ವಿಮರ್ಶೆ

ಅಜ್ಞಾತನೊಬ್ಬನ ಆತ್ಮ ಚರಿತ್ರೆ
ಲೇ: ಕೃಷ್ಣಮೂರ್ತಿ ಹನೂರು
ಪು: 232; ಬೆ: ರೂ. 150
ಪ್ರ: ಅಂಕಿತ ಪುಸ್ತಕ, ಬೆಂಗಳೂರು

ಇತಿಹಾಸ ಉಳ್ಳವರ ಕತೆ. ಅರಮನೆಯ ವೈಭವ, ಯುದ್ಧದ ಪರಾಕ್ರಮಗಳ ಕಥನ. ಇದು ಇತಿಹಾಸದ ಹೊರ ಆವರಣ. ಆದರೆ ಅಂತರಂಗದಲ್ಲಿ ಮಾನವ ಚರಿತ್ರೆ ಸಂಕಟ, ಸಂತಸಗಳ ಸರಮಾಲೆ. ಮೇಲ್ಪದರದ ವ್ಯಾಖ್ಯಾನಕಾರರಿಗೆ ಇದು ದಕ್ಕುವುದಿಲ್ಲ. ಸೂಕ್ಷ್ಮ ಸಂವೇದನಾಶೀಲ ಮನಸ್ಸು ಮಾತ್ರ ಇದನ್ನು ಹಿಡಿಯಬಲ್ಲದು. ಸಾಹಿತ್ಯ ಕೃತಿ ಚರಿತ್ರೆಗಿಂತ ಭಿನ್ನವಾಗುವುದು ಇಲ್ಲಿಯೇ.

ಕೃಷ್ಣಮೂರ್ತಿ ಹನೂರರಿಗೆ ಇತಿಹಾಸ ಪ್ರಜ್ಞೆಯಿದೆ. ಆದರೆ ಅವರು ಮೂಲತಃ ಜಾನಪದದ ಬಗ್ಗೆ ಆಸಕ್ತಿ ಇರುವಂಥವರು. ಸಾಕಷ್ಟು ಕ್ಷೇತ್ರಕಾರ್ಯ ನಡೆಸಿದಂಥವರು. ಜಾನಪದ ಅಧ್ಯಯನ ಅವರಿಗೆ ಇತಿಹಾಸವನ್ನು ನೋಡುವ ಹೊಸ ದೃಷ್ಟಿ ಒದಗಿಸಿದೆ. ಪರಿಣಾಮ ಇದುವರೆಗಿನ ಇತಿಹಾಸದ ಪಠ್ಯ ತನ್ನೊಳಗೆ ಹುದುಗಿಸಿಕೊಂಡಿದ್ದ ಅನೇಕ ಗುಟ್ಟುಗಳನ್ನು ಬಿಟ್ಟುಕೊಟ್ಟಿದೆ.

ಜಾನಪದ ಕಥನ ಯುದ್ಧವನ್ನು ಪರಾಕ್ರಮ ಇಲ್ಲವೇ ವಿಜಯದ ಸಂಕೇತವಾಗಿ ಭಾವಿಸುವುದಕ್ಕಿಂತ ಸಾಮಾನ್ಯ ಜನರ ಬದುಕಿನ ಪರಿಪಾಟಲು ಹಾಗೂ ದುರಂತದ ಕತೆಯಾಗಿ ನಿರೂಪಿಸಿರುವುದು ಅವರ ಇತಿಹಾಸ ಪ್ರಜ್ಞೆಗೆ ಹೊಸ ನೋಟ ನೀಡಿದೆ. ಈ ಹಿನ್ನೆಲೆಯಲ್ಲಿ ಇತಿಹಾಸದ ಕಾಲಗರ್ಭದಲ್ಲಿ ಅಡಗಿ ಹೋಗಿರುವ ಅಜ್ಞಾತ ಸಂಗತಿಗಳನ್ನು ಪುನರ್ ಪರಿಶೀಲಿಸುವ ಪ್ರಯತ್ನವನ್ನು ಹನೂರರು ಕೈಗೊಂಡು `ಅಜ್ಞಾತನೊಬ್ಬನ ಆತ್ಮ ಚರಿತ್ರೆ' ಕಾದಂಬರಿ ಬರೆದಿದ್ದಾರೆ.

ಈಗಾಗಲೇ ಮೂರು ಕಥಾ ಸಂಕಲನಗಳು ಹಾಗೂ ಎರಡು ಕಾದಂಬರಿಗಳನ್ನು ಪ್ರಕಟಿಸಿರುವ ಹನೂರರ ಮೂರನೇ ಕಾದಂಬರಿ `ಅಜ್ಞಾತನೊಬ್ಬನ ಆತ್ಮಚರಿತ್ರೆ'. ತಮ್ಮ ಕಥನದ ರೀತಿಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿರುವ ಹನೂರರು ಕನ್ನಡ ಕಥನ ಪರಂಪರೆ ಹಾಗೂ ಜಾನಪದ ಕಥನ ಸ್ವರೂಪರಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಆಧುನಿಕ ಸಂವೇದನೆಯನ್ನು ಪರಂಪರೆಯ ಕಥನ ರೀತಿ ಬಳಸಿಕೊಂಡು ಹೇಗೆ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಬಹುದೆಂಬುದನ್ನು ಕಂಡುಕೊಂಡಿದ್ದಾರೆ. ಕಥನವೇ ಕಾದಂಬರಿಯ ಜೀವಾಳ, ಕಥನದ ವಿವರಗಳೇ ಕಾದಂಬರಿಯ ವೈಚಾರಿಕ ಆಕೃತಿಯನ್ನು ರೂಪಿಸಬೇಕು ಎಂಬ ನಿಲುವಿನಲ್ಲಿ ಈ ಕಾದಂಬರಿಯ ರಚನಾ ವಿನ್ಯಾಸವನ್ನು ರೂಪಿಸಿದ್ದಾರೆ.

ಈ ಕಾದಂಬರಿಯ ಕಥಾಹಂದರ ಟಿಪ್ಪುವಿನ ಕಾಲದ ಇತಿಹಾಸ. ಆದರೆ ಇದು ಟಿಪ್ಪುಸುಲ್ತಾನನ ಏಳುಬೀಳಿನ ಇತಿಹಾಸದ ಕಥನವಲ್ಲ. ಇದು ಅರಮನೆಯ ಒಳಗಿನ ಕತೆ. ಅಂದಮಾತ್ರಕ್ಕೆ ಇದು ಸುಲ್ತಾನರ ಅಂತಃಪುರದ, ಅಂತರಂಗದ ಕಥನವೂ ಅಲ್ಲ. ಟಿಪ್ಪು, ಹೈದರ್, ಅರಮನೆ, ಶ್ರೀರಂಗಪಟ್ಟಣದ ಪರಿಸರ ಇಲ್ಲಿ ನೆಪಮಾತ್ರ. ಆ ಮೂಲಕ ಹನೂರರು ಕಟ್ಟಿಕೊಡುವ ಅನುಭವ ಜಗತ್ತೇ ಬೇರೆ.

`ಅಜ್ಞಾತನೊಬ್ಬನ ಆತ್ಮಚರಿತ್ರೆ' ಅರಮನೆಯ ಜೊತೆ, ಸುಲ್ತಾನರ ಸಂಗಡ ನಿಕಟವಾದ ಸಂಬಂಧವಿರಿಸಿಕೊಂಡ ದಳವಾಯಿಯೊಬ್ಬನ ಕತೆ. ಈತ ಸಾಮಾನ್ಯ, ಆದರೆ ಅರಮನೆಯ ಜೊತೆ, ಸಂಬಂಧ ಇರುವುದರಿಂದ ಸಾಮಾನ್ಯನೊಬ್ಬ ಅರಮನೆಯನ್ನು ಅವಲೋಕಿಸುವ ಕತೆಯಾಗಿ ಇದರ ವಿನ್ಯಾಸವಿದೆ. ಆದರೆ ಕೃತಿಯ ಮಹತ್ವವಿರುವುದು ಈ ನೆಲೆಯಲ್ಲಲ್ಲ. ರಾಜಕೀಯದ ಹಿನ್ನೆಲೆಯಲ್ಲಿ ಜನಸಾಮಾನ್ಯರ ಬದುಕನ್ನು ಕಟ್ಟಿಕೊಡುವ ಕ್ರಮ ಈ ಕಾದಂಬರಿಯನ್ನು ವಿಶಿಷ್ಟವಾಗಿಸಿದೆ.

