ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಟ್ಟೂರು | ಗೌರಿ ಹಬ್ಬದ ಸಂಭ್ರಮ: ಸಕ್ಕರೆ ಆರತಿ ಸಿದ್ಧ

ಉತ್ತರ ಕರ್ನಾಟಕ ಭಾಗದ ವಿಶಿಷ್ಟ ಹಬ್ಬ; ಹೆಣ್ಣುಮಕ್ಕಳ ಸಡಗರ
Published : 26 ನವೆಂಬರ್ 2023, 6:49 IST
Last Updated : 26 ನವೆಂಬರ್ 2023, 6:49 IST
ಫಾಲೋ ಮಾಡಿ
Comments

ಕೊಟ್ಟೂರು: ಗೌರಿ ಹಬ್ಬ ಬಂತೆಂದರೆ ಉತ್ತರ ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗೆ ಸಡಗರವೋ ಸಡಗರ. ಸೀಗಿ ಹುಣ್ಣಿಮೆಯಂದು ಸಣ್ಣ ಗೌರಿ ಹಬ್ಬ, ಗೌರಿ ಹುಣ್ಣಿಮೆಗೆ ದೊಡ್ಡಗೌರಿ ಹಬ್ಬವೆಂದು ಎರಡು ಬಾರಿ ಆಚರಿಸುವುದು ಇಲ್ಲಿಯ ವಾಡಿಕೆ.

ಈ ಹಬ್ಬದ ವಿಶೇಷವೆಂದರೆ ರಂಗು ರಂಗಿನ ಸಕ್ಕರೆ ಆರತಿಗಳು. ಹೆಣ್ಣು ಮಕ್ಕಳು ಸಕ್ಕರೆ ಆರತಿ ತಟ್ಟೆಯಲ್ಲಿಟ್ಟುಕೊಂಡು ಗೌರಿಗೆ ಬೆಳಗುತ್ತಾರೆ. ಆರತಿ ಬೆಳಗಿದ ಹೆಣ್ಣುಮಕ್ಕಳಿಗೆ ಸಹೋದರರು, ಮಾವಂದಿರು ಹಣ, ಒಡವೆ ವಸ್ತ್ರಗಳನ್ನು ಉಡುಗೊರೆಯಾಗಿ ನೀಡುವ ಪದ್ದತಿಯೂ ಇದೆ.

ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಸೀರೆಯನ್ನುಟ್ಟುಕೊಂಡು ಗೌರಿ ಮಕ್ಕಳಾಗಿ ಊರಿನ ದ್ವಾರಬಾಗಿಲು ರಸ್ತೆಯಲ್ಲಿ ಬಣ್ಣದ ಕೋಲುಗಳೊಂದಿಗೆ ಗೌರಿ ಪದಗಳನ್ನು ಹಾಡುತ್ತಾ, ಕುಣಿಯುತ್ತಾ ಗ್ರಾಮಕ್ಕೆ ಬಂದು ಹೋಗುವ ಪ್ರಯಾಣಿಕರನ್ನು ನಿಲ್ಲಿಸಿ ಅವರಿಂದ ಹಣ ಪಡೆಯುತ್ತಾರೆ.

ಕಟ್ಟಿಗೆಗಳಿಂದ ನಿರ್ಮಿಸಿದ ಅಚ್ಚು ಪಡಿಗಳಲ್ಲಿ ಹದವಾದ ಸಕ್ಕರೆ ಪಾಕ ಹಾಕುವುದರ ಮೂಲಕ ಆರತಿಗಳನ್ನು ತಯಾರು ಮಾಡುತ್ತಾರೆ. ವಿವಿಧ ರೀತಿಯ ಅಚ್ಚುಗಳಿಂದ ವೈವಿಧ್ಯಮಯ ಆಕಾರಗಳ ಬಣ್ಣ ಬಣ್ಣದ ಗೊಂಬೆಗಳನ್ನು ತಯಾರಿಸುತ್ತೇವೆ ಎನ್ನುತ್ತಾರೆ ಮಹಾಂತೇಶ.

ಹಬ್ಬಕ್ಕೆ ಹದಿನೈದು ದಿನವಿರುವಾಗಲೇ ಈ ಆರತಿಗಳನ್ನು ತಯಾರಿಸಲು ಪ್ರಾರಂಭಿಸುತ್ತೇವೆ. ಪ್ರತಿ ತಯಾರಕರು ಸುಮಾರು 20 ರಿಂದ 30 ಕ್ವಿಂಟಾಲ್ ಸಕ್ಕರೆಯಿಂದ ಆರತಿ ತಯಾರಿಸುತ್ತೇವೆ. ಒಂದು ಕ್ವಿಂಟಾಲ್ ಸಕ್ಕರೆಗೆ 90 ಕೆಜಿ ಸಕ್ಕರೆ ಆರತಿಗಳಾಗುತ್ತಿದ್ದು ಒಂದು ಕೆಜಿ ಆರತಿಯನ್ನು ₹100 ರಿಂದ ₹120 ಗೆ ಮಾರುತ್ತೇವೆ ಎಂದು ತಯಾರಕರಾದ ಬಿ.ಎಂ.ಜಿ. ಶಿವಶಂಕರಸ್ವಾಮಿ ಹೇಳುತ್ತಾರೆ.

ಗೌರಿ ಹುಣ್ಣಿಮೆಯ ನಂತರ ಐದನೇ ದಿನದ ವಿಶೇಷವೇನೆಂದರೆ ಸಜ್ಜೆರೊಟ್ಟಿ, ಪುಡಿಚಟ್ನಿ, ಬುತ್ತಿ ಹಾಗೂ ಸಿಹಿ ತಿನಿಸುಗಳನ್ನು ತಯಾರಿಸಿ ಬೆಳದಿಂಗಳಿನಲ್ಲಿ ಮನೆಯ ಮಾಳಿಗೆಗಳ ಮೇಲೆ ಸಹಭೋಜನ ಮಾಡುವುದು. ಇದಕ್ಕೆ ‘ಕುಂತಿ ರೊಟ್ಟಿ ಹಬ್ಬ’ ಎಂದು ಕರೆಯುತ್ತಾರೆ. ಇದರೊಂದಿಗೆ ಹಬ್ಬದ ಆಚರಣೆ ಸಂಪನ್ನಗೊಳ್ಳುತ್ತದೆ.

ಕೊಟ್ಟೂರಿನಲ್ಲಿ ಗೌರಿ ಹಬ್ಬದ ಪ್ರಯುಕ್ತ ಮಹಿಳೆಯರು ಸಕ್ಕರೆ ಆರತಿಗಳನ್ನು ಖರೀದಿಸಿದರು
ಕೊಟ್ಟೂರಿನಲ್ಲಿ ಗೌರಿ ಹಬ್ಬದ ಪ್ರಯುಕ್ತ ಮಹಿಳೆಯರು ಸಕ್ಕರೆ ಆರತಿಗಳನ್ನು ಖರೀದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT