ಒಬ್ಬ ಕಲಾವಿದ ಎಲ್ಲ ರಾಗಗಳನ್ನು ಹಾಡಲು ಸಾಧ್ಯವಿಲ್ಲ. ಕೆಲವು ರಾಗಗಳಿಗೆ ಕೆಲವು ಸ್ವಭಾವ ಇರುತ್ತದೆ. ಮನೋಧರ್ಮವೂ ಕಲಾವಿದರಿಂದ ಕಲಾವಿದರಿಗೆ ಭಿನ್ನವಾಗಿರುತ್ತದೆ. ‘ರಾಗ– ಸ್ವಭಾವ’ದ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
ಸಾಧನೆಯನ್ನು ಅಪೇಕ್ಷಿಸುವ ವಿದ್ಯೆ ಸಂಗೀತ. ಒಮ್ಮೆ ನಾವು ಅದನ್ನು ಕರಗತ ಮಾಡಿಕೊಂಡರೆ ಅದೇ ಮುಂದೆ ನಮ್ಮನ್ನು ಮೇಲಕ್ಕೆ ತೆಗೆದುಕೊಂಡು ಹೋಗುತ್ತದೆ. ಸಣ್ಣ ವಯಸ್ಸಿನಲ್ಲೇ ಕೃಷಿ ಹಾಗೂ ಸಂಗೀತಕ್ಕೆ ಆತುಕೊಂಡೇ ನಾನು ಇಷ್ಟು ದೂರ ಸಾಗಿ ಬಂದಿದ್ದೇನೆ. ರಾಗ ಎನ್ನುವುದು ಒಬ್ಬನ ‘ವ್ಯಕ್ತಿತ್ವ’ (personality) ಇದ್ದಹಾಗೆ. ನಮ್ಮ ಗಾಯನ ಶೈಲಿಯಿಂದಲೇ ನಾವು ಒಂದು ‘ಐಡೆಂಟಿಟಿ’ ಗಳಿಸಿಕೊಳ್ಳಬಹುದು. ನನ್ನ ದೃಷ್ಟಿಯಲ್ಲಿ ರಾಗ ಎನ್ನುವುದು ಒಬ್ಬನ ಸ್ವಭಾವ ಇದ್ದ ಹಾಗೆ. ಪರಿಚಯ ಆದವರೆಲ್ಲರೂ ಸ್ನೇಹಿತರಾಗುವುದಿಲ್ಲ. ಹಾಗೆಯೇ ರಾಗವೂ. ರಾಗದ ಬಗ್ಗೆ ತಿಳಿದುಕೊಂಡೆ ಅಂದಾಕ್ಷಣ ಅದನ್ನೇ ಹಾಡಬೇಕು ಎನ್ನುವ ನಿಯಮ ಏನೂ ಇಲ್ಲ. ನೂರಾರು ರಾಗಗಳ ಬಗ್ಗೆ ತಿಳಿದುಕೊಂಡಿದ್ದರೂ ಸಂಗೀತ ಬದುಕಿನ ಅವಧಿಯಲ್ಲಿ 20–25 ರಾಗಗಳನ್ನು ಅಷ್ಟೇ ಹಾಡ್ತೀನಿ. ಅವನ್ನೇ ಜೀವನದಲ್ಲಿ ಅಳವಡಿಸಿಕೊಂಡು ಹೋಗುವಷ್ಟು ಆಳವಾಗಿ ತೊಡಗಿಸಿಕೊಳ್ತೀನಿ. ಇದು ನನ್ನ ಸ್ವಭಾವ. ಹೀಗಾಗಿ ಒಬ್ಬ ಕಲಾವಿದ ಆತನ ಸ್ವಭಾವಕ್ಕೆ ಸರಿಹೊಂದುವ ರಾಗಗಳನ್ನು ಮತ್ತೆ ಮತ್ತೆ ಹಾಡಬೇಕಾಗುತ್ತದೆ. ಹಾಡುವ ರಾಗ ಕೇಳುಗರಲ್ಲಿ ಅನುಭೂತಿ ಮೂಡಿಸಿತೆಂದರೆ ಧನ್ಯರಾದೆವು ಎಂದೇ ಅರ್ಥ.
ಸಾಮಾನ್ಯವಾಗಿ ಕಲ್ಯಾಣ್ ಥಾಟ್, ತೋಡಿ ಥಾಟ್, ಕಾಫಿ ಥಾಟ್ ರಾಗಗಳೆಂದರೆ ನನಗೆ ಬಹಳ ಪ್ರೀತಿ. ಭೈರವ್ ರಾಗದ ಮೇಲೆ ವಿಶೇಷ ಮೋಹ. ಶಾಸ್ತ್ರೀಯ ಸಂಗೀತ ಅಲ್ಲದೆ ಸುಗಮ ಸಂಗೀತ, ದಾಸರ ಪದಗಳು, ಮೀರಾ ಭಜನ್, ಕಬೀರ್ ಭಜನ್, ವಚನಗಳನ್ನೂ ರಾಗಗಳ ಚೌಕಟ್ಟಿನೊಳಗೇ ಹಾಡ್ತೀನಿ. ಇದು ಕೇಳುಗರನ್ನು ತಲುಪುತ್ತೆ. ಮತ್ತೆ ಮತ್ತೆ ಕೇಳಬೇಕೆನಿಸುತ್ತೆ.
ಗುರು– ಶಿಷ್ಯ ಪರಂಪರೆಯ ಸಂಗೀತದಲ್ಲಿ ಅಪಾರ ನಂಬಿಕೆ ಇಟ್ಟವರು ನೀವು. ಗುರುಕುಲ ಪದ್ಧತಿಯಲ್ಲಿ ಅನೇಕ ಶಿಷ್ಯಂದಿರನ್ನು ಬೆಳೆಸಿದವರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸಂಗೀತದ ಗುರು–ಶಿಷ್ಯ ಪರಂಪರೆ ಎಂಬ ಪರಿಕಲ್ಪನೆಯೇ ತೆರೆಮರೆಗೆ ಸರಿಯುತ್ತಿದೆ ಅನಿಸುತ್ತಿದೆ. ನಿಮ್ಮ ಅನಿಸಿಕೆ ಏನು?
ಗುರು–ಶಿಷ್ಯ ಪರಂಪರೆ ಎಂಬುದು ಸಂಗೀತದ ಅವಿಭಾಜ್ಯ ಅಂಗ ಎಂಬುದು ನನ್ನ ಭಾವನೆ. ಒಬ್ಬ ಸಂಗೀತಾಸಕ್ತ ಗುರುಮುಖೇನವೇ ಸಂಗೀತ ಅಭ್ಯಾಸ ಮಾಡಬೇಕು. ಆಗಲೇ ರಾಗಜ್ಞಾನ, ಲಯದ ಬಗ್ಗೆ ತಿಳಿವಳಿಕೆ, ಸಂಗೀತದ ಒಟ್ಟಾರೆ ಆಳಗಲವನ್ನು ಅರಿಯಲು ಸಾಧ್ಯ. ನಾನು ಇದೇ ಪರಂಪರೆಯಲ್ಲಿ ಅನೇಕ ಶಿಷ್ಯಂದಿರನ್ನು ತಯಾರು ಮಾಡಿದ್ದು, ಇವರೆಲ್ಲ ಈಗ ದೇಶದಾದ್ಯಂತ ಸಂಗೀತ ಕಛೇರಿ ನೀಡುತ್ತಿದ್ದಾರೆ.
ಆದರೆ, ಈಗ ಜೀವನಶೈಲಿ ಬದಲಾಗಿದೆ. ಅದೇ ರೀತಿ ಸಂಗೀತ ಕಲಿಕೆಯ ಶೈಲಿಯೂ ಮಾರ್ಪಾಡಾಗಿದೆ. ಸಂಗೀತ ಕಲಿಕೆ ಸಮಯ ಬೇಡುತ್ತೆ. ಇಂದಿನ ತಾಂತ್ರಿಕ ಬದುಕಿನಲ್ಲಿ ಬೌದ್ಧಿಕ ಜ್ಞಾನ ಗಳಿಕೆ ಹಿಂದೆ ಬೀಳುತ್ತಿದೆಯಾ ಎಂಬ ಆತಂಕ ಸೃಷ್ಟಿಯಾಗಿದೆ. ಮಕ್ಕಳಿಗೆ ಪ್ರಚಾರ ಬೇಕು, ಎಕ್ಸ್‌ಪೋಷರ್ ಬೇಕು. ಆದರೆ ಇವೆಲ್ಲ ಸಂಗೀತದ ಭದ್ರ ಬುನಾದಿ ಪಡೆದ ಮೇಲೆ ಸಿಕ್ಕಿದರೆ ಒಳ್ಳೆಯದು. ಸಾವಕಾಶವಾಗಿ ಸಂಗೀತ ಕಲಿತ ಮೇಲೆ ಈ ಕ್ಷೇತ್ರದಲ್ಲಿ ಹಂತಹಂತವಾಗಿ ಮೇಲೇರಲು ಸಾಧ್ಯ. ಗುಣಮಟ್ಟದ ಸಂಗೀತ ಕೇಳುಗರಿಗೆ ನೀಡಬೇಕಾದರೆ ಪ್ರತಿಭೆ ಜೊತೆಗೆ ತಾಳ್ಮೆ, ಪರಿಶ್ರಮ, ಸಾಧನಾ, ರಿಯಾಜ್ ಎಲ್ಲವೂ ಮುಖ್ಯವಾಗುತ್ತದೆ.
ನಿಮ್ಮ ಮನಸ್ಸಿನ ಸಂತೋಷಕ್ಕಾಗಿ, ಪ್ರತಿಫಲಾಪೇಕ್ಷೆಯಿಲ್ಲದೆ ಸಂಗೀತ ಕ್ಷೇತ್ರದಲ್ಲಿ ಹುಲುಸಾದ ವ್ಯವಸಾಯ ನಡೆಸಿದವರು ನೀವು. ಹಲವು ಪ್ರಶಸ್ತಿಗಳು ನಿಮ್ಮನ್ನು ಅರಸಿ ಗೌರವಿಸಿವೆ. ಈಗ ಬಂದಿರುವ ‘ತಾನ್‌ಸೇನ್ ಸಮ್ಮಾನ್’ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
ಪ್ರಶಸ್ತಿ ಪಡೆಯುವುದು ಒಬ್ಬ ಕಲಾವಿದನ ಜೀವನದಲ್ಲಿ ಅದ್ಭುತ ಅನುಭವ. ಕಳೆದ ಐವತ್ತು ವರ್ಷಗಳಿಂದ ಈ ಕ್ಷೇತ್ರದಲ್ಲಿ ಇದ್ದು, ನನ್ನ ಇತಿಮಿತಿಯಲ್ಲಿ ಸಂಗೀತಕ್ಕಾಗಿ ದುಡಿದಿದ್ದೇನೆ. ದೇಶ ವಿದೇಶಗಳಲ್ಲಿ ಕಛೇರಿ ನೀಡಿದ್ದೇನೆ. ಹಲವಾರು ರಾಗಗಳನ್ನು ಹಾಡಿ ರೆಕಾರ್ಡಿಂಗ್‌ಗಳನ್ನು ಹೊರತಂದಿದ್ದೇನೆ. ಸ್ವತಂತ್ರ ಕಛೇರಿ ನೀಡಲು ಸಾಮರ್ಥ್ಯ ಹೊಂದಿರುವ ಹಲವಾರು ಶಿಷ್ಯಂದಿರನ್ನು ತಯಾರು ಮಾಡಿದ್ದೇನೆ. ಇವೆಲ್ಲವನ್ನೂ ಪರಿಗಣಿಸಿ ನನ್ನನ್ನು ಈ ಪ್ರತಿಷ್ಠಿತ ‘ತಾನ್‌ಸೇನ್ ಸಮ್ಮಾನ್’ಗೆ ಆಯ್ಕೆ ಮಾಡಿರುವುದು ತುಂಬ ಸಂತೋಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.