ದೊಡ್ಡದಾದ ಬಾಳೆಲೆ ಹರಡಿದ್ದರು. ಮಿಂದು ಬಂದು ಮಡಿಯಾದ ವಸ್ತ್ರದಲ್ಲಿದ್ದ ಅಪ್ಪಣ್ಣನೆದುರು ಊಟದೆಲೆ ಹಾಕಿದಾಗ ಗಂಟೆ ಇನ್ನೂ ಹನ್ನೊಂದು. ದೂರದಲ್ಲಿ ಕಂಬದ ಅಡ್ಡದಿಂದ, ಗೋಡೆಯ ಮಗ್ಗುಲಿಂದ, ಬಾಗಿಲ ಬುಡದಲ್ಲಿ, ಚಪ್ಪರದ ಮರೆಯಿಂದ, ಅಪ್ಪಣ್ಣನ ಊಟದ ವೈಖರಿಯನ್ನು ಕಾಣಲು ಹತ್ತಿಪ್ಪತ್ತು ಜೊತೆ ಕಣ್ಣುಗಳು ಕೀಲಿಸಿದ್ದವು.

ಮನೆಯ ಹಿರಿಯ ಯಜಮಾಂತಿ ಎಲೆಗೆ ಬೆಳ್ತಿಗೆ ಅನ್ನದ ರಾಶಿಯನ್ನೇ ಹಾಕಿದಳು. ಹಿಂದೆಯೇ ಆಕೆಯ ಮಗಳು ವ್ಯಂಜನದ ಪಾತ್ರೆಗಳನ್ನು ಒಂದೊಂದಾಗಿ ಅಮ್ಮನ ಕೈಗೆ ನಿಲುಕುವ ಹಾಗೆ ಇರಿಸುತ್ತ ದೃಷ್ಟಿಯನ್ನು ಆತನ ಎಲೆಯಲ್ಲೇ ತಿರುಗಿಸಿದಳು. ಅವಳಷ್ಟೇ ಅಲ್ಲ; ಚಪ್ಪರದ ತುಂಬ ಸೇರಿದವರ ವಾರೆಗಣ್ಣುಗಳೆಲ್ಲ ಅತ್ತಲೇ.

ಪುರೋಹಿತರು ನಿರ್ವಿಕಾರವಾಗಿ ದರ್ಬೆಯ ಕುಡಿಗಳನ್ನು ಜೋಡಿಸುವ ಕೆಲಸ ಮಾಡುತ್ತಲಿದ್ದರು. ಅವರಿಗೆ ಇದೆಲ್ಲ ನಾಲ್ಕು ತಿಂಗಳಿಗೊಮ್ಮೆಯಾದರೂ ಕಾಣುವ ದೃಶ್ಯ. ಆದರೆ, ಜನ್ನಪ್ಪಣ್ಣನ ಪೈಕಿಯವರಿಗೆಲ್ಲ ಹಾಗಾ? ಅವರಿಗೆಲ್ಲ ಅಪ್ಪಣ್ಣ ಸಸಾರದ ಜೀವ. ಅವನ ಮನೆಗೆ ಕಾಲಿಟ್ಟವರಿಲ್ಲ ಎಂದರೆ ಅದು ತಪ್ಪಾದೀತು. ಮನೆಯಲ್ಲಿ ಮರಣವಾದಾಗ ಅಪ್ಪಣ್ಣನ ನೆನಪು ಬಾರದೆ ಇರಲಿಕ್ಕಿಲ್ಲ. ಮರಣದ ಮನೆಯ ನೋವು ಹಸಿ ಹಸಿಯಾಗಿದ್ದರೂ ಉತ್ತರಕ್ರಿಯೆ ನಡೆಯಲೇಬೇಕು. ಅಷ್ಟಲ್ಲದೆ ಮೋಕ್ಷ ಉಂಟಾ!

ಮರಣವಾಗಿ ಮೂರನೆ ದಿನದ ಚಿತಾಭಸ್ಮ ಕೂಡುವ ಕ್ರಿಯೆ ಮುಗಿದ ಬೆನ್ನಿಗೇ ಅಪ್ಪಣ್ಣನ ಮನೆ ಹುಡುಕಿಕೊಂಡು ಬಿಳಿಬಿಳಿ ಧೋತ್ರದ ಜನರು ಬರಲೇಬೇಕು; ಮನೆಯಂಗಳಕ್ಕೆ ಕಾಲಿಡುತ್ತಾರೆ ಹೊರತು, ಹೊಸ್ತಿಲು ದಾಟಿ ಒಳಗಡಿಯಿಡುವವರಿಲ್ಲ. ಅಪ್ಪಣ್ಣನ ಅರ್ಧ ವಯಸ್ಸಿನವರೂ ಕರೆಯುವುದು ಏಕವಚನದಲ್ಲೇ.

‘ಅಪ್ಪಣ್ಣಾ, ನಾಡಿದ್ದು ಹನ್ನೆರಡನೆ ದಿನ, ಕ್ರಿಯಾಕರ್ಮ ಮನೆಯಲ್ಲೇ ನಡೆಸುವುದು. ಪುರೋಹಿತರು, ನೀನು ಬರಲೇಬೇಕು ಎಂದಿದ್ದಾರೆ. ಹಾಗಾಗಿ ಬೆಳಗ್ಗೇ ಬಂದುಬಿಡು. ಗೊತ್ತಾಯ್ತಲ್ಲ ಮನೆ? ನಾನು ಮೂಲೆಮನೆ ನಾರಾಯಣ. ಅಪ್ಪನ ಉತ್ತರಕ್ರಿಯೆ ಮನೆಯಲ್ಲೇ ನಡೆಸುವುದು. ನೆನಪಿರಲಿ.’

ಮೂಲೆಮನೆ ಗೋವಿಂದ ತೀರಿಕೊಂಡ ಸುದ್ದಿ ತಿಳಿದ ಮಾರನೆ ದಿನದಿಂದಲೇ ಅಪ್ಪಣ್ಣನ ಒಂದು ಕಣ್ಣು ಅಂಗಳದ ತಡಮೆಯತ್ತಲೇ ಇತ್ತು. ಇಂದು ಬಂದಾರು; ನಾಳೆ ಬಂದಾರು ಕರೆಯಲು ಎನ್ನುವುದು ಅವನಿಗಾ ತಿಳಿಯದ್ದು. ಬಾಯಿ ತುಂಬಿದ ವೀಳ್ಯ ದವಡೆಗೊತ್ತರಿಸುತ್ತ ಬಂದವನ ಬಳಿ ‘ಆಸ್ರಿಂಗೆ ಬೇಕನಾ’ ಎಂದರೆ ಅದಾಗಲೇ ತಡಮೆ ದಾಟಿರುತ್ತಿದ್ದ.

ಎಲ್ಲಾದರೂ ಉಂಟಾ! ಬಾಯಾರಿ ಗಂಟಲೊಣಗಿ ಸತ್ತರೂ ಅಪ್ಪಣ್ಣನ ಮನೆಯಲ್ಲಿ ಗುಟುಕು ನೀರು ದೊಂಡೆಗಿಳಿಸಿದ ಜನವಿಲ್ಲ. ಅದು ಅವನಿಗೇನು ಗೊತ್ತಿಲ್ಲದ್ದಾ. ಅದಕ್ಕೆಲ್ಲ ಕರಕರೆ ಮಾಡಿ ಪ್ರಯೋಜನ ಉಂಟಾ?

ಗೋಡೆ ಮೇಲಿನ ಕ್ಯಾಲೆಂಡರಿನಲ್ಲಿ ಹನ್ನೆರಡನೆ ದಿನಕ್ಕೆ ಅಲ್ಲಿದ್ದ ಮೊಂಡು ಪೆನ್ಸಿಲಿನಿಂದ ಸೊನ್ನೆ ಸುತ್ತಿದರೆ ಆಯಿತು. ಕ್ಯಾಲೆಂಡರಿನ ಅಲ್ಲಲ್ಲಿ ಹಾಗೆ ಪೆನ್ಸಿಲಿನ ಉರುಟು ಗುರುತು ಬಿದ್ದ ಸೊನ್ನೆಗಳಿವೆ.

ಬಾಯಿ ತುಂಬಿದ ವೀಳ್ಯದ ಕೆಂಪು ರಸವನ್ನು ಅಂಗಳದ ತುದಿಯ ಗೆಂದಾಳಿ ತೆಂಗಿನಗಿಡದ ಬುಡಕ್ಕೆ ಉಗುಳಿ ಬಂದವನಿಗೆ ಚೆನ್ನಾಗಿ ನೆನಪಿದೆ. ಮೇಗಿನ ಮನೆಯ ಅಜ್ಜ ತೀರಿಕೊಂಡಾಗಿನ ಹನ್ನೆರಡನೆ ದಿನ ತನಗೆ ಕೊಟ್ಟ ದಾನದಲ್ಲಿ ಸಿಕ್ಕಿದ ಗಿಡ ಅದು. ಅಲ್ಲದಿದ್ದರೆ ಆ ಜಾತಿಯ ಗಿಡ ತನಗೆ ಕೊಡುವವರಿಲ್ಲ.

ಗಿಡದ ಆರೈಕೆ ಅವನದೇ. ಆದರೆ, ಅವನು ಮನೆ ಅಂತ ಹೇಳುವ ಮೂರು ಸೆಂಟ್ಸು ಜಾಗದ ಮಣ್ಣಿನ ನಾಲ್ಕು ಗೋಡೆಯ, ಅಡಿಕೆಸೋಗೆ ಹೊದೆಸಿದ ಸಣ್ಣ ಹಳೆಯ ಗೂಡು. ಕಲ್ಲಿನ ಪಾರೆ. ಒಂದು ತುಳಸಿ ಗಿಡ ನೆಡಲೂ ಮಣ್ಣು ಇಲ್ಲ.

ಕಗ್ಗಲ್ಲಿನ ನೆಲದಲ್ಲಿ ಬೇರು ಇಳಿಯುವುದಾದರೂ ಎಲ್ಲಿಗೆ? ತಡಮೆಯ ಬುಡದಲ್ಲಿ ಅಪ್ಪಣ್ಣನೂ ಅವನ ಹೆಂಡತಿಯೂ ರಸ್ತೆ ಪಕ್ಕದ ಮೈದಾನದಿಂದ ರಾತ್ರೆ ಹೊತ್ತು, ಅಗೆದು ಬುಟ್ಟಿಯಲ್ಲಿ ತುಂಬಿ ತಂದು ಹಾಕಿದ ಮಣ್ಣಿನಲ್ಲಿ ಗುಂಡಿ ತೋಡಿ ನೆಟ್ಟು ನೀರೆರೆದ ಗೆಂದಾಳಿ ತೆಂಗಿನ ಗಿಡ ಚಿಗುರಿ ನಾಲ್ಕಾರು ಮಡಲು ಚಾಚಿದೆ.

ಅದೇ ಮನೆಯ ಜೀವನಾಡಿ ಎಂದರೆ ತಪ್ಪಿಲ್ಲ. ಮಗಳು ರಾಜಿ ಕೂಡಾ ಕೈತೊಳೆಯುವುದೂ ಅದರ ಬುಡಕ್ಕೆ. ಆ ನೀರು ವ್ಯರ್ಥವಾಗದೆ ಬುಡಕ್ಕೆ ಬೀಳುತ್ತದೆ. ಎತ್ಲಾಗಿ ಹೋದರೂ ಅಪ್ಪಣ್ಣ ಉಚ್ಚೆ ಕಟ್ಟಿಕೊಂಡೇ ಮನೆಗೆ ಬರುತ್ತಾನೆ ಹೊರತು ಹಾದಿಬೀದಿಯ ಬದಿ ಉಚ್ಚೆ ಮಾಡಲಿಕ್ಕಿಲ್ಲ; ಅದು ಗೆಂದಾಳಿ ಬುಡಕ್ಕೇ ಅರ್ಪಿತ. ಉಚ್ಚೆ ಒಳ್ಳೆಯ ಗೊಬ್ಬರವೆನ್ನುವುದು ಅನುಭವದಿಂದ ತಿಳಿದ ಸತ್ಯ.

ಊರಿನ ಸಮುದಾಯದವರ ಮನೆಯಲ್ಲಿ ಸಾವು ತಲೆ ಹಾಕಿದಾಗ ಮಾತ್ರಾ ಅವನ ನೆನಪಾಗುತ್ತದೆ ಮನೆಯವರಿಗೆ. ಕಾರಣ ಕೇಳಿದರೆ ಸಾಂಗವಾಗಿ ಕರ್ಮ ಮುಗಿಸಬೇಕಾದರೆ ಅಲ್ಲಿ ಅಪ್ಪಣ್ಣ ಬೇಕು. ಹಾಗೆಂದು ಅವನದು ಪೌರೋಹಿತ್ಯವಲ್ಲ; ಇವನು ಮಾಡಬೇಕಾದ್ದು ಸತ್ತ ಹನ್ನೆರಡನೆ ದಿನದ ಅಪರ ಕರ್ಮದಲ್ಲಿನ ವಿಧಿಯಲ್ಲಿ ಮೃತನ ಪ್ರೇತವನ್ನು ಆವಾಹಿಸಿ ಕೊಳ್ಳಬೇಕಾದ್ದು, ಪುರೋಹಿತರು ನಡೆಸುವ ಕ್ರಿಯೆಗಳ ಎದುರು ಚಕ್ಕಳಮಕ್ಕಳ ಹಾಕಿ ಕೂತರೆ ಸಾಕು.

ಆ ದಿನ ಅಪ್ಪಣ್ಣ ಮುಖ್ಯ. ಹನ್ನೊಂದು ಗಂಟೆಗೇ ಅಡಿಗೆಯವರು ಅಂದಿನ ಅಡಿಗೆಯನ್ನು ಮುಗಿಸಲೇಬೇಕು. ಮನರಂಜನಾ ಕಾರ್ಯಕ್ರಮವನ್ನು ಕಾದು ಕುಳಿತಂತೆ ಮೃತರ ಮನೆಯವರು, ಬಂಧುಗಳು, ಮಿತ್ರರು, ಎಳೆಯರು ಪ್ರೇತೋಚ್ಚಾಟನೆ ನೋಡಲು ಕಾದು ಕೂರುತ್ತಾರೆ. ಎಲ್ಲಿ?

ದೂರದ ಗೋಡೆಗೊರಗಿ ನಿಂತು, ಚಪ್ಪರದ ಮಡಲಿನ ತಟ್ಟಿಗಳ ಕಿಂಡಿಯಲ್ಲಿ ಇಣುಕಿ, ಅಡಿಗೆಮನೆಯ ಬಾಗಿಲಬುಡದಲ್ಲಿ ಹೊಂಚಿ ಹೆಂಗಸರು, ಮಕ್ಕಳೆನ್ನದೆ ಕಿಸಿ ಕಿಸಿ ನಗುತ್ತಾ ಅಪ್ಪಣ್ಣನ ಊಟವನ್ನು ವೀಕ್ಷಿಸುತ್ತಾರೆ.

ಮೃತನ ಪ್ರೇತವನ್ನು ಎದುರಿಗೆ ಕೂತ ಅಪ್ಪಣ್ಣನ ಮೈಮೇಲೆ ಆಹ್ವಾನಿಸಿ ಮಂತ್ರಘೋಷವಾಗುತ್ತಿದ್ದಂತೆ ಅವನ ಭೋಜನಕ್ಕೆ ಎಲೆ ಹಾಕಿ ಆಗುತ್ತದೆ. ಆ ದಿನದ ಸ್ವೀಟು ಸತ್ತವರಿಗೆ ಅತಿ ಪ್ರಿಯವಾದ ಭಕ್ಷ್ಯ. ಬರಿದಾದ ಎಲೆಗೆ ಸೇರಕ್ಕಿ ಅನ್ನ ಸುರುವಿ ನಂತರ ತಯಾರಿಸಿದ ವ್ಯಂಜನಗಳೆಲ್ಲವನ್ನು ಮೃತರ ಮಡದಿ, ಮನೆಯವರು ನಿಶ್ಶಬ್ದವಾಗಿ ಹಾಕುತ್ತಾರೆ. ಅಡಿಗೆ ಮುಗಿಸಿದಾಕ್ಷಣ ಪ್ರೇತಕ್ಕೆ ಕೂರುವ ಅಪ್ಪಣ್ಣನಿಗೆ ಬಡಿಸಲು ಪ್ರತ್ಯೇಕವಾಗಿ ಪಾತ್ರೆಗಳಲ್ಲಿ ತಯಾರಿಸಿದ್ದೆಲ್ಲವನ್ನು ಬೇರೆಯಾಗಿ ತೆಗೆದಿರಿಸಲೇ ಬೇಕು. ಕಾರಣ ಕೇಳಿದರೆ ಆ ಆಹಾರ ಉಳಿದವರ್ಯಾರೂ ಮಿಕ್ಕಿದರೆ ಉಳಿದವರು ಸೇವಿಸಲು ನಿಷಿದ್ಧ.

ಅಪ್ಪಣ್ಣ ಏನು ಹೊಸಬನಲ್ಲ ಈ ಪದ್ಧತಿಗೆ. ಬಡತನ, ಹುಟ್ಟಿದ ಜಾತಿ ಎರಡೂ ಅವನಿಗೆ ವಂಚನೆಯನ್ನೇ ಮಾಡಿದ್ದು. ಹೋಟೆಲಿನ ಗ್ಲಾಸು ತೊಳೆಯಲು ಹೋಗಹೊರಟವನನ್ನು ಅನ್ಯರ ಎಂಜಲು ಲೋಟ ನೀನು ತೊಳೆಯಕೂಡದು ಎಂದು ತಡೆದ ಅಪ್ಪ ಲೋಕ ಬಿಟ್ಟು ಹೋಗುವಾಗ ಉಳಿಸಿದ್ದು ಕೋಲಿನಲ್ಲಿ ಒಣಗಲು ಹಾಕಿದ ಲಂಗೋಟಿ ಮಾತ್ರ.

ಹೊಟ್ಟೆ ಹಸಿವು ಈ ವೃತ್ತಿಗೆ ನೂಕಿತು. ಅಕ್ಕಪಕ್ಕದಲ್ಲಿ ಇಂಥ ಕ್ರಿಯೆಗೆ ಒಪ್ಪಿದ ನರಹುಳು ಇಲ್ಲ. ಅವನ್ಯಾವನದೋ ಒಂದ್ಸಾರಿ ಬಂದುಬಿಡೋ, ನಮ್ಮಪ್ಪನ್ನ ಸ್ವರ್ಗಕ್ಕೆ ಕಳಿಸುವ ಪುಣ್ಯಕಾರ್ಯಕ್ಕೆ ಬರಲ್ಲ ಅನ್ನಬೇಡ ಎಂಬ ಬೆಣ್ಣೆ ಮಾತಿಗೆ ಮರುಳಾಗಿ ಮೊದಲ ಬಾರಿಗೆ ಆ ಜಾಗದಲ್ಲಿ ಮಣೆ ಮೇಲೆ ಕೂತವನಿಗೆ ಶಾಶ್ವತವಾಗಿ ಅದು ಅಂಟಿಕೊಂಡಿತು.

ಕುಹಕವಾಗಿ, ಕುಚೋದ್ಯಕ್ಕೆ, ಅಪಹಾಸ್ಯಕ್ಕೆ, ತಾತ್ಸಾರಕ್ಕೆ, ಕೌತುಕದಿಂದ ನೋಡುವ ಕಣ್ಣುಗಳತ್ತ ದೃಷ್ಟಿ ಹಾಯಿಸಿದರೆ ತನ್ನ ಹೊಟ್ಟೆ ತುಂಬದು. ಅಪ್ಪಣ್ಣನ ಎಲೆಗೆ ವಡೆ, ಕಜ್ಜಾಯ, ಅಂದಿನ ಸಿಹಿ ಭಕ್ಷ್ಯ ಬಿತ್ತು. ಎರಡನೆ ಬಾರಿಗೆ ಬಡಿಸ ಬಂದವರಿಗೆ ಪಕ್ಕದಲ್ಲಿಟ್ಟ ಬಾಳೆ ಎಲೆಯತ್ತ ಕೈಮಾಡಿದ. ಅದು ಅವನು ಮಡದಿ, ಮಗಳಿಗೆ ಒಯ್ಯುವ ಸಲುವಾಗಿರುವುದು. ಮನೆಯೊಡತಿ ಅದಕ್ಕೆ ಹಾಕಿದಳು.

ಸುತ್ತ ನೂರಾರು ಕಣ್ಣುಗಳು ದುರುಗುಟ್ಟಿ ನೋಡುತ್ತಿದ್ದವು. ಆ ಘಳಿಗೆಗೆ ಅವನಲ್ಲಿ ಸತ್ತವನ ಪ್ರೇತದ ಆವಾಹನೆಯಾಗಬೇಕು. ಅದು ಮಂತ್ರದ ಬಲ. ಮೃತನ ಪ್ರೇತ ಆವಾಹನೆಯಾಗುವ ಕಾರಣಕ್ಕೆ ಅವನ ನಿಜ ಹೆಸರು ಹಿಂದಾಗಿ ಮೂರು ಲೋಕಕ್ಕೂ ಅವನು ಪ್ರೇತಭಟ್ಟನಾಗಿ ಚಾಲ್ತಿಯಾದ.

ಉಳಿದ ದಿನಗಳಲ್ಲಿ ಹಸಿದು ಬೆನ್ನಿಗಂಟಿದ ಹೊಟ್ಟೆಗೆ ಅಪ್ಪಣ್ಣ ಆತುರಾತುರವಾಗಿ ತುಂಬುವ ಪರಿ ಒಡಲು ತುಂಬಿದವರಿಗೆ ಪ್ರೇತದ ಆವಾಹನೆ ಯಾಯ್ತು ಎಂದು ಕಂಡರೆ ಅಚ್ಚರಿಯಿಲ್ಲ. ಹಾಗೆ ಉಂಡ ಅಪ್ಪಣ್ಣನಿಗೆ ಕೊಟ್ಟ ದಾನದ ವಸ್ತುಗಳಿವೆ ಬದಿಯಲ್ಲಿ. ಸತ್ತ ಹಿರಿಯರು ಆ ತನಕ ಮಲಗುತ್ತಿದ್ದ ಹಾಸಿಗೆ, ಹೊದೆದ ರಗ್, ಹಾಸುಬಟ್ಟೆ, ಶರಟು, ದಹನದ ಜಾಗದಲ್ಲಿ ನೆಟ್ಟ ಹೊಚ್ಚಹೊಸ ಕೊಡೆ, ಮೃತನ ನಿತ್ಯಬಳಕೆಯ ವಸ್ತುಗಳು ಎಲ್ಲ ಅವನ ಪಾಲಿಗೆ ಬಂತು. ಉಂಡೆದ್ದ ಮೇಲೆ ಜನರ ಹಿಂಡೇ ನುಗ್ಗಿತು ಅಲ್ಲಿಗೆ. ಮುಂದಿನದೇನೆಂದು ಅವರಿಗೆಲ್ಲ ತಿಳಿದಿದ್ದೇ.

ದಾನ ಬಂದ ಹಳೆಪಂಚೆಯನ್ನು ಹಾಸಿ ಅಲ್ಲಿ ಕೊಟ್ಟ ವಸ್ತುಗಳು, ತೆಗೆದಿರಿಸಿದ ಸ್ವೀಟು, ಕಜ್ಜಾಯ, ವಡೆಗಳನ್ನೆತ್ತಿ ಗಂಟು ಕಟ್ಟಿದ. ನಂತರ ಎದ್ದು ಕೈತೊಳೆಯಬೇಕು. ಅದಕ್ಕಾಗಿ ಎದ್ದವನು ನಂತರ ಮನೆಯೊಳಕ್ಕೆ ಬರಕೂಡದು. ಏಳುವಾಗಲೇ ಎಡಗೈಲಿ ಜೋಳಿಗೆಯ ಹಾಗೆ ಕಟ್ಟಿದ ಗಂಟು ಹೊತ್ತು ಅಂಗಳಕ್ಕಿಳಿದವನ ಹಿಂದೆ ಪುರೋಹಿತರ ನಿರ್ದೇಶನದ ಹಾಗೆ ನಿಂತ ಕರ್ತೃ. ಅಪ್ಪಣ್ಣನಿಗೆ ಗೊತ್ತಿಲ್ಲದ್ದಾ? ಈಗ ಅವನು ಪ್ರೇತ. ಅದನ್ನು ಉಚ್ಚಾಟನಾ ವಿಧಿಗೆ ಸತ್ತವರ ಮಗ ಕಾಯುತ್ತಿದ್ದಾನೆ. ಅರೆಬರೆ ಕೈ ತೊಳೆಯುತ್ತಿದ್ದಂತೆ ಕಾದು ನಿಂತವನು ಕೈಲಿದ್ದ ಕೊಂಬು ಗಿಂಡಿಯ ನೀರು ಪ್ರೇತಭಟ್ಟನ ಮೈ ಮೇಲೆ ಪ್ರೇಕ್ಷಿಸುತ್ತಾ ಓಡಿಸುವ ಮುಖ್ಯ ಕ್ರಿಯೆ. ಅವನು ಓಡುವುದನ್ನು ನೋಡಲೇ ಕಾದಿದ್ದ ಜನರ ಗುಂಪು.

ವಯೋಸಹಜವಾಗಿ ವೇಗವಾಗಿ ಓಡಲಾರ ಅಪ್ಪಣ್ಣ ಅಥವಾ ಪ್ರೇತಭಟ್ಟ. ಗಂಟು ಮೂಟೆ ಹೊತ್ತು ಧಾವಿಸುವುದು ಸುಲಭವಲ್ಲ. ಕಿಕ್ಕಿರಿದು ತುಂಬಿ ಹಿಂದಿನಿಂದ ನೋಡಿ ನಗುವ ಬಂಧು, ಮಿತ್ರರು, ಮಕ್ಕಳು. ದಾಪುಗಾಲಿಕ್ಕುತ್ತ ಮುಂದೆ ಮುಂದೆ ಪ್ರೇತ, ಹಿಂದೆ ಮನೆಯಾತ.

ಅದಕ್ಕೆ ಮೊದಲೇ ಪ್ರೇತವೆಂಬ ಹೆಸರಾದ ಅಪ್ಪಣ್ಣ ಹೋಗಲಿರುವ ಹಾದಿ ನಿರ್ಮಾನುಷವಾಗಬೇಕು. ಕಾರಣ ಪ್ರೇತ ಉಚ್ಚಾಟನೆಯಾಗುವಾಗ ಅದಕ್ಕೆದುರಾಗಿ ಅಕಸ್ಮಾತ್ ಆಗಿ ಯಾರಾದರೂ ಎದುರಾದರೆ ಮರುವರ್ಷ ಬರುವುದರೊಳಗೆ ಅವರ ಬೊಜ್ಜ ನಡೆಯುತ್ತದೆ ಎಂಬ ಬಲವಾದ ನಂಬಿಕೆ.

ನಂತರ ಜರಗಬೇಕಾದ ಧಾರ್ಮಿಕ, ಸಾಂಪ್ರದಾಯಿಕ ಕ್ರಿಯೆಗಳು, ಮನೆಯವರು ಕುಡಿಯುವ ಪಂಚಗವ್ಯ, ಪಿಂಡಪ್ರದಾನ ಎಲ್ಲ ಮುಗಿದು ಅನ್ನ ಕಾಣುವ ಹೊತ್ತಿಗೆ ಮಧ್ಯಾಹ್ನವಾಗುತ್ತದೆ. ಇತ್ತ ಸ್ವಲ್ಪ ದೂರ ಓಡುನಡಿಗೆ ಕಷ್ಟದಿಂದ ಹಾಕುವ ಪ್ರೇತ ತುಸು ದೂರ ಹೋದ ಮೇಲೆ ಅಪ್ಪಣ್ಣನಾಗುತ್ತದೆ. ಆವಾಹಿಸಿದ್ದ ಮೃತನ ಪ್ರೇತಕ್ಕೆ ಮುಕ್ತಿ.

ಅಪ್ಪಣ್ಣನಿಗೆ ಆ ಹೆಸರಿನಿಂದ ಮುಕ್ತಿ ಇಲ್ಲ. ಲೋಕಕ್ಕಿಡೀ ಆತ ಪ್ರೇತಭಟ್ಟ. ಮನೆಯಲ್ಲಿ ಕಾದು ಕುಳಿತ ಮಡದಿ, ಮಗಳನ್ನು ನೆನಪಾಗಿ ಅವನು ಜೋರು ಹೆಜ್ಜೆ ಹಾಕಿ ಮನೆ ತಲುಪಿ ತಂದ ವಸ್ತುಗಳನ್ನು ಮಡದಿಗೊಪ್ಪಿಸಿದಾಗ ಮಗಳು ಸ್ವೀಟು, ಕಜ್ಜಾಯ, ವಡೆಗೆ ಕೈಹಾಕಿದಳು. ಅಮ್ಮನಿಗೂ ಪಾಲು ಸಂದಿತು. ದಾನಕ್ಕೆ ಬಂದವುಗಳಲ್ಲಿ ಸುಸ್ಥಿತಿಯಲ್ಲಿರುವುದನ್ನು ಮಡದಿ ತೆಗೆದಿಟ್ಟು ಬರಿನೆಲಕ್ಕೆ ಬೆನ್ನು ಕೊಟ್ಟು ಸೋತು ಮಲಗಿದ ಗಂಡನತ್ತ ಒದ್ದೆಗಣ್ಣಿಂದಲೇ ನೋಡುತ್ತಾಳೆ.

ಆಕೆ ಒಳ್ಳೆಯ ಮನೆತನದ ಹೆಣ್ಣು. ಮದುವೆಗೆ ಮೊದಲೇ ಕಿರಾತಕನೊಬ್ಬನ ಬಣ್ಣದ ಮಾತಿಗೆ ಸೋತು ಗರ್ಭಿಣಿಯಾದವಳು ಮನೆಯವರು ಬಡಿದ ಪೆಟ್ಟಿಗೆ ಹೆದರಿ ನೀರಿಗೆ ಹಾರಿದ್ದಳು.ಆಟಿ ತಿಂಗಳ ಜೋರು ಮಳೆಗೆ ತುಂಬಿ ಹರಿಯುವ ನದಿಯಲ್ಲಿ ತೇಲಿ ಹೋದಾಕೆ ಸಿಕ್ಕಿದ್ದು ಬೆಳ್ಳಕ್ಕೆ ತೇಲಿ ಬರುವ ತೆಂಗಿನಕಾಯಿ ಹಿಡಿಯಬಂದ ಅಪ್ಪಣ್ಣನ ತೆರೆದ ತೋಳಿಗೆ.

ಆಗಿನ್ನೂ ಅವನು ಪ್ರೇತಭಟ್ಟನಾಗಿರಲಿಲ್ಲ. ಬಡತನವಿತ್ತು; ಸಂಪಾದನೆ ಇಲ್ಲ. ಬೇಡದ ಗರ್ಭ ನಿಲ್ಲಲಿಲ್ಲ. ತವರಿಗೆ ಹೋಗಲು ಒಲ್ಲೆನೆಂದಾಕೆಗೆ ಅವಳ ಒಪ್ಪಿಗೆಯಿಂದ ತಾಳಿಕಟ್ಟಿದವ ಅಪ್ಪಣ್ಣ. ಚೆನ್ನಾಗಿಯೇ ನೋಡಿಕೊಂಡವ ತನ್ನ ಬಡತನದಲ್ಲೂ.

ಕೇವಲ ತನ್ನೊಬ್ಬನ ಹೊಟ್ಟೆ ತುಂಬಿಸುವ ಕೆಲಸವಾದರೆ ಅಪ್ಪಣ್ಣ ಹೋಟೇಲಿನಲ್ಲಿ ಗ್ಲಾಸು ತೊಳೆಯಲು ತಯಾರಿದ್ದ. ನಂಬಿದ ಮಡದಿ, ಅವಳಲ್ಲಿ ಜನಿಸಿದ ಏಕೈಕ ಮಗಳು ಅವನ ಬೆನ್ನಿಗಿದ್ದರು. ಅನಿವಾರ್ಯವಾಗಿ ಬಣ್ಣದ ಮಾತಿಗೆ ಬಲಿ ಬಿದ್ದು ಒಮ್ಮೆ ಪ್ರೇತವಾಗಿ ಕೂತವನಿಗೆ ಅದೇ ಪ್ರೇತ ಶಾಶ್ವತವಾಗಿ ಬೆನ್ನೇರುತ್ತದೆ ಎಂಬ ಕಲ್ಪನೆ ಯೆಲ್ಲಿತ್ತು? ಆತನ ಮುಖ ನೋಡಿದರೇ ಅಪಶಕುನ ಅನ್ಯರಿಗೆ.

ಸೀತೆಗೆ ಪ್ರೇತಭಟ್ಟನ ಹೆಂಡತಿ ಎಂಬ ಹೆಸರೇ ಕಾಯಂ ಆಯಿತು.

ಮಗಳು ರಾಜಿಗೆ ಶಾಲೆಯಲ್ಲಿ ಆಗಿದ್ದ ಅವಮಾನ ಅಷ್ಟಿಷ್ಟಲ್ಲ. ಅವಳ ಪಕ್ಕದಲ್ಲಿ ಕೂರಲು ಯಾರೂ ತಯಾರಿಲ್ಲ. ಆಡಲು ಬಂದವರಿಲ್ಲ. ಮೈ ಮುಟ್ಟಿದವರಿಲ್ಲ.ಕಿಸಿಕಿಸಿ ನಗು, ಅಣಕ, ಲೇವಡಿಯ ಕಿಡಿ ಹೊತ್ತಿ ಉರಿದಾಗ ಆಕೆ ಶಾಲೆಗೆ ಹೋಗುವುದನ್ನೇ ನಿಲ್ಲಿಸಬೇಕಾಯಿತು. ಮನೆಯಿಂದಾಚೆ ಕಾಲಿಟ್ಟ ಕೂಸಲ್ಲ ಅದು ಮತ್ತೆ.

ಲಗ್ನದ ವಯಸ್ಸು ಅವಳಿಗೆ. ಅವಳನ್ನು ಒಪ್ಪಿ ಮದುವೆಯಾಗಿ ಸೊಸೆಯಾಗಿ ತರುವ ಮನೆ ಗೋಕರ್ಣಮಂಡಲವಿಡೀ ಜಾಲಾಡಿದರೂ ಇಲ್ಲವೇ ಇಲ್ಲ.. ಪುಟಿಯುವ ತಾರುಣ್ಯದ, ಚಿಗರೆ ಕಂಗಳ ಸೊಬಗಿ ರಾಜಿಯ ಮೈ ಸೊಬಗನ್ನು ಆಸ್ವಾದಿಸಲು ಹೊಂಚು ಹಾಕುವವರಿದ್ದಾರೆ, ಸೀತೆ ಮಗಳನ್ನು ಹದ್ದಿನಂತೆ ಕಾಯುತ್ತಾಳೆ.

ಊರಿನ ಗಣಪತಿಯ ಗುಡಿಗೆ ಪ್ರತಿ ಸೋಮವಾರ ಮಗಳನ್ನು ಕರೆದುಕೊಂಡು ತಾನು ಅವಳ ಜೊತೆಗೆ ವಿಘ್ನ ನಿವಾರಕನಿಗೆ ಪ್ರದಕ್ಷಿಣೆ ಹಾಕುತ್ತಾರೆ.ದುಂಡುಮಲ್ಲಿಗೆಯ ಸೊಬಗಿನಿಂದ ಕಂಗೊಳಿಸುವ ರಾಜಿಗೆ ತನ್ನ ಅಪ್ಪನ ವೃತ್ತಿಯಿಂದಾಗಿ ಮದುವೆ ಗಗನ ಕುಸುಮ ಎಂಬುದು ಗೊತ್ತು. ನಿರ್ಲಿಪ್ತತೆಯಿಂದ ಅಮ್ಮನ ಹಿಂದೆ ಗಣಪನಿಗೆ ಸುತ್ತು ಬರುವ ಯುವತಿ ಆಕೆ.

ಬ್ರಾಹ್ಮೀ ಕಾಲದ ಪೂಜೆ ಪದ್ಧತಿಯಂತೆ ಚೆಂಡೆ, ವಾದ್ಯ, ಶಂಖಧ್ವನಿ, ಜಾಗಟೆ, ಡೋಲು, ಘಂಟೆಗಳ ನಿನಾದದೊಂದಿಗೆ, ಹಚ್ಚಿಟ್ಟ ಊದುಬತ್ತಿ, ಕರ್ಪೂರದ ಘಮಘಮದ ಮಧ್ಯೆ ಸಾಂಗವಾಗಿ ಜರಗಿದ ನಂತರ ಪ್ರಸಾದದ ತೀರ್ಥ ಅಂಗೈಗೆ ಹಾಕಿದ್ದನ್ನು ಕುಡಿದು, ಹೂವನ್ನು ಮುಡಿಗೇರಿಸಿದವಳೆ ತಲೆತಗ್ಗಿಸಿಯೇ ಅಮ್ಮನ ಹಿಂದೆ ಹೆಜ್ಜೆ ಹಾಕುವ ತರಳೆ ಅವಳು.

ನೆರೆದ ಭಕ್ತರಲ್ಲಿ ಯಾರೊಬ್ಬರೂ ಇವರಲ್ಲಿ ಅಕ್ಷರ ಮಾತಾಡುವ ಕೃಪೆ ತೋರಿದವರಲ್ಲ. ಗುಡಿಯ ಸ್ಥಾನಿಕ, ಒತ್ತರೆಯ ಅಕ್ಕಮ್ಮ, ಚೆಂಡೆ ವಾದನದ ಮಾರಾರ್ ನಾಲ್ಕಾರು ಮಾತಾಡುತ್ತಾರೆ, ಕಷ್ಟ ಸುಖ ವಿಚಾರಿಸುತ್ತಾರೆ.ಅದೇ ಸಾಕು ಅವರಿಗೆ.

ಜಿಟಿ ಜಿಟಿ ಸುರಿಯುವ ಮಳೆ ಹಿಡಿದಿದ್ದು ಬಿಟ್ಟಿರಲಿಲ್ಲ. ಅದು ಆಷಾಢ ಮಾಸ, ಆಕಾಶವಿಡೀ ಮಬ್ಬು ಮಬ್ಬು ಮೋಡಗಳಿಂದ. ಆಗಾಗ ಸಿಡಿಯುವ ಕೋಲ್ಮಿಂಚು, ಅಪ್ಪಣ್ಣನ ಮಣ್ಣಿನ ಮನೆಯ ನೆಲದಲ್ಲಿ ನೀರಿನ ಪಸೆ ಏಳುತ್ತಿತ್ತು. ಬಟ್ಟೆ ಒಣಗದೆ ನಾಲ್ಕಾರು ದಿನವಾಯಿತು.

ಮಾರಿ ಮಳೆ ಬಿಡಲೇ ಇಲ್ಲ.ಮನೆಯೊಳಗೆ ಏನೆಂದರೆ ಏನೂ ಇಲ್ಲ; ಅಕ್ಕಿ ಬಿಟ್ಟು, ಅಕ್ಕಿಯ ಕಡಿಗೂ ತತ್ವಾರ. ಜಗುಲಿಯ ಮೂಲೆಯಲ್ಲಿ ಪೇರಿಸಿಟ್ಟು ಅದರ ಮೇಲಿಂದ ಮಣ್ಣು ಸವರಿದ್ದ ಹಲಸಿನಕಾಯಿಯ ಬೀಜ ಬೇಯಿಸಿ ಹಸಿವೆ ತಣಿಸಿದರು ಅಪ್ಪಣ್ಣ, ಅವನ ಮಡದಿ, ಮತ್ತು ಮಗಳು ರಾಜಿ.

ರಾತ್ರೆ ಮಲಗಲು ಒಣ ನೆಲವಿಲ್ಲ. ಝುಮುಗುಡುವ ಚಳಿ ಕಿತ್ತು ತಿನ್ನುತ್ತಿತ್ತು. ತಾವು ಹಲಸಿನ ಬೀಜ ಬೇಯಿಸಿ ತಿಂದರೂ ಇರುವ ಒಂದೇ ಒಂದು ಕಂದ ರಾಜಿಗೆ ಅದನ್ನೇ ಕೊಡುವಾಗ ಜೀವ ಬಾಯಿಗೆ ಬರುತ್ತಿತ್ತು. ತೆಂಗಿನಕಾಯಿ ತುರಿ ಅರೆದು ಹಾಕಿ ಚಟ್ನಿಯಾದರೂ ಮಾಡಿ ಮಗಳಿಗೆ ಉಣಿಸುವಾಸೆಯಿಂದ ಪ್ರವಾಹದ ಕೆನ್ನೀರು ನೊರೆ ನೊರೆಯಾಗಿ ಉಕ್ಕುಕ್ಕಿ ಪ್ರವಾಹ ನುಗ್ಗಿಬರುವಾಗ ತೇಲಿ ಬರುವ ತೆಂಗಿನಕಾಯಿಯ ಆಸೆಗೆ ಹಿಡಿಯಲು ಹೋದ ಅಪ್ಪಣ್ಣ ಪ್ರವಾಹದ ಕೆನ್ನೀರಿನ ಜೊತೆಗೆ ನೋಡ ನೋಡುತ್ತಿದ್ದಂತೆ ತೇಲಿ ಹೋದ ಮಡದಿ, ಮಗಳ ಕಣ್ಣೆದುರಿಗೆ.

ಆತ ಎರಡೂ ಕೈ ಮೇಲೆತ್ತಿ ಸಹಾಯಕ್ಕೆ ಯಾಚಿಸುತ್ತಿದ್ದಂತೇ ಕೆನ್ನೀರು ನುಂಗಿ ನೊಣೆಯಿತು ಬಲಿಯನ್ನು. ಅಮ್ಮನೂ ಮಗಳೂ ಮಾಡಿದ ಆಕ್ರಂದನ ಕಿವಿಗೆ ಹಾಕಿಕೊಂಡಿದ್ದು ಕೇವಲ ಗಾಳಿ ಮತ್ತು ಮಳೆ ಅಷ್ಟೆ.

ಅಳುತ್ತಳುತ್ತಲೇ ಮನೆ ಎಂಬ ಗುಡಿಸಲಿಗೆ ಹಿಂದಿರುಗಿದ ಅಮ್ಮ ಊರಿನ ಪ್ರಮುಖರ ಮನೆಗೆ ಹೋಗಿ ಹಿಂಗಿಂಗಾಯ್ತು ಎಂದರೆ ಬಾಯಿಯ ವೀಳ್ಯ ಉಗುಳಿ ವಿಚಾರಿಸಿದವರಿಲ್ಲ.ತೋಡಿನ ಕೆಂಪು ನೀರು ಅರಬ್ಬಿ ಸಮುದ್ರ ಸೇರಿದಾಗ ತಾನು ಹೊತ್ತು ತಂದಿದ್ದ ಸಕಲ ಚರಾಚರಗಳನ್ನೂ ಸಮುದ್ರಕ್ಕೆ ಒಪ್ಪಿಸಿತು. ಅದರಲ್ಲೆ ಅಪ್ಪಣ್ಣನ ಶರೀರವೂ ಒಂದು. ಪ್ರವಾಹ, ಜಲಚರಗಳು ಕಿತ್ತು ತಿಂದ ಅರೆಬರೆ ಉಳಿದ ದೇಹ ಪಂಚಭೂತಗಳಲ್ಲಿ ಲೀನವಾಗಿದ್ದು ಉಳ್ಳಾಲದ ಕಡಲತಡಿಯ ಮೊಗವೀರರ ಮನುಷ್ಯ ಧರ್ಮದಿಂದ.

ಅಮ್ಮ, ಮಗಳು ಹನ್ನೊಂದನೆಯ ದಿನ ಮಿಂದು ಊರ ದೇಗುಲಕ್ಕೆ ಹೋಗಿ ಕಣ್ಣೀರಾರ್ಚನೆ ಮಾಡಿ ಸದ್ಗತಿ ಕೋರಿದರು ಅಪ್ಪಣ್ಣನಿಗೆ. ಬೊಜ್ಜ ನಡೆಸಿ ಕ್ರಿಯಾಕರ್ಮ ಮಾಡಲು ಕೈ ಖಾಲಿ. ಅಪ್ಪಣ್ಣ ಪ್ರೇತಮೋಕ್ಷ ಮಾಡಿದ ನೂರಾರು ಮನೆಯವರಲ್ಲಿ ಯಾರೊಬ್ಬರೂ ಅವನ ಪ್ರೇತ ಮೋಕ್ಷಕ್ಕೆ ನೆರವಾಗಲಿಲ್ಲ. ಇದ್ದ ನಾಲ್ಕು ಸೇರು ಕಡಿಯಕ್ಕಿ ಇಷ್ಟಿಷ್ಟೇ ಗಂಜಿ ಮಾಡಿ ಉಂಡರೂ ಖಾಲಿಯಾಯಿತು.

ಅಂದು ಉಪವಾಸ ಇಬ್ಬರಿಗೂ.ಹಸಿವಿನ ಸಂಕಟ ಹಿಂಡುತ್ತಿತ್ತು. ಹಲಸಿನಬೇಳೆ ಕಟ್ಟಕಡೆಯದೂ ಬೇಯಿಸಿ ಸ್ವಾಹಾ ಆಗಿತ್ತು. ಹಸಿದು ಕಂಗಾಲಾದ ಎರಡು ನಿಷ್ಪಾಪಿ ಜೀವಗಳು ಅತ್ತತ್ತು ಸೋತು ಮಲಗಿದ್ದವು.

ಹಿಡಿದ ಮಾರಿ ಮಳೆ ಅಬ್ಬರದ ಗಾಳಿಯೊಂದಿಗೆ ಬುಸುಗುಡುತ್ತಿತ್ತು. ಮಾಡಿಗೆ ಹೊದೆಸಿದ್ದ ಮಡಲು ದಿಕ್ಕಾಪಾಲಾಗಿ ಹಾರಿ ಬೀಳುವ ಸದ್ದು!! ಬೆಚ್ಚಿ ಬೆದರಿ ಕಂಗೆಟ್ಟ ತಾಯಿ ಮಗಳನ್ನು ಪುನಹ ತನ್ನ ಗರ್ಭಕ್ಕೆ ಸೇರಿಸುವ ಪರಿಯಲ್ಲಿ ಬಿಗಿದು ಅಪ್ಪಿದ್ದಳು. ಆಗ.. ಆಗ ಮೆತ್ತಗೆ.. ಬಲು ಮೆತ್ತಗೆ ಬಾಗಿಲು ಬಡಿದ ಸದ್ದು....... ಕಿವಿ ನಿಮಿರಿಸಿ ಆಲಿಸಿದಳು ಸೀತೆ. ಬಿಟ್ಟು ಬಿಟ್ಟು ಅದ್ಯಾರೋ ಬಾಗಿಲು ತಟ್ಟುವ, ಕೂಗಿ ಕರೆಯುವ ದನಿ.

ನಿಶ್ಶಬ್ದವಾಗಿ ಎದ್ದ ಸೀತೆ ಬಂದಿದ್ದು ಬರಲಿ ಎಂದು ಮೂಲೆಯಲ್ಲಿದ್ದ ಹುಲ್ಲು ಕೊಯ್ಯುವ ಕತ್ತಿ ಹಿಡಿದೇ ಬಾಗಿಲ ಬಳಿ ಬಂದು ಯಾರು ಎಂದು ಗದರು ದನಿಯಲ್ಲಿ ಕೇಳಿದಳು.

ಪರಿಚಿತ ದನಿ ಕೇಳಿ ಬಾಗಿಲು ತೆರೆದಾಗ ಒಳ ನುಗ್ಗಿದ್ದು ದೇವಸ್ಥಾನದ ಮಾರಾರ್. (ಕೇರಳದಲ್ಲಿ ದೇವಸ್ಥಾನಗಳಲ್ಲಿ ನಿತ್ಯದ ಪೂಜೆಯ ಹೊತ್ತಿಗೆ ದೇವರಿಗೆ ಚೆಂಡೆವಾದನದ ಸೇವೆ ಆಗಬೇಕು. ಅದು ಪರಂಪರಾಗತ. ಆ ಚೆಂಡೆವಾದಕರು ಮಾರಾರ್ ಗಳು). ಅದ್ಯಾಕೆ ಈ ಹೊತ್ತಿಗೆ ಬಂದ ಇವ.! ಆತ ಸರಸರನೆ ಒಳನುಗ್ಗಿದವನೇ ಕೈಲಿ ಹಿಡಿದ ದೇವರ ನೈವೇದ್ಯದ ಅನ್ನವನ್ನು ಅವರೆದುರಿಗಿಟ್ಟ. ಜೊತೆಗೆ ಗೊಜ್ಜು. ಅನ್ನದ ಘಮಘಮ ಮೂಗಿಗೆ ಬಡಿದಾಗ ಮಲಗಿದ್ದ ರಾಜಿ ಎದ್ದು ಕುಳಿತಳು.

ನಿಂತೇ ಇದ್ದ ಅವನು ಮೊದಲು ಊಟ ಮಾಡಿ ಅಮ್ಮ ಎಂದನು. ಅಳುತ್ತಳುತ್ತ ಸೀತೆ ಮಗಳಿಗೆ ಅನ್ನ ಬಡಿಸಿ ತಾನೂ ಉಂಡಳು. ಹೀಗಾಯಿತಲ್ಲ ತಮ್ಮ ದುರವಸ್ಥೆ ಎಂದು ಗಂಟಲು ಬಿಗಿದು ಬರುತ್ತಿತ್ತು ಆಕೆಗೆ.

ಹೊಳಪುಗಣ್ಣಿನ ಕಂದುಗಪ್ಪಿನ, ನಿತ್ಯ ಚೆಂಡೆ ವಾದನ ಮಾಡಿ ಹುರಿಗೊಂಡ ಬಲಿಷ್ಟ ತೋಳುಗಳ ಯುವಕ ಗೋಪಕುಮಾರ ಸೀತೆಗೆ ಹೇಳಿದಮಾತು ಕೇಳಿ ಮಿಕಿ ಮಿಕಿ ನೋಡಿದಳು ರಾಜಿ.

"ಅಮ್ಮಾ, ನೀವು ಮತ್ತೆ ರಾಜಿ ಒಪ್ಪಿದರೆ ನಾನು ನಿಮ್ಮ ಅಳಿಯನಾಗಿ ಬದುಕು ಪೂರ್ತಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಎಂದಿನಿಂದಲೇಈ ಆಸೆ ಇದೆ.ಆದರೆ ಈ ಊರಿನಲ್ಲಿ ಲಗ್ನವಾಗಿದ್ದೇ ಆದಲ್ಲಿ ನಮಗೆ ನಿತ್ಯ ನಿತ್ಯ ನರಕ ದರ್ಶನ ಮಾಡಿಯಾರು. ಮನ ಪೂರ್ತಿ ರಾಜಿಗೆ ಒಪ್ಪಿಗೆ ಎಂದರೆ ನಾನಿದ್ದೇನೆ ನಿಮಗೆ.

ಈ ಊರು ನಿಮಗೆ ಕೊಟ್ಟಿದ್ದೇನಿದೆ ಅವಮಾನ, ಅಪಹಾಸ್ಯವಲ್ಲದೆ. ಅಪ್ಪಣ್ಣನವರು ಇದ್ದಷ್ಟು ದಿನ ಹಿಂಡಿಹಾಕಿದರು ಜನರು. ಅವರಿಲ್ಲ; ಸಾಕು ಈ ಊರಿನ ಋಣ. ಹೋಗೋಣ ಅಮ್ಮ.

ಅದಕ್ಕೆ ಮುನ್ನ ನನಗೆ ನಿಮ್ಮಿಬ್ಬರ ಅಭಿಪ್ರಾಯ ಬೇಕು.

ನಾನು ನಿಮ್ಮ ಸಮುದಾಯದವನಲ್ಲ. ಆದರೆ ನಿಮಗೆ ಚೆನ್ನಾಗಿ ಗೊತ್ತಿದೆ ನಿಮ್ಮದೇ ಸಮುದಾಯದವರು ಅದು ಹೇಗೆ ನಡೆಸಿಕೊಂಡರು ಎಂದು. ಗೌರವವಾಗಿ ಲಗ್ನವಾಗಿ ನೆಮ್ಮದಿಯ ಬಾಳು ಕೊಡಬಲ್ಲೆ. ಈ ಆಸೆ ಎಂದಿನಿಂದಲೇ ಇದೆ. ಆದರೆ ಕೇಳುವ ಧೈರ್ಯವಿಲ್ಲದಾಯಿತು."

ರಾಜಿಗೆ ಪೂರ್ತಾ ಎಚ್ಚರವಾಯಿತು ಈಗ. ತನ್ನನ್ನು ಬಯಸಿ ಬರುವ ಯುವಕ ಮೂರು ಲೋಕದಲೂ ಇಲ್ಲವೆಂದರೆ ಇಲ್ಲೊಬ್ಬ ಶ್ರೀಕೃಷ್ಣ ಬಂದಿದ್ದಾನೆ ಅಪದ್ಭಾಂಧವನಾಗಿ.!! ಹೌದೇ !!! ನಿಜವೇ ಇದು!!!

ಪ್ರೇತ ಭಟ್ಟನ ಮಗಳು ಎಂದು ನಾಲ್ಕು ದಿಕ್ಕಿಂದಲೂ ಹೀನಾಯಿಸಿ ಚಪ್ಪಾಳೆ ತಟ್ಟಿ ಕ್ರೂರ ಹಾಸ್ಯ ಮಾಡಿದ ಲೋಕದಲ್ಲಿ ಇಂಥವನಿದ್ದಾನೆ ಎಂದರೆ ಅಪ್ಪ ದೇವಲೋಕಕ್ಕೆ ಹೋಗಿ ಕಳಿಸಿದವನೇ ಇರಬೇಕು ತಮ್ಮ ರಕ್ಷಣೆಗಾಗಿ. ಅವಳ ಒಲವಿನ ನೋಟವೇ ಉತ್ತರವಾಯಿತು. ಸೀತೆ ಸಂತೋಷವಾಗಿ ಒಪ್ಪಿದಳು.

ಮಗಳ ಮದುವೆ ಇಲ್ಲಿದ್ದರೆ ಕನಸಿನ ಮಾತು, ತಾನು ಕಂಡಂತೆ ಯೋಗ್ಯನಾದ ಯುವಕ ಗೋಪ. ತಮ್ಮವರು ಕೈ ಹಿಡಿಯುವುದಿಲ್ಲ ಎನ್ನುವುದು ಉರಿಯುವ ಸೂರ್ಯನಷ್ಟೇ ಸತ್ಯ. ವೃದ್ಧ ಕನ್ಯೆಯಾಗಿ ದಿನ ದಿನ ಹಸಿವು, ಬಡತನ, ತಾತ್ಸಾರ ಕೇಳುತ್ತ ಬದುಕುವ ಬದಲಿಗೆ ಇಲ್ಲಿನ ಹಂಗು ಕಳಚಿ ಬಿಡುಗಡೆಗೆ ದೇವರೇ ಕಳಿಸಿದ ಯುವಕ.

ಗೋಪಕುಮಾರ ತಾಯಿ ಮಗಳ ಉತ್ತರ ಪಡೆದುಕೊಂಡು ಮಾರನೆ ದಿನ ಮಧ್ಯರಾತ್ರೆಗೆ ಹೊರಡುವ ತಯಾರಿ ಮಾಡಲು ಹೇಳಿ ಬಂದ ಹಾಗೇ ಹಿಂದಿರುಗಿದ. ಗಟ್ಟಿ ಮುಟ್ಟಾದ ದುಡಿದುಣ್ಣುವ ಜೀವ ಗೋಪನಿಗೆ ತಂದೆ ತೀರಿದ್ದರು. ತಬ್ಬಲಿಗೆ ಬದುಕಿನಾಧಾರ ಚೆಂಡೆವಾದನದ ವೃತ್ತಿ. ಸಭ್ಯ, ಪ್ರಾಮಾಣಿಕ ಯುವಕ. ಸೀತೆಗೆ ಕನಸೇ ಇದೆಲ್ಲ ಎಂಬ ಹಿಗ್ಗು. ಈ ಸುದ್ದಿ ಕೇಳಲು ಅಪ್ಪಣ್ಣನಿರಬೇಕಿತ್ತು ಎಂಬ ಅಳಲು. ರಾಜಿಗೆ ರಾತ್ರಿಯೆಲ್ಲ ಸವಿ ಕನಸು.

ಹಿಡಿದ ಜಡಿಮಳೆಗೆ ಅಪ್ಪಣ್ಣನ ಮನೆ ಮುರಿದು ಬಿದ್ದಿದ್ದು ಊರಿನವರಿಗೆ ಗೊತ್ತಾದಾಗ ನಾಲ್ಕು ದಿನವೇ ಸಂದಿತು. ಅಮ್ಮ, ಮಗಳು ಮಣ್ಣಿನಡಿಯಲ್ಲಿ ಸಮಾಧಿಯಾಗಿರಬೇಕು. ಅವರ ಬೊಜ್ಜಕ್ಕೆ ಪ್ರೇತಕ್ಕೆ ಕೂರಲು ಪ್ರೇತಭಟ್ಟನೇ ಇಲ್ಲವೆಂದು ವೀಳ್ಯದೆಲೆಗೆ ಸುಣ್ಣ ಸವರುತ್ತ ಹಾಸ್ಯ ಮಾಡಿ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.