‘ಇನ್ನು ಏಳೆಂಟು ತಿಂಗಳಿಗೆ ಜನರಲ್ ಎಲೆಕ್ಷನ್ ನಡೆಯುತ್ತೆ. ಈಗ ಕ್ಯಾಬಿನೆಟ್ ರೀಷಫಲ್ ಮಾಡೋಕೆ ಹೈಕಮಾಂಡ್ ಒಪ್ಪೋದಿಲ್ಲ. ಅಂಥಾ ರಿಸ್ಕ್ ತಗಳ್ಳೋದು ಬೇಡ ಅನ್ಸುತ್ತೆ. ಪಾರ್ಟಿ ಮತ್ತೆ ಅಧಿಕಾರಕ್ಕೆ ಬರೋದಕ್ಕೆ ಏನು ಮಾಡಬೇಕು ಅನ್ನೋ ಬಗ್ಗೆ ಯೋಚನೆ ಮಾಡೋ ಸಮಯ ಇದು...’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಇವತ್ತು ಬೆಳಿಗ್ಗೆ ಫೋನ್ ಮಾಡಿದ್ದಾಗ ಹೇಳಿದರು....’

ಈ ವಿಷಯವನ್ನು ನಿಮಗೆ ತಿಳಿಸು ಅಂತಲೂ ಹೇಳಿದರು. ಮುಂದಿನ ತಿಂಗಳು ಪಕ್ಷದ ಇನ್‌ಚಾರ್ಜ್ ಸೆಕ್ರೆಟರಿ ಜತೆಗೆ ಇಬ್ಬರು ಅಬ್ಸರ್ವರ್‌ಗಳನ್ನು ಕಳಿಸ್ತಾರಂತೆ! ಅವರು ಬಂದು ಹೋಗೋವರೆಗೆ ಯಾರೂ ಬಹಿರಂಗವಾಗಿ ಪತ್ರಿಕೆಗಳಿಗೆ ಹೇಳಿಕೆ ಕೊಡದಂತೆ ನೋಡಿಕೊಳ್ಳಿ. ಈ ಮಾತು ನಿಮ್ಮ ಮುಖ್ಯಮಂತ್ರಿಗೂ ಅನ್ವಯಿಸುತ್ತೆ ಅಂದರು ಎನ್ನುತ್ತ ರಾಜ್ಯ ಅಧ್ಯಕ್ಷರು ಸಿಎಂ ಸಾಹೇಬರ ಮುಖ ನೋಡಿದರು.

‘ಕೋತಿಗಳನ್ನು ಕಟ್ಟಿಕೊಂಡು ಮಗ್ಗ ನೇಯ್ಯೋದು ಕಷ್ಟ...’ ಅಂತ ಹೈಕಮಾಂಡ್ ಮೆಂಬರುಗಳಿಗೆ ಗೊತ್ತಿಲ್ಲ. ನೀವೇ ನೋಡ್ತಿದ್ದೀರಲ್ಲ. ಕೆಲವರು ಥೇಟ್ ಕೋತಿಗಳ ಥರ ಆಡ್ತಿದ್ದಾರೆ. ಮೀಡಿಯಾ ಮುಂದೆ ಏನು ಹೇಳಬಾರದು ಅನ್ನೋ ಕಾಮನ್‌ಸೆನ್ಸ್ ಕೂಡ ಇಲ್ಲವಲ್ರಿ. ಇಂಥವರನ್ನು ಜತೆಯಲ್ಲಿ ಇಟ್ಟುಕೊಂಡು ಎಲೆಕ್ಷನ್‌ಗೆ ಹೋದರೆ ಏನಾಗಬಹುದು ಯೋಚನೆ ಮಾಡಿ...’ ಕ್ಯಾಬಿನೆಟ್ ರೀಷಫಲ್ ಮಾಡಿ ಮೂರ್ನಾಲ್ಕು ಜನರನ್ನು ಸೇರಿಸಿಕೊಂಡು ಹಳಬರನ್ನು ಪಾರ್ಟಿ ಕೆಲಸಕ್ಕೆ ಬಳಸಿಕೊಳ್ಳೋಣ ಅಂತ ಆರು ತಿಂಗಳಿಂದ ಹೇಳ್ತಾನೆ ಇದ್ದೀನಿ. ಅವರಿಗೆ ಅರ್ಥವೇ ಆಗ್ತಿಲ್ಲ.

ಈಗ ಕ್ಯಾಬಿನೆಟ್ ರೀಷಫಲ್ ಮಾಡಿದರೆ ನಾವು ರಾಜೀನಾಮೆ ಕೊಡ್ತೀವಿ ಅಂತ ಐದಾರು ಸೀನಿಯರ್ ಮಂತ್ರಿಗಳು ಹೈಕಮಾಂಡ್‌ಗೆ ಹೇಳಿದ್ದಾರಂತೆ! ಅವರು ರಾಜೀನಾಮೆ ಕೊಟ್ಟರೆ ಏನೂ ಆಗಲ್ಲ. ಇರ್ಲಿ, ಈಗ ನಾನೇನು ಮಾಡಬೇಕು ಅದನ್ನು ಹೇಳಿ. ಉಳಿದವರಿಗೆ ಅದೇನು ಹೇಳ್ತಿರೋ ನೀವೇ ಹೇಳಿ. ಒಟ್ನಲ್ಲಿ ಪರಿಸ್ಥಿತಿ ತಿಳಿಯಾದರೆ ಸಾಕು. ಅಬ್ಸರ್ವರ್‌ಗಳು ಬಂದು ಹೋದ ಮೇಲೂ ಪರಿಸ್ಥಿತಿ ಸರಿ ಹೋಗುತ್ತೆ ಅಂತ ನಂಗೆ ಅನ್ನಿಸಲ್ಲ ಎಂದು ಮುಖ್ಯಮಂತ್ರಿ ತಮ್ಮ ಬೇಸರ ಹೊರಹಾಕಿದರು.

‘ಮುಂದಿನ ಚುನಾವಣೆಗೆ ನಾನು ಕಂಟೆಸ್ಟ್ ಮಾಡಲ್ಲ ಅಂತ ಹೇಳಿದ್ದೀನಿ. ಪಾರ್ಟಿಯನ್ನು ಮತ್ತೆ ಅಧಿಕಾರಕ್ಕೆ ತರೋ ಜವಾಬ್ದಾರಿ ನಂದು. ಚುನಾವಣೆ ಆದ ಮೇಲೆ ನೀವು ಹೇಳಿದವರಿಗೆ ಅಧಿಕಾರ ವಹಿಸಿಕೊಟ್ಟು ರಾಜಕೀಯದಿಂದ ರಿಟೈರ್ ಆಗ್ತೀನಿ ಅಂತ ಹೈಕಮಾಂಡ್‌ಗೆ ಹೇಳಿದ್ದೀನಿ...’ ಎನ್ನುತ್ತ ಮುಖ್ಯಮಂತ್ರಿ ಇನ್ನೊಂದು ದಾಳ ಉರುಳಿಸಿ ಅಧ್ಯಕ್ಷರ ಮುಖ ನೋಡಿದರು.

ಸಿ ಎಂ ಲೀಡರ್‌ಶಿಪ್‌ನಲ್ಲಿ ಎಲೆಕ್ಷನ್‌ಗೆ ಹೋದರೆ ನಮ್ಮ ಪಕ್ಷಕ್ಕೆ ಐವತ್ತು ಸೀಟೂ ಬರಲ್ಲ ಎಂದು ರೆವಿನ್ಯೂ ಮಿನಿಸ್ಟರ್ ಹೈಕಮಾಂಡ್‌ನವರಿಗೆ ಹೇಳಿದ್ದಾರೆ ಅನ್ನೋದು ನಂಗೆ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲ್ಲ ಅಂತ ಮೀಡಿಯಾ ಸರ್ವೆಗಳು ಹೇಳ್ತಿವೆ. ನಾನು ಒಂದು ಸರ್ವೆ ಮಾಡಿಸಿದ್ದೀನಿ. ಅದು ನಮ್ಮ ಪರವಾಗಿದೆ. ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ಹೇಳಿಯೇ ನಾವು ಓಟು ಕೇಳಬೇಕು. ಅದನ್ನು ಬಿಟ್ಟು ಬೇರೆ ದಾರಿ ಏನಿದೆ? ಪಕ್ಷ ಮತ್ತು ಸರ್ಕಾರದ ವರ್ಚಸ್ಸು ಹೆಚ್ಚಿಸಲು ಏನಾದರೂ ಮಾಡಬೇಕು. ಚಂದ್ರದುರ್ಗ ಜಿಲ್ಲೆಯಲ್ಲಿ ಸರ್ಕಾರದ ಸಾಧನೆಗಳ ಸಮಾವೇಶ ಮಾಡ್ತೀನಿ ಅಂತ ಹೈಕಮಾಂಡ್‌ಗೆ ಹೇಳಿ ಬಂದಿದ್ದೀನಿ. ಇದು ವಾರ್ ಟೈಮ್. ನಾಳೆಯೇ ಚುನಾವಣೆ ಅಂದುಕೊಂಡು ನಾವು ಕೆಲಸ ಮಾಡಬೇಕಾಗುತ್ತೆ. ಎಲ್ಲಾ ಎಂಎಲ್ಲೆಗಳಿಗೂ ಅವರವರ ಕಾನ್ಸ್ಟಿಯೆನ್ಸಿಗಳಲ್ಲಿ ಓಡಾಡಿ ಪಕ್ಷದ ಸಂಘಟನೆಗೆ ಗಮನ ಕೊಡಿ ಅಂತ ಹೇಳ್ತೀನಿ. ನೀವೂ ಅಷ್ಟೇ, ಯಾರಿಗೇ ಟಿಕೆಟ್ ಕೊಟ್ಟರೂ ಪಕ್ಷದ ಗೆಲುವಿಗೆ ಕೆಲಸ ಮಾಡಬೇಕು ಅಂತ ಸ್ಟ್ರಿಕ್ಟಾಗಿ ಹೇಳಿ ಬಿಡಿ...’ ಎಂದು ಮುಖ್ಯಮಂತ್ರಿ ಹೇಳಿದರು.

ನನ್ನ ಕ್ಯಾಬಿನೆಟ್‌ನಲ್ಲಿರೋ ಮೂರ್ನಾಲ್ಕು ಸೀನಿಯರ್ ಮಂತ್ರಿಗಳನ್ನು ಪಾರ್ಲಿಮೆಂಟ್ ಎಲೆಕ್ಷನ್ನಿಗೆ ನಿಲ್ಲಿಸೋಣ ಅಂತ ಹೈಕಮಾಂಡ್‌ಗೆ ಹೇಳಿದ್ದೀನಿ. ಯಾರನ್ನು ನಿಲ್ಲಿಸಬೇಕು ಅನ್ನೋದು ಅವರಿಗೆ ಬಿಟ್ಟ ವಿಷಯ. ನಾಳೆಯೇ ನೀವು ರೆವಿನ್ಯೂ ಮಿನಿಸ್ಟರ್ ಜತೆ ಮಾತಾಡಿ. ಈಗ್ಲೇ ಸಿಎಂ ಆಗಬೇಕು ಅಂತ ಕುಣಿತಿರೋದು ಅವರೇ ಎನ್ನುತ್ತ ಮುಖ್ಯಮಂತ್ರಿ ಅಧ್ಯಕ್ಷರ ಮುಖ ನೋಡಿದರು.

ಮೂರುವರ್ಷ ನಾನು ಸಿಎಂ ಆಗಿರ್ತೀನಿ. ಆಮೇಲೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡ್ತೀನಿ. ನಂತರ ನೀವೇ ಸಿಎಂ ಆಗಿ. ಅಲ್ಲೀವರೆಗೆ ನನ್ನ ಕ್ಯಾಬಿನೆಟ್‌ನಲ್ಲಿ ನಂಬರ್ ಟು ಆಗಿದ್ದುಕೊಂಡು ನಂಗೆ ಸಹಾಯ ಮಾಡಿ ಎಂದು ಮುಖ್ಯಮಂತ್ರಿ ಪ್ರಮಾಣ ಸ್ವೀಕಾರದ ದಿನ ಹೈಕಮಾಂಡ್‌ನಿಂದ ಅಬ್ಸರ್ವರ್‌ಗಳ ಸಮಕ್ಷಮದಲ್ಲಿ ಹೇಳಿದ್ದು ರೆವಿನ್ಯೂ ಮಂತ್ರಿಗಳಿಗೆ ನೆನಪಾಯಿತು. ನೀವು ಹೇಳಿದಂತೆ ಮೂರು ವರ್ಷ ಆಯ್ತು ಎಂದು ನೆನಪು ಮಾಡಿದರೂ ಮುಖ್ಯಮಂತ್ರಿ ರಾಜೀನಾಮೆ ಕೊಡಲು ಒಪ್ಪಲಿಲ್ಲ.

‘ನಾನೇ ಅಧಿಕಾರದಲ್ಲಿ ಇರಬೇಕು ಎಂದು ರಾಜ್ಯದ ಜನರು ಹೇಳ್ತಿದ್ದಾರೆ...ಶಾಸಕಾಂಗ ಪಕ್ಷದಲ್ಲೂ ನಂಗೇ ಮೆಜಾರಿಟಿ ಇದೆ. ಇನ್ನು ಎರಡೇ ವರ್ಷ. ಅಷ್ಟೊತ್ತಿಗೆ ನಂಗೆ ಎಪ್ಪತ್ತೈದು ತುಂಬುತ್ತೆ. ಆಮೇಲೆ ರಾಜಕಾರಣದಿಂದ ನಿವೃತ್ತಿ ಆಗ್ತೀನಿ...’ ಎಂದು ಸಿಎಂ ಹೇಳುತ್ತ ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದ್ದು ಕಂದಾಯ ಮಂತ್ರಿಗಳಿಗೆ ನೆನಪಾಯಿತು.

‘ನೀವು ನಮ್ಮ ನಾಯಕರಿಗೆ ಅನ್ಯಾಯ ಮಾಡಿದಿರಿ ಎಂದು ಪಕ್ಷದ ಶಾಸಕಾಂಗ ಸಭೆಯಲ್ಲಿ ರೆವಿನ್ಯೂ ಮಂತ್ರಿಗಳ ಬೆಂಬಲಿಗರು ಮುಖ್ಯಮಂತ್ರಿ ಎದುರು ನೇರವಾಗಿ ಹೇಳಿ ಗದ್ದಲ ಎಬ್ಬಿಸಿದ್ದರು. ಆಗ ಮುಖ್ಯಮಂತ್ರಿಗಳು ಕ್ಯಾಬಿನೆಟ್ ರೀಷಫಲ್ ಮಾಡಿ ಸೀನಿಯರ್ ಮಂತ್ರಿಗಳನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಿ ಎಂದು ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸಿದ್ದರು. ಅದು ಸುಳ್ಳು ಎನ್ನುವುದು ಗೊತ್ತಾದ ಮೇಲೆ ರೆವಿನ್ಯೂಮಂತ್ರಿಗಳು ಮುಖ್ಯಮಂತ್ರಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಲು ಆರಂಭಿಸಿದರು. ತಮ್ಮ ಬೆಂಬಲಿಗರ ಜತೆ ಸೇರಿಕೊಂಡು ಮುಖ್ಯಮಂತ್ರಿ ವಿರುದ್ಧ ಹೈಕಮಾಂಡಿಗೆ ಗುಟ್ಟಾಗಿ ದೂರು ಕೊಟ್ಟು ಬಂದಿದ್ದರು.

‘ಈ ಅಧಿಕಾರ, ಕಾರು, ಬಂಗಲೆ ಶಾಶ್ವತ ಅಲ್ಲ. ಕುರ್ಚಿಗೆ ಅಂಟಿಕೊಂಡು ಕೂರುವುದು ನನ್ನ ಜಾಯಮಾನ ಅಲ್ಲ...’ ಸಿಎಂ ಸಾಹೇಬರೇ ನನ್ನ ನಾಯಕರು. ಅವರು ನನ್ನ ರಾಜಕೀಯ ಗುರುಗಳು. ಅವರ ಲೀಡ್‌ಶಿಪ್‌ನಲ್ಲೇ ಚುನಾವಣೆಗೆ ಹೋಗಬೇಕು ಎಂದು ಹೈಕಮಾಂಡ್‌ಗೆ ಹೇಳಿದ್ದೀನಿ. ಆದರೂ ಅವರಿಗೆ ನನ್ನ ಮಾತಿನಲ್ಲಿ ವಿಶ್ವಾಸ ಬರ್ತಿಲ್ಲ. ಈಚೆಗೆ ಪ್ರತಿಯೊಂದಕ್ಕೂ ನನ್ನನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ನಾನು ಅವರ ಕಾಂಪಿಟೇಟರ್ ಅನ್ನೋ ಥರ ಟ್ರೀಟ್ ಮಾಡ್ತಿದ್ದಾರೆ. ನಂಗೆ ಸಿಎಂ ಆಗೋ ಆಸೆ ಖಂಡಿತ ಇಲ್ಲ ಸಾರ್. ಮುಂದಿನ ಸಲ ನಂಗೆ ಟಿಕೆಟ್ ಕೊಡದಿದ್ದರೂ ನಾನು ಪಕ್ಷ ಬಿಟ್ಟು ಹೋಗಲ್ಲ ಎಂದು ರೆವಿನ್ಯೂ ಮಂತ್ರಿಗಳು ರಾಜ್ಯ ಅಧ್ಯಕ್ಷರ ಜತೆ ಮಾತಾಡುವಾಗ ಸ್ಪಷ್ಟವಾಗಿ ಹೇಳಿದರು. ಹೈಕಮಾಂಡ್ ಹೇಳಿದರೆ ಈಗಲೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕಾರಣಕ್ಕೆ ನಿವೃತ್ತಿ ಘೋಷಿಸಿ ಮನೆಗೆ ಹೋಗಿಬಿಡ್ತೀನಿ ಎನ್ನುತ್ತ ಕಂದಾಯ ಮಂತ್ರಿಗಳು ಹೊಸ ದಾಳ ಉರುಳಿಸಿದರು.

ನಾಲ್ಕೂವರೆ ವರ್ಷಗಳಿಂದ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗೋತನಕ ಪುರುಸೊತ್ತೇ ಸಿಗ್ತಿಲ್ಲ ಅಂತ ಕಂದಾಯ ಮಂತ್ರಿಗಳು ಬೇಸರ ಮಾಡಿಕೊಂಡಿದ್ದರು. ಪ್ರತಿ ದಿನ ನೂರಾರು ಫೋನ್‌ಗಳು ಬರ್ತವೆ. ಫೋನ್ ಮಾಡಿದವರ ಮಾತುಗಳನ್ನು ಸುಮ್ಮನೆ ಕೇಳಿಸಿಕೊಂಡು, ಅವರಿಗೆ ಇಷ್ಟವಾಗುವ ಉತ್ತರ ಹೇಳಿ ಹೇಳಿ ನಂಗೆ ಸಾಕಾಗಿದೆ. ಕೆಲಸ ಕೊಡಿಸಿ, ಸೈಟು ಕೊಡಿಸಿ. ವರ್ಗ ಮಾಡಿಸಿಕೊಡಿ. ಪ್ರಮೋಷನ್ ಕೊಡಿಸಿ, ಡೀಸಿಗೆ ಒಂದು ಮಾತು ಹೇಳಿ. ಪ್ರಶಸ್ತಿ ಕೊಡಿಸಿ, ನನ್ನದೊಂದು ಜಮೀನು ಕೇಸು ಕೋರ್ಟಿನಲ್ಲಿದೆ ರಾಜಿ ಮಾಡಿಸಿ. ನಮ್ಮಪ್ಪನಿಗೆ ಎರಡೂ ಕಿಡ್ನಿಗಳಿಲ್ಲ. ಡಯಾಲಿಸಿಸ್ ಮಾಡಿಸೋಕೆ ದುಡ್ಡಿಲ್ಲ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ದುಡ್ಡು ಕೊಡಿಸಿ. ನಮ್ಮ ಜಾತಿಯವರ ಸಮಾವೇಶ ಮಾಡ್ತಿದ್ದೀವಿ, ದುಡ್ಡು ಕಡಿಮೆ ಬಿದ್ದಿದೆ ಸಹಾಯ ಮಾಡಿ. ಮಗಳ ಮದುವೆಗೆ ಬನ್ನಿ. ದೇವಸ್ಥಾನ ಕಟ್ಟಿದ್ದೀವಿ ಬಂದು ಉದ್ಘಾಟನೆ ಮಾಡಿ ಅಂತ ಕೇಳಿಕೊಂಡು ಬರೋ ಜನರ ಕಾಟ ತಡೆಯಲಾರದೆ ರೆವಿನ್ಯೂ ಮಂತ್ರಿಗಳು ಬೇಸತ್ತಿದ್ದರು. ಇನ್ನೂ ಏಳೆಂಟು ತಿಂಗಳು ಈ ಕಿರಿಕಿರಿಯನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ ಅನ್ನಿಸಿ ತಮ್ಮ ಪಿಎಯನ್ನು ಕರೆದು ನೋಡ್ರಿ ಜಾಧವ್, ಏನಾದರೂ ಮಾಡಿ ನನ್ನ ನೋಡೋಕೆ ಬರೋ ಜನರನ್ನು ಸ್ವಲ್ಪ ಕಂಟ್ರೋಲ್ ಮಾಡ್ರಿ. ಜನರನ್ನು ನೋಡಿದರೆ ನನ್ನ ಬೀಪಿ ಜಾಸ್ತಿ ಆಗುತ್ತೆ ಎಂದಿದ್ದರು.

‘ನಾನು ಮಿನಿಸ್ಟರ್ ಸಂಬಂಧಿಕ, ಫ್ರೆಂಡು, ಪಾರ್ಟಿ ವರ್ಕರ್, ಕ್ಲಾಸ್‌ಮೇಟು, ಪರಿಚಯದವನು, ಕಾನ್ಸ್ಟಿಯೆನ್ಸಿಯವನು ಅಂತ ಹೇಳಿಕೊಂಡು ಬರೋರನ್ನು ಮನೆ, ಆಫೀಸಿನೊಳಕ್ಕೆ ಬಿಡಬೇಡ ಅಂತ ಸೆಕ್ಯುರಿಟಿಯವನಿಗೆ ಹೇಳ್ರಿ...’ ಆದರೆ ಬರೋ ಜನರಿಗೆ ಬೇಸರ ಆಗದಂತೆ ನೋಡಿಕೊಳ್ಳಿ. ನನ್ನನ್ನು ನೋಡಲೇಬೇಕು ಅಂತ ಒತ್ತಾಯ ಮಾಡೋರಿಗೆ ಸಾಹೇಬರು ಹೈಕಮಾಂಡ್ ಮೆಂಬರ್ ಜತೆ ಏನೋ ಡಿಸ್ಕಸ್ ಮಾಡ್ತಿದ್ದಾರೆ, ಈಗ ನೀವು ಹೋದರೆ ಅವರಿಗೆ ಡಿಸ್ಟರ್ಬ್ ಆಗುತ್ತೆ ಅನ್ನಿ. ಭೇಟಿ ಮಾಡಿಕೊಂಡೇ ಹೋಗ್ತೀವಿ ಅನ್ನೋರಿಗೆ ಇವತ್ತೊಂದು ಇಂಪಾರ್ಟೆಂಟ್ ಮೀಟಿಂಗ್ ಇದೆ. ಅದು ಮುಗಿದ ಮೇಲೆ ಆಫೀಸಿನಲ್ಲಿ ಫ್ರೀಯಾಗಿರ್ತಾರೆ. ಅಲ್ಲಿಗೇ ಬಂದು ಭೇಟಿಯಾಗಿ ಅಂತ ಹೇಳಿಕಳಿಸಿ. ಆಫೀಸಿನ ಹತ್ತಿರ ಬಂದವರಿಗೆ ಸಾಹೇಬರು ಸಿಎಂ ಚೇಂಬರ್‌ಗೆ ಹೋಗಿದ್ದಾರೆ ಅನ್ನಿ. ಸಂಜೆ ಪೇಪರ್‌ಮಿಲ್ ಗೆಸ್ಟ್‌ಹೌಸ್‌ಗೆ ಬನ್ನಿ ಅಲ್ಲಿ ಫ್ರೀಯಾಗಿ ಮಾತಾಡಬಹುದು ಅನ್ನಿ. ಅವೇಳೆಯಲ್ಲಿ ಮನೆಗೆ ಬರೋರಿಗೆ ಸಾಹೇಬರು ಹೈಕಮಾಂಡ್‌ನ ಮೆಂಬರೊಬ್ಬರನ್ನು ಕಳಿಸಲು ಏರ್‌ಪೋರ್ಟಿಗೆ ಹೋಗ್ತಿದ್ದಾರೆ ಅಂತ ಹೇಳಿ ಸಾಗಹಾಕ್ರಿ. ಎರಡು, ಮೂರು ದಿನ ಮನೆ, ಆಫೀಸಿಗೆ ಅಲೆದು ಸಾಕಾದ ಮೇಲೆ ಅವರೇ ಸುಮ್ಮನಾಗ್ತಾರೆ...’ ಎಂದು ಹೇಳಿದ್ದರು. ಯಾರೇ ಅರ್ಜಿಕೊಟ್ಟರೂ ಇಸ್ಕಳದನ್ನ ಮರೆಯಬೇಡಿ. ಅರ್ಜಿ ಕೊಟ್ಟವರ ಹೆಸರನ್ನು ಒಂದು ರಿಜಿಸ್ಟರಿನಲ್ಲಿ ಬರೆದುಕೊಳ್ಳಿ. ಅರ್ಜಿಗಳನ್ನು ಆಯಾ ಇಲಾಖೆಗೆ ಕಳಿಸಿಕೊಡಿ ಎಂದು ಸ್ಪಷ್ಟವಾಗಿ ಹೇಳಿದ್ದರು.

ಮಂತ್ರಿಗಳ ಮಾತು ಕೇಳಿ ಜಾಧವ್‌ಗೆ ಆಶ್ಚರ್ಯವಾಗಿತ್ತು. ಏಳೆಂಟು ತಿಂಗಳಲ್ಲಿ ಎಲೆಕ್ಷನ್ ಇಟ್ಟುಕೊಂಡು ಮನೆ ಬಾಗಿಲಿಗೆ ಬರೋ ಜನರನ್ನು ಕಂಟ್ರೋಲ್ ಮಾಡು ಅಂತಿದ್ದಾರಲ್ಲ ಸಾಹೇಬರು! ಏನಾಗಿದೆ ಅವರಿಗೆ? ಅನ್ನಿಸಿದರೂ ಏನೂ ಹೇಳದೆ ಸಾಹೇಬರ ಆದೇಶವನ್ನು ಜಾಧವ್ ಪಾಲಿಸಿದ್ದ.

‘ಸಾಹೇಬರಿಗೆ ಮೂರು ಖಾತೆಗಳ ಜವಾಬ್ದಾರಿ ಇದೆ. ನೆಮ್ಮದಿಯಾಗಿ ಊಟ, ತಿಂಡಿ ಮಾಡೋದಕ್ಕೂ ಅವರಿಗೆ ಪುರಸೊತ್ತಿಲ್ಲ ಎಂದು ಬಂದ ಜನಗಳ ಎದುರು ಹೇಳಲು ಶುರು ಮಾಡಿದ. ಕಾನ್ಸ್ಟಿಯೆನ್ಸಿಯಿಂದ ಬಂದವರಿಗೆ ಮುಂದಿನವಾರ ಸಾಹೇಬರು ನಿಮ್ಮೂರಿಗೆ ಬರ್ತಾರೆ. ಅಲ್ಲೇ ಭೇಟಿ ಮಾಡಿ ಅಂತ ಹೇಳಿ ಕಳಿಸುತ್ತಿದ್ದ. ಮಂತ್ರಿಗಳನ್ನು ನೋಡದೆ ಹಾಗೇ ಹೋಗಲು ಜನರಿಗೆ ಬೇಸರವಾದರೂ ಜಾಧವ್‌ನ ವಿನಯದ ನಡವಳಿಕೆಗಳು ಎಲ್ಲರಿಗೂ ಇಷ್ಟವಾಗಿದ್ದವು.

‘ಡೀಸಿ ಆಫೀಸಲ್ಲಿ ಒಂದು ಸಣ್ಣ ಕೆಲಸ ಆಗಬೇಕಿತ್ತು. ಸಾಹೇಬರಿಂದ ಹೇಳಿಸೋಣ ಅಂತ ಹೋಗಿದ್ದೆ. ಮೂರು ದಿನ ಎರಡೂ ಹೊತ್ತು ಅವರ ಬಂಗಲೆ,ಮೂರನೇ ಮಹಡಿಯ ಆಫೀಸಿಗೆ ಹೋದರೂ ಸಾಹೇಬರನ್ನು ಭೇಟಿ ಮಾಡೋಕೆ ಆಗಲಿಲ್ಲ...’ ಎಂದು ಪಾಳ್ಯದ ಹಾಲಪ್ಪ ಬೇಸರದಿಂದ ಹೇಳಿದ್ದನ್ನು ಕೇಳಿ ಜಯದೇವನಿಗೆ ಆಶ್ಚರ್ಯವಾಯಿತು. ಹಾಲಪ್ಪ ರೆವಿನ್ಯೂ ಮಂತ್ರಿಗಳ ಕಾನ್ಸ್ಟಿಯೆನ್ಸಿಯ ಶ್ರೀಮಂಗಲ ಹೋಬಳಿಯವನು. ತಾಲ್ಲೂಕು ಪಂಚಾಯ್ತಿಯ ಮಾಜಿ ಮೆಂಬರ್. ಈಗ ರೂಲಿಂಗ್ ಪಾರ್ಟಿಯ ಪ್ರಮುಖ ಕಾರ್ಯಕರ್ತ. ಈ ಜಯದೇವ ಪಾರ್ಟಿಯ ತಾಲ್ಲೂಕು ಅಧ್ಯಕ್ಷ ಮತ್ತು ರೆವಿನ್ಯೂ ಮಂತ್ರಿಗಳ ರೈಟ್‌ಹ್ಯಾಂಡ್. ಅವನೇ ಅವರ ಬೇನಾಮಿ ಎಂದು ಜನ ಮಾತಾಡಿಕೊಳ್ಳುತ್ತಿದ್ದರು.

‘ಎಲೆಕ್ಷನ್ ಟೈಮಲ್ಲಿ ಎರಡು ತಿಂಗ್ಳು ಹೊಲ,ಮನೆ ಬಿಟ್ಟು ಕಾನ್ಸ್ಟಿಯೆನ್ಸಿ ತುಂಬಾ ಓಡಾಡಿ ಸಾಹೇಬರ ಪರ ಪ್ರಚಾರ ಮಾಡಿದ್ದೆ ಅನ್ನೋದು ನಿಮಗೂ ಗೊತ್ತಲ್ಲ ಜಯದೇವಪ್ಪ. ನಮ್ಮ ಹೋಬಳಿ ಜನರಿಂದ ಒಂದೂವರೆ ಲಕ್ಷ ರುಪಾಯಿ ಚಂದಾ ಎತ್ತಿ ಎಲೆಕ್ಷನ್ ಖರ್ಚಿಗೆ ಅಂತ ಸಾಹೇಬರಿಗೆ ಕೊಡಿಸಿದ್ದೆ! ಅವರಿಗೆ ಅದರ ನೆನಪೇ ಇಲ್ಲವಲ್ರಿ! ನನ್ನಂಥವನಿಗೇ ಹಿಂಗಾದರೆ ಸಾಮಾನ್ಯ ಜನರ ಗತಿ ಏನು...’ ಎಂದು ಹಾಲಪ್ಪ ಬೇಸರ ಹೊರಹಾಕಿದ್ದ.

‘ನೀವು ಹೇಳ್ತಿರೋದು ನಿಜವೇನ್ರಿ ಹಾಲಪ್ಪ? ಸಾಹೇಬರು ಹಂಗೆ ಮಾಡೋರಲ್ಲ. ಎಲ್ಲೋ, ಏನೋ ಎಡವಟ್ಟಾಗಿದೆ. ಅವರು ಅದೇನು ಟೆನ್ಷನ್‌ನಲ್ಲಿದ್ದರೊ? ಈಚೆಗೆ ಅವರು ಕಾನ್ಸ್ಟಿಯೆನ್ಸಿಗೂ ಬಂದಿಲ್ಲ. ಮೂರು ಖಾತೆಗಳ ಜವಾಬ್ದಾರಿ. ಎರಡು ಜಿಲ್ಲೆಗಳ ಉಸ್ತುವಾರಿ ನೋಡೋಕೆ ಅವರಿಗೆ ಟೈಮು ಸಾಕಾಗಲ್ಲ. ಸಾಹೇಬರ ಪಿಎಗೆ ನೀವು ಯಾರು ಅಂತ ಗೊತ್ತಿಲ್ಲ ಅನ್ಸುತ್ತೆ. ನಾನು ಸಾಹೇಬರ ಕಾನ್ಸ್ಟಿಯೆನ್ಸಿಯಿಂದ ಬಂದಿದ್ದೀನಿ ಅಂತ ಹೇಳಬೇಕಿತ್ತು....’ ನೀವು ಬೇಜಾರು ಮಾಡಿಕೊಳ್ಳಬೇಡಿ. ಸಾಹೇಬರು ಮುಂದಿನ ತಿಂಗಳ ಮೊದಲ ವಾರ ಬರೋ ಪ್ರೋಗ್ರಾಮಿದೆ. ಎರಡು ದಿನ ಇಲ್ಲೇ ಕ್ಯಾಂಪ್ ಮಾಡ್ತಾರೆ. ನಿಮ್ಮ ಕೆಲಸವೇನು ಅಣತ ನಂಗೆ ಹೇಳ್ರಿ. ನಾನು ಸಾಹೇಬರಿಗೆ ಹೇಳಿ ಮಾಡಿಸಿಕೊಡ್ತೀನಿ...’ ಎಂದು ಜಯದೇವ ಹೇಳಿದರೂ ಹಾಲಪ್ಪನ ಬೇಸರ ಕಡಿಮೆ ಆಗಲಿಲ್ಲ.

‘ಹಾಲಪ್ಪ, ನಿಮಗೆ ವಿಷಯ ಗೊತ್ತಿಲ್ಲ ಅನ್ನಿಸುತ್ತೆ. ಪಾರ್ಟಿಯಲ್ಲಿ ಏನೇನೋ ಬದಲಾವಣೆಗಳು ಆಗ್ತಿವೆ! ಸಿಎಂ ಸಾಹೇಬರು ಹಲವಾರು ಹಗರಣಗಳಲ್ಲಿ ಸಿಕ್ಕಿಕೊಂಡು ಹೆಸರು ಕೆಡಿಸಿಕೊಂಡಿದ್ದಾರಂತೆ! ಈಚೆಗೆ ಅವರ ಆರೋಗ್ಯವೂ ಸರಿ ಇಲ್ಲವಂತೆ. ಅವರನ್ನು ಮುಂದಿಟ್ಟುಕೊಂಡು ಎಲೆಕ್ಷನ್ನಿಗೆ ಹೋದರೆ ಪಕ್ಷ ಗೆಲ್ಲಲ್ಲ ಅನ್ನೋದು ಹೈಕಮಾಂಡ್‌ಗೆ ಗೊತ್ತಾಗಿದೆಯಂತೆ! ಕಳೆದ ವಾರ ನಮ್ಮ ಸಾಹೇಬರನ್ನು ದೆಹಲಿಗೆ ಕರೆಸಿಕೊಂಡು ಮುಂದಿನ ಚುನಾವಣೆಯ ಉಸ್ತುವಾರಿ ವಹಿಸಿಕೊಳ್ಳೋಕೆ ನೀವು ಮಾನಸಿಕವಾಗಿ ಸಿದ್ಧರಾಗಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರೇ ಹೇಳಿದರಂತೆ! ಇದು ಗೊತ್ತಾದ ಮೇಲೆ ಸಿಎಂ ಸಾಹೇಬರು ಅಪ್‌ಸೆಟ್ ಆಗಿದ್ದಾರಂತೆ! ಕ್ಯಾಬಿನೆಟ್ ರೀಷಫಲ್ ಮಾಡಿ ನಮ್ಮ ಸಾಹೇಬರೂ ಸೇರಿದಂತೆ ಐದಾರು ಜನರನ್ನು ಸಂಪುಟದಿಂದ ಕೈಬಿಡ್ತೀನಿ ಅಂತ ಹೇಳಿದರಂತೆ ಅಂತ ರೂಮರ್ ಹರಿದಾಡ್ತಿದೆ. ಅದರಿಂದಾಗಿ ನಮ್ಮ ಸಾಹೇಬರಿಗೆ ಟೆನ್ಷನ್ ಶುರುವಾಗಿರಬಹುದು. ಇಂಥ ಸಮಯದಲ್ಲಿ ನಾವು ಅವರ ಜತೆಯಲ್ಲಿ ಇರಬೇಕು. ಕಷ್ಟದ ದಿನಗಳಲ್ಲಿ ಸಾಹೇಬರ ಕೈಬಿಡಬಾರದು. ಎಲ್ಲ ಸರಿ ಹೋಗುತ್ತೆ, ನೀವು ಆರಾಮಾಗಿರಿ. ಸಾಹೇಬರಿಗೆ ಹೇಳಿ ನಿಮ್ಮ ಕೆಲಸ ಮಾಡಿಸಿಕೊಟ್ರೆ ಆಯ್ತಲ್ಲ ಎಂದು ಜಯದೇವ ಸಮಾಧಾನ ಮಾಡುವ ಪ್ರಯತ್ನ ಮಾಡಿದ.

‘ಆರು ತಿಂಗಳಿಂದ ಕ್ಯಾಬಿನೆಟ್ ರೀಷಫಲ್ ಆಗುತ್ತೆ ಅಂತ ಹೇಳ್ತಲೇ ಇದ್ದಾರೆ. ನಂಗೂ ಅಲ್ಪಸ್ವಲ್ಪ ರಾಜಕೀಯ ಅರ್ಥವಾಗುತ್ತೆ. ನಂಗೀಗ ಐವತ್ತು ವರ್ಷ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಇದ್ದು ನೋಡಿದ್ದೀನಿ. ರಾಜಕೀಯದಲ್ಲಿ ಈ ದಿನ, ಈ ಕ್ಷಣ ಮುಖ್ಯ. ನಾಳೆ ಏನಾಗುತ್ತೆ ಅನ್ನೋದು ಯಾರಿಗೆ ಗೊತ್ತು?

‘ಈಗ ಸಾಹೇಬರ ಟೈಮು ನಡೀತಿದೆ. ಅಧಿಕಾರ ಅನ್ನೋದು ಕುಣಿಯೋ ಹುಡುಗಿ ಇದ್ದಂಗೆ. ಅವಳು ಈಗ ಸಾಹೇಬರ ಮನೆ ಮುಂದೆ ಕುಣೀತಿದ್ದಾಳೆ. ಅವಳು ಮುಂದಿನ ಮನೆಗೆ ಹೋಗೋ ಕಾಲ ಬರುತ್ತೆ...’ ಎಂದು ಮಾರ್ಮಿಕವಾಗಿ ಹೇಳಿ ಜಯದೇವನ ಉತ್ತರಕ್ಕೆ ಕಾಯದೆ ಆಫೀಸಿನಿಂದ ಎದ್ದು ಹೋಗಿದ್ದ.

ಅವತ್ತು ಭಾನುವಾರ. ರೆವಿನ್ಯೂ ಮಂತ್ರಿಗಳನ್ನು ಭೇಟಿಯಾಗಲು ಅವರ ಕಾನ್ಸ್ಟಿಯೆನ್ಸಿಯ ಏಳೆಂಟು ಯುವಕರು ಬಂದರು. ಗರಿ,ಗರಿ ಬಿಳೀ ಜುಬ್ಬಾ, ಪ್ಯಾಂಟು ತೊಟ್ಟಿದ್ದರು. ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳಾಗಿ ನಿಂತು ಗೆದ್ದು ಜನಸೇವೆ ಮಾಡುವ ಉಮೇದಿನಲ್ಲಿದ್ದರು. ಬಂದವರಲ್ಲಿ ಮೂವರು ಸಾಹೇಬರು ಚುನಾವಣೆಗೆ ನಿಂತಿದ್ದಾಗ ಅವರ ಬಾಡಿಗಾರ್ಡ್‌ಗಳಂತೆ ಇದ್ದವರು. ಒಬ್ಬ ಅವರ ಸ್ವಂತ ತಂಗಿಯ ಮಗ. ಚಿದಾನಂದಮೂರ್ತಿ ಅಂತ ಅವನ ಹೆಸರು. ಮಾವನಿಗೆ ಹೇಳಿ ನಿಮಗೆ ಕೆಲಸ ಕೊಡಿಸ್ತೀನಿ ಅನ್ನೋ ಭರವಸೆ ಕೊಟ್ಟು ತನ್ನ ಜತೆ ಇಬ್ಬರನ್ನು ಕರೆದುಕೊಂಡು ಬಂದಿದ್ದ!

ಬೆಳಗಿನ ಎಂಟರ ಹೊತ್ತು. ರೆವಿನ್ಯೂ ಮಂತ್ರಿಗಳ ಹೋಂ ಆಫೀಸಿನ ಮುಂದೆ ಜನ ಸೇರಿದ್ದರು. ಏಳೆಂಟು ಜನ ಅರ್ಚರು ಕೈಯಲ್ಲಿ ಹೂವಿನ ಹಾರ, ದೇವರ ಪ್ರಸಾದ ಹಿಡಿದು ಮಂತ್ರಿಗಳು ಹೊರ ಬರುವುದನ್ನೇ ಎದುರು ನೋಡುತ್ತಿದ್ದರು. ಮುಜರಾಯಿ ಇಲಾಖೆಯಿಂದ ಬರಬೇಕಿದ್ದ ಸಂಬಳದ ಬಾಕಿ ಹಣ ಬಿಡುಗಡೆ ಮಾಡಿಸುವಂತೆ ಕೇಳಿಕೊಳ್ಳಲು ಬಂದಿದ್ದರು. ಮೈಸೂರು ಕಡೆಯ ಹಳ್ಳಿಯೊಂದರಿಂದ ಬಂದಿದ್ದ ಕೆಲವರು ತಮ್ಮೂರಿನ ನರಸಿಂಹ ದೇವರಿಗೆ ಹೊಸ ತೇರು ಮಾಡಿಸೋದಕ್ಕೆ ಅರಣ್ಯ ಇಲಾಖೆಯಿಂದ ಸಾಗವಾನಿ ಮರ ಕೊಡಿಸುವಂತೆ ಕೇಳಲು ಬಂದಿದ್ದರು. ಹದಿನೈದಿಪ್ಪತ್ತು ಜನ ನಿರುದ್ಯೋಗಿಗಳು ಕೆಲಸ ಕೊಡಿಸಿ ಅಂತ ಕೇಳಲು ಬಂದಿದ್ದರು.

ಕಾನ್ಸ್ಟಿಯೆನ್ಸಿ ಬಂದ ಯುವಕರು ಮಂತ್ರಿಗಳ ಮನೆಯ ಕಾರಿಡಾರಿನಲ್ಲಿ ನಿಂತು ತಲೆ ಬಾಚಿಕೊಂಡು ಬಟ್ಟೆಗಳನ್ನು ಸರಿ ಮಾಡಿಕೊಂಡು ಮನೆಯೊಳಕ್ಕೆ ಹೋಗಲು ರೆಡಿಯಾದರು.

ಬಾಗಿಲಲ್ಲಿದ್ದ ಜವಾನ ಸಾಹೇಬರು ಸ್ನಾನಕ್ಕೆ ಹೋಗಿದ್ದಾರೆ, ಬರೋದು ತಡವಾಗುತ್ತೆ. ನೀವು ಆಫೀಸಿನಲ್ಲಿ ಕೂತಿರಿ. ಸಾಹೇಬರು ಬಂದ ಕೂಡಲೇ ಹೇಳಿ ಕಳಿಸ್ತಾರೆ ಆಮೇಲೆ ಒಬ್ಬೊಬ್ಬರೇ ಒಳಕ್ಕೆ ಹೋಗಿ ಭೇಟಿಯಾಗಿ. ಇವತ್ತು ಭಾನುವಾರ ಸ್ವಲ್ಪ ತಡವಾಗಬಹುದು. ಹೈಕಮಾಂಡಿನ ಕಡೆಯಿಂದ ಬಂದಿರೋ ಇಬ್ಬರು ಸಾಹೇಬರ ಭೇಟಿ ಮಾಡೋಕೆ ಅಂತ ಒಳಗೆ ಕಾಯುತ್ತ ಕೂತಿದ್ದಾರೆ ಅಂದ.

ನಾವು ಸಾಹೇಬರ ಕಾನ್ಸ್ಟಿಯೆನ್ಸಿಯಿಂದ ಬಂದಿದ್ದೀವಯ್ಯ. ಅವರಿಗೆ ತುಂಬಾ ಬೇಕಾದವರು ಎಂದು ಯುವಕರು ಹೇಳಿದರೂ ಜವಾನ ಒಳಕ್ಕೆ ಬಿಡಲಿಲ್ಲ. ಹುಡುಗರು ಒಳಕ್ಕೆ ನುಗ್ತಾರೆ ಅನ್ನೋದು ಗೊತ್ತಾಗಿ ಬಾಗಿಲಿಗೆ ಅಡ್ಡ ನಿಂತ. ಹುಡುಗರಿಗೆ ಅವಮಾನವಾಯಿತು.

‘ಏಯ್, ದಾರಿ ಬಿಡಯ್ಯ. ಇದು ನಮ್ಮ ಮಾವನ ಮನೆ. ಒಳಕ್ಕೆ ಹೋಗಬೇಡ ಅನ್ನೋದಕ್ಕೆ ನೀನ್ಯಾವನಯ್ಯ...’ ಎನ್ನುತ್ತ ಚಿದಾನಂದ ಜವಾನನ್ನು ತಳ್ಳಿಕೊಂಡು ಒಳಕ್ಕೆ ನುಗ್ಗಿದ. ಉಳಿದವರು ಅವನನ್ನು ಹಿಂಬಾಲಿಸಿದರು.

ಒಳಗೆ ಹಾಲ್‌ನಲ್ಲಿ ಇಬ್ಬರು ನಡು ವಯಸ್ಸಿನ ಮಜಬೂತಾದ ಹೆಂಗಸರ ಜತೆ ಮಾತಾಡುತ್ತ ಕೂತಿದ್ದ ಮಂತ್ರಿಗಳು ತಲೆ ಎತ್ತಿ ನೋಡಿದರು. ಬೆಳ್ಳನೆ ಬಟ್ಟೆ ಹಾಕಿ ಒಳಗೆ ಬಂದವರ ಮುಖಗಳು ಅವರಿಗೆ ಫಕ್ಕನೆ ಸ್ಪಷ್ಟವಾಗಲಿಲ್ಲ. ‘ಯಾರ್ರಯ್ಯ ನೀವು, ಸ್ವಲ್ಪ ಹೊತ್ತು ಹೊರಗಿರಿ, ಹೇಳಿ ಕಳಿಸ್ತೀನಿ...’ ಅಂದು ಬಿಟ್ಟರು!.

ಯುವಕರಿಗೆ ಏನು ಹೇಳಬೇಕು ಅನ್ನೋದು ಗೊತ್ತಾಗದೆ ಸುಮ್ಮನೆ ನಿಂತರು. ಅಷ್ಟರಲ್ಲಿ ಚಿದಾನಂದ, ಮಾವಯ್ಯ ನಾನು ಅನ್ನುತ್ತ ನಾಲ್ಕು ಹೆಜ್ಜೆ ಮುಂದಕ್ಕೆ ಬಂದ. ಮಂತ್ರಿಗಳು ಅವನನ್ನೂ ಗುರುತಿಸಲಿಲ್ಲ. ಏಯ್, ಸ್ವಲ್ಪ ಹೊತ್ತು ಹೊರಗಿರು ಅಂತ ಹೇಳಿದ್ದು ಗೊತ್ತಾಗಲಿಲ್ಲವೇನಯ್ಯ ಅಂದುಬಿಟ್ಟರು! ಮಂತ್ರಿಗಳ ಮಾತಿನಿಂದ ಎಲ್ಲರ ಮುಖ ಕಪ್ಪಿಟ್ಟಿತು. ತಕ್ಷಣವೇ ಎಲ್ಲರೂ ಹೊರಕ್ಕೆ ಬಂದುಬಿಟ್ಟರು. ಒಂದೆರಡು ನಿಮಿಷ ಕಳೆಯುವಷ್ಟರಲ್ಲಿ ಜವಾನ ಒಳಕ್ಕೆ ಬಂದ.

‘ಸರ್, ಈ ಬಂದಿದ್ದವರು ನಿಮ್ಮ ಕಾನ್ಸ್ಟಿಯೆನ್ಸಿಯವರಂತೆ! ಅವರಲ್ಲಿ ಒಬ್ಬರು ನಿಮ್ಮ ಅಳಿಯ ಅಂದ. ಅವನ ಮಾತು ಕೇಳುತ್ತಿದ್ದಂತೆ ಮಂತ್ರಿಗಳಿಗೆ ದುಡುಕಿದೆ ಅನ್ನಿಸಿತು. ಹೋಗು, ಅವರನ್ನು ಕರಿ ಅಂದರು. ಜವಾನ ಹೊರಕ್ಕೆ ಬರುವಷ್ಟರಲ್ಲಿ ಯುವಕರು ಗೇಟು ದಾಟಿ ಹೊರಗೆ ನಿಲ್ಲಿಸಿದ್ದ ವ್ಯಾನಿನ ಕಡೆಗೆ ನಡೆದು ಹೋಗುತ್ತಿದ್ದರು. ಜವಾನ ರಸ್ತೆಗೆ ಬರುವಷ್ಟರಲ್ಲಿ ವ್ಯಾನು ಅಲ್ಲಿಂದ ಹೋಗಿತ್ತು.

ಕಾನ್ಸ್ಟಿಯೆನ್ಸಿ ಬಂದ ಹುಡುಗರನ್ನು ಗುರುತಿಸದೇ ಹೋದೆನಲ್ಲ. ಛೇ ಎಂಥಾ ಕೆಲಸವಾಯ್ತು. ತಮ್ಮ ಬುದ್ದಿಗೆ ಅದೆಂಥ ಮಂಕು ಕವಿದಿತ್ತು? ಮನೆ ಬಾಗಿಲಿಗೆ ಬಂದವರನ್ನು ಗದರಿಸಿ ಕಳಿಸಿದೆನಲ್ಲ ಅನ್ನಿಸಿತು. ತಮ್ಮ ವರ್ತನೆಗೆ ಹಳಹಳಿಸಿದರು. ಕಳೆದ ಎಲೆಕ್ಷನ್ ಸಮಯದಲ್ಲಿ ತಮ್ಮ ಜತೆ ಇದ್ದ ಹುಡುಗರು ಅನ್ನೋದು ನೆನಪೇ ಆಗಲಿಲ್ಲ ಎಂದು ಕೈ ಕೈ ಹಿಸುಕಿಕೊಂಡರು. ಎದುರು ಕೂತಿದ್ದ ಹೆಂಗಸರನ್ನು ನೋಡುತ್ತ ಮೈಮರೆತನೇ? ಈಗೇನು ಮಾಡೋದು? ಅವರನ್ನು ಸಮಾಧಾನ ಮಾಡೋದು ಹೇಗೆ ಎಂದು ಯೋಚಿಸುತ್ತಿರುವಾಗಲೇ ಬಾಗಿಲಲ್ಲಿ ಜಾಧವ್ ಕಾಣಿಸಿಕೊಂಡ. ಅವನ ಮುಖ ನೋಡುತ್ತಿದ್ದಂತೆ ಮಂತ್ರಿಗಳಿಗೆ ಸಿಟ್ಟು ಬಂತು. ಏನ್ರಿ, ಇಷ್ಟೊತ್ತು ಎಲ್ಲಿ ಹೋಗಿದ್ರಿ? ನಮ್ಮ ಕಾನ್ಸ್ಟಿಯೆನ್ಸಿಯ ಐದಾರು ಹುಡುಗರು ಮನೆಯೊಳಕ್ಕೆ ನುಗ್ಗಿದರು. ಅವರು ಯಾರು ಅಂತ ಗೊತ್ತಾಗಲಿಲ್ಲ, ಹೊರಕ್ಕೆ ಹೋಗಿ ಅಂದುಬಿಟ್ಟೆ. ಅವರೆಲ್ಲ ನಂಗೆ ಬೇಕಾದವರು. ನೀವಿದ್ದರೆ ಹಿಂಗಾಗ್ತಿರಲಿಲ್ಲ. ನೀವು ತಡವಾಗಿ ಬಂದಿದ್ದರಿಂದ ಹೀಗಾಯ್ತು ಎಂದು ರೇಗಿದರು. ಜಾಧವ್ ಏನನ್ನೂ ಹೇಳಲಿಲ್ಲ.

ಜಯದೇವ ಮಂತ್ರಿಗಳಿಗೆ ಫೋನ್ ಮಾಡಿ ಸರ್, ಈಚೆಗೆ ನೀವು ಕಾನ್ಸ್ಟಿಯೆನ್ಸಿಗೂ ಬಂದಿಲ್ಲ. ಸಾಹೇಬರು ಯಾವಾಗ ಬರ್ತಾರೆ ಅಂತ ಜನ ನನ್ನನ್ನು ಕೇಳ್ತಿದ್ದಾರೆ. ಪುರುಸೊತ್ತು ಮಾಡಿಕೊಂಡು ಬಂದು ಹೋಗಿ ಸರ್. ಇಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ನಿಮ್ಮ ವಿರುದ್ಧ, ಪಕ್ಷದ ವಿರುದ್ಧ ನಮ್ಮ ಹುಡುಗರೇ ಅಪಪ್ರಚಾರ ಮಾಡಿದ್ದಾರೆ! ಇಂಥದ್ದನ್ನು ಬೆಳೆಯೋಕೆ ಅವಕಾಶ ಕೊಡಬಾರದು. ‘ಹದಿನೈದು ದಿನಗಳ ಹಿಂದೆ ನಿಮ್ಮನ್ನು ಭೇಟಿ ಮಾಡೋಕೆ ಅಂತ ನಮ್ಮ ಪಾರ್ಟಿಯ ಐದಾರು ಹುಡುಗರು ನಿಮ್ಮನೆಗೆ ಬಂದಿದ್ದರಂತೆ. ನೀವು ಅವರನ್ನು ಗದರಿಸಿ ಕಳಿಸಿದಿರಂತೆ! ಅವರ ಜತೆ ನಿಮ್ಮ ತಂಗಿ ಮಗ ಚಿದಾನಂದ ಮೂರ್ತಿ ಅವರೂ ಇದ್ದರಂತೆ! ಆ ಹುಡುಗರೆಲ್ಲ ಪಾರ್ಟಿಗೆ ರಾಜೀನಾಮೆ ಕೊಟ್ಟಿದ್ದಾರೆ. ಎಲ್ಲರೂ ವಿರೋಧ ಪಕ್ಷದವರ ಜತೆ ಓಡಾಡ್ತಿದ್ದಾರೆ...’ ಎಂದು ಹೇಳಿ ಮಂತ್ರಿಗಳ ಪ್ರತಿಕ್ರಿಯೆಗೆ ಕಾದ.

ಮಂತ್ರಿಗಳು ಏನೂ ಹೇಳದೆ ಸುಮ್ಮನಿದ್ದರು. ಮತ್ತೆ ಜಯದೇವನೇ ಸರ್, ಈ ವಾರದ ಲೋಕ ಸೇವಾ ವಾರಪತ್ರಿಕೆಯಲ್ಲಿ ವಿರುಪಾಕ್ಷ ಅನ್ನೋರು ನಿಮ್ಮ ವಿರುದ್ಧ ಲೇಖನ ಬರೆದಿದ್ದಾರೆ! ಅದಕ್ಕೆ ಊಸರವಳ್ಳಿ ಅಂತ ಹೆಡ್ಡಿಂಗ್ ಹಾಕಿದ್ದಾರೆ! ಲೇಖನದಲ್ಲಿ ನೀವು ಬೇನಾಮಿಗಳ ಹೆಸರಿನಲ್ಲಿ ಐದಾರು ಕಡೆ ಆಸ್ತಿ ಮಾಡಿದ್ದೀರಿ ಅಂತ ಆರೋಪ ಮಾಡಿದ್ದಾರೆ! ನಿಮ್ಮ ಮಗಳ ಹೆಸರಿನಲ್ಲಿ ಹೈವೇ ಪಕ್ಕದ ಭಟ್ರಳ್ಳಿಯಲ್ಲಿ ಇಪ್ಪತ್ತು ಎಕರೆ ಜಮೀನು ಖರೀದಿ ಮಾಡಿದ್ದೀರಂತೆ. ಅಲ್ಲಿ ಒಂದು ಡೇರಿ ಶುರು ಮಾಡ್ತಾರಂತೆ ಎಂದೆಲ್ಲ ಬರೆದಿದ್ದಾರೆ.

ಆ ಪತ್ರಿಕೆಯ ಸಂಪಾದಕ ಹುಲಿತೊಟ್ಲು ರಾಜಶೇಖರ ಮೂರ್ತಿಗೆ ಫೋನ್ ಮಾಡಿ ಲೇಖನ ಬರೆದ ವಿರೂಪಾಕ್ಷ ಯಾರು ಅಂತ ಕೇಳಿದೆ. ಅವನು ಅದನ್ನೆಲ್ಲ ಹೇಳಕಾಗಲ್ಲ. ಹಾಗೆ ಹೇಳೋದು ನಮ್ಮ ವೃತ್ತಿ ಧರ್ಮಕ್ಕೆ ವಿರುದ್ಧ ಅಂದ. ಲೇಖನದಲ್ಲಿ ಮಾಡಿರುವ ಆರೋಪ ಸುಳ್ಳು ಅಂತ ನಿಮ್ಮ ಮಂತ್ರಿಗಳಿಂದ ಲಿಖಿತ ಹೇಳಿಕೆ ಕೊಡಿಸಿದರೆ ಅದನ್ನೂ ಪ್ರಕಟಿಸ್ತೀನಿ ಅಂದ. ಲೇಖನದಲ್ಲಿ ಮಾಡಿರೋ ಎಲ್ಲಾ ಆರೋಪಗಳಿಗೆ ಅವನ ಹತ್ರ ದಾಖಲೆಗಳಿವೆಯಂತೆ! ಮೂರು ವಾರಗಳ ಹಿಂದೆ ಬೇನಾಮಿ ಜಯದೇವ ಅನ್ನೋ ಹೆಡ್ಡಿಂಗ್ ಹಾಕಿ ನನ್ನ ಮೇಲೂ ಏನೇನೋ ಬರೆದಿದ್ದ. ನಾನು ಮಾನನಷ್ಟ ಕೇಸು ಹಾಕಬೇಕು ಅಂತ ತೀರ್ಮಾನ ಮಾಡಿದ್ದೀನಿ. ರಾಜಶೇಖರ ಮೂರ್ತಿ ಮುಂದಿನ ಸಂಚಿಕೆಯಲ್ಲೂ ಏನಾದರೂ ಬರೀತಾನೆ. ನೀವೇ ಏನಾದರೂ ಮಾಡಿ ಅವನ ಬಾಯಿ ಮುಚ್ಚಿಸಿ ಎಂದು ಜಯದೇವ ಹೇಳಿದ್ದನ್ನು ಕೇಳಿ ಮಂತ್ರಿಗಳಿಗೆ ಆತಂಕವಾಯಿತು.

‘ರೀ, ಜಯದೇವ್, ನನ್ನ ನೋಡಬೇಕು ಅಂತ ಏಳೆಂಟು ಹುಡುಗರು ಮನೆಗೆ ಬಂದಿದ್ದು ನಿಜ. ಅವರು ಬಂದಾಗ ನಾನು ಹೈಕಮಾಂಡ್‌ನಿಂದ ಬಂದಿದ್ದ ಇಬ್ಬರು ಅಬ್ಸರ್ವರ್‌ಗಳ ಜತೆ ಮಾತಾಡ್ತಿದ್ದೆ. ಸ್ವಲ್ಪ ಹೊತ್ತು ಹೊರಗಿರಿ, ಹೇಳಿ ಕಳಿಸ್ತೀನಿ ಅಂತ ಹೇಳಿದ್ದೂ ನಿಜ. ಅಷ್ಟಕ್ಕೇ ಅವರು ಬೇಸರ ಮಾಡಿಕೊಂಡು ಹೊರಟೇ ಹೋದರು. ಮುಂದಿನ ಸಲ ಕಾನ್ಸ್ಟಿಯೆನ್ಸಿಗೆ ಬಂದಾಗ ಅವರನ್ನು ಕರೆಸಿ ಮಾತಾಡ್ತೀನಿ. ನಾನು ಸಾರಿ ಕೇಳಿದೆ ಅಂತ ನೀವೇ ಅವರಿಗೆ ಹೇಳಿ ಸಮಾಧಾನ ಮಾಡ್ರಿ. ಚಿದಾನಂದನಿಗೆ ನಂಗೆ ಫೋನ್ ಮಾಡೋಕೆ ಹೇಳಿ. ನಾನು ಐದಾರು ಸಲ ಅವನ ಫೋನಿಗೆ ಟ್ರೈ ಮಾಡಿದೆ. ಅವನು ರಿಸೀವ್ ಮಾಡ್ತಾ ಇಲ್ಲ. ಆ ಹುಡುಗರಿಗೆ ನಮ್ಮ ಪಕ್ಷದಲ್ಲಿ ಭವಿಷ್ಯವಿದೆ. ಅವರಿಗೆ ಏನಾದರೂ ಅಧಿಕಾರ ಕೊಡಿಸೋಣ. ಅವರನ್ನು ಬಿಟ್ಟು ನಾನು ರಾಜಕೀಯ ಮಾಡೋಕೆ ಸಾಧ್ಯವೇನ್ರಿ...’ ಎಂದು ಹೇಳಿ ಮತ್ತೇನು ಎಂದು ಕೇಳಿದರು.

‘ರಾಜಶೇಖರನ ಜತೆ ನಾನು ಮಾತಾಡ್ತೀನಿ. ಅವನು ನನ್ನ ಹಳೇ ಫ್ರೆಂಡು. ಈ ಸಲ ಅವನಿಗೆ ರಾಜ್ಯ ಪ್ರಶಸ್ತಿ ಕೊಡಿಸೋಕೆ ಆಗಲಿಲ್ಲ. ಅವನ ಹೆಸರನ್ನು ನಾನೇ ಶಿಫಾರಸು ಮಾಡಿದ್ದೆ. ಕೊನೆ ಕ್ಷಣದಲ್ಲಿ ಸಿಎಂ, ಮುಂದಿನ ವರ್ಷ ನೋಡೋಣ ಅಂತ ಹೇಳಿ ಹೆಸರು ಕೈಬಿಟ್ಟರು.! ಅವನಿಗೆ ಬೇಸರವಾಗಿದೆ. ಪತ್ರಕರ್ತರ ಸಿಟ್ಟು, ಸೆಡವುಗಳು ಬಹಳ ದಿನ ಇರಲ್ಲ. ಅವರಿಗೆ ನಾವು ಬೇಕು, ನಮಗೆ ಅವರು ಬೇಕು. ಪತ್ರಿಕೆಯಲ್ಲಿ ಅವನು ಬರೆದಿರುವಂತೆ ಹೈವೇ ಪಕ್ಕ ಇಪ್ಪತ್ತು ಎಕರೆ ಭೂಮಿ ಖರೀದಿ ಮಾಡಿರೋದು ನಿಜ. ಖರೀದಿ ಮಾಡಿದ್ದು ನನ್ನ ಅಳಿಯ. ಅವನು ಖರೀದಿ ಮಾಡಿ ಅವನ ಹೆಂಡ್ತಿ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿದ್ದಾನೆ. ಅದಕ್ಕೂ ನಂಗೂ ಸಂಬಂಧ ಇಲ್ಲ. ನಮ್ಮ ಬೀಗರು ದೊಡ್ಡ ಕಂಟ್ರಾಕ್ಷರ್. ಮದುವೆ ಆದ ಮೇಲೆ ಮಗಳು ಬೇರೆ ಮನೆಗೆ ಸೇರಿದವಳು. ಅವಳ ಗಂಡ ಏನಾದರೂ ಮಾಡಿದರೆ ಅದಕ್ಕೆ ನಾನು ಹೊಣೆಯಲ್ಲ. ಉಳಿದ ಆರೋಪಗಳು ಸುಳ್ಳು...’

‘ನನ್ನ ಕೈಗಳನ್ನು ಶುದ್ಧವಾಗಿ ಇಟ್ಟುಕೊಂಡಿದ್ದೀನಿ. ನನ್ನ ಜೀವನ ತೆರೆದ ಪುಸ್ತಕ ಇದ್ದಂತೆ. ಯಾರು ಬೇಕಾದರೂ ಅದನ್ನು ಓದಬಹುದು. ನಾನು ಸೊನ್ನೆಯಿಂದ ಶುರು ಮಾಡಿದವನು. ನಮ್ಮಪ್ಪನ ಆಸ್ತಿಯಲ್ಲಿ ನಂಗೆ ಬಂದಿದ್ದು ಐದೆಕರೆ ಬೆದ್ದಲು ಜಮೀನು. ಅಲ್ಲಿ ಎರಡು ಬೋರ್‌ವೆಲ್ ತೆಗೆಸಿ, ವೀಳ್ಯದೆಲೆ ತೋಟ ಮಾಡಿದ್ದೀನಿ. ಅದಕ್ಕೆ ಎರಡು ಬ್ಯಾಂಕುಗಳಿಂದ ಸಾಲ ತಗಂಡಿದ್ದೆ. ಯಾರು ಬಂದು ಕೇಳಿದರೂ ಸಾಲದ ದಾಖಲೆ ತೋರಿಸ್ತೀನಿ. ನನ್ನ ಮಗ ಕರಾಚಿಗೆ ವೀಳೆದೆಲೆ ರಫ್ತು ಮಾಡ್ತಾನೆ. ಅದು ಅವನ ವ್ಯವಹಾರ. ಈ ಮಂತ್ರಿಗಿರಿ ಶಾಶ್ವತ ಅಂತ ನಾನು ತಿಳ್ಕಂಡಿಲ್ಲ. ನೀವು ಯಾರಿಗೂ ಉತ್ತರ ಕೊಡೋಕೆ ಹೋಗಬೇಡಿ. ನಮ್ಮ ಸರ್ಕಾರ ಬಂದು ನಾಲ್ಕೂವರೆ ವರ್ಷಗಳಾಗಿವೆ. ಎಲ್ಲ ಮಿನಿಸ್ಟರುಗಳ ಮೇಲೂ ಅಪಪ್ರಚಾರ ನಡೀತಿದೆ. ನಾವು ಟನ್‌ಗಟ್ಟಲೆ ದುಡ್ಡು ಮಾಡಿದ್ದೀವಿ ಅಂತ. ಅದಕ್ಕೆ ಆಧಾರಗಳಿಲ್ಲ. ಸಿಎಂ ಸಾಹೇಬರ ಮೇಲೂ ಆರೋಪಗಳಿವೆ. ಅವಕ್ಕೆಲ್ಲ ಫುಲ್‌ಸ್ಟಾಪ್ ಹಾಕಲು ಏನು ಮಾಡಬೇಕು ಅಂತ ಯೋಚನೆ ಮಾಡ್ತಿದ್ದೀವಿ. ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ಮಂತ್ರಿಗಳು ಹೇಳಿದ ಮೇಲೆ ಜಯದೇವ ನಿರಾಳನಾದ.

ರೆವಿನ್ಯೂ ಮಂತ್ರಿಗಳ ಅರವತ್ತೈದನೆ ಹುಟ್ಟು ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಬೇಕು ಎಂದು ಚಂದ್ರದುರ್ಗ ಜಿಲ್ಲೆಯ ಅವರ ಬೆಂಬಲಿಗರು ತೀರ್ಮಾನಿಸಿದರು. ಅದನ್ನು ಜಿಲ್ಲಾ ಸಮಿತಿಯ ಅಧ್ಯಕ್ಷರ ಗಮನಕ್ಕೂ ತಂದರು. ‘ಹುಟ್ಟು ಹಬ್ಬ ಮಾಡೋದಕ್ಕೆ ನನ್ನ ತಕರಾರಿಲ್ಲ. ಆದರೆ ಅದಕ್ಕೆ ಬೇಕಾದ ದುಡ್ಡು ಎಲ್ಲಿಂದ ತರ್ತೀರಿ...’ ಎಂದು ಅಧ್ಯಕ್ಷರು ಕೇಳಿದರು.

ಮರುದಿನ ಕಂದಾಯ ಮಂತ್ರಿಗಳ ಹುಟ್ಟಿದೂರಿನ ಯುವಕ ಸಂಘದವರು ಹುಟ್ಟುಹಬ್ಬದ ದಿನ ಜಿಲ್ಲಾದ್ಯಂತ ರಕ್ತದಾನ ಶಿಬಿರ ನಡೆಸುವ ನಿರ್ಧಾರ ಪ್ರಕಟಿಸಿದರು! ಅವತ್ತು ಕಾನ್ಸ್ಟಿಯೆನ್ಸಿಯ ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ, ಅಭೀಷೇಕ ಮತ್ತು ಎಲ್ಲಾದರೂ ಒಂದು ಕಡೆ ಬಡವರಿಗೆ ಅನ್ನದಾನ ಮಾಡುವುದಾಗಿ ಜಿಲ್ಲೆಯ ರೈಸ್‌ಮಿಲ್ ಮಾಲೀಕರ ಸಂಘದವರು ಪ್ರಕಟಿಸಿದರು. ಐದಾರು ದಿನ ಕಳೆದ ಮೇಲೆ ಚಂದ್ರದುರ್ಗದ ಆಯಕಟ್ಟಿನ ಸ್ಥಳಗಳಲ್ಲಿ ರೆವಿನ್ಯೂ ಮಂತ್ರಿಗಳ ಪೋಸ್ಟರ್, ಕಟೌಟ್‌ಗಳು ಕಾಣಿಸಿಕೊಂಡವು!. ಅವುಗಳ ಕೆಳಗೆ ಭವಿಷ್ಯದ ಮುಖ್ಯಮಂತ್ರಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂಬ ಬರಹ ಇತ್ತು. ಪೋಸ್ಟರ್‌ಗಳನ್ನು ಹಾಕಿಸಿದ್ದು ಪಾಳ್ಯದ ಹಾಲಪ್ಪ!. ಈ ಬೆಳವಣಿಗೆಯನ್ನು ಜಿಲ್ಲಾಧ್ಯಕ್ಷರು ತಕ್ಷಣವೇ ಸಿಎಂ ಸಾಹೇಬರ ಗಮನಕ್ಕೆ ತಂದರು.

‘ಸರ್, ರೆವಿನ್ಯೂ ಮಂತ್ರಿಗಳ ಕೈಗಳು ಉದ್ದ ಆಗ್ತಿವೆ. ಎಲೆಕ್ಷನ್ ಹತ್ತಿರ ಇರುವಾಗ ಮುಂದಿನ ಮುಖ್ಯಮಂತ್ರಿ ಅಂತ ಕಟೌಟ್‌ಗಳನ್ನು ಹಾಕಿಸಿಕೊಂಡು ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಪ್ಲಾನು ಮಾಡ್ತಿದ್ದಾರೆ! ಇದರಿಂದ ಜನಕ್ಕೆ ರಾಂಗ್ ಮೆಸೇಜ್ ಹೋಗ್ತಿದೆ...’ ಈಗ ನೀವು ಸುಮ್ಮನಿರಬಾರದು ಎಂದು ಮುಖ್ಯಮಂತ್ರಿಗಳಿಗೆ ಭಿನ್ನವಿಸಿಕೊಂಡರು.

ಮರುದಿನ ಬೆಳಿಗ್ಗೆಯೇ ಪಕ್ಷದ ರಾಜ್ಯ ಅಧ್ಯಕ್ಷರು ರೆವಿನ್ಯೂ ಮಂತ್ರಿಗಳ ಮನೆಗೆ ಹೋದರು. ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ರಾಜ್ಯ ಮಟ್ಟದಲ್ಲಿ ಒಂದು ಸಮಾವೇಶ ಮಾಡುವಂತೆ ಹೈಕಮಾಂಡ್ ಹೇಳಿದೆ. ರಾಜ್ಯದ ಮಧ್ಯಭಾಗದ ಯಾವುದಾದರೂ ಊರಲ್ಲಿ ಸಮಾವೇಶ ಮಾಡಬೇಕು ಎಂದು ಸಿಎಂ ಹೇಳಿದ್ದಾರೆ. ಸಮಾವೇಶಕ್ಕೆ ಚಂದ್ರದುರ್ಗ ಸೂಕ್ತ ಅಂತ ನಂಗೆ ಅನ್ನಿಸಿದೆ. ನೀವೇನು ಹೇಳ್ತೀರಿ ಎಂದು ರೆವಿನ್ಯೂ ಮಂತ್ರಿಗಳನ್ನು ಕೇಳಿದರು. ಅಧ್ಯಕ್ಷರ ಮಾತಿಗೆ ರೆವಿನ್ಯೂ ಮಂತ್ರಿಗಳು ಉತ್ತರಿಸಲಿಲ್ಲ. ಸಮಾವೇಶದ ವೇದಿಕೆಯಲ್ಲೇ ನಿಮ್ಮ ಅರವತ್ತೈದನೆ ಹುಟ್ಟುಹಬ್ಬದ ಕೇಕ್ ಕತ್ತರಿಸಿದರೆ ಚೆನ್ನಾಗಿರುತ್ತೆ ಅಂತ ಸಿಎಂ ಸಾಹೇಬರು ಹೇಳಿದ್ದಾರೆ ಎನ್ನುತ್ತ ಅವರ ಮುಖ ನೋಡಿದರು.

‘ಸೈಟು ಇಲ್ಲದವರಿಗೆ ಸೈಟು. ಸೈಟು ಇದ್ದವರಿಗೆ ಮನೆ ಕಟ್ಟಿಕೊಳ್ಳಲು ಐದು ಲಕ್ಷ ರೂಪಾಯಿ ಕೊಡುವ ಹೊಸ ಯೋಜನೆಯನ್ನು ಅವತ್ತೇ ಪ್ರಕಟಿಸಬೇಕು ಅನ್ನೋದು ಸಿಎಂ ಸಾಹೇಬರ ಅಪೇಕ್ಷೆ. ಬಡವರ ಮಕ್ಕಳಿಗೆ ಮುಂದಿನ ವರ್ಷದಿಂದ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಕೊಡುವ ನಿರ್ಧಾರವನ್ನೂ ಅವತ್ತೇ ಪ್ರಕಟಿಸುತ್ತಾರೆ. ಸಮಾವೇಶಕ್ಕೆ ಹೈಕಮಾಂಡ್ ಮೆಂಬರುಗಳು ಬರ್ತಾರೆ. ಅವರಿಗೆ ವ್ಯವಸ್ಥೆ ಮಾಡಬೇಕು. ಡೇಟ್ ಫಿಕ್ಸ್ ಆದ ಮೇಲೆ ಸಿಎಂ ಸಾಹೇಬರು ನಿಮ್ಮ ಜತೆ ಮಾತಾಡ್ತಾರೆ ಮತ್ತು ಕ್ಯಾಬಿನೆಟ್ ಮೀಟಿಂಗ್‌ನಲ್ಲೂ ಚರ್ಚೆ ಮಾಡ್ತಾರೆ. ಸಮಾವೇಶಕ್ಕೆ ಒಂದು ವಾರ ಮೊದಲು ನಾನು ಚಂದ್ರದುರ್ಗಕ್ಕೆ ಬರ್ತೀನಿ. ಮುಗಿಯೋವರೆಗೆ ಅಲ್ಲೇ ಇರ್ತೀನಿ. ನಾವಿಬ್ಬರೂ ನಿಂತು ಸಮಾವೇಶಕ್ಕೆ ವ್ಯವಸ್ಥೆ ಮಾಡೋಣ ಎಂದು ಅಧ್ಯಕ್ಷರು ಹೇಳಿದ್ದನ್ನು ಕೇಳಿ ರೆವಿನ್ಯೂ ಮಂತ್ರಿಗಳಿಗೆ ಪಿಚ್ಚೆನಿಸಿತು.

‘ಸರ್, ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಇಲ್ಲ. ಇದ್ದರೂ ಅದನ್ನು ಸ್ವಾಧೀನ ಮಾಡಿಕೊಂಡು ಸೈಟುಗಳನ್ನಾಗಿ ಮಾಡಿ ಹಂಚೋಕೆ ತಡವಾಗುತ್ತೆ. ಸಮಾವೇಶದ ದಿನ ಸೈಟು ಹಂಚೋಕಾಗಲ್ಲ ಎಂದು ಮಂತ್ರಿಗಳು ಆಕ್ಷೇಪಣೆಯ ಧ್ವನಿಯಲ್ಲಿ ಹೇಳಿದರು. ಸರ್ಕಾರಿ ಭೂಮಿ ಎಷ್ಟಿದೆ ಅಂತ ಹುಡುಕೋದು ಡೀಸಿ ಕೆಲಸ. ಸಮಾವೇಶದಲ್ಲಿ ಹದಿನೈದಿಪ್ಪತ್ತು ಜನರಿಗೆ ಸಾಂಕೇತಿಕವಾಗಿ ಮಂಜೂರಾತಿ ಪತ್ರ ಕೊಡೋಣ ಎಂದು ಸಿಎಂ ಸಾಹೇಬರು ಹೇಳಿದ್ದಾರೆ. ಚುನಾವಣೆ ಘೋಷಣೆಗೆ ಮೊದಲು ಎಲ್ಲರಿಗೂ ಸೈಟು ಕೊಡ್ತೀವಿ ಅಂತ ಹೇಳಿದರಾಯ್ತು. ಎಲೆಕ್ಷನ್ ಘೋಷಣೆ ಆದಮೇಲೆ ಸೈಟು ಹಂಚೋಕೆ ನಿಯಮಗಳು ಅಡ್ಡ ಬರ್ತವೆ. ಎಲೆಕ್ಷನ್ ಮುಗಿದ ಮೇಲೆ ಕೊಡ್ತೀವಿ ಅನ್ನೋಣ. ಆ ಮೇಲೆ ಜನ ಮರೆತು ಹೋಗ್ತಾರೆ ಎನ್ನುತ್ತ ನಕ್ಕರು.

‘ಸಮಾವೇಶ ದೊಡ್ಡದಾಗಿ ನಡೆಸಲು ಏನು ಮಾಡಬೇಕು ಅನ್ನೋ ಕಡೆಗೆ ನೀವು ಗಮನ ಕೊಡಿ. ಐದು ಲಕ್ಷ ಜನರನ್ನು ಸೇರಿಸಬೇಕು. ಸಮಾವೇಶಕ್ಕೆ ಐದಾರು ಜಿಲ್ಲೆಗಳಿಂದ ಜನರನ್ನು ಕರೆ ತರಬೇಕು. ಸತ್ಯಮೂರ್ತಿ ಮೈದಾನದಲ್ಲಿ ನೂರೈವತ್ತು ಅಡಿ ಅಗಲ, ಎಂಬತ್ತು ಅಡಿ ಉದ್ದದ ವೇದಿಕೆ ಸಿದ್ದವಾಗಬೇಕು. ಸಮಾವೇಶಕ್ಕೆ ಬರೋ ಜನರಿಗೆ ಐದಾರು ಕಡೆಗೆ ಊಟದ ವ್ಯವಸ್ಥೆ ಮಾಡಬೇಕು. ಸಮಾವೇಶಕ್ಕೆ ರಾಷ್ಟ್ರೀಯ ಅಧ್ಯಕ್ಷರೂ ಬರ್ತಾರೆ. ಅದೇ ಸಭೆಯಲ್ಲಿ ಚುನಾವಣೆಯ ಪ್ರಚಾರ ಅನಧಿಕೃತವಾಗಿ ಉದ್ಘಾಟನೆ ಆಗುತ್ತೆ. ಸಿಎಂ ಸಾಹೇಬರು ಎರಡು ದಿನ ಮೊದಲು ಚಂದ್ರದುರ್ಗಕ್ಕೆ ಬರ್ತಾರೆ. ಸಮಾವೇಶದ ದಿನ ಬೆಳಿಗ್ಗೆ ಸಚಿವ ಸಂಪುಟದ ಅನೌಪಚಾರಿಕ ಸಭೆ ಮಾಡ್ತಾರೆ. ಅದಕ್ಕೆ ವ್ಯವಸ್ಥೆ ಮಾಡುವಂತೆ ಚೀಫ್ ಸೆಕ್ರೆಟರಿಗೆ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಹೇಳಿದ್ದಾರೆ ಎಂದು ಹೇಳಿ ನಿಮಗೊಂದು ಗುಡ್ ನ್ಯೂಸ್ ಇದೆ. ಮುಂದಿನ ಕೇಂದ್ರ ಸರ್ಕಾರದಲ್ಲಿ ನಿಮಗೆ ಮಂತ್ರಿಯಾಗೋ ಯೋಗವಿದೆ. ನಿಮ್ಮನ್ನು ಚಂದ್ರದುರ್ಗದಿಂದ ಲೋಕಸಭೆಗೆ ಕಳಿಸಬೇಕು ಅಂತ ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಿ ರೆವಿನ್ಯೂ ಮಂತ್ರಿಗಳ ಮುಖ ನೋಡಿದರು. ಅವರ ಮಾತಿಗೆ ಮಂತ್ರಿಗಳು ಏನನ್ನೂ ಹೇಳಲಿಲ್ಲ. ‘ಸಮಾವೇಶ ಎಲ್ಲಿ ಮಾಡಬೇಕು. ಹೇಗೆ ಮಾಡಬೇಕು ಅನ್ನೋದನ್ನು ಸಿಎಂ ಸಾಹೇಬರು ನಿರ್ಧಾರ ಮಾಡಿದ ಮೇಲೆ ನಾನು ಹೇಳೋದು ಏನಿದೆ...’ ಎಂದು ಮನಸ್ಸಿನಲ್ಲೇ ಹೇಳಿಕೊಂಡು ಸುಮ್ಮನಿದ್ದರು.

ಮುಂದಿನ ತಿಂಗಳ ಹದಿನಾರಕ್ಕೆ ನಂಗೆ ಅರವತ್ತೈದು ತುಂಬುತ್ತೆ. ರಾಜಕೀಯ ಸಾಕು ಅನ್ನಿಸ್ತಿದೆ, ನಂಗೆ ವಿಶ್ರಾಂತಿ ಬೇಕು. ಈಗ ನನ್ನಂಥವರು ರಾಜಕೀಯ ಮಾಡೋದು ಕಷ್ಟ. ಮುಂದಿನ ಪಾರ್ಲಿಮೆಂಟ್ ಎಲೆಕ್ಷನ್ನಲ್ಲಿ ಚಂದ್ರದುರ್ಗದಿಂದ ನನ್ನ ಮಗನಿಗೆ ಟಿಕೆಟ್ ಕೊಡಿ ಅಂತ ಹೈಕಮಾಂಡ್‌ನವರನ್ನು ಕೇಳಿದ್ದೆ. ಈ ಸಿಎಂ ಸಾಹೇಬ ಅದಕ್ಕೂ ಕೊಕ್ಕೆ ಹಾಕ್ತಿದ್ದಾನೆ! ರಾಜಕಾರಣಕ್ಕೆ ನಿವೃತ್ತಿ ಘೋಷಿಸಿ ಮನೆಯಲ್ಲಿ ಇದ್ದು ಬಿಡಬೇಕು ಅಂತ ತೀರ್ಮಾನ ಮಾಡಿದ್ದೀನಿ. ನೀನೇನು ಹೇಳ್ತೀಯ? ಎಂದು ಎದುರಲ್ಲೇ ಕೂತು ಕಾಫಿ ಕುಡಿಯುತ್ತಿದ್ದ ಮಗನ ಕಡೆಗೆ ನೋಡುತ್ತ ಹೇಳಿದರು. ಪಕ್ಕದಲ್ಲಿ ಅವರ ಹೆಂಡತಿಯೂ ಇದ್ದರು.

‘ಅಪ್ಪನ ಮಾತು ಮುಗಿಯುತ್ತಿದ್ದಂತೆ ‘ ಅಪ್ಪಾಜಿ, ಹಾಗೇನಾದರೂ ಮಾಡೀರಿ, ಮನೆಯಲ್ಲಿ ಮೂವತ್ತೈದು ಕೋಟಿ ದುಡ್ಡಿದೆ! ಅದನ್ನು ಉಳಿಸಿಕೊಳ್ಳಬೇಕು ಅಂತಿದ್ದರೆ ನೀವು ಅಧಿಕಾರದಲ್ಲಿ ಇರಬೇಕು...’ ಎಂದು ಅವರಿಗಷ್ಟೇ ಕೇಳಿಸುವಂತೆ ಮೆಲುಧ್ವನಿಯಲ್ಲಿ ಥಟ್ಟನೆ ಹೇಳಿದ. ಮಂತ್ರಿಗಳು ಮಗನ ಮುಖ ನೋಡಿದರು.

‘ನಿಮಗೆ ಸಿಎಂ ಆಗೋ ಯೋಗವಿದೆ ಅಂತ ನಮ್ಮ ನಾಗಯ್ಯ ಶಾಸ್ತ್ರಿಗಳು ಹೇಳಿದ್ದಾರೆ! ಅವರ ಮಾತು ನಿಜವಾಗುತ್ತೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ನೀವು ಕೂರೋದನ್ನು ನಾನು ನೋಡಬೇಕು...’ ಎಂದು ಹೆಂಡತಿ ಹೇಳಿದ್ದನ್ನು ಕೇಳಿ ಮಂತ್ರಿಗಳಿಗೆ ಸಿಟ್ಟು ಬಂತು. ಹಳ್ಳಿ ಗುಗ್ಗು, ನಿಂಗೆ ರಾಜಕೀಯ ಅರ್ಥವಾಗಲ್ಲ ಎಂದು ಹೇಳಬೇಕು ಅನ್ನಿಸಿದರೂ ಹೇಳಲಿಲ್ಲ.

ಐದಾರು ದಿನ ಕಳೆದವು. ಮಂತ್ರಿಗಳ ಮಗ ಅಪ್ಪನ ಬಳಿಗೆ ಬಂದು ‘ಅಪ್ಪಾಜಿ, ನಿಮ್ಮ ನಿರ್ಧಾರ ಸರಿಯಾಗಿದೆ. ನೀವು ಪಕ್ಷಕ್ಕೆ, ಮಂತ್ರಿ ಪದವಿಗೆ ರಾಜೀನಾಮೆ ಕೊಡಿ. ಕ್ಷೇತ್ರದ ಜನರ ಸೇವೆ ಮಾಡಲು ನನ್ನಿಂದ ಆಗ್ತಾ ಇಲ್ಲ. ನಮ್ಮ ಪಕ್ಷದವರೇ ನನ್ನ ಕೈಕಟ್ಟಿ ಹಾಕ್ತಿದ್ದಾರೆ ಎಂದು ಪತ್ರಿಕಾಗೋಷ್ಠಿ ಕರೆದು ಹೇಳಿ. ರಾಜೀನಾಮೆ ಕೊಟ್ಟ ಮೇಲೆ ರಾಷ್ಟ್ರೀಯ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬಂದು ನಮ್ಮ ಪಕ್ಷಕ್ಕೆ ಬನ್ನಿ ಅಂತ ನಿಮ್ಮನ್ನು ಕರೀತಾರೆ!. ನಾನು ಈಗಾಗಲೇ ಅವರ ಜತೆ ಒಂದು ರೌಂಡು ಮಾತಾಡಿದ್ದೀನಿ. ಕ್ಷೇತ್ರದ ಜನರನ್ನು ಕೇಳಿ ನಿರ್ಧಾರ ಹೇಳ್ತೀನಿ ಅಂತ ಅವರಿಗೆ ಹೇಳಿ ಕಳಿಸಿ. ಯಾರನ್ನೂ ಕೇಳೋಕೆ ಹೋಗಬೇಡಿ. ಹದಿನೈದು ದಿನ ಕಳೆದ ಮೇಲೆ ಇನ್ನೊಂದು ಪತ್ರಿಕಾಗೋಷ್ಠಿ ಕರೆದು ಕ್ಷೇತ್ರದ ಅಭಿವೃದ್ಧಿಗಾಗಿ ರಾಷ್ಟ್ರೀಯ ಪಕ್ಷ ಸೇರುವ ನಿರ್ಧಾರ ಮಾಡಿದ್ದೀನಿ ಅಂತ ಹೇಳಿ. ಬೆಳಗಾಗುವುದರೊಳಗೆ ನಿಮ್ಮ ಮೇಲೆ ಇರೋ ಆರೋಪಗಳು ನಿರಾಧಾರ ಅಂತಾಗಿ ಬಿಡುತ್ತೆ. ನೀವು ಹೀರೋ ಆಗ್ತೀರಿ. ಅಷ್ಟರಲ್ಲಿ ಮನೆಯಲ್ಲಿರೋ ದುಡ್ಡನ್ನು ಸೇಫಾಗಿ ಎಲ್ಲಿಗೆ ಸೇರಿಸಬೇಕೋ ಅಲ್ಲಿಗೆ ಸೇರಿಸ್ತೀನಿ ಅಂದ. ಮಗನ ಲೆಕ್ಕಾಚಾರ, ದೂರದೃಷ್ಟಿ ಸರಿಯಾಗಿದೆ ಎಂದು ಮಂತ್ರಿಗಳಿಗೆ ಅನ್ನಿಸಿದರೂ ಬೇನಾಮಿಗಳ ಹೆಸರಲ್ಲಿರೋ ಒಂದೆರಡು ಆಸ್ತಿಗಳು, ಹೆಂಡತಿ, ಮಗನಿಗೂ ಗೊತ್ತಿಲ್ಲದಂತೆ ಅಲ್ಲಲ್ಲಿ ಇಟ್ಟಿರೋ ದುಡ್ಡನ್ನು ಉಳಿಸಿಕೊಳ್ಳೋದು ಹೇಗೆ ಅನ್ನಿಸಿ ಮಗನ ಮುಖ ನೋಡುತ್ತ ಯೋಚನೆ ಮಾಡೋಣ ಅಂದರು.

ಹದಿನೈದು ದಿನಗಳು ಕಳೆದವು. ಮರುದಿನ ಎಲ್ಲಾ ಪ್ರತ್ರಿಕೆಗಳ ಮುಖ ಪುಟದಲ್ಲಿ ರೆವಿನ್ಯೂ ಮಂತ್ರಿಗಳು ರಾಜೀನಾಮೆ ಕೊಡುವ ನಿರ್ಧಾರ ಮಾಡಿದ್ದಾರೆ ಅನ್ನೋ ಸುದ್ದಿ ಪ್ರಕಟವಾಯಿತು.!

ಅದೇ ದಿನ ಸಂಜೆ ಪತ್ರಿಕಾಗೋಷ್ಠಿ ಕರೆದು ರಾಜೀನಾಮೆ ಕೊಡುವ ಸುದ್ದಿಯನ್ನು ನಿರಾಕರಿಸಿದರು. ಪಕ್ಷ ನನಗೆ ತಾಯಿ ಇದ್ದಂತೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಬೇಕಾದರೆ ರಾಜಕಾರಣವನ್ನು ಬಿಡುತ್ತೇನೆ ಆದರೆ ಪಕ್ಷವನ್ನು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಅದೇ ರಾತ್ರಿ ಟೀವಿಗಳಲ್ಲಿ ಮಂತ್ರಿಗಳ ಮಗನ ರಾಜಕೀಯ ಪ್ರವೇಶದ ಸುದ್ದಿ ಪ್ರಸಾರವಾಯಿತು.

ಮರು ದಿನ ರೆವಿನ್ಯೂ ಮಂತ್ರಿಗಳ ಹುಟ್ಟುಹಬ್ಬದ ದಿನ ಚಂದ್ರದುರ್ಗದಲ್ಲಿ ದೊಡ್ಡ ಸಮಾವೇಶ ನಡೆಸಿ ಅಪ್ಪ,ಮಗ ಇಬ್ಬರೂ ರಾಷ್ಟ್ರೀಯ ಪಕ್ಷ ಸೇಡುತ್ತಾರೆ ಎಂಬ ಸುದ್ದಿ ಎಲ್ಲ ಟೀವಿಗಳಲ್ಲೂ ದಿನವಿಡೀ ಪ್ರಸಾರವಾಯಿತು!

ಬೆಳಗಾಗುತ್ತಿದ್ದಂತೆ ಚಂದ್ರದುರ್ಗದ ಜನರಿಗೆ ಅಚ್ಚರಿ ಕಾದಿತ್ತು. ‘ದೇಶದ ಭದ್ರತೆ, ಏಕತೆ ಮತ್ತು ರಾಷ್ಟ್ರೀಯತೆಯನ್ನು ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ...’ ಎಂಬ ಘೋಷಣೆ ಇದ್ದ ಪೋಸ್ಟರುಗಳು ಊರತುಂಬಾ ಕಾಣಿಸಿಕೊಂಡವು. ಅವುಗಳಲ್ಲಿ ಮಂತ್ರಿಗಳ ಮತ್ತು ಅವರ ಮಗ ಸುಜ್ಞಾನ ಮೂರ್ತಿಯ ನಗುತ್ತಿರುವ ಚಿತ್ರಗಳಿದ್ದವು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.