ಕಥೆಗಾರ ಟಿ.ಕೆ. ದಯಾನಂದ ಅವರು ಎಂಥದ್ದೇ ವೈಯಕ್ತಿಕ ಹಾಗೂ ವ್ಯಕ್ತಿಗತ ಕಥೆ ಹೇಳಲಿ, ಅದಕ್ಕೆ ಇಡೀ ಊರಿಗೆ ಊರನ್ನೇ ಸಾಕ್ಷಿಯನ್ನಾಗಿಸಿಡುತ್ತಾರೆ. ಅವರ ಪ್ರೇಮಿಗಳೂ ಸಹ ಊರಾಚೆಯ ಗುಡಿ ಬಯಲು ಪೊದೆಗಳಲ್ಲಿಯೇ ಪ್ರೇಮಿಸುವ ಸಾರ್ವತ್ರಿಕ ಜೀವಿಗಳು. ಈ ಪುಸ್ತಕದ ಅಷ್ಟೂ ಕಥೆಗಳಲ್ಲಿ ಕ್ಲೋಸಪ್ ಷಾಟ್ ಅಥವಾ ಒಳಾಂಗಣ ಚಿತ್ರಣವೆನ್ನುವುದು ಇಲ್ಲವೇ ಇಲ್ಲವೆನ್ನಿಸುವಷ್ಟು ಅತಿಯಾಗಿವೆ.

ಜೊತೆಗೆ ಸ್ವತಃ ತಾವೂ ಆ ಮಂದಿಯೊಂದಿಗೆ, ಮಂದಿಯೊಳಗೆ, ಮಂದಿಯಾಗಿ ನಿಂತೇ, ತಮ್ಮ ಕಣ್ಣೆದುರಿನ ಘಟನೆಗಳಿಗೆ ನಿರ್ಭಾವುಕವೋ ಎನ್ನಿಸಿಬಿಡುವಷ್ಟು ದೂರದ ಸಾಕ್ಷಿಯಾಗುತ್ತಾರೆ. ತೀರ ಮನಮುಟ್ಟುವ ವಿವರಣೆಯನ್ನು ಕೊಡಬೇಕಾದ ಪ್ರಸಂಗದಲ್ಲಿ, ‘ತಾಳಲಾರೆನೋ ಹರಿಯೇ’ ಎಂಬಂತೆ ವ್ಯಂಗ್ಯೋಕ್ತಿಯ ಲೇಪವನ್ನು ಆ ಅಶ್ರುವಿಗೂ ಲೇಪಿಸಿಬಿಡುವಷ್ಟು ಸಂಕೋಚವನ್ನಂತೂ ಉಳಿಸಿಕೊಂಡಿದ್ದಾರೆ. ಒತ್ತಿರುವುದು ಅಶ್ರುವಿಗೋ ಅಥವಾ ಅದಕ್ಕೊದಗಿಸಿರುವ ಲೇಪನಕ್ಕೋ ಎಂದು ಇವರು ಚಿಂತಿಸುವ ಹೊತ್ತಿಗೆ, ಅದು ಒಂದು ನಿರ್ದಿಷ್ಟ ಅನುಪಾತದಲ್ಲಿ ಬೆರೆತು ಕಥೆಗಳಾಗಿ, ಅನುಪಾತದ ಪ್ರಕಾರ ಸೋಲುಗೆಲುವುಗಳನ್ನು ಕಂಡುಕೊಂಡಿರುತ್ತವೆ.

ಈ ಪುಸ್ತಕದ ಮುನ್ನುಡಿಯಲ್ಲಿ (ಮುನ್ನುಡಿಯನ್ನಲ್ಲ) ತಾವು ಪಿಕ್‌ಪಾಕೆಟಿಯರ್ ಆಗಬೇಕೆಂದು ಹೊರಟಾತ ಅದರಲ್ಲಿ ಸೋತು ಕಥೆಗಾರನಾದ ಬಗೆಯನ್ನು ಭಾವತೀವ್ರತೆಯಿಂದ ತೋಡಿಕೊಂಡಿರುವ ಇವರು; ಕಳ್ಳನೆಂದರೆ ದಪ್ಪ ಮೀಸೆಯ, ಡೊಳ್ಳು ಹೊಟ್ಟೆಯ ಕ್ಲೀಷಾತ್ಮಕ ಪರಿಕಲ್ಪನೆಯಂತೆ ವಿವರಿಸುತ್ತಿದ್ದ ತಮ್ಮ ಲೇಡಿ ಟೀಚರನ್ನು, ಅಂತಹ ‘ವರ್ಣ’ರಾಜಕಾರಣದ ಭೇದಭಾವಕ್ಕಾಗಿ ಗೋಳುಹೊಯ್ದುಕೊಂಡ ದಯಾನಂದರು, ಈ ಕಥೆಗಳು ಆರಂಭಗೊಳ್ಳುತ್ತಲೇ ಅಂಚಿನ, ತಳಸಮುದಾಯದ ಗುಂಪಿನಿಂದ ಹೊರಬಂದು ನಮ್ಮನಿಮ್ಮೆಲ್ಲರೊಡನೆ ನಿಂತುಬಿಡುತ್ತಾರೆ. ಇದು ಹಲವು ರೀತಿಯ ನೋವಿನ, ದಾಟುವ ಹಾಗೂ ವೈರುಧ್ಯಮಯವೆನ್ನುವಂತೆ ಖುಷಿಯ ವಿಷಯವೂ ಹೌದಾಗಿದೆ. ಏಕೆಂದರೆ ತಳಸಮುದಾಯವನ್ನು ಹಾಸ್ಯ, ವ್ಯಂಗ್ಯ, ವಾರೆನೋಟ, ಮೊನಚಿನ ವ್ಯಾಖ್ಯಾನ ಇತ್ಯಾದಿಗಳಿಂದ ಕನ್ನಡ ಸಾಹಿತ್ಯದಲ್ಲಿ ಕಂಡದ್ದಿದೆಯೇ ಎಂದು ಶೋಧಿಸಿದರೆ, ಅದು ‘ದೇವನೂರರನ್ನು ಬೀಚಿಯವರು ಕಂಡಂತೆ’ ಎಂಬಲ್ಲಿಂದ ಈ ಪ್ರಶ್ನೆಯನ್ನು ಎದುರಿಸುವವರು ಸರಳೀಕರಣಕ್ಕೆಳೆಸಿಬಿಡುವ ಸಾಧ್ಯತೆಯೂ ಇದೆ.

ನೋವಿನ ವಿಷಯವೇಕೆಂದರೆ ಬೇಟ್ಸ್ ಲೋರಿ ಹಾಗೂ ಬ್ರಾವ್ಗೆಲ್ ಕಲಾವಿದರಂತೆ, ಮಾರ್ಕ್ವೆಯ ಕಥೆಗಳ, ಒಡಲಾಳದ ಪಾತ್ರಗಳಂತೆ ಭಾವತೀವ್ರವಾಗಿ ನಮ್ಮನ್ನು ತಟ್ಟುವ ಪಾತ್ರಗಳು ಇನ್ನೇನು ನಮ್ಮನ್ನು ಮುಟ್ಟೇಬಿಟ್ಟವು, ನಮ್ಮನ್ನು ಕಲಕಿಬಿಟ್ಟವು ಎನ್ನುವಷ್ಟರಲ್ಲಿ ಕಥೆಗಾರ ಟಿ.ಕೆಯವರು ಆ ಪಾತ್ರಗಳ ಭಾವದ ನಾಟಕೀಯತೆಗೆ ಅಂಜಿಯೋ ಏನೋ, ಟೀಕೆಗಿಳಿದುಬಿಡುತ್ತಾರೆ. ಸಮುದಾಯವೊಂದರ ಒಳಗಣ ಗಾಢ ಅನುಭವವು ಕ್ಲೀಷೆಯಾಗುವುದನ್ನು ಜನಪ್ರಿಯ ಭಾಷೆ ಹಾಗೂ ಮಾಧ್ಯಮದ ಮೂಲಕವೇ ತಡೆವ ಕಥೆಗಾರರ ಪ್ರತಿಭೆಯಿಂದಾಗಿ, ನಮ್ಮ ಸುತ್ತಲಿನ ಬೇರುಮಟ್ಟದ ಪಾತ್ರಗಳನ್ನು, ಕನ್ನಡ ಸಾಹಿತ್ಯ ಚರಿತ್ರೆ ಪ್ರಣೀತವಾದ ನಿರಂತರ ದುಃಖದಿಂದ ಹೊರತೆಗೆವ ಯತ್ನ ಮಾಡಿದ್ದಾರೆ.

ಸಂದರ್ಭ ಮತ್ತು ಕುಲವೊಂದರ ಸೂಕ್ಷ್ಮಾತಿಸೂಕ್ಷ್ಮತೆಯ ಸಂಪತ್ತನ್ನು ಶೇಖರಿಸಿಟ್ಟುಕೊಂಡಿದ್ದರೂ, ಅಂಚಿನ-ಸಬಾಲ್ಟರ್ನ್ ಅನುಭವವನ್ನು ಕಥಿಸುವ ಪೂರ್ವಸಿದ್ಧ ಮಾದರಿಗಳ ಗಾಂಭೀರ್ಯವನ್ನು ಇವರು ನಿರಾಕರಿಸುತ್ತಾರೆ. ಅಥವಾ ಲೇವಡಿ ಮಾಡುತ್ತಾರೆ. ಹಾಗೆ ಅಥವಾ ಹೀಗೆ ಮಾಡುವಾಗ ಹಾಗೀಗೆಲ್ಲ ಆಗಿ, ಅನೇಕವು ಹಿಟ್ ಆಗಿವೆ. ರೂಪಕಗಳು, ಹಾಗೂ ಸೆಟೈರ್‌ಗಳನ್ನು ಗಡಿದಾಟಿಸಿ ಹಿಗ್ಗಿಸಿದಲ್ಲಿ ಕರೆನ್ಸಿ ಮುಗಿದ ತಂತ್ರಾಂಶವನ್ನು ಬಳಸಿದಂತಾಗಿಬಿಡುತ್ತದೆ ಎಂಬುದು ಈ ಪುಸ್ತಕದ ಅನೇಕ ನೀತಿಪಾಠಗಳಲ್ಲೊಂದಾಗಿದೆ.

ಈ ಕಥಾಗುಚ್ಛದಲ್ಲಿ ಮೊದಲಿಗೆ ತಿಳಿದುಬರುವುದೇನೆಂದರೆ, ಟಿ.ಕೆ ಅವರು ಎಲ್ಲಿಂದ ಆರಂಭಿಸುತ್ತಾರೋ, ಅಲ್ಲಿಂದಲೇ ಕಥೆ ಶುರುಮಾಡಬಲ್ಲರು, ಪೂರೈಸಬಲ್ಲರು ಎಂದು. ಇದೊಂದು ವರ. ಕಥೆಗಾರರ ಪ್ರತಿಭೆ ಇರುವುದು ಅವರ ವರ್ಣನಾಖುಷಿಯಲ್ಲಿ, ನರೇಟಿವ್ ಸಾಮರ್ಥ್ಯದಲ್ಲಿ. ಕೆಲವೊಮ್ಮೆ ಅದೇ ಕಾರಣಕ್ಕೆ ರೂಢಿಗತ ಪಾತ್ರಪೋಷಣೆಯ ಕೊಲೆಯಲ್ಲಿ. ಪೊಲೀಸರಿಂದ ಮುರಿಸಿಕೊಂಡ ಮೂಳೆಗಳನ್ನೇ ದೇಹಬಾಗುವಿಕೆಯ ವರವನ್ನಾಗಿಸಿಕೊಳ್ಳುವಾತ, ಐದೈದು ರೂಪಾಯಿ ಪಂದ್ಯ ಕಟ್ಟಿ ಜೊತೆಗೂಡಿಸಿದ ಕೈಗಳನ್ನು ತನ್ನ ದೇಹದ ಹಿಂದುಮುಂದೆಲ್ಲ ತಿರುಗಾಡಿಸಿ ಕಾಸು ಮಾಡಿಕೊಳ್ಳುವ ವಿವರದಲ್ಲಿ (‘ತಲೆಯಪ್ಪ ದೇವರು’) ಹಾಸ್ಯ, ಅಸಹಾಯಕತೆಯನ್ನು ಉಪಾಯವನ್ನಾಗಿಸುವ ಜಾಣತನ, ಓದುಗರನ್ನೂ ಭಾವಸಾಕ್ಷಿಯನ್ನಾಗಿಸಿಕೊಳ್ಳುವ ಒತ್ತಾಯ– ಎಲ್ಲವೂ ಇದೆ. ಆದರೆ ಕಥೆಗಾರನ ಶಕ್ತಿ ಇರುವುದು ಇಂತಹ ಪಾತ್ರಗಳ ಒಂದೊಂದು ಘಟನೆಗಳ ಒಂದೊಂದು ಝಲಕ್ ತೋರಿಸಿ, ತಮ್ಮ (ಒಮ್ಮೊಮ್ಮೆ ಅತಿ ಎನ್ನಿಸಿಬಿಡುವ) ವಾಚಾಳಿತನವೆಂಬ ಕಥನಸಾಮರ್ಥ್ಯದ ಮುಖ್ಯಪ್ರವಾಹದೊಳಕ್ಕೆ ಎಳೆದುಕೊಂಡುಬಿಡುವ ಕ್ರಮ. ಆದ್ದರಿಂದ ಇಲ್ಲಿನ ಪಾತ್ರಧಾರಿಗಳಿಗೆ ತಾವು ‘ಕಥೆಗಳ ಪಾತ್ರಗಳೋ’ ಅಥವಾ ತಮ್ಮ ‘ವ್ಯಕ್ತಿತ್ವಗಳ ವಿವರಗಳೇ ಕಥೆಗಳೋ’ ಎಂಬ ಸ್ವಯಂ ತಿಳಿವಳಿಕೆ ಬರುವ ಮುನ್ನವೇ, ‘ಪಾತ್ರ-ವ್ಯಕ್ತಿತ್ವ-ಘಟನೆ’ ಎಂಬ ಮೂರೂ ಅಂಶಗಳೂ ತಾವು ಕಥೆಗಾರರ ಕಥನಕುತೂಹಲದ ವಿವರಣೆಯ ಹರಿವಿನ ಭಾಗವೆಂದು ಅರಿತುಕೊಂಡು ನಿರಾಳವಾಗಿಬಿಡುತ್ತವೆ. ಅಲೆಗಳು ತಾವು ಸಮುದ್ರದ ಭಾಗವೋ ಅಥವಾ ಸ್ವತಃ ಸಮುದ್ರವೋ ಎಂದು ಝೆನ್ ಕಥೆಯೊಂದರಲ್ಲಿ ಕೇಳಿಕೊಳ್ಳುವಂತೆ ಇದು.

ಮಾಡಿದ್ದನ್ನು ನಿಲ್ಲಿಸದೆ ಮತ್ತೆ ಮತ್ತೆ ಮಾಡುವಾತ ತನ್ನ ಆ ಪ್ರತಿಭೆಯಿಂದಾಗಿಯೇ ಐದು ರೂಪಾಯಿಗೊಂದರಂತೆ ‘ನಾಯಿಬೇಟೆ’ಯಾಡುವಾತ; ಶವಸಂಸ್ಕಾರ ಮಾಡುವ ಮೂಗನ ಮೊಮ್ಮಗಳು ಆತನ ಕಾಲಿನ ಬೆರಳಿಗೇ ಶವದ ಬಿಲ್ಲೆ ಕಟ್ಟಿದ್ದರಿಂದ ಆತ ಬದುಕಿದ್ದಂತೆಯೇ ಶವಸಂಸ್ಕಾರಕ್ಕೊಳಗಾಗುವ ಗತಿ (‘ಪುಲಿಮೊಗರು’); ಪೊಲೀಸರಿಂದಾಗಿ ಹೆಂಡತಿಯನ್ನು ಕಳೆದುಕೊಂಡಿದ್ದರಿಂದ ಎಲ್ಲ ಪೊಲೀಸರ ಗಾಡಿಗಳ ಮೇಲೂ ಬಹಿರ್ದೆಸೆ ಮಾಡಿಬಿಡುವಾತ; ಕದ್ದು ಕರೆಂಟು ಕನೆಕ್ಷನ್ ತೆಗೆದುಕೊಂಡು ಕನ್ನಡದ ಸಿದ್ಧ ಹಾಡು ಹಾಡಿ ಕುಣಿದು ಭಿಕ್ಷೆ ಸಂಪಾದಿಸುವಾತ; ಹೊಲಕ್ಕೆ ಪಿಡುಗಾದ ಇಲಿಗಳನ್ನು ಹಿಡಿವ ಸಣ್ಣ ಅವಕಾಶವನ್ನು ಬಳಸಿಕೊಂಡು ತನಗರಿವಿಲ್ಲದೆ ಇಡಿಯ ಸರ್ಕಾರಿ ವ್ಯವಸ್ಥೆಯನ್ನೂ ಬುಡಮೇಲು ಮಾಡಿಬಿಡುವಾತ (‘ಬೋನಿಗೆ ಬಿದ್ದವರು’), ಅರೆಕಣ್ಣು ಮುಚ್ಚಿಕೊಂಡಿರುವ ದೈವಕ್ಕೆ ಕಾಣಲಾರದೆಂಬಂತೆ ಬೀಡಿಸೇದುವ ಅರ್ಚಕಿ, ದೇವರ ಗಂಟೆ ಕದಿಯುವಾಗ ಸುತ್ತಿಕೊಳ್ಳುವ ಪಾಪದ ಪ್ರಾಯಶ್ಚಿತ್ತದ ಸಲುವಾಗಿ ರೆಕ್ಕೆಹಾವನ್ನು ಹುಡುಕಿಬಂದವರ ಮೂಲಕ ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಹೆಂಗಸು (‘ರೆಕ್ಕೆ ಹಾವು’), ಸಾಲ ಹಿಂದಿರುಗಿಸದ ಸಾಬಿಯ ಆನೆಯನ್ನೇ ಯಜಮಾನರ ಮನೆಗೆ ಎಳೆತಂದು ಕಟ್ಟಿಹಾಕಿ, ಸಾಲಕ್ಕಿಂತಲೂ ಹೆಚ್ಚಿನ ವೆಚ್ಚವನ್ನು ಅದಕ್ಕೆ ತಿನ್ನಿಸಬೇಕಾಗಿ ಬಂದು ಅಕ್ಷರಶಃ ಬಿಳಿಯಾನೆಯನ್ನೇ ಸಾಕುವಂತಾಗಿ, ಆದ್ದರಿಂದಲೋ ಏನೋ ಆಕಸ್ಮಿಕವಾಗಿಯೆಂಬಂತೆ ಸಾವನ್ನಪ್ಪುವಾತ (‘ಗಂಟೆಸಾಬರ ಸ್ವಪುನದೊಳಗೆ ನೆಪೋಲಿ ಬಂದ ಕಥೆಯು’)– ಇವರುಗಳು ಕಥೆಗಾರರು ಹುಟ್ಟು ಹಾಕಿರುವ, ಹೆಸರಿಲ್ಲದ, ಅದರ ತುರ್ತೂ ಇಲ್ಲದ ಪಾತ್ರಧಾರಿಗಳು. ಅಪರೂಪಕ್ಕೆ ಹಳ್ಳಿಗೆ ಹೋಗುವ ನಗರಿಗರಿಗೆ, ಒಟ್ಟಾರೆ ವರ್ಷಗಳಲ್ಲಿ ಆಗಿಹೋದ ಸರೀಕರೆಲ್ಲರ ಪ್ರವರವನ್ನು ರಾತ್ರೋರಾತ್ರಿ, ರಾತ್ರಿಯೋಪಾದಿಯಲ್ಲಿ ಹೇಳಿಮುಗಿಸುವವರ ಕ್ರಮಕ್ಕೆ ಚುರುಕುಮುಟ್ಟಿಸುವ ಒಳನೋಟದ ಲೇಪನ ಮಾಡುವುದನ್ನು ಟೀಕೆ ಎನ್ನಬಾರದು, ಬದಲಿಗೆ ಟಿ.ಕೆ. ದಯಾನಂದರು ಕಥೆ ಹೇಳುವ ಕ್ರಮ ಎನ್ನಬೇಕು.

ದಯಾನಂದರ ಬರವಣಿಗೆಯಲ್ಲಿ ಅಗಾಧವಾದ ಸಿಟ್ಟಿದೆ, ಅದನ್ನು ನಿವಾರಿಸಲಿಕೊಳ್ಳಲಿಕ್ಕಾಗಿ ಕಥೆ ಹೇಳುವಾಗಿನ ಉಪಾಯದಲ್ಲಿ ಸುದೀರ್ಘ ವಾಕ್ಯಗಳ ಸಾತತ್ಯವಿದೆ (ಭಟ್ಟರ ಕಥೆಯ ‘ವಾಸನೆ’ಯನ್ನು ಇವರು ಹಿಡಿದಿರಿಸಿರುವ ರೀತಿ ಗಮನಿಸಿ). ಅತ್ಯುತ್ತಮೆವೆನಿಸುವ ಕಥೆಗಳಲ್ಲಿ (ಬೋನಿಗೆ ಬಿದ್ದವರು, ರೆಕ್ಕೆಹಾವು, ನಾಯಿಬೇಟೆ) ಸಮಾಜದ, ರಾಜಕಾರಣದ, ಉದ್ಧಾರದ ಅಡಿಪಾಯವಾಗಿ ದುಡಿವ– ಆದರೆ ಈ ಮೂರು ಅಂಶಗಳಿಂದ ಹೊರಗೇ ಉಳಿದ ಸಮುದಾಯದೊಳಗೆ ಅಡಗಿರುವ ಕಥನ ಈ ಕಥೆಗಳಲ್ಲಿವೆ. ಈ ಹಿನ್ನೆಲೆ ಮತ್ತು ಅದನ್ನು ನಿರೂಪಿಸಲು ಕಥೆಗಾರರಿಗೆ ಇರುವ ಟೀಕಿಸುವ ಹಕ್ಕು– ಇವೆರಡರ ನಡುವಣ ರಸಾಯನಶಾಸ್ತ್ರ (ಕೆಮಿಸ್ಟ್ರಿ) ಕೆಲಸಮಾಡಿದ ಕಡೆಯಲ್ಲೆಲ್ಲ ಹರ್ಝಾಗ್, ಕಸ್ತೂರಿಕರಂತಹ ನಿರ್ದೇಶಕರು, ತೇಜಸ್ವಿಯಂತಹ ಬರಹಗಾರರ ಮುಖಗಳು ಹಚ್ಚಿದ ಒಲೆಯ ಹೊಗೆಗಳಾಗಿ ಹಾಗೆ ಮೂಡಿ ಹೀಗೆ ಹೋಗಿಬಿಡುತ್ತಾರೆ, ಬಳೇಶೆಟ್ಟರ ಮಗಳು ಕಂಡ ಕನಸಿನ ಮುಖದಂತೆ.

ಸಾಧಾರಣವಾಗಿ ಈ ಕಥೆಗಳು ಗ್ರಾಮೀಣ ಕಥೆಗಳೆಂಬ ಸುಲಭ ವರ್ಗೀಕರಣಕ್ಕೆ ಒಗ್ಗದಿರಲು ಕಾರಣ ದಯಾನಂದರ ನಿರೂಪಣೆ. ಗ್ರಾಮವೇ ಪೇಟೆಯಾಗಿ ನಂತರ ನಗರವಾದಾಗ, ಅಳಿದುಳಿದ ಗ್ರಾಮದ ಭಾಗಗಳನ್ನು ಸ್ಲಂ ಎನ್ನುತ್ತೇವೆ. ಅಲ್ಲಿ ಇಂದಿಗೂ ಇರುವ, ಆದರೆ ನಗರವು ಮರೆಯಹೊರಟಿರುವ ಕಾಯಕಗಳಿವೆ. ಅವುಗಳನ್ನೆಲ್ಲ ಬರೆಯುವಾಗ ಬಹುವಾಗಿ ಮಾನವಿಕಶಾಸ್ತ್ರವನ್ನು ಕಥೆಯ ಪ್ರಕಾರಕ್ಕೆ ಮದುವೆ ಮಾಡಿಸಲು ಹೊರಟಂತಿದೆ. ಕನ್ನಡದ ಸಂದರ್ಭದಲ್ಲಿ ಕಥೆಗಳಿಗೆ ಕೊರತೆಯಿಲ್ಲದಿದ್ದರೂ, ಮಾನವಿಕಶಾಸ್ತ್ರವನ್ನು ಅಕಾಡೆಮಿಕ್ ಎಂಬ ಮಹಾನ್ ಕ್ಲೀಷೆಯಿಂದ ಹೊರತರುವಲ್ಲಿ ಸ್ವತಃ ದಯಾನಂದರೇ ಒಳ್ಳೆಯ ಮಾಧ್ಯಮವಾಗಿಬಿಡಬಲ್ಲರು. ಎಂ.ಎನ್. ಶ್ರೀನಿವಾಸರ ‘ರಿಮೆಂಬರ್ಡ್ ವಿಲೇಜ್’ ಎಂಬ ಕಥನದಿಂದ ಆರಂಭವಾದ ಈ ಕನ್ನಡದ ಸಂಪ್ರದಾಯವು, ಅಂತರ್‌ಶಿಸ್ತೀಯತೆಯನ್ನು ಅನಿವಾರ್ಯಗೊಳಿಸುವತ್ತ ಸಾಗುತ್ತಿದೆಯೇನೋ. ಆದರೆ ಜನಪ್ರಿಯ ವಾಚಾಳಿತನ ಹಾಗೂ ಹಾಸ್ಯಕ್ಕೆ ಕನ್ನಡ ವಿಮರ್ಶೆಯಲ್ಲಿ ದೊರಕದ ಗಾಂಭೀರ್ಯವನ್ನು ಟಿ.ಕೆ. ಅವರು ತಂದುಕೊಡುವ ಅವಸರದಲ್ಲಿ ತಳಸಮುದಾಯದ ಪ್ರಸ್ತುತಿಯ ಸ್ವಯಂಶಕ್ತಿಯನ್ನು ಮರೆಮಾಚದಿರಲಿ. ಇದನ್ನೇ ಬೆನ್ನುಡಿ ಬರೆದ ಯೋಗರಾಜ ಭಟ್ಟರು ‘ಅಪ್ಪನ ಜೊತೆ ಮಗರಾಯ ಫ್ರೀ’ ಎಂದಿರಬಹುದೆ?

ರೆಕ್ಕೆ ಹಾವು
ಲೇ: ಟಿ.ಕೆ. ದಯಾನಂದ
ಪು: 112, ಬೆ: ` 100
ಪ್ರ: ಅರ್ಹರ್ನಿಶಿ ಪ್ರಕಾಶನ, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.