ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ: ದ್ರೌಪದಿಯ ಅಂತರಾಳದ ಮಾತುಗಳು

Published 30 ಜೂನ್ 2024, 0:24 IST
Last Updated 30 ಜೂನ್ 2024, 0:24 IST
ಅಕ್ಷರ ಗಾತ್ರ

ಮಹಾಕಾವ್ಯಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ‘ಮಹಾಭಾರತ’ದ ಪ್ರಮುಖ ಪಾತ್ರದ ಹಿಂದಿರುವ ಒಳನೋಟವೇ ‘ಪಾಂಚಾಲಿಯ ಭಾವಾಗ್ನಿ’. 

ಮೇಲ್ನೋಟಕ್ಕೆ ದಾಯಾದಿ ಕಲಹ, ಆಸ್ತಿ ಜಗಳ, ಮತ್ಸರ, ಅಧಿಕಾರ ದಾಹದ ಕಥೆ ಎನಿಸಿದರೂ ಪ್ರತಿ ಪಾತ್ರವೂ ನೀಡುವ ಹೊಳಹುಗಳು ಅನನ್ಯ. ಹಾಗಾಗಿ ಸರ್ವ ಕಾಲಕ್ಕೂ ‘ಮಹಾಭಾರತ’ದ ಮನನ ಇಷ್ಟವೆನಿಸುತ್ತದೆ. ಇಂಥ ಮಹಾಕಾವ್ಯವನ್ನು ಒಂದು ದಿಕ್ಕಿನಿಂದ ಕಂಡರೆ ಕೇಂದ್ರಬಿಂದು ಎನಿಸುವ ದ್ರೌಪದಿ ಪಾತ್ರದ  ಹುಟ್ಟು, ಅವಳ ರೋಷಾಗ್ನಿಯ ಭಾವ, ಅವಮಾನ, ಸಂಕಟ ಎಲ್ಲವನ್ನೂ ಹಿಡಿದಿಡುವ ಪ್ರಯತ್ನವಾಗಿ ಈ ಪುಸ್ತಕ ಕಾಣುತ್ತದೆ. 

ಐದು ಮಹಾಪತಿವ್ರತೆಯರ ಅಂಶವಾಗಿ ಜನಿಸುವ ದ್ರೌಪದಿ ಪುತ್ರಿಕಾಮೇಷ್ಠಿಯಾಗದಲ್ಲಿ ಯಾಜ್ಞಸೇನಿಯಾಗಿ ಅವತರಿಸುತ್ತಾಳೆ. ಸುಡು ಸುಡು ಬೆಂಕಿಯಲ್ಲಿ ಜನ್ಮ ತಳೆದರೂ ಗುಲಾಬಿ ಎಸಳಿನಂಥ ಮನಸ್ಸುಳ್ಳವಳು. ಸಾಮಾಜಿಕ ಚೌಕಟ್ಟುಗಳ ಕಾರಣಕ್ಕೆ ಕರ್ಣನಲ್ಲಿ ಹುಟ್ಟಿದ ಅನುರಾಗವನ್ನು ಸದ್ದಿಲ್ಲದೆ ನುಂಗಿಕೊಂಡು, ಕುಂತಿಯ ಮಾತಿನ ಅನುಸಾರ ಪಂಚ ಪಾಂಡವರನ್ನು ಪತಿಯನ್ನಾಗಿ ಸ್ವೀಕರಿಸುತ್ತಾಳೆ. ಅದಕ್ಕಾಗಿ ಅವಳ ಪೂರ್ವಜನ್ಮದ ವೃತ್ತಾಂತವನ್ನು ಹೇಳಲಾಗಿದೆ.  ಐವರನ್ನು ಪತಿಯಾಗಿ ಸ್ವೀಕರಿಸಿದ್ದಕ್ಕೆ ದ್ರೌಪದಿಯನ್ನು ಅವಹೇಳನ ಮಾಡುವ ಪ್ರಸಂಗವಿದೆ. ದಾಯಾದಿಗಳ ನಡುವೆ ಸಣ್ಣತನಗಳು, ಈರ್ಷ್ಯೆ, ಅಹಂಕಾರಗಳು ಎಲ್ಲ ಕಾಲಕ್ಕೂ ಇರುವಂಥದ್ದೆ. ಸಣ್ಣತನದ ಹಿಂದಿನ ಕಾರಣಗಳನ್ನು ಲೇಖಕಿ ವಿಸ್ತೃತವಾಗಿ ವಿಶ್ಲೇಷಿಸಿದ್ದಾರೆ. 

ಮಹಾಕಾವ್ಯ ಎಂದಾಕ್ಷಣ ದೊಡ್ಡ ಶಬ್ದಭಂಡಾರಗಳಲ್ಲಿರುತ್ತದೆ; ಇದು ಸಾಮಾನ್ಯ ಓದುಗರಿಗಲ್ಲ ಎಂಬ ವಿಚಾರವನ್ನು ಮುರಿದುಕಟ್ಟಿದ್ದಾರೆ ಭಾಗ್ಯಕೃಷ್ಣಮೂರ್ತಿ. ಕೆಲವು ಕಡೆ  ಕಥೆಯನ್ನು ಬಹಳ ಸರಳವಾಗಿ ಹೇಳಲು ಪ್ರಯತ್ನಿಸಿದ್ದಾರೆ. ಆದರೆ, ದ್ರೌಪದಿಯ ಸಂಕಟಗಳನ್ನು ಇನ್ನಷ್ಟು ಸಮರ್ಪಕವಾಗಿ ಕಟ್ಟಿಕೊಡಬಹುದಿತ್ತು. ಆ ಪಾತ್ರದ ನೆಲೆಯಲ್ಲಿ ಅವಳ ಧ್ವನಿಯನ್ನು ಬಿಂಬಿಸುವ ಅವಕಾಶವನ್ನು ಬಿಟ್ಟುಕೊಡಲಾಗಿದೆ. 

ಪಾಂಚಾಲಿ ಪಾತ್ರವನ್ನು ಹೊರಗಿನ ನಿಂತು ನೋಡುವ ಬದಲು ಪಾತ್ರವೇ ತನ್ನ ಒಳ–ಹೊರಗನ್ನು ಅರ್ಥೈಸಿಕೊಳ್ಳುವ ರೀತಿಯಲ್ಲಿ ಕಥನವನ್ನು ಕಟ್ಟಿಕೊಟ್ಟಿದ್ದರೆ ಪುಸ್ತಕದ ಶೀರ್ಷಿಕೆಗೆ ನಿಜವಾದ ಅರ್ಥ ಒದಗಿ ಬರುತ್ತಿತ್ತು. 

ಪಾಂಚಾಲಿಯ ಭಾವಾಗ್ನಿ

ಲೇ: ಭಾಗ್ಯ ಕೃಷ್ಣಮೂರ್ತಿ

ಪ್ರ: ಸಪ್ನ ಬುಕ್‌ಹೌಸ್‌

ಸಂ: 080 40114455

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT