ಆವ ನೆಲದಲಿ ಮೇದೊ, ಆವ ನೀರನು ಕುಡಿದೊ |
ಆವು ಹಾಲ್ಗರೆವುದದನಾರು ಕುಡಿಯುವನೊ ! ||
ಆವ ಬಲವದರಿನೊಗೆದೆಂಗೇಯ್ಸುವುದೊ ಜಗಕೆ ! |
ಭಾವಿಸಾ ಋಣಗತಿಯ – ಮಂಕುತಿಮ್ಮ || 842 ||

ಪದ-ಅರ್ಥ: ಆವು=ಹಸು, ಹಾಲ್ಗರೆವುದದನಾರು=ಹಾಲ್(ಹಾಲು)+ಕರೆವುದು+ಅದನು+ಯಾರು, ಬಲವದರಿನೊಗೆದೆಂಗೇಯಲ್ಸವುದೊ=ಬಲ+ಅದರಿನ್(ಅದರಿಂದ)+ಬಗೆದಂ(ಪಡೆದು)+ಏಂ(ಏನು)+ ಗೈಸುವುದೊ(ಮಾಡಿಸುವುದೊ), ಭಾವಿಸಾ=ಭಾವಿಸು+ಆ.

ವಾಚ್ಯಾರ್ಥ: ಹಸು, ಯಾವ ನೆಲದಲ್ಲಿ ಮೇದು, ಯಾವ ನೀರನ್ನು ಕುಡಿದು ಹಾಲನ್ನು ಕೊಡುವುದೊ? ಆ ಹಾಲನ್ನು ಯಾರು ಕುಡಿಯುತ್ತಾರೋ? ಅದರಿಂದ ಶಕ್ತಿಯನ್ನು ಪಡೆದ ಆತನಿಂದ ಜಗತ್ತಿಗೆ ಏನೇನು ಕೆಲಸವಾದೀತೋ? ಆ ಋಣದ ಗತಿಯನ್ನು ಕುರಿತು ಚಿಂತಿಸು.

ವಿವರಣೆ: ಈಗ ನಾಲ್ಕೈದು ವರ್ಷಗಳ ಕೆಳಗೆ ಬೆಂಗಳೂರಿನಅರಮನೆ ಮೈದಾನದಲ್ಲಿ ಒಂದು ಪ್ರದರ್ಶನ ಏರ್ಪಟ್ಟಿತ್ತು. ಸಾವಿರಾರು ತರತರಹದ ಮಳಿಗೆಗಳು ಅನೇಕ ಆಕರ್ಷಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವು. ಇನ್ನೊಂದೆಡೆಗೆ ಮಕ್ಕಳಿಗೆ ಆಟವಾಡಲು ನೂರೆಂಟು ಆಕರ್ಷಣೆಗಳು. ಆಗೊಂದು ಘಟನೆ ನನ್ನ ಗಮನ ಸೆಳೆಯಿತು. ಅಲ್ಲೊಂದು ಪುಟ್ಟ ಕುಟುಂಬ, ಬಹುಶಃ ತಮಿಳುನಾಡಿನವರು ಇರಬೇಕು. ಸಣ್ಣ ವಯಸ್ಸಿನ ತಂದೆ- ತಾಯಿಯರು. ತಂದೆ ಸುಮಾರು ಐದು ವರ್ಷದ ಮಗಳನ್ನು ಎತ್ತಿಕೊಂಡಿದ್ದಾನೆ. ತಾಯಿ ಎರಡು ವರ್ಷದ ಮಗನನ್ನು ಸೊಂಟದ ಮೇಲೆ ಹೊತ್ತಿದ್ದಾಳೆ.

ಪುಟ್ಟ ಹುಡುಗಿ ಒಂದೇ ಸಮನೆ ರಚ್ಚೆ ಹಿಡಿದು ಅಳುತ್ತಿತ್ತು. ಅದಕ್ಕೆ ಯಾವುದೋ ಒಂದು ಆಟಿಕೆ ಇಷ್ಟವಾಗಿದೆ. ಅದನ್ನು ಕೊಡಿಸು ಎಂದು ದುಂಬಾಲು ಬಿದ್ದಿದೆ. ಆಟಿಕೆ ಸ್ವಲ್ಪ ದುಬಾರಿಯಾದದ್ದು ಮತ್ತು ತಂದೆಯ ಹತ್ತಿರ ಅಷ್ಟು ಹಣವಿಲ್ಲ. ಕೊಡಿಸದೆ ಇರಲೂ ಮನಸ್ಸಿಲ್ಲ. ಆಗ ಅಲ್ಲಿಗೆ ಮತ್ತೊಂದು ಸಣ್ಣ ವಯಸ್ಸಿನ ದಂಪತಿಗಳು ಬಂದರು. ತರುಣ ಗಂಡ, ಮಗು ಯಾಕೆ ಅಳುತ್ತಿದೆ ಎಂದು ಕೇಳಿ ತಿಳಿದು, ಆ ಆಟಿಕೆಯನ್ನು ಕೊಂಡು ತಂದು ಮಗುವಿಗೆ ಕೊಟ್ಟುಬಿಟ್ಟ. ಮಗುವಿನ ತಂದೆ ಮುಜುಗರದಿಂದ ಬೇಡಬೇಡವೆಂದರೂ ಒತ್ತಾಯಿಸಿ ಕೊಟ್ಟು ಹೊರಟ. ಯಾರೋ ಅವನನ್ನು ಕೇಳಿದರು, “ಯಾಕೆ ಹಾಗೆ ಮಗುವಿಗೆ ಕೊಡಿಸಿದಿರಿ?” ಆತ ಹೇಳಿದ್ದು ನನ್ನ ಮನ ತಟ್ಟಿತು.

“ನಾನು ಮೂಲತ: ಕುವೈತ್ನವನು. ಬೆಂಗಳೂರಿನಲ್ಲೇ ಇದ್ದುಓದಿ, ಮರಳಿ ಹೋಗಿ ಅಲ್ಲಿ ಕೆಲಸ ಮಾಡುತ್ತೇನೆ. ಈಕೆ ನನ್ನ ಹೆಂಡತಿ. ಕಳೆದ ತಿಂಗಳು, ನಮ್ಮ ಎರಡು ವರ್ಷದ ಮಗಳು ತೀರಿ ಹೋದಳು. ಹೆಂಡತಿಗೆ ಪರಿಸರ ಬದಲಾಗಿ ಸಮಾಧಾನವಾಗಲೆಂದು ಇಲ್ಲಿಗೆ ಕರೆತಂದಿದ್ದೇನೆ. ನಮ್ಮ ಮಗಳಿಗೆ ಏನೇನು ಕೊಡಿಸಬೇಕು ಎಂದಿದ್ದೆವೋ ಅದನ್ನು ಯಾವುದಾದರೂ ಮಗುವಿಗೆ ಕೊಡಿಸಬೇಕು ಎನ್ನಿಸಿ ಹೀಗೆ ಮಾಡಿದೆ”.

ತಕ್ಷಣ ನೆನಪಾದದ್ದು, “ಎತ್ತಣ ಮಾಮರ, ಎತ್ತಣ ಕೋಗಿಲೆ?”ಎಲ್ಲಿಯ ಕುವೈತ್, ಎಲ್ಲಿಯ ತಮಿಳುನಾಡು, ಎಲ್ಲಿಯ ಬೆಂಗಳೂರು ಪ್ರದರ್ಶನ, ಎಲ್ಲಿಂದೆಲ್ಲಿಯ ಸಂಬಂಧ? ಅಲ್ಲಿಂದ ಬಂದು ಈ ಮಗುವಿನ ಸಂತೋಷಕ್ಕೆ ಕಾಣಿಕೆ ಕೊಟ್ಟ ಋಣ ಅದೆಂತಹುದು? ಈ ಕಗ್ಗ ಅದನ್ನೇ ಧ್ವನಿಸುತ್ತದೆ. ಒಂದು ಹಸು ಯಾವ ಹುಲ್ಲನ್ನು ಯಾವ ಸ್ಥಳದಲ್ಲಿ ಮೇಯುತ್ತದೊ? ಅದು ಕರೆದ ಹಾಲನ್ನು ಯಾರು ಕುಡಿಯುತ್ತಾರೋ? ಹಾಲನ್ನು ಕುಡಿದವರಿಗೆ ಬಂದ ಶಕ್ತಿಯಿಂದ ಲೋಕಕ್ಕೆ ಏನು ಪ್ರಯೋಜನವಾಗುತ್ತದೋ ಎಂಬುದನ್ನು ಕಂಡವರಾರು? ಈ ಋಣದ ಗತಿಯನ್ನು ಧ್ಯಾನಿಸುವುದು ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.