ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗದ ಬೀದಿ ದೀಪ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪಾದಚಾರಿಗಳು, ಬೈಕ್ ಸವಾರರ ಆಕ್ರೋಶ

Published : 7 ಅಕ್ಟೋಬರ್ 2024, 7:24 IST
Last Updated : 7 ಅಕ್ಟೋಬರ್ 2024, 7:24 IST
ಫಾಲೋ ಮಾಡಿ
Comments

ಹುನಗುಂದ: ಪಟ್ಟಣದ ಮಧ್ಯದಲ್ಲಿ ಹಾದು ಹೋಗಿರುವ ರಾಯಚೂರು–ಬೆಳಗಾವಿ ರಾಜ್ಯ ಹೆದ್ದಾರಿಯ ವಿಭಜಕದಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳಲ್ಲಿ ದೀಪಗಳು ಬೆಳಗದಿರುವುದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಜೀವಭಯದಲ್ಲಿ ಸಂಚರಿಸುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿಯಿಂದ ಪಟ್ಟಣಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಿಂದ ಆರಂಭಗೊಂಡು ಕನಕದಾಸ ವೃತ್ತದವರೆಗೆ ಹಾಗೂ ವಿಜಯ ಮಹಾಂತೇಶ ವೃತ್ತದ ಮುಂಭಾಗದಿಂದ ನ್ಯಾಯಾಲಯದ ಎದುರು ಸೇರಿದಂತೆ ಪಟ್ಟಣ ಕೊನೆಗೊಳ್ಳುವವರೆಗೂ ದೀಪಗಳು ಬೆಳಗುತ್ತಿಲ್ಲ.

ರಾಜ್ಯಹೆದ್ದಾರಿ ಉದ್ದಕ್ಕೂ ವಿಭಜಕದಲ್ಲಿ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿದ್ದು, ಅವುಗಳಿಗೆ ಜೋಡಿ ಬಲ್ಬ್ ಅಳವಡಿಸಲಾಗಿದೆ. ವಿಭಜಕ ಕೆಳ ಮಟ್ಟದಲ್ಲಿರುವುದರಿಂದ ವಾಹನಗಳು ವಿಭಜಕಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಗಳು ಮುರಿದಿವೆ. ಬಹುತೇಕ ವಿದ್ಯುತ್ ಕಂಬಗಳಲ್ಲಿ ದೀಪಗಳು ಬೆಳಗುತ್ತಿಲ್ಲ. ಇನ್ನು ಕೆಲವು ಕಂಬಳಿಗೆ ವಿದ್ಯುತ್ ಪೂರೈಕೆ ಇಲ್ಲ. ಕಳೆದ ನಾಲ್ಕೈದು ತಿಂಗಳುಗಳಿಂದ ಈ ಸಮಸ್ಯೆ ಎದುರಾಗಿದೆ. ಹೀಗಾಗಿ ರಾತ್ರಿ ವೇಳೆ ಎತ್ತಿನ ಬಂಡಿ, ಪಾದಚಾರಿಗಳು, ಬೈಕ್ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದ ಮಧ್ಯದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ಮತ್ತು ಅಂತರರಾಜ್ಯಗಳ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಜೊತೆಗೆ ವಾಹನಗಳ ವೇಗವೂ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬೀದಿ ದೀಪಗಳ ಅಗತ್ಯ ಹೆಚ್ಚಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಪಟ್ಟಣದ ಪುರಸಭೆ ಅಧಿಕಾರಿಗಳು ಹಾಗೂ ಬೀದಿ ದೀಪಗಳ ನಿರ್ವಹಣೆ ಹೊತ್ತ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸಾರ್ವಜನಿಕರು ತೊಂದರೆ ಪಡುವಂತಾಗಿದೆ.

‘ಬೀದಿ ದೀಪ ಅಳವಡಿಕೆಗೆ ಸಾರ್ವಜನಿಕರ ತೆರಿಗೆ ಹಣ ಬಳಸಿಕೊಳ್ಳಲಾಗುತ್ತದೆ. ಆದರೆ, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗಿದೆ. ಸಮಸ್ಯೆಯನ್ನು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅದು ಗುತ್ತಿಗೆದಾರರಿಗೆ ಸಂಬಂಧಿಸಿದ ವಿಷಯ ಎಂದು ಹಾರಿಕೆ ಉತ್ತರ ನೀಡುತ್ತಾರೆ’ ಎಂದು ಪುರಸಭೆ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಾಜ್ಯಹೆದ್ದಾರಿ ಹಾಗೂ ಪಕ್ಕದ ಓಣಿಗಳಲ್ಲಿಯ ಕೆಲ ಬೀದಿ ದೀಪಗಳು ಉರಿಯುವುದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ
ಜಿ.ಬಿ. ಕಂಬಾಳಿಮಠ, ಪಟ್ಟಣದ ನಿವಾಸಿ, ಹುನಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT