ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಲಿ ಇರುವೆ ಪತ್ತೆ ಹಚ್ಚಿದ ಬೆಂಗಳೂರು ಕೀಟಶಾಸ್ತ್ರಜ್ಞರ ತಂಡ

Published 4 ಜೂನ್ 2024, 0:05 IST
Last Updated 4 ಜೂನ್ 2024, 0:05 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಅರುಣಾಚಲ ಪ್ರದೇಶದ ಸಿಯಾಂಗ್‌ ಕಣಿವೆಯ ಯಿಂಗ್‌ಕು ಗ್ರಾಮದ ಅರಣ್ಯ ಪ್ರದೇಶದಲ್ಲಿ ‘ಪರಾಪರಾಟ್ರೆಚೀನಾನೀಲಾ’  ಎಂಬ ಅಪರೂಪದ ನೀಲಿ ಬಣ್ಣದ ಇರುವೆಯನ್ನು ಬೆಂಗಳೂರಿನ ಕೀಟಶಾಸ್ತ್ರಜ್ಞರನ್ನು ಒಳಗೊಂಡ ಅನ್ವೇಷಕರ ತಂಡ ಪತ್ತೆ ಹಚ್ಚಿದೆ. 

ಶತಮಾನದ ಹಿಂದೆ ಅರುಣಾಚಲ ಪ್ರದೇಶದ ಜೀವ ವೈವಿಧ್ಯ ಅನ್ವೇಷಣೆಗೆ 'ಅಭೋರ್‌ ಅನ್ವೇಷಣಾ ಯಾತ್ರೆ' ಕೈಗೊಳ್ಳಲಾಗಿತ್ತು. ಅದಾದ ನೂರು ವರ್ಷಗಳ ನಂತರ ಸಿಯಾಂಗ್‌ ಕಣಿವೆಯ ಜೀವ ವೈವಿಧ್ಯ ಮರು ಪರಿಶೀಲಿಸಲು ನಡೆಸಿದ ಅನ್ವೇಷಣೆ ಯಾತ್ರೆಯ ವೇಳೆ ಈ ಇರುವೆ ಪತ್ತೆಯಾಗಿದೆ. 

‘ಯಿಂಗ್‌ಕು ಗ್ರಾಮದ ಅರಣ್ಯ ಪ್ರದೇಶದ ಮರವೊಂದರಲ್ಲಿ ನೀಲಿ ಬಣ್ಣದ ಎರಡು ಇರುವೆ ಕಣ್ಣಿಗೆ ಬಿದ್ದವು. ಇವು ಹೊಸ ಬಗೆಯ ಇರುವೆ ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಯಿತು. ಲೋಹದ ನೀಲಿ ಬಣ್ಣದ ದೇಹ ಹೊಂದಿರುವ ಇವು ಸಣ್ಣ ಇರುವೆಗಳಾಗಿದ್ದು, ಇವುಗಳ ಉದ್ದ ಎರಡು ಮಿ.ಮೀ ಗಿಂತ ಕಡಿಮೆ ಇದೆ’ ಎಂದು ದೊಡ್ಡಬಳ್ಳಾಪುರದ ಕೀಟಶಾಸ್ತ್ರಜ್ಞೆ ಆರ್‌.ಸಹನಶ್ರೀ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ. 

ಬೆಂಗಳೂರಿನ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ಎನ್ವಿರಾನ್‌ಮೆಂಟ್‌ (ಏಟ್ರಿ) ಸಂಸ್ಥೆಯ ಕೀಟಶಾಸ್ತ್ರಜ್ಞರಾದ ಡಾ.ಪ್ರಿಯದರ್ಶನನ್‌ ಧರ್ಮರಾಜನ್ ಮತ್ತು ಆರ್‌.ಸಹನಶ್ರೀ, ಫ್ಲೋರಿಡಾ ವಿಶ್ವವಿದ್ಯಾಲಯದ ಅಶ್ವಜ್ ಪುನ್ನತ್ ಜೊತೆಗೂಡಿ ಈ ಇರುವೆಗಳ ಕುರಿತ ವೈಜ್ಞಾನಿಕ ವಿವರಣೆಯನ್ನು ‘ಝೂಕೀಸ್’ ಅಂತರರಾಷ್ಟ್ರೀಯ ವಿಜ್ಞಾನ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ. 

ಪ್ರಾಣಿ ಸಂಕುಲದಲ್ಲಿ ನೀಲಿ ಬಣ್ಣ ಅಪರೂಪ. ಆದರೆ, ಕೆಲವು ಮೀನು, ಕಪ್ಪೆ, ಪಕ್ಷಿ, ಜೇಡ, ನೊಣ ಮತ್ತು ಕಣಜಗಳು ನೀಲಿ ಬಣ್ಣದ ಜೊತೆ ವೈವಿಧ್ಯಮಯ ಬಣ್ಣಗಳನ್ನು ಹೊಂದಿವೆ. ಅವುಗಳ ದೇಹದಲ್ಲಿರುವ ‘ಬಯೋಲಾಜಿಕಲ್‌ ಫೋಟೊನಿಕ್‌ ನ್ಯಾನೊಸ್ಟ್ರಕ್ಚರ್‌’ ಕಣಗಳಿಂದ ಬಣ್ಣ ಉತ್ಪತ್ತಿಯಾಗುತ್ತದೆ. ಕೀಟಗಳಲ್ಲಿ ಇದು ಸಾಮಾನ್ಯವಾದರೂ ಇರುವೆಗಳಲ್ಲಿ ಅಪರೂಪ. ಪ್ರಪಂಚದಲ್ಲಿ 16,724 ಜಾತಿ ಇರುವೆ ಪ್ರಭೇದಗಳಲ್ಲಿ ಕೆಲವು ಮಾತ್ರ ನೀಲಿ ಬಣ್ಣದ ದೇಹ ಹೊಂದಿವೆ ಎನ್ನುತ್ತಾರೆ ಸಹನಶ್ರೀ.  

‘ಪರಾಪರಾಟ್ರೆಚೀನಾನೀಲಾ’ ಆವಿಷ್ಕಾರವು ಹಿಮಾಲಯದ ವಿಶಿಷ್ಟ ಜೀವ ವೈವಿಧ್ಯವನ್ನು ಪ್ರತಿನಿಧಿಸುತ್ತದೆ. ನೀಲಿ ಬಣ್ಣದ ಇರುವೆ ಕೀಟಶಾಸ್ತ್ರಜ್ಞರಲ್ಲಿ ಅನೇಕ ಕುತೂಹಲಕಾರಿ ಪ್ರಶ್ನೆ ಹುಟ್ಟು ಹಾಕಲಿದೆ. ಈ ಬಣ್ಣವು ಇರುವೆಯ ಸಂವಹನ, ರಕ್ಷಣೆಗಾಗಿ ವೈರಿಗಳಿಂದ ಮರೆ ಮಾಚುವಿಕೆ ಮತ್ತು ಪರಿಸರ ಸಂವಹನಗಳಲ್ಲಿ ಸಹಾಯ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ ಎನ್ನುತ್ತಾರೆ.

ಹಿಮಾಲಯದ ಜೀವ ವೈವಿಧ್ಯದ ಹಾಟ್‌ಸ್ಪಾಟ್‌ನಲ್ಲಿರುವ ಅರುಣಾಚಲ ಪ್ರದೇಶದ ಸಿಯಾಂಗ್‌ ಕಣಿವೆ ಸರಿಸಾಟಿ ಇಲ್ಲದ ವೈವಿಧ್ಯಮಯ ಜೀವ ಜೀವ ಜಗತ್ತನ್ನು ಹೊಂದಿದೆ. ಇದರಲ್ಲಿ ಹೆಚ್ಚಿನದನ್ನು ಇನ್ನೂ ಅನ್ವೇಷಿಸಬೇಕಾಗಿದೆ. ಪರಿಸರ ಶ್ರೀಮಂತಿಕೆ ಹೊಂದಿರುವ ಈ ಅಭೂತಪೂರ್ವ ಪ್ರದೇಶ ಆಪತ್ತು ಎದುರಿಸತ್ತಲಿದೆ. ಹವಾಮಾನ ಬದಲಾವಣೆ ಜೊತೆ ಮೂಲಸೌಕರ್ಯ ಯೋಜನೆ, ಅಣೆಕಟ್ಟು, ಹೆದ್ದಾರಿ ಮತ್ತು ಮಿಲಿಟರಿ ನೆಲೆ ನಿರ್ಮಾಣದಂತಹ ಚಟುವಟಿಕೆಗಳು ಈ ಕಣಿವೆಯ ಸ್ವರೂಪವನ್ನು ವೇಗವಾಗಿ ಬದಲಾಯಿಸುತ್ತಿವೆ’ ಎಂದು ಡಾ.ಪ್ರಿಯದರ್ಶನನ್‌ ಧರ್ಮರಾಜನ್ ಕಳವಳ ವ್ಯಕ್ತಪಡಿಸುತ್ತಾರೆ. 

ನೀಲಿ ಬಣ್ಣದ ಅಪರೂಪದ ಇರುವೆ ಪತ್ತೆ ಮಾಡಿರುವ ತಂಡದ ಬಗ್ಗೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮ ಖಂಡು ‘ಎಕ್ಸ್‌’ ಖಾತೆಯಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ನೀಲಿ ಬಣ್ಣದ ಇರುವೆಯ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

ಝೂಕೀಸ್‌ ಜರ್ನಲ್‌ ಲಿಂಕ್‌: https://zookeys.pensoft.net/article/114168/

ನೀಲಿ ಬಣ್ಣದ ಇರುವೆ
ನೀಲಿ ಬಣ್ಣದ ಇರುವೆ
ನೀಲಿ ಬಣ್ಣದ ಇರುವೆ ಪತ್ತೆಯಾಗಿರುವ ಅರುಣಾಚಲ ಪ್ರದೇಶ ರಾಜ್ಯದ ಯಿಂಗ್‌ಕು ಗ್ರಾಮ ಇರುವ ಪ್ರದೇಶ
ನೀಲಿ ಬಣ್ಣದ ಇರುವೆ ಪತ್ತೆಯಾಗಿರುವ ಅರುಣಾಚಲ ಪ್ರದೇಶ ರಾಜ್ಯದ ಯಿಂಗ್‌ಕು ಗ್ರಾಮ ಇರುವ ಪ್ರದೇಶ
ನೀಲಿ ಇರುವೆ ಪತ್ತೆ ಬಗ್ಗೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮ ಖಂಡು ’ಎಕ್ಸ್‌‘ ಖಾತೆಯಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.
ನೀಲಿ ಇರುವೆ ಪತ್ತೆ ಬಗ್ಗೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮ ಖಂಡು ’ಎಕ್ಸ್‌‘ ಖಾತೆಯಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.
ಅನ್ವೇಷಣಾ ಯಾತ್ರೆಗೆ ಶತಮಾನದ ಇತಿಹಾಸ
ಅರುಣಾಚಲ ಪ್ರದೇಶದ ಸ್ಥಳೀಯರ ವಿರುದ್ಧ ಬ್ರಿಟಿಷ್‌ ಸರ್ಕಾರ 1911-1912ರಲ್ಲಿ 'ಅಭೋರ್‌’ ಹೆಸರಿನ ದಂಡಯಾತ್ರೆ ನಡೆಸಿತ್ತು. ಆಗ ಸಿಯಾಂಗ್‌ ಕಣಿವೆಯ ನೈಸರ್ಗಿಕ ಇತಿಹಾಸ ಮತ್ತು ಭೌಗೋಳಿಕ ಇತಿಹಾಸ ದಾಖಲಿಸಲು ವೈಜ್ಞಾನಿಕ ತಂಡವೊಂದು ಮಿಲಿಟರಿಯ ಜೊತೆಗೂಡಿತ್ತು. ಈ ತಂಡವು ಮೊದಲ ಬಾರಿಗೆ ಸಿಯಾಂಗ್‌ ಕಣಿವೆ ಪ್ರದೇಶದ ದೊಡ್ಡಭಾಗಗಳನ್ನು ಅನ್ವೇಷಿಸಲು ವೈಜ್ಞಾನಿಕ ನಕ್ಷೆ ರೂಪಿಸಲು ಯಶಸ್ವಿಯಾಯಿತು. ಅಲ್ಲಿರುವ ಪ್ರತಿ ಸಸ್ಯ ಕಪ್ಪೆ ಹಲ್ಲಿ ಮೀನು ಪಕ್ಷಿ ಮತ್ತು ಸಸ್ತನಿ ಮತ್ತು ಕೀಟಗಳನ್ನು ವೈಜ್ಞಾನಿಕವಾಗಿ ದಾಖಲಿಸಿತ್ತು. ಇದಾಗಿ ಒಂದು ಶತಮಾನದ ನಂತರ ಬೆಂಗಳೂರಿನ ಏಟ್ರಿ ಸಂಸ್ಥೆಯ ಸಂಶೋಧಕರ ತಂಡ ಮತ್ತು ಫೆಲಿಸ್ಕ್ರಿಯೇಷನ್ಸ್‌ ತಂಡ ‘ಸಿಯಾಂಗ್ ಅನ್ವೇಷಣೆ’ ಬ್ಯಾನರ್‌ ಅಡಿ ಈ ಪ್ರದೇಶದ ಜೀವ ವೈವಿಧ್ಯ ಮರು ಸಮೀಕ್ಷೆಗೆ ಯಾತ್ರೆ ಆರಂಭಿಸಿದೆ. ಇದಕ್ಕೆ ನ್ಯಾಷನಲ್‌ ಜಿಯೋಗ್ರಾಫಿಕ್‌ ಸೊಸೈಟಿ ಅನುದಾನ ನೀಡಿದೆ. ಯಾತ್ರೆ ವೇಳೆ ಪ್ರಾಣಿ ವರ್ಗದ ಒಂದು ಹೊಸ ಉಪ ಕುಟುಂಬ ಆರು ಹೊಸ ತಳಿ ಮತ್ತು 40ಕ್ಕೂ ಹೆಚ್ಚು ಹೊಸ ಪ್ರಾಣಿ ಪ್ರಭೇದಗಳನ್ನು ಕೀಟಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT