ಶರಣರ ನೆನೆದರ ಸರಗಿಯ ಇಟ್ಹಂಗ
ಹವಳ ಮಲ್ಲೀಗಿ ಮುಡಿದ್ಹಾಂಗ/ಕಲ್ಯಾಣ
ಶರಣರ ನೆನೆಯೋ ಎಲೆ ಮನವೇ

ಬಂಗಾರದ ಮೋಹ. ಅದರ ಜೊತೆಜೊತೆಗೇ ಅದರಿಂದ ಬಿಡುಗಡೆ ಪಡೆಯುವ ಅಧ್ಯಾತ್ಮ. ಇವೆರಡರ ಸಮ ಮೇಳೈಕೆಯ ಈ ಸಾಲುಗಳು ಉತ್ತರ ಕರ್ನಾಟಕದ ಜನಜೀವನದ ರೂಪಕವೂ ಹೌದು.

ಬಂಗಾರವೆಂಬ ಸೂಜಿಗಲ್ಲಿನಿಂದ ಬಿಡಿಸಿಕೊಳ್ಳುವ ಬಗೆ ಕಾಣದೆ ಅದಕ್ಕೆ ಅಂಟಿಕೊಳ್ಳುವ–ಬಿಡಿಸಿಕೊಳ್ಳುವ ಆಟದಲ್ಲಿ ಹತ್ತು ಹಲವು ಆಚರಣೆಗಳು, ಹಬ್ಬ–ಹರಿದಿನಗಳು ಇಲ್ಲಿ ಅಸ್ತಿತ್ವ ಕಂಡಿವೆ. ಹೊನ್ನತೇರು, ಹೊನ್ನಗಳಸ, ಹೊನ್ನರಿಕೆ, ಹೊನ್ನುಗ್ಗಿ (ಹೊನ್ನಿನ ಹುಗ್ಗಿ), ಹೊನ್ನಾಟಗಳು ಹೊನ್ನಿಗಿಂತಲೂ ಹಿರಿದೆನಿಸಿವೆ. ಅದೇ ವೇಳೆಗೆ ಹೊನ್ನಿನ ಹಿರಿಮೆಯನ್ನೂ ಹೆಚ್ಚಿಸಿವೆ. ಬಂಗಾರ /ಬಂಗಾರಿ, ಬಂಗಾರಗಟ್ಟಿ ಎಂಬೆಲ್ಲ ವಿಶೇಷಣಗಳಿಂದ ಕರೆಯಿಸಿಕೊಳ್ಳುವ ಕಂದಮ್ಮಗಳ ಎದುರಿಗೆ ಅಸಲಿ ಬಂಗಾರದ ಕಿಮ್ಮತ್ತು ಇಲ್ಲಿ ತುಸು ಕಡಿಮೆಯೇ. ಆದರೆ, ಬದುಕು ಬಣ್ಣಗೆಡಬಾರದೆಂಬ ಎಚ್ಚರಿಕೆಯಲ್ಲಿ ಚಿನ್ನವೆಂಬ ಈ ಲೋಹ ಎಷ್ಟು ಬೇಕೋ ಅಷ್ಟು ಇಲ್ಲಿ ವಿಜೃಂಭಿಸಿಯೇ ತೀರುತ್ತದೆ. ಅದಕ್ಕಾಗಿ ಯುಗಾದಿ ಪಾಡ್ಯ, ಅಕ್ಷಯ ತೃತೀಯ ಎಂಬುದು ನೆಪವಾಗುತ್ತದೆ.

ಬಂಗಾರವನ್ನು ಬೆಂಕಿಯಂತೆ, ಕಸವರವನ್ನು ಕಸದಂತೆ ಕಾಣಬೇಕು ಎಂಬ ಅನುಭಾವಿಗಳ ಮಾತನ್ನು ಮನದಲ್ಲಿರಿಸಿಕೊಂಡೇ ಕೂಸಿಗೊಂದು–ಕುನ್ನಿಗೊಂದರಂತೆ ಅಣೆ ಅಣೆ ತೂಕದ ಬಂಗಾರವನ್ನು ಸೇರಿಸಿಟ್ಟವರು ಇಲ್ಲಿಯ ಜನರು. ಬಂಗಾರ ಸಿಕ್ಕರೆ ಒಳ್ಳೆಯದಾಗದು ಎಂಬ ಮಾತು (ದಾರಿಯಲ್ಲಿ ಬಿದ್ದಿದ್ದ ಸಣ್ಣ ಬಂಗಾರದ ಗುಂಡು, ಯಾರೋ ಕಳೆದುಕೊಂಡ ಬೆಂಡೋಲೆ ಏನೇ ಸಿಕ್ಕರೂ ಅದನ್ನು ದೇವಸ್ಥಾನದ ಹುಂಡಿಗೆ ಹಾಕುತ್ತಾರೆ) ಈಗಲೂ ಇಲ್ಲಿ ಚಾಲ್ತಿಯಲ್ಲಿರುವುದು ಅದರ ‘ಬೆಂಕಿ’ ಗುಣದಿಂದಾಗಿಯೇ.

ಹರೆಯದ ಬಾಲೆಯ ಕೊರಳಲ್ಲಿ ಮಿಂಚುವ ಒಂದೆಳೆ ಚೈನು ಆಕೆಯ ಸಂಭ್ರಮವನ್ನು ಸಾರುತ್ತದೆ. ಅವ್ವ ಹಾಕಿಕೊಂಡ ಬೋರಮಾಳ, ಅಮ್ಮನ ಪದಕದ ಸರ, ಅಕ್ಕನ ಅವಲಕ್ಕಿ ಸರ, ಜತನವಾಗಿ ಕಾಯ್ದಿಟ್ಟು ಹಬ್ಬ-ಹರಿದಿನಕ್ಕೆ, ಮದುವೆ-ಮುಂಜಿವೆಗಳಿಗೆ ಹಾಕಿಕೊಳ್ಳುವ ನೆಲ್ಲಿಗುಂಡು, ಮೋಹನಮಾಲೆ. ಪಾಟ್ಲಿ–ಬಿಲ್ವಾರ, ತೋಡೆ, ವಂಕಿ–ಸರಗಿ, ಬೆಂಡೋಲೆ, ಜುಮುಕಿ, ಬುಗುಟಿ (ಬುಗುಡಿ), ಜುಲ್ಪಿ ಹೂವು, ನಡಪಟ್ಟಿ, ಕಾಲ್ಗೆಜ್ಜೆ, ಮುತ್ತಿನುಂಗುರ.... ಆ ಬಂಗಾರದ ಸಾಮಾನುಗಳ ಸೊಬಗೇ ಬೇರೆ. ಈಗಿನ ಟೆಂಪಲ್ ಕಲೆಕ್ಷನ್, ಲೈಟ್ ವೇಟ್ ಆಭರಣಗಳ ಭರಾಟೆಯಲ್ಲಿ, ಅರಗಿನ ಗುಂಡುಗಳಿಗೆ ಬಂಗಾರದ ಹಾಳೆ ಮೆತ್ತಿದ ಬೋರುಮಾಳ ಇವತ್ತಿಗೂ ಬೆರಗು ಮೂಡಿಸುತ್ತವೆ.

ಸಂದೂಕದಿಂದ, ಕಪಾಟಿನಿಂದ ಹಬ್ಬ-ಹರಿದಿನಗಳಿಗೆ ಹೊರಬರುವ ಇವು, ಬಂದಾಗಲೊಮ್ಮೆ ಹೊಸ ಹೊಸ ಕಥೆ ಹೇಳುತ್ತವೆ. ಕನ್ಯೆ ನೋಡಲು ಹೋದಾಗ ಆಕೆಯ ಕೈಯಲ್ಲಿ ಕಾಣುವ ಮುಂಗೈಯಲ್ಲಿನ ಗೆರೆಗಳೇ ಆಕೆ ವಂಕಿ–ಸರಗಿ ತೊಡುವ ಹೆಣ್ಣು ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸುತ್ತಿದ್ದವಂತೆ. ಹುಟ್ಟದಟ್ಟಿಗೆಂದು ಸೋದರ ಮಾವ ತಂದ ಜುಲುಪಿ ಹೂವಿನಲ್ಲಿ ಈಗ ಅರಗು ಅಷ್ಟೇ ಕಾಣುತ್ತಿದೆಯಾದರೂ, ಆ ಹೂವಿನಲ್ಲಿ ಆಕೆಗೆ ಅವ್ವನೇ ಕಾಣುತ್ತಾಳಂತೆ. ತನ್ನ ಮುತ್ತಿನ ಬೆಂಡೋಲೆ ಹಾಗೂ ಬುಗುಡಿಯಲ್ಲಿನ ಮುತ್ತುಗಳೆಲ್ಲ ಒಂದೊಂದೇ ಉದುರುತ್ತಿದ್ದಾಗ, ತನ್ನ ಪಾಳಿ ಆಯಿತು ಎಂದುಕೊಳ್ಳುತ್ತ ಅಳಿದುಳಿದವುಗಳನ್ನು ಆಯ್ದು, ಹಾಳೆಯಲ್ಲಿ ಕಟ್ಟಿಕೊಟ್ಟ ಅವ್ವ ಆ ಮುತ್ತುಗಳಲ್ಲೂ ಕಾಣುತ್ತಾಳೆ.

ಅವ್ವ ಏನೇ ಆಭರಣ ಮಾಡಿಸಿದರೂ ಅದು ಮುಂದೆ ಬೆಳೆದು ನಿಲ್ಲುವ ತನ್ನ ಮಗಳಿಗಾಗಿಯೇ ಆಗಿರುತ್ತಿತ್ತು. ‘ಆಕಳ ಹೊಟ್ಟ್ಯಾಗ ಅಚ್ಚೇರು (ಅರ್ಧಸೇರು) ಬಂಗಾರ’ ಎನ್ನುತ್ತ ಹಾಲು–ಹೈನು ಮಾರಿ, ಗುಂಜಿ–ಗುಂಜಿಯಾಗಿ ಖರೀದಿಸಿದ್ದ ಬಂಗಾರ ಒಡವೆಯಾಗಿ ಮೈದಳೆದಾಗ ಆ ಒಡವೆಯಲ್ಲಿ ಅವ್ವನಲ್ಲದೇ ಇನ್ನಾರು ಕಂಡಾರು? ಮುಂದೆ, ಮಗ ದುಡಿಯುವಂತಾದಾಗ ಆಕೆಯ ಮುಂಗೈಗೆ ಬಿಲ್ವಾರ–ಪಾಟ್ಲಿ ಬಂದಾವು. ಕೊರಳು ಒಂದು ಬೋರಮಾಳ ಕಂಡೀತು. ಇಲ್ಲದಿದ್ದರೆ ಅದೂ ಇಲ್ಲ. ಆಕೆಗೆ ಬಂಗಾರ ಬೇಕಿರುವುದು ವಿಜೃಂಭಿಸಲು ಅಲ್ಲ. ಸಂಬಂಧಗಳ ಜತನಕ್ಕಾಗಿ.

ಅತ್ತೆಯ ಗಂಟು ಸೊಸೆಯರ ಕಣ್ಣು
ಮನೆಯ ಯಜಮಾನಿಯಾದ ಅತ್ತೆಯನ್ನು ಸೊಸೆಯಂದಿರು ನೋಡಿಕೊಳ್ಳುವುದರ ಹಿಂದೆ ನಮ್ಮಲೊಂದು ಮಜಕೂರು ಇದೆ. ಅತ್ತೆಯ ಗಂಟಿನಲ್ಲಿ ಎಷ್ಟು ಬಂಗಾರದ ಸಾಮಾನುಗಳಿವೆ ಎಂಬುದರ ಮೇಲೆಯೂ ಸೊಸೆಯಂದಿರು ಅತ್ತೆಯ ಬಗೆಗೆ ಕಾಳಜಿ ವಹಿಸುತ್ತಾರೆ. ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲವಾದರೂ ಬಹುತೇಕ ಖರೆ. ನಡುವಿಗೆ ಸೀರೆ ನೆರಿಗೆ ಸಿಕ್ಕಿಸಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುವ ಸೊಸೆಯಂದಿರು ಸದಾ ಅತ್ತೆಯ ಗಮನ ಸೆಳೆಯುವ ತಂತ್ರಗಾರಿಕೆಯಲ್ಲಿಯೇ ಇರುತ್ತಾರೆ. ಅತ್ತೆಯ ಬದುಕಿನ ವಜನು ಏನು ಎಂಬುದು ಬೇಕಿಲ್ಲವಾದರೂ ಆಕೆಯ ಬಿಲ್ವಾರ-ಪಾಟ್ಲಿಯ ವಜನಿನ ಬಗ್ಗೆ ಅವರು ಸೂಕ್ಷ್ಮಗ್ರಾಹಿಗಳು. ಅದನ್ನಾಧರಿಸಿದ ಅವರ ಕಾಳಜಿ ಹಿರಿಜೀವಕ್ಕೇನಾದರೂ ಹಿಡಿಸಿಬಿಟ್ಟರೆ, ಚಿನ್ನದ ನಡಪಟ್ಟಿ, ಬೆಳ್ಳಿ ನಡಪಟ್ಟಿ, ಕಾಸಿನ ಸರ-ಪದಕದ ಸರ, ನತ್ತು-ಬುಗುಡಿಯ, ಪಾಟ್ಲಿ-ಬಿಲ್ವಾರ, ಅವಲಕ್ಕಿ ಸರ. ಎಲ್ಲಕ್ಕಿಂತ ಹೆಚ್ಚಾಗಿ ಅತ್ತೆಯ ಬಳಿಯ ಕೀಲಿಕೈ ಚಲ್ಲಾ. ಬಹುಶಃ ಈ ಕೊನೆಯದೇ ಬಹುದೊಡ್ಡ ವಜನಿನ ಒಡವೆ!

ತಾಳಿಸರ, ಮಂಗಲಸೂತ್ರ
ಮಂಗಲಸೂತ್ರದ ತಯಾರಿ ಕೂಡ ಮದುಮಕ್ಕಳಿಗೆ ಖುಷಿ ಕೊಡುವ ಸಂಗತಿಯೇ ಹೌದು. ಮದುಮಕ್ಕಳು ಇಬ್ಬರೂ ಕೂಡಿಯೇ ತಾಳಿಸರ ಪೋಣಿಸಬೇಕು. ಚಿಕ್ಕಚಿಕ್ಕ ಕರಿಮಣಿಗಳನ್ನು ದಾರದಲ್ಲಿ ಪೋಣಿಸುವ ಈ ಕೆಲಸವೇ ಅವರಿಗೆ ವೈವಾಹಿಕ ಜೀವನದ ನಾಜೂಕತನವನ್ನು-ಜವಾಬ್ದಾರಿಯನ್ನು ಅರ್ಥ ಮಾಡಿಸುತ್ತದೆ. ಸಂಯಮ- ಶ್ರದ್ಧೆ ಇಬ್ಬರಲ್ಲಿಯೂ ಇದ್ದು ಕಣ್ಣಲ್ಲಿ ಕಣ್ಣಿಟ್ಟು ಕರಿಮಣಿ ಪೋಣಿಸಿದಾಗ ಮಾಂಗಲ್ಯ ಸರ ಸಿದ್ಧಗೊಳ್ಳುತ್ತದೆ. ಅಲ್ಲಿರುವುದು ಎರಡು ಕಡಲೆ ಬೇಳೆ ಗಾತ್ರದ ಬಂಗಾರದ ಬಿಲ್ಲೆಗಳು ಮತ್ತೆ ಹಾಲುಮಣಿ, ಹಸಿರು ಮಣಿ, ಬೆಲ್ಲದ ಮಣಿ, ಮುತ್ತು ಮತ್ತು ಹವಳ ಅಷ್ಟೆ ಆದರೂ ವಜನು ದೊಡ್ಡದು.

ದಿನಕ್ಕೊಂದು ಟ್ರೆಂಡ್ ಬರುತ್ತಿರುವ ಈ ಹೊತ್ತಿನಲ್ಲಿ ಹೆಣ್ಣುಮಕ್ಕಳು ಈಗಲೂ ನಿಶ್ಚಿತಾರ್ಥದ ಉಂಗುರದಿಂದ ಹಿಡಿದು , ತಮ್ಮ ಮದುವೆಗೆ ಹಾಕಿದ ಎಲ್ಲ ಆಭರಣಗಳನ್ನೂ ಜತನದಿಂದ ಕಾಯ್ದಿರಿಸಿಕೊಳ್ಳುತ್ತಾರೆ. ಮದುವೆಯ ಆಭರಣವನ್ನು ಕರಗಿಸುವುದು ಶುಭವಲ್ಲ ಎಂಬ ನಂಬಿಕೆ ಇದರ ಹಿಂದೆ ಇದೆ.

ಒಡವೆಯ ಮಾತು ಬಂದು ಎಷ್ಟೋ ಮದುವೆಗಳು ಮುರಿದುಹೋದ ಕಹಿ ಘಟನೆಗಳಿವೆ ಇಲ್ಲಿ. ಮುರಿದು ಬೀಳುತ್ತಿದ್ದ ಎಷ್ಟೋ ಮದುವೆಗಳನ್ನು ತಮ್ಮ ಕೊರಳಲ್ಲಿನ ಸರವನ್ನೋ, ಬೆರಳಿನ ಉಂಗುರವನ್ನೋ ಬಿಚ್ಚಿಕೊಟ್ಟವರ ದೊಡ್ಡ ಮನಸಿನವರ ಹಾರೈಕೆಗಳಿವೆ ಇಲ್ಲಿ. ಹೊಸ ಸೀರೆಯೊಂದನ್ನು ಖರೀದಿಸಿ, ತಮ್ಮ ಓಣಿಯ ಹೆಣ್ಣುಮಗಳಿಗೋ, ಸಂಬಂಧಿಕರಿಗೋ ‘ನೀರಿಗ್ಹಾಕಿ ಕೊಡು’ ಎಂದು ಹೇಳಿದರೆಂದರೆ ಅದರರ್ಥ ತೊಳೆದುಕೊಡು ಎಂದಲ್ಲ. ಉಟ್ಟುಕೊಂಡು ಕೊಡು ಎಂಬುದು.

ಕನ್ಯೆ ನೋಡಲೆಂದು ಗಂಡಿನ ಕಡೆಯವರು ಬಂದಾಗ, ಆ ಹೆಣ್ಣುಮಗುವಿಗೆ ಉಟ್ಟುಕೊಳ್ಳಲು ಯಾರೋ ಒಳ್ಳೆಯ ರೇಷ್ಮೆ ಸೀರೆ ಕೊಟ್ಟರೆ, ಇನ್ನಾರೋ ಬಂಗಾರದ ಸರ ಕೊಡುತ್ತಿದ್ದರು. ತಮ್ಮ ಊರಿನ ಹೆಣ್ಣುಮಗಳನ್ನು ತಮ್ಮ ಮನೆ ಮಗಳೆಂದೇ ತಿಳಿದ ದಿನಗಳು ಅವಾಗಿದ್ದವು. ಯಾರದೋ ಒಬ್ಬರ ಮನೆಯಲ್ಲಿ ಅವಲಕ್ಕಿ ಸರ ಇದ್ದರೆ, ಇಂಥ ಹೊತ್ತಿನಲ್ಲಿ ಅದು ಹೆಚ್ಚು ಕಡಿಮೆ ಅದು ಎಲ್ಲರ ಮನೆಗೂ ಓಡಾಡಿ ಬಂದೇ ಸವೆದಿರುತ್ತಿತ್ತು. ಮದುವೆ ನಿಕ್ಕಿಯಾದರೆ, ಮದುಮಗಳ ಕೊರಳಲ್ಲಿಯೂ ಅದೇ ಸರ. ಆಭರಣದೊಡತಿಗೆ ಬೇಸರಕ್ಕಿಂತ ಹಿಗ್ಗೇ ಹೆಚ್ಚು. ಈಗಲೂ ಅಲ್ಲಲ್ಲಿ ಇರುವ ಜೀವ ಹಿಡಿದಿರುವ ಆ ರಸಬಳ್ಳಿ ಮತ್ತೆ ಹಬ್ಬೀತೇ?

ಚಿತ್ರಕೃಪೆ: ಸುವರ್ಣ ಜುವೆಲರ್ಸ್ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.