ಬೆಂಗಳೂರು: ‘ಶಿವಕಾಶಿಯಿಂದ ಲಾರಿಯಲ್ಲಿ ತರಲಾಗಿದ್ದ ಪಟಾಕಿ ಬಾಕ್ಸ್ಗಳನ್ನು ತಮಿಳುನಾಡಿನ ಕಾರ್ಮಿಕರು ಗೋದಾಮಿನೊಳಗೆ ಸಾಗಿಸುತ್ತಿದ್ದರು. ಹೋಲ್ಸೇಲ್ ದರದಲ್ಲಿ ಪಟಾಕಿ ಖರೀದಿಸಲು ಕರ್ನಾಟಕದ ನಾಲ್ವರು ಮಳಿಗೆಗೆ ಬಂದಿದ್ದರು. ಏಕಾಏಕಿ ಬೆಂಕಿ ಹೊತ್ತಿಕೊಂಡು ಪಟಾಕಿಗಳು ಸಿಡಿದಿದ್ದರಿಂದ, ಇಡೀ ಮಳಿಗೆ ಬೆಂಕಿಗೆ ಆಹುತಿಯಾಯಿತು’

ಅತ್ತಿಬೆಲೆ ಗಡಿ ಪ್ರದೇಶದಲ್ಲಿರುವ ‘ಶ್ರೀ ಬಾಲಾಜಿ ಟ್ರೇಡರ್ಸ್’ ಪಟಾಕಿ ಮಳಿಗೆಯಲ್ಲಿ ಶನಿವಾರ ಸಂಭವಿಸಿದ್ದ ಬೆಂಕಿ ದುರಂತದ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಇದು.

‘ಈ ಪ್ರದೇಶದಲ್ಲಿ ಪಟಾಕಿ ಮಳಿಗೆಗಳು ಸಾಮಾನ್ಯ. ಆದರೆ, ಇಷ್ಟು ಪ್ರಮಾಣದಲ್ಲಿ ದುರಂತ ಕಂಡಿರಲಿಲ್ಲ’ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದರು.

ಪಟಾಕಿ ಮಳಿಗೆ ಎದುರಿನಲ್ಲಿರುವ ಹೊಗೆ ತಪಾಸಣೆ ಕೇಂದ್ರದ ರಮೇಶ್, ‘ಪಟಾಕಿ ಅಂಗಡಿಯಲ್ಲಿ ತಮಿಳುನಾಡಿನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಾಲೀಕ ನವೀನ್ ರೆಡ್ಡಿ ಮಳಿಗೆ ನಿರ್ವಹಣೆ ಮಾಡುತ್ತಿದ್ದರು. ಶನಿವಾರ 20ಕ್ಕೂ ಹೆಚ್ಚು ಮಂದಿ ಮಳಿಗೆಯೊಳಗೆ ಇದ್ದರು. ಮಧ್ಯಾಹ್ನ ಏಕಾಏಕಿ ಪಟಾಕಿ ಸದ್ದು ಕೇಳಿಸಿತ್ತು. ಹೊರಗೆ ಬಂದು ನೋಡಿದಾಗ, ಪಟಾಕಿ ಮಳಿಗೆಗೆ ಬೆಂಕಿ ಹೊತ್ತಿಕೊಂಡಿತ್ತು’ ಎಂದರು.

‘ದುರಂತದ ವೇಳೆ ಮಾಲೀಕ ನವೀನ್ ಹೊರಗೆ ಓಡಿಬಂದಿದ್ದರು. ಬೆಂಕಿ ಕಡಿಮೆ ಇದ್ದಿದ್ದರಿಂದ, ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣ ಪಡೆಯಲು ಪುನಃ ಒಳಗೆ ಹೋಗಿದ್ದರು. ಈ ವೇಳೆ ಅವರಿಗೂ ಬೆಂಕಿ ತಾಗಿತು. ಅದೇ ಸ್ಥಿತಿಯಲ್ಲೇ ಅವರು ಹೊರಗೆ ಓಡಿ ಬಂದರು. ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು’ ಎಂದು ತಿಳಿಸಿದರು.

‘ಸ್ಥಳೀಯ ಯುವಕರ ಗುಂಪು, ಮಳಿಗೆಯಲ್ಲಿದ್ದ ಕಾರ್ಮಿಕರನ್ನು ರಕ್ಷಿಸಲು ಮುಂದಾಗಿತ್ತು. ಆದರೆ, ಪಟಾಕಿಗಳು ಜೋರಾಗಿ ಸಿಡಿಯುತ್ತಿದ್ದವು. ಹತ್ತಿರ ಹೋಗಲು ಸಹ ಆಗಲಿಲ್ಲ. ಕೆಲ ನಿಮಿಷಗಳಲ್ಲಿ ದೊಡ್ಡ ದೊಡ್ಡ ಪಟಾಕಿಗಳು ಸಿಡಿಯಲಾರಂಭಿಸಿದವು. ಅವುಗಳಿಂದಾದ ಬೆಂಕಿಯಿಂದಾಗಿ ಸ್ಥಳೀಯರು ಭಯಪಟ್ಟು ಹತ್ತಿರ ಹೋಗಲಿಲ್ಲ’ ಎಂದು ಪರಿಸ್ಥಿತಿ ವಿವರಿಸಿದರು.

ಕೇಳಿಸದ ಕಾರ್ಮಿಕರ ಕೂಗು: ‘ಪಟಾಕಿ ತುಂಬಿದ್ದ ಲಾರಿ ಹಾಗೂ ಮಳಿಗೆ ಎದುರು ನಿಂತಿದ್ದ ಎರಡು ವಾಹನಗಳಿಗೆ ಬೆಂಕಿ ತಗುಲಿತ್ತು. ಪಟಾಕಿಗಳು ಸಿಡಿಯುತ್ತಲೇ ಇದ್ದವು. ಕೆಲ ನಿಮಿಷಗಳಲ್ಲಿ ಇಡೀ ಮಳಿಗೆಯಲ್ಲಿ ಬೆಂಕಿ ಹೊತ್ತಿ ಉರಿಯಿತು’ ಎಂದು ರಮೇಶ್ ಹೇಳಿದರು.

‘ಮಳಿಗೆಯಲ್ಲಿದ್ದ ನಾಲ್ವರು, ಹೊರಗೆ ಓಡಿ ಬಚಾವಾದರು. ಆದರೆ, ಇತರರು ಮಳಿಗೆಯೊಳಗೆ ಇದ್ದು ಸಜೀವ ದಹನವಾದರು. ಪಟಾಕಿ ಸದ್ದು ಜೋರಾಗಿದ್ದರಿಂದ, ಕಾರ್ಮಿಕರ ಕೂಗು ಯಾರಿಗೂ ಕೇಳಿಸಲಿಲ್ಲ. ಇದರಿಂದಾಗಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಲಿಲ್ಲ’ ಎಂದು ತಿಳಿಸಿದರು.

‘ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಕ್ರಮೇಣ ಬೆಂಕಿ ನಂದಿಸಿದರು. ಅಷ್ಟರಲ್ಲೇ ಇಡೀ ಮಳಿಗೆ ಪೂರ್ಣವಾಗಿ ಸುಟ್ಟು ಹೋಗಿತ್ತು. ಅಲ್ಲಲ್ಲಿ ಬಿದ್ದಿದ್ದ ಕಾರ್ಮಿಕರ ಮೃತದೇಹಗಳನ್ನು ಹೊರಗೆ ತೆಗೆದು ಸಮೀಪದ ಆಸ್ಪತ್ರೆಗೆ ಸಾಗಿಸಿದರು’ ಎಂದು ಹೇಳಿದರು.

ತಮಿಳುನಾಡಿನಿಂದ ಬಂದ ಕುಟುಂಬಸ್ಥರು: ‘ಮೃತರಲ್ಲಿ ಬಹುತೇಕರು, ತಮಿಳುನಾಡಿನ ನಿವಾಸಿಗಳು. ಪಟಾಕಿ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ತಮಿಳುನಾಡಿನಲ್ಲಿರುವ ಸಂಬಂಧಿಕರು ಸ್ಥಳಕ್ಕೆ ಬಂದರು. ಅವರ ಆಕ್ರಂದನ ಮುಗಿಲುಮುಟ್ಟಿತ್ತು’ ಎಂದು ರಮೇಶ್ ತಿಳಿಸಿದರು.

‘ಗೋದಾಮು ಅಕ್ರಮ’

‘ಪಟಾಕಿ ಮಳಿಗೆ ತೆರೆಯಲು ನಿಯಮಗಳಿವೆ. ಅವುಗಳನ್ನು ಉಲ್ಲಂಘಿಸಿ ಶ್ರೀ ಬಾಲಾಜಿ ಟ್ರೇಡರ್ಸ್ ಮಳಿಗೆ ತೆರೆದಿರುವ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸ್ಥಳೀಯ ಪೊಲೀಸ್ ಠಾಣೆ, ಅಗ್ನಿಶಾಮಕ ದಳದ ಅಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರ ಪಡೆದು ಜಿಲ್ಲಾಧಿಕಾರಿ ಮೂಲಕ ಅನುಮತಿ ಪಡೆಯಬೇಕು. ಆದರೆ, ಪಟಾಕಿ ಮಳಿಗೆ ಮಾಲೀಕರು ಅನುಮತಿ ಪಡೆದಿದ್ದಾರೆಯೇ ಅಥವಾ ಅಕ್ರಮವಾಗಿ ಮಳಿಗೆ ತೆರೆದಿದ್ದರೇ ಎಂಬುದು ಪರಿಶೀಲನೆಯಿಂದ ತಿಳಿಯಬೇಕಿದೆ’ ಎಂದು ಮಾಹಿತಿ ನೀಡಿದರು.

‘ಪಟಾಕಿ ಚೀಟಿ ನಡೆಸುತ್ತಿದ್ದ ನಾಲ್ವರು’

‘ಕರ್ನಾಟಕದ ನಾಲ್ವರು, ಪಟಾಕಿ ಚೀಟಿ ನಡೆಸುತ್ತಿದ್ದರು. ದಸರಾ ಹಬ್ಬ ಹತ್ತಿರ ಬಂದಿದ್ದರಿಂದ, ಚೀಟಿ ಪ್ರಕಾರ ಪಟಾಕಿ ತೆಗೆದುಕೊಂಡು ಹೋಗಲು ಟಾಟಾ ಏಸ್ ವಾಹನದಲ್ಲಿ ಮಳಿಗೆಗೆ ಬಂದಿದ್ದರು. ಅವರು ಸಹ ಮೃತಪಟ್ಟಿರುವ ಮಾಹಿತಿ ಇದೆ’ ಎಂದು ಸ್ಥಳೀಯರು ಹೇಳಿದರು.

‘ಗುರುತು ಸಿಗದ ಮೃತದೇಹಗಳು’

‘ದುರಂತ ಸ್ಥಳದಲ್ಲಿ ಸಿಕ್ಕ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನವರ ಮುಖಗಳು ಸುಟ್ಟಿದ್ದು, ಗುರುತು ಸಿಗುತ್ತಿಲ್ಲ. ಆಸ್ಪತ್ರೆ ಆವರಣದಲ್ಲಿ ಸಂಬಂಧಿಕರ ಗೋಳು ನೋಡಲಾಗುತ್ತಿಲ್ಲ’ ಎಂದು ಸ್ಥಳೀಯರು ಹೇಳಿದರು.

ಪೊಲೀಸರು, ‘ಮೃತರ ಹೆಸರುಗಳು ಸದ್ಯಕ್ಕೆ ಗೊತ್ತಾಗಿಲ್ಲ. ಕೆಲಸ ಮಾಡುತ್ತಿದ್ದ ಕಾರ್ಮಿಕರ ಪಟ್ಟಿ ಸಂಗ್ರಹಿಸಲಾಗುತ್ತಿದೆ. ಜೊತೆಗೆ, ಸಂಬಂಧಿಕರಿಂದಲೂ ಮಾಹಿತಿ ಪಡೆಯಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.