ಬೆಂಗಳೂರು: ರಸ್ತೆ ಬದಿಯಲ್ಲಿ ಬಣ್ಣಗಳ ಚಿತ್ತಾರ, ಕಲಾವಿದನ ಕಲ್ಪನೆಗೆ ಬಣ್ಣದ ರಂಗು, ಕುಂಚದಲ್ಲಿ ಅರಳಿದ ಇತಿಹಾಸ, ಸಂಸ್ಕೃತಿ, ಗ್ರಾಮೀಣ ಸೊಗಡು, ಪ್ರಕೃತಿ ಸೊಗಡಿನ ವೈಭವ ಕಣ್ತುಂಬಿಕೊಳ್ಳಲು ಸೇರಿದ್ದ ಜನಸಾಗರ.

ಉನ್ನತ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಭಾನುವಾರ ನಗರದಲ್ಲಿ ಆಯೋಜಿಸಿದ್ದ 20ನೇ ವರ್ಷದ ‘ಚಿತ್ರಸಂತೆ’ಯ ದೃಶ್ಯಾವಳಿಗಳಿವು.

ಕುಮಾರಕೃಪಾ ರಸ್ತೆ, ಕ್ರೆಸೆಂಟ್ ರಸ್ತೆ, ಗಾಂಧಿಭವನದ ಸುತ್ತಮುತ್ತ, ಚಿತ್ರಕಲಾ ಪರಿಷತ್ ಆವರಣದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಕಲಾವಿದರ ಕುಂಚದಲ್ಲಿ ಅರಳಿದ ಚಿತ್ರಕಲೆಗಳು ಕಲಾಸಕ್ತರ ಮನತಣಿಸಿದವು. ದೇಶದ ವಿವಿಧ ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳು ಚಿತ್ರಸಂತೆಯಲ್ಲಿ ಮಿಳಿತಗೊಂಡಿದ್ದವು

ಪರಿಸರ, ವನ್ಯಜೀವಿಗಳು, ದೇವಸ್ಥಾನ, ಹೂವು ಕಟ್ಟುವ ಮಹಿಳೆ, ಗ್ರಾಮೀಣ ಸೊಗಡು, ದಿವಂಗತ ಪುನೀತ್ ರಾಜ್ಕುಮಾರ್ ಹಾಗೂ ರಾಷ್ಟ್ರಪಿತ ಮಹಾತ್ಮಗಾಂಧಿ, ಬುದ್ಧ – ಬಸವ, ವಿಶ್ವ ಪ್ರಸಿದ್ಧ ನಾಯಕರು, ರೂಪದರ್ಶಿಯರು, ಕೃಷಿಕರ ಬದುಕು, ದೇವರು, ಕಾಲುದಾರಿ, ಸೂರ್ಯಾಸ್ತ ಹಾಗೂ ಸೂರ್ಯೋದಯ, ನದಿಗಳ ಹರಿವು, ನೀರು ಕುಡಿಯುತ್ತಿರುವ ಜಿಂಕೆ, ದೈವ ಕೋಲ, ಕಾಡು ಹಣ್ಣುಗಳು, ಎಳನೀರಿನ ವ್ಯಾಪಾರಿ, ಪಾನೀಪೂರಿ ವ್ಯಾಪಾರಿ, ಹಳೇ ನಗರದ ಸೊಬಗು, ಬೆಟ್ಟಗಳ ಸಾಲು, ಗ್ರಾಮೀಣ ಮನೆ... ಹೀಗೆ ಹಲವು ವಿಷಯಗಳು ಕಲಾವಿದನ ಕುಂಚದಲ್ಲಿ ಚಿತ್ರದ ರೂಪ ಪಡೆದಿದ್ದವು.

ಮಹಿಳೆಯರ ಭಾವ, ಜಾನಪದ ಸಂಸ್ಕೃತಿ ಹಾಗೂ ಶಿಲ್ಪಕಲೆಗಳೂ ಗಮನ ಸೆಳೆದವು. ಹತ್ತಾರು ವಿಷಯಗಳು ಕಲಾವಿದನ ಕುಂಚದಲ್ಲಿ ಅರಳಿದ್ದವು.

ಚಿತ್ರಸಂತೆಯಲ್ಲಿ ಈ ಬಾರಿ 1,300 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದ ಬಹುತೇಕ ಜಿಲ್ಲೆ ಹಾಗೂ 18 ರಾಜ್ಯಗಳ ಕಲಾವಿದರು ಚಿತ್ರಸಂತೆಯಲ್ಲಿ ತಮ್ಮ ಚಿತ್ರ ಪ್ರದರ್ಶನ ಹಾಗೂ ಮಾರಾಟ ನಡೆಸಿದರು.

ಜಲವರ್ಣ, ತೈಲವರ್ಣ, ಮರಳಿನ ಚಿತ್ರಕಲೆ, ಆ್ಯಕ್ರಿಲಿಕ್, ಮಧುಬನಿ, ಡಿಜಿಟಲ್ ಕಲೆ, ರಾಜಸ್ಥಾನಿ ಶೈಲಿಯ ಕಲಾಕೃತಿಗಳು ಗಮನ ಸೆಳೆದವು. ಒಂದಕ್ಕಿಂತ ಮತ್ತೊಂದು ಕಲಾಕೃತಿಗಳು ಆಲೋಚನೆಗೆ ಹಚ್ಚಿದವು. ಕರಕುಶಲ ವಸ್ತುಗಳೂ ಮನಸೆಳೆದವು. ಅನುಪಯುಕ್ತ ವಸ್ತುಗಳು ಕಲಾಕೃತಿಯ ರೂಪ ಪಡೆದಿದ್ದವು. ಒಡೆದ ಬಳೆಯಿಂದ ಶರತ್ ಅವರು ರಚಿಸಿದ್ದ ಕೋಳಿ ಕಲಾಕೃತಿ ಗಮನಿಸಿದ ಜನರು ಅಬ್ಬಾ ಎಂದರು.

ರಸ್ತೆಯುದ್ದಕ್ಕೂ ವ್ಯಕ್ತಿಯ ಭಾವಚಿತ್ರವನ್ನು ಬಿಡಿಸುವವರು ಠಿಕಾಣಿ ಹೂಡಿದ್ದರು. ಮಕ್ಕಳು ಭಾವಚಿತ್ರ ಬಿಡಿಸಿ ಕೊಂಡು ಸಂಭ್ರಮಿಸಿದರೆ, ಯುವಜನರು ಟ್ಯಾಟೋ ಹಾಕಿಸಿಕೊಂಡರು. ಜೇಡಿ ಮಣ್ಣಿನಲ್ಲಿ ಕಲಾಕೃತಿ ಮಾಡುವ ಕಲೆ ಕಲಿಸುವವರಿದ್ದರು. ಚಿತ್ರಸಂತೆ ಕಲಾವಿದರು– ಕಲಾಸಕ್ತರ ನಡುವೆ ಬಾಂಧವ್ಯದ ಬೆಸೆಯಲು ಸಾಕ್ಷಿಯಾಯಿತು.

‘ಚಿತ್ರಸಂತೆ’ ಎರಡು ದಿನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ
‘ಮುಂದಿನ ವರ್ಷ ಚಿತ್ರಸಂತೆಯನ್ನು ಎರಡು ದಿನ ನಡೆಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದರು.

ಚಿತ್ರಸಂತೆ ಉದ್ಘಾಟಿಸಿದ ಅವರು, ‘ಚಿತ್ರಕಲಾ ಪರಿಷತ್ತು ವಿಶಿಷ್ಟ ಸಂಸ್ಥೆಯಾಗಿದ್ದು, ರಾಷ್ಟ್ರಮಟ್ಟಕ್ಕೆ ಬೆಳೆಯಬೇಕು. ಬ್ರ್ಯಾಂಡ್ ಬೆಂಗಳೂರನ್ನು ರಾಷ್ಟಮಟ್ಟಕ್ಕೆ ಕೊಂಡೊಯ್ಯಬಲ್ಲ ಸಂಸ್ಥೆಗಳಲ್ಲಿ ಚಿತ್ರಕಲಾ ಪರಿಷತ್ತೂ ಒಂದು’ ಎಂದರು.

‘ಇದು, ಬೆಂಗಳೂರಿಗೆ ಸೀಮಿತವಾಗಬಾರದು. ಕಲ್ಯಾಣ ಕರ್ನಾಟಕ, ದಕ್ಷಿಣ ಕರ್ನಾಟಕದಲ್ಲಿ ಉತ್ತಮ ಕಲಾವಿದರಿದ್ದಾರೆ. ಅವರಿಗೆ ವೇದಿಕೆ ಇಲ್ಲ. ಈ ವರ್ಷ ನಾಲ್ಕೈದು ಚಿತ್ರಸಂತೆಗಳನ್ನು ಪ್ರಾದೇಶಿಕ ಕೇಂದ್ರಗಳಾದ ಮಂಗಳೂರು, ಮೈಸೂರು, ಹುಬ್ಬಳ್ಳಿ–ಧಾರವಾಡಗಳಲ್ಲಿಯೂ ಆಯೋಜಿಸಬೇಕು. ಇದಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ’ ಎಂದರು.

‘₹4 ಕೋಟಿ ವಹಿವಾಟು’
ಚಿತ್ರಸಂತೆಯಲ್ಲಿ ಕನಿಷ್ಠ ₹ 1 ಸಾವಿರದಿಂದ ₹ 8 ಲಕ್ಷ ಬೆಲೆಯ ಚಿತ್ರಗಳಿದ್ದವು. ಕಲಾವಿದೆ ಕವಿತಾ ಅವರು ಆ್ಯಕ್ರಿಲಿಕ್ ಪೇಯಿಂಟಿಂಗ್ನಲ್ಲಿ ರಚಿಸಿದ್ದ ಚಿತ್ರಕ್ಕೆ ₹ 3 ಲಕ್ಷ ಬೆಲೆಯಿತ್ತು. ತಮಿಳುನಾಡಿನ ಗೋಕುಲಂ ವಿಜಯ್ ಅವರ ಹೂವು ಮಾರಾಟದ ಚಿತ್ರವಿದ್ದ ಕಲಾಕೃತಿಗೆ ₹ 5 ಲಕ್ಷ ಬೆಲೆಯಿತ್ತು.

‘ಅಂದಾಜು ₹4ಕೋಟಿ ಮೀರಿ ವಹಿವಾಟು ನಡೆಯಿತು. ಸುಮಾರು 4 ಲಕ್ಷ ಕಲಾಸಕ್ತರು ಭಾಗವಹಿಸಿದ್ದರು’ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದರು.

ವಿಶ್ವಕಪ್ ಟ್ರೋಫಿ ವೀಕ್ಷಣೆ
ಬಾಂಗ್ಲಾದೇಶದಲ್ಲಿ ಕಳೆದ ತಿಂಗಳು ನಡೆದಿದ್ದ ಅಂಧರ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ತಂಡವು ಟ್ರೋಫಿ ಜಯಿಸಿತ್ತು. ಆ ಟ್ರೋಫಿಯನ್ನೂ ವೀಕ್ಷಣೆಗೆ ಇಡಲಾಗಿತ್ತು. ಕ್ರೀಡಾ ಪ್ರೇಮಿಗಳು ಟ್ರೋಫಿ ವೀಕ್ಷಿಸಿ, ತಂಡದ ಆಟಗಾರ ಲೋಕೇಶ್ ಅವರನ್ನು ಅಭಿನಂದಿಸಿದರು.

ಚಿತ್ರಸಂತೆಯಿಂದ ಪರಸ್ಪರ ಕಲೆ ಹಾಗೂ ಸಂಸ್ಕೃತಿ ಪರಿಚಯವಾಗಲಿದೆ. ಒಂದು ದಿನದ ಬದಲಿಗೆ ಎರಡು ದಿನ ನಡೆಸಬೇಕು.
-ಸಂಜೀವ್, ಕಲಾಸಕ್ತ, ಬೆಂಗಳೂರು

10 ವರ್ಷಗಳಿಂದ ಚಿತ್ರ ಸಂತೆಗೆ ಬರುತ್ತಿದ್ದೇನೆ. ಈ ವರ್ಷ ಹೆಚ್ಚಿನ ಜನರು ಬಂದಿದ್ದಾರೆ. ಉತ್ತಮ ಸ್ಪಂದನೆ ಇದೆ.
-ಎಂ.ಎನ್.ಪಾಟೀಲ್, ಕಲಾವಿದ, ಹುಬ್ಬಳ್ಳಿ

ಹಲವು ಬಾರಿ ಇಲ್ಲಿ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿರುವೆ. ಈ ಬಾರಿ ಶೇ 80ರಷ್ಟನ್ನು ಕಲಾಸಕ್ತರು ಖರೀದಿಸಿದ್ದು ಖುಷಿ ನೀಡಿತು.
-ಶ್ರೀಶೈಲ ಪಾಟೀಲ, ಕಲಾವಿದ, ಕಲಬುರಗಿ

ವಿವಿಧೆಡೆಯ ಪ್ರಾತಿನಿಧಿಕ ಕಲೆಗಳ ಪರಿಚಯಕ್ಕೆ ಚಿತ್ರಸಂತೆ ಒಂದು ಕನ್ನಡಿ. ಹಲವು ಕೃತಿ ನಕಲು ಎನ್ನಿಸಿದವು. ಇದು ಮೂಲ ಕೃತಿಕಾರರಿಗೆ ದ್ರೋಹ ಅನ್ನಿಸುತ್ತದೆ.
-ಪ್ರತೀಕ್ಷಾ ಮರಕಿಣಿ, ಕಲಾವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.