ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಉದ್ಯೋಗದ ಆಮಿಷವೊಡ್ಡಿ ₹23 ಲಕ್ಷ ವಂಚನೆ: ಆರು ಮಂದಿ ವಿರುದ್ಧ FIR

ಹಲಸೂರುಗೇಟ್‌ ಪೊಲೀಸ್‌ ಠಾಣೆಯಲ್ಲಿ ಆರು ಮಂದಿ ವಿರುದ್ಧ ಎಫ್‌ಐಆರ್‌
Published : 19 ಸೆಪ್ಟೆಂಬರ್ 2024, 16:07 IST
Last Updated : 19 ಸೆಪ್ಟೆಂಬರ್ 2024, 16:07 IST
ಫಾಲೋ ಮಾಡಿ
Comments

ಬೆಂಗಳೂರು: ಬೆಸ್ಕಾಂ, ಕೆಪಿಟಿಸಿಎಲ್‌ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ₹23 ಲಕ್ಷ ವಂಚಿಸಿದ್ದ ಆರೋಪದ ಅಡಿ ಹಲಸೂರುಗೇಟ್‌ ಪೊಲೀಸ್‌ ಠಾಣೆಯಲ್ಲಿ ಆರು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.‌

ಟಿ.ದಾಸರಹಳ್ಳಿಯ ಪ್ರವೀಣ್‌ ಎಂ. ಸೋಮನಕಟ್ಟಿ(30), ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ವಿಘ್ನೇಶ್‌ ಹೆಗಡೆ(44), ದಾಬಸ್‌ಪೇಟೆಯ ವೆಂಕಟೇಶಯ್ಯ, ಆರ್‌.ಟಿ. ನಗರದ ಶಿವಣ್ಣ, ತಿಪ್ಪಸಂದ್ರದ ಶ್ರೀನಿವಾಸ್(29), ಸಹಕಾರ ನಗರದ ರಜನೀಶ್(42) ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಉದ್ಯೋಗ ಆಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರ ನೀಡಿ ವಂಚನೆ ಮಾಡಿದ್ದಾರೆ. ಅಲ್ಲದೇ ಹೊರಗುತ್ತಿಗೆ ಕೆಲಸಕ್ಕೆ ಸೇರಿಸಿ, 18 ತಿಂಗಳ ನಂತರ ಕೆಲಸ ಕಾಯಂ ಆಗಲಿದೆಯೆಂದು ನಂಬಿಸಿ ವಂಚಿಸಿದ್ದಾರೆ’ ಎಂದು ಆರೋಪಿಸಿ ಮಾಧವನಗರ ಯಮುನಾಬಾಯಿ ರಸ್ತೆ ನಿವಾಸಿ ಲೋಹಿತ್‌ಗೌಡ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಲೋಹಿತ್‌ಗೌಡ ಅವರಿಗೆ 2021ರಲ್ಲಿ ಆರೋಪಿಗಳಾದ ಪ್ರವೀಣ್‌ ಹಾಗೂ ವಿಘ್ನೇಶ್ ಅವರು ಪರಿಚಯ ಆಗಿದ್ದರು. ನಂತರ, ದೂರುದಾರರನ್ನು ಇಬ್ಬರೂ ಆರೋಪಿಗಳು ಹೋಟೆಲ್‌ವೊಂದಕ್ಕೆ ಕರೆಸಿಕೊಂಡಿದ್ದರು. ಅಲ್ಲಿಗೆ ಮತ್ತೆ ಮೂವರು ಆರೋಪಿಗಳು ಬಂದಿದ್ದರು. ಆಗ ಬೆಸ್ಕಾಂ ಹಾಗೂ ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದರು’ ಎಂದು ಪೊಲೀಸರು ಹೇಳಿದರು.

ನಕಲಿ ಐ.ಡಿ ತೋರಿಸಿದ್ದ ಆರೋಪಿ: ‘ಆರೋಪಿ ಪ್ರವೀಣ್‌ ಎಂಬಾತ ತಾನು ಬೆಸ್ಕಾಂ ಉದ್ಯೋಗಿ ಎಂದು ಹೇಳಿಕೊಂಡಿದ್ದ. ವೆಂಕಟೇಶಯ್ಯ ಹಾಗೂ ಶಿವಣ್ಣ ಸಹ ರೈಲ್ವೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಶ್ರೀನಿವಾಸ್ ಬೆಸ್ಕಾಂನ ಮಾಪಕ ಓದುಗ (ಮೀಟರ್ ರೀಡರ್‌) ಎಂದು ಪರಿಚಯಿಸಿಕೊಂಡಿದ್ದ ಉದ್ಯೋಗ ಅಕಾಂಕ್ಷಿಗಳಿಗೆ ನಂಬಿಕೆ ಬರುವಂತೆ ಗುರುತಿನ ಚೀಟಿ ಸಹ ತೋರಿಸಿದ್ದರು. ಅದು ನಕಲಿ ಎಂಬುದು ನಂತರ ಗೊತ್ತಾಗಿತ್ತು. ರೈಲ್ವೆ, ಬೆಸ್ಕಾಂ, ಕೆಪಿಟಿಸಿಎಲ್‌, ಮೆಟ್ರೊ, ವಿಮಾನ ನಿಲ್ದಾಣ ಹಾಗೂ ನೀರಾವರಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹಲವರಿಗೆ ಆರೋಪಿಗಳು ನಂಬಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳ ಮಾತು ನಂಬಿದ ಲೋಹಿತ್‌ಗೌಡ ಅವರು ತಮಗೆ ಪರಿಚಯ ಇದ್ದವರಿಗೂ ಉದ್ಯೋಗದ ಬಗ್ಗೆ ಮಾಹಿತಿ ನೀಡಿದ್ದರು. ಉದ್ಯೋಗ ಆಕಾಂಕ್ಷಿಗಳು ₹23 ಲಕ್ಷ ನೀಡಿದ್ದರು. ನಂತರ, ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದು ಗೊತ್ತಾದ ಮೇಲೆ ಆಕಾಂಕ್ಷಿಗಳು ಪೊಲೀಸಗೆ ದೂರು ನೀಡಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT