ಯಾಕಮ್ಮಾ..‘ಪ್ರತೀ ಸಾರಿ ಡಬ್ಬಿಯಿಂದ ಚಿಲ್ಲರೆ ತೆಗೆದು ಎಣಿಸಿ ಆದ ಮೇಲೆ, ಮತ್ತೆ ಅದೇ ಒಂದು ರೂಪಾಯಿಯ ಬಿಲ್ಲೆಯನ್ನು ಹಾಗೆಯೇ ಡಬ್ಬಿಯಲ್ಲಿ ಎತ್ತಿ ಇಡುತ್ತಿಯಲ್ಲ? ಅದೇ ಯಾಕಾಗಬೇಕು? ಬೇರೆ ನಾಣ್ಯ ಆಗುವುದಿಲ್ಲವೇ? ಹೀಗೆ ಮಾಡಿದರೆ ಸ್ವಲ್ಪ ದಿನ ಕಳೆದರೆ ಈ ನಾಣ್ಯ ಉಪಯೋಗಕ್ಕೆ ಬಾರದೆ ಸವಕಲಾಗಿ ಬಿಡುತ್ತದೆ ನೋಡು!’ ಮಗಳು ಪಲ್ಲವಿ ಕೇಳಿದ್ದಳು.

ಮಗಳಿಗೆ ಏನಾದರೂ ಬೇಕಿದ್ದರೆ, ಪ್ರತೀ ಸಾರಿ ಗಂಡನನ್ನು ಕೇಳುವುದು ಅವಳಿಗೆ ಆಗು ಬಾರದ ಕೆಲಸ. ಅದಕ್ಕೆ ಆಗೊಮ್ಮೆ ಈಗೊಮ್ಮೆ ಹಾಕಿಟ್ಟ ಚಿಲ್ಲರೆ ತುಂಬಿದ ಡಬ್ಬಿಯನ್ನು ತಲೆಕೆಳಗು ಮಾಡಿದರೆ ಏನಿಲ್ಲ ಅಂದರೆ ಸಾವಿರಕ್ಕಿಂತಲೂ ಹೆಚ್ಚು ನಾಣ್ಯಗಳು ಇರುತ್ತಿದ್ದವು. ಅದನ್ನು ಚಕ್ರಪಾಣಿಯವರ ಅಂಗಡಿಗೆ ಕೊಟ್ಟರೆ ಅಷ್ಟೇ ಮೊತ್ತದ ಗರಿಗರಿ ನೋಟು ಸಿಗುತ್ತದೆ. ಕೆಲವೊಮ್ಮೆ ಮಗಳ ಹಠಾತ್ ಕೋರಿಕೆಯನ್ನು ಈಡೇರಿಸಲು ಡಬ್ಬಿಯಲ್ಲಿರುವ ಈ ಚಿಲ್ಲರೆ ಹಣ ಆಪದ್ಬಾಂಧವನಂತೆ ನೆರವಾಗುತ್ತದೆ. ಆದರೆ ಪ್ರತೀ ಸಾರಿ ಅದರಿಂದ ಚಿಲ್ಲರೆ ಖಾಲಿ ಮಾಡುವಾಗಲೂ ನೇಲ್ ಪಾಲಿಶ್‌ನಲ್ಲಿ ಕೆಂಪು ಗುರುತು ಹಾಕಿಟ್ಟ ಒಂದು ರೂಪಾಯಿಯನ್ನು ಹಾಗೆ ಮತ್ತೆ ಡಬ್ಬಿಯಲ್ಲಿ ಹಾಕಿಬಿಡುತ್ತಾಳೆ. ಮಗಳು ಕೇಳಿದ್ದಕ್ಕೆ ಅದು ಪೊಲ್ಸ್ ಇದ್ದ ಹಾಗೆ, ಬರಿದಾದಷ್ಟು ಮತ್ತೆ ತುಂಬಿಕೊಳ್ಳುತ್ತದೆ ಎಂದು ಹೇಳಿ ನಕ್ಕು ಸುಮ್ಮನಾಗಿದ್ದಳು. ಆದರೆ ಸುಮಾ ಚಿಲ್ಲರೆ, ಡಬ್ಬಿಗೆ ಹಾಕುವಾಗ ಆ ಒಂದು ರೂಪಾಯಿಗೆ ತಾಕಿ ಝಣ್ ಅಂತ ಸದ್ದೆಬ್ಬಿಸುತ್ತದೆ. ಆ ಸದ್ದು ಅವಳನ್ನು ಆ ಊರಿನ ಅನೇಕ ಅನೂಹ್ಯ ಸಂಗತಿಗಳತ್ತ ಕೊಂಡೊಯ್ಯುತ್ತದೆ. ಅಲ್ಲೇ ಅದೆಷ್ಟು ಕಥೆಗಳು ಹೇಳಿದಷ್ಟು ಮುಗಿಯದಂತೆ ಸದ್ದು ಮಾಡುತ್ತದೆ. ಅದನ್ನು ಹೇಳಿ ಮುಗಿಸುವುದಕ್ಕಿಂತ ಮನಸ್ಸಿನೊಳಗೆ ಮತ್ತಷ್ಟು ತುಂಬಿಕೊಳ್ಳುವುದೇ ಅವಳಿಗೆ ಹೆಚ್ಚು ಪ್ರಿಯವಾದ ಸಂಗತಿಯಂತೆ ಗೋಚರಿಸುತ್ತದೆ. ಮೊಗೆದಷ್ಟೂ ಮುಗಿಯದ ನೆನಪುಗಳನ್ನು ಹೇಳಿ ಬರಿದಾಗಿಸುವುದು ಅವಳಿಗೆ ಆಗಿ ಬಾರದ ಸಂಗತಿಗಷ್ಟೇ. ಆ ಕಾರಣಕ್ಕಾಗಿಯೇ ಮಗಳು ಪ್ರತೀಬಾರಿ ಕೇಳಿದಾಗಲೂ ಸಮರ್ಪಕ ಉತ್ತರ ಕೊಡದೆ ನಾಲ್ಕೂರಿನ ಬೈಲು ಹೊಳೆಯ ದಂಡೆಯ ಮೇಲೆ ಪುಟ್ಟ ಹುಡುಗಿಯಂತೆ ಪ್ರಾಕಿನ ನೆರಿಗೆ ಚಿಮ್ಮಿಸುತ್ತಾ ಕುಣಿದಂತೆ ನಡೆಯುತ್ತಾ ಸಾಗುತ್ತಾಳೆ.

ಹೊಳೆ ಕರೆಯ ಆ ಮನೆಯಲ್ಲಿ ಅಂದಿನ ಬೆಳಗು ಎಂದಿನಂತೆ ಇರಲಿಲ್ಲ ಅಂತ ಚುಮ್ಮಿಗೆ ಆ ಮನೆಗೆ ಕೂಸಿಗೆ ಹಾಲು ತರಲು ಹೋದಾಗಲೇ ಗೊತ್ತಾದದ್ದು. ಕುಪ್ಪಿ ಹಿಡಿದುಕೊಂಡು ಹಾಗೆ ತುಂಬಾ ಹೊತ್ತು ನಿಂತ ಬಳಿಕ ಚೇಚಿ ಅನ್ಯಮನಸ್ಕಳಂತೆ ಕುಪ್ಪಿಗೆ ಹಾಲು ತುಂಬಿಸಿ ಕೊಟ್ಟಿದ್ದಳು. ಅತ್ತು ಅತ್ತು ಕರೆದಿದ್ದಕ್ಕೆ ಸಾಕ್ಷಿಯಾಗಿ ಅವಳ ಕಣ್ಣುಗಳು ಕೆಂಪಾಗಿ ಬಾತುಕೊಂಡಿದ್ದವು. ಹಾಲು ಕುಪ್ಪಿಯನ್ನು ತೆಗೆದುಕೊಂಡು ಚಪ್ಪೆ ಮೋರೆ ಹಾಕಿಕೊಂಡು ಚುಮ್ಮಿ ಹಾಗೇ ವಾಪಸ್ಸು ಬಂದಿದ್ದಳು. ಒಂದು ದಿನವೂ ಅವಳಿಗೆ ಹಾಲು ಬೆರೆಸಿದ ಕಾಫಿ ಕೊಟ್ಟು ಕಳಿಸದ ದಿನವೇ ಇರಲಿಕ್ಕಿಲ್ಲ ಅಲ್ಲಿ. ಅಸಲಿಗೆ ಚುಮ್ಮಿ ಹಾಲು ತರಲು ಹೋಗಲು ಒಪ್ಪಿಕೊಂಡದ್ದಕ್ಕೆ ಮುಖ್ಯ ಕಾರಣವೇ ಒಂದು ಲೋಟ ಹಾಲು ಬೆರೆಸಿದ ಬೆಲ್ಲದ ಕಾಫಿಗಾಗಿಯಷ್ಟೇ.

ಚುಮ್ಮಿಯ ಹೆಸರು ಸುಮಾ. ಅವಳು ಶಾಲೆ ಕಲಿಯಲೆಂದು ಅಜ್ಜಿಯ ಮನೆಗೆ ಬಂದವಳು. ಈಗ 5ನೇ ತರಗತಿ. ಅವಳ ಚಿಕ್ಕಮ್ಮ ಬಾಣಂತನಕ್ಕೆಂದು ಮನೆಗೆ ಬಂದಿದ್ದಳು. ಅವಳ ಹಸುಗೂಸು ರಾತ್ರಿಯಿಡೀ ರಚ್ಚೆ ಹಿಡಿದು ಕರೆದು ಮನೆಯವರಿಗೆ ನಿದ್ರೆ ಕೆಟ್ಟು, ಹೆದರಿಕೆ ಹತ್ತಿ, ಎದೆಹಾಲಿನಲ್ಲಿ ಬೆಣ್ಣೆ ಪಸೆ ಇಲ್ಲವೇನೋ ಅದಕ್ಕೆ ಕೂಸಿಗೆ ಹೊಟ್ಟೆ ತುಂಬದೆ ಅಳುತ್ತದೆಯೇನೋ! ಅಂತ ಅಜ್ಜಿ ನಿರ್ಧಾರಕ್ಕೆ ಬಂದು, ಪೂಸಿ ಹೊಡೆದು ಚುಮ್ಮಿಯನ್ನು ಹಾಲಿಗಾಗಿ ಬೈಲು ಹೊಳೆಯ ಆಚೆ ಬದಿಯಲ್ಲಿ ಇರುವ ಬಾಯಮ್ಮನ ಮನೆಗೆ ಬರೇ ಒಂದು ಕುಡ್ತೆ ಹಾಲಿಗಾಗಿ ಕಳಿಸುತ್ತಿದ್ದದ್ದು.

ಅಲ್ಲಿ ಆಸು ಪಾಸಿನಲ್ಲಿ ಹಸು ಸಾಕುತ್ತಿದ್ದದ್ದು ಬಾಯಮ್ಮನ ಹೊರತಾಗಿ ಯಾರೂ ಇರಲಿಲ್ಲ. ಹೊಳೆಬದಿಯ ಒಂದು ಸಣ್ಣ ತುಂಡು ಜಾಗ ಬಿಟ್ಟರೆ ಬೇರೆ ಏನು ಕೃಷಿ ಭೂಮಿ ಇರಲಿಲ್ಲ ಅವಳಿಗೆ. ಮರ ಕಡಿಯಲೆಂದು ಹೋದ ಅವಳ ಗಂಡನ ಮೇಲೆ ಮರದ ಗೆಲ್ಲೊಂದು ಹೆಗಲಿಗೆ ಬಿದ್ದದ್ದೊಂದು ನೆಪ. ಮಲಗಿದಲ್ಲಿಯೇ ಆದ ಚೇಟ ಮತ್ತೆ ಮೇಲೆ ಏಳಲೇ ಇಲ್ಲ. ಹದಿನೈದು ವರುಷಗಳಿಂದೀಚೆ ಎಲ್ಲ ದೇಖಾರೇಕಿ ಬಾಯಾಮ್ಮನ ಮೇಲೆಯೇ. ಮಗ ಸುಭಾಷನಿಗೆ ಆಲಿಯಾಸ್ ಸುಬ್ಬುವಿಗೆ ಸಂಬಂಧದಲ್ಲಿಯೇ ಒಳ್ಳೆಯ ಹುಡುಗಿ ನೋಡಿ ಮದುವೆ ಮಾಡಿದ್ದಾಳೆ. ಅವ ಆಚಾರಿ ಕೆಲಸಕ್ಕೆ ಊರಿಂದೂರಿಗೆ ಹೋದರೆ, ಕೆಲಸ ಕೊನೆ ಮುಟ್ಟಿದ ಮೇಲೆಯೇ ಮನೆ ಕಡೆ ಬರುತ್ತಿದ್ದದ್ದು. ಸೊಸೆ ಅಕ್ಕಪಕ್ಕ ಕರೆ ಬಂದಲ್ಲಿಗೆ ಕಾಪಿ ಕೊಯ್ಯಲು, ಗಿಡ ಕಪಾತು ಮಾಡಲು, ಕಾಪಿ ತೋಟ ಹೆರ್ತೆ ಮಾಡಲು ಹೋಗುತ್ತಿದ್ದಳು. ಮೊಮ್ಮಗಳು ವೇದ ಚುಮ್ಮಿಯದೇ ತರಗತಿ. ಬಾಯಾಮ್ಮ ಮತ್ತು ಮಗಳು ಬೇಬಿ ಸೇರಿ ಎರಡು ಹಸು ಕಟ್ಟಿ ಹಾಕಿ ಸಾಕಿ, ಹಾಲು ಕರೆದು ಅದನ್ನು ಅಕ್ಕಪಕ್ಕದ ಹೋಟೆಲುಗಳಿಗೆ ಮಾರುತ್ತಾರೆ. ಇರುವ ಜಾಗದಲ್ಲಿ ತರಕಾರಿ, ನಾಕು ಬಾಳೆ ಗಿಡ, ಮರಗೆಣಸು ಬಿಟ್ಟರೆ ದನದ ಮೇವಿಗೆ ಬರುತ್ತಿದ್ದದ್ದು ಅವರು ಹೊಳೆಯ ಆಚೆ ಬದಿಯ ಪೊನ್ನಣ್ಣನವರ ಗದ್ದೆ ಬಯಲಿಗೆ.

ಬೆಳ್ಳಂಬೆಳಗ್ಗೆ ನೊರೆ ಹಾಲನ್ನು ಬಾಯಮ್ಮಾ ಕರೆದು ಕೊಟ್ಟರೆ, ಬೇಬಿ ಚುಮು ಚುಮು ಮುಂಜಾವಿನ ಚಳಿಯಲ್ಲಿ ತಲೆಗೆ ಸ್ಕಾರ್ಫ್ ಕಟ್ಟಿ, ಉದ್ದ ಕೈಯ ಸ್ವೆಟ್ಟರು ತೊಟ್ಟು ಬೇಗಬೇಗನೆ ಹೋಗಿ ಚೆನ್ನಪ್ಪನ ಅಂಗಡಿ ಮತ್ತೆ ಶೆಟ್ಟರ ಅಂಗಡಿಗೆ ಹಾಲು ಹಾಕಿ, ಮತ್ತೆ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು, ದನಕ್ಕೆ ಮೇವು ತಂದು ಕೊಂಡು, ಸೌದೆ ತರುವುದು ಅಕ್ಕಿ ಬೀಸುವುದು ಮಾಡುತ್ತಾ ಇರುತ್ತಿದ್ದಳು. ಮನೆಯಲ್ಲಿ ಮಾಡುವುದಕ್ಕೆ ಆಕೆಗೆ ಬೇಕಾದಷ್ಟು ಕೆಲಸಗಳು ಕೂಡ ಮುಗಿಯದಷ್ಟು ಇರುತ್ತಿದ್ದವು. ಮದುವೆಯಾಗದ ಹುಡುಗಿಯನ್ನು ಕೂಲಿ ನಾಲಿ ಅಂತ ಕೆಲಸಕ್ಕೆ ಕಳಿಸಿದರೆ ಯಾರ ಜೊತೆಗಾದರೂ ಓಡಿ ಹೋಗಿಬಿಡಬಹುದು ಅನ್ನುವ ಭಯ ಒಳಗೊಳಗೆ ಬಾಯಮ್ಮನಿಗೆ ಇಲ್ಲದಿಲ್ಲ. ಆ ಕಾರಣಕ್ಕೆ ಮಗಳನ್ನು ಎಲ್ಲೂ ಹೊರಗೆ ಕೆಲಸಕ್ಕೆ ಕಳಿಸುತ್ತಿರಲಿಲ್ಲ. ಆದರೆ ಸೊಸೆಗೆ ಇದು ಇರಿಸುಮುರಿಸು ಸಂಗತಿಯಾಗಿತ್ತು. ಅದನ್ನು ಆಕೆ ನೆರೆಯವರೊಂದಿಗೆ ಹೇಳಿ ಕಕ್ಕಿ ಕೊಂಡಿದ್ದಳು ಕೂಡ. ಕಷ್ಟ ಹೆತ್ತೊಡಲಿಗೆ ತಾನೇ ಗೊತ್ತು! ಬಾಯಮ್ಮ ಇದ್ಯಾವುದಕ್ಕೂ ಸೊಪ್ಪು ಹಾಕದೆ ಮಗಳನ್ನು ಹಾಲು ಮಾರಲು ಕಳಿಸುವುದನ್ನು ಬಿಟ್ಟರೆ ಬೇರೆಲ್ಲೂ ಕಳಿಸುತ್ತಿರಲಿಲ್ಲ. ಬೇರೆಯವರ ಬಳಿ ಹಾಲು ಕಳಿಸಿದರೆ ದುಡ್ಡು ನಿಯತ್ತಿನಿಂದ ಇವಳಿಗೆ ಸಿಗುತ್ತದೆ ಅನ್ನುವ ಖಾತ್ರಿಯಿರಲಿಲ್ಲ. ಮಗಳಿಗೆ ಚೂರು ಪಾರು ಚಿನ್ನ ಬಣ್ಣ ಎಲ್ಲ ಅವಳಿಗೆ ಅದೇ ಪುಡಿಗಾಸಿನಲ್ಲಿ ಆಗಬೇಕಿತ್ತು. ಅದಕ್ಕಾಗಿ ಬೆಳಕು ಹರಿಯುವಾಗಲೇ ಜನರ ಕಣ್ಣಿಗೆ ಬೀಳುವ ಮೊದಲೇ ಬೇಬಿ ಹಾಲು ಮಾರಿ ಬಂದು, ಉಳಿದಂತೆ ತನ್ನ ಕಣ್ಗಾವಲಿನಲ್ಲಿಯೇ ಇರುವಂತೆ ನೋಡಿಕೊಂಡಿದ್ದಳು.

ವಿಪರೀತ ನಡುಗುವ ಚಳಿಯ ನಡುವೆ ಗದ್ದೆ ಹುಣಿಯಲ್ಲಿ ಹಾದುಹೋಗುವಾಗ ಒತ್ತಾಗಿ ಬೆಳೆದ ಭತ್ತದ ಪೈರಿನ ನಡುವೆ ಚುಮ್ಮಿಯ ಬಟ್ಟೆಯೆಲ್ಲ ಚಂಡಿ ಆಗಿಬಿಡುತ್ತಿತ್ತು. ಜೊತೆಗೆ ಲಂಗಕ್ಕೆ ಹುಲ್ಲಕ್ಕಿ ಬೇರೆ ಅಂಟಿ ಪಜೀತಿ ಆಗಿಬಿಡುತ್ತಿತ್ತು. ಮತ್ತೆ ಅದನ್ನು ತೆಗೆಯುವುದೇ ಒಂದು ದೊಡ್ಡ ಕೆಲಸ. ನಂತರ ಒಂದು ಸಣ್ಣ ಹೊಳೆ ದಾಟಬೇಕಿತ್ತು. ಹೊಳೆಗೆ ಕಾಲಿಡುವುದು ಎಂದರೆ ಜೀವ ಕೈಗೆ ಬಂದಂತೆ. ರಾಮ..!ರಾಮ..! ಅಷ್ಟು ಕೋಟ ಕೋಟ ನೀರು. ತುಂಬಾ ಹೊತ್ತು ದಂಡೆಯ ಮೇಲೆ ನಿಂತು ಕಟ ಕಟ ಹಲ್ಲು ಕಡಿಯುತ್ತಾ, ಕಾಲು ಇಳಿಸುವುದ, ಬೇಡವಾ..ಅಂತ ಮನಸು ತುಯ್ದಾಡಿ, ಒಮ್ಮೆಲೆ ಇಳಿಬಿಟ್ಟರೆ, ಮತ್ತೆ ಕಾಲು ಬೀಸ ಬೀಸ ಹಾಕಿ ಓಡುವಾಗ ನಿಜಕ್ಕೂ ಅಜ್ಜಿ ಹೇಳಿದ್ದು ಹೌದು! ಅನ್ನಿಸುತ್ತದೆ. ಬೆಳಗ್ಗೆ ನೀರು ಉಗುರು ಬಿಸಿ ಇರುತ್ತದೆ. ಆದರೆ ಪ್ರತಿಬಾರಿ ದಂಡೆಗೆ ಬಂದು ನಿಲ್ಲುವಾಗ ನೀರಿನೊಳಗೆ ಹೇಗೆ ಕಾಲಿಡುವುದಪ್ಪಾ ಅಂತ ಎದೆ ಮರಗಟ್ಟಿದಂತೆ ಆಗುತ್ತದೆ. ಆದರೂ ಹಳ್ಳ ದಾಟಿ ಸ್ವಲ್ಪ ಗುಡ್ಡೆ ಹತ್ತಿ ನಡೆದರೆ ಸಾಕು ಬಾಯಮ್ಮ ಹಾಲಿನ ಕುಪ್ಪಿಯ ಜೊತೆಗೆ ಹಾಲು ಹಾಕಿದ ಕಾಫಿ ಕೊಡುತ್ತಾಳೆ. ಬಿಸಿಬಿಸಿ ಕಾಫಿ ಹೀರುವಾಗ ಚಳಿ ಹಿತವೆನ್ನಿಸತೊಡಗುತ್ತದೆ. ಅದಕ್ಕಾಗಿಯೇ ಆ ಕೆಲಸವನ್ನು ಪ್ರತಿನಿತ್ಯ ನಿಯತ್ತಿನಿಂದ ಮಾಡುತ್ತಾಳೆ. ಅಜ್ಜಿ, ಮೊದಲು ಹಾಲು ತರಲು ಹೇಳಿದ್ದೇ ಅವಳ ತಮ್ಮ ಕಿಟ್ಟಿಯನ್ನು. ಅವನು ಉದಾಸೀನ ತೋರಿದ್ದಕ್ಕೆ ಈ ಕೆಲಸ ಇವಳ ಮೇಲೆ ಬಿದ್ದದ್ದು. ಈಗ ಆಗುವುದೆಲ್ಲಾ ಒಳ್ಳೆಯದಕ್ಕೇ ಅಂತ ಅನಿಸಿ ಇಲ್ಲಿಯತನಕ ಅವಳು ಬಾಯಿಬಿಟ್ಟಿರಲಿಲ್ಲ.

ಚುಮ್ಮಿ...ಕಾಫಿ ಕುಡಿದು ಹೋಗು...ಅಂತ ಅಜ್ಜಿ ಕರೆದರೂ ಕೇಳಿಸದಂತೆ...ನಿನ್ನ ಕರಿ ಕಾಪಿಯನ್ನು ನೀನೇ ಗಂಟಲಿಗೆ ಹೊಯ್ಕೊ! ಅಂತ ಒಳಗೊಳಗೆ ಗೊಣಗಿಕೊಂಡು ಓಡಿ ಬಂದಿದ್ದಳು. ಈಗ ನೋಡಿದರೆ ಹಾಲು ಕಾಫಿ ಹೋಗಲಿ ಬಾಯಮ್ಮ ದುಸು ದುಸು ಆಡುತ್ತಾ ಮಾತಾಡದೇ ಕಳಿಸಿದ್ದಳು. ಬೇಬಿ ಚೇಚ್ಚಿ ಹಾಲು ಕೊಟ್ಟು ಹೋದವಳು ಒಳಗಿನಿಂದ ಇಣುಕಿಯೂ ನೋಡಲಿಲ್ಲ. ಏನಾಗಿರಬಹುದು ಅಂತ ಚುಮ್ಮಿಯ ಪುಟ್ಟ ತಲೆಯೊಳಗೆ ನೂರೆಂಟು ಪ್ರಶ್ನೆಗಳು. ಆದರೂ ಕರೆದರೂ ಕರೆಯಬಹುದು ಅಂತ ಒಲ್ಲದ ಮನಸ್ಸಿನಿಂದ ಪಾದವಿಡುತ್ತಿದ್ದಳು.

ಯಾಕೆ ಇಷ್ಟು ಲೇಟು ಇವತ್ತು..ಶಾಲೆಗೆ ಹೋಗೋದು ಬೇಡವಾ..! ಹೊರಡು ಹೊರಡು..! ಅಂತ ಗದರಿಸುತ್ತಾ ಅಜ್ಜಿ ಹಾಲು ಕುಪ್ಪಿ ತಗೊಂಡು ಒಳಹೋದಳು. ಅಷ್ಟರಲ್ಲಿ ಮೊನ್ನೆಯಷ್ಟೇ ಮಾಲೆ ಹಾಕಿದ ಪಕ್ಕದ ಮನೆಯ ಪುಟ್ಟಸ್ವಾಮಿ ಬಂದು, ಹೆಂಗಸರಿಗೆ ಮುಖ ಕೊಟ್ಟು ಮಾತಾಡಬಾರದು ಅನ್ನುವ ಮಾಲೆ ಹಾಕಿದವರ ನಿಯಮದಂತೆ ನೆಲಕ್ಕೆ ದೃಷ್ಟಿ ಕೊಟ್ಟು ಮಾತಾಡುತ್ತಾ, ಬಾಯಮ್ಮನ ಮನೆಯಲ್ಲಿ ನಿನ್ನೆ ಕಳ್ಳರು ಬಂದಿರಬೇಕು ಅನ್ಸುತ್ತೆ, ಸಾಮಾನೆಲ್ಲ ಚೆಲ್ಲಾಪಿಲ್ಲಿಯಾಗಿದೆ. ಕಳುವು ಏನಾಗಿದೆ ಅಂತ ಒಂದು ಗೊತ್ತಾಗುತ್ತಿಲ್ಲವಂತೆ. ಎಷ್ಟೆಂದರೆ ಬೇಬಿ ರಾತ್ರಿ ಸ್ನಾನ ಮಾಡಲು ಹೋಗುವಾಗ ಬಿಚ್ಚಿಟ್ಟ ಚಿನ್ನದ ಬೆಂಡೋಲೆ ಹಾಗೆ ಸ್ಟೂಲಿನ ಮೇಲೆಯ ಗ್ಲಾಸಿನೊಳಗೆ ಇತ್ತಂತೆ. ಬಂದವರು ಕಳ್ಳರ? ಯಾರು? ಯಾಕಿರಬಹುದು? ಒಂದು ಗೊತ್ತಾಗುತ್ತಿಲ್ಲ. ಯಾರಿಗೂ ಹೇಳಬೇಡಿ ಮತ್ತೆ! ಸರಿಯಾಗಿ ನನಗೂ ಗೊತ್ತಿಲ್ಲ..ಸ್ವಾಮಿಯೇ ಶರಣಂ ಅಯ್ಯಪ್ಪ! ಅಂತ ಕೈ ಮುಗಿದು ಹೊರಟೇ ಬಿಟ್ಟರು.

ಒಂದು ಸಣ್ಣ ಭಯ, ಒಂದು ಸಣ್ಣ ಅನುಮಾನ, ಮುಂಜಾವಿನ ಬೆಳಕಿನೊಂದಿಗೆ ಮನೆ ಮನೆ ದಾಟುತ್ತಾ ಪ್ರಖರವಾಗತೊಡಗಿತ್ತು. ಹಳ್ಳಿಯೆಂದರೆ ಹಾಗೆ ತಾನೆ!? ಯಾವುದೋ ಮನೆಯ ಒಲೆಯಲ್ಲಿಟ್ಟ ಪಾತ್ರೆಯ ತಳ ಹಿಡಿದರೆ ಸಾಕು ಅದರ ಕರಕಲು ಹಬೆಯ ಹೊಗೆ ಎಲ್ಲರ ಮೂಗಿಗೆ ತಾಕಿ ಅದಕ್ಕೆ ಒಗ್ಗಿಕೊಳ್ಳುವವರೆಗೆ ಅದು ನಿಲ್ಲುವುದಿಲ್ಲ. ತಣ್ಣಗೆ ಹರಿಯುವ ನದಿಯಂತೆ ಇರುವ ಇಂತಹ ಊರಲ್ಲಿ ಒಂದು ಆತಂಕದ ಅಲೆ ಎದ್ದರೆ ಸಾಕು, ಮತ್ತೆ ಅಲ್ಲೇ ಅಲೆಗಳು ಏಳುತ್ತಲೇ ಇರುತ್ತವೆ. ಸಣ್ಣ ಅಲೆ, ದೊಡ್ಡ ಅಲೆ, ಒಂದರೊಳಗೊಂದಾಗಿ ವರ್ತುಲಾಕಾರವಾಗಿ ಸುತ್ತುತ್ತ ಕೊನೆಗೆ ಇಲ್ಲವಾಗುವವರೆಗೂ ಕಾಯಬೇಕು. ಅಂತಹ ಒಂದು ಅಲೆ ಈಗ ನಾಕೂರಿನ ಹೊಳೆ ಕರೆಯ ಮನೆಯಲ್ಲಿ ಎದ್ದಿದೆ ಅಂತ ಜನ ಆಡಿ ಕೊಳ್ಳುತ್ತಿದ್ದಾರೆ. ಕಳೆದೆರಡು ವರುಷಗಳ ಹಿಂದೆ ನಡೆದ ಕತೆ ಚುಮ್ಮಿಗೆ ಪಕ್ಕನೆ ನೆನಪಿಗೆ ಬಂತು.

ಜಡಿಗುಟ್ಟಿ ಆ ದಿನ ಮಳೆ ಸುರಿಯುತ್ತಿತ್ತು. ಇಂತಹ ಮಳೆ ನಾನು ಯಾವತ್ತೂ ನೋಡಿರಲಿಲ್ಲ. ಈ ಸುಡುಗಾಡು ಮಳೆ ಇನ್ನು ಏನೇನೂ ಮಾಡಲಿಕ್ಕೆ ಉಂಟೋ, ಯಾರನ್ನೆಲ್ಲ ತಕೊಂಡು ಹೋಗಲಿಕ್ಕೆ ಉಂಟೋ...ಏನೋ ಅಂತ ಅಜ್ಜಿ ನಿಡುಸುಯ್ದಿದ್ದಳು. ಮಾರನೇ ದಿನ ಅಕ್ಕಮ್ಮ ಕಾಣುವುದಿಲ್ಲ ಅನ್ನುವ ಸುದ್ದಿ ಮಳೆ ನಿಂತ ಮೇಲೂ ಟಪ ಟಪ ಸದ್ದು ಮಾಡುತ್ತಿತ್ತು. ಎಷ್ಟೋ ದಿನಗಳವರೆಗೆ ಅವಳ ಪತ್ತೆಯೇ ಇಲ್ಲ. ಚೆಂದದ ಚೆಂದುಳ್ಳಿ ಚೆಲುವೆ ಅವಳು. ಕಾಲೇಜು ಮೆಟ್ಟಿಲು ಹತ್ತಿದ್ದಳು. ಅವಳಿಗೆ ಇಂಗ್ಲೀಷು ಬರುತ್ತಿತ್ತು ಅನ್ನುವುದೇ ಎಲ್ಲರಿಗೆ ಅವಳ ಬಗ್ಗೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಅವಳಿಗೆ ಅಮಾವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ, ಆರೋಗ್ಯ ಏರುಪೇರಾಗಿ ತೆಗ್ದಾ ಬಿಗ್ದಾ ಮಾತಾಡುತ್ತಿದ್ದಳು. ಆಗೆಲ್ಲ ಅವಳೊಂದಿಗೆ ಮಾತಾಡಲು ಎಲ್ಲರೂ ಹೆದರುತ್ತಾರೆ ಮತ್ತು ಅವಳನ್ನು ಆ ಸಮಯದಲ್ಲಿ ರೂಮಿನೊಳಗೆ ಕೂಡಿ ಹಾಕುತ್ತಾರೆ ಅನ್ನುವ ಸುದ್ದಿ ಗೌಪ್ಯವಾಗಿ ಉಳಿದಿರಲಿಲ್ಲ. ಅಂತಹ ಅಕ್ಕಮ್ಮ ಒಮ್ಮೊಮ್ಮೆ ಬೈಲಿನ ಅಕ್ಕಪಕ್ಕದ ಮನೆಗಳಿಗೆ ಗದ್ದೆ ಕೆಲಸದ ಸಮಯದಲ್ಲಿ ನೆರವಾಗಲು ಬರುವುದುಂಟು. ಒಂದು ದಿನ ಚುಮ್ಮಿಯ ಮನೆಗೂ ಬಂದಾಗ ಅಜ್ಜಿ ಮೊದಲೇ ತಾಕೀತು ಮಾಡಿದ್ದರು. ‘ನೀ ಜಾಸ್ತಿ ಸೇಳೆ ಆಡೋಕೆ ಹೋದೀಯ ಮತ್ತೆ, ಅವಳಿಗೆ ಸಿಟ್ಟು ಬಂದರೆ ನಿನ್ನ ಕುತ್ತಿಗೆ ಹಿಚುಕಿ ಬಿಟ್ಟಾಳು!’. ಅಂತಹ ಅಕ್ಕಮ್ಮನಿಗೆ ಅವಳ ಕಾಲೇಜಿನ ಸಹಪಾಠಿ ಅದೇ ಊರಿನ ಮಿಟ್ಟುವಿನೊಂದಿಗೆ ಪ್ರೀತಿ ಇತ್ತು. ಅವನ ಜೊತೆ ಮದುವೆ ಮಾಡಿ ಕೊಡದ್ದಕ್ಕೆ ಹೀಗೆ ಆದದ್ದು ಅಂತ ಅಗೆ ತೆಗೆಯುತ್ತಾ ಪ್ರೇಮ, ಹೇಮಾ ಗುಸು ಗುಸು ಮಾತಾಡುವುದನ್ನು ಚುಮ್ಮಿ ಕೇಳಿಸಿ ಕೊಂಡಿದ್ದಳು. ಇನ್ನೇನು ಅವಳು ಸರಿ ಆಗಿದ್ದಾಳೆ, ಮಿಲಿಟರಿ ಹುಡುಗನ ನೋಡಿ ಈ ಸಾರಿ ಮದುವೆ ಮಾಡಿ ಕೊಡಬೇಕೆಂದು ಮನೆಯವರೆಲ್ಲರೂ ಮಾತನಾಡಿಕೊಳ್ಳುತ್ತಿರುವಾಗಲೇ ಆ ಜಡಿ ಮಳೆಯ ರಾತ್ರಿಯಲ್ಲಿ ಅವಳು ಕಾಣೆಯಾದದ್ದು. ನಂತರ ಎಷ್ಟೋ ದಿನಗಳ ಬಳಿಕ ಅವಳು ಮಿಟ್ಟುವಿನೊಂದಿಗೆ ಹಾದಿ ಬದಿಯಲ್ಲಿ ಬಸ್ಸಿಗೆ ಕಾಯುವುದು ಜನರ ಕಣ್ಣಿಗೆ ಬಿದ್ದದ್ದು. ಅವಳ ಬಿಳಿ ಕತ್ತಿನಲ್ಲಿ ಸಣ್ಣ ಕಪ್ಪು ಕರಿಮಣಿ ಮದುವೆ ಆಗಿದೆ ಅನ್ನುವುದನ್ನು ಹೇಳುತ್ತಿತ್ತು. ಅಕ್ಕಮ್ಮನ ಮದುವೆ ಆದದ್ದೇ ಒಳ್ಳೆಯದು ಆಯಿತು. ಈಗ ಸರಿ ಆಗಿದ್ದಾಳೆ, ಮಗು ಹುಟ್ಟಿದ ಮೇಲೆ ತವರಿಗೆ ಹೋಗುವುದು ಬರುವುದು ಎಲ್ಲ ಉಂಟು ಅಂತೆ. ‘ಒಳ್ಳೆಯದೇ ಆಯಿತು ಮಿಟ್ಟು ಹಾರಿಸಿಕೊಂಡು ಹೋದು, ಇಲ್ಲದಿದ್ದರೆ ಇವಳ ಹುಚ್ಚು ನೋಡಿ ಬೇರೆ ಯಾರು ತಕೊಂಡು ಹೋಗುತ್ತಿದ್ದರು’ ಅಂತ ಜನರು ಅಕ್ಕುವಿನ ಪರವಾಗಿ ಸಮಾಜಾಯಿಷಿ ಕೊಡುವವಷ್ಟರ ಮಟ್ಟಿಗೆ ಕಾಲ ಬದಲಾವಣೆ ತಂದಿಟ್ಟಿತ್ತು. ಹದವಾದ ಗಾಳಿ ಎಲ್ಲೆಡೆ ಬೀಸುತ್ತಾ, ಗದ್ದೆ ಕೆಲಸ,ತೋಟ ಕೆಲಸದಲ್ಲಿ ಜನರು ಮುಳುಗಿರುವ ಹೊತ್ತಿನಲ್ಲಿ, ನೀರಿಗೆ ಮುಳುಗು ಹಾಕಲು ಹೋದ ಪುಟ್ಟ ಸ್ವಾಮಿ ತಂದ ಸುದ್ದಿ ಮತ್ತೊಂದು ಅಲೆಯನ್ನು ಎಬ್ಬಿಸಿತ್ತು.

ಡಿಸೆಂಬರ್ ತಿಂಗಳು ಅದು. ಚಳಿ ತೀವ್ರತೆ ಪಡೆದುಕೊಳ್ಳುವ ಹೊತ್ತು. ಬಯಲಿಡೀ ಮಂಜು ಮುಸುಕಿ ಹೊಳೆಯ ದಾರಿಯೇ ಕಾಣದಿರುವ ಹೊತ್ತಿನಲ್ಲಿ, ಹೊಳೆಯ ನಡುವಿನಿಂದ ಸ್ವಾಮಿಯೇ ಶರಣಂ ಅಯ್ಯಪ್ಪ ಕೂಗು ಕೇಳಿಬರುತ್ತದೆ. ಮಾಲೆ ಹಾಕಿದ ಪುಟ್ಟಣ್ಣ ಈಗಿನ ಪುಟ್ಟಸ್ವಾಮಿ ನೀರಿಗೆ ಮುಳುಗುಹಾಕಿ ಸ್ವಾಮಿಯನ್ನು ಕರೆದು ಆಕಾಶ ನೋಡುವ ಹೊತ್ತಿಗೆ ಬಾಯಮ್ಮನ ಮನೆಯ ಹಿತ್ತಲಿನ ಬದಿಯ ಬಾಳೆಯ ಬುಡದಲ್ಲಿ ಮಿಣಮಿಣ ದೀಪದ ಬೆಳಕೂ ಜೊತೆಗೆ ಎರಡು ಆಕೃತಿಗಳು ಅತ್ತಿಂದಿತ್ತ ಚಲಿಸುವುದಷ್ಟೇ ಕಂಡದ್ದು. ತಮ್ಮನ್ನು ಯಾರೋ ಗಮನಿಸಿದ್ದಾರೆ ಅನ್ನುವ ಗಡಿಬಿಡಿಯಲ್ಲಿ ಒಂದು ಆಕೃತಿ ಕಾಫಿತೋಟ ಹತ್ತಿ ಓಡಿದರೆ ಮತ್ತೊಂದು ಏದುಸಿರು ಬಿಡುತ್ತಾ ಒಳಕ್ಕೆ ಬರುವಾಗ ಅರೆತೆರೆದ ಬಾಗಿಲು ಕುಟ್ಟಿ, ಕಾಲು ಎಡವಿ, ಮಣೆ ಮೇಲೆ ಉರಿಯುತ್ತಿದ್ದ ದೀಪ ನೆಲಕ್ಕೆ ಬಿದ್ದು ಸದ್ದಾಗಿ ಬಾಯಮ್ಮನಿಗೆ ಎಚ್ಚರಾಗಿ ಯಾವುದೋ ಒಂದು ಅಸಹಜತೆಯ ವಾಸನೆ ಅವಳ ಮೂಗಿಗೆ ಬಡಿದದ್ದು. ಗದರಿಸಿ ಬಾಯಿ ಬಿಡಿಸಿದರೂ ಒಂದ ಮಾಡಲಿಕ್ಕೆ ಹೊರಗೆ ಹೋಗಿದ್ದೆ ಅಂತ ಹೇಳಿದಳೇ ಬಿಟ್ಟರೆ ಬೇರೆ ಏನು ಬಾಯಿಬಿಡಿಸಲು ಅವಳಿಂದ ಸಾಧ್ಯವಾಗಿರಲಿಲ್ಲ.

ಬೆಳಗ್ಗೆ ಬೆಳಗ್ಗೆ ಪುಟ್ಟಸ್ವಾಮಿ ಬಂದು ಸ್ವಾಮಿಯೇ ಶರಣಂ ಅಯ್ಯಪ್ಪ.. ಅನ್ನುತ್ತಾ, ಬಾಯಮ್ಮನ ಜಗಲಿಯಲ್ಲಿ ಕುಳಿತು, ಮುಖ ನೋಡದೆಯೇ, ಸುಬ್ಬ ಸ್ವಾಮಿ ಮನೇಲಿ ಇದ್ದಾರ? ಇಂದು ಹೊತ್ತಾರೆ ಬಾಳೆ ಬುಡದಲ್ಲಿ ಯಾರನ್ನೋ ಕಂಡಂತಾಯಿತು. ಸುಬ್ಬಸ್ವಾಮಿ ಬಂದಿದ್ದಾರೆ ಅಂದುಕೊಂಡು ಮಾತನಾಡಿಸಿ ಹೋಗುವ ಅಂತ ಬಂದೆ ಅಂತ ಹೇಳುವಾಗ, ಈ ಸ್ವಾಮಿ ಊರಿಡೀ ಸದ್ದು ಮಾಡಿ ಬಿಡುತ್ತಾರೆ ಅಂತನಿಸಿ, ಅವ ಬರುವಾಗ ಇನ್ನೂ ವಾರದ ಮೇಲಾಗುತ್ತೆ, ಹೌದು ಹೌದು! ನನಗೂ ಸದ್ದು ಕೇಳಿಸಿದಂತಾಗಿ ಬಾಗಿಲು ತೆರೆದರೆ ಏನೂ ಕಾಣಿಸಲಿಲ್ಲ. ಬಹುಶಃ ನನ್ನ ಭ್ರಮೆ ಇರಬೇಕು ಅಂದುಕೊಂಡು ಕದ ನೂಕಿ ಒಳಗೆ ಬಂದು ಮಲಗಿದೆ. ಯಾವ ಕಾಲ ಬಂದು ಹೋಯಿತು ನೋಡಿ! ನೀವು ನೋಡಿದ ಮೇಲೆ ಇದು ನಿಜವೇ ಇರಬೇಕು ತಾನೇ? ಜನರನ್ನು ನಂಬುವ ಹಾಗೆ ಇಲ್ಲ. ಬಹುಶಃ ಕರಿಮೆಣಸು ಕದಿಯಲಿಕ್ಕೆ ಬಂದವರು ಇರಬೇಕು. ಯಾರೋ ಹತ್ರ ಪತ್ರದವರದ್ದೆ ಕೆಲ್ಸ. ಇನ್ಯಾರು ಇಲ್ಲಿಗೆ ಬರ್ತಾರೆ ಅಂತ ಹೇಳುತ್ತಾ, ಸುಬ್ಬ ಹೇಗೂ ಮನೆಯಲ್ಲಿ ಇರುವುದು ಕಡಿಮೆ, ಒಂದು ಒಳ್ಳೆ ನಾಯಿ ತಂದು ಸಾಕಬೇಕು ಅಂತ ಬಾಯಿಗೆ ಬಂದ ಸುಳ್ಳನ್ನು ಒದರಿ ಸ್ವಾಮಿಯನ್ನು ಸಾಗಹಾಕಿದ್ದರು.

ಬಾಯಮ್ಮನಿಗೆ ಮಗಳು ಬೇಬಿಯ ಮೇಲೆ ಒಂದು ಸಣ್ಣ ಅನುಮಾನದ ಕಣ್ಣು ಇದ್ದೇ ಇತ್ತು. ಹಾಲೂ ಕೊಡಲು ಹೋಗಲು ಶುರು ಮಾಡಿದ ಮೇಲೆ ಅವಳು ಮೊದಲಿನಂತಿಲ್ಲ ಎನ್ನುವುದೂ ಗಮನಕ್ಕೆ ಬಂದಿತ್ತು. ಆದರೆ ಹೀಗೆಲ್ಲ ಆಗಲಾರದು ಅಂದು ಕೊಂಡಿದ್ದಳು. ಇನ್ನೂ ಸುಬ್ಬುವನ್ನು ದೂರ ಕೆಲಸಕ್ಕೆ ಕಳಿಸಬಾರದು ಅಂತ ಮನದಲ್ಲಿ ನಿಶ್ಚಯಿಸಿಕೊಂಡಳು. ಮನೆಯಲ್ಲಿ ಸೊಸೆ ಇರುವಾಗ ರಂಪ ಮಾಡಿ ಗುಲ್ಲು ಮಾಡೋದು ಬೇಡ ಅಂದುಕೊಂಡು ಸುಮ್ಮನಾಗಿದ್ದಳು ಅಷ್ಟೇ. ಎಷ್ಟಾದರೂ ಆಕೆ ಹೆತ್ತ ಕರುಳಲ್ಲವೇ? ಅಲ್ಲಿಂದಾಚೆ ಅಂಗಡಿಗೆ ಹಾಲು ಮಾರಲು ಆಕೆಯನ್ನು ಕಳಿಸುವುದನ್ನು ನಿಲ್ಲಿಸಿದಳು. ಕಾಸು ಆಚೆ ಈಚೆ ಆದ್ರೂ ತೊಂದರೆ ಇಲ್ಲ, ಮಾನ ಮರ್ಯಾದೆಗಿಂತ ದೊಡ್ಡದು ಹಣವೇನೂ ಅಲ್ಲ ಅಂದುಕೊಂಡು ಮೂಲೆ ಮನೆಗೆ ಕೆಲಸಕ್ಕೆ ಹೋಗುವ ರಾಜುವಿನ ಜೊತೆ ದಿನಕ್ಕೆ ಒಂದು ರೂಪಾಯಿ ಕೊಡುವೆನೆಂದು ಒಪ್ಪಂದ ಮಾಡಿ ಅವನೊಂದಿಗೆ ಹಾಲಿನ ಕ್ಯಾನ್ ಕಳಿಸುವ ಏರ್ಪಾಟು ಮಾಡಿದ್ದಳು.

ಚುಮ್ಮಿ ಶಾಲೆಗೆ ಹೋಗುವಾಗ ಬಾಯಮ್ಮನ ಮನೆಗೆ ಹೋಗುವ ಹಾದಿಯನ್ನೇ ಬಳಸಿ ಹೋಗಬೇಕು. ಹೋಗುವಾಗ ಹೆಚ್ಚಿನ ಸರ್ತಿ ವೇದಾಳ ಜೊತೆಯಲ್ಲಿಯೇ ಹೋಗುವುದು. ಅವಳು ಮುಂದೆ ಹೋದರೆ ಕಾಫಿ ಎಲೆಯ ಕೊನೆಯನ್ನು ಮುರಿದು ಹಾದಿ ನಡುವಲ್ಲಿ ಹಾಕಿರುತ್ತಿದ್ದಳು. ಚುಮ್ಮಿ ಮುಂದೆ ಹೋದರೆ ಇವಳೇ ಹಾಕಿ ಹೋಗುವುದುಂಟು. ಆಗ ಇಬ್ಬರಿಗೂ ಕಾಯುವ ಪ್ರಸಂಗ ಬರುವುದಿಲ್ಲ. ಅದಕ್ಕಾಗಿ ಅವರು ಮಾಡಿಕೊಂಡ ಸರಳ ಉಪಾಯವಿದು. ವೇದಾ ಜೊತೆಯಲ್ಲಿದ್ದರೆ ಚುಮ್ಮೀಗೆ ನಿರಾಳಭಾವ. ಕಾರಣ, ಆ ಹಾದಿಯಲ್ಲಿ ಒಂದು ಸುರುಕುಳಿ ಸಿಗುತ್ತದೆ. ಅದು ತುದಿ ಮನೆಯಲ್ಲಿ ತೀರಿ ಹೋದವರ ಹೆಣಗಳನ್ನು ಸುಡುವ ಜಾಗ. ಯಾರಾದರೂ ಜೊತೆಗೆ ಇದ್ದರೆ ಮಾತ್ರ ಶಾಲೆಗೆ ಹೋಗಲು ಆರಾಮ. ಇಲ್ಲದಿದ್ದರೆ ಆ ಜಾಗ ದಾಟಿ ಹೋಗುವುದು ಎಂದರೆ ಮತ್ತೊಮ್ಮೆ ಸತ್ತು ಬದುಕಿದಂತೆ ಅನ್ನಿಸುತ್ತಿತ್ತು. ಮೊದಲೇ ವೇದಾ ಶಾಲೆಗೆ ಬರುವುದಿಲ್ಲ ಅಂತ ಗೊತ್ತಿದ್ದರೆ, ಚುಮ್ಮಿ ಮೈಲುಗಟ್ಟಲೆ ನಡೆದು ಬೇರೆ ದಾರಿ ಹಿಡಿದು ಶಾಲೆಗೆ ಹೋಗುತ್ತಿದ್ದಳು. ಅದಕ್ಕೆ ಸರಿಯಾಗಿ ಅದೇ ಶಾಲೆಗೆ ಬರುತ್ತಿದ್ದ ಅದೇ ಮನೆಗೆ ಸೇರಿದ ಅವಳಿ ಜವಳಿ ಮಕ್ಕಳಾದ ಕವಿತಾ–ನಮಿತಾ, ಅವರ ಅಪ್ಪ ಅಮ್ಮ ಎಲ್ಲರೂ ಯಾವುದೋ ಒಂದು ವಿಷಮ ಗಳಿಗೆಯಲ್ಲಿ ಗುಂಡು ಹೊಡೆದುಕೊಂಡು ಸತ್ತುಹೋದವರನ್ನು ಅದೇ ಜಾಗದಲ್ಲಿ ಸುಟ್ಟಿದ್ದನ್ನು ಚುಮ್ಮಿ ಕಣ್ಣಾರೆ ಕಂಡಿದ್ದಳು. ಆ ಚೂಟುಕಳದಲ್ಲಿ ಹೊಗೆ ಏಳುತ್ತಿದ್ದದ್ದು ಅವಳಿಗೆ ನಿದ್ದೆಯಲ್ಲೂ ಕಂಡು ಬೆಚ್ಚಿ ಬೀಳಿಸುತ್ತಿತ್ತು. ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎನ್ನುವುದಕ್ಕೆ ಗುಸುಗುಸು ಬಿಟ್ಟರೆ ಯಾವ ಪುರಾವೆಗಳು ಸಿಕ್ಕಿರಲಿಲ್ಲ. ಆದರೆ ತೀರಿ ಹೋಗುವ ವಾರದ ಮುಂದೆ ಅವರಪ್ಪ ಎರಡು ತೆಂಗಿನ ಸಸಿಯನ್ನು ಶಾಲೆಗೆ ಕೊಟ್ಟು ಮಕ್ಕಳ ಕೈಯಿಂದಲೇ ನೆಡೆಸಿ ಹೋಗಿದ್ದರು. ಊರಿನ ಆಪ್ತರ ಮನೆಗಳಿಗೆ ಅವರೆಲ್ಲ ಹೋಗಿ ಕುಶಲ ವಿಚಾರಿಸಿ ತಿಂಡಿ ಕಾಫಿ ಸೇವಿಸಿ ಬಂದಿದ್ದರು. ಇದನ್ನೆಲ್ಲಾ ನೋಡಿದಾಗ ಅವರ ಸಾವು ಪೂರ್ವಯೋಜಿತದಂತೆ ಗೋಚರಿಸುತ್ತಿತ್ತು.

ಸತ್ತವರನ್ನು ಬೂದಿ ಮಾಡಿದ ಮೂರನೇ ದಿನ ಕಾಲೇ ಹೋಗುವುದು ಅನ್ನುತ್ತಾರೆ ಈಚೆ ಕಡೆ. ಅವರ ಆತ್ಮ ಗಾಳಿಯಲ್ಲಿ ಹಾರಿಹೋಗುವಾಗ ನಡುವಿನಲ್ಲಿ ಯಾರಾದರೂ ಸಿಕ್ಕಿದರೆ ಅವರಿಗೆ ಅದರ ಪೆಟ್ಟು ಸಿಕ್ಕಿ, ನಂತರ ಅವರು ವಿಚಿತ್ರವಾಗಿ ಆಡುತ್ತಾರೆ ಅನ್ನುವುದು ಜನರ ನಂಬಿಕೆ. ‘ಅವಂಗೆ ಕಾಲೆ ಹೊಡ್ದುಟು. ಅದಕ್ಕೆ ಅವಂಗೆ ಹಂಗೆ ಆದ್’ ಅಂತ ಕೆಲವರಿಗೆ ಹೇಳುವುದನ್ನು ಅವಳು ಕೇಳಿದ್ದಳು. ಅದಕ್ಕೇ ಅಂದು ಹೆದರಿಕೆಯಲ್ಲಿ ವೇದಾನ ಕರೆದುಕೊಂಡು ಬೇರೆ ದಾರಿ ಹಿಡಿದು ಶಾಲೆಗೆ ಹೋಗಿದ್ದಳು.

ಆ ದಿನ ಕಾಫಿ ಎಲೆಹಾಕಿ ಮುಂದೆ ಹೋಗಲು ಅವಳಿಗೆ ಮನಸಾಗಲಿಲ್ಲ. ಅವಳು ಹೋಗಲಿಲ್ಲ ಅಂತ ಖಾತ್ರಿಯಾದ ಮೇಲೆ ಅವಳನ್ನು ಕಾಯುತ್ತಾ ಅಲ್ಲೇ ಕೂತಳು. ಅವಳು ಬಂದಮೇಲೆ ಜತೆಯಲ್ಲಿ ಮಾತಾಡುತ್ತಾ ಅವರ ಮನೆಗೆ ಕಳ್ಳ ನುಗ್ಗಿದ್ದ ವಿಚಾರ ಹೇಳ್ತಾಳೆ ಏನೋ ಅಂತ ಕಾದದ್ದೇ ಬಂತು. ಅವಳು ಇನ್ಯಾವುದೋ ಸಂಗತಿ ಮಾತಾಡಲು ಶುರು ಮಾಡಿದ್ದು ಕೇಳಿ, ತಾನೇ ಶುರುಮಾಡಿದ್ದಳು. ‘ನಿನ್ನೆ ನಿಮ್ಮ ಮನೆಗೆ ಕಳ್ಳರು ಬಂದಿದ್ದರಂತೆ.. ನೀನು ನೋಡಿದ್ದೀಯಾ? ಹೇಗಿರುತ್ತಾರೆ ಅವರು? ಮುಖಕ್ಕೆ ಕಪ್ಪುಬಟ್ಟೆ ಹಾಕಿಕೊಂಡಿದ್ದರ?’ ಚುಮ್ಮಿ ಒಂದರಮೇಲೊಂದು ಪ್ರಶ್ನೆ ಹಾಕುತ್ತಲೇ ಇದ್ದರೂ ವೇದಾಳ ಕಣ್ಣಲ್ಲಿ ಕುತೂಹಲದ ಪ್ರಶ್ನೆ ಇತ್ತೇ ಬಿಟ್ಟರೆ, ಯಾವ ಉತ್ತರವೂ ಇಲ್ಲ. ಅವಳಿಗೆ ಈ ವಿಚಾರ ಗೊತ್ತಿದ್ದಂತೆ ಇರಲಿಲ್ಲ. ಹಾಗಾಗಿ ಯಾರಿಗೂ ಹೇಳಬೇಡ, ನನಗೂ ಸರಿ ಗೊತ್ತಿಲ್ಲ, ಪುಟ್ಟಸ್ವಾಮಿ ಮನೆಗೆ ಬಂದು ಹೇಳಿದ್ದು ಕೇಳಿಸಿಕೊಂಡೆ ಅಂತ ಹೇಳಿ ಚುಮ್ಮಿ ಅವಳಿಂದ ಆಣೆ ಹಾಕಿಸಿಕೊಂಡಿದ್ದಳು.

ಇತ್ತೀಚೆಗೆ ಬೇಬಿ ಅತ್ತೆ ವಿಚಿತ್ರವಾಗಿ ಆಡ್ತಾಳೆ, ಸುಮ್ಮ ಸುಮ್ಮನೆ ನಗ್ತಾಳೆ, ಮರುಕ್ಷಣ ರೇಗ್ತಾಳೆ. ಎಲ್ಲರೂ ಅವಳಿಗೆ ಕೊಲೆ ಬಡಿದಿದೆ ಅಂತಾರೆ. ಕೇರಳದ ಜೋಯಿಸರ ಹತ್ತಿರದಿಂದ ತಾಯತ, ಉರ್ಕು ಎಲ್ಲ ಕಟ್ಟಿಸಿದ್ದು ಆಯಿತು. ಯಾವುದೂ ಪ್ರಯೋಜನಕ್ಕೆ ಬರಲಿಲ್ಲ, ಅಂತ ವೇದಾ ಅಳು ಮೋರೆ ಮಾಡಿಕೊಂಡು ಹೇಳಿದ್ದು ಕೇಳಿ ಚುಮ್ಮಿಗೂ ಕರುಳು ಕಿತ್ತು ಬಂದಂತೆ ಆಗಿತ್ತು. ಬೇಬಿ ಚೇಚಿಗೂ ಅಕ್ಕಮ್ಮನ ಹಾಗೆ ಆಗಿ ಹೋಯಿತಾ? ಮದುವೆ ಮಾಡಿಸಲು ಗಂಡು ಹುಡುಕುತ್ತಿದ್ದೇವೆ, ಸರಿಗಟ್ಟು ಆದ್ರೆ ಈ ಬೇಸಿಗೆಯಲ್ಲೇ ಜಂಬರ ಮುಗಿಸಿ ಬಿಡಬೇಕು ಅಂತ ಮೊನ್ನೆ ಬಾಯಮ್ಮ, ಅಜ್ಜಿ ಜೊತೆ ಹೇಳಿ ಹೋಗಿದ್ದರು. ಇವರಿಗೆಲ್ಲ ಮದುವೆ ಹೊತ್ತಿಗೇ ಯಾಕಾಗಿ ಕೊಲೆ ಬಡಿಯುತ್ತದೋ? ಎಷ್ಟೋ ಬಾರೀ ತನ್ನೊಳಗೆ ಕೇಳಿಕೊಂಡಿದ್ದಳು.

ವೇದಾಳಿಗೆ ಹೊಟ್ಟೆ ನೋವು ಇದೆ, ಅವಳು ಶಾಲೆಗೆ ಬರುವುದಿಲ್ಲ. ಈ ಸಾಮಾನು ಚೀಟಿ ಮರೆಯದೆ ಅಂಗಡಿಯಲ್ಲಿ ಚೆನ್ನಪ್ಪನಿಗೆ ಕೊಟ್ಟುಬಿಡು. ಮತ್ತೆ ವೇದಾಳ ಅಪ್ಪ ಬಂದು ಸಾಮಾನು ತೆಗೆದುಕೊಂಡು ಬರುತ್ತಾರೆ ಅಂತ ಚುಮ್ಮಿ ಕೈಗೆ ಚೀಟಿ ಕೊಡುವಾಗ ಅವಳ ಹಣೆಯಲ್ಲಿ ಬೆವರೊಡೆದು ಕಣ್ಣಿನೊಳಗೆ ಸಣ್ಣ ದಿಗಿಲು ಇಣುಕುತ್ತಿತ್ತು. ಯಾರಿಗೂ ತೋರಿಸಬೇಡ, ನಮ್ಮ ಮನೆ ಸಾಮಾನು ಬೇರೆ ಕಡೆ ಹೋಗಿಬಿಡಬಹುದು ಅಂತ ಎರಡೆರಡು ಬಾರಿ ಎಚ್ಚರಿಸಿ ಕಳಿಸಿದ್ದಳು. ಚೀಟಿಗೆ ಗಟ್ಟಿಯಾಗಿ ಅಂಟು ಅಂಟಿಸಿದ್ದರು ಬೇರೆ. ನಿನಗೆ ಮಿಠಾಯಿ ಇರಲಿ ಅಂತ ಒಂದು ರೂಪಾಯಿ ಬಿಲ್ಲೆಯನ್ನು ಕೊಟ್ಟು ಗಡಿಬಿಡಿಯಿಂದ ಬೇಬಿ ಚೇಚಿ ಹಿಂದಿನ ಬಾಗಿಲಿನಿಂದ ಮನೆ ಹೊಕ್ಕಿದ್ದಳು.

ಚನ್ನಪ್ಪನ ಅಂಗಡಿಗೆ ಹೋಗಿ ಬೇಬಿ ಚೇಚಿ ಕೊಟ್ಟ ಚೀಟಿ ತೋರಿಸಿ ಮತ್ತೆ ಬರ್ತಾರೆ ಅಂತ ಹೇಳಿ ಕೋಲು ಮಿಟಾಯಿ ಕೊಡಿ ಅಂತ ಒಂದು ರೂಪಾಯಿ ಅವರ ಮುಂದೆ ಹಿಡಿದರೆ, ಅಷ್ಟರಲ್ಲಿ ಸಾಮಾನು ಚೀಟಿ ಓದುತ್ತಿದ್ದ ಚೆನ್ನಪ್ಪ ಅಣ್ಣನ ಮುಖದ ಭಾವನೆಗಳಲ್ಲಿ ವ್ಯತ್ಯಾಸ ಆಗುವುದನ್ನು ಅವಳಿಗೆ ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಕೋಲು ಮಿಟಾಯಿ ಕೊಟ್ಟು, ಕೊಟ್ಟ ಒಂದು ರೂಪಾಯಿಯನ್ನು ಹಾಗೇ ವಾಪಸ್ಸು ಕೊಟ್ಟು ಕಳಿಸಿದ್ದರು. ಪಿಟ್ಟಾಸಿ ಚೆನ್ನಪ್ಪಣ್ಣ ಯಾಕೋ ಎಂದಿನಂತೆ ಇವತ್ತು ಇಲ್ಲ ಅಂತ ಅನ್ನಿಸಿದರೂ ಅರೆಕ್ಷಣ ಅದನ್ನು ಮರೆತು ಕೋಲು ಮಿಟಾಯಿ ತಿನ್ನುವ ಗಡಿಬಿಡಿಯಲ್ಲಿ ಓಡಿಹೋಗಿದ್ದಳು.

ಆ ದಿನ ಅವತ್ತಿನಂತೆ ಜಡಿಗುಟ್ಟಿ ಸುರಿಯುವ ಜೋರು ಸಿಡಿಲು ಗುಡುಗು ಮಳೆ. ಮಾರನೇ ದಿನ ಬಂದ ಸುದ್ದಿ, ಬಾಯಮ್ಮನ ಹಟ್ಟಿಗೆ ಸಿಡಿಲು ಬಡಿದದ್ದು, ದನ ಹಗ್ಗ ಬಿಚ್ಚಿಸಿಕೊಂಡು ಬೇಲಿ ಹಾರಿ ಎಲ್ಲೋ ಹೋದದ್ದು, ಮತ್ತೆ ಬೇಬಿ ಚೇಚಿ ಕಾಣೆಯಾದದ್ದು! ಯಾವತ್ತೂ ಮುಚ್ಚದ ಶಾಲೆಯ ಮೈದಾನದ ಬದಿಯ ಚನ್ನಪ್ಪಣ್ಣನ ಅಂಗಡಿ ಬಾಗಿಲು ಕೂಡ ಮಾರನೇ ದಿನ ತೆರೆದಿರಲಿಲ್ಲ ಅನ್ನುವುದೂ ಯಾಕೆಂದು ಗೊತ್ತಾಗಲಿಲ್ಲ. ಒಂದು ರೂಪಾಯಿಯ ನಾಣ್ಯ ಆ ದಿನವೂ ಅವಳ ಕಂಪಾಸ್ ಬಾಕ್ಸಿನೊಳಗೆ ಹಾಗೇ ಉಳಿದು ಹೋಯಿತು. ಕೇಳೋಣವೆಂದರೆ ವೇದಾಳೂ ಇತ್ತೀಚೆಗೆ ಸರಿಯಾಗಿ ಶಾಲೆಗೆ ಬರುತ್ತಿರಲಿಲ್ಲ. ಬಂದರೂ ಮಾತಿಗೆ ಸಿಗುತ್ತಿರಲಿಲ್ಲ. ಒಂದು ವಾರದ ಬಳಿಕ ವೇದಾಳ ಮನೆಯವರೆಲ್ಲ ಹೇಳದೆ ಕೇಳದೆ ಕೇರಳದ ಕಡೆಯ ಅವರ ಮೂಲ ಊರಿಗೆ ಹೊರಟು ಹೋಗಿದ್ದಾರೆ ಅನ್ನುವ ಸುದ್ದಿ ಪುಟ್ಟಸ್ವಾಮಿಯೇ ಅರುಹಿ ಹೋಗಿದ್ದ. ಯಾಕೋ ಮತ್ತೆಂದೂ ಆ ಒಂದು ರೂಪಾಯಿಯನ್ನು ಚುಮ್ಮಿಗೆ ಖರ್ಚು ಮಾಡಬೇಕು ಅಂತ ಅನ್ನಿಸಲೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.