‘ನಾಲ್ಕು ಗಂಟೆಗೆ ಮರಣ ಇರಿಸಿಕೊಂಡಿದೆ’

‘ನಾಲ್ಕು ಗಂಟೆಗೆ ಮರಣ ಇರಿಸಿಕೊಂಡಿದೆ’

‘ನಾಲ್ಕು ಗಂಟೆಗೆ ಮರಣ ಇರಿಸಿಕೊಂಡಿದೆ’

ಅನ್ನುವುದು ಕೇರಿಯ ಅಂಚಿನಲ್ಲಿ ಮೊದಲು ನಿಧಾನವಾಗಿ ಕೇಳಿಸಿ ನಂತರ ದೊಡ್ಡದಾಗಿ, ಆನಂತರ ಮತ್ತೂ ಸಣ್ಣಗೆ ಕೇಳಿ ಬಂದು, ಕೊನೆಯಲ್ಲಿ ಕೇರಿಯ ಈ ಮೂಲೆಯಲ್ಲಿ ಕರಗಿಯೇ ಹೋಯಿತು. ಮರಣದ ಸುದ್ದಿ ತಿಳಿಸಲು ಬಂದಾತ ಕ್ರಿಸ್ತರು ವಾಸಿಸುವ ಮನೆಗಳೆದುರು ಕೂಗಿ ಹೇಳಿ ಮುಂದುವರೆದಿರಲು, ಕಿಟಕಿಯ ಬಳಿ ಕುಳಿತ ಈತ ತುಸು ದನಿ ಎತ್ತಿ ‘ಬಾಳಾ ಯಾರ ಮರಣವಂತೆ?’ ಎಂದು ಕೇಳಿ ಉತ್ತರಕ್ಕಾಗಿ ಕಾದ. ಉತ್ತರ ಬಾರದಿರಲು ತುಸು ತಡೆದು ಮತ್ತೆ ‘ಬಾಳಾ ಯಾರ ಮರಣವಂತೆ?’ ಎಂದು ಕೇಳಿದ. ಇವನ ದನಿ ಸ್ವಲ್ಪ ಎತ್ತರಕ್ಕಿತ್ತು. ಈ ಎತ್ತರದ ದನಿಯಿಂದಲೇ ಬಾಳಾ ಕೆರಳಿದ. ಬಾಳಾ ಇವನ ಮೊಮ್ಮಗ. ‘ಮರಣ ನಿನ್ನದಂತೂ ಅಲ್ಲ, ಸುಮ್ನೆ ಯಾಕೆ ತಲೆ ತಿಂತೀಯಾ?’ ಎಂದು ಗುಟುರು ಹಾಕಿದ.

ಬಾಳಾ ಹೀಗೆ ನುಡಿದಾಗ ಇವನಿಗೆ ಉಸಿರಾಡುವ ಗಾಳಿ ಗಂಟಲಲ್ಲಿ ಸಿಕ್ಕಿ ಬಿದ್ದಂತೆ ಆಯಿತು. ‘ಮರಣ ನನ್ನದಂತೂ ಅಲ್ಲ... ಆದರೂ ಯಾರದ್ದು ಅನ್ನುವುದನ್ನ ಕೇಳುವ ಅಧಿಕಾರ ನನಗಿಲ್ಲವೆ’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ ಈತ. ಸಂಕಟವೂ ಆಯಿತು. ಆ ಸತ್ತವನೇ ಅದೃಷ್ಟವಂತ. ಯಾವುದೇ ಹಂಗಿಲ್ಲದೆ ಸತ್ತ. ಆದರೆ ತಾನು? ಬದುಕಿದ್ದೇನೆ. ಇನ್ನೂ ಬದುಕಿದ್ದೇನೆ.

ಮನೆಯಲ್ಲಿದ್ದ ಬಾಳಾ ಎಂಬ ವ್ಯಕ್ತಿಗೆ ತಾನು ಹಾಗೆ ನುಡಿಯಬಾರದಿತ್ತು ಅನಿಸಿತೇನೋ, ಒಳಗೆ ಬಂದ ಆತ ದನಿ ಇಳಿಸಿ ನುಡಿದ.

‘ಕೃಷ್ಣಾ ಟಾಕೀಸಿನಲ್ಲಿ ಓರ್ವ ಗೇಟ್ಕೀಪರ್ ಇರಲಿಲ್ಲವೆ, ಬಸ್ತಿಯಾಂವಂ ಅಂತ, ಅವನು ನಿನ್ನೆ ರಾತ್ರಿ ವಿಷ ಕುಡಿದು ಸತ್ತ... ಅವನ ಮರಣ ನಾಲ್ಕು ಗಂಟೆಗೆ.’

‘ಛೆ. ಬಸ್ತಿಯಾಂವಂ ನನಗೆ ಗೊತ್ತು. ಕೈಲ್ಲಿ ಕಾಸಿಲ್ಲದಾಗ ಎಷ್ಟೋ ಸಾರಿ ಪುಗಸಟ್ಟೆ ಸಿನಿಮಾ ನೋಡಲು ಬಿಟ್ಟಿದ್ದ. ಅವನಿಗೆ ಏನಾಯ್ತು ಸಾಯುವಂತಹದ್ದು?’

ಮುದುಕ ಗೊಣಗತೊಡಗಿದಾಗ ಅವನ ಮೊಮ್ಮಗನಿಗೆ ಇನ್ನೂ ಸಿಟ್ಟುಬಂದಿತು.

‘ಸತ್ತದ್ದು ಯಾರು ಅಂತ ಹೇಳಿದೆ. ಇನ್ನು ಯಾಕೆ ಸತ್ತ ಅಂತ ಕೇಳಿಕೊಂಡು ಬರಬೇಕು. ಹೋಗಿ ಬರತೇನೆ’ ಎಂದು ನಿಜಕ್ಕೂ ಮನೆಯಿಂದ ಹೊರಟ. ಅವನೇನು ನಿಜ ತಿಳಿದುಬರಲು ಹೊರಟನೋ ಇಲ್ಲ ತಮಾಷೆ ಮಾಡಲು ಹೊರಟನೋ. ಅಂತೂ ಇವನಿಗೆ ಕಸಿವಿಸಿ ಆಯಿತು.

ಬಸ್ತಿಯಾಂವಂ ತನ್ನ ಸ್ನೇಹಿತ ಗಾಬ್ರಿಯೆಲ್ಲನ ಮಗ. ಬಸ್ತಿಯಾಂವನಿಗೆ ಆ ಟಾಕೀಸಿನಲ್ಲಿ ಕೆಲಸ ಕೊಡಿಸಿದವನೇ ತಾನು. ಆ ಟಾಕೀಸಿನ ಯಾವುದೇ ಕೆಲಸ ಇರಲಿ ಅದರ ಸಾಹುಕಾರ ತನಗೆ ಹೇಳಿ ಕಳುಹಿಸುತ್ತಿದ್ದ. ಕಲ್ಲು ಕಟ್ಟುವುದಿರಲಿ, ಗಾರೆ ಕೆಲಸ ಇರಲಿ, ಗಿಲಾಯಿ ಮಾಡುವುದಿರಲಿ ಅವನಿಂದ ಕರೆ ಬಂತು ಎಂದು ಅರ್ಥ. ‘ಬಸ್ತು, ಅದೊಂದು ಕೆಲಸ ಬಾಕಿ ಇದೆ ಮಾರಾಯ, ಬಂದು ಮಾಡಿ ಕೊಡು’ ಅಂದರೆ ತಾನು ಅಲ್ಲಿ ಹಾಜರ್. ಅಂತಹಾ ಸಲಿಗೆ ತನ್ನದು ಅವನ ಹತ್ತಿರ. ಬಹಳ ವರ್ಷಗಳ ಪರಿಚಯ ತಮ್ಮದು, ಕೈಲಿ ಆಗದಿದ್ದರೂ ಹೋಗಿ ಆ ಕೆಲಸ ಮಾಡಿಕೊಟ್ಟು ಬರುತ್ತಿದ್ದೆ. ಹೀಗಾಗಿ ಒಂದು ದಿನ ಗಾಬ್ರಿಯೆಲ್ಲ ತನ್ನ ಬಳಿ ಗೋಳಾಡಿದ್ದ.

‘ನಮ್ಮ ಹುಡುಗನಿಗೆ ಒಂದು ಕೆಲಸ ಇದೆಯೋ ನೋಡು ಮಾರಾಯ... ಸುಮ್ನೆ ಅದು ಇದು ಮಾಡಿಕೊಂಡಿದಾನೆ, ಒಂದು ನೆಲೆ ಇಲ್ಲ ಸ್ಥಿರ ಇಲ್ಲ...’

‘ನಮ್ಮ ಸಾಹುಕಾರರ ಹತ್ತಿರ ಹೇಳಲಾ?’

ಸಾಹುಕಾರ ಅಂದರೆ ಸಿನಿಮಾ ಟಾಕೀಸಿನ ಒಡೆಯ.

‘ಹೇಳು...’

ಒಂದು ದಿನ ಹೇಳಿದ. ‘ಸಾಹುಕ್ಕಾರ್ರೆ, ನಮ್ಮ ಪೈಕಿ ಓರ್ವ ಹುಡುಗ ಇದಾನೆ. ಕೆಲಸ ಇಲ್ಲ. ಅವನಿಗೊಂದು ಕೆಲಸ ಕೊಟ್ಟರೆ ಅವನ ಜೀವನಕ್ಕೊಂದು ದಾರಿ ಆಗುತ್ತಿತ್ತು.’

‘ಇಡೀ ದಿನ ಕೆಲಸ ಮಾಡತಾನಾ?’

‘ಹುಡುಗ ಮಾಡತಾನೆ ಬಿಡಿ.’

‘ನಾಳೆಯಿಂದ ಬರಲಿಕ್ಕೆ ಹೇಳು.’

ಬಸ್ತಿಯಾಂವ ಹೋದ ಟಾಕೀಸಿನ ಮಾಲೀಕನ ಬಳಿ.

‘ಬೆಳಿಗ್ಗೆ ಎಂಟು ಗಂಟೆಗೆ ಬಾ. ರಾತ್ರಿ ಸೆಕೆಂಡ್ ಶೋ ಮುಗಿದು ಟಾಕೀಸ ಬಾಗಿಲು ಹಾಕೋ ತನಕ ಕೆಲಸ.’ ಸಾಹುಕಾರ ಸಹಜವಾಗಿ ಎಂಬಂತೆ ಹೇಳಿದ.

‘ಆಯ್ತು ಸಾಹುಕಾರರೆ.’

‘ಎಂಟು ಗಂಟೆಗೆ ಊರಿನಲ್ಲಿ ಎಲ್ಲ ಕಡೆ ಗೋಡೆಗಳಿಗೆ ಭಿತ್ತಿಪತ್ರ ಅಂಟಿಸುವುದು. ಅವುಗಳ ಬೆನ್ನಿಗೆ ಅಂಟು ಬಳಿದು ಗೋಡೆಗಳಿಗೆ ಹಚ್ಚುವುದು. ಹುಡುಗರ ಕೈಗೆ, ದನಕರುಗಳ ಬಾಯಿಗೆ ಸಿಗದ ಹಾಗೆ ಅಂಟಿಸಬೇಕು’ ಅಂದ ಸಾಹುಕಾರ.

ಈತ ‘ಹೂಂ’ ಅಂದ, ಅದರಂತೆ ಮಾಡಿದ. ನಂತರ ಒಂಟಿ ಎತ್ತಿನಗಾಡಿ ಹೂಡಿ, ಅದರಲ್ಲಿ ಕುಳಿತು ಸೈಡ್ ಡ್ರಮ್ ಬಾರಿಸುತ್ತ ಊರಿನಲ್ಲಿ ಎರಡು ರೌಂಡು ಸುತ್ತಾಡಿ ಬರುವುದು. ಈ ಗಾಡಿಯ ಎರಡೂ ಕಡೆ ನಡೆಯುತ್ತಿರುವ ಚಲನಚಿತ್ರಗಳ ಭಿತ್ತಿಪತ್ರ. ಎದುರು ಒಂದು ಚಿತ್ರ. ಹಿಂದೆ ಬರಬಹುದಾದ ಚಿತ್ರದ ವಾಲ್ಪೋಸ್ಟರ್. ಒಳಗೆ ಹುಲ್ಲು ಹಾಸಿ ಒಂದು ಗೋಣಿಚೀಲ ಹಾಕಿ ಈತನಿಗೆ ಕುಳಿತುಕೊಳ್ಳಲು ಒಂದು ಜಾಗ. ಹಳೆಯದಾದ ಒಂದು ಸೈಡ್ ಡ್ರಮ್. ಅದರ ಮೇಲೆ ಎರಡು ಕೋಲು ಬಡಿದು ಡರ್ರಡರ... ಡರ್ರಡರ... ಡರ್ರಡರ. ಒಂದೊಂದು ಬೀದಿಗೆ ಹೋದ ಕೂಡಲೇ ಕಾಯಂ ಆದ ಕೆಲ ಹುಡುಗರು. ಈ ಗಾಡಿಯ ಹಿಂದೆ. ಏನಣ್ಣೋ ಹೊಸ ಸಿಲೀಮಾ ಬರಾಕಿಲ್ವಾ... ಅದೇ ಪೋಷ್ಟರು ಹಚ್ಚಿಕೊಂಡಿದೀಯ... ಇತ್ಯಾದಿ ಮಾತು. ಇದರ ಜೊತೆಗೆ ಅಲ್ಲಿ ಇಲ್ಲಿ ಗಾಡಿ ನಿಲ್ಲಿಸಿ ಒಂಟೆತ್ತಿಗೆ ರೆಸ್ಟು.

ಹತ್ತೂವರೆ ಆಗಲಿಕ್ಕಿಲ್ಲ ಮಾರ್ನಿಂಗ್ ಶೋ. ಬಾಗಿಲಲ್ಲಿ ನಿಲ್ಲು. ಟಿಕೇಟು ಹರಿದುಕೊಡು. ಬಾಗಿಲಲ್ಲಿ ನಿಂತಾಗ ಅಲ್ಲೊಂದಿಷ್ಟು ತರಲೆ. ಹದಿನೈದನೆ ವಯಸ್ಸಿನ ಮಗನನ್ನ ಕಂಕುಳಲ್ಲಿ ಎತ್ತಿಕೊಂಡು ಬರುವ ಬೂಬಮ್ಮನ ಜೊತೆಯಲ್ಲಿ ಜಗಳ.

‘ನೀನು ಕಂಕುಳಲ್ಲಿ ಎತ್ತಿಕೊಂಡಿರುವ ಕೋಣನಿಗೆ ಹದಿನೆಂಟು ಆಗಿದೆ, ನೀನು ಅರ್ಧ ಟಿಕೇಟ್ ಕೊಂಡಿದ್ದೀಯ’ ಎಂದು ಈತ. ‘ಇಲ್ಲ ಅವನಿಗೆ ಮೊನ್ನೆ ಹನ್ನೆರಡು ತುಂಬಿದೆ’ ಎಂದು ಅವಳು. ಕೊನೆಗೆ ಮ್ಯಾನೇಜರ್ ಬಂದು ‘ಬಿಡಯ್ಯ ಅತ್ಲಾಗೆ’ ಎಂದಾಗ ಸೋತ ಮುಖ ಬಸ್ತಿಯಾಂವನದು, ಗೆದ್ದ ನಗೆ ಅವಳದ್ದು. ಇದು ಸಾಲದು ಎಂದು ದೊಡ್ಡ ದೊಡ್ಡ ಹುಡುಗಿಯರೆಲ್ಲ ಲಂಗ ಹಾಕಿಕೊಂಡು ಬಂದು ತಮ್ಮ ವಯಸ್ಸು ಮರೆಮಾಚುವುದು. ಇದು ಸಾಲದೆಂದು ಇದನ್ನ ಪತ್ತೆಹಚ್ಚಿದ ಇನ್ನಾರೋ ಜಗಳ ಮಾಡುವುದು. ಮೊದಮೊದಲು ಇದೆಲ್ಲ ತಲೆನೋವಿನ ವಿಷಯವಾಯಿತು ಈ ಟಿಕೇಟ್ ಹರಿಯುವವನಿಗೆ. ಕ್ರಮೇಣ ಆತ ಇದರಲ್ಲಿ ಪಳಗಿದ. ಯಾರೊಡನೆಯೂ ಜಗಳ ಆಡಬಲ್ಲ ಛಾತಿ ಅವನಿಗೆ ಬಂದಿತು.

ಬೆಳಗಿನ ಪ್ರದರ್ಶನ, ಮ್ಯಾಟನಿ, ಸಂಜೆ ಆರು, ರಾತ್ರಿ ಒಂಬತ್ತರ ಪ್ರದರ್ಶನ, ಇದೂ ಮುಗಿದ ಮೇಲೆ ಕೆಲ ದಿನ ಪಿಚ್ಚರ್ ಬಾಕ್ಸನ್ನ ರೈಲಿಗೆ, ಇಲ್ಲ ಬಸ್ಸಿಗೆ ಹಾಕುವುದು ನಂತರ ಮನೆ, ಇದು ಬಸ್ತಿಯಾಂವನ ದಿನನಿತ್ಯದ ಕೆಲಸ.

ಒಂದು ದಿನ ಬಸ್ತಿಯಾಂವ ಒಂಟಿ ಸಿಕ್ಕಾಗ ಈತ ಕೇಳಿದ, ‘ಕೆಲಸ ಹೇಗೋ?’

‘ಚೆನ್ನಾಗಿದೆ ಅಂಕಲ್.’

‘ಚೆನ್ನಾಗಿ ಮಾಡಿಕೊಂಡು ಹೋಗು’ ಎಂದ.

‘ಆಗಾಗ್ಗೆ ಸಿನಿಮಾಕ್ಕೆ ಬನ್ನಿ ಅಂಕಲ್.’

‘ಅಷ್ಟು ಹಣ ನಾನು ಎಲ್ಲಿಂದ ತರಲಿ ಮಾರಾಯ?’

‘ನಾನಿದೀನಲ್ಲ ಅಂಕಲ್’ ಎಂದು ನಕ್ಕ.

ಇವನೂ ಆಗಾಗ್ಗೆ ಹೋಗತೊಡಗಿದ. ಉಚಿತ ಪ್ರವೇಶ. ಸುಮಾರು ಚಿತ್ರಗಳನ್ನು ನೋಡಿದ. ನಾಗಿನ್, ಬೈಜು ಬಾವರಾ, ಉಡನ್ ಕಠೋಲ, ಶಾಧಿ, ಅನಾರ್ಕಲಿ, ಮಯೂರ, ಇತ್ಯಾದಿ.

ಚಿತ್ರ ಮುಗಿಸಿ ಬರುವಾಗ ಹೊರಗೆ ನಿಂತ ಬಸ್ತಿಯಾಂವಗೆ ‘ಬರತೀನಿ ಮಗ’ ಎಂದು ಹೇಳಲು ಈತ ಮರೆತವನಲ್ಲ. ಆ ಹುಡುಗ ಕೂಡ ಅಷ್ಟೆ, ಯಾವತ್ತೂ ಇವನಿಗೆ ವಿಧೇಯನಾಗಿದ್ದ. ಅಂತಹ ಹುಡುಗ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡನೆ?

ಅವನು ಏಕೆ ಆತ್ಮಹತ್ಯೆ ಮಾಡಿಕೊಂಡ ಅನ್ನುವ ಪ್ರಶ್ನೆ ಇವನನ್ನ ಕಾಡತೊಡಗಿತು. ಕೈಲಾಗದಿದ್ದರೂ ನಾಲ್ಕು ಗಂಟೆಗೆ ಈತ ಇಗರ್ಜಿಗೆ ಹೋದ. ಬಸ್ತಿಯಾಂವನ ಕೇರಿಯವರೆಲ್ಲ ಅಲ್ಲಿದ್ದರು. ಅವನ ತಂದೆ ತಾಯಿ ಬಳಗ ಕೂಡ. ಇಗರ್ಜಿಯ ಒಳಗೆ ದೇವರಪೀಠದ ಮುಂದೆ ಶವಪೆಟ್ಟಿಗೆ. ಹುಡುಗ ಸಹಜವಾಗಿ ಮಲಗಿದಂತೆ ಕಾಣುತ್ತಿದ್ದ. ಇಗರ್ಜಿ ಬಾಗಿಲಲ್ಲಿ ಇತರರೊಡನೆ ನಿಂತು ಈತ ಏನು ಎತ್ತ ಎಂದು ಕೇಳಿದ.

‘ಇಲ್ಲಿ ಅವನು ಸತ್ತ, ಅಲ್ಲಿ ಅವಳು ಸತ್ತಳು.’

ಎಂದು ತನ್ನ ಸಂಗಡವೇ ನಿವೃತ್ತನಾದ ದಫೇದಾರ ರುಜಾರಿ ನುಡಿದ. ರುಜಾರಿಯನ್ನ ಬದಿಗೆ ಕರೆದೊಯ್ದು ಈತ ಕೇಳಿದ. ‘ಯಾರು ಮಾರಾಯ ಅದು?’

‘ಮತ್ತೆ ಯಾರು, ಟಾಕೀಸಿನ ಮಾಲಿಕನ ಮಗಳು.’

‘ಹೌದಾ?’

‘ಟಾಕೀಸಿನ ಹಿಂದೆ ಮಾಲಿಕನ ಮನೆ... ಇವನು ಸದಾ ಅಲ್ಲೇ ಬಿದ್ದಿರುವ... ನಿತ್ಯ ಮಾತು ಭೇಟಿ. ಗುಸುಗುಸು
ಪಿಸಪಿಸ. ಮತ್ತೆ ಏನಾಗುತ್ತೆ... ಪರದೆ ಮೇಲೆ ಸಿನಿಮಾ... ಪರದೆ ಹಿಂದೆ ನಾಟಕ... ಟಾಕೀಸ್ ಮಾಲಿಕನ ಗಮನಕ್ಕೂ ಬಂತು... ಅವನು ಬಿಗಿ ಮಾಡಿದ... ಇಬ್ರೂ ವಿಷ ಕುಡುದ್ರು... ಸಿನಿಮಾ ಕ್ಲೋಸ್.’

ರುಜಾರಿ ಗಂಟೆ ಗೋಪುರದ ಕೆಳಗೆ ನಿಂತು ಕಣ್ಣು ಮಿಟುಕಿಸಿ ಮತ್ತೂ ನುಡಿದ, ‘ನೀನೇ ಅಲ್ವಾ, ಆ ಹುಡುಗನ್ನ ಅಲ್ಲಿ ಕೆಲಸಕ್ಕೆ ಸೇರಿಸಿದ್ದು...’

ಗಂಟೆ ನಾಲಿಗೆ–ತಲೆಯ ಮೇಲೆ ಬಿದ್ದಂತೆ ಆಯಿತು. ಈತ ಹುಂ ಎಂದು ತಲೆಯಾಡಿಸಿ ಇಗರ್ಜಿ ಒಳ ಹೊಕ್ಕ. ಪಾದರಿಗಳು ಪೂಜೆಗೆಂದು ಪೀಠ ಏರಿದ್ದರು. ಪೂಜೆಯ ಉದ್ದಕ್ಕೂ ಈತ ರುಜಾರಿ ಹೇಳಿದ ಮಾತಿಗೆ
ಮಿಡುಕಾಡುತ್ತಲೇ ಇದ್ದ.

ಆ ಹುಡುಗನ್ನ ಕೆಲಸಕ್ಕೆ ಸೇರಿಸಿದ್ದು ತಾನು, ಹೌದು. ಆದರೆ ಟಾಕೀಸ್ ಮಾಲಿಕನ ಮಗಳನ್ನ ಪ್ರೀತಿಸು ಅಂತ
ಹೇಳಿದವನು ತಾನೇ? ಇವನಿಗೆ ಗಂಟು ಬೀಳು ಎಂದು ಆ ಹುಡುಗಿಗೆ ಹೇಳಿದವನು ತಾನೇ? ಇವರಿಬ್ಬರ ಜಾತಿ
ಬೇರೆ ಬೇರೆ, ಇವರ ಮದುವೆಗೆ ಅನುಮತಿ ಕೊಡದೆ ಅಡ್ಡಿ ಮಾಡು ಎಂದು ಟಾಕೀಸ್ ಮಾಲಿಕನಿಗೆ ಹೇಳಿದವನು
ತಾನೇ?. ಪೂಜೆಯುದ್ದಕ್ಕೂ ಇವನು ಯೋಚಿಸಿದ. ಕೊನೆಗೆ ಪೂಜೆ ಮುಗಿದ ಮೇಲೆ ಶವದ ಹಿಂದೆಯೇ ಸಿಮಿತ್ರಿಯವರೆಗೆ ಹೋಗಿ ಶವವನ್ನ ಮಣ್ಣು ಮಾಡಿದ ಮೇಲೆ ಒಂದು ಹಿಡಿ ಮಣ್ಣು ಹಾಕಿ ಗಾಬ್ರಿಯೆಲ್ಲನ ಕೈ ಹಿಡಿದು ಅವನಿಗೆ ಸಾಂತ್ವನ ಹೇಳಿದ.

ಅತ್ತು ಅತ್ತು ಹಣ್ಣಾಗಿದ್ದ ಗಾಬ್ರಿಯೆಲ್ಲ, ‘ನಮ್ಮ ಮನೆಗೆ ಒಂದು ಆಧಾರ ಆಗಿದ್ದ ಮಗ... ಹೊರಟುಹೋದ... ಅವನನ್ನ ನೀನು ಹೇಳಿ ಈ ಕೆಲಸಕ್ಕೆ ಕಳಿಸಬಾರದಿತ್ತು ಅಂತ ಈಗ ನನಗೆ ಅನ್ನಿಸುತ್ತಿದೆ’ ಎಂದು ಬಿಕ್ಕಿದ. ಇವನಿಗೆ ಏನು ಮಾತನಾಡಬೇಕು ಎಂಬುದು ತೋಚದೆ ಅವನ ಕೈ ಹಿಡಿದು ಹಿಸುಕಿ ಮನೆಯತ್ತ ತಿರುಗಿದ. ರುಜಾರಿಯ ಮಾತಿನ ಜೊತೆ ಈ ಮಾತೂ ಸೇರಿಕೊಂಡಿತು.

ಮನೆಗೆ ಬಂದಾಗ ಮಗ ವೆರಾಂಡದಲ್ಲಿ ಕುಳಿತಿದ್ದವ, ‘ಆಯ್ತ ಎಲ್ಲ?’ ಎಂದು ಕೇಳಿದ.

‘ಹೋಗಬೇಕಲ್ಲ... ಸತ್ತವರಿಗೆ ಮಣ್ಣಿಗೆ ತಲುಪಿಸಬೇಕಾದ್ದು ನಮ್ಮ ಧರ್ಮ ಅಲ್ವಾ?’ ಎಂದು ಕೇಳಿದ.

‘ಹೌದು, ಎಲ್ಲೋ ಒಂದು ಕಡೆ ಕೆಲಸ ಮಾಡತಿದ್ದ ಹುಡುಗನ್ನ ಒಯ್ದು ಅಲ್ಲಿ ಸೇರಿಸಿ ಈಗ ಧರ್ಮ–ಕರ್ಮ ಅನ್ನೋದು...’

ಮಗ ಮುಖದ ಮೇಲೆ ಹೊಡೆದಂತೆ ನುಡಿದ.

ಇವನು ಕೈಕಾಲು ಮುಖ ತೊಳೆದು ಒಳಬಂದು ದೇವರ ಅಲ್ತಾರಿನ ಮುಂದೆ ಹೋಗಿ ಮೊಣಕಾಲೂರಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.