ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ ನೀರು ನಿಲ್ಲುವ ರಸ್ತೆಗಳಲ್ಲಿ ಕೂಡಲೇ ದುರಸ್ತಿ ಕಾಮಗಾರಿ ನಡೆಸಿ: ಬಿಬಿಎಂಪಿ

Published 19 ಆಗಸ್ಟ್ 2024, 15:48 IST
Last Updated 19 ಆಗಸ್ಟ್ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಳೆ ನೀರು ನಿಲ್ಲುವ ಸ್ಥಳಗಳು ಹಾಗೂ ರಸ್ತೆಗಳನ್ನು ಸಮೀಕ್ಷೆ ಮಾಡಿ, ಕೂಡಲೇ ದುರಸ್ತಿ ಕಾಮಗಾರಿ ನಡೆಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

ವಲಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಮುಖ್ಯ ಆಯುಕ್ತರು, ಆಯಾ ವಲಯ ವ್ಯಾಪ್ತಿಯಲ್ಲಿ ‘ಬ್ಲಾಕೇಜ್’ ಸ್ಥಳಗಳನ್ನು ಪಟ್ಟಿ ಮಾಡಬೇಕು. ನೀರು ಸರಾಗವಾಗಿ ಹರಿದುಹೋಗದ ಸ್ಥಳಗಳಲ್ಲಿ ಮಣ್ಣು, ಕಸ-ಕಡ್ಡಿಗಳನ್ನು ತೆರವುಗೊಳಿಸಬೇಕು. ರಸ್ತೆಗಳಲ್ಲಿ ನೀರು ನಿಲ್ಲುವ ಸ್ಥಳಗಳಲ್ಲಿ ಚರಂಡಿಗೆ ನೀರು ಹರಿಯುವಂತೆ ಸ್ವಚ್ಛತೆ ಕೈಗೊಳ್ಳಬೇಕು. ಅಧಿಕಾರಿಗಳು ಸ್ಥಳಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿ, ಟ್ರ್ಯಾಕ್ಟರ್‌ಗಳನ್ನು ಬಳಸಿಕೊಂಡು ಹೂಳು ತೆರವುಗೊಳಿಸಬೇಕು. ಮಳೆಯಿಂದ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಸೂಚಿಸಿದರು.

ನಗರದ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿನ ಗುಂಡಿಗಳನ್ನು ಆದ್ಯತೆ ಮೇರೆಗೆ ಮುಚ್ಚಬೇಕು. ಇತರೆ ಪ್ರಮುಖ ರಸ್ತೆ ಹಾಗೂ ವಾರ್ಡ್‌ ರಸ್ತೆಗಳಲ್ಲೂ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯಬೇಕು. ರಸ್ತೆಯೇ ಹಾಳಾಗಿದ್ದರೆ ಅದನ್ನೂ ದುರಸ್ತಿ ಮಾಡಲು ವಲಯ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಗರದಲ್ಲಿ ಡೆಂಗಿ ಪ್ರಕರಣಗಳು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿವೆ. ಪ್ರತಿ ದಿನ ಸರಾಸರಿ 95 ಪ್ರಕರಣಗಳು ದಾಖಲಾಗುತ್ತಿವೆ. ಸಂಪೂರ್ಣ ನಿಯಂತ್ರಣಕ್ಕೆ ಆಯಾ ವಲಯ ವ್ಯಾಪ್ತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ್ ಕಲ್ಕೆರೆ, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ರಮೇಶ್, ರಮ್ಯಾ, ವಿನೋತ್ ಪ್ರಿಯಾ, ಕರೀಗೌಡ, ಸ್ನೇಹಲ್, ಗಿರೀಶ್, ವಲಯ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT