ಭಾರತದಲ್ಲಿ ಬ್ರಿಟಿಷರು ಕಾಲೂರಿದ ನಂತರ ಅನೇಕ ಬಗೆಯ ಸಮಾಜ ಸುಧಾರಣಾ ಚಳವಳಿಗಳು ಆರಂಭವಾದರೂ ಅವೆಲ್ಲಗಳ ಕಾವು ದಕ್ಷಿಣ ಭಾರತಕ್ಕೆ, ಕರ್ನಾಟಕಕ್ಕೆ ತಟ್ಟಿದ್ದು ಕಡಿಮೆ ಎಂದೇ ಹೇಳಬಹುದು. ಸ್ವಾತಂತ್ರ್ಯ ಹೋರಾಟದ ಜೊತೆಜೊತೆಗೇ ನಮ್ಮೊಳಗಿನ ವೈರಿಗಳೆನಿಸಿದ ಧಾರ್ಮಿಕ ಕಂದಾಚಾರ, ಮೂಢನಂಬಿಕೆ, ಸ್ತ್ರೀಶೋಷಣೆ, ಜಾತಿಪದ್ಧತಿಗಳಂಥ ಅನಿಷ್ಟಗಳ ನಿವಾರಣೆಗೆಂದು ಕರ್ನಾಟಕದಲ್ಲಿ ಆಂದೋಲನಗಳು ನಡೆದಿದ್ದರೆ ಅವುಗಳ ದಾಖಲೆ ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಅಂಥದ್ದೊಂದು ವಿಶಿಷ್ಟ ದಾಖಲೆಯನ್ನು ಹೆಕ್ಕಿ ತೆಗೆದು ‘ವಿಧವೆಯರು ವಿವಾಹವಾದರು’ ಹೆಸರಿನ ಪುಸ್ತಕವೊಂದನ್ನು ಬಹುರೂಪಿ ಪ್ರಕಾಶನ ಸಂಸ್ಥೆ ಹೊರತಂದಿದೆ.

ನನಗಿನ್ನೂ ನೆನಪಿದೆ, 60 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ನಮ್ಮ ಹವ್ಯಕ ಸಮುದಾಯದಲ್ಲಿ ಪ್ರತಿಯೊಂದು ಚಿಕ್ಕಪುಟ್ಟ ಊರಿನಲ್ಲೂ ವೈಧವ್ಯದ ಛಾಪು ಹೊತ್ತ ಹೆಂಗಸರಿದ್ದರು. ಅಂಥ ನತದೃಷ್ಟ ಮಹಿಳೆಯರ ಬಗ್ಗೆ ಕತೆ ಕಾದಂಬರಿಗಳು, ‘ಘಟಶ್ರಾದ್ಧ’ದಂಥ ಸಿನಿಮಾ ಬರುವುದಕ್ಕಿಂತ ದಶಕಗಳ ಮೊದಲೇ 1920ರಲ್ಲೇ ಈ ಕ್ರೂರ ಸಂಪ್ರದಾಯದ ವಿರುದ್ಧ ಜನಾಂದೋಲನವನ್ನು ರೂಪಿಸಿದ ಅಕದಾಸ ಗಣಪತಿ ಭಟ್ಟರ ಹೋರಾಟದ ಕತೆ ಈ ಪುಸ್ತಕದ ಕೇಂದ್ರಭಾಗವಾಗಿದೆ. ಅಷ್ಟೇನೂ ಸುಶಿಕ್ಷಿತರಲ್ಲದಿದ್ದರೂ ಶಿರಸಿಯಲ್ಲಿ ಅಡಿಕೆ ಮಂಡಿಯನ್ನು ನಡೆಸುತ್ತ ಭಟ್ಟರು ಅಂದಿನ ಸಮಾಜದಲ್ಲಿ ಪ್ರತಿಷ್ಠಿತರಾಗಿದ್ದರು. ಆ ಪ್ರತಿಷ್ಠೆಯನ್ನೇ ಪಣಕ್ಕಿಟ್ಟು ಮಠಾಧೀಶರ ಮತ್ತು ಕರ್ಮಠ ಬ್ರಾಹ್ಮಣರ ವಿರುದ್ಧ ನಿಂತು ಬಾಲವಿಧವೆಯರಿಗೆ ಮತ್ತೆ ಕಂಕಣಬಲ ಕೊಡಿಸುವಲ್ಲಿ ಎದುರಿಸಿದ ಏಳುಬೀಳುಗಳ ವಿವರಗಳು ಇದರಲ್ಲಿವೆ. ತೊಟ್ಟಿಲಲ್ಲಿರುವ ಹೆಣ್ಣುಶಿಶುಗಳಿಗೇ ಮದುವೆ ಮಾಡುವ ಸಂಪ್ರದಾಯ ರೂಢಿಯಲ್ಲಿದ್ದ ಕಾಲ ಅದಾಗಿತ್ತು. ಸಮಾಜ ಸುಧಾರಣೆ ಸುಲಭವಾಗಿರಲಿಲ್ಲ. ಅಂಥ ಹೆಣ್ಣುಮಕ್ಕಳು ಮೈನೆರೆಯುವ ಮೊದಲೇ ವಿಧವೆಯಾದರೆ (ಅಕ್ಷತಕನ್ಯೆ) ಮತ್ತೊಮ್ಮೆ ವಿವಾಹವಾಗಲು ವೇದಗಳಲ್ಲಿ, ಶಾಸ್ತ್ರಗ್ರಂಥಗಳಲ್ಲಿ ಅನುಮತಿ ಇದೆಯೆಂಬುದಾಗಿ ಸಾಕ್ಷ್ಯವನ್ನು ಸಂಗ್ರಹಿಸಿ ಇವರು ಪ್ರಚಾರ ಮಾಡಿದರು. ಬಂಗಾಳದಲ್ಲಿ, ಲಾಹೋರಿನಲ್ಲಿ, ಮಹಾರಾಷ್ಟ್ರದಲ್ಲಿ ಅಲ್ಲಲ್ಲಿ ವಿಧವಾ ವಿವಾಹ ನಡೆದ ಉದಾಹರಣೆಗಳನ್ನು ಕರಪತ್ರಗಳಲ್ಲಿ ಅಚ್ಚು ಹಾಕಿ ಊರೂರಿಗೆ ವಿತರಸಿದ್ದೂ ಫಲ ಕೊಡುತ್ತಿರಲಿಲ್ಲ.

ದುರಾದೃಷ್ಟವೆಂಬಂತೆ ಅದೇ ಅವಧಿಯಲ್ಲಿ ಸ್ವತಃ ಭಟ್ಟರೇ ಪತ್ನಿಯನ್ನು ಕಳೆದುಕೊಂಡು ವಿಧುರರಾಗುತ್ತಾರೆ. ಮತ್ತೆ ಅದೇ ಅದೃಷ್ಟವೆಂಬಂತೆ, ಸಾಗರದ ಸಮೀಪದ ನಂದಿತಳೆ ಎಂಬ ಗ್ರಾಮದ ಬಾಲವಿಧವೆ ಮಹಾಂಕಾಳಿ ಎಂಬ ಯುವತಿ (ಹೆಗ್ಗೋಡಿನ ಕೆ.ವಿ. ಸುಬ್ಭಣ್ಣರ ತಾಯಿಯ ಅಕ್ಕ ಈಕೆ) ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೇರಿ ಇವರ ಸಂಪರ್ಕಕ್ಕೆ ಬರುತ್ತಾಳೆ. ಒಂದಿಬ್ಬರು ವೈದಿಕರ ಮನವೊಲಿಸಿ, ಮಠಾಧೀಶರ ಕಟ್ಟಪ್ಪಣೆಯನ್ನು ಧಿಕ್ಕರಿಸಿ ಅಕದಾಸ ಭಟ್ಟರು ಈ ಯುವತಿಯನ್ನು 1932ರಲ್ಲಿ ಮದುವೆಯಾಗುತ್ತಾರೆ. ಪ್ರಶಂಸೆ, ಪ್ರತಿಭಟನೆಗಳ ನಂತರವೇ ಚಳವಳಿಗೆ ಹೊಸ ಬಲ ಬರುತ್ತದೆ. ಸನಾತನಿಗಳ ಸಭೆಗಳಲ್ಲಿ ಚರ್ಚೆಗಳಾಗುತ್ತವೆ. ಗುರುಮಠಗಳ ಬಹಿಷ್ಕಾರ ಘೋಷಣೆಗಳ ನಡುವೆಯೂ ಅಲ್ಲೊಬ್ಬ ಇಲ್ಲೊಬ್ಬ ವಿಧುರರು ವಿಧವೆಯರ ಕೈ ಹಿಡಿಯುತ್ತಾರೆ. ಅಂದಿನ ಕಾಲದ ಹೆಸರಾಂತ ಪತ್ರಕರ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಜಿ. ಆರ್. ಪಾಂಡೇಶ್ವರ ತಮ್ಮ ಮೊದಲ ಮದುವೆಗೇ ಒಬ್ಬ ವಿಧವೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವರಕವಿ ಬೇಂದ್ರೆಯವರ ಸಮ್ಮುಖದಲ್ಲಿ ಜನಪ್ರಿಯ ವೈದ್ಯ-ಸಾಹಿತಿ ಡಾ. ಎಂ. ಗೋಪಾಲಕೃಷ್ಣರಾವ್ ವಿಧವಾ ವಿವಾಹ ಮಾಡಿಕೊಳ್ಳುತ್ತಾರೆ.

1930ರ ದಶಕದಲ್ಲಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಅಂಕೋಲಾದಲ್ಲಿ ಕರನಿರಾಕರಣೆ, ಶಿರಸಿ-ಸಿದ್ದಾಪುರಗಳಲ್ಲಿ ಜಂಗಲ್ ಸತ್ಯಾಗ್ರಹ ನಡೆಯುತ್ತಿದ್ದ ಕಾಲದಲ್ಲೇ ವಿಧವಾ ವಿವಾಹ ಚಳವಳಿಯೂ ವ್ಯಾಪಕವಾಗಿತ್ತು. ಇನ್ನೂರಕ್ಕೂ ಹೆಚ್ಚು ‘ಅಕ್ಷತ ಕನ್ಯೆ’ಯರಿಗೆ ಮರುಮದುವೆಯ ಅವಕಾಶ ಸಿಕ್ಕಿತು. ಮುಂದಿನ ದಶಕದಲ್ಲಿ ಮಹಾಂಕಾಳಮ್ಮ ತಮ್ಮ ಪತಿಯನ್ನು ಕಳೆದುಕೊಂಡು ಮತ್ತೆ ವೈಧವ್ಯಕ್ಕೆ ಜಾರಿದರೂ (1944) ಧೃತಿಗೆಡದೆ ಚಳವಳಿಯ ಪ್ರಮುಖ ವಕ್ತಾರೆಯಾಗಿ, ನಾಯಕಿಯಾಗಿ ಆ ಕಾವು ಆರದಂತೆ ನೋಡಿಕೊಳ್ಳುತ್ತಾರೆ. ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳ ಬ್ರಾಹ್ಮಣರ ಸಮುದಾಯಕ್ಕೂ ಈ ಆಂದೋಲನ ವ್ಯಾಪಿಸುತ್ತದೆ.

ಕಾಲದ ಚಲನೆಯಲ್ಲಿ ಕಳೆದು ಹೋದಂತಿದ್ದ ಆ ಚಳವಳಿಯ ಅಳಿದುಳಿದ ಸಾಕ್ಷ್ಯಗಳನ್ನು ಸಂಗ್ರಹಿಸಿ, ಹಿರಿಯಜ್ಜಿ ಮಹಾಂಕಾಳಮ್ಮನ ಸಂದರ್ಶನ ನಡೆಸಿ, ದಾಖಲೆಗಾಗಿ ಎಲ್ಲೆಲ್ಲ ಅಲೆದು, ಮಾಹಿತಿಯನ್ನು ಸಂಗ್ರಹಿಸಿದ ಶ್ರೇಯ ಪತ್ರಕರ್ತರಾದ ಕಲಗಾರು ಲಕ್ಷ್ಮೀನಾರಾಯಣ ಹೆಗಡೆ ಮತ್ತು ರಾಜೀವ ಅಜ್ಜೀಬಳರಿಗೆ ಸೇರಬೇಕು. ಇಲ್ಲೂ ಒಂದು ವಿಧಿವಿರ್ಯಾಸವಿದೆ: ವಿಧವಾ ವಿವಾಹಗಳ ಬಗೆಗಿನ ತುಂಡು ತುಂಡು ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದ ಅವಧಿಯಲ್ಲೇ ಕಲಗಾರು ಅವರ ಗರ್ಭಿಣಿ ಪತ್ನಿ ಶೈಲಜಾ ವಿಧಿವಶರಾಗುತ್ತಾರೆ. ಮರುಮದುವೆ ಬೇಡವೆಂದು ಖಿನ್ನತೆಯಲ್ಲಿ ಕಾಲನೂಕುತ್ತಿದ್ದ ಕಲಗಾರು ಸ್ವತಃ ತಮ್ಮ ಅತ್ತೆ- ಮಾವನ ಒತ್ತಾಯದ ಮೇರೆಗೆ, ಮಗುವಿದ್ದ ವಿಧವೆಯನ್ನು ಲಗ್ನವಾಗುತ್ತಾರೆ. ಅಕದಾಸ ಭಟ್ಟರ ಕ್ರಾಂತಿಕೈಂರ್ಯದ ಕೊನೆಯ ಕೊಂಡಿ ಅವರೇ ಆಗುತ್ತಾರೆ. ತಮ್ಮ ಬಗ್ಗೆ ಏನನ್ನೂ ಹೇಳಿಕೊಳ್ಳದೆ, ರಾಜೀವ ಅಜ್ಜೀಬಳರ ಜೊತೆಗೂಡಿ ವಿಧವಾ ವಿವಾಹದ ಆಂದೋಲನ ಬಗ್ಗೆ ಕಿರುಪುಸ್ತಕವನ್ನು ಪ್ರಕಟಿಸುತ್ತಾರೆ.

ಶಿರಸಿ, ತಾಳಗುಪ್ಪ, ಸಾಗರದ ಸೀಮಿತ ವಲಯದಲ್ಲೇ ವಿತರಣೆಗೊಂಡು ಮರೆತೂ ಹೋದಂತಿದ್ದ ಆ ಪುಟ್ಟ ಪುಸ್ತಕ ಹೇಗೋ ಜಿ.ಎನ್. ಮೋಹನ್ ಅವರಿಗೆ ಸಿಕ್ಕಿತು. ‘ಇದು ನಿನ್ನೆಗೆ ಹಿಡಿದ ಕನ್ನಡಿ; ನಾಳೆಗೆ ನೀಡಿದ ಎಚ್ಚರ’ ಎಂದು ನಿರ್ಧರಿಸಿ, ಇದನ್ನೇ ಇನ್ನಷ್ಟು ವಿಸ್ತೃತವಾಗಿ ಬರೆದುಕೊಡುವಂತೆ ಕಲಗಾರು ಲಕ್ಷ್ಮೀನಾರಾಯಣ ಹೆಗಡೆ ಅವರನ್ನು ಕೋರುತ್ತಾರೆ. ಇನ್ನಷ್ಟು ಸಂಗತಿಗಳು ಬೆಳಕಿಗೆ ಬರುವಂತೆ ಮಾಡುತ್ತಾರೆ. ಉದಾಹರಣೆಗೆ: 1921ರ ಜನಗಣತಿ ದಾಖಲೆಯ ಪ್ರಕಾರ ಅಂದು ಇಡೀ ದೇಶದಲ್ಲಿ ಗರ್ಭಧರಿಸುವ ವಯಸ್ಸಿನ ಮಹಿಳೆಯರ ಸಂಖ್ಯೆ 6,11,85,00 ಇದ್ದರೆ, ವಿಧವೆಯರ ಸಂಖ್ಯೆ 60,71,206 (ಶೇಕಡಾ 10)ರಷ್ಟು ದೊಡ್ಡ ಪ್ರಮಾಣದಲ್ಲಿತ್ತು. ನೆಹರೂ ಶಿರಸಿಗೆ ಬಂದಾಗ ಬಹಿರಂಗ ಸಭೆಯಲ್ಲಿ ಅಷ್ಟೊಂದು ವಿಧವೆಯರನ್ನು ನೋಡಿ ದಂಗಾಗಿದ್ದರು.

ಆಗಿನ ಹವ್ಯಕ ಸಮುದಾಯದಲ್ಲಿ ವಿಧವೆಯರು ಗರ್ಭಿಣಿಯರಾಗಿ, ಬಸಿರನ್ನು ಇಳಿಸಿಕೊಳ್ಳಲೆಂದು ಏನೆಲ್ಲ ಯತ್ನಿಸಿ, ಅಥವಾ ಕದ್ದುಮುಚ್ಚಿ ಪ್ರಸವಿಸಿ ಪ್ರಾಣತೆತ್ತವರ ಸಂಖ್ಯೆ ಎಷ್ಟಿತ್ತೊ ಗೊತ್ತಿಲ್ಲ. ಅಂಥ ಹತಭಾಗ್ಯೆಯರಿಗೆ ಹುಟ್ಟಿದ ಮಕ್ಕಳು ಬಹಿಷ್ಕೃತರಾಗಿ ಶೂದ್ರರಿಗೆ ಸಮನಾದ ‘ಮಾಲೇರು’ ಎಂಬ ಹೊಸ ಸಮುದಾಯವೇ ಸೃಷ್ಟಿಯಾಗಿತ್ತು.

ಈ ಹೊಸ ಕೃತಿಯಲ್ಲಿ ಮಲೆನಾಡಿನ ಕತ್ತಲಯುಗದ ಅಂಥ ಕ್ರೂರ ಕಥನವೂ ಇದೆ, ದೀವಟಿಗೆಯ ಹಳೆಬೆಳಕೂ ಇದೆ.

ವಿಧವೆಯರು ವಿವಾಹವಾದರು

ಲೇ: ಕಲಗಾರು ಲಕ್ಷ್ಮೀನಾರಾಯಣ ಹೆಗಡೆ

ಪ್ರ: ಬಹುರೂಪಿ ಪ್ರಕಾಶನ

ಸಂ: 70191 82729

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.