ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಇತ್ತೀಚಿನ ಕವನ ಸಂಕಲನ ‘ಯಾರು ಬಾಗಿಲದಲ್ಲಿ’. ಸುಮಾರು ಅರ್ಧ ಶತಮಾನಕ್ಕೂ ಮಿಕ್ಕಿದ ಕಾವ್ಯಜೀವನ ಮತ್ತು ಮುಕ್ಕಾಲು ಶತಮಾನ ದಾಟಿದ ಅವರ ವೈಯಕ್ತಿಕ ಜೀವನಗಳ ಅನುಭವಗಳು ಹರಳುಗಟ್ಟಿದಂತೆ ಈ ಸಂಕಲನದ ಕವಿತೆಗಳಿವೆ. ‘ನೀನಾ’, ‘ಔರಂಗಜೇಬ’ ಕವನಸಂಕಲನಗಳಲ್ಲಿದ್ದ ವಸ್ತುಗಳು ಮತ್ತು ಅವುಗಳನ್ನು ಅವರು ನಿರ್ವಹಿಸಿದ್ದ ರೀತಿಗಳು ಈ ಸಂಕಲನದ ಹೊತ್ತಿಗೆ ತುಂಬಾ ಬದಲಾಗಿರುವುದನ್ನು ಗುರುತಿಸಬಹುದಾಗಿದೆ. ಈ ಬದಲಾವಣೆಗೆ ಕಾರಣಗಳನ್ನು ಈ ಸುದೀರ್ಘ ಕಾಲಾಂತರದಲ್ಲಿ ಅವರು ಹಾದು ಬಂದ ಸಾಹಿತ್ಯಿಕ ಪಥಗಳ ಪ್ರಭಾವ ಹಾಗೂ ಬದುಕಿನ ಹಲವು ಅಗ್ನಿದಿವ್ಯಗಳನ್ನು ಹಾದುದರ ಪರಿಣಾಮವಾಗಿ ಅವರು ಪಡೆದುಕೊಂಡ ಜೀವನಾನುಭವ- ಇವೆರಡೂ ವಿವರಿಸುತ್ತಿರುವಂತೆ ಈ ಕವಿತೆಗಳ ಸ್ವರೂಪವಿದೆ.

ಈ ಸಂಕಲನದ ಕವಿತೆಗಳನ್ನು ಅವುಗಳ ಭಾಷೆ, ವಸ್ತು, ಶೈಲಿ ಮತ್ತು ಜೀವನ ಧೋರಣೆಗಳ ನೆಲೆಯಿಂದ ಪ್ರತ್ಯೇಕವಾಗಿ ಪರಿಶೀಲಿಸುವ ಅಗತ್ಯವಿದೆಯೆನಿಸುತ್ತದೆ. ಭಾಷೆಯ ವಿಷಯಕ್ಕೆ ಬಂದಾಗ ತಕ್ಷಣಕ್ಕೆ ಎದ್ದು ಕಾಣುವ ಗುಣವೆಂದರೆ ಅವರ ಪ್ರಾಸಪ್ರಿಯತೆ ಮತ್ತು ಪದಚಮತ್ಕಾರ ಗುಣಗಳು. ಗೀತಾತ್ಮಕತೆ, ಪದಗಳ ನರ್ತನ, ಪ್ರಾಸಾನುಪ್ರಾಸಗಳು ಈ ಸಂಕಲನದ ಕವಿತೆಗಳಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿವೆ. ನವ್ಯವನ್ನು ಹಾದು ಬಂದರೂ ಅದರ ಕಾವ್ಯಭಾಷೆಯನ್ನು ಅವರು ಸುದೂರದಿಂದಲೇ ಗಮನಿಸಿ ಅಂತರ ಕಾಯ್ದುಕೊಂಡರು. ಬಂಡಾಯ, ದಲಿತಗಳ ನಂತರದ ಈ ಚಳವಳಿರಾಹಿತ್ಯದ ಕಾಲವನ್ನೂ ಕಂಡಿರುವ ಅವರ ಕಾವ್ಯದ ಭಾಷೆಯು ನವೋದಯದ ಭಾಷೆಯನ್ನು ಮಾತ್ರ ಬಿಡಲೊಲ್ಲದು. ದೇವರನ್ನು, ನಿಸರ್ಗವನ್ನು ಮತ್ತು ಬದುಕನ್ನು ಅಮಿತವಾದ ಪ್ರೀತಿ ಗೌರವಗಳಿಂದ ಕಾಣುತ್ತ; ಹೆಜ್ಜೆ ಹೆಜ್ಜೆಗೂ ಬದುಕಿನ ಕುರಿತಾಗಿ ಇತ್ಯಾತ್ಮಕ ನಿಲುವನ್ನೇ ಪಡೆದುಕೊಳ್ಳುತ್ತ, ಪ್ರಕಟಿಸುತ್ತ; ಜೀವನ ಸಾಗಿಸಿರುವ ಈ ಹೆಂಗರುಳಿನ ಕವಿಗೆ ನವೋದಯದ ಭಾಷಾಶರೀರವು ಸ್ವಸ್ಥವೂ, ಸುಂದರವೂ ಎನಿಸಿರುವುದು ಸಹಜವೇ ಆಗಿದೆ. ಹಾಗೆಯೇ ಈ ಸಂಕಲನದ ಭಾಷಿಕ ವಿನ್ಯಾಸದಲ್ಲಿ ಪುನರಾವರ್ತಿತವಾಗಿ ಕಂಡು ಬರುವ ಇನ್ನೆರಡು ಗುಣಗಳೆಂದರೆ ಪದಚಮತ್ಕಾರ ಮತ್ತು ಅಷ್ಟೇನೂ ಬಳಕೆಯಲ್ಲಿಲ್ಲದ ವಿಶಿಷ್ಟ ಪುದಪುಂಜಗಳ ಮರುಬಳಕೆಗಳದ್ದು. ಶೀರ್ಷಿಕೆಯನ್ನೇ ಗಮನಿಸೋಣ. ಯಾರು ಬಾಗಿಲಲ್ಲಿ ಎಂದಿದ್ದರೂ ನಡೆಯುತ್ತಿದ್ದುದು ಇಲ್ಲಿ ಯಾರು ಬಾಗಿಲ‘ದ’ಲ್ಲಿ ಎಂದಾಗಿದೆ.

ವಸ್ತುವಿನ ದೃಷ್ಟಿಯಿಂದಲೂ ಭಿನ್ನವಾದ ಸೂಚನೆಯೊಂದು ಈ ಸಂಕಲನದಲ್ಲಿ ಹೆಚ್ಚು ಸ್ಫುಟವಾಗಿ ಕಾಣಿಸಿಕೊಂಡಿದೆ. ಇಲ್ಲಿನ ಒಟ್ಟು 66 ಪದ್ಯಗಳಲ್ಲಿ 15ಕ್ಕಿಂತ ಹೆಚ್ಚು ಪದ್ಯಗಳು ಸಾವನ್ನು ಕುರಿತಾಗಿವೆ. ಕವಿಯು ದೇವರೊಂದಿಗೆ ಸಂಭಾಷಿಸುವ ಕವಿತೆಗಳೂ ಇಲ್ಲಿವೆ. ಸಾವಿನ ಮನೆಯ ಬಾಗಿಲ ಬಳಿ ನಿಂತು ಆಡಿದ ಆತ್ಮಾವಲೋಕನದ ಮಾತುಗಳಂತಿರುವ ಈ ಕವಿತೆಗಳು ಅಧ್ಯಾತ್ಮವನ್ನು ಸಾವಿನ ನೆಲೆಯಿಂದ ಪ್ರವೇಶಿಸಲು ಬಯಸುತ್ತಿವೆ. ಹಿಮಗಿರಿ, ಹರಿ, ಹರ, ಶೂನ್ಯ, ದಿವ್ಯಚೇತನ ಮುಂತಾದ ಸಂಗತಿಗಳ ಪುನರುಕ್ತಿಯನ್ನು ಈ ಹಿನ್ನೆಲೆಯಲ್ಲಿ ಗಮನಾರ್ಹವಾಗಿವೆ.

ವೈಯಕ್ತಿಕ ನೆಲೆಯ ನೋವು, ಹಳಹಳಿಕೆ, ಹಳವಂಡಗಳಿಗೆ ಪ್ರತಿಮೆ, ಸಂಕೇತ ಮತ್ತು ರೂಪಕಗಳ ಮುಸುಕು ಹೊದೆಸಿ, ಮೆಲುದನಿಯಲ್ಲಿ ಆದರೆ ಅಷ್ಟೇ ಖಚಿತವಾದ ಅರ್ಥದಲ್ಲಿ ನುಡಿಯುವುದು ಈ ಕವಿತೆಗಳ ಶೈಲಿಯಾಗಿದೆ. ಮುಖ್ಯವೆಂದರೆ ಇದು ಬದುಕಿನ ಭಾರವನ್ನು ಕವಿತೆಯಾಗಿಸಿ ಕೆಳಗಿಳಿಸಿ, ಹಗುರವಾಗಲು ಹಂಬಲಿಸುವ ಹಳ್ಳಿಯ ಮುಗ್ಧ ಮನಸ್ಸಿನ ಶೈಲಿ. ನಿಲುವಿನಲ್ಲಿ ಸ್ಪಷ್ಟತೆ, ಅಭಿಪ್ರಾಯದಲ್ಲಿ ಖಚಿತತೆ ಮತ್ತು ನಿರ್ವಹಣೆಯಲ್ಲಿ ಸ್ವೋಪಜ್ಞತೆಗಳು ಇವರ ಕಾವ್ಯದ ಶೈಲಿಯ ಬಹುಮುಖ್ಯ ಗುಣಗಳಾಗಿವೆ. ಜನಪದರಂತೆ ನೇರ-ಸರಳ ಆಗಿರುವ ಸಹಜೀಕ ಸ್ವಭಾವದ ಪಟ್ಟಣಶೆಟ್ಟರು ಅಂತೆಯೇ ಮತ್ತು ಹಾಗಾಗಿಯೇ ವಾಚಾಳಿಗಳೂ ಕೂಡ. ಈ ವಾಚಾಳಿತನಕ್ಕೆ ಅವರ ಗ್ರಾಮೀಣ ಮೂಲ ಒಂದು ಕಾರಣವಾದರೆ; ಅವರು ಹೆಚ್ಚು ಹೆಂಗರುಳಿನವರಾಗಿರುವುದು ಮತ್ತೊಂದು ಮುಖ್ಯ ಕಾರಣ. ‘ಹುಡುಕಾಟ’, ‘ಮನೆ’ ಪದ್ಯಗಳನ್ನು ಅವರೊಳಗೆ ಇರುವ ಬಹ್ವಂಶ ಹೆಣ್ತನಕ್ಕೆ ಸಾಕ್ಷಿಯಾಗಿ ನೋಡಬಹುದು. ‘ಮನೆ’ ಕವಿತೆಯಲ್ಲಿ ‘ಮನೆ ತುಂಬ ಇರಬೇಕು ಯಾರಾದರೂ, ಯಾವಾಗಲೂ’ ಎಂಬ ಸಾಲಂತೂ ಜೈವಿಕವಾಗಿ ಗಂಡಾಗಿರುವ ಅವರೊಳಗೆ ಸದಾ ಕದಲುತ್ತಿರುವ ಸ್ತ್ರೀತ್ವ/ಮಾತೃತ್ವದ ಆತ್ಯಂತಿಕ ಸಂಕೇತದಂತೆ ಮೂಡಿಬಂದಿದೆ.

ಪ್ರೀತಿ ಮತ್ತು ಅಂತಃಕರಣಗಳೇ ಈ ಸಂಕಲನದ ಎಲ್ಲ ಪದ್ಯಗಳ ಸ್ಥಾಯಿ ಭಾವವಾಗಿವೆ. ಅವಳ ಮದುವೆಯ ಮೆರವಣಿಗೆಯಲಿ ಉರಿವ ಕಣ್ಣುಗಳ ಹಿಲಾಲು ಹಿಡಿವೆನೆಂದ ಭಗ್ನ ಪ್ರೇಮಿಯ ನೋವು ಒಂದು ಸಂಚಾರಿಭಾವವಾಗಿತ್ತಷ್ಟೇ; ಕವಿಯ ಮನದ ಆಳದಲ್ಲಿ ಅಂದೂ ಕೂಡ ಸ್ಥಾಯಿಯಾಗಿ ಇದ್ದುವು ಇವೇ ಪ್ರೀತಿ ಮತ್ತು ಅಂತಃಕರಣಗಳೇ ಎನ್ನುವುದನ್ನು ಈ ಸಂಕಲನದ ಧೋರಣೆಯು ಸ್ಪಷ್ಟಪಡಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.