ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ: ಆಕಾಶ್‌, ಖುಷಿ ಪ್ರಮುಖ ಆಕರ್ಷಣೆ

Published 3 ಜುಲೈ 2024, 18:41 IST
Last Updated 3 ಜುಲೈ 2024, 18:41 IST
ಅಕ್ಷರ ಗಾತ್ರ

ಮಂಗಳೂರು: ಬೆಂಗಳೂರಿನ ವಿನ್ನರ್ಸ್ ಕ್ಲೌಡ್‌ ಟೇಬಲ್ ಟೆನಿಸ್ ಸೆಂಟರ್‌ನ (ಡಬ್ಲ್ಯುಸಿಟಿಟಿಸಿ) ಆಕಾಶ್‌ ಕೆ.ಜೆ ಮತ್ತು ಅಕಾಡೆಮಿಯ ಖುಷಿ ವಿ ಅವರು ಇಲ್ಲಿ ಗುರುವಾರದಿಂದ ನಡೆಯಲಿರುವ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಮುಖ ಆಕರ್ಷಣೆ.

ಆಕಾಶ್ ಮತ್ತು ಖುಷಿ ಕಳೆದ ತಿಂಗಳಾಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆದ ಈ ಋತುವಿನ ಮೊದಲ ರಾಜ್ಯ ರ‍್ಯಾಂಕಿಂಗ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಇದೇ 7ರ ವರೆಗೆ ಈ ಋತುವಿನ ಎರಡನೇ ರಾಜ್ಯ ರ‍್ಯಾಂಕಿಂಗ್ ಟೂರ್ನಿ ನಡೆಯಲಿದೆ.

ಆಕಾಶ್ ಮತ್ತು ಖುಷಿ ಅವರಿಗೆ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಮೂರನೇ ಶ್ರೇಯಾಂಕ ನೀಡಲಾಗಿದೆ. ಅನಿರ್ಬನ್ ರಾಯ್‌ ಚೌಧರಿ ಮತ್ತು ದೇಶ್ನಾ ಎಂ.ವಂಶಿಕಾ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಮೊದಲ ಶ್ರೇಯಾಂಕ ಗಳಿಸಿದ್ದಾರೆ. 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರೋಹಿತ್ ಕೆ ಮತ್ತು ವರುಣ್ ಕಶ್ಯಪ್‌ ಅವರಿಗೆ ಮೊದಲ ಮತ್ತು ಎರಡನೇ ಶ್ರೇಯಾಂಕ, ಇದೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ತೃಪ್ತಿ ಪುರೋಹಿತ್ ಮತ್ತು ಸಹನಾ ಮೂರ್ತಿ ಮೊದಲ ಎರಡು ಶ್ರೇಯಾಂಕ ಹೊಂದಿದ್ದಾರೆ. ತೇಶುಬ್ ದಿನೇಶ್ ಮತ್ತು ವಿಭಾಸ್ ವಿ.ಜಿ 17 ವರ್ಷದೊಳಗಿನ ಬಾಲಕರ ವಿಭಾಗ, ನೀತಿ ಅಗರವಾಲ್‌ ಮತ್ತು ತನಿಷ್ಕಾ ಕಾಲಭೈರವ್ ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ ಮೊದಲ ಎರಡು ಶ್ರೇಯಾಂಕದಲ್ಲಿದ್ದಾರೆ.

ಅಂತರರಾಷ್ಟ್ರೀಯ ಆಟಗಾರ ಆಕಾಶ್ 17 ಮತ್ತು 19 ವರ್ಷದೊಳಗಿನವರ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ನಂತರ ಈಗ ಪುರುಷರ ವಿಭಾಗದಲ್ಲೂ ಮಿಂಚುತ್ತಿದ್ದರೆ. ಮೊದಲ ರ‍್ಯಾಂಕಿಂಗ್ ಟೂರ್ನಿಯ ಫೈನಲ್‌ನಲ್ಲಿ ಅವರ ವಿರುದ್ಧ ಹೋರಾಡಿ ಸೋತಿದ್ದ ಯಶವಂತ ಪಿ ಕೂಡ ಮಂಗಳೂರು ಟೂರ್ನಿಯಲ್ಲಿ ಆಡುತ್ತಿದ್ದಾರೆ. ಅವರೊಂದಿಗೆ ಕಲೈವಣ್ಣನ್ ಕೂಡ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿದ್ದಾರೆ. ಬೆಂಗಳೂರು ಟೂರ್ನಿಯಲ್ಲಿ ಅವರು ಸೆಮಿಫೈನಲ್‌ನಲ್ಲಿ ಸೋತಿದ್ದರು. 

ದೇಶ್ನಾ, ತೃಪ್ತಿ ಸವಾಲೊಡ್ಡುವ ನಿರೀಕ್ಷೆ

ಅಂತರರಾಷ್ಟ್ರೀಯ ಆಟಗಾರ್ತಿಯರಾದ ಖುಷಿ ಮತ್ತು ಅನರ್ಘ್ಯ ಮಂಜುನಾಥ್ ಮಹಿಳಾ ವಿಭಾಗದ ಪ್ರಮುಖರು. ಮೊದಲ ರ‍್ಯಾಂಕಿಂಗ್ ಟೂರ್ನಿಯ ಪ್ರಶಸ್ತಿ ಸುತ್ತಿನಲ್ಲಿ ಇವರಿಬ್ಬರು ಮುಖಾಮುಖಿಯಾಗಿದ್ದರು. 7 ಗೇಮ್‌ಗಳ ಜಿದ್ದಾಜಿದ್ದಿಯ ಹೋರಾಟದಲ್ಲಿ ಖುಷಿ ಜಯ ಗಳಿಸಿದ್ದರು. ದೇಶ್ನಾ ವಂಶಿಕಾ ಮತ್ತು ತೃಪ್ತಿ ಪುರೋಹಿತ್ ಕೂಡ ಈ ವಿಭಾಗದಲ್ಲಿ ಪ್ರಮುಖರಿಗೆ ಸವಾಲೊಡ್ಡಲುವ ನಿರೀಕ್ಷೆ ಇದೆ.

ಬೆಂಗಳೂರು ಟೂರ್ನಿಯ 19 ವರ್ಷದೊಳಗಿನ ಬಾಲಕಿಯರ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದರೂ ಮಂಗಳೂರಿನಲ್ಲಿ ಒಂದನೇ ಶ್ರೇಯಾಂಕ ಗಳಿಸಲು ತೃಪ್ತಿ ಪುರೋಹಿತ್ ಯಶಸ್ವಿಯಾಗಿದ್ದಾರೆ. ಸಹನಾ ಮೂರ್ತಿ, ಹಿಮಾಂಶಿ ಮುಂತಾದವರ ನಡುವೆ ಅವರಿಂದ ‘ತೃಪ್ತಿ’ಕರ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ ಸಂಘಟಕರು.

ಪುರುಷ ಮತ್ತು ಮಹಿಳೆಯರ ವಿಭಾಗ, 11, 13, 15, 17, 19 ವರ್ಷದೊಳಗಿನವರ ವಿಭಾಗ, ನಾನ್ ಮೆಡಲಿಸ್ಟ್ ಮತ್ತು ಕೆಡೆಟ್‌ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ. ಸ್ಥಳೀಯ ಟೇಬಲ್ ಟೆನಿಸ್‌ ಪಟುಗಳ ಪೈಕಿ ಮಿಂಚುತ್ತಿರುವ ತ್ರಿಶಾ ಕರ್ಕೇರ ಮತ್ತು ಏಂಜಲಿನ್ 13 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ, ಅಥರ್ವ ನವರಂಗೆ 15 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಮತ್ತು ಪ್ರೇಕ್ಷಾ ತಿಲಾವತ್ 17 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT