ಸೋಮವಾರ, 8 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುನಗುಂದ | ಹೆಸರು ಬೆಳೆಗೆ ಹಳದಿ ರೋಗ: ರೈತರಿಗೆ ಆತಂಕ

'ಮೂಂಗಬಿಂಗ್ ಯೆಲ್ಲೊ ಮೊಜೈಕ್ ವೈರಸ್‌'ನಿಂದ ಹರಡುವಿಕೆ
Published 5 ಜುಲೈ 2024, 4:56 IST
Last Updated 5 ಜುಲೈ 2024, 4:56 IST
ಅಕ್ಷರ ಗಾತ್ರ

ಹುನಗುಂದ: ಹವಾಮಾನ ವೈಪರಿತ್ಯದಿಂದ ಮುಂಗಾರು ಹಂಗಾಮಿನ ಪ್ರಮುಖ ಬೆಳೆ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ತಾಲ್ಲೂಕಿನ ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ.

ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ತತ್ತರಿಸಿದ್ದ ರೈತರು ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆಯ ಜೊತೆಗೆ ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ತಾಲ್ಲೂಕಿನ ಹೆಚ್ಚಿನ ಪ್ರದೇಶದಲ್ಲಿ ರೈತರು ಖುಷಿಯಿಂದ ಹೆಸರು ಬಿತ್ತನೆ ಮಾಡಿದ್ದರು.

ಆರಂಭದಲ್ಲಿ ಉತ್ತಮ ಮಳೆ ಜೊತಗೆ ಪೂರಕ ವಾತಾವರಣದಿಂದ ಸಮೃದ್ಧವಾಗಿ ಬೆಳೆದಿದ್ದ ಹೆಸರು ಬೆಳೆಗೆ ಹೂವು ಮತ್ತು ಕಾಯಿ ಬಿಡುವ ಹಂತದಲ್ಲಿ ಹಳದಿ ರೋಗ ತಗುಲಿದ್ದು, ಬೆಳೆಯ ಬೆಳವಣಿಗೆ ಜೊತೆಗೆ ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ರೈತ ಸಮುದಾಯಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಎರೆ ಮಣ್ಣಿನ ಪ್ರದೇಶ ಹೊಂದಿದ್ದು, ಎರೆ ಮಣ್ಣಿನಲ್ಲಿ ಬೆಳೆದ ಹೆಸರು ಬೆಳೆಗೆ ಹಳದಿ ರೋಗ ಬಾಧಗೆ ತುತ್ತಾಗಿದೆ.

ಪಟ್ಟಣವು ಸೇರಿದಂತೆ ತಾಲ್ಲೂಕಿನ ಧನ್ನೂರು, ನಾಗೂರು, ಯಡಹಳ್ಳಿ, ಚಿತ್ತವಾಡಗಿ ಬನ್ನಹಟ್ಟಿ, ಹೊನ್ನರಹಳ್ಳಿ, ಬೇವಿನಮಟ್ಟಿ, ಹಿರೇಬಾದವಾಡಗಿ, ಚಿಕ್ಕಬಾದವಾಡಗಿ, ವೀರಾಪೂರ ಸೇರಿದಂತೆ ಇತರ ಪ್ರದೇಶಗಳಲ್ಲಿನ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ.

ಔಷಧಿ ಸಿಂಪಡನೆ ಮಾಡಿದರೂ ಹಳದಿ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಹೆಸರು ಬೆಳೆಗೆ ಹಾಕಿದ ಬಂಡವಾಳ ವಾಪಸ್ ಬರುವುದು ಇಲ್ಲವೊ ಎನ್ನುವ ಚಿಂತಿ ಕಾಡುತ್ತಿದೆ ಎಂದು ಹೊನ್ನರಹಳ್ಳಿ ಗ್ರಾಮದ ರೈತ ಮಲ್ಲಪ್ಪ ಹುಬ್ಬಳ್ಳಿ ಅಳಲು ತೋಡಿಕೊಂಡರು.

ಹಳದಿ ರೋಗಕ್ಕೆ ಹುಳು-ಕೀಟ ವೈಟ್ ಪ್ಲೇ (ಬಿಳಿನೊಣ) ಕಾರಣವಾಗಿದ್ದು, ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹೋಗಿ ರಸ ಹೀರುವುದರಿಂದ ಈ ವೈರಾಣು ಗಿಡದಿಂದ ಗಿಡಕ್ಕೆ ಹರಡುತ್ತದೆ. ರೋಗಬಾಧೆಗೆ ತುತ್ತಾದ ಗಿಡದ ಎಲೆಗಳು ಮತ್ತು ಭಾಗವನ್ನು ಕತ್ತರಿಸಿ ಮಣ್ಣಿನಲ್ಲಿ ಹೂತು ಹಾಕಬೇಕು. ಆಗ ಕೀಟ ನಿಯಂತ್ರಣ ಸಾಧ್ಯ ಎನ್ನುತ್ತಾರೆ ಹುನಗುಂದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಅಂಟರಠಾಣ.

ಇಳುವರಿ ಕುಂಠಿತವಾಗುವ ಭೀತಿ

ರಾಂಪುರ: ನಿಗದಿತ ಸಮಯಕ್ಕೆ ಮುಂಗಾರು ಮಳೆ ಸುರಿದಿದ್ದರಿಂದ ಬಾಗಲಕೋಟೆ ತಾಲ್ಲೂಕಿನಲ್ಲಿ ಅಂದಾಜು 3 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈ ಬಾರಿ ಹೆಸರು ಬಿತ್ತನೆಯಾಗಿದೆ. ಬೆಳೆ ಉತ್ತಮವಾಗಿ ಬಂದಿದ್ದರೂ ಪೂರ್ತಿ ಬೆಳೆಗೆ ತಗುಲಿರುವ ಹಳದಿ ರೋಗ ರೈತರಲ್ಲಿ ಆತಂಕ ಸೃಷ್ಟಿಸಿದೆ. ಅಂದುಕೊಂಡಷ್ಟು ಇಳುವರಿ ಬಾರದ ಸ್ಥಿತಿ ಉಂಟಾಗಿದೆ.

ವಾರದ ಹಿಂದೆ ಆರಂಭವಾದ ರೋಗಬಾಧೆ ಈಗ ಹೊಲದ ತುಂಬೆಲ್ಲಾ ವ್ಯಾಪಿಸಿದ್ದರಿಂದ ನಿಯಂತ್ರಣ ಅಸಾಧ್ಯವಾಗಿದೆ. ಗಿಡಗಳು ಹಳದಿಯಾಗುವುದು ರೋಗವೆನಿಸಿದರೂ ಇದು ವೈರಸ್ ನಿಂದ ಹರಡುತ್ತದೆ ಎಂದು ತಜ್ಞರು ಹೇಳುತ್ತಾರೆ.

'ಮೂಂಗಬಿಂಗ್ ಯಲೋ ಮೊಜೈಕ್ ವೈರಸ್' ನಿಂದ ಹರಡುವ ರೋಗ ದಿನದಿನಕ್ಕೆ ಅಧಿಕವಾಗುತ್ತಿದೆ.  ಕಾಯಿ ಕಟ್ಟುವುದಕ್ಕೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನಲಾಗಿದ್ದು, ಬೆಳೆಯ ನಿರೀಕ್ಷೆ ಹುಸಿಯಾಗುವ ಲಕ್ಷಣಗಳು ಕಾಣುತ್ತಿವೆ.

‘ಹೆಸರು ಬೆಳೆಯಲ್ಲಿ ಕಾಣಿಸಿಕೊಳ್ಳುವ ಹಳದಿ ಬಣ್ಣದ ರೋಗ ವೈರಸ್ ನಿಂದ ಹರಡುತ್ತಿದ್ದು, ಹಳದಿ ಬಣ್ಣಕ್ಕೆ ಬಂದಿರುವ ಗಿಡಗಳನ್ನು ಬುಡಸಮೇತ ಕಿತ್ತು ದೂರದ ಸ್ಥಳದಲ್ಲಿ ಸುಡಬೇಕು. ಅದರಿಂದ ಹತೋಟಿ ಸಾಧ್ಯ’
ಎಂದು ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ಶಾಸ್ತ್ರಜ್ಞೆ ಸುಧಾ ಎಸ್ ಸಲಹೆ ನೀಡಿದ್ದಾರೆ.

‘ಹಳದಿ ರೋಗದ ಹತೋಟಿಗೆ ಪ್ರತಿ ಲೀಟರ್ ನೀರಿಗೆ 0.3 ಗ್ರಾಂ ಫೈಯಾಮಿಥಾಕ್ಸಾಮ್ 25 ಡಬ್ಲ್ಯೂ.ಜಿ. ಅಥವಾ 0.3 ಎಮ್.ಎಲ್. ಇಮಿಡಾಕ್ಲೋಪೀಡ 17.8 ಎಸ್.ಎಲ್. ಅಥವಾ 0.3 ಗ್ರಾಂ ಡಯಾಫೆಂತುರಾನ್ 50 ಡಬ್ಲ್ಯೂ ಪಿ. ರಂತೆ ದ್ರಾವಣವನ್ನು ಸಿದ್ಧಪಡಿಸಿ ಸಿಂಪಡಿಸಬೇಕು’ ಎಂದು ಬಾಗಲಕೋಟೆ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಕೆ. ತಿಳಿಸಿದ್ದಾರೆ.

-ಪ್ರಕಾಶ ಬಾಳಕ್ಕನವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT