ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮಖಂಡಿ: ಸಾವಿರಕೊಳ್ಳದ ಸರದಾರ ಕಾಶಿಲಿಂಗ

Published 21 ಜುಲೈ 2024, 2:55 IST
Last Updated 21 ಜುಲೈ 2024, 2:55 IST
ಅಕ್ಷರ ಗಾತ್ರ

ಜಮಖಂಡಿ: ಸಾವಿರ ಕೊಳ್ಳದ ಸರದಾರ, ಕೈಲಾಸದಿಂದ ಬಂದು ನೆಲೆಸಿರುವ ತಾಲ್ಲೂಕಿನ ಕಾಜಿಬೀಳಗಿ ಗ್ರಾಮದ ಭಕ್ತರ ಪಾಲಿನ ಆರಾಧ್ಯದೈವ ಕಾಶಿಲಿಂಗ.

ಕೈಲಾಸದಲ್ಲಿದ್ದ 1700 ಲಿಂಗಗಳನ್ನು ಪಾರ್ವತಿ, ಪರಮಾತ್ಮ ಸೇವೆ ಮಾಡುತ್ತಿದ್ದರು. ಪಾಂಡವರ ಕುಂತಿದೇವಿ 12 ವರ್ಷ ಪರಮಾತ್ಮನ ಸೇವೆ ಮಾಡಿದ್ದನ್ನು ಮೆಚ್ಚಿ ಬೇಡಿದ ವರನೀಡುವೆ ಎಂದಾಗ ಕುಂತಿದೇವಿ ಕಾಶಿಲಿಂಗವನ್ನು ಬೇಡಿದಳು. ಲಿಂಗ ಬೇಡ, 12 ವರ್ಷ ಮೇಲ್ಪಟ್ಟು ಒಬ್ಬರ ಕಡೆ ಇರುವುದಿಲ್ಲ ಎಂದರೂ ಹಟ ಮಾಡಿ ಕಾಶಿಲಿಂಗವನ್ನು ತೆಗೆದುಕೊಂಡು ಭೂಲೋಕಕ್ಕೆ ಬಂದಳು.

ಪಾಂಡವರ ಮನೆಯಲ್ಲಿ 12 ವರ್ಷ ಸೇವೆ ಮಾಡಿಸಿಕೊಂಡ ನಂತರ ಪಾಂಡವರು ಚಿಕ್ಕಗಲಗಲಿಯ ನದಿಯಲ್ಲಿ ಬಿಟ್ಟು ಹೋದರು. ಅಲ್ಲಿ ದೇವಲೋಕ ಜಕನ್ಯಾರ ಕೈಯಲ್ಲಿ 12 ಸೇವೆ ಮಾಡಿಸಿಕೊಂಡ ನಂತರ ಕಲಾದಿಕೊಪ್ಪದ ಮುದ್ದವ್ವ ಅವಳ ಸಹೋದರ ಕೆಂಚಪ್ಪನ ಕನಸಿನಲ್ಲಿ ಬಂದು ಸೇವೆ ಮಾಡಿ ವರವಾಗುತ್ತೇನೆ ಎಂದಾಗ ನದಿಯ ತಟದಲ್ಲಿ ನಿಂತಾಗ ಮುದ್ದವ್ವನ ಉಡಿಯಲ್ಲಿ ಬಂದು ಲಿಂಗ ಕುಳಿತಿದೆ ಎಂಬ ಪ್ರತೀತಿ ಇದೆ.

ಮುದ್ದವ್ವನಿಗೆ ಸಾವಿರ ಹಳ್ಳಗಳನ್ನು ಉಡಿಯಲ್ಲಿ ಹಾಕಿಕೊಂಡು ಒಂದೊಂದಾಗಿ ಒಗೆಯುತ್ತ ಹೋಗಿ ಕೊನೆಯ ಹಳ್ಳ ಬಂದಲ್ಲಿ ಸಾವಿರಕೊಳ್ಳ ಎಂದು ಹೆಸರಿಡಬೇಕು ಎಂದಾಗ, ಆ ಪ್ರಕಾರ ಮುದ್ದವ್ವ ಒಂದೊಂದಾಗಿ ಒಗೆಯುತ್ತ ಖಾಜಿಬೀಳಗಿಯಲ್ಲಿ ಕೊನೆಯ ಹಳ್ಳವನ್ನು ಒಗೆದಳು. ಆಗ ಮುದ್ದವ್ವನ ಸಹೋದರ ಕೆಂಚಪ್ಪನಿಗೆ ಹಾವು ಕಡಿದು ಮೃತಪಟ್ಟ. ಆ ಸುದ್ದಿಯನ್ನು ಮುದ್ದವ್ವನಿಗೆ ಹೇಳಿದಾಗ ಆಕೆ ಲಿಂಗವನ್ನು ಬಿಟ್ಟು ಅಂತ್ಯ ಸಂಸ್ಕಾರಕ್ಕೆ ಹೋದಳು. ಅವಳ ಕನಸಿನಲ್ಲಿ ಬಂದು ನಿಮ್ಮ ತಮ್ಮನನ್ನು ಹಾವಾಗಿ ಕೊಂದಿದ್ದೇನೆ ಎಂದಾಗ ಮುದ್ದವ್ವ ಅಳತೊಡಗಿದಳು. ನಿನಗೆ ಸಾಕಿದ ಮಗನನ್ನು ಕೊಡುತ್ತೇನೆ ವಿಜಯಪುರಕ್ಕೆ ಹೋಗು. ನನಗೆ ವರ್ಷದಲ್ಲಿ ಮೂರು ಬಾರಿ ಹೂ ತಂದು ಕೊಡು ಎಂದು ವರ ನೀಡಿದ. ಇಂದಿಗೂ ಆ ಮನೆತನದ ಹೂ ಬರುತ್ತವೆ.

ಕುರಿಕಾಯುವ ಸುರಮುತ್ಯಾನಿಗೆ ಲಿಂಗ ಸೇವೆ ಮಾಡು ಎಂದಾಗ ನೀನು 12 ವರ್ಷಗಳಿಗೊಮ್ಮೆ ಬೇರೆ ಕಡೆ ಹೋಗುವವನು. ವಂಶಪಾರಂಪರ್ಯವಾಗಿ ಇಲ್ಲಿಯೇ ನೆಲೆಸುವುದಾದರೆ ಸೇವೆ ಮಾಡುತ್ತೇನೆ ಎಂದಾಗ ಕಾಶಿಲಿಂಗ ಮಾತು ಕೊಟ್ಟು ಸಾವಿರಕೊಳ್ಳದಲ್ಲಿಯೇ ನೆಲೆಸಿತು.

‘ನನ್ನನ್ನು ಕರೆದುಕೊಂಡು ಆರಿವಡಿ ಗ್ರಾಮವನ್ನು ಬಿಟ್ಟು ನಾಡಿನಾದ್ಯಂತ ಸಂಚರಿಸು’ ಎಂದು ಸುರಮುತ್ಯಾನಿಗೆ ಹೇಳಿದಾಗ, ಸುರಮುತ್ಯಾ ಲಿಂಗದ ಮಾತು ಕೇಳದೆ ಆರಿವಡಿಗೆ ಹೋದನು. ಆಗ ಸುರಮುತ್ಯಾನ ಮೋಸ ಮಾಡಲು ಆಲಗ ಹಾಯಲು ತಯಾರಿ ಮಾಡಿದರು. ಅಲ್ಲಿ ಸುರಮುತ್ಯಾನಿಗೆ ವಿಷ ಹತ್ತಿ ನರಳಾಟ ನಡೆಸಿದ, ಆಗ ಪ್ರಾಣ ಬಿಡದೇ ಒದ್ದಾಡುವಾಗ ಲಿಂಗ ನೀನು ಪ್ರಾಣಬಿಡು ನಾನು ಸಾವಿರಕೊಳ್ಳಕ್ಕೆ ಹೋಗುತ್ತೇನೆ ಎಂದಾಗ ಪ್ರಾಣಬಿಟ್ಟನು.

‘ಆರಿವಡಿಯಲ್ಲಿ ಉಳಿದಿದ್ದ ಲಿಂಗ ಕಾಜಿಬೀಳಗಿಗೆ ಬರಲು ಹೋಳಿ ಹುಣ್ಣಿಮೆ ದಿನ ಬಂದು ಕರೆದುಕೊಂಡು ಹೋಗುವಂತೆ ಗ್ರಾಮಸ್ಥರ ಕನಸಿನಲ್ಲಿ ಬಂದು ಹೇಳಿದಂತೆ ಗ್ರಾಮದ ಜನರು ಹೋಗಿ ದೇವಸ್ಥಾನದ ಹಿಂದೆ ನಿಂತಾಗ ಪೆಟ್ಟಿಗೆಯಿಂದ ಲಿಂಗ ಬಂದು ಉಡಿಯಲ್ಲಿ ಕುಳಿತಿತು. ಲಿಂಗವನ್ನು ತೆಗೆದುಕೊಂಡು ಹೋಗುವ ವಿಷಯ ಗ್ರಾಮಸ್ಥರಿಗೆ ಗೊತ್ತಾಗಿ ಬೆನ್ನು ಹತ್ತಿದರು. ಒಬ್ಬನ ಸಹಾಯದಿಂದ ಬೆನ್ನುಹತ್ತಿದವರ ಕಣ್ಣಿಗೆ ಕಾಣದಂತೆ ಲಿಂಗವನ್ನು ತಂದು ಪ್ರತಿಷ್ಠಾಪನೆ ಮಾಡಿದ್ದಾರೆ’ ಎಂದು ಸುರಮುತ್ಯಾನ ಮೊಮ್ಮಗ ಶ್ರೀಕಾಂತ ಪೂಜಾರಿ ವಿವರಿಸಿದರು.

‘ದೇವಸ್ಥಾನದ ಕೆಳಗೆ ಕೊಳ್ಳ ಇದ್ದು ಅಲ್ಲಿಯ ನೀರನ್ನೇ ಪೂಜೆಗೆ ಬಳಸುತ್ತಾರೆ. ಭಕ್ತರು ದೇವರಿಗೆ ಬೇಡಿಕೊಂಡು ಎರಡು ಕೊಡ ನೀರು ಮೈಮೇಲೆ ಹಾಕಿಕೊಂಡರೆ ರೋಗಗಳು ವಾಸಿಯಾಗುತ್ತವೆ. ಇಂದಿನವರೆಗೂ ನಡೆದುಕೊಂಡು ಬಂದಿದೆ’ ಎನ್ನುತ್ತಾರೆ ಕಾಶಿಲಿಂಗ ಜಗದಾಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT