ತಿಂಗಳೇಶ ತನ್ನ ಆರೋಗ್ಯದಲ್ಲಿ ಏರುಪೇರಾದಾಗ ಸಾಮಾನ್ಯವಾಗಿ ತೋರಿಸಿಕೊಳ್ಳುವ ಕುಟುಂಬ ವೈದ್ಯರಿಗೆ ದೂರವಾಣಿ ಕರೆ ಮಾಡಿದ. ಎಷ್ಟು ಸಾರಿ ಪ್ರಯತ್ನಿಸಿದರೂ ‘ಆರೋಗ್ಯ ಇಲಾಖೆ ಜನಹಿತಕ್ಕಾಗಿ ಜಾರಿ’ ಮಾಡಿದ ಘೋಷಣೆಯನ್ನೇ ಕೇಳಿ ಕೇಳಿ ಯಾರ ವಿರುದ್ಧ ಯುದ್ಧ ಸಾರಬೇಕೆಂದು ತೋಚದೆ ಗೊಂದಲದಿಂದ ಸಾಬೂನು ಹಾಕಿ ಕೈತೊಳೆದುಕೊಂಡು ಮತ್ತೊಮ್ಮೆ ಕರೆ ಮಾಡಿದ; ಸಂಪರ್ಕ ಸಾಧ್ಯವಾಗಲಿಲ್ಲ. ಕೈಗಳಿಗೆ ಸ್ಯಾನಿಟೈಸರ್ ಸವರಿಕೊಂಡು ಮೊಬೈಲ್ ಪರದೆಯಲ್ಲಿ ಡಾಕ್ಟರ್ ದೂರವಾಣಿಯ ಹತ್ತು ಸಂಖ್ಯೆಗಳನ್ನು ಒಂದೊಂದಾಗಿ ಅದುಮಿದ; ಆಗಲೂ ಕೇಳಿದ್ದು ಅದೇ ಘೋಷಣೆ. ಈಗ ಮುಖಕ್ಕೆ ಮಾಸ್ಕ್ ಧರಿಸಿ ಕರೆ ಮಾಡಲು ಪ್ರಯತ್ನಿಸಿದ; ಅದೂ ಸಫಲವಾಗಲಿಲ್ಲ.

ಕೊನೆಗೆ ಹತಾಶನಾಗಿ ಪಕ್ಕದಲ್ಲಿದ್ದ ರಿಮೋಟ್ ಅನ್ನು ಕೈಗೆತ್ತಿಕೊಂಡು ಥೇಟ್ ಪಿಸ್ತೂಲಿನಂತೆ ಹಿಡಿದು ಟಿ.ವಿ ಎದುರು ಝಳಪಿಸಿದ. ಪರದೆಯಲ್ಲಿ ತೆರೆದುಕೊಂಡ ಸುದ್ದಿವಾಹಿನಿ, ‘ವಕ್ಕರಿಸಿದ ಕೊರೊನಾ ಮಹಾಮಾರಿ...’ ಎಂದು ಕಿರುಚುತ್ತಿತ್ತು. ಭಯಗೊಂಡು ತಕ್ಷಣ ಚಾನೆಲ್ ಬದಲಿಸುತ್ತಾ ಸಾಗಿದ. ಒಂದು ವಾಹಿನಿಯಲ್ಲಿ ಮರಣ ಮೃದಂಗ ಕೇಳಿಸಿತು. ಇನ್ನೊಂದರಲ್ಲಿ ಸೋಂಕಿನ ಸುನಾಮಿ ಬೀಸುತ್ತಿತ್ತು. ಮತ್ತೊಂದರಲ್ಲಿ ಸಾವು ಕೇಕೆ ಹಾಕಿತು. ಮಗದೊಂದರಲ್ಲಿ ರಕ್ಕಸ ವಕ್ಕರಿಸಿದ್ದ... ಹೆಚ್ಚುಕಮ್ಮಿ ಎಲ್ಲಾವಾಹಿನಿಗಳಲ್ಲೂ ಮಾರಿಯ ರುದ್ರನರ್ತನ, ಎಲ್ಲಾ ಊರುಕೇರಿಗಳಿಗೂ ಕೊರೊನಾ ಕಂಟಕ.

ನೆಮ್ಮದಿಗೆಟ್ಟ ತಿಂಗಳೇಶ ರಿಮೊಟಿನ ಕೆಂಪು ಗುಂಡಿ ಅದುಮಿ ಕಣ್ಣು ಮುಚ್ಚಿಕೊಂಡ. ಕತ್ತಲಲ್ಲೂ ಕೊರೊನಾ ಕಾಣಿಸಿದಂತಾಗಿ ದಿಗ್ಗನೆದ್ದು ವಾಷ್ ಬೇಸಿನ್ ತಲುಪಿದ. ಕೈಗಳಿಗೆ ಸೋಪಿನ ದ್ರವ ಸುರಿದುಕೊಂಡು ಬಾಯಲ್ಲಿ ಮೂವತ್ತು ಅಂಕಿಗಳನ್ನು ಎಣಿಸುತ್ತ ಬೆರಳ ಸಂದಿಗಳನ್ನು ತಿಕ್ಕಿತಿಕ್ಕಿ ತೊಳೆದಾಗಲೇ ತುಸು ಸಮಾಧಾನ. ನಿಧಾನವಾಗಿ ಸುಧಾರಿಸಿಕೊಳ್ಳುತ್ತಾ ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್ ತೆರೆದು ನೋಡಿದ. ಎಲ್ಲಾ ಗುಂಪುಗಳು ಕೊರೊನಾ ಸಂಬಂಧಿ ಸಂದೇಶಗಳನ್ನು ತುಂಬಿಕೊಂಡು ತುಳುಕಾಡುತ್ತಿದ್ದವು. ವಾಟ್ಸ್‌ಆ್ಯಪ್ ಪ್ರಾಯೋಜಿತ ಫಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ದಕ್ಷತೆ, ಚಾಕಚಕ್ಯತೆ ಎದುರು ಹಾರ್ವರ್ಡ್ ಯಾವುದಕ್ಕೂ ಪ್ರಯೋಜನವಿಲ್ಲ ಅನ್ನಿಸಿತು.

ಅಷ್ಟೊತ್ತಿಗೆ ಯಥಾಪ್ರಕಾರ ಹೆಂಡತಿಯ ಗೊಣಗಾಟ ಕೇಳತೊಡಗಿತು. ‘ನೀವು ಬೆಳಿಗ್ಗೆ ಉಪ್ಪಿನ ನೀರು ಮುಕ್ಕಳಿಸುವುದಿಲ್ಲ; ಗಂಟಲು ಕಿರಿಕಿರಿ ಅಂತೀರಿ... ಬಿಸಿಲಲ್ಲಿ ವಾಕ್ ಮಾಡುವುದಿಲ್ಲ; ವಿಟಮಿನ್ ‘ಡಿ’ ಕೊರತೆ ಕಾಡುತ್ತದೆ... ಬಿಸಿನೀರು ಕುಡೀರಿ ಅಂದರೆ ಕೇಳುವುದಿಲ್ಲ... ಬಾದಾಮಿ ಒಳ್ಳೆಯದಂತೆ; ನೀವು ತಿನ್ನೋದೇ ಇಲ್ಲ... ಬೆಳ್ಳುಳ್ಳಿನಾದ್ರೂ ತಿನ್ನಿ...’ ಉಪದೇಶ ಮುಗಿಯುವಂತೆ ಕಾಣಲಿಲ್ಲ. ಹೆಂಡತಿಯಿಂದ ‘ಗಂಡನ ಹಿತಕ್ಕಾಗಿ ಜಾರಿ’ಗೊಳಿಸಿದ ಈ ಘೋಷಣೆಯನ್ನೂ ಮೊಬೈಲಿನ ರಿಂಗ್‌ಟೋನ್ ಮಾಡಬಾರದೇಕೆ ಎಂದು ಜೋಕ್ ಕಟ್ ಮಾಡಿಕೊಂಡ ತಿಂಗಳೇಶ ತನ್ನೊಳಗೇ ನಕ್ಕ. ರಿಮೋಟ್‌ನ ರೆಡ್ ಬಟನ್ ಕೆಲಸಕ್ಕೆ ಬರುವಂತಿರಲಿಲ್ಲ!

ಮೊಬೈಲ್ ರಿಂಗ್ ಆಯ್ತು. ಖುಷಿಯಿಂದ ಗೆಳೆಯನ ಕರೆ ಸ್ವೀಕರಿಸಿದ. ರೈತಾಪಿ ಹಿನ್ನೆಲೆಯ ತಿಂಗಳೇಶ ಸಹಜವಾಗಿ, ‘ನಿಮ್ಮ ಕಡೆ ಹೇಗೆ...?’ ಎಂದು ಮಳೆ–ಬೆಳೆ ವಿಚಾರಿಸಿದ. ಆದರೆ, ಆಕಡೆಯಿಂದ ಗೆಳೆಯ ಶುರುಹಚ್ಚಿಕೊಂಡ: ‘ಅಯ್ಯೋ... ಇವತ್ತು ನಮ್ಮ ಊರಿನಲ್ಲಿ ಇಪ್ಪತ್ತು ಪಾಸಿಟಿವ್ ಕೇಸ್‌ಗಳು ಬಂದಿವೆ. ನಮ್ಮ ಪಕ್ಕದ ಓಣಿಯಲ್ಲಿ ಐದು ಜನರನ್ನು ಕ್ವಾರಂಟೈನ್ ಮಾಡಿದ್ದಾರೆ. ಶಾಸಕರ ಗಂಟಲು ದ್ರವ ಪರೀಕ್ಷೆಗೆ ಕಳಿಸಿದ್ದಾರೆ...’ ಏನು ಹೇಳುವುದೆಂದು ತೋಚದೆ ಕಂಗಾಲಾದ ತಿಂಗಳೇಶ ಬಾಯಿ ಒಣಗಿದಂತಾಗಿ ಗಂಟಲು ಸರಿಪಡಿಸಿಕೊಂಡ. ತಕ್ಷಣ ಗೆಳೆಯ, ‘ಯಾಕೋ ಕೆಮ್ಮುತ್ತೀಯಲ್ಲ... ಡಾಕ್ಟರಿಗೆ ತೋರಿಸಿಕೊಳ್ಳಪ್ಪಾ...’ ಎಂದು ಅನುಮಾನದ ಹುಳು ಬಿಡಬೇಕೇ?

ಮತ್ತೆ ಮುಂದೆ ಬಂದು ನಿಂತಳು ಮಡದಿ, ಕೈಯಲ್ಲಿ ಅರಿಸಿನ ಬೆರೆಸಿದ ಬಿಸಿಹಾಲು ಹಿಡಿದು. ಅಪರೂಪಕ್ಕೆ ಅವಳ ಬಾಯಿ ಏಕೋ ಸುಮ್ಮನಿತ್ತು. ಅವನಿಗೂ ‘ಸ್ಟೇಟಸ್ ಕೋ’ ಪಾಲನೆ ಬೇಕಿತ್ತು. ಹಾಲನ್ನು ಗಂಟಲಿನ ನಾಳದಲ್ಲಿ ಉಷ್ಣ ತಾಗುವಂತೆ ನಿಧಾನವಾಗಿ ಗುಟುಕರಿಸಿದ; ಅಲ್ಲಿದ್ದ ಕೊರೊನಾ ವೈರಾಣುಗಳು ಹಾಲಿನ ಬಿಸಿ ಮತ್ತು ಅರಿಸಿನದ ಔಷಧೀಯ ಗುಣದಿಂದ ಚಟಪಟ ಸತ್ತು ಬಿದ್ದಂತೆ ಭಾಸವಾಗಿ ನಿರಾಳವೆನ್ನಿಸಿತು. ಕದನ ವಿರಾಮ ಮುರಿದ ಮಡದಿ, ‘ಡಾಕ್ಟರ್‌ಗೆ ಫೋನ್ ಮಾಡಬೇಕಿತ್ತು...’ ಎಂದು ತೆಳುವಾದ ದನಿಯಲ್ಲಿ ಕಳಕಳಿ ತೋರಿದಳು.

ಮೊಬೈಲ್ ಕೈಗೆತ್ತಿಕೊಂಡು ಡಾಕ್ಟರ್ ನಂಬರಿಗೆ ಡಯಲ್ ಮಾಡಿದ. ಪ್ರತಿ ಬಾರಿ ಕರೆ ಮಾಡಿದಾಗ ಮಧ್ಯೆ ಬಾಯಿಹಾಕಿ ಎಚ್ಚರಿಕೆಯನ್ನು ‘ಜನಹಿತಕ್ಕಾಗಿ ಜಾರಿ’ಗೊಳಿಸುತ್ತಿದ್ದ ಉದ್ಘೋಷಕಿ ಊಟಕ್ಕೆ ಹೋಗಿದ್ದಳೇನೋ... ಕರೆ ಕನೆಕ್ಟ್ ಆಗಿಯೇ
ಬಿಟ್ಟಿತು.

ತಿಂಗಳೇಶ: ನಮಸ್ತೆ ಡಾಕ್ಟರೇ... ಹೇಗಿದ್ದೀರಿ?

ಡಾಕ್ಟರ್: ನಮಸ್ತೆ, ಚೆನ್ನಾಗಿದ್ದೀನಿ.

ತಿಂಗಳೇಶ: ಕೆಮ್ಮು, ನೆಗಡಿ ಏನಾದರೂ ಇದೆಯಾ?

ಡಾಕ್ಟರ್: ಇಲ್ಲ... ಇಲ್ಲ...

ತಿಂಗಳೇಶ: ನಿಮ್ಮ ಆಕ್ಸಿಜೆನ್ ಸ್ಯಾಚುರೇಷನ್ ಎಷ್ಟಿದೆ?

ಡಾಕ್ಟರ್: 98 ಇದೆ, ನಾರ್ಮಲ್.

ತಿಂಗಳೇಶ: ಲಂಗ್ಸ್ ತೊಂದರೆ ಏನಿಲ್ಲವೇ?

ಡಾಕ್ಟರ್: ಇಲ್ಲ

ತಿಂಗಳೇಶ: ಪಿಪಿಇ ಕಿಟ್, ಎನ್-95 ಮಾಸ್ಕ್ ಹಾಕುವಿರಾ?

ಡಾಕ್ಟರ್: ಹೌದು

ತಿಂಗಳೇಶ: ನಿಮ್ಮ ಏರಿಯಾ ಕಂಟೇನ್‍ಮೆಂಟ್ ಜೋನಿನಲ್ಲಿ ಬರುತ್ತದಾ?

ಡಾಕ್ಟರ್: ಇಲ್ಲ

ತಿಂಗಳೇಶ: ಇತ್ತೀಚೆಗೆ ಹೊರದೇಶಕ್ಕೆ ಹೋಗಿದ್ದಿರಾ? ಟ್ರಾವೆಲ್ ಹಿಸ್ಟರಿ...?

ಡಾಕ್ಟರ್: ಇಲ್ಲ.

ತಿಂಗಳೇಶ: ಸರಿ ಡಾಕ್ಟರೇ... ನನಗೇಕೋ ಆರೋಗ್ಯದಲ್ಲಿ ತೊಂದರೆ, ಆಸ್ಪತ್ರೆಗೆ ಯಾವಾಗ ಬರಲಿ?

ಡಾಕ್ಟರ್: ಈಗ ಬೇಡ. ಕೊರೊನಾಗೆ ಲಸಿಕೆ ಕಂಡುಹಿಡಿದ ನಂತರ ಬನ್ನಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.