ಸೋಮವಾರ, 8 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀಳಗಿ | 35 ವರ್ಷದಿಂದ ರೇಷ್ಮೆ ಕೃಷಿಯಲ್ಲಿ ಯಶಸ್ಸು ಕಂಡಿರುವ ರೈತ: ಉತ್ತಮ ಆದಾಯ

ಸಮಗ್ರ ಕೃಷಿ
ಕಾಶಿನಾಥ ಸೋಮನಕಟ್ಟಿ
Published 5 ಜುಲೈ 2024, 4:48 IST
Last Updated 5 ಜುಲೈ 2024, 4:48 IST
ಅಕ್ಷರ ಗಾತ್ರ

ಬೀಳಗಿ: ವ್ಯವಸಾಯದಿಂದಲೇ ಬದುಕು ಕಟ್ಟಿಕೊಂಡು ಪ್ರಗತಿಪರ ರೈತರಾಗಿ ಗುರುತಿಸಿಕೊಂಡಿದ್ದಾರೆ ಬೀಳಗಿ ತಾಲ್ಲೂಕಿನ ನಾಗರಾಳ ಗ್ರಾಮದ ರೈತ ಹನಮಂತ ಕರಿಗಾರ. 

ಸಮಗ್ರ ಕೃಷಿ ಪದ್ಧತಿ, ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿರುವ ಅವರು 12 ಎಕರೆ ಪಿತ್ರಾರ್ಜಿತ ಜಮೀನನ್ನು ಮಿಶ್ರ ಕೃಷಿ ಮಾಡಿ ಲಾಭ ಗಳಿಸಿದ್ದಾರೆ.

ತಮ್ಮ ಜಮೀನಿನಲ್ಲಿ ಲಭ್ಯವಿರುವ ನೀರಾವರಿ ಸೌಲಭ್ಯ ಬಳಸಿಕೊಂಡು ಮುಖ್ಯ ಬೆಳೆಗಳ ಜತೆಗೆ ತರಕಾರಿ ಬೆಳೆಯುತ್ತಿದ್ದು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಟೊಮೆಟೊ, ಹೀರೇಕಾಯಿ, ಬೆಂಡೆಕಾಯಿ, ಮೆಣಸಿನಕಾಯಿ , ಬೀಟ್ ರೂಟ್, ಚವಳೆಕಾಯಿ, ನುಗ್ಗೆಕಾಯಿ ಹಾಗೂ  ಮೆಂತೆ, ಸಬ್ಬಸಗಿ, ರಾಜಗಿರಿ, ಪುಂಡಿಪಲ್ಯ ಸೇರಿದಂತೆ ಹಲವು ತರಕಾರಿ ಬೆಳೆ ಬೆಳೆಯುತ್ತಿದ್ದಾರೆ.

ನೂರಕ್ಕೂ ಹೆಚ್ಚು ತೆಂಗು, ಮಾವು, ಸೀತಾಫಲ, ಬಾಳೆ, ಪೇರಲ,ಚಿಕ್ಕು ಮರಗಳನ್ನು ಹೊಂದಿದ್ದಾರೆ. ಟ್ರ್ಯಾಕ್ಟರ್ ಸೇರಿದಂತೆ ಆಧುನಿಕ ಕೃಷಿ ಉಪಕರಣ ಬಳಸಿ ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ.

ನಾಟಿಹಸು ಗೊಬ್ಬರ , ಗಂಜಲ, ಬೇವಿನ ಎಣ್ಣೆ ಸೇರಿಸಿ ಔಷಧಿ ತಯಾರಿಸಿ ಸಿಂಪಡಿಸಿ ಕೀಟ, ರೋಗ ನಿಯಂತ್ರಿಸುತ್ತಿದ್ದಾರೆ. ಎರೆಹುಳು, ಗೊಬ್ಬರ ಘಟಕವನ್ನು ಹೊಂದಿದ್ದಾರೆ.

ರೈತ ಹನುಮಂತ ಅವರಿಗೆ ಪತ್ನಿಯರಾದ ಶಿವಲಿಂಗವ್ವ, ಯಮನವ್ವ ಸಹೋದರರಾದ ಮಲ್ಲಪ್ಪ,ಲಕ್ಷ್ಮಣ, ಮಗ ರಾಯಪ್ಪ ಕೃಷಿ ಚಟುವಟಿಕೆಗೆ ಸಾಥ್ ನೀಡುತ್ತಿದ್ದಾರೆ.

ತಾವು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಬೀಳಗಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಮತ್ತು ಮನೆಯಲ್ಲೂ ಮಾರಾಟ ಮಾಡುತ್ತಾರೆ. ಕೃಷಿ ಜೊತೆಗೆ ಕೋಳಿ ಸಾಕಾಣಿಕೆ, ಹೈನುಗಾರಿಕೆಯಲ್ಲೂ  ಯಶಸ್ಸು ಕಂಡಿರುವ ಇವರು ವಾರ್ಷಿಕ ₹5ರಿಂದ ₹6 ಲಕ್ಷ ಆದಾಯ ಗಳಿಸುತ್ತಿದ್ದಾರೆ.

20ಕ್ಕೂ ಹೆಚ್ಚು ನಾಟಿಹಸು ಹಾಗೂ ಎಮ್ಮೆ ಸಾಕಾಣಿಕೆ ಮಾಡುತ್ತಿರುವ ಇವರು ನಿತ್ಯ 30 ರಿಂದ 40 ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಹಸುಗಳಿಗೆ ಬೇಕಾದ ಸೀಮೆ ಹುಲ್ಲು ಹಾಗೂ ಮೆಕ್ಕೆಜೋಳ ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ.

ಸಾವಯವ ಬೆಲ್ಲ,ರಾಗಿ, ನೆವಣಿ, ಬಾರ್ಲಿ, ಉದು, ಅರಿಸಿನದ ಜೊತೆಗೆ 35 ವರ್ಷಗಳಿಂದ ರೇಷ್ಮೆ ಬೆಳೆ ಬೆಳೆಯುತ್ತಿರುವುದು ಇವರ ವಿಶೇಷ.

‘ತರಕಾರಿ ಕೃಷಿಯಲ್ಲಿ ಒಮ್ಮೊಮ್ಮೆ ಸಾಕಷ್ಟು ನಷ್ಟ ಅನುಭವಿಸಿದ್ದು ಇದೆ. ಆದರೆ ನಿರಂತರವಾದ ಬೆಳೆ ಇರುವ ಹಿನ್ನೆಲೆಯಲ್ಲಿ ಲಾಭ ಹಾಗೂ ನಷ್ಟವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಿರುವೆ’ ಎನ್ನುತ್ತಾರೆ ರೈತ ಹನುಮಂತ.

ತಾಲ್ಲೂಕು, ಜಿಲ್ಲಾಮಟ್ಟದ ಪ್ರಶಸ್ತಿ ಹಾಗೂ ಕೃಷಿ ಋಷಿ, ಆತ್ಮಶ್ರೇಷ್ಠ ಕೃಷಿಕ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ದೊರೆಕಿವೆ.

ನಾನು ಮತ್ತು ನನ್ನ ಕುಟುಂಬ ಭೂಮಿ ತಾಯಿ ನಂಬಿ ಜೀವನ ಸಾಗಿಸುತ್ತಿದ್ದೇವೆ. ಕೃಷಿ ಹಾಗೂ ಹೈನುಗಾರಿಕೆಯಿಂದ ಉತ್ತಮ ಆದಾಯವಿದೆ
-ಹನಮಂತಪ್ಪ ಕರಿಗಾರ, ರೈತನಾಗರಾಳ
ರೈತ ಹನಮಂತ ಕರಿಗಾರ ಹಾಗೆಯೇ ರೈತರೆಲ್ಲರೂ ಸಾವಯವ ಕೃಷಿ ಪದ್ದತಿ ಅನುಸರಿಸಿದರೆ ವಿಷಮುಕ್ತ ಆಹಾರ ಸೇವಿಸುವುದರ ಜೊತೆಗೆ ಕೃಷಿ ಆದಾಯ ಹೆಚ್ಚಿಸಿಕೊಳ್ಳಬಹುದು
-ಸತೀಶ ಮಾವಿನಕೊಪ್ಪ, ಸಹಾಯಕ ಕೃಷಿ ನಿರ್ದೇಶಕ ಬೀಳಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT