ನೀವು ದೊಡ್ಡ ಪಟ್ಟಣವೊಂದರ ಬಹು ಜನ ನಿಬಿಡ, ವಾಹನ ನಿಬಿಡ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದೀರಿ. ನಿಮಗರಿವಿಲ್ಲದಂತೆ ಸಂಚರಿಸುವ ವಾಹನಗಳ ಬಹು ಚಾಲಾಕಿತನದಲ್ಲಿಯೇ ನಿಮ್ಮ ಸುಪ್ತಮನಸ್ಸಿನ ಪ್ರೇರಣೆಗೆ ಒಳಗಾದಂತೆ ಅದರ ನಿರ್ದೇಶನದಂತೆ ಸುರಕ್ಷಿತವಾಗಿ ರಸ್ತೆಯನ್ನು ದಾಟಿ ಸಮಾಧಾನದ ನಿಟ್ಟುಸಿರು ಬಿಟ್ಟಂತೆ ಅನ್ನಿಸಿದರೂ ನಿಮ್ಮ ಒಳಗೆ ಒಂದು ಗೊಂದಲದ ಕುರಿತೇ ಮನಸ್ಸು ಚಿಂತಿಸುತ್ತಿದೆ. ಈ ಗೊಂದಲದ ನಡುವೆಯೇ ದಾರಿಯಲ್ಲಿ ಹೋಗುವ ಅಪರಿಚಿತರ ನಡುವೆ ಒಬ್ಬಿಬ್ಬರು ನಿತ್ಯವೂ ಸಿಗುವ ಪರಿಚಿತರಿಗೆ ಕೈಮಾಡಿ ವಿಶ್ ಮಾಡುತ್ತಿರಿ, ಅದೇ ದಾರಿಯ ಗುಂಟ ನಡೆಯುತ್ತಾ ಹತ್ತಾರು ವರ್ಷಗಳೇ ಕಳೆದುಹೋಗಿವೆ. ಇಂಚು ಇಂಚೂ ಗೊತ್ತಿರುವಂತೆ ಸರಾಗ ನಡೆಯುತ್ತಿರುವಾಗಲೇ ಆಕಸ್ಮಿಕವಾಗಿ ಅಪರಿಚಿತ ಸುಂದರಿಯೋರ್ವಳು ನಿಮ್ಮನ್ನು ತಡೆದು ಕೈಗೊಂದು ಗುಲಾಬಿ ನೀಡಿ, ಕೆನ್ನೆ ಚುಂಬಿಸಿ ಎದುರು ಬಂದಷ್ಟೇ ವೇಗವಾಗಿ ಮರಳಿ ಹೋಗಿಬಿಡುತ್ತಾಳೆ. ಒಂದೇ ಕ್ಷಣ, ನಿಮ್ಮ ನಿತ್ಯದ ಬದುಕಿನ ಆ ರಸ್ತೆಯಲ್ಲಿನ ಏಕತಾನತೆಯ ನಿಮ್ಮ ನಡಿಗೆಗೆ ಬ್ರೇಕ್ ಆದಂತೆ ಅನ್ನಿಸಿಬಿಡುತ್ತದೆ.

ಇಷ್ಟು ಹೊತ್ತು ಜೀವವನ್ನೇ ತೆಗೆಯಬಹುದಾದ ವಾಹನಗಳ ರಭಸದ ಸಂಚಾರದ ನಡುವೆ ತಲೆ ಕೆಡಿಸಿಕೊಳ್ಳದೇ ಅದೇನು ಮಹಾ! ಎನ್ನುವ ಉಡಾಫೆ ತೋರಿ ನಿಮ್ಮ ಚಿಂತೆಯ ಗುಂಗಿನಲ್ಲೇ ಇದ್ದ ನೀವು ಆಕಸ್ಮಿಕದ ಆಕ್ರಮಣಶೀಲ ಆಘಾತದಿಂದ ಪ್ರಪುಲ್ಲಿತರಾಗುತ್ತೀರಿ, ಇಲ್ಲ ತೋರಿಕೆಯ ಕೋಪ ಪ್ರದರ್ಶಿಸಿ ಸುಮ್ಮನಾಗುತ್ತೀರಿ. ಹೌದಲ್ಲ! ನಾನು ನಿಮ್ಮ ಕಥೆ ಹೇಳುತ್ತಿಲ್ಲ. ಇದು ನನ್ನದೇ ಕಥೆ.

ಈ ಪ್ರಸಂಗ ಎದುರಾದದ್ದು ನನ್ನ ದಿನನಿತ್ಯದ ಏಕತಾನತೆಯ ನಡಿಗೆಯಲ್ಲಿ! ನನಗದು ಕೋಪ ಬರಿಸಲಿಲ್ಲ. ಮುಜುಗರವನ್ನೂ ಉಂಟುಮಾಡಲಿಲ್ಲ. ಆದರೆ... ಕಾಯುವಂತೆ ಮಾಡಿಬಿಟ್ಟಿತ್ತು. ಸದಾಶಯದೊಂದಿಗೆ ಸ್ವಸ್ಥ ಮನಸ್ಸಿನಿಂದ ಕಾಯುವಂತೆ. ನಾನೊಬ್ಬ ಬ್ಯಾಂಕ್ ಉದ್ಯೋಗಿ, ಹನ್ನೆರಡು ವರ್ಷಗಳಾಗಿವೆ ಮ್ಯಾನೇಜರ್ ಪಟ್ಟ ತೊಟ್ಟು. ಇದು ನನ್ನ ಸ್ವ ಇಚ್ಛೆಯ ಕಾಯಕ. ಆ ದಿನವೂ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೊರಟಿದ್ದೆ. ಎರಡೂವರೆ ಕಿ.ಮೀ ದೂರದ ಬ್ಯಾಂಕಿಗೆ ನಾನು ನಡೆದು ಹೋಗುವುದು. ಅದು ನನ್ನ ನಿತ್ಯ ಕಾಯಕ. ಕೆಲವೊಂದು ಪ್ರಿನ್ಸಿಪಲ್ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವ ನಾನು. ಇತರರಿಗೆ ಅಸಂಬದ್ಧ ಎನ್ನಿಸಿದರೂ ನಾನದನ್ನು ಬಿಡಲಾರೆ. ‘ಬ್ಯಾಂಕ್ ಮ್ಯಾನೇಜರ್ ಆಗಿ ಕೈಯಲ್ಲಿ ಚೀಲ ಹಿಡಿದು ಹೀಗೆ ನಡೆದು ಬ್ಯಾಂಕಿಗೆ ಹೋಗುತ್ತಿಯಲ್ಲ, ಯಾವ ಪುರುಷಾರ್ಥಕ್ಕೋ? ಯಾವ ಜಗತ್ತನ್ನು ಉದ್ಧಾರ ಮಾಡುವೆ ನೀನೊಬ್ಬನೆ’ ಎನ್ನುವ ಸ್ನೇಹಿತರು ಆಗಾಗ ಛೇಡಿಸಿದರೂ ನನ್ನ ಸ್ವಭಾವ ಗೊತ್ತಿದ್ದ ಕಾರಣ ಅವರು ಮತ್ತೆ ಮುಂದುವರೆಸುವುದಿಲ್ಲ.

ದೈನಂದಿನ ಜೀವನದಲ್ಲಿ ಎಷ್ಟೆಲ್ಲಾ ಐಶಾರಾಮಿ ಸಂಗತಿಗಳಿದ್ದರೂ, ತಲೆಯ ಉಪಯೋಗ ಮಾಡಬೇಕಾದ ಈ ಹಣಕಾಸಿನ ವ್ಯವಹಾರಗಳ ನೌಕರನಾಗಿ, ಕಂಪ್ಯೂಟರ್, ಕ್ಯಾಲ್ಕುಲೇಟರ್, ಕೌಂಟಿಂಗ್ ಮಷಿನ್ಗಳಂತೆ ನಾನೂ ಒಂದು ಮಷಿನ್ ಆಗಿ ಹೋದದ್ದು ಹಣ.. ಹಣ.. ಹಣ ಅಂತ ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಏಳಾದರೂ ಆಯಿತು, ಎಂಟಾದರೂ ಆಯಿತು. ಈ ಛಾಪಿಸಿದ ಪೇಪರ್ಗಳ ಮುಖ ನೋಡುವುದೇ ಬದುಕಿನ ಭಾಗ್ಯ ಎಂದು ಬ್ಯಾಂಕಿನ ಅದೆಷ್ಟೋ ಪರೀಕ್ಷೆಗಳಿಗೆ ತಯಾರಿ ನಡೆಸಿ ಕೊನೆಗೂ ಬ್ಯಾಂಕ್ ಅಧಿಕಾರಿಯಾಗಿಬಿಟ್ಟಿದ್ದೆ. ಇಲ್ಲಿಗೆ ಮುಂಬಡ್ತಿಗೊಂಡು ಬ್ಯಾಂಕಿನ ಮ್ಯಾನೇಜರ್ ಆಗಿ ಬಂದ ದಿನದಿಂದಲೂ ಈಗ ಹತ್ತಾರು ವರ್ಷಗಳಾದರೂ ಒಂದೇ ಒಂದು ದಿನ ಹಣದ ವಹಿವಾಟು ಲೆಕ್ಕಾಚಾರ ತಪ್ಪಿದ್ದಿಲ್ಲ. ಅಪ್-ಟು- ಡೇಟ್ ಆಗಿಯೇ ಇರುತ್ತಿತ್ತು.

ಆದರೆ, ಮೊನ್ನೆ ಮಾತ್ರ ಅದು ಹೇಗೆ ಅಷ್ಟೊಂದು ಹಣದ ಲೆಕ್ಕಾಚಾರದಲ್ಲಿ ತೊಂಬತ್ತು ಸಾವಿರ ರೂಪಾಯಿಗಳಷ್ಟು ವ್ಯತ್ಯಾಸ ಉಂಟಾಗಿದ್ದು, ಕೊನೆಗೂ ಬಗೆಹರಿಯದ ಸಮಸ್ಯೆ ಆಗಿ ವಾರವಾಗಿದೆ. ಎಲ್ಲಾದರೂ ಮೇಲಧಿಕಾರಿಗಳು ಬಂದರೆ? ಈ ನಷ್ಟ ಭರಿಸುವ ಬಗೆ ಹೇಗೆ? ಎನ್ನುವ ಗೊಂದಲದಲ್ಲಿಯೇ ಎಡಬಿಡದೆ ಅಡ್ಡಾಡುವ ಬಸ್ಸು ಕಾರುಗಳನ್ನು ಸಂಭಾಳಿಸಿಕೊಂಡು ಚನ್ನಮ್ಮ ಸರ್ಕಲ್ ದಾಟಿ ಮುಂದೆ ಬಂದಿದ್ದೆ. ಒಂದೆರಡು ಹೆಜ್ಜೆಗಳಷ್ಟೇ! ತಲೆ ಕೆರೆದುಕೊಳ್ಳುವುದಕ್ಕೂ ಪುರುಷೊತ್ತಿಲ್ಲ. ಛೇ! ಈ ನೌಕರಿಗೆ ಬರಬಾರದಿತ್ತು ಎಂದುಕೊಳ್ಳುತ್ತಾ ಬರುತ್ತಿದ್ದೆ. ಯಾವುದೋ ಕಾಲೇಜಿನಲ್ಲಿ ಪಾಠ ಮಾಡುವ ಮೇಷ್ಟ್ರ ಆಗಿದ್ದಿದ್ದರೆ ಆರಾಂ ಆಗಿ, ತಿಂಗಳಿಗೆ ಒಂದು ಸಲ ಬಂದ ಸಂಬಳ ಹಿಡಿದು ಖುಷಿಯಾಗಿ ಸರಿಯಾಗಿ ಎಣೆಸಿಕೊಂಡು ಜೇಬಲ್ಲಿಟ್ಟುಕೊಂಡರೆ ಆಗಿ ಹೋಗಿರುತ್ತಿತ್ತು. ಈ ಹಣದ ಮುಂದೆ ದಿನಾ ಹಲ್ಲು ಕಿರಿದು ಬರೋ ಜನರ ಕಂಡೂ ಕಂಡೂ ನನಗೂ ಒಂದು ನಮೂನೆಯ ಜಿಗುಪ್ಸೆ. ಆದರೆ ಬ್ಯಾರೆ ಏನಿದೆ ಉಪಾಯ? ಎಂಥಕೆ ಇದೇ ಯೋಚನೆ ನನಗೆ. ತಲೆ ಚಿಟ್ಟು ಹಿಡಿದು ಹೋಯ್ತಪ್ಪಾ ಎಂದು ಕೊಳ್ಳುತ್ತ ಬರುತ್ತಿರುವಾಗಲೇ ಆಕೆ, ಆ ಹುಡುಗಿ ಬೆಳದಿಂಗಳಂತಹ ಕಂಗಳ ತುಂಬು ಪ್ರಾಯದ ಹೆಣ್ಣು ತಬ್ಬಿಬ್ಬುಗೊಳಿಸಿ ಕೆನ್ನೆಗೆ ಮುತ್ತಿಟ್ಟು ಹೊರಟು ಹೋದದ್ದು.

ಆ ಘಟನೆ ನನ್ನ ಬದಲಾಯ್ಸಿಯೇ ಬಿಡ್ತಲ್ಲ. ಯಾರವಳು? ನನಗೆ ಹೊಸ ಹುರುಪ ತಂದುಕೊಟ್ಟು, ನನ್ನ ತಟ್ಟಿ ಮತ್ತೊಮ್ಮೆ ಎಬ್ಬಿಸಿಬಿಟ್ಟವಳು. ಬದುಕನ್ನು ಮತ್ತೆ ಪ್ರೀತಿಸಲು ಕಲಿಸಿದವಳು. ಯಾರವಳು! ನಾಲ್ಕಾರು ದಿನಗಳಲ್ಲಿ ನನ್ನ ವೈಖರಿ ನನಗೆ ಅಚ್ಚರಿ ಎನ್ನುವಂತೆ ಬದಲಾಗಿಬಿಟ್ಟಿತು. ನಾನು ತೀರಾ ಶಿಸ್ತುಬದ್ಧನಾಗುತ್ತಿದ್ದೇನೆ ಅಂತಲೇ ಅನ್ನಿಸುತ್ತಿದೆ. ಹೌದು, ಜನರ ಕೆಲವೊಂದು ಸ್ವಭಾವಗಳು ತೀರಾ ವಿಚಿತ್ರ. ಈಗ ನಾನು ಬಹು ಆಕರ್ಷಿಣೀಯವಾಗಿ ಕಾಣವಂತೆ ನನ್ನ ಕ್ರಾಪುಗಳನ್ನು ಆಗಾಗ ಸರಿಮಾಡಿಕೊಳ್ಳುತ್ತಿರುತ್ತೇನೆ. ಮೀಸೆಯ ನಡುವೆ ತೋರುವ ಬಿಳಿಕೂದಲುಗಳನ್ನು ಕತ್ತರಿಸಿ ಹಾಕುತ್ತೇನೆ. ಇಸ್ತ್ರಿ ಇಲ್ಲದೆ ಒಂದೇ ಶರ್ಟನ್ನು ಎರಡು ಮೂರು ದಿನಗಳವರೆಗೆ ತೊಡುತ್ತಿದ್ದ ನಾನು ಈಗ ನಾಲ್ಕು ದಿನದಿಂದ ದಿನವೂ ಶರ್ಟ್ ಬದಲಾಯಿಸಿದ್ದೇನೆ. ಇದಕ್ಕೆ ಕಾರಣ ಅವಳೇ ಇರಬೇಕು.

ದಿನವೂ ಬೆಳಿಗ್ಗೆ ಎದ್ದ ಕೂಡಲೇ ಇವತ್ತಾದರೂ ಆಕೆ ಸಿಕ್ಕರೆ ಎಂದು ಮನಸ್ಸು ಹಳಹಳಿಸುವಂತಾಗಿದೆ. ಆ ಸುಂದರಿ ಸಿಕ್ಕ ದಾರಿಯ ಗುಂಟ ಹೆಜ್ಜೆಗಳು ಯಾಕೋ ನಿಧಾನವಾಗುತ್ತವೆ. ಇವತ್ತಾದರೂ ಆಕೆ ಸಿಗಲಿ, ಮತ್ತೆ ಆಕೆಯನ್ನು ನೋಡುವಂತಾಗಲಿ. ಇನ್ನು ಹೆಚ್ಚು ಆಸೆ ಮೂಡಿ, ಮತ್ತೊಮ್ಮೆ ಆಕೆ ನನ್ನ ಮುತ್ತಿಟ್ಟರೆ... ವಿಚಾರಗಳ ಹೊರತಾಗಿ ಬೇರೇನೂ ನನ್ನ ತಲೆಯಲ್ಲಿ ಆ ಸಮಯದಲ್ಲಿ ಸುಳಿಯುವುದೇ ಇಲ್ಲ. ಇವತ್ತೂ ಕೂಡಾ ಅವಳನ್ನೇ ನೆನೆಯುತ್ತಾ ಬ್ಯಾಂಕಿಗೆ ಬಂದು ಮುಟ್ಟಿದಾಗ ಎಲ್ಲ ಸಿಬ್ಬಂದಿ ತಮ್ಮ ಸ್ಥಳಗಳಲ್ಲಿ ಕೆಲಸದಲ್ಲಿದ್ದರು. ನನಗೇ ಮುಜುಗರವಾದಂತಾಯಿತು. ನನ್ನ ಛೇಂಬರಿಗೆ ಹೋಗಿ ಕುಳಿತುಕೊಳ್ಳುವ ಮೊದಲು ಸುತ್ತಲೂ ಕಣ್ಣಾಡಿಸುವುದು ವಾಡಿಕೆ. ಅಲ್ಲೊಂದು ಪಿಂಕ್ ಕವರ್ ಕಣ್ಣಿಗೆ ಕಾಣುತ್ತಲೇ ವಿಚಿತ್ರ ತಳಮಳ ಎದೆಯಲ್ಲಿ ಸುಳಿದಂತೆ ಆಗಿ ನಾನೇ ಬಗ್ಗಿ ಎತ್ತಿಕೊಂಡೆ. ಅದು ಬರಿ ಪಿಂಕ್ ಕಾಗದ. ನಗುಬಂತು.

ಮತ್ತೆ ವಹಿವಾಟು ಹೆಚ್ಚುತ್ತಲೇ ಎಲ್ಲ ಮರೆತು ಹಣದೊಂದಿಗೆ ಮುಖಾಮುಖಿ. ತಲೆ ಧೀಂ ಎನ್ನುವಷ್ಟು. ನಡು ವಿರಾಮದ ವೇಳೆ ಕ್ಯಾಂಟೀನಿಗೆ ಹೋದಾಗ ಪಕ್ಕದಲ್ಲಿ ಕೂತ ಕ್ಯಾಷಿಯರ್ ಡೇವಿಡ್ ಆಚೆ ಟೇಬಲ್ಲಿನ ಮೇಲೆ ಆಸೀನರಾಗಿದ್ದ ಹುಡುಗಿಯರಿಬ್ಬರ ಕಡೆ ನೋಡುತ್ತಾ, ಕಾಫಿ ಹೀರುತ್ತಿದ್ದ. ಆಗಾಗ ತುಟಿ ಸವರಿಕೊಳ್ಳುವುದು ನೋಡಿ ನನಗೇಕೋ ಅಸಹ್ಯವೆನಿಸಿತ್ತು. ಪಾಪ, ಈಗಷ್ಟೇ ಜಗತ್ತನ್ನು ನೋಡುತ್ತಿರುವ ಎಳೆ ಚಿಗುರಿನಂತಹ ಆ ಹುಡುಗಿಯರಿಗೆ ಇವನ ಕಡೆ ಕ್ಯಾರೇ ಇರಲಿಲ್ಲ. ನನಗೆ ,ಮತ್ತೆ ನಗು ಬಂತು. ಆದರೆ, ನನಗೆ ಆ ಮುದ್ದು ಹೆಣ್ಣಿನ ಬಗ್ಗೆ ಇರುವ ಭಾವ ಎಂಥದ್ದು. ಅದು ಪ್ರೀತಿ? ಛೇ! ಅಲ್ಲ, ಅಲ್ಲವೇ ಅಲ್ಲ. ಅದೊಂದು ಸುಂದರ ಕನಸು. ಆದರೆ ಡೇವಿಡ್ನದು ಕೂಡಾ ಅದೇ ಯತ್ನವೇ ಆಗಿರಬಾರದೇಕೆ? ಅವನೇನೂ ಅವರ ಹತ್ತಿರ ಹೋಗುತ್ತಿಲ್ಲ. ಕಣ್ಣಲ್ಲೇ ಅನಂದಿಸುತ್ತಿದ್ದಾನೆ. ಡೇವಿಡ್ನಂತೆ ನಾನು ನನ್ನ ಅಪ್ಡೇಟ್ ಮಾಡಿಕೊಳ್ಳಬಯಸುತ್ತಿದ್ದೇನಾ? ರಿಫ್ರೇಶ್ ಆಗಿ ಸಾಮರ್ಥ್ಯ ಪರೀಕ್ಷೆಗೆ ಹೊರಟು ನಿಂತವರಂತೆ ನಮ್ಮಿಬ್ಬರನ್ನೂ ಗೋಡೆಯ ಚಿತ್ರ ಮಾಡಿ ನೋಡಿಕೊಂಡೆ. ಸಾಮ್ಯ ಕಂಡು ಮನಸ್ಸು ಪಿಚ್ಚೆನ್ನಿಸಿತು.

ಬದುಕಿನ ನಿತ್ಯ ಜೀವನಯಾನದಲ್ಲಿ ಇದು ಒಂದು ‘ಬೂಸ್ಟಿಂಗ್ ಎಕ್ಷಪೀರಿಯನ್ಸ್’ ಅಂಥೆಲ್ಲಾ ನನ್ನ ಕಿರಿಯ ಸಹೋದ್ಯೋಗಿಗಳ ಜೊತೆ ಚಹ, ಕಾಫಿ ಕುಡಿಯಲು ಹೊರಗೆ ಹೋದ ಸಮಯದಲ್ಲಿ ಹೇಳಿಕೊಳ್ಳಬಯಸುತ್ತೇನೆ. ಆದರೆ ಬಾಯಿಗೆ ಬಂದದ್ದು ತುಟಿವರೆಗೂ ಬರುವುದೇ ಇಲ್ಲ. ನನ್ನ ಹಂಗಿಸಬಹುದು ಈ ಜನರು. ಈ ವಯಸ್ಸಿಗೆ ಇದೆಂಥಾ ಹುಚ್ಚು ಇವನಿಗೆ ಅಂತಾ. ಅಂಥ ಚೆಂದ ಹೆಂಡತಿ, ಬೆಳೆದ ಮಕ್ಕಳು ಜೊತೆಗಿರುವಾಗ ಆ ಹುಡುಗಿಯ ಬಗ್ಗೆ ಪಡ್ಡೆಹುಡುಗನಂತೆ ಮಾತಾಡ್ತಾನೆ ಅಂತೆಲ್ಲ ನನ್ನ ಹೀಯಾಳಿಸಿದರೆ! ಸುಮ್ಮನಾಗುತ್ತೇನೆ.

ವಾರಗಳೇ ಕಳೆದುಹೋಗಿವೆ. ನನ್ನ ಕಾಯುವಿಕೆ ನಡದೇ ಇದೆ. ಇವತ್ತು ಬರಬಹುದು.

ಈಗೀಗ ನಾನು ಮೊದಲಿನ ಹಾಗೇ ಸಿರಿಯಸ್ಸಾದ ಪ್ರಬುದ್ಧ ಮನಸ್ಸು ಬಯಸುವಂತಹ ಪುಸ್ತಕಗಳ ಓದುತ್ತಿಲ್ಲ. ಪತ್ರಿಕೆಯಲ್ಲಿ ಬರುವ ಅಂಕಣಗಳಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸುವ ವೈದ್ಯರ ಸಲಹೆಗಳನ್ನು ಅದರ ವಿಶ್ಲೇಷಣೆಗಳನ್ನು ಓದುವ ಸ್ವಭಾವ ಹೆಚ್ಚುತ್ತಿದೆ. ಹೆಣ್ಣು ಮಕ್ಕಳಲ್ಲಿ ಕಾಣುವ ನಡುವಯಸ್ಸಿನ ಮನೋಪಾಸ್ ಪಿರಿಯಡ್ನ ಕೀಳರಿಮೆ ಗಂಡಸಲ್ಲೂ ಇದ್ದು ಆಂಡ್ರೋಪಾಸ್ ಎನ್ನುತ್ತಾರೆ. ಆಗ ಗಂಡು ಹೀಗೆ ತನ್ನ ಪುರುಷತ್ವವನ್ನು ಪರೀಕ್ಷಿಸಲು ಏನಾದರೂ.. ಛೇ! ಹೀಗೆಲ್ಲಾ ನಾನು ಯೋಚಿಸಬಾರದು. ಈ ‘ಆಂಡ್ರೋಪಾಸ್’ ಎಂಬುದು ಯಾಕೋ ಮನಸ್ಸಿಗೆ ಕಿರಿಕಿರಿ ಮಾಡಿದೆ. ಹಾಗೇನೂ ಇಲ್ಲ. ನಾನು ಮೊದಲಿನಂತೆ ಇದ್ದೇನೆ. ದಿನವೂ ಹೆಂಡತಿ ಕೊಟ್ಟ ಡಬ್ಬ ಹಿಡಿದೇ ನಾನು ಬ್ಯಾಂಕಿಗೆ ಹೋಗುವುದು. ಅಲ್ಲಿ ಇಲ್ಲಿ ತಿಂದು ನನಗಂತೂ ಅಭ್ಯಾಸವಿಲ್ಲ. ಇಬ್ಬರು ಮಕ್ಕಳೂ ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಇನ್ನೇನು ನಾಲ್ಕಾರು ವರ್ಷ ಕೆಲಸ ಮಾಡಿದರೆ ಮುಗಿಯಿತು.

ಎಷ್ಟು ಬೇಗ ವರ್ಷಗಳು ಕಳೆದು ಬಿಡುತ್ತವೆ. ನಾನು ಕೆಲಸಕ್ಕೆ ಸೇರಿದ್ದು ನಿನ್ನೆ ಮೊನ್ನೆಯಂತಿದೆ.

ಅರೇ! ಇಲ್ಲಿಗೆ ಬಂದು ತಲುಪಿದೆ. ಇದೇ ಸ್ಥಳ. ಅಂದು ಹುಡುಗಿ ಸಿಕ್ಕ ಜಾಗೆ ಇದೇ. ಕಾಣುತ್ತಿಲ್ಲ ಆ ಹುಡುಗಿ. ಯಾವತ್ತೂ ಕಾಣುವುದೇ ಇಲ್ಲವೋ ಏನೋ? ಬರುವಾಗ ಎಷ್ಟು ನೀಟಾಗಿ ಬಟ್ಟೆ ತೊಟ್ಟುಕೊಂಡೆ. ಇವಳಿಗಾಗಿ. ಇವತ್ತಾದರೂ ಬರಬಹುದು ಎಂಬ ಆಸೆ. ನಾನು ಒಂದು ಕಾರು ಕೊಂಡರೆ ಹೇಗೆ? ಇವಳನ್ನು ಭೇಟಿಯಾದಾಗ ಎಲ್ಲಿಯಾದರೂ ಕರೆದೊಯ್ಯಬಹುದು, ನಾವಿಬ್ಬರೇ ಕೂತು ಲಲ್ಲೆ ಹೊಡೆಯಬಹುದು, ಇತ್ಯಾದಿ ಇತ್ಯಾದಿ..

ಈ ಮನಸ್ಯಾಕೆ ಇಷ್ಟು ವಿಪರೀತ. ಹೆಂಡತಿ ಮಕ್ಕಳು ಕಾರಿಗಾಗಿ ಹಂಬಲಿಸಿದಾಗ ನನ್ನ ಪರಿಸರವಾದಕ್ಕೆ ಬದ್ಧನಾಗಿದ್ದೆ. ನನ್ನ ಕೈಕೆಳಗಿನ ಆ ದಪ್ಪ ಹೊಟ್ಟೆ ವೆಂಕಟ್ ಫೋರ್ಚುನರ್ ಕಾರಲ್ಲಿ ಒಂಟಿಯಾಗಿ ಹೋಗುವುದು ನೋಡಿದರೆ ಈ ಜನರಿಗೆ ಪರಿಸರದ ಬಗ್ಗೆ ಕಾಳಜಿಯೇ ಇಲ್ಲ ಎನಿಸುತ್ತಿತ್ತು. ಸಣ್ಣಪುಟ್ಟ ಬ್ಯಾಂಕಿನ ಅಧಿಕಾರಿಗಳೇ ದೊಡ್ಡ ದೊಡ್ಡ ಕಾರ್ಗಳಲ್ಲಿ, ಸಂಚರಿಸಿದರೆ ನಾನು ಮಾತ್ರ ಬಸ್ಸಿಗೆ ಹೋಗುವುದು. ಸುಮ್ಮನೇ ಕಾರಿಗೆ ದುಡ್ಡು ದಂಡವೆಂದಲ್ಲ. ಅಷ್ಟು ದೂರ ಹೋಗಲು ಒಬ್ಬನಿಗೆ ಕಾರನ್ನು ಬಳಸಿದರೆ ಅನವಶ್ಯಕ ಪೆಟ್ರೋಲ್ ಹಾಳು, ವಾಹನಗಳ ದಟ್ಟನೆಗೆ ಟ್ರಾಫಿಕ್ ಜಾಮ್, ಪರಿಸರಕ್ಕೆ ಹಾನಿ. ನನ್ನೊಬ್ಬನಿಂದ ಏನೂ ಆಗದಿದ್ದರೂ, ನನ್ನ ಕೈಲಾಗುವ ರೀತಿಯಲ್ಲಿ ನಿಸರ್ಗಪೂರಕ ಬದುಕು ಬೇಕು ಎನ್ನುವುದು ನನ್ನ ವಾದ.

ಈ ವಾದ ವಿವಾದಗಳೆಲ್ಲ ಸ್ವಹಿತಕ್ಕಾಗಿಯೇ ಇರಬಹುದೇ? ಪ್ರಚಾರ ಪಡೆಯುವ ನನ್ನ ಹುನ್ನಾರವೇ? ಎಲ್ಲರಿಗಿಂತ ಭಿನ್ನ ಎನ್ನಿಸಿಕೊಳ್ಳುವ ಇರಾದೆಯೇ? ಈಗ್ಯಾಕೆ ಕಾರು ಖರೀದಿಸಬಹುದಿತ್ತು ಎಂಬ ಅಭಿಲಾಷೆ ಮೂಡಿತು? ಏನಾದರೂ ಇರಲಿ, ಈ ಹುಡುಗಿ ಇವತ್ತೂ ಸಿಗಲಿಲ್ಲ. ಎಲ್ಲಿ ಹೋಗಿರಬಹುದು? ನನಗಿಂತ ಮುಂಚೆಯೇ ಹೊರಟು ಹೋಗಿರುತ್ತಾಳೋ ಏನೋ? ನಾಳೆ ಒಂದಿಷ್ಟು ಮುಂಚೆನೇ ಬರಬೇಕು. ಅವಳು ಸಿಕ್ಕರೂ ಸಿಗಬಹುದು. ಅವಳನ್ನು ನಾಳೆ ಹೇಗಾದರೂ ಮಾಡಿ ನೋಡಲೇಬೇಕು. ನನಗೇನು ಅಷ್ಟು ಅವಸರ. ಒಂದರೆಗಳಿಗೆ ಲೇಟಾದರೂ ಉಳಿದವರು ಸಂಭಾಳಿಸುತ್ತಾರೆ. ಎಲ್ಲೋ ವಿಸಿಟ್ ಮಾಡಲು ಹೋಗಿದ್ದೆ ಎಂದರಾಯಿತು.

ಬ್ಯಾಂಕಿನ ಕ್ಯಾಂಟೀನಿಗೂ ನಾನು ನಿತ್ಯ ಹೋಗುವುದಿಲ್ಲ. ನನ್ನ ಕೈಕೆಳಗಿನ ಹುಡುಗರು ಎರಡೆರಡು ಬಾರಿ ಕಾಫಿ ಕುಡಿದು ಬರುತ್ತಿರುತ್ತಾರೆ. ಅವರೆಲ್ಲ ನನ್ನ ಗುಗ್ಗು ಅಂದುಕೊಂಡಿರಬೇಕು. ಛೇ! ಎಷ್ಟು ಯೋಚಿಸುತ್ತಿದ್ದೇನೆ ನಾನು. ಕಳೆದುಕೊಂಡ ಹಣ ಆ ಹುಡುಗಿ ದರ್ಶನವಾದ ದಿನವೇ ಅದೃಷ್ಟ ಎನ್ನುವ ಹಾಗೇ ಮತ್ತೊಮ್ಮೆ ಎಲ್ಲ ಸೂಕ್ಷ್ಮವಾಗಿ ಲೆಕ್ಕ ಮಾಡುತ್ತಿರುವಾಗ ಸಿಕ್ಕು ಅದೇ ದಿನ ಸಂಜೆ ಆ ಚಿಂತೆಯಿಂದ ಮುಕ್ತನಾಗಿದ್ದೆ. ಅಂದಿನಿಂದ ಬೇರೇನು ಯೋಚಿಸಲಿ. ಮಕ್ಕಳು ತಮ್ಮದೇ ಜನತ್ತಿನಲ್ಲಿ. ಕಾಲೇಜು ಬಟ್ಟೆ ಬರೆ ಶೂ ಅಂತೆಲ್ಲ. ಇವಳಾದರೂ ಹೊತ್ತು ಹೊತ್ತಿಗೆ ಸರಿಯಾಗಿ ಊಟ ತಿಂಡಿ ಪೂರೈಸುವ ಅನ್ನದಾತೆ. ಮತ್ತಿನ್ನೇನು? ಎಲ್ಲವೂ ಸರಿ ಇದೆ ಎನ್ನುವಾಗ ಈ ಸಣ್ಣ ತುಡಿತ ಶುರುವಾದದ್ದು ಯಾಕೋ? ಮನಸ್ಸು ಜೋಲಿ ಹೊಡೆಯುತ್ತದೆ.

ಇವತ್ತು ಸಂಜೆ ಮಸಾಜ್ ಸೆಂಟರಿಗೆ ಹೋಗಿ ಬರಬೇಕು. ಮೈ ಮನಸ್ಸು ಜಡ್ಡು ಗಟ್ಟಿಹೋಗಿದೆ. ಎಲ್ಲ ಆಕಾಂಕ್ಷೆಗಳು ಸತ್ತು ಹೋದಂತೆ ಅನ್ನಿಸುತ್ತಿದೆ. ಬಾಡಿ ಮಸಾಜ್ ಮಾಡಿಸಿಕೊಂಡರೆ ಚೈತನ್ಯ ಬರುತ್ತದೆ. ಹೋಗಿ ಅದೆಷ್ಟೋ ವರ್ಷಗಳೇ ಸಂದು ಹೋದವು. ಮದುವೆಯಾದ ಹೊಸದರಲ್ಲಿ ಒಂದೆರಡು ಬಾರಿ ಹೋಗಿದ್ದು ಬಿಟ್ಟರೆ ಮತ್ತೆ ಹೋಗಲಾಗಲೇ ಇಲ್ಲ. ಇವತ್ತು ಹೋಗಲೇಬೇಕು. ಮೆತ್ತಗೆ ಮೈಯನ್ನು ಹುರಿಗೊಳಿಸಿಕೊಂಡು ಬರಬೇಕು. ಹೊಸದಾಗಿ ಬಂದ ಸಿಬ್ಬಂದಿ ಅದರ ಬಗ್ಗೆ ಅದೆಷ್ಟು ಚರ್ಚಿಸುತ್ತಾರೆ. ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡವನಂತೆ ನಾನು ಮಾತ್ರ ಎಡಬಿಡದೇ ಈ ವ್ಯವಹಾರದ ಕೆಲಸಗಳಲ್ಲಿ ತಲೆ ಎತ್ತುವ ಪ್ರಮೇಯವೇ ಇಲ್ಲದಂತೆ ದುಡಿದೆ. ಇವರೆಲ್ಲ ಎಷ್ಟು ಆರಾಮದಿಂದ ಇರುವರು?

ನಾಳೆ ಸಿಗಬಹುದು ನಿರಾಭರಣ ಸುಂದರಿ. ಕಣ್ಣಿನೊಳಗೆ ಇಳಿದು ಹೋದ ಆಕೆಯ ಚಿತ್ರ ತೆಗೆಯಲು ಆಗದೆಂಬಂತೆ ಮೂಡಿ ನಿಂತಿದೆ. ಅಂತಹ ಸೌಂದರ್ಯ, ಆ ಸ್ಪರ್ಶ, ಆಕೆಯ ತುಟಿಗಳು ತಾಕಿದ ಕೆನ್ನೆ ಯೋಚಿಸುತ್ತ ನನಗೆ ಮುಜುಗರವಾಯಿತು. ಇಷ್ಟು ವರ್ಷಗಳಲ್ಲಿ ಹೆಣ್ಣುಮಕ್ಕಳನ್ನು ತದೇಕವಾಗಿ ದಿಟ್ಟಿಸದ ನಾನು ಈಗ ದಾರಿಯಲ್ಲಿ ವಿಚಿತ್ರ ವೇಷ ತೊಟ್ಟ, ಬಣ್ಣಗಳಿಂದ ಮುಚ್ಚಿಹೋದ ಮುಖಗಳಲ್ಲಿ ಅವಳನ್ನು ಹುಡುಕುವ ಪ್ರಯತ್ನ ಮಾಡುತ್ತಲೇ ಇದ್ದೇನೆ.

ಅವಳು ಕೂಡಾ ನನ್ನ ಹುಡುಕುತ್ತಿರಬಹುದೇ? ಮನಸ್ಸು ಯೋಚಿಸುತ್ತಿದೆ. ಮಾಗಿದಂತೆ ಪ್ರಾಯ ದೇಹ ಬುದ್ಧಿ ಬಲಿತರೂ ಇಂತಹ ವಿಕಾರಗಳಿಗೆ ಬಲಿಯಾಗುತ್ತಿದ್ದೇನೆ. ಮೊದಮೊದಲು ಮಗಳ ವಯಸ್ಸಿನ ಹೆಣ್ಣಿನೊಂದಿಗೆ ಹೆಗಲು ತುಂಬಾ ಕೈ ಚಾಚಿ ಲಲ್ಲೆಹೊಡೆಯುವ ನೆರೆತ ಕೂದಲ ಬಿಳಿಗಡ್ಡಧಾರಿಗಳನ್ನು ಕಂಡಾಗಲೆಲ್ಲಾ, ಪಟ್ಟಣದ ಈ ಜನರ ಸಂಬಂಧಗಳನ್ನು ನೋಡಿ ಅಯ್ಯೋ ಎಂದುಕೊಳ್ಳುತ್ತಿದ್ದೆ.

ಆದರೆ ಇಂದು ವ್ಯಥೆ ನನ್ನದಾಗಿದೆಯೇ? ನನ್ನ ಪತ್ನಿ ಇದೊಂದು ಅರಿಯದೇ ಇರುವುದು ನನ್ನ ಭಾಗ್ಯವೇ? ಯೋಚಿಸುತ್ತಾ ಕೂತೆ. ಯಾಕೋ ಇವತ್ತು ರಜೆ ಮಾಡುವುದೇ ಕ್ಷೇಮ. ಮನಸ್ಸು ಸರಿಯಿಲ್ಲ. ವರ್ಷವಾಗುತ್ತಾ ಬಂತು ಈ ಹಿತವಾದ ಚಿಂತೆ ಎದೆಯ ಮೇಲಿದೆ. ಕಾಯುವಿಕೆ ಕೊಡುವ ವೇದನೆ, ಮತ್ತು ಹಿತವಾದ ಭಾವ ನನ್ನ ಉಲ್ಲಸಿತಗೊಳಿಸಿದ್ದಂತೂ ಸತ್ಯ ಎಂದುಕೊಂಡೆ. ಅದಾಗಲೇ ಒಂಬತ್ತು ಗಂಟೆ ಮೂವತ್ತು ನಿಮಿಷ. ಹೋಗುವುದೆಂದರೆ ಎರಡೂವರೆ ಕಿ.ಮೀ ನಡೆಯಲು ಸುಮಾರು ಅರ್ಧಗಂಟೆ ಬೇಕು. ಇಷ್ಟೊತ್ತಿಗೆ ಎಲ್ಲರೂ ಬಂದಿರುತ್ತಾರೆ. ಅಸಿಸ್ಟೆಂಟ್ ಮ್ಯಾನೇಜರ್ ಕುಮಾರ್ಗೆ ಫೋನಾಯಿಸಿ ಹೇಳುತ್ತಿದ್ದಂತೆ ಆತನೆಂದ ‘ಸರ್.. ಇವತ್ತು ಹೊಸ ಅಪಾಯಿಂಟ್ಮೆಂಟ್ ಆದ ಮೇಡಂ ಬಂದಿದ್ದಾರೆ, ಈಗಷ್ಟೇ ಹೊರಹೋಗಿದ್ದಾರೆ, ಎಲ್ಲ ನೇಮಕಾತಿ ಪ್ರಪತ್ರಗಳನ್ನು ತಂದಿರಲಿಲ್ಲ, ಹಾಗಾಗಿ ತರಲು ಹೋಗಿದ್ದಾರೆ. ನೀವು ಬಂದಿದ್ದರೆ ಒಳ್ಳೆಯದಿತ್ತು’ ಎಂದು ಹೇಳಿದ. ‘ಆಯ್ತು’ ಎಂದಷ್ಟೇ ನುಡಿದು ಫೋನಿಟ್ಟೆ. ಬೆಳಿಗ್ಗೆಯೇ ಸ್ನಾನ ಮುಗಿಸಿದ್ದೆ. ಬೇಗ ಬೇಗ ತಿಂಡಿತಿಂದು ನೀಟಾಗಿ ಬಟ್ಟೆ ಧರಿಸಿ ಹೊರಬಂದವ ನೇರವಾಗಿ ರಸ್ತೆಗಿಳಿದೆ. ಸರ್ಕಲ್ ದಾಟಿ ಮುಂದೆ ಬರುತ್ತಿದ್ದಂತೆ ಅದೇ ಸ್ಥಳದಲ್ಲಿ ಅದೇ ಹುಡುಗಿ ಇವತ್ತು ಸೀರೆಯಲ್ಲಿ ಕಂಗೊಳಿಸುತ್ತಿದ್ದಳು. ಜೊತೆಗೊಬ್ಬ ತರುಣ. ಒಂದೆರಡು ಕ್ಷಣ ನಿಂತೇ ಇದ್ದರು. ಆಕೆಯ ಕೈಯಲ್ಲಿ ಅದೇ ಗುಲಾಬಿ.

