೀನೀ ಭಾಷೆಗಳಿಗೆ ಅನುವಾದವಾಗಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಸಂಸ್ಕೃತದಿಂದ ತೆಲುಗಿಗೆ ತಿರುಮಲ ರಾಮಚಂದ್ರ ಮತ್ತು ಬುಲುಸು ವೆಂಕಟರಮಣಯ್ಯನವರಿಂದ ಅನುವಾದಗೊಂಡಿರುವ ಲಲಿತವಿಸ್ತರವನ್ನು ಈಗ ಡಾ.ಆರ್.ಶೇಷಶಾಸ್ತ್ರಿ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನನ್ನ ಅರಿವಿಗೆ ಬಂದಿರುವಂತೆ ಮೂಲ ಸಂಸ್ಕೃತ ಮತ್ತು ತೆಲುಗಿಗೆ ಆಗಿರುವ ಅನುವಾದವನ್ನು ಹೊರತುಪಡಿಸಿದರೆ, ಇತರ ಭಾರತೀಯ ಭಾಷೆಗಳಲ್ಲಿ ಲಲಿತವಿಸ್ತರ ಲಭ್ಯವಿಲ್ಲ. ಈಗ ಇದು ತೆಲುಗಿನಿಂದ ಕನ್ನಡಕ್ಕೆ ಅನುವಾದ ಆಗಿದೆ. ಇದು ಸ್ವಾಗತಾರ್ಹ.

ಈ ಅನುವಾದಿತ ಕೃತಿಗೆ ಮುನ್ನುಡಿ ಬರೆದಿರುವ ಡಾ.ಎಸ್. ನಾಗರಾಜು ಅವರು ಆಗ್ನೇಯ ಏಷ್ಯಾದ ಬೌದ್ಧ ಧರ್ಮ, ವಾಸ್ತು ಮತ್ತು ಮೂರ್ತಿಶಿಲ್ಪ ಇತ್ಯಾದಿಗಳಿಗೆ ಸಂಬಂಧಿಸಿದಂತೆ ವ್ಯಾಪಕ ಅಧ್ಯಯನ ಮಾಡಿರುವ ಹಿರಿಯ ವಿದ್ವಾಂಸರು. ಅವರು ಬುದ್ಧನ ಜೀವನಚರಿತ್ರೆಯ ಕುರಿತು ಉಳಿದಿರುವ ಐದು ಗ್ರಂಥಗಳನ್ನು ಹೆಸರಿಸುತ್ತಾ, ಎರಡನೆಯದಾಗಿ ಹೆಸರಿಸಿರುವುದು ಮಹಾಸಾಂಘಿಕ ಸರ್ವಾಸ್ತಿವಾದ ಪಂಥದ ಮಿಶ್ರ ಸಂಸ್ಕೃತ ಭಾಷೆಯ ಲಲಿತವಿಸ್ತರ.

ಬುದ್ಧನ ಆತ್ಮಕಥೆ ಎನ್ನಬಹುದಾದ ಲಲಿತವಿಸ್ತರವು ಗದ್ಯ–ಪದ್ಯ ಮಿಶ್ರಿತವಾದ ಕೃತಿ. ಇದರ ರಚನೆಯ ಕಾಲ ಕ್ರಿ.ಶ.ಒಂದನೆಯ ಶತಮಾನ ಎಂದು ಊಹಿಸಲಾಗಿದೆ. ಮೊದಲಿಗೆ ಬಹುತೇಕ ಮೌಖಿಕವಾಗಿಯೇ ಪ್ರಚಲಿತವಾಗಿದ್ದ ಲಲಿತವಿಸ್ತರವು ನಂತರ ಗ್ರಂಥಸ್ಥವಾಗಿದೆ ಎಂದು ತಿಳಿಯಲಾಗಿದೆ.

ಲಲಿತವಿಸ್ತರವು ಸಂಸ್ಕೃತದಿಂದ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದ್ದೇ 20ನೆಯ ಶತಮಾನದ ಆರಂಭದ ದಶಕಗಳಲ್ಲಿ ಎಂದು ಬಿ.ಎನ್. ಶ್ರೀನಿವಾಸನ್ ಸ್ಪಷ್ಟವಾಗಿ ತಿಳಿಸಿದ್ದಾರೆ. ಸಂಸ್ಕೃತದಿಂದ ಟಿಬೆಟಿಯನ್, ಚೀನೀ ಮತ್ತು ಫ್ರೆಂಚ್ ಭಾಷೆಗಳಿಗೆ ಬಹಳ ಹಿಂದೆಯೇ ಅನುವಾದವಾಗಿತ್ತು ಎಂದು ಈ ಮೊದಲೇ ತಿಳಿಸಲಾಗಿದೆ. ಸಂಸ್ಕೃತದಿಂದ ಇತರ ಭಾರತೀಯ ಭಾಷೆಗಳ ಪೈಕಿ ತೆಲುಗಿಗೆ ಲಲಿತವಿಸ್ತರ ಅನುವಾದವಾದದ್ದು 1962ರಲ್ಲಿ. ಆ ಮೂಲಕ, ಕನ್ನಡಕ್ಕೆ ಸುಮಾರು 55 ವರ್ಷಗಳ ನಂತರ, ಅಂದರೆ 2017ರಲ್ಲಿ, ಅನುವಾದವಾಗಿ ಬಂದಿದೆ. ಸಂಸ್ಕೃತದಿಂದ ತೆಲುಗಿಗೆ ಅನುವಾದ ಮಾಡಿದ ತಿರುಮಲ ರಾಮಚಂದ್ರ ಮತ್ತು ಬುಲುಸು ವೆಂಕಟರಮಣಯ್ಯ ಅವರು ಸಂಸ್ಕೃತ ಮತ್ತು ತೆಲುಗು ಮಾತ್ರವಲ್ಲದೆ ಪಾಲಿ ಭಾಷೆಯನ್ನೂ ಚೆನ್ನಾಗಿ ತಿಳಿದಿದ್ದವರು. ಆದ್ದರಿಂದ ಬೌದ್ಧ ಪರಿಭಾಷೆಯನ್ನು ಗ್ರಹಿಸುವುದು ಅವರಿಗೆ ಕಷ್ಟವಾಗಿಲ್ಲ. ತಿರುಮಲ ರಾಮಚಂದ್ರ ಅವರಂತೂ ಭಾರತದ ಬಹುತೇಕ ಭಾಷೆಗಳು, ಇತಿಹಾಸ ಮತ್ತು ತತ್ತ್ವಶಾಸ್ತ್ರವನ್ನು ಚೆನ್ನಾಗಿ ತಿಳಿದಿದ್ದರು ಎನ್ನುವುದು ನನಗೆ ವೈಯಕ್ತಿಕವಾಗಿ ತಿಳಿದಿರುವ ವಿಷಯ. ಈ ಹಿನ್ನೆಲೆಯಲ್ಲಿ ಲಲಿತವಿಸ್ತರದ ಕನ್ನಡ ಅನುವಾದವನ್ನು ಕುತೂಹಲದಿಂದ ನಿರೀಕ್ಷಿಸಲಾಗಿತ್ತು.

ಲಲಿತವಿಸ್ತರ ಗದ್ಯದಲ್ಲಿದ್ದರೂ, ನಡುವೆ ಪ್ರಾಕೃತ ಮಿಶ್ರ ಗಾಹೆಗಳು ಮತ್ತು ಸಂಗ್ರಹ ಶ್ಲೋಕಗಳಿವೆ. ತುಷಿತಭವನದಲ್ಲಿ ದೇವತೆಗಳಿಂದ ಸೇವಿತನಾದ ಬೋಧಿಸತ್ವನು ಭೂಲೋಕದಲ್ಲಿ ಧರ್ಮ ಪ್ರತಿಷ್ಠಾಪನೆಗಾಗಿ ಬುದ್ಧನಾಗಿ ಅವತರಿಸಿ, ಸುಖಗಳನ್ನು ತ್ಯಜಿಸಿ, ಸಂಸಾರವನ್ನು ತ್ಯಾಗ ಮಾಡಿ, ಹಲವು ಅಡ್ಡಿ-ಆತಂಕಗಳ ನಡುವೆ ತಪಸ್ಸನ್ನು ಮಾಡಿ, ಸಮ್ಯಕ್ ಜ್ಞಾನವನ್ನು ಪಡೆದು, ಶಿಷ್ಯರಿಗೆ ತತ್ತ್ವೋಪದೇಶ ಮಾಡಿದ ವಿಚಾರವು ಲಲಿತವಿಸ್ತರದ ಕಥಾಹಂದರ. ಪರಿವರ್ತ ಎಂಬ ಶೀರ್ಷಿಕೆಯ ಅಡಿಯಲ್ಲಿ ಇಪ್ಪತ್ತೇಳು ಅಧ್ಯಾಯಗಳಲ್ಲಿ ನಿರೂಪಿತವಾಗಿರುವ ಗ್ರಂಥದಲ್ಲಿ ಜಾತಕ ಕಥೆಗಳಲ್ಲಿ ಸಾಮಾನ್ಯವಾಗಿ ಕೇಳಿದ್ದ ಕಥೆಗಳನ್ನು ಒಂದು ಕ್ರಮದಲ್ಲಿ ಜೋಡಿಸಿಕೊಡಲಾಗಿದೆ.

ಲಲಿತವಿಸ್ತರದ 10ನೆಯ ಅಧ್ಯಾಯವು ವಿಶೇಷ ಗಮನ ಸೆಳೆಯಲು ಕಾರಣವೆಂದರೆ, ಅಲ್ಲಿ ಬೋಧಿಸತ್ತ್ವ ಕಲಿತ ವಿದ್ಯೆಗಳ ವಿವರಗಳು ದೊರೆಯುತ್ತವೆ. ಲಿಪಿಶಾಲೆಗೆ ಬೋಧಿಸತ್ತ್ವ ಪ್ರವೇಶಿಸಿದ ಸಂದರ್ಭದಲ್ಲಿ ಅಲ್ಲಿದ್ದ ಗುರು ವಿಶ್ವಾಮಿತ್ರ ಬೋಧಿಸತ್ತ್ವನ ತೇಜಸ್ಸನ್ನು ನೋಡಿ ಕುಸಿದುಬೀಳುತ್ತಾನೆ ಎಂಬ ಮಾತಿದೆ. ಲಲಿತವಿಸ್ತರದಲ್ಲಿ ನಿರೂಪಿತವಾಗಿರುವಂತೆ ಬೋಧಿಸತ್ತ್ವ ಆ ಮೊದಲಿನ ಅನೇಕ ಜನ್ಮಗಳಲ್ಲಿ ಮಾನವಲೋಕದಲ್ಲಿ ಎಷ್ಟೆಷ್ಟು ಶಾಸ್ತ್ರಗಳಿವೆಯೋ ಅವುಗಳೆಲ್ಲದರ ಜೊತೆಗೆ ಸಂಖ್ಯಾಲಿಪಿ, ಗಣನೆ, ಧಾತುತಂತ್ರ, ಶಿಲ್ಪ, ಯೋಗ ಇತ್ಯಾದಿ ವಿದ್ಯೆಗಳನ್ನು ತಿಳಿದಿರುತ್ತಾನೆ. ಲಿಪಿಶಾಲೆಯಲ್ಲಿ ಬರೆಯುವ ಹಲಗೆಯನ್ನು ಹಿಡಿದ ಬೋಧಿಸತ್ತ್ವ ತನಗೆ ಯಾವ ಲಿಪಿಯನ್ನು ಕಲಿಸುವಿರೆಂಬ ಪ್ರಶ್ನೆಯನ್ನು ಮುಂದಿಡುತ್ತಾನೆ. ಆ ಹೊತ್ತಿಗೆ ಅವನಿಗೆ 64 ಲಿಪಿಗಳ ಪರಿಚಯವಾಗಿರುತ್ತದೆ. ಅವುಗಳ ಹೆಸರುಗಳನ್ನೂ ಲಲಿತವಿಸ್ತರ ಪ್ರಸ್ತಾಪಿಸಿದೆ. 64 ಲಿಪಿಗಳ ಪಟ್ಟಿಯಲ್ಲಿ ಬಾಹ್ಮೀ, ಖರೋಷ್ಠಿ, ಅಂಗ, ವಂಗ, ಮಗಧ ಇತ್ಯಾದಿ ಲಿಪಿಗಳ ಜೊತೆಗೆ ದ್ರಾವಿಡ ಲಿಪಿಯ ಹೆಸರೂ ಇದೆ. ಇದರಿಂದ ಆ ಕಾಲಕ್ಕೆ ಇನ್ನೂ ದ್ರಾವಿಡ ಭಾಷೆಗಳನ್ನು ಪ್ರತ್ಯೇಕವಾಗಿ ಹೆಸರಿಸುವ ಕ್ರಮ ಇರಲಿಲ್ಲವೆಂದು ಭಾವಿಸಲು ಅವಕಾಶಗಳಿವೆ.

ಲಲಿತವಿಸ್ತರದ ಪಠ್ಯಕ್ಕೆ ಸಂಬಂಧಿಸಿದಂತೆ, ಅಲ್ಲಿ ಬಳಕೆಯಾಗಿರುವ ಪಾರಿಭಾಷಿಕ ಪದಗಳಿಗೆ ಅಡಿಟಿಪ್ಪಣಿಯಲ್ಲಿ ವಿವರಣೆ ನೀಡಿರುವುದರಿಂದ ಪಠ್ಯದ ಓದು ಸುಲಭವಾಗಿ ಸಾಗುತ್ತದೆ. ಲಲಿತವಿಸ್ತರವನ್ನು ರಚಿಸಿದ ಕಾಲಕ್ಕೇ ಬುದ್ಧನಿಗೆ ದೇವತ್ವವನ್ನು ಆರೋಪಿಸಿರುವುದು ಅಂದಿನ ನಂಬಿಕೆಯ ಮಾತೆನ್ನುವುದು ಸ್ಪಷ್ಟ. ಲಲಿತವಿಸ್ತರವು ಮಹಾಯಾನ ಪಂಥಕ್ಕೆ ಸೇರಿರುವುದೂ ಆ ನಂಬಿಕೆಯನ್ನು ಪುಷ್ಟೀಕರಿಸುತ್ತದೆ. ಸಾಮಾನ್ಯವಾಗಿ ಸಂಸ್ಕೃತ ಪಠ್ಯವು ದೀರ್ಘಸಮಾಸಯುಕ್ತವಾಗಿರುತ್ತದೆ; ಅಂತೆಯೇ ತೆಲುಗು ಪಠ್ಯವೂ ಇರುತ್ತದೆ. ಈ ಮಾದರಿಯನ್ನು ಕನ್ನಡ ಅನುವಾದದಲ್ಲಿಯೂ ಅನುಸರಿಸಿರುವುದರಿಂದ ಪಠ್ಯದ ಸೊಗಸು ಹೆಚ್ಚಿದೆ. ಉದಾಹರಣೆಗೆ, ಆತನು ಸರ್ವಪದಪ್ರಭೇದನಿರ್ದೇಶಾಸಂಗ ಪ್ರತಿಸಂವಿದ್ ಜ್ಞಾನದಲ್ಲಿಯೂ ಅವತಾರ ಜ್ಞಾನದಲ್ಲಿಯೂ ಕುಶಲನು. ಸರ್ವಬುದ್ಧಭಾಷಿತ ಧಾರಣ ಸ್ಮೃತಿ ಭಾಜನ ವಿಕ್ಷೇಪಾನಂತಾ ಪರ್ಯಂತ ಧಾರಣಾ ಪ್ರತಿಲಬ್ಧನು... ಹೀಗೆ ಯಾವುದೇ ಭಾಷಾ ಮರ್ಯಾದೆಗೆ ಭಂಗ ಬರದಂತೆ ಅನುವಾದಕರು ಎಚ್ಚರ ವಹಿಸಿರುವುದು ಅನುವಾದದ ಸೊಗಸನ್ನು ಹೆಚ್ಚಿಸಿದೆ. ಚಕ್ರವರ್ತಿಯು ಹೊಂದಿರಬೇಕಾದ ಕೆಲವು ವಿಶಿಷ್ಟ ಲಕ್ಷಣಗಳನ್ನು ಹೆಸರಿಸುತ್ತಾ, ಅವನು ಚಕ್ರರತ್ನ, ಹಸ್ತಿರತ್ನ, ಅಶ್ವರತ್ನ, ಮಣಿರತ್ನ, ಸ್ತ್ರೀರತ್ನ ಇತ್ಯಾದಿಗಳನ್ನು ಹೊಂದಿರುತ್ತಾನೆಂದು ವರ್ಣಿಸಲಾಗಿದೆ. ಈ ವಿವರಗಳು ಲಲಿತವಿಸ್ತರಕ್ಕೆ ಪುರಾಣದ ಮೆರುಗು ನೀಡಿವೆ.

ಲಲಿತವಿಸ್ತರವು ಬುದ್ಧನ ಕಾಲ ಮತ್ತು ಆ ನಂತರ ಅವನ ಹುಟ್ಟಿನಿಂದ ಮೊದಲ ಉಪದೇಶದವರೆಗಿನ ಕಾಲದ ಭಾರತದ ಬದುಕನ್ನು ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದೆ. ಗಣಗಳು, ಅವರ ಪದ್ಧತಿಗಳು, ಅವರ ಆಚರಣೆಗಳು, ಬದುಕಿನ ಬಗೆಗಿನ ನಿರೀಕ್ಷೆಗಳು, ಆತಂಕಗಳ ನಿವಾರಣೆಗೆ ವಹಿಸುತ್ತಿದ್ದ ಎಚ್ಚರ ಇತ್ಯಾದಿ ಹಲವಾರು ವಿಚಾರಗಳು ಆ ಕಾಲದ ಜನರಿಗಿದ್ದ ಜೀವನಪ್ರೀತಿಯ ದ್ಯೋತಕವಾಗಿವೆ.

ಇಲ್ಲಿ ಆಯಾ ಕಾಲಘಟ್ಟದ ಪ್ರತಿಯೊಂದು ವಿವರಗಳೂ ಇವೆ. ಮನುಷ್ಯನ ಅತಿಸೂಕ್ಷ್ಮ ಭಾವಗಳನ್ನೂ ವಿವರಿಸುವ ಕಥನಶೈಲಿಯು ಲಲಿತವಿಸ್ತರದ ಓದನ್ನು ಕುತೂಹಲದ ಪರಿಧಿಯಲ್ಲಿ ಹಿಡಿದಿಡುತ್ತದೆ.

ಈ ಕಥಾಸರಣಿಯನ್ನು ಸಮರ್ಥಿಸುವಂತೆ ಸೇರ್ಪಡೆ ಮಾಡಿರುವ ಬೋರೋಬುದುರ್‌ನ ಬೃಹತ್ ಬೌದ್ಧಸ್ತೂಪದ ಗೋಡೆಗಳ ಮೇಲೆ 120 ಪಟ್ಟಿಕೆಗಳಲ್ಲಿ ಕೆತ್ತಲಾಗಿರುವ ಶಿಲ್ಪಗಳ ಛಾಯಾಚಿತ್ರಗಳು ಗ್ರಂಥದ ಅರ್ಥವನ್ನು ಹೆಚ್ಚಿಸಿವೆ. ಆ 120 ಛಾಯಾಚಿತ್ರಗಳಿಗೂ ನೀಡಿರುವ ಸಂಕ್ಷಿಪ್ತ ವಿವರಣೆ ಓದುಗರಿಗೆ ಕಥೆಯನ್ನು ಚಿತ್ರಗಳ ಮೂಲಕ ತಲುಪಿಸುವಲ್ಲಿ ಸಮರ್ಥವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.