ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ: ಕಾರ್ಯಾದೇಶ ಒಬ್ಬರಿಗೆ, ಬಿಲ್‌ ಪಾವತಿ ಮತ್ತೊಬ್ಬರಿಗೆ!

ಘನತ್ಯಾಜ್ಯ ನಿರ್ವಹಣೆಯಲ್ಲಿ ಮಾಡದ ಕೆಲಸಕ್ಕೆ ಕೋಟ್ಯಂತರ ಪಾವತಿ
Published 1 ಜುಲೈ 2024, 19:30 IST
Last Updated 1 ಜುಲೈ 2024, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯಲ್ಲಿ ಘನತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿಗಾಗಿ ಹೊಸ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದರೂ, ಹಳೆ ಗುತ್ತಿಗೆದಾರರಿಗೆ ಸರಬರಾಜು ಆದೇಶ ನೀಡಿ, ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೊತ್ತದ ಬಿಲ್‌ ಪಾವತಿಸಿರುವುದು ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದೆ.

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಜಯನಗರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಕಚೇರಿಯಲ್ಲಿ ಒಬ್ಬರಿಗೆ ಕಾರ್ಯಾದೇಶ ನೀಡಿದ್ದು, ಮತ್ತೊಬ್ಬರಿಗೆ ಬಿಲ್‌ ಪಾವತಿ ಮಾಡಲಾಗಿದೆ. ಈ ಬಾಬ್ತಿನಲ್ಲೇ ₹2.95 ಕೋಟಿಯಷ್ಟು ಅಕ್ರಮವಾಗಿರುವುದು ಬಿಬಿಎಂಪಿ ಮುಖ್ಯ ಲೆಕ್ಕಪರಿಶೋಧಕರ 2021–22ನೇ ವಾರ್ಷಿಕ ವರದಿಯಲ್ಲಿ ಬಹಿರಂಗವಾಗಿದೆ.

ವಿಜಯನಗರ ವಿಭಾಗದಲ್ಲಿ ವಾರ್ಡ್‌ 132, 133, 157 ಮತ್ತು 158ರಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ, ಕಾರ್ಯಾದೇಶ ನೀಡಲಾಗಿದೆ. ಅವರು ಕೆಲಸ ಪ್ರಾರಂಭಿಸಿಲ್ಲ ಎಂದು ಎಇಇ ಹಳೆಯ ಗುತ್ತಿಗೆದಾರರಿಗೇ ‘ಸೂಚನಾ ಪತ್ರ’ ನೀಡಿದ್ದಾರೆ. ಕಾರ್ಯಾದೇಶಗಳಿಗೂ ಸೂಚನಾ ಪತ್ರದ ದಿನಾಂಕಗಳಿಗೂ ಎರಡರಿಂದ ಆರು ತಿಂಗಳ ಅಂತರವಿದೆ.

ಹೊಸ ಗುತ್ತಿಗೆದಾರರು ಹಳೆಯ ಗುತ್ತಿಗೆದಾರರಿಗಿಂತ ಶೇಕಡ 20ರಿಂದ ಶೇ 40ರಷ್ಟು ಕಡಿಮೆ ಮೊತ್ತಕ್ಕೆ ಗುತ್ತಿಗೆ ಪಡೆದಿದ್ದರು. ಆದರೂ ಹಳೆಯ ಗುತ್ತಿಗೆದಾರರಾದ ಬಿ ಕ್ಲೀನ್‌ ಬಿ ಹೆಲ್ತಿ, ವಿ.ಆರ್‌. ಎಂಟರ್‌ಪ್ರೈಸಸ್‌, ಪ್ರದೀಪ್‌ ಆರ್. ಎಂಟರ್‌ಪ್ರೈಸಸ್‌, ಸಂತೋಷ್‌ಕುಮಾರ್‌ ಎಂಟರ್‌ಪ್ರೈಸಸ್‌ ಅವರಿಗೆ, ಸರಬರಾಜು ಆದೇಶದ ಮೂಲಕ ತ್ಯಾಜ್ಯ ವಿಲೇವಾರಿ ಮಾಡಿಸಿ ₹1.69 ಕೋಟಿ ಪಾವತಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅನ್ನಪೂರ್ಣೇಶ್ವರಿ ಅಸೋಸಿಯೇಟ್ಸ್‌, ಶಿಶಿರ್‌ ಅಸೋಸಿಯೇಟ್ಸ್‌, ವಿಶ್ವಾಸ್‌ ಎಂಟರ್‌ಪ್ರೈಸಸ್‌ ಅವರಿಗೆ ಘನತ್ಯಾಜ್ಯ ಸಂಗ್ರಹ– ಸಾಗಣೆಗೆ ಕಾರ್ಯಾದೇಶ ನೀಡಲಾಗಿತ್ತು. ಈ ಮೂಲ ಗುತ್ತಿಗೆದಾರರನ್ನು ಹೊರತುಪಡಿಸಿ, ಲಕ್ಷ್ಮೀ ಎಂಟರ್‌ಪ್ರೈಸಸ್‌, ಉದಯ್‌ ಕಿರಣ್‌ ಎಂಟರ್‌ಪ್ರೈಸಸ್‌, ವರ್ಷಿಣಿ ಕಿರಣ್‌ ಎಂಟರ್‌ಪ್ರೈಸಸ್‌ ಅವರಿಗೆ ₹1.25 ಕೋಟಿ ಪಾವತಿಸಲಾಗಿದೆ ಎಂಬುದೂ ವರದಿಯಲ್ಲಿದೆ.

ದಾಸರಹಳ್ಳಿ ವಲಯದ ಘನತ್ಯಾಜ್ಯ ನಿರ್ವಹಣೆ ವಿಭಾಗದ ಎಇಇ ಕಚೇರಿಯಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ಹೆಚ್ಚುವರಿ ಸಿಬ್ಬಂದಿ ಹಾಜರಾತಿಯ ಮಾಹಿತಿ ನೀಡಿ ಶೇ 16ರಷ್ಟು ಅಂದರೆ ₹1.71 ಕೋಟಿ ಪಾವತಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿ ಹಾಜರಾತಿ, ವೇತನ ಪಾವತಿಯ ದಾಖಲೆಗಳು ಲಭ್ಯವಾಗಿಲ್ಲದ್ದರಿಂದ ಲೆಕ್ಕಪರಿಶೋಧಕರು ಈ ಮೊತ್ತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಘನತ್ಯಾಜ್ಯ ನಿರ್ವಹಣೆ: ಎಲ್ಲೆಲ್ಲಿ ಅಕ್ರಮ?

* ಯಲಹಂಕ ವಿಭಾಗದ ಎಇಇ ಕಚೇರಿಯಲ್ಲಿ ಮಾನವ ಸಂಪನ್ಮೂಲ ಹಾಗೂ ಯಂತ್ರೋಪಕರಣಗಳ ಸರಬರಾಜಿಗೆ 13 ಡಿ.ಸಿ. ಬಿಲ್‌ಗಳ ಮೂಲಕ ₹ 25.22 ಲಕ್ಷ ಪಾವತಿಸಿದ್ದು ಕಾಮಗಾರಿ ಕೈಗೊಂಡಿರುವ ಬಗ್ಗೆ ದಾಖಲೆಗಳಿಲ್ಲ.

* ದಾಸರಹಳ್ಳಿ ವಲಯದ ಎಇಇ ಕಚೇರಿಯಲ್ಲಿ ವಾಹನ ಇಂಧನ ವೆಚ್ಚ ನಿರ್ವಹಣೆಯಲ್ಲಿ ನ್ಯೂನತೆಗಳಿವೆ. ಟೆಂಡರ್ ಆಹ್ವಾನಿಸದೆ ಕೆಟಿಪಿಪಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಕೊಟೇಷನ್‌ ಮೂಲಕ ₹16.48 ಲಕ್ಷ ಪಾವತಿಸಲಾಗಿದೆ.

* ದಾಸರಹಳ್ಳಿ ವಲಯದ ಎಇಇ ಕಚೇರಿಯಲ್ಲಿ ವಿದ್ಯುತ್‌ ಬೇಡಿಕೆಯನ್ನು ಸರಿಯಾಗಿ ಅಂದಾಜಿಸದೆ 500 ಕೆವಿಎ ಹೈಟೆನ್ಷನ್‌ ಲೈನ್‌ ಸಂಪರ್ಕ ಪಡೆಯಲಾಗಿದೆ. ಶೇ 85ರಷ್ಟೂ ಬಳಕೆ ಕಂಡುಬಂದಿಲ್ಲ. ಇದರಿಂದ ಅನಗತ್ಯವಾಗಿ ₹11.51 ಲಕ್ಷ ವೆಚ್ಚವಾಗಿದೆ.

* ಯಲಹಂಕ ವಿಭಾಗದ ಎಇಇ ಕಚೇರಿಯಲ್ಲಿ ಘನತ್ಯಾಜ್ಯ ನಿರ್ವಹಣೆ ವಿಲೇವಾರಿಗಾಗಿ ಲಾರಿಗಳನ್ನು ಕಾಂಪ್ಯಾಕ್ಟರ್‌ ವಾಹನಗಳಿಗೆ ಬದಲಿಸಿಕೊಳ್ಳುವ ಆದೇಶವಿದ್ದರೂ ಟಿಪ್ಪರ್‌ ಲಾರಿಗಳಿಗೇ ₹ 9.85 ಲಕ್ಷ ಪಾವತಿಸಲಾಗಿದೆ.

* ಚಿಕ್ಕಪೇಟೆ ವಿಭಾಗದ ಎಇಇ ಕಚೇರಿಯಲ್ಲಿ ಒಂದು ಲೀಟರ್‌ ಇಂಧನಕ್ಕೆ ಮೂರು ಕಿ.ಮೀ ಮೈಲೇಜ್‌ ನೀಡುವ ವಾಹನ ಸಂಚರಿಸಿದ ಹಾಗೂ ಇಂಧನ ಪ್ರಮಾಣವನ್ನು ಲಾಗ್‌ ಪುಸ್ತಕದಲ್ಲಿ ಕಡಿಮೆ ತೋರಿಸಲಾಗಿದೆ. ವಿಭಾಗದ ಮುಖ್ಯಸ್ಥರು ಯಾವುದೇ ಆಕ್ಷೇಪ ವ್ಯಕ್ತಪಡಿಸದೆ ಬಿಲ್‌ ಪಾವತಿಸಿದ್ದು ₹6.61 ಲಕ್ಷ ನಷ್ಟ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT