ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ – ಈ ನಾಲ್ವರ ಜನನದಿಂದ ದಶರಥನ ಅರಮನೆ ಸಂತೋಷದಿಂದ ತುಂಬಿತು. ಮಹಾರಾಜನು ಪ್ರಜೆಗಳಿಗೆ ಅನ್ನಸಂತರ್ಪಣೆಯನ್ನು ನಡೆಸಿದ; ಸಾಕಷ್ಟು ಸಂಪತ್ತನ್ನೂ ಹಂಚಿದ.

ನಾಲ್ಕು ಮಕ್ಕಳಿಗೂ ಜಾತಕರ್ಮದಿಂದ ಆರಂಭವಾಗಿ ಉಪನಯನದವರೆಗೆ ವಸಿಷ್ಠರ ನೇತೃತ್ವದಲ್ಲಿ ಸಂಸ್ಕಾರಗಳು ನಡೆದವು.

ದಶರಥನಿಗೆ ರಾಮನನ್ನು ಕಂಡರೆ ತುಂಬ ಪ್ರೀತಿ; ಅವನು ತಂದೆಯ ಕೀರ್ತಿಯನ್ನು ಜಗತ್ತಿಗೆ ಸಾರಿಹೇಳುವ ಧ್ವಜ ಎಂಬಂತೆ ಇದ್ದ. ಜನರಿಗೆ ರಾಮನನ್ನು ಕಂಡರೆ ಪ್ರೀತಿಯ ಜೊತೆಗೆ ಗೌರವ ಕೂಡ. ನಾಲ್ವರು ಬಾಲಕರೂ ವೇದಗಳನ್ನು ಅಧ್ಯಯನ ಮಾಡಿದರು; ಬಿಲ್ವಿದ್ಯೆಯನ್ನೂ ಕಲಿತರು; ಪ್ರಜೆಗಳನ್ನು ಕಾಪಾಡುವುದು ತಮ್ಮ ಕರ್ತವ್ಯ ಎಂದು ಆ ವಯಸ್ಸಿನಲ್ಲಿಯೇ ಅರಿತರು. ಎಲ್ಲರಿಗೂ ಹಿರಿಯ ರಾಮ; ಅವನನ್ನು ಕಂಡರೆ ಪ್ರಜೆಗಳು ಚಂದ್ರನನ್ನು ನೋಡಿದಂತೆ ಸಂಭ್ರಮಿಸುತ್ತಿದ್ದರು. ಅವನು ಆನೆಸವಾರಿ, ಕುದುರೆಸವಾರಿ, ರಥಸಂಚಾರ – ಹೀಗೆ ರಾಜಕುಮಾರರಿಗೆ ಒಪ್ಪತಕ್ಕ ಎಲ್ಲ ವಿದ್ಯೆಗಳಲ್ಲೂ ಚೆನ್ನಾಗಿ ಪಳಗಿದ್ದ. ಶೌರ್ಯವನ್ನು ಸಂಪಾದಿಸುವುದರಲ್ಲಿ ಮಾತ್ರವೇ ಅವನ ಆಸಕ್ತಿ ಇರಲಿಲ್ಲ; ಪಿತೃಸೇವೆಯಲ್ಲೂ ಶ್ರದ್ಧೆಯಿಂದ ತೊಡಗಿಕೊಂಡಿದ್ದ.

ರಾಮ ಮತ್ತು ಲಕ್ಷ್ಮಣ – ಇವರಿಬ್ಬರೂ ಅತ್ಯಂತ ಸ್ನೇಹದಿಂದ ಇದ್ದರು. ರಾಮ ತನ್ನನ್ನು ತಾನು ಇಷ್ಟಪಡುವುದಕ್ಕಿಂತಲೂ ಲಕ್ಷ್ಮಣನನ್ನು ಹೆಚ್ಚು ಪ್ರೀತಿಸುತ್ತಿದ್ದ; ತನ್ನ ಪ್ರಾಣವೇ ಹೊರಗೆ ಲಕ್ಷ್ಮಣನ ರೂಪದಲ್ಲಿ ಸಂಚರಿಸುತ್ತಿದೆ – ಎನ್ನುವಷ್ಟು ತಾದಾತ್ಮ್ಯ ಅವನಲ್ಲಿ. ಇಬ್ಬರೂ ಏನನ್ನು ತಿಂದರೂ ಜೊತೆಯಲ್ಲಿಯೇ ಹಂಚಿ ತಿನ್ನುತ್ತಿದ್ದರು. ರಾಮನು ಬೇಟೆಗೆಂದು ತೆರಳಿದರೆ ಲಕ್ಷ್ಮಣನು ಬಿಲ್ಲನ್ನು ಹಿಡಿದು ಅವನ ಹಿಂದೆಯೇ ಹೊರಟುಬಿಡುತ್ತಿದ್ದ. ಅದೇ ರೀತಿಯಲ್ಲಿ ಭರತನಿಗೆ ಶತ್ರುಘ್ನನಲ್ಲಿ ತುಂಬ ಪ್ರೀತಿ; ರಾಮನಿಗೆ ಲಕ್ಷ್ಮಣನಂತೆ ಭರತನಿಗೆ ಶತ್ರುಘ್ನ. ಈ ನಾಲ್ವರು ಮುದ್ದಾದ, ಮೇಧಾವಿಗಳಾದ, ವಿನಯಶೀಲರಾದ, ಕೀರ್ತಿಶಾಲಿಗಳಾದ, ವಿವೇಕಿಗಳಾದ ಮಕ್ಕಳೊಡಗೂಡಿ ದಶರಥನು ಬ್ರಹ್ಮದೇವನಂತೆ ಹರ್ಷದಿಂದಿದ್ದ. ಹೀಗೆ ಕೆಲವು ವರ್ಷಗಳು ಕಳೆದವು; ಅವರಿಗೆ ಮದುವೆಯನ್ನು ಮಾಡಬೇಕು ಎಂಬ ಬಯಕೆ ಅವನಲ್ಲಿ ಮೂಡಿತು.

ರಾಮಾದಿ ನಾಲ್ವರು ಬಾಲಕರ ಜನನದಿಂದ ಆರಂಭಗೊಂಡು ಸುಮಾರು ಹನ್ನೊಂದು ವರ್ಷಗಳ ಬಾಲ್ಯವನ್ನು ಕವಿ ವಾಲ್ಮೀಕಿ ಕೇವಲ ಅರ್ಧಶ್ಲೋಕದಲ್ಲಿ ಹೇಳಿಬಿಟ್ಟಿದ್ದಾನೆ. ಹನ್ನೊಂದು ವರ್ಷದವರೆಗೆ ಎಂದು ಊಹಿಸಲು ಏನು ಆಧಾರ ಎಂದರೆ, ಕ್ಷತ್ರಿಯರಿಗೆ ಹನ್ನೊಂದನೆಯ ವರ್ಷದಲ್ಲಿ ಉಪನಯನ ಮಾಡಬೇಕೆಂಬುದು ಅಂದಿನ ಶಾಸ್ತ್ರವಿಧಿ (ಏಕಾದಶೇ ಕ್ಷತ್ರಿಯಮ್). ಕಾಳಿದಾಸ ಕೂಡ ಮೊಲೆಹಾಲನ್ನು ಕುಡಿಯುತ್ತಿರುವ ಮಕ್ಕಳಿಗೆ ಶ್ಲೋಕಾರ್ಧದಲ್ಲಿಯೇ ಸಂಸ್ಕಾರಗಳನ್ನು ಮಾಡಿಸಿ, ಅವರನ್ನು ತಾರುಣ್ಯಕ್ಕೆ ಬೆಳೆಸಿಬಿಟ್ಟಿದ್ದಾನೆ!

ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೊಂದಿದೆ. ರಾಮನ ಬಾಲ್ಯ ಹೇಗಿತ್ತು? ಅದನ್ನು ಊಹಿಸುವುದು ಸುಲಭವಲ್ಲ. ಮಹಾಭಾರತದಲ್ಲಿ ಕೃಷ್ಣನು ಕಾಣಿಸಿಕೊಳ್ಳುವುದು ಅವನು ಪ್ರೌಢಾವಸ್ಥೆಯನ್ನು ತಲುಪಿದ ಬಳಿಕವೇ, ದಿಟ. ಆದರೆ ಅವನ ಬಾಲ್ಯದ ವಿವರಗಳು ಬೇರೆಡೆ ಸಿಗುತ್ತವೆ; ಅನಂತರದ ಕವಿಗಳೂ ಅವನ ಬಾಲ್ಯದ ಸಂದರ್ಭಗಳನ್ನು ಸೃಷ್ಟಿಸಿ, ಅವನೊಂದಿಗೆ ಆಟವಾಡಿ, ತಾವೂ ಅವನೊಂದಿಗೆ ಬೆಳೆದು, ಆನಂದವನ್ನು ಪಡೆದಿದ್ದಾರೆ. ಆದರೆ ರಾಮನಿಗೆ ಅಂಥ ಭಾಗ್ಯ ಇಲ್ಲ ಎಂದೇ ಹೇಳಿದರೆ ತಪ್ಪಾಗದು. ಹೌದು, ರಾಮನಿಗೆ ಬಾಲ್ಯ ಇರಲು ಸಾಧ್ಯವೇ ಇಲ್ಲ ಎನಿಸುತ್ತದೆ. ಕೃಷ್ಣನನ್ನು ‘ಕ್ರೀಡೆ’, ‘ಆಟ’ – ಎಂಬುದಕ್ಕೆ ಸಂಕೇತವಾಗಿ ನೋಡಿದರೆ, ರಾಮನನ್ನು ‘ನಿಯಮ’ ಎಂದು ಕರೆಯಬೇಕಾಗುತ್ತದೆ. ‘ನಿಯಮ’ ಎಂದರೆ ಧರ್ಮ ತಾನೆ? ಧರ್ಮಕ್ಕೆ ಎಳೆತನ ಎಂಬುದಿರದು. ‘ಬಾಲ್ಯಧರ್ಮ’ ಎನ್ನಬಹುದು; ಆದರೆ ಅದರ ಅರ್ಥ ಧರ್ಮ ಇನ್ನೂ ವಿಕಸಿತವಾಗಿಲ್ಲ, ಪ್ರೌಢವಾಗಿಲ್ಲ ಎಂದಲ್ಲ. ದೊಡ್ಡ ಜ್ವಾಲೆಯೊಂದು ಏನೇನನ್ನು ಸುಡಬಲ್ಲದೋ, ಅಂಥ ಎಲ್ಲವನ್ನೂ ಸುಡಬಲ್ಲ ಗುಣವನ್ನು ಸಣ್ಣ ಬೆಂಕಿಕಡ್ಡಿಯೂ ಪಡೆದಿರುತ್ತದೆ; ‘ಸುಡುವುದು’ ಬೆಂಕಿಯ ಗುಣ; ಅದರಲ್ಲಿ ‘ಸಣ್ಣ ಸುಡುವಿಕೆ’, ‘ದೊಡ್ಡ ಸುಡುವಿಕೆ’ ಎಂಬುದಿರುವುದಿಲ್ಲ. ಹೀಗೆಯೇ ಧರ್ಮವು ಎಳೆತನದಲ್ಲಿ ಒಂದು ಬಗೆಯಲ್ಲಿ ಬೆಳೆದ ಮೇಲೆ ಇನ್ನೊಂದು ಬಗೆಯಲ್ಲಿ ಇರಲು ಸಾಧ್ಯವಿಲ್ಲವಷ್ಟೆ! ರಾಮನ ಶೃಂಗಾರವೂ ಅದು ಧರ್ಮಶೃಂಗಾರವೇ ಆಗಬೇಕು; ಅವನಿಗೂ ಧರ್ಮಕ್ಕೂ ಇರುವ ಸಂಬಂಧ ಅಷ್ಟು ಘನವೂ ಪ್ರಜ್ಞಾನವೂ ಆದದ್ದು. ಹೀಗಾಗಿ ರಾಮನನ್ನು ಎಂದೂ ತುಂಟನಂತೆ, ಚೇಷ್ಟೆ ಮಾಡುತ್ತಿರುವಂತೆ, ಸುಳ್ಳನ್ನು ಹೇಳುತ್ತಿರುವಂತೆ ಕಲ್ಪಿಸಿಕೊಳ್ಳಲೂ ಆಗದು. ಸುಳ್ಳು, ಕಪಟ, ವಂಚನೆ, ಕೀಟಲೆ – ಇವೆಲ್ಲವೂ ಮನುಷ್ಯರ ಸಹಜಸ್ವಭಾವಗಳು; ದೈವಕ್ಕೆ ಅಂಥ ವ್ಯಭಿಚಾರೀಭಾವಗಳು ಇರದು; ರಾಮನು ಮನುಷ್ಯರೂಪದಲ್ಲಿರುವ ದೇವರು. ಇಷ್ಟಕ್ಕೂ ನಾವು ಮಕ್ಕಳನ್ನು ಏಕಾದರೂ ಇಷ್ಟಪಡುತ್ತೇವೆ? ನಮ್ಮತನದ ಚಿಹ್ನೆಯಾಗಿಯೇ ನಮ್ಮ ಮಕ್ಕಳನ್ನು ನಾವು ಕಾಣುತ್ತೇವೆ ಅಲ್ಲವೆ? ನಮ್ಮತನವೇ ನಮಗೆ ಅತ್ಯಂತ ಇಷ್ಟವಾದ ಸಂಗತಿಯಾಗಿರುವುದರಿಂದಲೇ ಅದರ ಬೆಳವಣಿಗೆಯನ್ನು ಮಕ್ಕಳಲ್ಲಿ ಕಾಣುತ್ತ ಸಂತಸಪಡುತ್ತೇವೆ. ‘ನಿಮ್ಮ ಮಕ್ಕಳು ಅವರು ನಿಜವಾಗಿಯೂ ನಿಮ್ಮ ಮಕ್ಕಳಲ್ಲ’ ಎಂದು ಖಲೀಲ್ ಜಿಬ್ರಾನ್ ಎಚ್ಚರಿಸಿದ್ದು ಈ ಕಾರಣದಿಂದಲೇ ಇರಬೇಕು! ವಿಲ್ ಡ್ಯುರೆಂಟ್ ಇದನ್ನು ಚೆನ್ನಾಗಿ ಹೇಳಿದ್ದಾರೆ:

Our children bring us up by showing us, through imitation, what we really are.

ನಮ್ಮ ಗುಣಗಳು ರಾಮನಲ್ಲಿ ಪ್ರತಿಫಲಿಸಲು ಸಾಧ್ಯವಿಲ್ಲ; ಅಥವಾ ರಾಮನ ಗುಣಗಳು ಮಾನುಷಗುಣಗಳು ಅಲ್ಲ. ನಾವು ಯಾರೂ ನಮ್ಮತನವನ್ನು ರಾಮನೆಂಬ ಶಿಶುವಿನಲ್ಲಿ ಕಾಣುವುದಕ್ಕೂ ಸಾಧ್ಯವಿಲ್ಲ; ಹಾಗೆ ಕಾಣಲು ಹೆದರುತ್ತೇವೆ ಎಂದೂ ಹೇಳಬಹುದೆನ್ನಿ! ರಾವಣನು ಸೀತೆಯನ್ನು ಅಪಹರಿಸಲು ಅಥವಾ ಅವಳನ್ನು ವಂಚಿಸಲು ರಾಮನ ವೇಷವನ್ನೇ ಅವನು ಧರಿಸಬಹುದಿತ್ತಲ್ಲವೆ? ಆದರೆ ಅವನು ಏಕೆ ಹಾಗೆ ಮಾಡಲಿಲ್ಲ? ರಾಮನ ವೇಷವನ್ನು ತೊಟ್ಟ ಕೂಡಲೇ, ತಾನು ರಾವಣನಾಗಿಯೇ ಉಳಿಯದೆ ರಾಮನಂತೆ ಪರಿವರ್ತಿತನಾಗಿಬಿಡುವೆ – ಎಂಬ ಹೆದರಿಕೆ ಅವನಿಗೆ ಇದ್ದಿತಂತೆ! ಎಡವುವುದು, ಬೀಳುವುದು, ಅಳುವುದು, ವಂಚಿಸುವುದು – ಇಂಥ ಮಾನುಷಸಹಜಭಾವಗಳನ್ನು ರಾಮನ ಬಾಲ್ಯದಲ್ಲೂ ಕಾಣಲಾಗದು. ಕೃಷ್ಣನ ಬಾಲ್ಯಲೀಲೆಗಳನ್ನು ಅದ್ಭುತವಾಗಿ ವರ್ಣಿಸಿರುವ ಕವಿಗಳಲ್ಲಿ ಲೀಲಾಶುಕನಿಗೆ ಅಗ್ರಸ್ಥಾನ ಸಲ್ಲುತ್ತದೆ; ಅವನ ‘ಶ್ರೀಕೃಷ್ಣಕರ್ಣಾಮೃತ’ದ ಪದ್ಯವೊಂದು ಹೀಗಿದೆ:

‘ರಾಮೋ ನಾಮ ಬಭೂವ’ ‘ಹುಂ’

‘ತದಬಲಾ ಸೀತೇತಿ’ ‘ಹುಂ’ ‘ತಾಂ ಪಿತು–

ರ್ವಾಚಾ ಪಂಚವಟೀತಟೇ

ವಿಹರತಃ ತಸ್ಯಾಹರದ್ರಾವಣಃ!’|

ನಿದ್ರಾರ್ಥಂ ಜನನೀ ಕಥಾಮಿತಿ

ಹರೇರ್ಹುಂಕಾರತಃ ಶ್ರುಣ್ವತಃ

‘ಸೌಮಿತ್ರೇ ಕ್ವ ಧನುರ್ಧನುರ್ಧನು’ರಿತಿ

ವ್ಯಗ್ರಾ ಗಿರಃ ಪಾತು ವಃ ||

ಈ ಪದ್ಯದ ಸಂದರ್ಭವೇ ಮನಮೋಹಕವಾಗಿದೆ:

‘ಬಾಲಕೃಷ್ಣ ಇನ್ನೂ ನಿದ್ರೆ ಮಾಡಿಲ್ಲ; ಅವನ ತಾಯಿ ಅವನಿಗೆ ಕಥೆ ಹೇಳುತ್ತಿದ್ದಾಳೆ – ಕಥೆಯನ್ನು ಕೇಳುತ್ತ ಮಗು ನಿದ್ರೆಗೆ ಜಾರಲಿ ಎಂದು. ಕೃಷ್ಣನಿಗೆ ಹೇಳುತ್ತಿರುವ ಕಥೆ ಯಾವುದೆಂದರೆ – ರಾಮನ ಕಥೆ. ರಾಮಾಯಣದ ಕಥೆ ಆರಂಭವಾಗಿದೆ: ರಾಮ ಎಂಬುವನು ಒಬ್ಬನಿದ್ದ. ತಾಯಿಯ ಮಾತಿಗೆ ಮಗು ಹೂಂಗುಟ್ಟುತ್ತಿದೆ! ‘ರಾಮ ಎಂಬುವನು ಒಬ್ಬನಿದ್ದ’; ‘ಹುಂ’. ‘ಅವನ ಹೆಂಡತಿ ಸೀತೆ’; ‘ಹುಂ’. ‘ತಂದೆಯ ಮಾತಿನ ಪ್ರಕಾರ ಕಾಡಿಗೆ ಹೋದ ರಾಮ ಅಲ್ಲಿ, ಪಂಚವಟಿಯಲ್ಲಿ ಹೆಂಡತಿಯೊಂದಿಗೆ ವಿಹರಿಸುತ್ತಿದ್ದ; ಆಗ ರಾವಣನೆಂಬ ರಾಕ್ಷಸನು ಸೀತೆಯನ್ನು ಎತ್ತಿಕೊಂಡುಹೋದ’. ಕಥೆಯನ್ನು ಕೇಳುತ್ತ ಹೂಂಗುಟ್ಟುತ್ತಿದ್ದ ಮಗು ಸೀತಾಪಹರಣದ ಸುದ್ದಿಯನ್ನು ಕೇಳುತ್ತಲೇ ‘ಓ ಲಕ್ಷ್ಮಣ! ಎಲ್ಲಿ ನನ್ನ ಬಿಲ್ಲು? ಬಿಲ್ಲು? ಬಿಲ್ಲು?’ – ಎಂದು ಸಿಡಿಮಿಡಿಗೊಂಡಿತಂತೆ!’

ಒಂದು ವೇಳೆ ರಾಮನಿಗೆ ಕೃಷ್ಣನ ಕಥೆಯನ್ನು ಹೇಳುವಂಥ ಅವಕಾಶ ಒದಗಿತು ಎಂದಿಟ್ಟುಕೊಳ್ಳೋಣ. ಕೃಷ್ಣನು ಬೆಣ್ಣೆಯನ್ನು ಕದ್ದ ಪ್ರಸಂಗದ ಕಥನ ನಡೆಯುತ್ತಿದೆ ಎಂದುಕೊಳ್ಳಿ. ಆಗ ರಾಮನ ಪ್ರತಿಕ್ರಿಯೆ ಹೇಗಿರಬಹುದು? ಊಹಿಸಲು ಕಷ್ಟವಾಗುತ್ತದೆಯಲ್ಲವೆ?

ಬಾಲ್ಯ ಎನ್ನುವುದು ನಮ್ಮ ವ್ಯಕ್ತಿತ್ವವನ್ನೇ ರೂಪಿಸುವ ದೊಡ್ಡ ಪ್ರಭಾವ. ಕವಿ ರಿಲ್ಕ್ ಒಂದೆಡೆ ಹೇಳಿರುವ ಮಾತು ಮನನೀಯ. ಕವಿಯಾದವನು ಅವನ ಕಾವ್ಯವಸ್ತುವನ್ನು ಕಂಡುಕೊಳ್ಳುವುದು ತುಂಬ ಮಹತ್ವದ ಸಂಗತಿ; ಎಷ್ಟೋ ಸಲ ವಿಷಯವೊಂದು ಸಿಗದೆ ಒದ್ದಾಡುವ ಸಂದರ್ಭವೂ ಎದುರಾಗಬಹುದು. ‘ಅಂಥ ಸಂದರ್ಭದಲ್ಲಿ ನಿಮ್ಮ ಬಾಲ್ಯಕ್ಕೆ ಮರಳಿ; ಅದಕ್ಕಿಂತಲೂ ಮತ್ತೊಂದು ಮೂಲಸೆಲೆ, ಅನುಭವದ ನೆಲೆ ಎಲ್ಲಿದ್ದೀತು?’ ಎನ್ನುವುದು ರಿಲ್ಕ್ ಕವಿಯ ಮಾತು.ಆದರೆ ರಾಮನ ಬಾಲ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಅವನ ವ್ಯಕ್ತಿತ್ವ ಹಂತಹಂತವಾಗಿ ರೂಪುಗೊಂಡದ್ದು ಅಲ್ಲ; ಅವನು ಹುಟ್ಟಿನಿಂದಲೇ ಧರ್ಮವೀರ. ಅವನ ಯಾವ ಭಾವಕ್ಕೂ ಪೂರ್ವಪದವಾಗಿ ‘ಧರ್ಮ’ವನ್ನು ಸೇರಿಸಲೇಬೇಕು; ಧರ್ಮದ ಸಂಸ್ಪರ್ಶವಿಲ್ಲದ ರಾಮನ ಯಾವ ನಡೆ–ನುಡಿಯನ್ನೂ ಊಹಿಸಿಕೊಳ್ಳಲಾಗದು. ಹೀಗಾಗಿ ಕೃಷ್ಣನ ಬಾಲ್ಯವನ್ನು ‘ಶ್ರೀಕೃಷ್ಣಕರ್ಣಾಮೃತ’ದಂತೆ ಚಿತ್ರಿಸಲು ‘ಶ್ರೀರಾಮಕರ್ಣಾಮೃತ’ ಬಂದರೂ, ಅಲ್ಲಿಯ ವರ್ಣನೆಗಳು ರಸೋತ್ಕರ್ಷವಾಗಿ ಮೂಡಲು ಕಷ್ಟ. ಏಕೆಂದರೆ ಮಕ್ಕಳು ಮಕ್ಕಳಾಗಿದ್ದರೆ ಮಾತ್ರವೇ ನಮಗೆ ಅವರು ಸಂತೋಷವನ್ನುಂಟುಮಾಡಬಲ್ಲರು; ಅವರೂ ‘ದೊಡ್ಡ’ವರಂತೆ ವ್ಯವಹರಿಸಲು ಆರಂಭಿಸಿದರೆ ಅವರೊಂದಿಗೆ ನಾವು ಆಟ ಆಡಲಾರೆವು. ರಾಮ ಹೀಗೆ ಹುಟ್ಟಿನಿಂದಲೇ ಪ್ರಬುದ್ಧ, ವಿವೇಕಿ, ಧರ್ಮವಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.