ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪಂದನ | ಗರ್ಭಿಣಿಯರ ಏರುರಕ್ತದೊತ್ತಡ ಮುಂಜಾಗ್ರತೆ ಏನು?

Published 28 ಜೂನ್ 2024, 20:17 IST
Last Updated 28 ಜೂನ್ 2024, 20:17 IST
ಅಕ್ಷರ ಗಾತ್ರ

ನಾನು ಖಾಸಗಿ ಶಾಲೆ ಶಿಕ್ಷಕಿಯಾಗಿದ್ದು 6ವರ್ಷದ ಮಗಳಿದ್ದಾಳೆ. ನನಗೆ ಮೊದಲನೇ ಹೆರಿಗೆಯಲ್ಲಿ ಬಿ.ಪಿ.ಇದ್ದು, 8 ತಿಂಗಳೊಳಗೆ ಸಿಸೇರಿಯನ್ ಮಾಡಿ ಮಗು ತೆಗೆದಿದ್ದರಿಂದ, ಮಗುತೂಕ ಕಡಿಮೆ ಇತ್ತು. ಕಷ್ಟಪಟ್ಟು ಆ ಮಗುವನ್ನು ಇಲ್ಲಿಯವರೆಗೆ ಸಾಕಿದ್ದೇನೆ. ಎರಡು ಮೂರು ಬಾರಿ ಅಬಾರ್ಶನ್‌ಮಾಡಿಕೊಳ್ಳಲು ಮಾತ್ರೆ ಕೂಡಾ ತೆಗೆದುಕೊಂಡಿರುವೆ. ಈಗ ಮತ್ತೆ 2ತಿಂಗಳ ಗರ್ಭಿಣಿಯಾಗಿರುತ್ತೇನೆ. ಆದರೆ ಮೊದಲನೇ ಬಾರಿಯ ಹಾಗೇ ಬಿ.ಪಿ.ಹೆಚ್ಚಾಗುತ್ತೇನೋ ಎಂದು ಹೆದರುತ್ತಿದ್ದೇನೆ ಏನು ಮಾಡಲಿ? ಬಿ.ಪಿ. ಬಾರದ ಹಾಗೇ ತಡೆಯಬಹುದೇ? ನಮ್ಮ ಅಜ್ಜಿ ದಿನಾಲು ನಿಂಬೆಹಣ್ಣಿನ ರಸಕುಡಿಯಲು ಹೇಳುತ್ತಿದ್ದಾರೆ. ಕುಡಿಯಬಹುದೇ?

35ವರ್ಷಗಳಾಗಿದ್ದು 2ನೇ ಮಗು ಬೇಕೆಂದಿದ್ದರೇ ತಡಮಾಡಬೇಡಿ, ಗರ್ಭಿಣಿಯರಲ್ಲಿ 5ತಿಂಗಳ ನಂತರ ರಕ್ತದೊತ್ತಡವು 140/90ಕ್ಕಿಂತ, 4ತಾಸು ಅಂತರದಲ್ಲಿ 2ಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಹೆಚ್ಚಿದ್ದರೆ ಅದನ್ನು ಗರ್ಭಧಾರಣೆಯ ಅಧಿಕರಕ್ತದೊತ್ತಡ ಅಥವಾ ಪಿ.ಐ.ಎಚ್ (ಪ್ರೆಗ್ನೆನ್ಸಿ ಇಂಡ್ಯೂಸಡ್ ಹೈಪರ್‌ಟೆನ್ಸ್) ಎನ್ನುತ್ತಾರೆ. ನಿಮಗೆ ಈ ರೀತಿಯ ಏರುರಕ್ತದೊತ್ತಡ ಹೆರಿಗೆಯಾಗಿ 3ತಿಂಗಳೊಳಗಾಗಿ ಸಹಜ ಸ್ಥಿತಿಗೆ ಬರುತ್ತದೆ. ಇದರಲ್ಲಿ ಮೂತ್ರಪಿಂಡ ಅಥವಾ ಇನ್ನಿತರ ಯಾವುದೇ ಅಂಗಾಂಗ ಹಾನಿಯಾಗುವುದಿಲ್ಲ. ನಿಮಗಾಗಿದ್ದು ಬಹುಶಃ ಸೌಮ್ಯರೀತಿಯ ಪಿ.ಐ.ಎಚ್ ಇರಬಹುದೇನೊ. ನೀವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಿ. 5ಮಿ.ಗ್ರಾಂ ಫೋಲಿಕ್‌ಆಸಿಡ್ ಮಾತ್ರೆಗಳನ್ನ ನಿಯಮಿತವಾಗಿ 9ತಿಂಗಳವರೆಗೂ ಸೇವಿಸಿ. ತಿಂಗಳಿಗೊಮ್ಮೆ 7 ತಿಂಗಳವರೆಗೂ ವೈದ್ಯರಹತ್ತಿರ ತಪಾಸಣೆಮಾಡಿಸಿ. ನಂತರ 15ದಿನಕ್ಕೊಮ್ಮೆ ತಪಾಸಣೆಗೊಳಗಾಗಿ. ಈ ಮೊದಲೇ ಗರ್ಭಿಣಿಯಾದಾಗ ಏರುರಕ್ತದೊತ್ತಡ ಇರುವುದರಿಂದ ಗರ್ಭಧಾರಣೆಯ ಆರಂಭದಿಂದಲೇ (ಕಡಿಮೆಪ್ರಮಾಣದ) ಆಸ್ಪಿರಿನ್‌ಮಾತ್ರೆ ಕೊಡುತ್ತಾರೆ (8ತಿಂಗಳವರೆಗೆ). ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನ ನಿಯಮಿತವಾಗಿ ಸೇವಿಸಿ. ಉಪ್ಪಿನಸೇವನೆಗೂ ಗರ್ಭಿಣಿಯರ ಏರುರಕ್ತದೊತ್ತಡಕ್ಕೂ ನೇರ ಸಂಬಂಧ ಇಲ್ಲದಿದ್ದರೂ ಉಪ್ಪು, ಸಕ್ಕರೆ, ಮೈದಾ ಇವೆಲ್ಲವುಗಳನ್ನ ಸಾಧ್ಯವಾದಷ್ಟು ಕಡಿಮೆ ಸೇವಿಸುವುದು ಒಳ್ಳೆಯದು. ಇನ್ನೂ ನಿಂಬೆ ಹಣ್ಣಿನ ರಸ ಅಥವಾ ಸಿಟ್ರೆಸ್ ಹಣ್ಣುಗಳಾದ ಕಿತ್ತಳೆ, ಮೂಸಂಬೆ, ಬೀಟ್‌ರೂಟ್ ಇವೆಲ್ಲವೂಗಳ ಸೇವನೆ ಒಳ್ಳೆಯದೇ. ಇವು ಸೂಕ್ಷ್ಮ ರಕ್ತನಾಳಗಳಲ್ಲಿ ರಕ್ತಪರಿಚಲನೆ ಸುಸ್ಥಿತಿಯಲ್ಲಿಡಲು ಸಹಾಯವಾಗುತ್ತದೆ. ಸಾಧ್ಯವಾದಷ್ಟು ಸೊಪ್ಪು, ತರಕಾರಿಗಳನ್ನು ಸೇವಿಸಿ, ತಜ್ಞವೈದ್ಯರ ಮೇಲ್ವಿಚಾರಣೆಯಲ್ಲಿದ್ದಾಗ ಅವರು ನಿಮ್ಮ ಪ್ರತಿ ಭೇಟಿಯಲ್ಲಿಯೂ ನಿಮ್ಮ ರಕ್ತದೊತ್ತಡವನ್ನ ಸರಿಯಾಗಿ ತಪಾಸಣೆ ಮಾಡಿ ಸೂಕ್ತ ಔಷಧವನ್ನು ಕೊಡುತ್ತಾರೆ. ನೀವು ಈಗಿಂದಲೇ ಬಿ.ಪಿ ಹೆಚ್ಚಾಗುತ್ತದೆ ಎಂದು ಆತಂಕ ಇಟ್ಟುಕೊಳ್ಳದಿರಿ. ದೀರ್ಘ ಉಸಿರಾಟ ಮಾಡುತ್ತಿರಿ, ನಾಡಿಶೋಧನ ಮತ್ತು ಭ್ರಮರಿ ಪ್ರಾಣಾಯಾಮಗಳನ್ನ ತಜ್ಞರಿಂದ ಕಲಿತು 5ರಿಂದ 10ನಿಮಿಷ ಅಭ್ಯಾಸ ಮಾಡಿದರೆ ಒತ್ತಡ ನಿರ್ವಹಣೆಗೆ ಸಹಾಯವಾಗುತ್ತದೆ.‌ v

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು

bhoomika@prajavani.co.inಗೆ ಕಳುಹಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT