ಮೂಲ: ಹೃದಯ್ ಕೌಲ್ ಭಾರತಿ

ಕನ್ನಡಕ್ಕೆ: ಡಿ.ಎನ್. ಶ್ರೀನಾಥ್

ಹಳ್ಳಿಯಲ್ಲಿ ಇಂಥ ಸಡಗರ ಮೊದಲ ಬಾರಿಗೆ ಸಂಭವಿಸಿತು. ಹೀಗಾಗಿ ಯಾರಿಗೂ, ಇದಕ್ಕೆ ಸಂತೋಷ ಪಡಬೇಕೋ ಅಥವಾ ರೇಗಬೇಕೋ, ಉತ್ಸವವನ್ನು ಆಚರಿಸಬೇಕೋ ಅಥವಾ ಶೋಕದ ಮೆರವಣಿಗೆ ಮಾಡಬೇಕೋ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಎಲ್ಲರೂ ತಮ್ಮ-ತಮ್ಮ ಸ್ಥಳದಲ್ಲಿ ನಿರೀಕ್ಷಿಸುತ್ತಿದ್ದರು, ಕೆಲವರು ಈಗಲೂ ನಿರೀಕ್ಷಿಸುತ್ತಿದ್ದಾರೆ. ಕೆಲವರು ಗಾಬರಿಗೊಂಡರು, ಕೆಲವರು ಪ್ರಾಣ ಭಯದಿಂದ ಹಿಂದಿದ್ದ ಕಾಡಿಗೆ ಹೋದರು. ಹಳ್ಳಿಯ ಜನರು ಚಮತ್ಕಾರವನ್ನು ತೋರಿದರು; ಸಡಗರಕ್ಕೆ ಬಲಿಯಾದವನು ಯಾರಾಗಿದ್ದ, ಯಾರ ಸಂಬಂಧಿಕನಾಗಿದ್ದ ಎಂಬುದನ್ನು ಪತ್ತೆ ಹಚ್ಚಿದರು! ಸಂಬಂಧಿಸಿದವರು ಶೋಕ ವ್ಯಕ್ತಪಡಿಸಿದರು. ಸಂಬಂಧಿಸದವರು ಹುಗ್ಗಿ ಮಾಡಿ, ಮುಖ ಮೇಲೆ ಮಾಡಿ, ‘ಹೇ ದೇವ! ನೀನು ನಮ್ಮನ್ನು ಮತ್ತು ನಮ್ಮವರನ್ನು ರಕ್ಷಿಸಿದೆ’ ಎಂದು ದೇವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ವೇಳೆಯಲ್ಲಿ ಒಬ್ಬ ವ್ಯಕ್ತಿ ಎಲ್ಲರಿಗೂ ಬುದ್ಧಿವಂತನೆಂದು ತೋರುತ್ತಿದ್ದ; ಅವನು ತನ್ನ ಸುತ್ತಮುತ್ತ ಅಂತರವನ್ನು ಕಾಯ್ದುಕೊಂಡು, ಹಳ್ಳಿಯವರಿಂದ ದೂರವಿದ್ದ. ಆಗ ಎಲ್ಲರೂ ಅವನನ್ನು ರೇಗಿಸಿದ್ದರು.

ನಾನೂ ಸಹ ಅದನ್ನೇ ಮಾಡುತ್ತಿದ್ದೆ, ಆದರೆ ನನಗೆ ಹುಟ್ಟಿನಿಂದಲೂ ಬೆಳಕು ಮತ್ತು ಉಷ್ಣ ಎರಡೂ ಇಷ್ಟವಾಗುತ್ತವೆ; ಈ ಗುಣ ಬಿಸಿಲಿನಲ್ಲಿ ಮಾತ್ರವಿದೆ. ಬಿಸಿಲಿನಲ್ಲಿ ಪ್ರತಿಯೊಂದು ವಸ್ತು ಸಹ ಸ್ಪಷ್ಟವಾಗಿ ಕಾಣುತ್ತದೆ. ಗಾಯ, ಪರಚಿದ್ದು, ಹುಣ್ಣು, ಗುರುತು, ಕೊಳೆ ಎಲ್ಲವೂ ಕಣ್ಣುಗಳೆದರು ಮೂಡುತ್ತವೆ.
ಹೊಗೆ ಸ್ವಲ್ಪ ಕಡಿಮೆಯಾದಾಗ ಜನ ಶೋಕ ವ್ಯಕ್ತಪಡಿಸಿ ಮರಳಿ ಬಂದಾಗ ಮಾತುಕತೆಗಳು ಆರಂಭವಾದವು-
“ಇದು ದೊಡ್ಡ ರಗಳೆಯಾಯ್ತು!”
“ಪಾಪ-ಕಾರ್ಯ ಹೆಚ್ಚಿದಾಗ ಹೀಗೆಯೇ ಆಗುವುದು.”
“ಯಾರಿಗೂ ಸಾವಿನ ಭಯವೇ ಇಲ್ಲವೆಂಬಂತೆ!”
“ಇದು ಕೊನೆಗಾಲವಪ್ಪ, ಕೊನೆಗಾಲ.”
ಹಳ್ಳಿಯ ಪ್ರತಿಯೊಬ್ಬರು ಸಂಪ್ರದಾಯದಂತೆ ಒಂದೇ ರೀತಿಯ ಒಂದೊಂದು ವಾಕ್ಯವನ್ನು ಹೇಳಿದರು. ನಂತರ ಈ ಹಿಂದೆ ನಡೆದುಬಂದಂತೆಯೇ ಸಂಭವಿಸಿತು.
ನಿತ್ಯದಂತೆ ಈ ವೇಳೆಯಲ್ಲಿ ಸಹ ನನ್ನ ಆತ್ಮೀಯ ಮಿತ್ರ ನನ್ನೊಂದಿಗಿದ್ದ. ನಾನು ಮುಗುಳ್ನಗುವುದನ್ನು ನೋಡಿ ರೇಗಿದ, “ನಿನ್ನ ಅಭಿಪ್ರಾಯದಲ್ಲಿ ಇವರೆಲ್ಲಾ ಮೂರ್ಖರೇ?” ಸಾವು ತನ್ನ ಕಾಲ ಕೆಳಗಿದೆ ಎಂಬ ಭಯ ಅವನಿಗಿತ್ತು. ನಾನು ಹಾಗೆಯೇ ಮುಗುಳ್ನಗುತ್ತಾ ಹೇಳಿದೆ, “ನಿನ್ನ ಅಭಿಪ್ರಾಯದಲ್ಲಿ ಅವರೆಲ್ಲರೂ ಬುದ್ಧಿವಂತರೇ?”
ನನಗೂ ಸಹ ಸಾವು ನನ್ನ ಕಾಲ ಕೆಳಗಿದೆ ಎಂದು ಅನ್ನಿಸುತ್ತಿತ್ತು.
“ಆಗಲೂ ಏನಾದರೂ ಹೇಳುತ್ತಾರೆ.” ನಾನು ಏನಾದರು ಹೇಳದಿದ್ದರೆ, ಅವನ ಸಾವು ಅವನ ಕಾಲುಗಳ ಕೆಳಗಿನಿಂದ ಹೊರಟು ಬೆಟ್ಟಗಳ ಹಿಂದೆ ಹಾರಿ ಹೋಗಿ ಮಾಯವಾಗುತ್ತದೆ ಎನ್ನುವಂತೆ ಹೇಳಿದ.
“ಒಂದು ವಿಷಯ ಹೇಳಲಾ?” ಎನ್ನುತ್ತಾ ನಾನು ನನ್ನ ಆಪ್ತಮಿತ್ರನ ಭುಜವನ್ನು ಹಿಡಿದು, ಒಂದು ಬದಿಗೆ ಕರೆದೊಯ್ದು ಹೇಳಿದೆ, “ಹಳ್ಳಿಯವರಿಗೆ ಈಗಲೂ, ಇದಕ್ಕೆ ಖುಷಿ ಪಡಬೇಕೋ ಅಥವಾ ರೇಗಬೇಕೋ ಎಂಬುದು ಗೊತ್ತಿಲ್ಲ, ಇದು ನಿನಗೆ ಗೊತ್ತಾ?”
“ಯಾವುದಕ್ಕೆ?” ಅವನು ತನ್ನ ಕಣ್ಣುಗಳನ್ನು ಸಣ್ಣದು ಮಾಡಿಕೊಂಡ.
“ಇದೇ ಸಡಗರಕ್ಕೆ.”
“ನೀನೇ ಹೇಳು.”
“ನಾನೇನು ಹೇಳಲಿ? ಸಂತೋಷ ಮತ್ತು ದುಃಖ ಮನಸ್ಸಿನ ಒಂದು ಸ್ಥಿತಿಯಾಗಿರುತ್ತದೆ, ನಾನು ಹೇಳುವುದರಿಂದ ಅವುಗಳಲ್ಲಿ ವ್ಯತ್ಯಾಸವಾಗುವುದಿಲ್ಲ.”

2

ಅವನು ನನ್ನ ಮಾತನ್ನು ಒಪ್ಪಿದ. ಆದರೆ ಸಾವು ತನ್ನ ಕಾಲುಗಳ ಕೆಳಗಿದೆ ಎಂಬ ಭಯ ಅವನಿಗಿನ್ನೂ ಇತ್ತು. ನಿಜ ಹೇಳಬೇಕೆಂದರೆ, ನನಗೂ ಸಾವು ನನ್ನ ಕಾಲುಗಳ ಕೆಳಗಿದೆ ಎಂದು ಅನ್ನಿಸುತ್ತಿತ್ತು.
“ನಿನಗೆ ಗೊತ್ತಾ, ನಾಗರ ಜಾತಿ ಇಂದಿಗೂ ಏಕಿದೆ ಅಂತ?” ನಾನು ಅವನನ್ನು ಹುರಿದುಂಬಿಸಿದೆ.
“ಏಕಿದೆ?”
“ಏಕೆಂದರೆ ಅವರನ್ನು ನಾಶ ಮಾಡುವ ಪ್ರಕ್ರಿಯೆ ನಡೆಯುತ್ತಿರುವಾಗ ದೇವತೆಗಳ ರಾಜ ಇಂದ್ರ ನಾಗರರಾಜ ತಕ್ಷಕನಿಗೆ ತನ್ನ ಸಿಂಹಾಸನದ ಕೆಳಗೆ ಆಶ್ರಯ ಕೊಟ್ಟ.”
ನಾನು ಹೀಗೆ ಹೇಳುತ್ತಲೇ, ಕಾಲ ಕೆಳಗಿದ್ದ ಸಾವು ಒಮ್ಮೆಲೆ ನನ್ನೆರಡೂ ಕಾಲುಗಳನ್ನು ಹಿಡಿದುಕೊಂಡಿತು, ನಾನು ಅಲ್ಲಿಯೇ ಬಿದ್ದೆ. ನನಗೆ ಪ್ರಜ್ಞೆ ಬಂದಾಗ, ನಾನು ಚಿತ್ರಗುಪ್ತನ ಎದುರಿಗೆ ನಿಂತಿದ್ದೆ. ಅವನು ಲೆಕ್ಕದ ಪುಸ್ತಕವನ್ನು ತೆಗೆದು ಒಂದು ದೃಷ್ಟಿಯಿಂದ ನನ್ನನ್ನು ಇನ್ನೊಂದು ದೃಷ್ಟಿಯಿಂದ ನನ್ನ ಲೆಕ್ಕದ ಹಾಳೆಯ ಮೇಲೆ ನೋಡುತ್ತಿದ್ದ. ಪರಿಸ್ಥಿತಿ ನನಗೆ ಅನುಕೂಲಕರವಾಗಿಲ್ಲವೆಂದು ನನಗರ್ಥವಾಗುತ್ತಿತ್ತು.
“ನೀನೇನು?” ಅವನು ಗಂಭೀರ ಮತ್ತು ದರ್ಪದ ಧ್ವನಿಯಲ್ಲಿ ಕೇಳಿದ.
“ಮಾನ್ಯರೇ, ನಾನು ಹಳ್ಳಿಯ ಒಬ್ಬ ನಿವಾಸಿ. ನನ್ನ ಧರ್ಮ...”
“ನಾನು ನಿನಗೆ ನಿನ್ನ ಕುಲ-ಗೋತ್ರಗಳನ್ನು ಹೇಳಲು ಹೇಳಲಿಲ್ಲ. ಇಲ್ಲಿ ಎಲ್ಲಾ ಧರ್ಮಗಳೂ ಒಂದೇ. ನಮ್ಮೆದುರು ನೀನು ಒಂದು ಸಂಖ್ಯೆ ಮಾತ್ರ, ತಿಳೀತಾ!” ಅವನು ಸ್ವಲ್ಪ ಕಹಿಯಾಗಿ ಹೇಳಿದ. ನಾನು ತಲೆ ತಗ್ಗಿಸಿ ನನ್ನ ತಪ್ಪನ್ನು ಒಪ್ಪಿದೆ.
“ನನಗೆ ನಿಮ್ಮ ಪ್ರಶ್ನೆ ಅರ್ಥವಾಗಿರಲಿಲ್ಲ.”
“ಮಾನ್ಯರೇ, ನಾನು ಕಥೆಗಳನ್ನು ಬರೆಯುತ್ತೇನೆ, ನಾಟಕಗಳನ್ನು ಬರೆಯುತ್ತೇನೆ, ಪುಸ್ತಕಗಳನ್ನು...”
“ಸಾಕ್-ಸಾಕು, ನಮಗೆ ಅರ್ಥವಾಯ್ತು. ವಿಸ್ತಾರವಾಗಿ ಹೇಳುವ ಅಗತ್ಯವಿಲ್ಲ.”
“ಸರಿ, ಮುಂದಿನಿಂದ ಗಮನದಲ್ಲಿಟ್ಟುಕೊಳ್ಳುತ್ತೇನೆ.”
“ನೀನೇ ಯೋಚಿಸಿ ಬರೀತೀಯೋ ಅಥವಾ ಅಲ್ಲಿ-ಇಲ್ಲಿ ನೋಡಿ ನಕಲು ಮಾಡ್ತೀಯೋ?”
“ಇಲ್ಲ, ಸ್ವತಃ ಅನುಭವಿಸದೆ ವ್ಯಕ್ತಪಡಿಸುವುದು ಎಂಥ ಸೃಜನಾತ್ಮಕತೆಯಾಗುತ್ತದೆ?”
“ಹೂಂ...ಹೂಂ...ನೋಡಿದೆಯಾ ಅಹಂಕಾರವನ್ನು!” ಅವನು ಅರ್ಥಪೂರ್ಣವಾಗಿ ಹೇಳಿದ, ಅವನ ಬಲಗಡೆಯಲ್ಲಿ ನಿಂತ ಅಧಿಕಾರಿ ತನ್ನ ಲೆಕ್ಕದ ಪುಸ್ತಕದಲ್ಲಿ ಏನೋ ಬರೆದ.
“ಇದರಲ್ಲಿ ಅಹಂಕಾರವೇನು ಬಂತು, ನನಗೆ ಅರ್ಥವಾಗಲಿಲ್ಲ?” ನಾನು ಹೆದರುತ್ತಾ ಕೇಳಿದೆ.
“ಅಹಂಕಾರವೆಂದರೆ ಜಂಭ, ಗರ್ವ. ನಾನು ಬರೆಯುವುದನ್ನು ನನ್ನ ಯೋಚನೆಯಿಂದಲೇ ಬರೆಯುತ್ತೇನೆ ಎಂಬ ಅಹಂಕಾರ.”
“ಆದರೆ ಎಲ್ಲರೂ...” ನಾನು ನನ್ನ ಮಾತನ್ನು ಸ್ಪಷ್ಟ ಪಡಿಸಲು ಪ್ರಯತ್ನಿಸಿದೆ. ಆದರೆ ನನ್ನ ಬಲ-ಎಡದಲ್ಲಿ ಇಬ್ಬರು ಅಧಿಕಾರಿಗಳು ನಿಂತಿದ್ದಾರೆ, ಅವರು ನನ್ನ ಹೆಗಲುಗಳ ಮೇಲೆ ಕೈಯಿಟ್ಟರು, ಇದರಿಂದ ನಾನು ಸ್ಪಷ್ಟೀಕರಣ ಕೊಡಬೇಕಿಲ್ಲ ಎಂದು ನಾನು ಅರ್ಥ ಮಾಡಿಕೊಂಡೆ.
“ಸರಿ, ಈ ಚಿಂದಿಯನ್ನು ಧರಿಸಿ ಏಕೆ ಬಂದೆ? ನೀನೆಲ್ಲಿಗೆ ಹೋಗಬೇಕೆಂದು ನಿನಗೆ ಗೊತ್ತಿಲ್ಲವೇ?”
“ಇಲ್ಲ, ಖಂಡಿತ ಗೊತ್ತಿರಲಿಲ್ಲ. ಗೊತ್ತಿದ್ದರೂ, ನಾನು ಇದೇ ಬಟ್ಟೆಯನ್ನು ಧರಿಸಿ ಬರುತ್ತಿದ್ದೆ.”
“ಏಕೆ?”
“ಏಕೆಂದರೆ ಇದು ನನಗೆ ಅತ್ಯಂತ ಪ್ರಿಯವಾದ ಡ್ರೆಸ್. ಇದನು ಧರಿಸಿ ನಾನು ಅದೆಷ್ಟೋ ಔತಣ-ಕೂಟಗಳಿಗೆ ಮತ್ತು ಸಭೆಗಳಿಗೆ ಹೋಗಿದ್ದೇನೆ.”
“ನಿನಗೆ ಬಡತನ ಅನ್ನೋದು...”
ಅವನ ಬಲಗಡೆಯಿದ್ದ ಅಧಿಕಾರಿ ಮತ್ತೆ ತನ್ನ ಲೆಕ್ಕದ ಪುಸ್ತಕದಲ್ಲಿ ಏನೋ ಬರೆದು, ವಿಷಯದ ಆಳವನ್ನು ಬಿಚ್ಚಿಡುವ ಪ್ರಯತ್ನ ಮಾಡಿದ.
“ಮಾನ್ಯರೇ, ಈ ಕೆಲಸದಲ್ಲಿ ಅಷ್ಟು ಮುತುವರ್ಜಿಯಿಲ್ಲ. ಒಂದು ಕಥೆ, ನಾಟಕ ಅಥವಾ...”
“ಈ ದರಿದ್ರವನ್ನು ಹೊತ್ತು ತರುವ ಕೆಲಸವನ್ನು ಮಾಡುವಂಥ ಅದ್ಯಾವ ವಿವಶತೆಯಿತ್ತು?” ಅವನು ನನ್ನ ಮಾತನ್ನು ಮಧ್ಯದಲ್ಲಿಯೇ ತಡೆದ.
“ಮತ್ತೆ ನಾನೇನು ಚರಸ್ ವ್ಯಾಪಾರ ಮಾಡಬೇಕಿತ್ತೆ?” ನಾನು ಆವೇಶದಲ್ಲಿ ಹೇಳಿದೆ.. ಅವನು ಒಮ್ಮೆ ನನ್ನನ್ನು, ನಂತರ ಬಲಗಡೆ ನಿಂತ ಅಧಿಕಾರಿಯನ್ನು ನೋಡಿದ. ನಂತರ ಅವನು ಗಂಭೀರವಾಗಿ ಹೇಳಿದ. “

3

“ಹೂಂ...ಹೂಂ...ನೋಡಿದೆಯ ಕೆಟ್ಟ ಬಾಯಿಯನ್ನು!” ಅಧಿಕಾರಿ ಮತ್ತೆ ತನ್ನ ಲೆಕ್ಕದ ಪುಸ್ತಕದಲ್ಲಿ ಏನೋ ಬರೆದ. ನಾನು ಮತ್ತೆ ಮೂರ್ಖತನ ಮಾಡಿದೆನೆಂದು ತಿಳಿಯಿತು. ನನ್ನೊಳಗಿನ ಪೂರ್ಣ ನಮ್ರತೆಯನ್ನು ನನ್ನ ಧ್ವನಿಯಲ್ಲಿ ತರುತ್ತಾ ವಿಷಯವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದೆ-
“ಮನುಷ್ಯನ ಜೀವನ ಒಮ್ಮೆ ಮಾತ್ರ ಲಭಿಸುತ್ತದೆ. ಇದನ್ನು ಹಣಕ್ಕಾಗಿ ಕಳೆದುಕೊಳ್ಳುವುದು ಅಥವಾ ನಮ್ಮ ಅಂತರಾತ್ಮವನ್ನು ಅಡವಿಟ್ಟು ಮನುಷ್ಯನ ಜೀವನವನ್ನು ಮಲಿನಗೊಳಿಸಬಾರದು; ಇದಕ್ಕಿಂತ ಏನಾದರೂ ಒಳಿತನ್ನು ಮಾಡಬೇಕು.” ಅವನು ನನ್ನ ಮಾತು ಕೇಳಿ ಸ್ವಲ್ಪ ಹೊತ್ತು ಮೌನವಹಿಸಿ, ‘ಹುಚ್ಚುತನವಾಯ್ತಲ್ಲ’ ಎಂದು ತನಗೆ ತಾನೇ ಹೇಳಿಕೊಂಡ. ನಂತರ ತನ್ನ ಅಧಿಕಾರಿಯನ್ನು ನೋಡಿದ. ಕ್ಷಣಕಾಲ ಮೌನ ಆವರಿಸಿತು. ನಂತರ ಅಧಿಕಾರಿ ಎದ್ದು ನಿಂತು ಘೋಷಣೆ ಮಾಡುವಂತೆ ನನ್ನ ಅದೃಷ್ಟದ ಬಗ್ಗೆ ತೀರ್ಮಾನವನ್ನು ಓದಿದ-
“ಪಾಪಗಳ ಜಾಗ ಖಾಲಿಯಿದೆ. ಪುಣ್ಯಗಳ ಜಾಗ ಸಹ ಖಾಲಿಯಿದೆ. ಆದರೆ ಅಹಂಕಾರಿಯಾಗಿದ್ದು, ಬಡವ, ಬಾಯಿಹರಕ ಮತ್ತು ಹುಚ್ಚನಾಗಿದ್ದಾನೆ!”
ಹೀಗೆಂದು ಘೋಷಿಸಿ ಅವನು ಕೆಳಗೆ ಕೂತ. ನಂತರ ಮತ್ತೆ ಕ್ಷಣಕಾಲ ಮೌನ ಆವರಿಸಿತು. ಕಡೆಗೆ ಅವನೇ ಹೇಳಿದ-
“ಓಹ್! ಪಾಪ-ಕಾರ್ಯವನ್ನೂ ಮಾಡಿಲ್ಲ, ಪುಣ್ಯದ-ಕಾರ್ಯವನ್ನೂ ಮಾಡಿಲ್ಲ. ಆದರೆ ಅಹಂಕಾರಿ ಮತ್ತು ಬಡವ, ಬಾಯಿ-ಬಡುಕ ಮತ್ತು ಮರುಳ; ನಮಗೆ ಇವನ ಅಗತ್ಯವಿಲ್ಲ.”
ಅವನು ಹೀಗೆ ಹೇಳುತ್ತಲೇ, ನನ್ನನ್ನು ಕೆಳಗೆ ತಳ್ಳಲಾಯಿತು. ನಾನು ಮತ್ತೆ ಬಟ್ಟೆಗಳನ್ನು ಕೊಡವಿಕೊಳ್ಳುತ್ತಾ ಎದ್ದು ನಿಂತೆ. ಎದುರಿಗೆ ನನ್ನ ಆಪ್ತಮಿತ್ರ ನಿಂತಿರುವುದನ್ನು ನೋಡಿದೆ.
“ನೀನಿಲ್ಲಿ?” ಅವನು ಆಶ್ಚರ್ಯದಿಂದ ಕೇಳಿದ.
“ನಾನಲ್ಲಿ ಅವರ ಉಪಯೋಗಕ್ಕೂ ಬರಲಿಲ್ಲ, ಅಲ್ಲಿಂದ ನನ್ನನ್ನು ಮತ್ತೆ ಕೆಳಗೆ ತಳ್ಳಲಾಯಿತು.” ನಾನು ಸಂಕ್ಷೇಪದಲ್ಲಿ ಹೇಳಿದೆ.
“ಅದು ಸರಿ, ಆದರೆ ಇಲ್ಲೆಲ್ಲಿ?” ಅವನು ಮತ್ತೆ ಪ್ರಶ್ನಿಸಿದ.
“ನನ್ನ ಹಳ್ಳಿಯಲ್ಲಿದ್ದೇನೆ, ಇನ್ನೆಲ್ಲಿ?”
“ನೀನು ಹೀಗೇಕೆ ಮಾತಡ್ತಿದ್ದೀಯ? ಇವತ್ತು ನಿನ್ನ ಹತ್ತನೆಯ ದಿನ.”
“ಏನಾಯ್ತು?” ನಾನು ವಿಷಯವನ್ನು ಸಂಕ್ಷಿಪ್ತಗೊಳಿಸಲು ಪ್ರಯತ್ನಿಸಿದೆ, ಆದರೆ ಅವನು ನನಗೆ ವಿಷಯದ ಗಂಭೀರತೆಯನ್ನು ತಿಳಿಯಪಡಿಸಿದ-
“ನೀನು ಹುಚ್ಚನಲ್ಲ ತಾನೇ? ಇವತ್ತು ನಿನ್ನ ಹತ್ತನೆಯ ದಿನ ಅಂತ ಹೇಳಿಲ್ವ? ಇದೀಗ ತಾನೇ ನಾವು ನಿನ್ನ ಶೋಕ ಸಮಾರಂಭವನ್ನು ಆಚರಿಸಬೇಕೆಂದು ತೀರ್ಮಾನಿಸಿದ್ದೇವೆ. ನಾನು ಅಲ್ಲಿಂದಲೇ ಬರ್ತಿದ್ದೇನೆ. ನಿನಗೆ ನಂಬಿಕೆ ಬರದಿದ್ದರೆ, ಇಲ್ಲಿದೆ ನೋಡು ಕಚೇರಿಯ ಪ್ರತಿ. ಒಂದು ಕಾಪಿಯನ್ನು ಪ್ರೆಸ್ಗೆ ಕಳುಹಿಸಿದ್ದೇವೆ. ಇನ್ನೊಂದನ್ನು ಆಕಾಶವಾಣಿಗೆ ಕೊಟ್ಟಿದ್ದೇವೆ, ಮೂರನೆಯ ಕಾಪಿಯನ್ನು ದೂರದರ್ಶನದವರಿಗೆ ಕೊಟ್ಟಿದ್ದೇವೆ. ಈಗ ಗುಸು-ಗುಸು ಮಾತು ನಡೀತಿದೆ, ಅವರು ಪ್ರಕಟಿಸುತ್ತಾರೋ ಇಲ್ವೋ, ಗೊತ್ತಿಲ್ಲ.”
“ಹಾಗಾದ್ರೆ!...” ನಾನು ಆಶ್ಚರ್ಯ ವ್ಯಕ್ತಪಡಿಸಿದೆ.
“ನೋಡು!” ಅವನು ನನಗೆ ತಿಳಿಯ ಪಡಿಸಿದ, “ಇದರಿಂದ ನಮ್ಮ ಬಗ್ಗೆ ಜನ ಆಡಿಕೊಳ್ಳಲ್ವ? ಸಂಜೆಗೆ ಶೋಕ ಪ್ರಸ್ತಾವ ಪ್ರಕಟವಾದರೂ, ನಿನ್ನ ಮನೆಯವರು ನಿನ್ನ ಹತ್ತನೆಯ ದಿನವನ್ನು ಆಚರಿಸಿರುತ್ತಾರೆ. ರೇಡಿಯೋದಲ್ಲೂ ಪ್ರಸಾರವಾಗಬಹುದು. ಪಾಪ, ನಿನ್ನ ಮನೆಯವರು ಸಾಲ ಮಾಡಿ ನಿನ್ನ ಅಂತ್ಯಕ್ರಿಯೆಯನ್ನು ಚೆನ್ನಾಗಿ ಮಾಡಿದರು. ಅಲ್ಲದೆ ಸರ್ಕಾರ ಸಹ ನಿನ್ನ ವಾರಸುದಾರರಿಗೆ ಸ್ವಲ್ಪ ನಗದು ಹಣ ಮತ್ತು ಪರಿಹಾರ ಕೊಡುವ ಬಗ್ಗೆ ಘೋಷಣೆ ಮಾಡಿದೆ. ನೀನು ಒಳ್ಳೆ ಕೆಲಸ ಮಾಡಿದ್ದೆ.”
ಅವನ ಮಾತು ಕೇಳಿ ನಾನು ಒಪ್ಪಿದೆ. ಇಂಥದ್ದು ನಿತ್ಯ ಎಲ್ಲಿ ಲಭಿಸುತ್ತದೆ? ಅಲ್ಲದೆ, ಶೋಕಾಚರಣೆಯನ್ನೂ ಮಾಡುವ ಬಗ್ಗೆ ಪ್ರಸ್ತಾವವಾಗಿತ್ತು. ಇನ್ನಷ್ಟು ಆಗ್ರಹಿಸಲು ನನಗೆ ನಾಚಿಕೆಯಾಯಿತು. ನನಗ್ಯಾವ ಖಜಾನೆ ಸಿಗುವುದೆಂದೂ ಯೋಚಿಸಿದೆ! ನಾನು ಮಾತನ್ನು ಅಲ್ಲಗೆಳೆಯುತ್ತಾ ಹೇಳಿದೆ, “ನಾವು ಧಾಂಯ್-ಧಾಂಯ್ಗೆ ಸಂತೋಷಪಡೆಬೇಕೋ, ಶೋಕವನ್ನಾಚರಿಸಬೇಕೋ, ಸಮಾರಂಭ ಮಾಡಬೇಕೋ ಅಥವಾ ವಿರೋಧಿಸಬೇಕೋ ಎಂಬ ಬಗ್ಗೆ ಹಳ್ಳಿಯವರಿಗೆ ತಿಳಿದಿದೆಯೇ?”
“ನಿನ್ನಾಣೆ, ಖಂಡಿತ ಇಲ್ಲ! ನನಗೂ ಏನೂ ಹೊಳೆಯುತ್ತಿಲ್ಲ.”
ಹೀಗೆ ಹೇಳುವಾಗ ಅವನಿಗೆ ಒಮ್ಮೆಲೆ, ಸಾವು ಅವನ ಕಾಲ ಕೆಳಗಿದೆ ಎಂದು ಅನ್ನಿಸಿತು. ಅವನು ಹೊರಳಿ ಮರಳಿ ಹೋಗುವುದಕ್ಕೆ ಮೊದಲು, ನಾನು ಈ ಮೊದಲಿನಂತೆ ಮುಗುಳ್ನಗುತ್ತಾ ಹೇಳಿದೆ-

4

“ರಾಜ ಇಂದ್ರ ಮತ್ತು ತಕ್ಷಕನ ವಿಷಯವನ್ನು ಯಾರಿಗೂ ಹೇಳಬೇಡ.”
“ಏಕೆ?”
“ಏಕೆಂದರೆ ಅದನ್ನು ಹೇಳುವುದು ಸಾವನ್ನು ಕರೆಯಲು ಹೋಗುವಂತಾಗುವುದು.”
ಇದನ್ನು ಕೇಳಿ ಅವನು ಕ್ಷಣಕಾಲ ಯೋಚಿಸಿದ. ಕಣ್ಣುಗಳನ್ನು ಮುದುಡಿ, ಆಪಾದಮಸ್ತಕ ನೋಡುತ್ತಾ ಮಾತನಾಡದೆ ವೇಗವಾಗಿ ಮುಂದಕ್ಕೆ ಹೋದ. ನಾನು ಹಳ್ಳಿಯ ಹೊರಗೆ, ಸ್ವಚ್ಛಂದ ಬಿಸಿಲು ಇರುವ ಸ್ಥಳವನ್ನು ಹುಡುಕಲಾರಂಭಿಸಿದೆ. ಏಕೆಂದರೆ ನನಗೆ ಬಿಸಿಲು ಇಷ್ಟವಾಗುತ್ತದೆ, ಉಷ್ಣವೂ ಇಷ್ಟವಾಗುತ್ತದೆ.; ಈ ಎರಡು ಗುಣಗಳು ಬಿಸಿಲಿನಲ್ಲಿ ಮಾತ್ರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.