ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಕಾಮಗಾರಿಗೆ ಹಿಂದೆ, ಹಣ ಪಾವತಿಗೆ ಮುಂದೆ!

ಎಚ್‌ಎಂಟಿ ರಸ್ತೆ– ಪೈಪ್‌ಲೈನ್‌ ರಸ್ತೆ ಜಂಕ್ಷನ್‌ ಗ್ರೇಡ್‌ ಸೆಪರೇಟರ್‌: ಶೇ 20ರಷ್ಟು ಕೆಲಸಕ್ಕೆ ಬಿಬಿಎಂಪಿಯಿಂದ ಶೇ 44ರಷ್ಟು ಹಣ ಬಿಡುಗಡೆ
Published 13 ಜುಲೈ 2024, 23:05 IST
Last Updated 13 ಜುಲೈ 2024, 23:05 IST
ಅಕ್ಷರ ಗಾತ್ರ

ಬೆಂಗಳೂರು: ‘ಗುತ್ತಿಗೆದಾರರಿಗೆ ಬಿಬಿಎಂಪಿ ಬಿಲ್‌ ಪಾವತಿಸುತ್ತಿಲ್ಲ’ ಎಂಬ ಆರೋಪಕ್ಕೆ ಎಚ್‌ಎಂಟಿ ರಸ್ತೆ– ಪೈಪ್‌ಲೈನ್‌ ರಸ್ತೆ ಜಂಕ್ಷನ್‌ ಗ್ರೇಡ್‌ ಸೆಪರೇಟರ್‌ ಕಾಮಗಾರಿ ತದ್ವಿರುದ್ಧವಾಗಿದೆ. ಕೆಲಸ ಶೇ 20ರಷ್ಟಾಗಿದ್ದರೂ ಗುತ್ತಿಗೆದಾರರಿಗೆ ಬಿಲ್‌ನ ಶೇ 44ರಷ್ಟು ಹಣ ಪಾವತಿ ಮಾಡಲಾಗಿದೆ.

ಜಾಲಹಳ್ಳಿ, ಟಿ. ದಾಸರಹಳ್ಳಿ, ಎಂಇಎಸ್‌ ವರ್ತುಲ ರಸ್ತೆ ಹಾಗೂ ತುಮಕೂರು ರಸ್ತೆಗೆ ಸುಗಮ ಸಂಪರ್ಕ ಕಲ್ಪಿಸುವ ಎಚ್‌ಎಂಟಿ ರಸ್ತೆಯಿಂದ ಪೈಪ್‌ಲೈನ್‌ ರಸ್ತೆ ಸಂಧಿಸುವ ಜಂಕ್ಷನ್‌ನಲ್ಲಿ ಬಿಬಿಎಂಪಿ ನಾಲ್ಕು ವರ್ಷಗಳ ಹಿಂದೆ ಗ್ರೇಡ್‌ ಸೆಪರೇಟರ್‌ ಕಾಮಗಾರಿಯನ್ನು ಆರಂಭಿಸಿತ್ತು.

‘ಮುಖ್ಯಮಂತ್ರಿಯವರ ನವ ಬೆಂಗಳೂರು’ ಯೋಜನೆಯಲ್ಲಿ ಅನುಮೋದನೆಗೊಂಡಿದ್ದ ಗ್ರೇಡ್‌ ಸೆಪರೇಟ್‌ ಕಾಮಗಾರಿಯನ್ನು, ‘ಮುಖ್ಯಮಂತ್ರಿಯವರ ನವ ನಗರೋತ್ಥಾನ’ ಯೋಜನೆಯಾಗಿ ಬದಲಾಯಿಸಲಾಗಿದೆ. ಜೊತೆಗೆ ₹5 ಕೋಟಿಯಷ್ಟು ಹೆಚ್ಚುವರಿ ಅನುದಾನವೂ ಅನುಮೋದನೆಯಾಗಿದೆ. ಈ ಎಲ್ಲ ಪ್ರಕ್ರಿಯೆಗಳು ಒಂದೆರಡು ತಿಂಗಳಲ್ಲೇ ಮುಗಿದಿವೆ. ಆದರೆ, ಕಾಮಗಾರಿ ಮಾತ್ರ ನಾಲ್ಕು ವರ್ಷವಾಗುತ್ತಿದ್ದರೂ ಶೇ 20ರಷ್ಟೂ ಮುಗಿದಿಲ್ಲ.

ಕೆಂಗೇರಿ ವರ್ತುಲ ರಸ್ತೆಯಲ್ಲಿ ಎರಡೂ ಗ್ರೇಡ್‌ ಸೆಪರೇಟರ್‌ ಕಾಮಗಾರಿಯ ಗುತ್ತಿಗೆ ಪಡೆದಿರುವ ಪಿಜೆಪಿ ಎಂಜಿನಿಯರ್ಸ್‌ಗೇ ಶೇ 10ರಷ್ಟು ಟೆಂಡರ್‌ ಪ್ರೀಮಿಯಂ ನೀಡಿ, ‘ಟರ್ನ್‌ ಕೀ’ ಆಧಾರದಲ್ಲಿ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಮುಗಿಯಲು ವರ್ಷ ಎಷ್ಟಾದರೂ ಹಣ ಹೆಚ್ಚು ನೀಡಬೇಕಿಲ್ಲ ಎಂಬುದೇ ‘ಟರ್ನ್ ಕೀ’ ಯೋಜನೆ. ಆದರೆ, ಈ ಪ್ರಕರಣದಲ್ಲಿ ಕೆಲಸವಾಗಿರುವುದಕ್ಕಿಂತ ಹೆಚ್ಚಾಗಿ ಬಿಬಿಎಂಪಿ ಎಂಜಿನಿಯರ್‌ಗಳು ಧಾರಾಳವಾಗಿ ಹಣ ಪಾವತಿ ಮಾಡಿದ್ದಾರೆ. ಎರಡು ಬದಿಯಲ್ಲಿ ರಸ್ತೆಯನ್ನು ಅಗೆದಿದ್ದು, ಜನರಿಗೆ ಮಾತ್ರ ನಿತ್ಯವೂ ಇಲ್ಲಿ ಸಮಸ್ಯೆಯಾಗಿದೆ.

ರಸ್ತೆಯ ಮಧ್ಯಭಾಗದಲ್ಲಿ ಅಗೆದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಇಲ್ಲಿ ವಾಹನ ಸಂಚಾರ ಅಪಾಯಕ್ಕೆಡೆ ಮಾಡಿಕೊಟ್ಟಿದೆ. ಮಣ್ಣು ಹಾಗೂ ಡಾಂಬರು ಕುಸಿಯುತ್ತಿದ್ದು, ಆಗಾಗ ದ್ವಿಚಕ್ರ ವಾಹನಗಳು ಬೀಳುತ್ತಿವೆ. ದೊಡ್ಡ ವಾಹನಗಳು ಸಂಚರಿಸಿದಾಗ ಡಾಂಬರು ಕುಸಿದು, ಕಾಮಗಾರಿ ನಡೆದಿರುವ ಜಾಗಕ್ಕೆ ಬೀಳುತ್ತಿದೆ.

‘ರಕ್ಷಣಾ ಇಲಾಖೆಯ ಒಂದಷ್ಟು ಜಾಗದಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿ ನಡೆಯಬೇಕಿದೆ. ಆದರೆ, ಬಿಬಿಎಂಪಿ ಎಂಜಿನಿಯರ್‌ಗಳು ಈ ಬಗ್ಗೆ ಮಾತುಕತೆಯನ್ನು ಆಸಕ್ತಿಯಿಂದ ನಡೆಸುತ್ತಿಲ್ಲ. ಗ್ಯಾಸ್‌ಪೈಪ್‌ ಲೈನ್‌ ಅನ್ನು ಕ್ಷಿಪ್ರವಾಗಿ ಬದಲಿ ಮಾರ್ಗ ಮಾಡಿಕೊಳ್ಳಲು ಹೇಳಿಲ್ಲ. ಹೀಗಾಗಿ, ಎಲ್ಲವೂ ವಿಳಂಬವಾಗುತ್ತಿದೆ’ ಎಂದು ಸ್ಥಳೀಯರಾದ ರಾಜೇಶ್‌ ದೂರಿದರು.

‘ಸಾಕಷ್ಟು ಕಾರಣಗಳನ್ನು ನೀಡಿ, ಬಿಬಿಎಂಪಿ ಎಂಜಿನಿಯರ್‌ಗಳು ಕಾಮಗಾರಿಯನ್ನು ಮುಂದೂಡುತ್ತಲೇ ಇದ್ದಾರೆ. ಬಹುತೇಕ ನಾಲ್ಕು ವರ್ಷಗಳಿಂದ ಇಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಒಂದು ಯೋಜನೆಗೆ ಎಷ್ಟು ಜಮೀನು ಬೇಕು, ಅದು ನಮ್ಮಲ್ಲಿ ಲಭ್ಯವಿದೆಯೇ? ಯಾವ ಇಲಾಖೆ ಕೆಲಸ ನಿರ್ವಹಿಸಬೇಕು, ಅದನ್ನು ಮೊದಲು ಮಾಡಿದರೆ ಎಷ್ಟು ಅನುಕೂಲ ಎಂಬುದನ್ನು ಬಿಬಿಎಂಪಿ ಎಂಜಿನಿಯರ್‌ಗಳು ಯೋಚಿಸುವುದೇ ಇಲ್ಲ. ಆದ್ದರಿಂದಲೇ, ರಸ್ತೆ ಅಗೆದು ಅರ್ಧಂಬರ್ಧ ಕಾಮಗಾರಿ ನಡೆಸಿ, ವರ್ಷಗಟ್ಟಲೆ ಪಾಳು ಬಿಡುತ್ತಾರೆ. ಅವುಗಳ ಗುಣಮಟ್ಟವೂ ಹಾಳಾಗುತ್ತದೆ. ಇದರಿಂದ ಜನರಿಗೆ ನಿತ್ಯವೂ ಸಮಸ್ಯೆ ಉಂಟಾಗುತ್ತಿದೆ’ ಎಂದು ದಾಸರಹಳ್ಳಿ ನಿವಾಸಿ ಶ್ರೀಕಂಠರಾವ್‌ ಆಕ್ರೋಶ ವ್ಯಕ್ತಪಡಿಸಿದರು.

‘ಹಣ ನೀಡಿಲ್ಲ ಎಂದು ಇಲ್ಲಿನ ಗುತ್ತಿಗೆದಾರರು ಹೇಳುತ್ತಿಲ್ಲ. ಅವರು ಕೆಲಸ ಮಾಡಿಲ್ಲ, ಇವರು ಮಾಡಿಲ್ಲ. ಹೀಗಾಗಿ ನಾವು ಕಾಮಗಾರಿ ಮುಂದುವರಿಸಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಈ ಗುತ್ತಿಗೆದಾರರಿಗೆ ಹೆಚ್ಚಿನ ಹಣವೇ ಬಿಡುಗಡೆ ಆಗಿರಬೇಕು. ಇವರು ಪುಣ್ಯವಂತರು’ ಎಂದು ಜಾಲಹಳ್ಳಿಯ ಸುರೇಶ್‌ ಟೀಕಿಸಿದರು.

ಎಚ್‌ಎಂಟಿ ರಸ್ತೆ– ಪೈಪ್‌ಲೈನ್‌ ರಸ್ತೆ ಜಂಕ್ಷನ್‌ ಗ್ರೇಡ್‌ ಸೆಪರೇಟರ್‌ ಕಾಮಗಾರಿ ವರ್ಷಗಳಿಂದ ಸ್ಥಗಿತಗೊಂಡಿದ್ದು ಕಂಬಿಗಳು ತುಕ್ಕು ಹಿಡಿದಿವೆ ಕಾಮಗಾರಿ ಸ್ಥಳದಲ್ಲಿ ಗಿಡಗಳು ಬೆಳೆದಿವೆ.
ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್‌ ಪಿ.ಎಸ್
ಎಚ್‌ಎಂಟಿ ರಸ್ತೆ– ಪೈಪ್‌ಲೈನ್‌ ರಸ್ತೆ ಜಂಕ್ಷನ್‌ ಗ್ರೇಡ್‌ ಸೆಪರೇಟರ್‌ ಕಾಮಗಾರಿ ವರ್ಷಗಳಿಂದ ಸ್ಥಗಿತಗೊಂಡಿದ್ದು ಕಂಬಿಗಳು ತುಕ್ಕು ಹಿಡಿದಿವೆ ಕಾಮಗಾರಿ ಸ್ಥಳದಲ್ಲಿ ಗಿಡಗಳು ಬೆಳೆದಿವೆ. ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್‌ ಪಿ.ಎಸ್

ಕೆಲಸ ನಿಧಾನವಾಗಿ ಆಗುತ್ತೆ: ಆರಿಫ್‌

‘ಎಚ್‌ಎಂಟಿ ರಸ್ತೆ– ಪೈಪ್‌ಲೈನ್‌ ರಸ್ತೆ ಜಂಕ್ಷನ್‌ ಗ್ರೇಡ್‌ ಸೆಪರೇಟರ್‌ ಕಾಮಗಾರಿ ‘ಯುಟಿಲಿಟಿ ಶಿಫ್ಟಿಂಗ್’ನಿಂದ ತಡವಾಗಿವೆ. ಗ್ಯಾಸ್ ಪೈಪ್‌ಲೈನ್‌ ಮಾರ್ಗ ಬದಲಿಸಬೇಕಿರುವುದರಿಂದ ನಿಧಾನಗತಿಯಾಗಿದೆ. ರಕ್ಷಣಾ ಇಲಾಖೆಯಿಂದ ಜಮೀನು ತೆಗೆದುಕೊಳ್ಳುವುದು ತಡವಾಗಿದೆ. ಗುತ್ತಿಗೆದಾರರಿಗೆ ಹೆಚ್ಚಿನ ಸಮಯ ನೀಡಲಾಗಿದೆ. ಈಗಾಗಲೇ ನಾಲ್ಕು ವರ್ಷವಾಗಿದ್ದು ಇನ್ನೂ ತಡವಾಗಲಿದೆ’ ಎಂದು ಬಿಬಿಎಂಪಿ ರಾಜರಾಜೇಶ್ವರಿನಗರ ವಲಯದ ರಸ್ತೆ ಮೂಲಸೌಕರ್ಯದ ಎಂಜಿನಿಯರ್‌ ಆರಿಫ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT