ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ | ಹಣಕಾಸು, ಆದಾಯ ತೆರಿಗೆ ಕುರಿತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
ಅಕ್ಷರ ಗಾತ್ರ

ನನ್ನ ಮಗ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾನೆ. ಪ್ರತಿ ತಿಂಗಳು ₹2 ಲಕ್ಷ ಸಂಪಾದನೆ ಇದೆ. ಪ್ರಸ್ತುತ ನಾವು ಬೆಂಗಳೂರಿನಲ್ಲಿ 25 ವರ್ಷ ಹಳೆಯದಾದ ಸ್ವಂತ ಮನೆಯಲ್ಲಿ ವಾಸವಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಸ್ವಂತ ಮನೆ ಕಟ್ಟಬೇಕೆಂದು ಅಂದಾಜಿಸಿದ್ದೇವೆ.

ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟುವುದು ಪ್ರಸ್ತುತ ತೀರಾ ದುಸ್ತರದ ಕೆಲಸ. ಹೀಗಾಗಿ, ನಿವೇಶನ ಖರೀದಿಸಿ ಮನೆ ಕಟ್ಟುವ ಬದಲು ಗುಣಮಟ್ಟದ ಮನೆ ಕಟ್ಟುವ ಬಿಲ್ಡರ್ ಕಂಪನಿಗಳ ಜೊತೆ ಸಂಪರ್ಕಿಸಿದೆವು. ಕೆಲವು ಸುತ್ತಿನ ಮಾತುಕತೆ ನಡೆಸಿದ ನಂತರವೂ 2-3 ಕೊಠಡಿಯ ಯಾವುದೇ ಮನೆ ಖರೀದಿಸುವುದಿದ್ದರೂ ಸುಮಾರು ₹1 ಕೋಟಿಗೂ ಮೀರಿದ ಬಜೆಟ್ ನಮ್ಮಲ್ಲಿ ಇರಬೇಕು. ಇದು ಸಾಲದ ಮೂಲವಾದರೂ ಆಗಬಹುದು ಅಥವಾ ನಮ್ಮ ಉಳಿತಾಯದ ಮೊತ್ತವೇ ಆಗಿರಬಹುದು. ಈ ಮೊತ್ತಕ್ಕೆ ಸಾಲ ಪಡೆದರೂ ಶೇ 75ರಷ್ಟು ಮೊತ್ತ ಸಾಲದ ರೂಪದಲ್ಲಿ ಸಿಗುತ್ತದೆ. ಇದರ ಇಎಂಐ ಸುಮಾರು ₹65 ಸಾವಿರ ಬರುತ್ತದೆ.

ನನ್ನ ಪ್ರಶ್ನೆ ಏನೆಂದರೆ, ಇಷ್ಟೊಂದು ದೊಡ್ಡ ಮೊತ್ತ 20 ವರ್ಷದ ಕೊನೆಗೆ ಅಸಲು, ಬಡ್ಡಿ ಎಲ್ಲ ಸೇರಿ ಪ್ರಸ್ತುತ ಬೆಲೆಯಲ್ಲಿ ₹1.80 ಕೋಟಿಯಿಂದ ₹2 ಕೋಟಿ ಮೌಲ್ಯವುಳ್ಳದ್ದಾಗಿರುತ್ತದೆ ಎಂಬುದು ಇಎಂಐ ಲೆಕ್ಕಾಚಾರದಿಂದ ಕಂಡು ಬರುವ ಮಾಹಿತಿ. ಆದರೆ, ಆಸ್ತಿಗಳ ಮೌಲ್ಯವು ವೃದ್ಧಿಯಾಗುವ ಕಾರಣ ಈಗಲೇ ನಿರ್ಧರಿಸಿ ಮನೆ ಖರೀದಿಸುವುದು ಸೂಕ್ತವೇ ಅಥವಾ ನಮ್ಮ ನಿರ್ಧಾರ ಬದಲಿಸಿ ಇತರೆ ಹೂಡಿಕೆ ಮಾಡಿ ಮುಂದೆ ಮತ್ತಷ್ಟು ಹಣ ಸಂಗ್ರಹವಾದಾಗ ನಗದು ಪಾವತಿಸಿ ಮನೆ ಖರೀದಿಸುವುದು ಸೂಕ್ತವೇ? ಮುಂದಿನ ಅವಧಿ ದೀರ್ಘವಾಗಿರುವುದರಿಂದ ಇದೇ ಮೊತ್ತ ಬಳಸಿ ಹೆಚ್ಚಿನ ಆದಾಯ ಪಡೆಯಬಹುದೇ. ಈ ಗೊಂದಲಕ್ಕೆ ಸಲಹೆ ನೀಡಿ.

- ನಾಗೇಶ್ ಕೆ.ಆರ್., ಮಲ್ಲೇಶ್ವರಂ, ಬೆಂಗಳೂರು.

ನಿಮ್ಮ ಪ್ರಶ್ನೆ ಸಹಜವಾದುದು ಮತ್ತು ಆರ್ಥಿಕ ದೃಷ್ಟಿಯಿಂದ ತುಲನೆ ಮಾಡಿದಾಗ ನಮಗೆ ಯಾವುದು ಹೆಚ್ಚು ಪ್ರಶಸ್ತವೋ ಅದನ್ನು ಯೋಜಿಸಿ ಮಾಡುವುದು ಹೆಚ್ಚು ಸಮಂಜಸ. ಈ ಕಾರಣದಿಂದ ನೀವು ನಿಮ್ಮ ನಿರ್ಧಾರವನ್ನು ತುಸು ಬದಲಾಯಿಸಬೇಕಾಗುತ್ತದೆ. ಎಲ್ಲರಂತೆ ತಮಗೂ ಸ್ವಂತ ಮನೆ ಹೊಂದುವುದು ಹೆಚ್ಚು ಅಗತ್ಯ ಎನ್ನುವುದು ಸಹಜವಾಗಿ ಅನಿಸುತ್ತದೆ. ನೀವು ನೀಡಿರುವ ಮಾಹಿತಿಯಂತೆ, ಈಗಾಗಲೇ ನೀವು ಒಂದು ಮನೆ ಹೊಂದಿದ್ದೀರಿ ಹಾಗೂ ನಿಮ್ಮ ಅಗತ್ಯದ ಅನುಕೂಲಕ್ಕೆ ಅದು ಸಾಕೆಂದಾದರೆ ನಿಮ್ಮ ಮಗನ ಆದಾಯದ ಹೂಡಿಕೆ ವಿಚಾರದಲ್ಲಿ ಇನ್ನೂ ಉತ್ತಮ ಅವಕಾಶಗಳನ್ನು ಹುಡುಕುವ ಬಗ್ಗೆ ಯೋಜಿಸಬಹುದು.

ನೀವು ಮೇಲೆ ಹೇಳಿರುವ ಸಾಲದ ಮೇಲೆ (ಅಂದಾಜು ₹75 ಲಕ್ಷ) ಬರಬಹುದಾದ ಇಎಂಐ ಮೊತ್ತವನ್ನೇ ಒಂದು ಹೂಡಿಕೆಯ ತಂತ್ರವಾಗಿ ಬಳಸಿ ಶೇ 12ರಷ್ಟು ವಾರ್ಷಿಕ ಪ್ರಗತಿಯ ನಿರೀಕ್ಷಿಸುವ ಮ್ಯೂಚುವಲ್ ಫಂಡ್ ಅಥವಾ ಉತ್ತಮ ಗುಣಮಟ್ಟದ ಷೇರುಗಳಲ್ಲಿ ಮುಂದಿನ 20 ವರ್ಷ ಹೂಡಿಕೆ ಮಾಡಿದರೆ, ನಿಮ್ಮ ಅದೇ ಮೊತ್ತ ಸುಮಾರು ₹6.5 ಕೋಟಿ ಮೀರಿ ಸಂಗ್ರಹವಾಗುತ್ತದೆ. ಅದೇ ಶೇ 15ರ ವಾರ್ಷಿಕ ಪ್ರಗತಿ ದರದಲ್ಲಿ ವೃದ್ಧಿಯಾದರೆ, ₹10 ಕೋಟಿ ತನಕ ನಿಮ್ಮ ಅದೇ ಮೊತ್ತ ವರ್ಧಿಸುತ್ತದೆ. ಬಹುಶಃ ಈ 20 ವರ್ಷದ ಸಮೀಪದ ಅವಧಿಯಲ್ಲಿ ಹೊಸ ಮನೆಯ ನಿರ್ಧಾರ ನೀವು ಕೈಗೊಂಡರೂ ನಿಮ್ಮ ನಿರೀಕ್ಷೆ ಮೀರಿದ ಹೊಚ್ಚ ಹೊಸ ಅತ್ಯುನ್ನತ ದರ್ಜೆಯ ಮನೆ ಖರೀದಿ ಮುಂದೆಯೂ ಸಾಧ್ಯ. ಈ ಬಗೆಗಿನ ವಿಚಾರವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮರು ಯೋಜಿಸಿ ನಿರ್ಧಾರ ಕೈಗೊಳ್ಳಿ.  

ಪ್ರ

ನಾನು ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಇತ್ತೀಚೆಗೆ ₹34 ಲಕ್ಷ ಗೃಹ ಸಾಲ ಪಡೆದಿರುತ್ತೇನೆ. ಈ ಸಾಲದ ಅವಧಿಯು 30 ವರ್ಷ. ನಾನು ಸರ್ಕಾರಿ ಸೇವೆಯಲ್ಲಿದ್ದು, ಉಳಿದ ಸೇವಾ ಅವಧಿಯು 15 ವರ್ಷ ಆಗಿರುವುದರಿಂದ ಈ ಸಾಲವನ್ನು 15 ವರ್ಷದ ಅವಧಿಗೆ ತೀರುವಂತೆ ಇಎಂಐ ನಿಗದಿಪಡಿಸಲು ಬ್ಯಾಂಕ್‌ನವರನ್ನು ಕೋರಿದಾಗ ಈಗ ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಬೇಕಾದರೆ ಮುಂಗಡವಾಗಿ ಅಸಲನ್ನು ಕಟ್ಟುತ್ತಾ 15 ವರ್ಷಗಳಿಗೆ ಸಾಲ ತೀರಿಸಬಹುದು ಎಂದು ತಿಳಿಸಿರುತ್ತಾರೆ. ನನ್ನ ಪ್ರಶ್ನೆ ಏನೆಂದರೆ, ಈ ರೀತಿ ಮುಂಗಡವಾಗಿ ತೀರಿಸುವುದು ಮತ್ತು 15 ವರ್ಷಗಳ ಇಎಂಐ ಮೂಲಕ ತೀರಿಸುವುದಕ್ಕೆ ಒಟ್ಟಾರೆ ಪಾವತಿ ಒಂದೇ ಆಗುತ್ತದೆಯೆ? ಯಾವುದು ಸೂಕ್ತವಾದುದು? ಈ ಸಮಸ್ಯೆಗೆ ಪರಿಹಾರ ತಿಳಿಸಿ.

-ಈಶ್ವರ್, ದಾವಣಗೆರೆ.

ನೀವು ನೀಡಿರುವ ಮಾಹಿತಿಯಂತೆ, ನೀವು ಪಡೆದಿರುವ ಸಾಲ ಸುದೀರ್ಘ ಅವಧಿಯ ಸಾಲವಾಗಿರುತ್ತದೆ. ಉದಾಹರಣೆಗೆ ಶೇ 8.5ರ ಬಡ್ಡಿದರದಂತೆ 30 ವರ್ಷಗಳ ಅವಧಿಯಲ್ಲಿ ನಿಮ್ಮ ಒಟ್ಟಾರೆ ಪಾವತಿ ಸುಮಾರು ₹94.11 ಲಕ್ಷವಾಗಿರುತ್ತದೆ. ಇದರಲ್ಲಿ ಬಡ್ಡಿ ಮೊತ್ತವೇ ಸುಮಾರು ₹60.11 ಲಕ್ಷ. ಅಂದರೆ  ಮೂವತ್ತು ವರ್ಷದ ಅವಧಿಯಲ್ಲಿ ನೀವು ಕಟ್ಟುವ ಬಡ್ಡಿ ಮೊತ್ತವೇ ಅಸಲಿನ ಎರಡು ಪಟ್ಟು.

 ನಿಮ್ಮ ಉದ್ದೇಶಿತ ಸಾಲದ ಪೂರ್ವ ಪಾವತಿಯ ವಿಚಾರವಾಗಿ ವಿಮರ್ಶಿಸುವುದಾದರೆ, ಬ್ಯಾಂಕ್‌ಗಳು ಸಾಮಾನ್ಯವಾಗಿ ಸಾಲಗಾರನ ಸೇವಾವಧಿಯಲ್ಲೇ ಸಂಪೂರ್ಣ ಸಾಲ ಮರುಪಾವತಿಯಾಗುವಂತೆ ಇಎಂಐ ಕಂತುಗಳನ್ನು ನಿರ್ಧರಿಸುತ್ತವೆ. ಆದರೆ, ನಿಮ್ಮ ವಿಚಾರದಲ್ಲಿ ಇದು ಸೇವಾ ಅವಧಿಗಿಂತಲೂ ವಿಸ್ತರಿಸಿದಂತಿದೆ. ನಿಮ್ಮ ಪೂರ್ವ ಪಾವತಿಯ ನಿರ್ಧಾರ ಸಮಂಜಸವಾಗಿದೆ. ಬಡ್ಡಿ ಉಳಿತಾಯದ ದೃಷ್ಟಿಯಲ್ಲಿ ಈ ನಿರ್ಧಾರ ಬಹಳಷ್ಟು ಸಹಕಾರಿಯಾಗಲಿದೆ.

ನೀವು ಮುಂದಿನ 15 ವರ್ಷಗಳ ಅವಧಿಯಲ್ಲಿ ಒಂದು ತಿಂಗಳಿಗೆ ₹10 ಸಾವಿರದಂತೆ ವರ್ಷಕ್ಕೆ ₹1.20 ಲಕ್ಷದಂತೆ ಹೆಚ್ಚುವರಿ ಪಾವತಿಸುತ್ತಾ ಬನ್ನಿ. ಇದರ ಪರಿಣಾಮ ನಿಮ್ಮ ಸಾಲದ ಅವಧಿ ಕನಿಷ್ಠ ಐದರಿಂದ ಆರು ವರ್ಷ ಮೊದಲೇ ಸಂಪೂರ್ಣ ಪಾವತಿಯಾಗುತ್ತದೆ. ನೀವು ಹೆಚ್ಚುವರಿಯಾಗಿ ಕಟ್ಟುವ ಹಣ ನೇರವಾಗಿ ಸಾಲದ ಅಸಲು ಮೊತ್ತಕ್ಕೆ ವಜಾ ಆಗುತ್ತದೆ ಮತ್ತು ಪ್ರತಿ ತಿಂಗಳ ಇಎಂಐ ಬದಲಾಗದಿದ್ದರೂ ಅದರಲ್ಲಿರುವ ಅಸಲು ಮೊತ್ತದ ಪ್ರಮಾಣ ಪ್ರತಿ ತಿಂಗಳು ಹೆಚ್ಚುತ್ತಾ ಸಾಲದ ಬಾಕಿ ಬೇಗನೆ ಪಾವತಿಯಾಗುವಲ್ಲಿ ನೆರವಾಗುತ್ತದೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT