ಮೈಸೂರಿಗೂ ಚಾಮುಂಡೇಶ್ವರಿಗೂ ಇರುವ ನಂಟು ಯಾರಿಗೆ ತಿಳಿದಿಲ್ಲ - ನೀವು ಮೈಸೂರನ್ನು ಯಾವುದೇ ಕಡೆಯಿಂದ ಪ್ರವೇಶಿಸಿದರೂ ನಗರದೇವಿಯಾದ, ಮೈಸೂರಿನ ನಾಡದೇವಿಯಾದ ಚಾಮುಂಡಿಯ ಅಭಯಕಲಶಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ. ಮೈಸೂರಿನ ಅಧಿಷ್ಠಾತ್ರಿ, ಮೈಸೂರರಸರ ಮನೆದೇವಿಯಾದ ಚಾಮುಂಡಿಯು ಸಹಜವಾಗಿಯೇ, ರಾಜಾಶ್ರಿತವಾದ ಮೈಸೂರಿನ ಶಿಷ್ಟಕಲಾಪ್ರಕಾರಗಳನ್ನೂ ಆಳಿದ್ದು ಅಚ್ಚರಿಯೇನಲ್ಲ. ಚಾಮುಂಡಿಯನ್ನು ಹಾಡಿ ಹೊಗಳದ ಮೈಸೂರಿನ ವಾಗ್ಗೇಯಕಾರನಿಲ್ಲವೆಂದರೆ ತಪ್ಪಾಗಲಾರದು. ಈ ವಿಷಯವನ್ನು ಚಿಂತಿಸುವಾಗ ಮೊದಲಿಗೆ ಮನಸ್ಸಿಗೆ ಬರುವುದೆಂದರೆ ಭೂತಪೂರ್ವ ಮೈಸೂರು ಸಂಸ್ಥಾನದ ನಾಡಗೀತೆ - ‘ಕಾಯೌ ಶ್ರೀಗೌರೀ ಕರುಣಾಲಹರಿ’ ಎಂಬ ಸುಂದರಗಂಭೀರಗೀತೆ. ಇದು ಸಂಗೀತರಚನೆಯ ಸಾಲಿನಲ್ಲಿ ನಿಲ್ಲಬಹುದೋ, ರಚಯಿತರನ್ನು ವಾಗ್ಗೇಯಕಾರರೆನ್ನಬಹುದೋ ಎಂಬುದು ಬೇರೆಯ ಚರ್ಚೆ, ಆದರೆ ಇದೊಂದು ಸುಂದರ ಗೀತೆ, ಚಾಮುಂಡಿಯನ್ನು ಕುರಿತದ್ದು ಮತ್ತು ಮೈಸೂರಿನ ನಾಡಗೀತೆಯೆಂಬ ಕಾರಣಕ್ಕೆ ಈ ಪಟ್ಟಿಯಲ್ಲಿದಕ್ಕೆ ಅಗ್ರಸ್ಥಾನ. ಚಾಮುಂಡಿಯನ್ನು ಕುರಿತದ್ದೆಂದೆನೇ? ಇದು ಆರಂಭವಾಗುವುದು ‘ಕಾಯೌ ಶ್ರೀಗೌರೀ’ ಎಂದು. ಗೌರಿ, ಶಾಂಭವಿ, ಚಾಮುಂಡಿ ಇವೆಲ್ಲವೂ ಒಂದೇ ಶಕ್ತಿಸ್ವರೂಪ ತಾನೆ - ಗೀತೆಯೌ ಗೌರಿ ಮತ್ತು ಚಾಮುಂಡಿಯರ ನಡುವೆ ಅಭೇದಕಲ್ಪನೆಯೊಂದಿಗೆ ರಚಿತವಾಗಿದೆ. ಶುಂಭಾದಿಮದಾಂಬೋದಿನಿ, ಕುಂಭಜನಿಭೆ, ಜಂಭಾಹಿತಸಂಭಾವಿತೆ, ಶಾಂಭವಿ, ಶ್ಯಾಮಾಲಿಕೆಯಾದ ಚಾಮುಂಡಾಂಬಿಕೆಯು ಸೋಮಕುಲಜನಾದ ‘ಚಾಮನಾಮಾಂಕಿತ’ರಾಜೇಂದ್ರನನ್ನು ಕಾಯಲೆಂದು ಹಾರೈಸಿದ ಗೀತೆಯಿದು (ಮುಂದೆ ಜಯಚಾಮರಾಜೇಂದ್ರ ಒಡೆಯರ ಕಾಲದಲ್ಲಿ ಇದನ್ನು ‘ಶ್ರೀಜಯಚಾಮುಂಡಿಕೆ ಶ್ರೀಜಯಚಾಮೇಂದ್ರನಾಮಾಂಕಿತ’ ಎಂದು ಬದಲಿಸಲಾಯಿತು). ಇದರ ರಚಯಿತರು ಅಭಿನವಕಾಲಿದಾಸರೆಂದೇ ಪ್ರಸಿದ್ಧರಾದ ಬಸವಪ್ಪಶಾಸ್ತ್ರಿಗಳು.

ಮೈಸೂರಿನ ಅರಸರೆಲ್ಲರೂ ಸಾಮಾನ್ಯವಾಗಿ ವಿದ್ವತ್ಪಕ್ಷಪಾತಿಗಳೂ ಕಲಾಪ್ರೋತ್ಸಾಹಿಗಳೂ ಆಗಿದ್ದವರೇ. ಅವರಲ್ಲಿ ಹಲವರು ಸ್ವತಃ ವಿದ್ವಾಂಸರೂ ಕಲಾವಿದರೂ ವಾಗ್ಗೇಯಕಾರರೂ ಆಗಿದ್ದರು. ವೀಣೆಶೇಷಣ್ಣನವರೇ ಮೊದಲಾದ ಹಲವು ಕಲಾರತ್ನಗಳನ್ನು ಗುರುತಿಸಿ ಬೆಳೆಸಿದ ಮುಮ್ಮಡಿ ಕೃಷ್ಣರಾಜವೊಡೆಯರು ಸ್ವತಃ ವಿದ್ವಾಂಸರೂ ವಾಗ್ಗೇಯಕಾರರೂ ಆಗಿದ್ದರು. ಶ್ರೀತತ್ತ್ವನಿಧಿಯೇ ಮೊದಲಾದ ವಿದ್ವತ್ಪೂರ್ಣಕೃತಿಗಳಲ್ಲದೇ ‘ಚಾಮುಂಡೇಶ್ವರಿ’ ಅಂಕಿತದಲ್ಲಿ ಹಲವು ಜಾವಳಿಗಳನ್ನೂ ರಚಿಸಿದ ಕೀರ್ತಿ ಇವರದು.

ಇನ್ನು ಇದೇ ಸರಣಿಯಲ್ಲಿ ಎದ್ದುಕಾಣುವ ಹೆಸರು ಮೈಸೂರು ಸಂಸ್ಥಾನದ ಕೊನೆಯ ದೊರೆ -ವಾಗ್ಗೇಯಕಾರ ಜಯಚಾಮರಾಜೇಂದ್ರ ಒಡೆಯರು. ಶ್ರೀವಿದ್ಯೋಪಾಸಕರೂ ವಿದ್ವಾಂಸರೂ ಆಗಿದ್ದ ಒಡೆಯರು ಶ್ರೀವಿದ್ಯಾ ಎಂಬ ಅಂಕಿತದಲ್ಲಿ ನೂರರ ಹತ್ತಿರಹತ್ತಿರ ಕೃತಿಗಳನ್ನು ರಚಿಸಿದ್ದಾರೆ. ಅಪರೂಪದ ರಾಗ, ರಂಜನೀಯ ಸ್ವರಸಂದರ್ಭಗಳು ಮತ್ತು ಬಿಗಿಯಾದ, ಆಳವಾದ ಸಾಹಿತ್ಯಕದೇಹದೊಂದಿಗೆ ಒಡೆಯರ ಕೃತಿಗಳು ಕರ್ಣಾಟಕಸಂಗೀತ ವಾಙ್ಮಯದಲ್ಲಿ ರತ್ನಪ್ರಾಯವಾಗಿವೆ. ಕೃತಿಗಳಲ್ಲಿ ಶ್ರೀಮಂತವಾಗಿ ಒಡಮೂಡುವ ತಾಂತ್ರಿಕ ವಿವರಗಳಲ್ಲಿ, ಸಾಲುಗಳ ವಿನ್ಯಾಸದಲ್ಲಿ, ಅರ್ಥಖಂಡದಲ್ಲಿಯೇ ಸೊಗಸಾಗಿ ಹುದುಗಿ ಬರುವ ರಾಗಮುದ್ರೆಯಲ್ಲಿ ದೀಕ್ಷಿತರ ಪ್ರಭಾವವನ್ನೂ ಕಾಣಬಹುದು.

ಇದರ ಹಿಂದೆಯೇ ನೆನಪಾಗುವ ಮತ್ತೊಂದು ಹೆಸರು, ‘ಹರಿಕೇಶ’ ಎಂಬ ಅಂಕಿತದಲ್ಲಿ ವರ್ಣ, ತಿಲ್ಲಾನಗಳೇ ಮೊದಲಾಗಿ ಸುಮಾರು ನಾನೂರಕ್ಕೂ ಹೆಚ್ಚು ಸಂಗೀತಕೃತಿಗಳನ್ನು ರಚಿಸಿದ ಆಸ್ಥಾನವಿದ್ವಾನ್ ಹರಿಗೇಶನಲ್ಲೂರ್ ಮುತ್ತಯ್ಯ ಭಾಗವತರು. ಸಂಸ್ಕೃತ, ತೆಲುಗು, ತಮಿಳು ಕನ್ನಡ ಭಾಷೆಗಳಲ್ಲಿ ಕೃತಿರಚನೆಯನ್ನು ಮಾಡಿರುವ ಇವರು ಮೂಲತಃ ತಮಿಳರು. ಇವರ ವಿಶೇಷವೆಂದರೆ, ಸಂಗೀತಕೃತಿಗಳನ್ನು ಸಂಸ್ಕೃತ ಅಥವಾ ತೆಲುಗಿನಲ್ಲಿ ರಚಿಸುವುದು ಸಂಪ್ರದಾಯವೇ ಆಗಿದ್ದ ಕಾಲಕ್ಕೆ, ಮೈಸೂರು ವಾಸುದೇವಾಚಾರ್ಯರಂತಹ ಈ ನೆಲದ ವಿದ್ವಾಂಸರೂ ಈ ಸಂಪ್ರದಾಯವನ್ನು ಮುರಿಯಲು ಹಿಂದೇಟುಹಾಕಿದ್ದ ಕಾಲದಲ್ಲಿ, ತಮಿಳರಾದ ಭಾಗವತರು ಕನ್ನಡದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದು. ಇವರ ಅನೇಕ ಕನ್ನಡಕೃತಿಗಳ ಸಾಹಿತ್ಯಕರ್ತೃ ಇನ್ನೊಬ್ಬ ಆಸ್ಥಾನವಿದ್ವಾಂಸರಾದ ದೇವೋತ್ತಮಶಾಸ್ತ್ರಿಗಳೆಂದೂ, ಭಾಗವತರು ಅದಕ್ಕೆ ಸಂಗೀತಸಂಯೋಜನೆಯನ್ನು ಮಾತ್ರ ಮಾಡಿದರೆಂದೂ ಹೇಳಲಾಗುತ್ತದೆ, ಅದೇನೇ ಇರಲಿ, ಅಪರೂಪದ ರಾಗ, ರಂಜನೀಯ ಸ್ವರಸಂದರ್ಭ ಮತ್ತು ಲಲಿತವಾದ, ಲಾಸ್ಯಪೂರ್ಣವಾದ ಸಾಹಿತ್ಯ ಇವರ ಬಹುತೇಕ ಕೃತಿಗಳ ಮುಖ್ಯಲಕ್ಷಣವಾಗಿದೆ. ಜೊತೆಗೆ ಆ ಕಾಲದ ಸಂಗೀತಕೃತಿಗಳಲ್ಲಿ ಅಪರೂಪವಾಗಿದ್ದ ಕನ್ನಡದ ಕಂಪೂ ಸೇರಿ ಈ ಕೃತಿಗಳು ಆಪ್ತವೆನ್ನಿಸುತ್ತವೆ. ಇವುಗಳಲ್ಲಿ ಮೈಸೂರಿನ ಚಾಮುಂಡೇಶ್ವರಿಯನ್ನೇ ಕುರಿತ 108 ಕೃತಿಗಳು ಚಾಮುಂಡಾಂಬಾ ಅಷ್ಟೋತ್ತರಕೃತಿಗಳೆಂದೇ ಪ್ರಸಿದ್ಧವಾಗಿವೆ. ಸಂಪತ್ಪ್ರದೇ ಶ್ರೀ ಚಾಮುಂಡೇಶ್ವರಿ (ಕಲ್ಯಾಣಿ), ಭುವನೇಶ್ವರಿಯ ನೆನೆ ಮಾನಸವೇ (ಮೋಹನಕಲ್ಯಾಣಿ), ರತ್ನಕಂಚುಕಧಾರಿಣಿ (ಕಾಂಬೋಧಿ), ವಿಜಯಾಂಬಿಕೇ ವಿಮಲಾತ್ಮಿಕೇ (ವಿಜಯನಾಗರಿ), ಜಾಲಂಧರಸುಪೀಠಸ್ಥೇ (ವಲಚಿ), ಭೈರವೀ ಪರಮೇಶ್ವರೀ (ಭೈರವಿ), ಸುಧಾಮಯೀ ಸುಧಾನಿಧೀ (ಅಮೃತವರ್ಷಿಣಿ) – ಇವು ಭಾಗವತರ ಪ್ರಸಿದ್ಧ ದೇವೀಕೃತಿಗಳು. ಮಾತೇ ಮಲಯಧ್ವಜಪಾಂಡ್ಯಸಂಜಾತೆ ಎಂಬುದು ಭಾಗವತರ ಸುಪ್ರಸಿದ್ಧ ದರುವರ್ಣ.

ಇವರಲ್ಲದೇ ಮೈಸೂರು ಸಂಗೀತದ ಆಢ್ಯರಾದ ಮೈಸೂರು ವಾಸುದೇವಾಚಾರ್ಯರು, ಪಿಟೀಲು ಚೌಡಯ್ಯನವರು, ಬಿಡಾರಂ ಕೃಷ್ಣಪ್ಪನವರೇ ಮೊದಲಾದ ಹಲವು ವಾಗ್ಗೇಯಕಾರರು ಚಾಮುಂಡಿಯನ್ನು ಕುರಿತ ಕೃತಿಗಳನ್ನು ರಚಿಸಿದ್ದಾರೆ. ರಾಜಪ್ರೀತಿಯೋ ಆತ್ಮಸಂತೋಷವೋ ಪ್ರಜಾರಂಜನೆಯೋ – ಒಟ್ಟಿನಲ್ಲಿ ಚಾಮುಂಡಿಯು ಮೈಸೂರಿನ ಕಲಾಪ್ರಪಂಚವನ್ನು ಬಹುಕಾಲ ಪೊರೆದಿದ್ದಾಳೆಂದರೆ ಅತಿಶಯೋಕ್ತಿಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.