ವೃತ್ತಿಯಿಂದ ಸಿವಿಲ್ ಎಂಜಿನಿಯರ್ ಆಗಿರುವ ಕತೆಗಾರ ಕರ್ಕಿ ಕೃಷ್ಣಮೂರ್ತಿ ಅವರ ಕತೆಗಳ ಮೂರನೇ ಸಂಕಲನವಿದು. ಈ ಸಂಕಲನಕ್ಕೂ ಮುನ್ನ ಅವರು ‘ಮಳೆ ಮಾರುವ ಹುಡುಗ’ ಮತ್ತು ‘ಗಾಳಿಗೆ ಮೆತ್ತಿದ ಬಣ್ಣ’ ಎನ್ನುವ ಎರಡು ಸಂಕಲನಗಳನ್ನು ಪ್ರಕಟಿಸಿದ್ದರು. ಈ ಸಂಕಲನದಲ್ಲಿ ಒಟ್ಟು ಎಂಟು ಕತೆಗಳಿವೆ. ಅವು ಒಂದಕ್ಕಿಂತ ಮತ್ತೊಂದು ಭಿನ್ನವಾದ ಅನುಭವ ಲೋಕವನ್ನು ಅನಾವರಣ ಮಾಡುತ್ತವೆ ಎನ್ನುವುದು ವಿಶೇಷ.

ಈ ಕತೆಗಳನ್ನು ‘ಬರೆದ ಕತೆಗಳು’ ಮತ್ತು ‘ಬರೆಸಿಕೊಂಡ ಕತೆಗಳು’ ಎಂದು ವಿಭಾಗಿಸಿಕೊಳ್ಳಬಹುದು. ಕತೆಗಾರ ತನ್ನ ಒಳಗೆ ಮೊಳಕೆಯೊಡೆದು ಹುಟ್ಟಿ ಕಾಪಿಟ್ಟು ಕಾದು ಕತೆಯಾಗಿಸಿದ ಕತೆಗಳನ್ನು ಬರೆಸಿಕೊಂಡ ಕತೆಗಳು ಎನ್ನಬಹುದಾದರೆ, ಕತೆಗಾರನ ಕತೆ ಹೇಳುವ ಹಂಬಲಕ್ಕಾಗಿ ರಚನೆಯಾದ ಕತೆಗಳನ್ನು ಬರೆದ ಕತೆಗಳು ಎನ್ನಬಹುದು. ಈ ಎರಡೂ ಬಗೆಯ ಕತೆಗಳು ಈ ಸಂಕಲನದಲ್ಲಿವೆ.

ಹಾಗೆಂದರೆ ಮೊದಲನೆಯ ಗುಂಪಿಗೆ ಸೇರಿದ ಕತೆಗಳು ಯಶಸ್ವಿ ಎಂದಾಗಲಿ, ಎರಡನೆಯ ಗುಂಪಿಗೆ ಸೇರಿಸಿದ ಕತೆಗಳು ‘ಸಾಧನೆ’ಯ ದೃಷ್ಟಿ ಕಡಿಮೆ ಎಂದಾಗಲಿ ಅಲ್ಲ. ಹಾಗಿದ್ದರೆ ಈ ವರ್ಗೀಕರಣ ಏಕಾಗಿ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ‘ತೀವ್ರತೆ’ ಹಾಗೂ ಬಹು ಆಯಾಮದ ಓದಿಗೆ ಅನುವು ಮಾಡಿಕೊಡುವುದು, ಕತೆಗಳು ಓದುಗನನ್ನು ತನ್ನೊಳಗೇ ಸೆಳೆದುಕೊಂಡು ತಾನೂ ಬೆಳೆಯುತ್ತ ಹೋಗುವುದು. ಓದಿನ ಸುಖ ಹೆಚ್ಚಿಸುವ ಕತೆಗಳ ಸಂಖ್ಯೆ ಹೆಚ್ಚಿರುವುದು ವಿಶೇಷ. ಇನ್ನೊಂದು ವರ್ಗದಲ್ಲಿ ‘ಕತೆಗಳಿವೆ’. ಅವು ಕೇವಲ ಕತೆಗಳಾಗಿವೆ. ಅದಕ್ಕಿಂತ ಹೆಚ್ಚಿನ ಜಿಗಿತ ಸಾಧ್ಯವಾಗಿಲ್ಲ. ಒಬ್ಬ ಕತೆಗಾರನ ಎಲ್ಲ ಕತೆಗಳ ಯಶಸ್ಸು ಏಕರೂಪಿಯಾಗಿರಬೇಕು ಎಂದೇನಿಲ್ಲ. ಹಾಗೆ ಇರಲಾರದು ಎನ್ನುವುದು ಸೃಷ್ಟಿ ಕ್ರಿಯೆಯ ವಿಶೇಷ. ಕತೆಗಾರನನ್ನು ಮೀರಿ ಕತೆಗಳು ಬೆಳೆಯುತ್ತ ಹೋಗುವುದೇ ಹೀಗೆ.

ಎಂಟೂ ಕತೆಗಳು ನಡೆಯುವ ನೆಲ ವಿದೇಶ. ಕತೆಗಾರರೇ ಕರೆದುಕೊಂಡಂತೆ ಇಲ್ಲಿರುವ ‘ವಿದೇಶಿ ನೆಲದ ಕತೆಗಳು’ ಕೇವಲ ವಸ್ತುವಿನ ಕಾರಣಕ್ಕಾಗಿ ವಿದೇಶಿ ಅಷ್ಟೆ. ಆದರೆ, ಅವು ಮಿಡಿಯುವ ಸಂವೇದನೆ ಮಾನವೀಯ. ಇದೇ ಕಾರಣಕ್ಕಾಗಿ ಅವು ನಾವೇ ಕಟ್ಟಿಕೊಂಡ ಗಡಿಗಳನ್ನು ಮೀರುತ್ತವೆ. ಕತೆ ನಡೆಯುವ ನೆಲ ವಿದೇಶವಾಗಿದ್ದರೂ ಅವು ಕಟ್ಟುವ ಸೊಗಸಾದ ಕ್ರಮದಿಂದಾಗಿ ‘ವಿದೇಶಿ’ ಆಗುವುದಿಲ್ಲ. ಹಾಗೆ ನೋಡಿದರೆ ಅವು ಯಾವುದೇ ನೆಲದಲ್ಲಾದರೂ ಸಂಭವಿಸಬಹುದಾದವು. ಹೀಗಾಗಿ ವಿದೇಶಿ ನೆಲದಲ್ಲಿ ನಡೆಯುವುದು ಕತೆಗಾರರು ಕತೆಗಳನ್ನು ಚೆಂದಗಾಣಿಸುವುದಕ್ಕೆ ಬಳಸಿದ ತಂತ್ರ. ಅದು ಕೇವಲ ತಂತ್ರವಾಗಿ ಬಳಕೆಯಾಗಿಲ್ಲ. ಅದು ಕತೆಗಳ ಸಾವಯವ ಗುಣವೇ ಆಗಿದೆ. ಹೀಗಾಗಿಯೇ ಈ ಕತೆಗಳಿಗೆ ಕಾಲಾತೀತವಾಗುವ ಗುಣ ಲಭಿಸಿದೆ.

ಸಂಕಲನದ ಮೊದಲ ಕತೆಯಾಗಿ ಪ್ರಕಟವಾಗಿರುವ ‘ಅದು ಹಾಗೇ’ ಗಮನ ಸೆಳೆಯುವುದು ಮನುಷ್ಯಲೋಕದ ಸಂಕೀರ್ಣ ಸಂಗತಿಗಳನ್ನು ಸೊಗಸಾಗಿ ದಾಖಲಿಸುವ ಕಾರಣದಿಂದಾಗಿ. ಅಲ್ಲಿ ಬಳಸಿರುವ ಭಾಷೆ ಕಟ್ಟುವ ಕ್ರಮ ಹಾಗೂ ನಿರ್ವಹಿಸಿದ ರೀತಿ ಅದ್ಭುತ ಎನ್ನುವಷ್ಟು ಚೆನ್ನಾಗಿವೆ. ಈ ಸುದೀರ್ಘ ಕತೆಯು ಕತೆಗಾರರ ಯಶಸ್ಸಿನ ದ್ಯೋತಕದಂತಿದೆ. ಚೀನಾದ ಮಹಾಗೋಡೆ ನೋಡಲು ಹೋದ ನಾಯಕ ನೋಡಿಯೂ ನೋಡದೇ ಬರುವುದು, ಕಂಡರೂ ಕಾಣಿಸದೇ ಇರುವ ಆದರೆ ನೋಡಬಯಸುವ ಹುಡುಕಾಟವನ್ನು ಹಿಡಿದಿಟ್ಟ ಕ್ರಮ ವಿಶಿಷ್ಟ. ‘ಬಂದರ್ ಎ ಅಬ್ಬಾಸ್’ ಕೂಡ ಇದೇ ಸಾಲಿನಲ್ಲಿ ನಿಲ್ಲುವ ಕತೆ.

‘ಕಾಣದ ಗೆರೆಗಳು’ ಮತ್ತು ‘ಸಮಾಧಿ ಶಿವು’ ಕತೆಗಳು ಕಾರ್ಪೊರೇಟ್ ಲೋಕದ ಕ್ರೌರ್ಯವನ್ನು ಹೇಳುವುದರ ಜೊತೆಗೆ ಮನುಷ್ಯ ಸಹಜ ಸಣ್ಣತನವನ್ನೂ ದಾಖಲಿಸುತ್ತವೆ. ‘ಸಮಾಧಿ ಶಿವು’ ನೇರವಾಗಿ ಎಲ್ಲವನ್ನೂ ಹೇಳಿ ಬಿಡುವ ಕತೆಯಾದರೆ ‘ಕಾಣದ ಗೆರೆಗಳು’ ಸಂಕೀರ್ಣವಾಗಿದೆ.

ಮನುಷ್ಯ ಸಹಜ ಹುಡುಕಾಟ, ಕುತೂಹಲಗಳು ಪಡೆದುಕೊಳ್ಳುವ ತೀವ್ರತೆಯ ಸ್ವರೂಪವನ್ನು ದಾಖಲಿಸುವ ’ತುದಿ’ಯ ವಸ್ತು ಅಪರೂಪದ್ದು. ಅದರ ವಿವರಗಳು ಓದುಗನಲ್ಲಿ ಆಸಕ್ತಿ ಹುಟ್ಟಿಸಲು ಕಾರಣವಾಗುವುದರ ಜೊತೆಗೆ ಅದು ಬಿಚ್ಚಿಕೊಳ್ಳುತ್ತ ಹೋಗುವ ಕ್ರಮ ಪ್ರಿಯವಾಗುವ ಹಾಗಿದೆ. ಗಾತ್ರದಲ್ಲಿ ಅಕ್ಷರಶಃ ಸಣ್ಣಕತೆಗಳಾಗಿರುವ ’ಕಾಯುವ ಕಾಯಕ’ ಮತ್ತು ’ಸನ್ನೆ’ಗಳು ಹೇಳುವುದಕ್ಕಾಗಿ ಬರೆದ ಕತೆಗಳು ಅನ್ನಿಸದೇ ಇರದು. ಅವುಗಳ ಉದ್ದೇಶವೇ ಸರಳ ಮತ್ತು ನೇರ ಆಗಿದೆ.

‘ಜಂಜಿ ಡಪಾತಿ’ (ಕೊಟ್ಟ ಭರವಸೆ ಈಡೇರಿಸಲಾಗಿದೆ) ಕತೆಯನ್ನು ಆಧರಿಸಿ ಲೇಖಕರು ‘ಚುಕ್ಕಿ ಬೆಳಕಿನ ಜಾಡು’ (2020) ಎಂಬ ಕಾದಂಬರಿಯನ್ನು ಪ್ರಕಟಿಸಿದ್ದರು. ಈ ಸಂಕಲನದ ಕತೆಗಳು ಒಂದು ಮತ್ತೊಂದಕ್ಕಿಂತ ಭಿನ್ನವಾಗಿವೆ. ಅದು ವಸ್ತುವಿನ ದೃಷ್ಟಿಯಿಂದ ಮಾತ್ರವಲ್ಲ. ಅವು ನಡೆಯುವ ನೆಲ ಭಿನ್ನವಾಗಿರುವ ಹಾಗೆಯೇ ಬಳಕೆಯಾಗಿರುವ ಭಾಷೆ, ಹೇಳುವ ತಂತ್ರಗಳಿಂದ ಕೂಡ.

ಕೃತಿ: ದಿಬ್ಬದಿಂದ ಹತ್ತಿರ ಆಗಸಕ್ಕೆ

ಲೇ: ಕರ್ಕಿ ಕೃಷ್ಣಮೂರ್ತಿ

ಪ್ರ: ಅಂಕಿತ ಪುಸ್ತಕ, ಬೆಂಗಳೂರು

ಸಂ: 9019190502

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.