ಅಧಿಕಾರ ಮತ್ತು ಸಂಪತ್ತು ಅರಮನೆಗೂ ಬೇಕು, ಗುರುಮನೆಗೂ ಬೇಕು. ಈ ಸಂಪತ್ತು - ಅರಮನೆ, ಗುರುಮನೆ ಅನುಭವಿಸುವಂಥದ್ದು - ಅವರ ಸ್ವಯಾರ್ಜಿತವಲ್ಲ. ಶ್ರಮದ ಫಲವಲ್ಲ; ಜನಸಾಮಾನ್ಯರ ಬೆವರಿನ ಶ್ರಮ ಇವರ ಅಧಿಕಾರದ, ಅಹಂನ ಮೂಲ ಅಧಿಕಾರದ ಪ್ರತಿಷ್ಠೆಗೆ, ಅರಮನೆಯ ಭೋಗಕ್ಕೆ ಬಲಿಯಾಗುವ ಜನಸಾಮಾನ್ಯರ ಬದುಕಿನ ಕತೆ ಇಲ್ಲಿದೆ. ಅವರ ಸಂಕಟ, ಆಕ್ರೋಶ, ಅಸಹಾಯಕತೆಗೆ ಹನೂರರು ಇಲ್ಲಿ ಅಭಿವ್ಯಕ್ತಿ ನೀಡಿದ್ದಾರೆ.

ಕಾದಂಬರಿಯ ರಚನೆ ಏಕಾಕೃತಿಯ ಸ್ವರೂಪದಲ್ಲಿಲ್ಲ. ಅದರ ರಚನಾ ಸ್ವರೂಪವೇ ಬಹುಮುಖೀ ನೆಲೆಯನ್ನು ಒಳಗೊಂಡಿದೆ. ಇದು ರಾಜಕೀಯ ದಬ್ಬಾಳಿಕೆಯ ಅರಮನೆಯ ಕತೆಯೂ ಹೌದು; ಅದರ ಪ್ರತಿನಿಧಿಯಾದ ದಳವಾಯಿಯ ಕತೆಯೂ ಹೌದು; ಆತ ಇಟ್ಟುಕೊಂಡವಳ, ಕಟ್ಟಿಕೊಂಡವಳ ಕತೆಯೂ ಹೌದು; ರಾಜಕೀಯ ದಬ್ಬಾಳಿಕೆಗೆ ಒಳಗಾದ ಜನಸಾಮಾನ್ಯರ ಸಂಕಟದ ಕತೆಯೂ ಹೌದು; ಎಂಥ ಸಂದರ್ಭದಲ್ಲೂ ಪೊರೆಯುವ ಶಕ್ತಿಯನ್ನು ಕಾಪಾಡಿಕೊಂಡ ಸಮುದಾಯದ ಚೈತನ್ಯದ ಕತೆಯೂ ಹೌದು. ಈ ಎಲ್ಲವೂ ಒಂದರೊಡನೊಂದು ಹೆಣೆದುಕೊಂಡು, ಆದರೆ ಎಲ್ಲೂ ಜಟಿಲವಾಗದೆ, ಜಾನಪದ ಕಥಾ ನಿರೂಪಣೆಯ ಸರಳತೆಯನ್ನು ಒಳಗೊಂಡು ದಟ್ಟವಾದ ಅನುಭವವೊಂದನ್ನು ಕಾದಂಬರಿ ಕಟ್ಟಿಕೊಡುತ್ತದೆ.

ಕಥಾ ನಾಯಕ ದಳವಾಯಿಗೆ ಹೆಸರಿಲ್ಲ. ಇದೂ ಅರ್ಥಪೂರ್ಣ. ಈತ ಚರಿತ್ರೆಯಲ್ಲಿ ಪ್ರಸಿದ್ಧ ಪುರುಷನೇನಲ್ಲ. ಅರಮನೆ ನೇಮಿಸಿಕೊಂಡಿರುವ ಕಟುಕನೊಬ್ಬನ ಮಗ. ತಂದೆಯ ವೃತ್ತಿ ಆತನ ಸ್ವಭಾವವನ್ನು, ವ್ಯಕ್ತಿತ್ವವನ್ನು ರೂಪಿಸಿದೆ. ಕುರೂಪಿಯಾದ ಆತ ನೋಡಲೂ ಭಯಂಕರ, ಸ್ವಭಾವದಲ್ಲೂ ಕ್ರೂರಿ. ಹಲವು ಹೆಂಡಿರ ಗಂಡನಾದ ಈತನ ಮಗ ದಳವಾಯಿಗೆ ಹೆತ್ತ ತಾಯಿಯ ನೆನಪೂ ಇಲ್ಲ. ಅಂತಃಕರಣದ ಜಗತ್ತಿನಿಂದ ದೂರವಾದ ಈತ ಅನಾಥನೆಂಬಂತೆ ಬೆಳೆಯುತ್ತಾನೆ. ರೂಢಿಯ ಶಿಕ್ಷಣದಿಂದ, ಸಾಮಾಜಿಕ ಕಟ್ಟುಪಾಡುಗಳಿಂದ ವಿಮುಖನಾಗಿ ಅಪ್ಪನಂತೆಯೇ ಮಗನೂ ಹಿಂಸೆಯನ್ನು ಸ್ವಭಾವದಲ್ಲಿ ಸಹಜವೆಂಬಂತೆ ರೂಪಿಸಿಕೊಳ್ಳುತ್ತಾನೆ.

ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ ಈತ ಸಿಪಾಯಿವೃತ್ತಿ ಹಿಡಿದು ದಳವಾಯಿಯಾದ ಮೇಲೆ ಆತನ ಕಳ್ಳತನಕ್ಕೆ ಒಂದು ಅಧಿಕೃತತೆ ಪ್ರಾಪ್ತವಾಗುತ್ತದೆ; ಅಧಿಕಾರ ದುರ್ಬಳಕೆಯು ವಸೂಲಿಯ ರೂಪ ಪಡೆಯುತ್ತದೆ. ಯುದ್ಧವಾದಾಗ ಶತ್ರುಗಳ ಪಾಳಯದ ಲೂಟಿ, ಹೆಣ್ಣುಗಳ ಮಾನಭಂಗ, ಯುದ್ಧವಿಲ್ಲದಿದ್ದಾಗ ತಮ್ಮ ಪ್ರಜೆಗಳಿಂದಲೇ ವಸೂಲಿ, ಇಲ್ಲಿಯ ಹೆಣ್ಣುಗಳೇ ಭೋಗವಸ್ತುಗಳು. ಇಲ್ಲಿ ಬರುವ `ಹುಲಿ' ಕಾದಂಬರಿಯಲ್ಲಿ ಒಂದು ಸಮರ್ಥ ರೂಪಕ.

ಬೇಟೆ - ರಾಜಕೀಯದಲ್ಲಿ ವಿನೋದವೂ ಹೌದು, ಶತ್ರುಗಳನ್ನು ಹಣಿಯುವ ಹುನ್ನಾರವೂ ಹೌದು. ಹುಲಿಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಾ, ಅಪರಾಧಿಗಳನ್ನು ಹುಲಿಗೆ ಆಹಾರವಾಗಿಸುತ್ತ ಹುಲಿಯನ್ನು ಸಾಕುತ್ತಿದ್ದ ದಳವಾಯಿಯ ಹೆಂಡತಿಯೇ ಕೊನೆಯಲ್ಲಿ ಹುಲಿಗೆ ಆಹಾರವಾಗುವುದು ದುರಂತ ವ್ಯಂಗ್ಯ. ಹುಲಿ ಅರಮನೆಗೆ ಆಟದ, ಬೇಟೆಯ ವಿನೋದವಾದರೆ, ಕಾಡು ಜನರಿಗೆ ದೈವ ಸ್ವರೂಪಿಯೆಂಬುದನ್ನೂ ನಾವಿಲ್ಲಿ ಗಮನಿಸಬೇಕು. ಅರಮನೆಯ ಹಲ್ಲೆ, ಜನಸಮುದಾಯದ ಹಲವು ನಂಬಿಕೆಗಳ, ಮೌಲ್ಯಗಳ ಮೇಲಿನ ಹಲ್ಲೆಯಾಗಿಯೂ ಕಾದಂಬರಿಯಲ್ಲಿ ರೂಪಾಂತರವಾಗುವುದು ಹನೂರರ ಸೃಜನಶೀಲ ಪ್ರತಿಭೆಗೆ ಸಂಬಂಧಿಸಿದ ಸಂಗತಿ.

ಮಾನವ ಕೇಂದ್ರಿತ ಸಮಾಜದ ಮನುಷ್ಯನ ಕ್ರೂರ ಬಯಕೆಗಳೇ, ಭೋಗಾಕಾಂಕ್ಷೆಯ ಬದುಕಿನ ಸ್ವರೂಪವೇ ಎಲ್ಲ ಬಗೆಯ ಶೋಷಣೆಯ, ಸಂಕಟಗಳ ಮೂಲ ಹಾಗೂ ದುರಂತಕ್ಕೆ ಕಾರಣ. ಟಿಪ್ಪುವಿನಂತಹ ಸುಲ್ತಾನನ ಬದುಕೇ ಇರಬಹುದು, ಅಜ್ಞಾತ ದಳವಾಯಿಯ ಸಾಮಾನ್ಯನ ಬದುಕೇ ಇರಬಹುದು. ಇಂತಹ ಕ್ರೂರ ಬಯಕೆ ಹಲವರ ಬದುಕನ್ನು ನರಕ ಸದೃಶವಾಗಿಸಿ ಬಿಡುತ್ತದೆ. ಆದರೆ ಈ ಶೋಷಣೆಯ ಒಳಗೇ ಪ್ರತಿಭಟನೆಯ ಎಳೆಗಳು, ಪೋಷಿಸುವ ಜೀವಚೈತನ್ಯದ ಸೆಲೆಗಳೂ ಇರುತ್ತವೆ. ಕಾಸಿನಾಸೆಗೆ ದಳವಾಯಿಯ ಕೈಗೆ ಒಪ್ಪಿಸಿದ ದಾಸಯ್ಯನ ಮಗಳ ಪ್ರತಿಭಟನೆಯನ್ನು ನಾವಿಲ್ಲಿ ಗಮನಿಸಬಹುದು.

ಅವಳ ನಾಲಿಗೆ ಕತ್ತಿಗಿಂತ ಹರಿತವಾಗಿತ್ತು. ಅಪ್ಪನ ಹಿಂದೆ ತಂಬೂರಿ ಹಿಡಿದು ತಿರುಗುತ್ತಿದ್ದ ಅವಳಿಗೆ ಕತ್ತಿ ಗುರಾಣಿಯೆಂದರೆ ಮೂರು ಕಾಸಿನ ಭಯವೂ ಇರಲಿಲ್ಲ. ಅವಳೆದುರು ದಳವಾಯಿ ಹೆದರಿ ತಣ್ಣಗಾಗುವುದು, ಅವನ ಕಣ್ತಪ್ಪಿಸಿ ಅವಳು ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳುವುದು, ಯಾರ ಹಂಗಿಗೂ ಒಳಗಾಗದೆ ಬದುಕುವುದು, ಶಕ್ತಿಯಿದ್ದಾಗ ಮೆರೆದ ದಳವಾಯಿ ಶಕ್ತಿ ಕುಂದಿದಾಗ ತುತ್ತು ಊಟಕ್ಕೂ ಗತಿಯಿಲ್ಲದ ಸ್ಥಿತಿ ಬಂದಾಗ ಸಮುದಾಯ ಆತನನ್ನು ಸಲಹುವುದು- ಇವೆಲ್ಲ ಕಾದಂಬರಿಯ ಉಜ್ವಲ ಭಾಗಗಳು. ಹಿಂಸೆಯ ಈ ಕ್ರೂರ ಜಗತ್ತಿನಲ್ಲಿ ಅಂತಃಕರಣದ ಸೆಲೆಗಳನ್ನೂ ಕಾದಂಬರಿ ಗುಪ್ತಗಾಮಿನಿಯಂತೆ ಉದ್ದಕ್ಕೂ ಕಟ್ಟಿಕೊಡುತ್ತದೆ. ವಿಚಾರ ಸಿದ್ಧಾಂತಗಳ ಭಾವದಿಂದ ತತ್ತರಿಸುತ್ತಿರುವ ಹೊತ್ತಿನಲ್ಲಿ `ಅಜ್ಞಾತನೊಬ್ಬನ ಆತ್ಮಚರಿತ್ರೆ'ಯ ಓದು ಒಂದು ವಿಶಿಷ್ಟ ಅನುಭವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.