ನಾನು ನಾಲ್ಕಾರು ಹೆಜ್ಜೆ ಹಿಂದಿದ್ದೆ. ಮುಂದೆ ದಾರಿಯಲ್ಲಿ ನನ್ನಷ್ಟೇ ಅಲ್ಲ, ಸ್ವಲ್ಪ ಹೆಚ್ಚು ಅನ್ನುವಷ್ಟು ಪ್ರಾಯದ ವ್ಯಕ್ತಿಯೊಬ್ಬ ಬರುತ್ತಿದ್ದರು. ಹುಡುಗಿ ತಡಮಾಡಲಿಲ್ಲ. ಆ ವ್ಯಕ್ತಿಯ ಕೈಗೆ ಹೂ ಕೊಟ್ಟು, ಭುಜ ಹಿಡಿದು ಕೆನ್ನೆಗೊಂದು ಮುತ್ತಿಟ್ಟೇ ಬಿಟ್ಟಳು. ಅದೂ ನನ್ನ ಮುಂದೆಯೇ! ಆತನ ಪಾಡು ನನ್ನಂತೆ ಆಗಿತ್ತೆಂದು ಬೇರೆ ಹೇಳಬೇಕಾಗಿರಲಿಲ್ಲ. ನಾನು ಕುಸಿದೆ, ಕಾಲುಗಳು ಚಲಿಸಲಾರದಷ್ಟು ನಡುಗತೊಡಗಿದವು. ಆ ಹುಡುಗಿ ತನ್ನೊಂದಿಗೆ ಬಂದ ಹುಡುಗನೊಂದಿಗೆ ಬೈಕ್ ಏರಿ ಹೊರಟೇ ಹೋದಳು. ಎದುಸಿರು ತಡೆಯಲಾಗದೇ ಪಕ್ಕದ ಟೀ ಸ್ಟಾಲ್ಗೆ ಹೋಗಿ ಕುಳಿತುಕೊಂಡೆ. ತಲೆ ಸಿಡಿಯತೊಡಗಿತು. ಚುಂಬನಕ್ಕೆ ನನ್ನದೇ ಆದ ವ್ಯಾಖ್ಯಾನ ಮಾಡಿಕೊಂಡಿದ್ದ ನನಗೆ ಈ ಹುಡುಗಿಯ ವರ್ತನೆ ಸರಿಕಾಣಲಿಲ್ಲ. ನನ್ನ ಹೃದಯಕ್ಕೆ ಗಾಯವಾಗಿತ್ತು.

ಸ್ಟಾಲ್ ಮಾಲೀಕ ತನ್ನ ಪರಿಚಯದವನೊಡನೇ ಹೇಳುತ್ತಿದ್ದ, ‘ನೋಡಿದ್ರಾ ಸರ್ ನೀವು ಆ ಹುಡುಗಿ ಮಾಡಿದ್ದು? ಒಂದ ನಮೂನಿ ಹೊಸ ವರಸೆ. ಈ ಕಾಲದ ಹೆಣ್ಣು ಮಕ್ಕಳದು ವಿಚಿತ್ರ ವೈಖರಿ. ಈಗ ಮೂರು ವರ್ಷದಿಂದ ನೋಡ್ತಾ ಇದ್ದೀನಿ. ಆ ಹುಡುಗಿ ಇಲ್ಲೇ ಬಂದು ನಡುವಯಸ್ಸಿನ ಗಂಡಸಿಗೆ ಹೂ ಕೊಟ್ಟು ಮುತ್ತಿಟ್ಟು ಹೋಗುತ್ತಾಳೆ. ಅವಳ ತಂದೆ ಇದೇ ಸರ್ಕಲ್ ದಾಟಿ ಬರುವಾಗ ನಾಲ್ಕು ವರ್ಷಗಳ ಹಿಂದೆ ಇಲ್ಲೇ ಇದೇ ಜಾಗದಲ್ಲಿ ಆಕ್ಸಿಡೆಂಟಾಗಿ ತೀರಿಹೋಗಿದ್ರಂತೆ. ಇಲ್ಲಿ ಆಕೆಗೆ ಒಂದು ಗುಲಾಬಿ ಇಟ್ಟು ಹೋಗುವ ಇರಾದೆ. ಆದರೆ ಇದು ಜನಜಂಗುಳಿ ಸ್ಥಳ ಆಗಿರೋದ್ರಿಂದ ತಂದೆಗೆ ಸಮರ್ಪಿಸಿದ ಆ ಹೂ ಕಾಲಡಿ ಬಿದ್ದು ಅಪ್ಪಚ್ಚಿ ಆಗುವುದು ಆಕೆಗೆ ಇಷ್ಟ ಇಲ್ಲವಂತೆ. ಅದಕ್ಕೆ ಆಕೆಯ ತಂದೆಯ ವಯಸ್ಸಿನ ಪುರುಷನೊಬ್ಬನಿಗೆ ಇದೇ ಸ್ಥಳದಲ್ಲಿ ಹೂ ನೀಡಿ, ಪ್ರೀತಿ ಹಂಚಿ ಹೋಗುತ್ತಾಳೆ ಹುಡುಗಿ, ಪಾಪ ಎನ್ನಿಸುತ್ತದೆ. ಈ ಹೆಣ್ಣು ಮಕ್ಕಳ ವಾತ್ಸಲ್ಯ, ಪ್ರೀತಿಗೆ ಅವರು ಬರೆಯುತ್ತಿರೋ ಭಾಷ್ಯ ನೋಡಿ’ ಎನ್ನುತ್ತಿದ್ದ. ನನಗೆ ಮುಂದೆ ಕೇಳಿಸಿಕೊಳ್ಳಲಾಗಲಿಲ್ಲ.

ನಾನು ಕುಬ್ಜನಾಗಿದ್ದೆ. ಕಾಲೆಳೆಯುತ್ತಾ ಬ್ಯಾಂಕಿಗೆ ಬಂದರೆ ಅದೇ ಹುಡುಗಿ ನನ್ನ ಛೇಂಬರಿನೊಳಗೆ ಆ ಹುಡುಗನೊಡನೆ ನನಗಾಗಿ ಕಾಯುತ್ತ ಕುಳಿತಿದ್ದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.