ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳ ಮಾರುಕಟ್ಟೆ: ‘ನೆಗೆಟಿವ್ ಬ್ಯಾಲೆನ್ಸ್; ದಂಡ ಹಾಕಬಹುದೆ?’

Published : 8 ಸೆಪ್ಟೆಂಬರ್ 2024, 20:30 IST
Last Updated : 8 ಸೆಪ್ಟೆಂಬರ್ 2024, 20:30 IST
ಫಾಲೋ ಮಾಡಿ
Comments

ಬಹಳಷ್ಟು ಬ್ಯಾಂಕ್‌ಗಳು ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಮೊತ್ತ (ನಿಗದಿತ ಕನಿಷ್ಠ ಮೊತ್ತ) ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸುತ್ತವೆ. ಆದರೆ ಬ್ಯಾಂಕ್ ಖಾತೆಯಲ್ಲಿ ಯಾವುದೇ ಹಣ ಇಲ್ಲದಿದ್ದಾಗಲೂ ದಂಡ ವಿಧಿಸಿದರೆ ಅದು ಸರಿಯಾದ ಕ್ರಮವೇ? ಬ್ಯಾಂಕ್‌ಗಳು, ಹೀಗೆ ಗ್ರಾಹಕರ ಖಾತೆಯಲ್ಲಿ ನೆಗೆಟಿವ್ ಬ್ಯಾಲೆನ್ಸ್ ತೋರಿಸಿ ದಂಡ ಹಾಕಬಹುದೇ? ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಈ ಬಗ್ಗೆ ಹೇಳಿರುವುದೇನು? ಬನ್ನಿ, ಈ ಬಗ್ಗೆ ವಿವರವಾಗಿ ತಿಳಿಯೋಣ.

ಏನಿದು ಮಿನಿಮಂ ಬ್ಯಾಲೆನ್ಸ್ ನಿರ್ವಹಣೆ ಮತ್ತು ದಂಡ ವಿಧಿಸುವಿಕೆ ನಿಯಮ?: ನೀವು ಯಾವುದೇ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದಾಗ ಆ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು (ಮಿನಿಮಂ ಬ್ಯಾಲೆನ್ಸ್) ಸದಾಕಾಲ ಕಾಯ್ದುಕೊಳ್ಳಬೇಕು ಎಂಬ ನಿಯಮವಿರುತ್ತದೆ. ಕೆಲ ಬ್ಯಾಂಕ್‌ಗಳಲ್ಲಿ ಮಿನಿಮಂ ಬ್ಯಾಲೆನ್ಸ್ ಮೊತ್ತ ₹2 ಸಾವಿರವಿದ್ದರೆ ಕೆಲ ಬ್ಯಾಂಕ್‌ಗಳಲ್ಲಿ ₹3 ಸಾವಿರ, ₹5 ಸಾವಿರ, ₹10 ಸಾವಿರ ಹೀಗೆ ಬ್ಯಾಂಕ್ ಯಾವುದು ಮತ್ತು ಯಾವ ವ್ಯಾಪ್ತಿಯಲ್ಲಿ ಬರುತ್ತದೆ ಎನ್ನುವುದರ ಆಧಾರದಲ್ಲಿ ಮಿನಿಮಂ ಬ್ಯಾಲೆನ್ಸ್ ಮೊತ್ತ ನಿಗದಿ ಮಾಡಲಾಗಿರುತ್ತದೆ.

ಉದಾಹರಣೆಗೆ ಐಸಿಐಸಿಐ ಬ್ಯಾಂಕ್ ಖಾತೆಯನ್ನು ಮಹಾನಗರದ (ದೊಡ್ಡ ಮೆಟ್ರೊ ನಗರ) ವ್ಯಾಪ್ತಿಯಲ್ಲಿ ತೆರೆದರೆ ₹10 ಸಾವಿರ ಮಿನಿಮಂ ಬ್ಯಾಲೆನ್ಸ್, ನಗರ ವ್ಯಾಪ್ತಿಯಲ್ಲಿ ತೆಗೆದರೆ ₹5 ಸಾವಿರ ಮಿನಿಮಂ ಬ್ಯಾಲೆನ್ಸ್ ಮತ್ತು ಗ್ರಾಮೀಣ ಪ್ರದೇಶದಲ್ಲಿ ತೆರೆದರೆ ₹2 ಸಾವಿರ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗುತ್ತದೆ.

ಈ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ಬ್ಯಾಂಕ್‌ಗಳು ಪ್ರತಿ ತಿಂಗಳ ಲೆಕ್ಕಾಚಾರದಲ್ಲಿ ದಂಡ ವಿಧಿಸುತ್ತವೆ. ಈ ದಂಡ ವಿವಿಧ ಬ್ಯಾಂಕ್‌ಗಳಲ್ಲಿ ₹300 ರಿಂದ ₹500ವರೆಗೂ ಇದೆ. ಬ್ಯಾಂಕ್‌ಗಳು ನಿಮ್ಮ ಖಾತೆಯಲ್ಲಿರುವ ಮೊತ್ತ ಶೂನ್ಯವಾಗುವ ತನಕ ಪ್ರತಿ ತಿಂಗಳು ದಂಡ ವಿಧಿಸುತ್ತಲೇ ಸಾಗುತ್ತವೆ. ವಿಚಿತ್ರ ಅಂದ್ರೆ ಕೆಲ ಬ್ಯಾಂಕ್‌ಗಳು ಖಾತೆಯಲ್ಲಿ ಹಣ ಇಲ್ಲವಾದ ಬಳಿಕವೂ ದಂಡ ಹೇರುವುದನ್ನು ಮುಂದುವರಿಸುತ್ತಿವೆ.

ಮಿನಿಮಂ ಬ್ಯಾಲೆನ್ಸ್ ಶುಲ್ಕದ ಬಗ್ಗೆ ಆರ್‌ಬಿಐ ಹೇಳುವುದೇನು?: ಮಿನಿಮಂ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ದರೆ ದಂಡ ವಿಧಿಸುವ ಪ್ರಕ್ರಿಯೆ ಹೇಗಿರಬೇಕು ಎನ್ನುವ ಬಗ್ಗೆ 2014 ನವೆಂಬರ್ 20ರಂದು ಆರ್‌ಬಿಐ ಸುತ್ತೋಲೆ ಹೊರಡಿಸಿದೆ. ಉಳಿತಾಯ ಖಾತೆಯಲ್ಲಿ ಗ್ರಾಹಕರು ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ಬ್ಯಾಂಕ್‌ಗಳಿಗೆ ದಂಡ ವಿಧಿಸುವ ಹಕ್ಕಿದೆ. ಆದರೆ ಬ್ಯಾಂಕ್‌ಗಳು ಗ್ರಾಹಕರ ಕಷ್ಟ ಕಾರ್ಪಣ್ಯಗಳನ್ನು ಮನಗಾಣದೆ ಸುಲಿಗೆ ಮಾಡಬಾರದು. ಉಳಿತಾಯ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ದರೆ ಆ ವಿಚಾರವನ್ನು ಬ್ಯಾಂಕ್ ಮೊದಲಿಗೆ ಗ್ರಾಹಕನ ಗಮನಕ್ಕೆ ತರಬೇಕು. ಎಸ್ಎಂಎಸ್ ಸಂದೇಶ, ಇ- ಮೇಲ್ ಅಥವಾ ಪತ್ರದ ಮೂಲಕ ಮಿನಿಮಂ ಬ್ಯಾಲೆನ್ಸ್ ನಿರ್ವಹಣೆಯಾಗದಿರುವ ಬಗ್ಗೆ ಗ್ರಾಹಕನಿಗೆ ಮಾಹಿತಿ ಕೊಡಬೇಕು.

ಹೀಗೆ ಮಾಹಿತಿ ಕೊಟ್ಟ ಒಂದು ತಿಂಗಳ ಬಳಿಕವೂ ಗ್ರಾಹಕ ತನ್ನ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ದರೆ ಬ್ಯಾಂಕ್ ಮಿನಿಮಂ ಬ್ಯಾಲೆನ್ಸ್ ಕೊರತೆ ಶುಲ್ಕ ವಿಧಿಸಬಹುದಾಗಿದೆ. ಆದರೆ ಶುಲ್ಕ ವಿಧಿಸುವಾಗ ಗ್ರಾಹಕನ ಬ್ಯಾಂಕ್ ಖಾತೆಯಲ್ಲಿ ನೆಗೆಟಿವ್ ಬ್ಯಾಲೆನ್ಸ್ ಸೃಷ್ಟಿಯಾಗದಂತೆ ಬ್ಯಾಂಕ್ ನೋಡಿಕೊಳ್ಳಬೇಕಾ ಗುತ್ತದೆ. ಅಂದರೆ ಗ್ರಾಹಕನ ಬ್ಯಾಂಕ್ ಖಾತೆಯಲ್ಲಿ ಇರುವ ಹಣದ ಮೊತ್ತ ಶೂನ್ಯವಾದ ಬಳಿಕ ಮಿನಿಮಂ ಬ್ಯಾಲೆನ್ಸ್ ನಿರ್ವಹಣೆ ಕೊರತೆಯಾಗಿದೆ ಎಂದು ಶುಲ್ಕ ವಿಧಿಸಿ ಗ್ರಾಹಕನ ಮೇಲೆ ನೆಗೆಟಿವ್ ಬ್ಯಾಲೆನ್ಸ್‌ನ ಹೊರೆ ಹೇರಬಾರದು ಎಂದು ಈ ನಿಯಮ ತಿಳಿಸುತ್ತದೆ. ಅಗತ್ಯವಿದ್ದಲ್ಲಿ ಉಳಿತಾಯ ಖಾತೆಗೆ ನೀಡುವ ಕೆಲ ಸೇವೆಗಳನ್ನು ಬ್ಯಾಂಕ್ ಕಡಿತಗೊಳಿಸಬಹುದು. ಈ ಮೂಲಕ ಗ್ರಾಹಕನನ್ನು ಎಚ್ಚರಿಸಿ, ಮಿನಿಮಂ ಬ್ಯಾಲೆನ್ಸ್ ನಿರ್ವಹಣೆ ಸುಸ್ಥಿತಿಗೆ ತಂದಾಗ ಹೆಚ್ಚುವರಿ ಸೇವೆಗಳನ್ನು ಪೂರೈಸಬಹುದು ಎಂದು ಆರ್‌ಬಿಐ ನಿಯಮ ತಿಳಿಸುತ್ತದೆ. ಆದರೆ ಈ ಎಲ್ಲಾ ನಿಯಮಗಳು ಪುಸ್ತಕದ ಮೇಲಷ್ಟೇ ಉಳಿದಿವೆ.

ಆರ್‌ಬಿಐ ನಿಯಮ ಪರಿಗಣಿಸದ ಹಲವು ಬ್ಯಾಂಕ್‌ಗಳು: ಹಲವು ಬ್ಯಾಂಕ್‌ಗಳು ಮಿನಿಮಂ ಬ್ಯಾಲೆನ್ಸ್ ದಂಡದ ವಿಚಾರವಾಗಿ ಆರ್‌ಬಿಐ ನಿಯಮಗಳನ್ನು ಪಾಲಿಸುತ್ತಿಲ್ಲ. ಕೆಲವು ಬ್ಯಾಂಕ್‌ಗಳು ಮಿನಿಮಂ ಬ್ಯಾಲೆನ್ಸ್ ನಿರ್ವಹಿಸು ವಂತೆ ಗ್ರಾಹಕನಿಗೆ ಮಾಹಿತಿ ನೀಡಿದರೆ, ಕೆಲ ಬ್ಯಾಂಕ್‌ಗಳು ಅದನ್ನೂ ಮಾಡುವುದಿಲ್ಲ. ಪ್ರತಿ ತಿಂಗಳು ಅವು ಮಿನಿಮಂ ಬ್ಯಾಲೆನ್ಸ್ ನಿರ್ವಹಣೆ ಮಾಡದಿರುವುದಕ್ಕೆ ದಂಡ ವಿಧಿಸುತ್ತಾ ಹೋಗುತ್ತವೆ. ಖಾತೆಯಲ್ಲಿ ಇರುವ ಹಣ ಶೂನ್ಯವಾದ ಬಳಿಕವೂ ದಂಡ ಹೇರುವುದನ್ನು ಮುಂದುವರಿಸುತ್ತವೆ.

ಉದಾಹರಣೆಗೆ ವ್ಯಕ್ತಿಯೊಬ್ಬರು ಮಿನಿಮಂ ಬ್ಯಾಲೆನ್ಸ್ ನಿರ್ವಹಿಸದ ಕಾರಣ ಬ್ಯಾಂಕ್ ಈ ವರೆಗೆ ₹3 ಸಾವಿರ ದಂಡ ವಿಧಿಸಿದೆ ಎಂದು ಭಾವಿಸಿ. ಈ ಸಂದರ್ಭದಲ್ಲಿ ಗ್ರಾಹಕನ ಬ್ಯಾಂಕ್ ಖಾತೆಗೆ ಅವರ ಸ್ನೇಹಿತರೊಬ್ಬರು ₹10 ಸಾವಿರ ವರ್ಗಾವಣೆ ಮಾಡಿದರು ಎಂದುಕೊಳ್ಳಿ.

ಈ ಸನ್ನಿವೇಶದಲ್ಲಿ ಬ್ಯಾಂಕ್ ₹3 ಸಾವಿರ ಮಿನಿಮಂ ಬ್ಯಾಲೆನ್ಸ್ ಶುಲ್ಕ ಕಡಿತ ಮಾಡಿಕೊಂಡು ಇನ್ನುಳಿದ ₹7 ಸಾವಿರವನ್ನು ಮಾತ್ರ ಖಾತೆಯಲ್ಲಿ ಉಳಿಸುತ್ತದೆ. ಹೀಗೆ ಕಡಿತವಾದಾಗ ಮಾತ್ರ ಗ್ರಾಹಕನಿಗೆ ಮಿನಿಮಂ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ದರೆ ಇಷ್ಟು ದೊಡ್ಡ ಮೊತ್ತದ ಶುಲ್ಕ ಬೀಳುತ್ತದೆ ಎಂದು ತಿಳಿಯುತ್ತದೆ.

ನಿಮಗೆ ಹೀಗಾದರೆ ನೀವೇನು ಮಾಡಬೇಕು?: ಉಳಿತಾಯ ಖಾತೆಯಲ್ಲಿ ನೀವು ಮಿನಿಮಂ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ದಾಗ ನಿಮ್ಮ ಬ್ಯಾಂಕ್ ನಿಮಗೆ ಸರಿಯಾದ ಮಾಹಿತಿ ಕೊಡದೆ, ನೆಗೆಟಿವ್ ಬ್ಯಾಲೆನ್ಸ್ ಸೃಷ್ಟಿಸಿದ್ದರೆ ಮೊದಲು ಬ್ಯಾಂಕ್‌ಗೆ ಸಂಬಂಧಪಟ್ಟ ಅಧಿಕಾರಿಗೆ ದೂರು ಸಲ್ಲಿಸಬೇಕು. 30 ದಿನಗಳ ಒಳಗೆ ನಿಮ್ಮ ಬ್ಯಾಂಕ್ ನಿಮಗೆ ಸರಿಯಾದ ಉತ್ತರ ನೀಡದಿದ್ದರೆ ನೀವು ಆರ್‌ಬಿಐ ಬ್ಯಾಂಕಿಂಗ್ ಓಂಬುಡ್ಸ್‌ಮೆನ್‌ಗೆ (ಈ ಲಿಂಕ್ ಬಳಸಿ -https://rbi.org.in/Scripts/Complaints.aspx) ದೂರು ಸಲ್ಲಿಸಬಹುದು. ದೂರಿನಲ್ಲಿ ಕೇಳಿರುವ ಎಲ್ಲ ವಿವರಗಳನ್ನು ಪೂರೈಸಿ ಅರ್ಜಿಯನ್ನು ಸಲ್ಲಿಸಬಹುದು. ದೂರಿನ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಲು ಆರ್‌ಬಿಐನ ಅಪ್ಲಿಕೇಷನ್ ಟ್ರಾಕಿಂಗ್ ವಿಂಡೋಗೆ ಹೋಗಿ ನಿಮ್ಮ ಮೊಬೈಲ್ ನಂಬರ್ ಟೈಪಿಸಿದರೆ ವಿವರ ಸಿಗುತ್ತದೆ. ಆರ್‌ಬಿಐ ಟೋಲ್ ಫ್ರೀ ಸಂಖ್ಯೆ 14448 ಗೂ ಕರೆ ಮಾಡಿ ಮಾಹಿತಿ ಪಡೆಯಬಹುದು.

ಕುಸಿದ ಷೇರು ಸೂಚ್ಯಂಕಗಳು

ಸೆಪ್ಟೆಂಬರ್ 6ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಭಾರಿ ಕುಸಿತ ದಾಖಲಿಸಿವೆ. ಮಾರಾಟದ ಒತ್ತಡಕ್ಕೆ ಸೆನ್ಸೆಕ್ಸ್ ಮತ್ತು ನಿಫ್ಟಿ ಮುಗ್ಗರಿಸಿವೆ. 81,183 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.43 ರಷ್ಟು ಗಳಿಸಿಕೊಂಡಿದೆ. 24,852 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 1.52 ರಷ್ಟು ಇಳಿಕೆ ಕಂಡಿದೆ. ಅಮೆರಿಕದಲ್ಲಿ ಉದ್ಯೋಗ ಕುರಿತ ದತ್ತಾಂಶ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಕಾರಣ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿ ನಗದೀಕರಣ ಮಾಡಿಕೊಂಡಿದ್ದಾರೆ.

ವಲಯವಾರು ಪ್ರಗತಿಯಲ್ಲಿ ಬಹುಪಾಲು ಸೂಚ್ಯಂಕಗಳು ಇಳಿಕೆ ದಾಖಲಿಸಿವೆ. ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 4.73, ಲೋಹ ವಲಯ ಶೇ 2.6, ಆಟೊ ಶೇ 2.47, ಮಾಧ್ಯಮ ಶೇ 2.12, ಬ್ಯಾಂಕ್ ಸೂಚ್ಯಂಕ ಶೇ 1.31, ಮಾಹಿತಿ ತಂತ್ರಜ್ಞಾನ ಶೇ 1.31, ಸೇವಾ ವಲಯ ಶೇ 1.06, ಫಾರ್ಮಾ ಶೇ 0.75, ಫೈನಾನ್ಸ್ ಶೇ 0.46 ರಷ್ಟು ತಗ್ಗಿವೆ. ಎಫ್‌ಎಂಸಿಜಿ ವಲಯ ಶೇ 0.18 ರಷ್ಟು ಗಳಿಸಿಕೊಂಡಿದೆ.

ಇಳಿಕೆ – ಗಳಿಕೆ: ನಿಫ್ಟಿಯಲ್ಲಿ ಕೋಲ್ ಇಂಡಿಯಾ ಶೇ 6.9, ಒಎನ್‌ಜಿಸಿ ಶೇ 6.56, ಟಾಟಾ ಮೋಟರ್ಸ್ ಶೇ 5.48,ಡಾ. ರೆಡ್ಡೀಸ್ ಲ್ಯಾಬ್ಸ್ ಶೇ 5.11, ಎನ್‌ಟಿಪಿಸಿ ಶೇ 5.1, ಹಿಂಡಾಲ್ಕೋ ಇಂಡಸ್ಟ್ರಿಸ್ ಶೇ 4.76, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 4.05, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಶೇ 3.89, ಐಷರ್ ಮೋಟರ್ಸ್ ಶೇ 3.77, ಎಲ್ ಆ್ಯಂಡ್‌ ಟಿ ಶೇ 3.52 ಮತ್ತು ವಿಪ್ರೊ ಶೇ 3.29 ರಷ್ಟು ಕುಸಿದಿವೆ.

ಹೀರೊ ಮೋಟೊಕಾರ್ಪ್ ಶೇ 5.33, ಏಷ್ಯನ್‌ ಪೇಂಟ್ಸ್ ಶೇ 4.48, ಬಜಾಜ್ ಫಿನ್‌ಸರ್ವ್ ಶೇ 4.17, ಟೈಟನ್ ಕಂಪನಿ ಶೇ 3.69, ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 2.66, ಹಿಂದುಸ್ತಾನ್‌ ಯೂನಿಲಿವರ್ ಶೇ 1.95, ಬಜಾಜ್ ಫೈನಾನ್ಸ್ ಶೇ 1.55, ಅಲ್ಟ್ರಾಟೆಕ್ ಸಿಮೆಂಟ್ ಶೇ 1.31, ಶ್ರೀರಾಮ್ ಫೈನಾನ್ಸ್ ಶೇ 0.97 ನೆಸ್ಲೆ ಇಂಡಿಯಾ ಶೇ 0.29ರಷ್ಟು ಗಳಿಸಿಕೊಂಡಿವೆ.

ಮುನ್ನೋಟ: ಸೆಪ್ಟೆಂಬರ್ 17 ಮತ್ತು 18ರಂದು ಅಮೆರಿಕ ಮುಕ್ತ ಮಾರುಕಟ್ಟೆ ಸಮಿತಿ ಸಭೆ ಸೇರಲಿದ್ದು ಬಡ್ಡಿ ದರ ಇಳಿಕೆಯ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬ ಕುತೂಹಲವಿದೆ. ಬಡ್ಡಿ ದರ ಇಳಿಕೆಯ ನಿರ್ಧಾರ ಹೊರಬರಬಹುದು ಎಂಬ ನಿರೀಕ್ಷೆ ಮಾರುಕಟ್ಟೆ ವಲಯದಲ್ಲಿದ್ದರು ಯಾವ ಪ್ರಮಾಣದಲ್ಲಿ ಇಳಿಕೆಯಾಗಬಹುದು ಎಂಬ ಬಗ್ಗೆ ಪ್ರಶ್ನೆಗಳಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶಿಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ. ಸದ್ಯ ಮಾರುಕಟ್ಟೆಯಲ್ಲಿ ಏರಿಳಿತದ ಸ್ಥಿತಿ ಮುಂದುವರಿಯಲಿದೆ.

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT