ಸಂವಾದ, ಸಂಭಾಷಣೆ, ಪ್ರಶ್ನೋತ್ತರ ಎಂಬುದು ಮನುಷ್ಯ ಜೀವನದಲ್ಲಿ ಅನುದಿನವೂ ನಡೆಯುವಂಥದ್ದು. ಆದರೆ, ಇಬ್ಬರ ನಡುವಿನ ಅದೆಷ್ಟು ಸಂಭಾಷಣೆಗಳನ್ನು ಮನುಕುಲ ನೆನಪಿನಲ್ಲಿ ಇಟ್ಟುಕೊಂಡಿದೆ – ಶ್ರೀಕೃಷ್ಣ ಮತ್ತು ಅರ್ಜುನನ ನಡುವೆ ಯುದ್ಧಭೂಮಿಯಲ್ಲಿ ನಡೆದ ಸಂಭಾಷಣೆಯ ಹೊರತಾಗಿ?!

ಭಗವಂತನ ಮನುಷ್ಯರೂಪ ಶ್ರೀಕೃಷ್ಣ. ಅರ್ಜುನ ಕ್ಷತ್ರಿಯ ಕುಲದಲ್ಲಿ ಜನಿಸಿದ ವೀರ. ಭಗವಂತ ಹಾಗೂ ನರಮನುಷ್ಯನ ನಡುವಿನ ಸಂವಾದವೇ ಭಗವದ್ಗೀತೆ. ಆದರೆ, ಗೀತೆಯನ್ನು ಭಗವಂತ ಮತ್ತು ಮನುಷ್ಯನ ನಡುವಿನ ಸಂವಾದ ಎಂದೇ ಗ್ರಹಿಸಬೇಕೆ? ಅದನ್ನು, ಇಬ್ಬರು ಆಪ್ತ ಸ್ನೇಹಿತರ ನಡುವಣ ಅತ್ಯಾಪ್ತ ಸಂಭಾಷಣೆ ಎಂದು ಅರ್ಥೈಸಿಕೊಳ್ಳಬಾರದೆ?

ಶ್ರೀಕೃಷ್ಣ ಅರ್ಜುನನಿಗೆ ಗೀತೆಯನ್ನು ಮೊದಲೇ ಏಕೆ ಬೋಧಿಸಲಿಲ್ಲ? ಕೌರವರು ‘ಅಧರ್ಮ’ದ ಮಾರ್ಗ ಹಿಡಿದಿದ್ದರು. ಶ್ರೀಕೃಷ್ಣನಿಗೆ ಕೌರವರು ಮಾತನಾಡಲಾಗದಷ್ಟು ದೂರದವರೇನೂ ಅಲ್ಲವಲ್ಲ? ಶ್ರೀಕೃಷ್ಣ ಕೌರವರಿಗೆ ಗೀತೆಯ ಸಾರವನ್ನು ಮೊದಲೇ ಹೇಳಿ, ಅವರನ್ನು ಧರ್ಮಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿ, ಏಕೆ ಮಹಾಭಾರತ ಯುದ್ಧ ತಪ್ಪಿಸಲಿಲ್ಲ? ಪಾಂಡವರಲ್ಲಿ ಹಿರಿಯವ ಧರ್ಮರಾಯ. ಐದು ಜನ ಪಾಂಡುಪುತ್ರರ ಪೈಕಿ ಅತ್ಯಂತ ಹೆಚ್ಚು ಸಂಯಮಿ ಎಂಬ ಹೆಸರು ಪಡೆದವ. ಧರ್ಮರಾಯನಿಗೆ ಗೀತೆಯನ್ನು ಬೋಧಿಸದೆ, ಅರ್ಜುನನನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?

ಗೀತೆಯೆಂಬುದು ಅರ್ಜುನನ ಬತ್ತಳಿಕೆಯಿಂದ ತೂರಿ ಬಂದ ಪ್ರಶ್ನೆಗಳಿಗೆ ಶ್ರೀಕೃಷ್ಣ ನೀಡಿದ ಉತ್ತರಗಳ ಗುಚ್ಛ. ಗೀತೆ ನಮ್ಮಲ್ಲಿ ನೂರೆಂಟು ಪ್ರಶ್ನೆಗಳನ್ನು ಮೂಡಿಸಬಲ್ಲದು – ಈ ಮೇಲಿನಂತೆ. ಆದರೆ, ಗೀತೆಯನ್ನು ಓದಲಿಕ್ಕೊಂದು ಮಾರ್ಗ ಬೇಕಲ್ಲ? ಗೀತೆಯ ಶ್ಲೋಕಗಳನ್ನು ಓದಿದರೆ ಎಲ್ಲರಿಗೂ ಅರ್ಥವಾಗುವುದೂ ಇಲ್ಲ. ಹಾಗಾಗಿ, ರೂಪಾ ಪೈ ಬರೆದಿರುವ ‘ದಿ ಗೀತಾ ಫಾರ್ ಚಿಲ್ಡ್ರನ್’ ಪುಸ್ತಕ ಮಹತ್ವದ್ದಾಗುತ್ತದೆ. ಇದು ಗೀತೆಯ ಶ್ಲೋಕಗಳನ್ನು ‘ಭಗವಂತ ಮತ್ತು ಮನುಷ್ಯ’ ನಡುವಿನ ಸಂಭಾಷಣೆ ಎಂದು ನೋಡದೆ, ಇಬ್ಬರು ಪರಮಾಪ್ತ ಸ್ನೇಹಿತರ ನಡುವಣ ಮಾತುಕತೆ ಎಂದು ಗ್ರಹಿಸುತ್ತದೆ.

ಗೀತೆಯ ಒಂದೊಂದು ಶ್ಲೋಕದ ಅರ್ಥವೇನು ಎಂಬುದನ್ನು ಯಥಾವತ್ತಾಗಿ ನೀಡಲು ಹೋಗದೆ, ಒಂದೊಂದು ಅಧ್ಯಾಯವನ್ನೂ ಕಥೆಯ ರೂಪದಲ್ಲಿ ವಿವರಿಸುತ್ತ ಹೋಗಿರುವುದು ಈ ಪುಸ್ತಕದ ಹೆಚ್ಚುಗಾರಿಕೆ. ಪುಸ್ತಕದಲ್ಲಿ 18 ಕಥೆಗಳನ್ನು (ಅಂದರೆ ಗೀತೆಯ 18 ಅಧ್ಯಾಯಗಳು) ಓದಿದ ನಂತರ, ಒಂದು ಪುಟ್ಟ ಕಾದಂಬರಿ ಓದಿದ ಅನುಭವ ಕೂಡ ಬಾರದಿರದು!

‘ಗೀತೆ ಹೇಳುವ ಪಾಠಗಳು’ ಎಂಬ ವಿಭಾಗವೊಂದನ್ನು ಪ್ರತಿ ಅಧ್ಯಾಯದ ಕೊನೆಯಲ್ಲಿ ನೀಡಿ, ಅದರಲ್ಲಿ ಆಯಾ ಅಧ್ಯಾಯಗಳ ಪ್ರಮುಖ ಶ್ಲೋಕ, ಅದರ ಭಾವಾರ್ಥ ನೀಡಲಾಗಿದೆ. ಗೀತೆಯನ್ನು ಓದುವ ಆಸಕ್ತಿ ಇದ್ದರೂ ಅದರ ಅಗಾಧತೆಯನ್ನು ಕಂಡು ಓದಲಾಗದಿದ್ದವರಿಗೆ ಈ ಪುಸ್ತಕ ಒಂದು ಪ್ರವೇಶಿಕೆ ಇದ್ದಂತೆ. ಅರ್ಜುನನಿಗೆ ಗೀತೆಯನ್ನು ಯುದ್ಧಭೂಮಿಯಲ್ಲೇ ಏಕೆ ಉಪದೇಶ ಮಾಡಲಾಯಿತು ಎಂಬ ಪ್ರಶ್ನೆ ಈ ಬರಹದ ಆರಂಭದಲ್ಲಿ ಬರುತ್ತದೆ. ಬಹುಶಃ ಅರ್ಜುನನಿಗೆ ಒಂದಿಷ್ಟು ಪಕ್ವತೆ ಬರಲಿ, ಅದು ಬಂದಾದ ನಂತರವೇ ಗೀತೆಯನ್ನು ಬೋಧಿಸೋಣ, ಆಗ ಮಾತ್ರ ಅದು ಅವನಿಗೆ ಸರಿಯಾಗಿ ಮನನ ಆದೀತು ಎಂಬ ಲೆಕ್ಕಾಚಾರ ಶ್ರೀಕೃಷ್ಣನಲ್ಲಿ ಇದ್ದಿತ್ತೆ?! ಗೀತೆಯನ್ನು ಓದಿ, ಅರ್ಥ ಮಾಡಿಕೊಳ್ಳಲು ಕೂಡ ಒಂದಿಷ್ಟು ಪೂರ್ವಸಿದ್ಧತೆಗಳು ಬೇಕು ಎಂಬ ಅನುಭವವನ್ನಂತೂ ಕೊಡುತ್ತದೆ ಈ ಪುಸ್ತಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.