ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಹಾರಕ್ಕಾಗಿ ನಕಲಿ ದಾಖಲೆ ಸೃಷ್ಟಿ: ಅಧಿಕಾರಿಗಳು ಸೇರಿ 19 ಮಂದಿ ವಿರುದ್ಧ FIR

₹70 ಕೋಟಿ ಮೌಲ್ಯದ ಆಸ್ತಿಗೆ ಪರಿಹಾರ ಪಡೆಯಲು ಯತ್ನ ಪ್ರಕರಣ
Published : 5 ಅಕ್ಟೋಬರ್ 2024, 23:47 IST
Last Updated : 5 ಅಕ್ಟೋಬರ್ 2024, 23:47 IST
ಫಾಲೋ ಮಾಡಿ
Comments

ಬೆಂಗಳೂರು: ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ(ಬಿಡಿಎ) ₹70 ಕೋಟಿ ಮೌಲ್ಯದ ಆಸ್ತಿಗೆ ಪರಿಹಾರ ಪಡೆಯಲು ಯತ್ನಿಸಿದ ಆರೋಪದ ಅಡಿ ಬಿಡಿಎ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 19 ಮಂದಿ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಚಲ್ಲಘಟ್ಟದ ನಿವಾಸಿ ಪುಟ್ಟಮ್ಮ, ಗಂಗಮ್ಮ, ನಾಗರಾಜ್​​, ಲಕ್ಷ್ಮಮ್ಮ, ಶ್ರೀನಿವಾಸ್, ಸಂತೋಷ್​​, ರವಿಕುಮಾರ್​, ಭರತ್​​, ಸುನಿತಾ, ಆಶಾ, ಸ್ವಾಮಿ, ಉಮೇಶ್​​​ ಹಾಗೂ ಬಿಡಿಎ ಭೂಸ್ವಾಧೀನ ಅಧಿಕಾರಿ ಸುಧಾ, ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿ ಶಿವಣ್ಣ, ಬಿಡಿಎ ಸರ್ವೇಯರ್‌ ರವಿಪ್ರಕಾಶ್, ಕೆ.ಜಿ.ರಸ್ತೆ ಕಚೇರಿಯ ವಿಶೇಷ ತಹಶೀಲ್ದಾರ್‌, ಕಂದಾಯ ಇಲಾಖೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಇತರೆ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬಿಡಿಎ ವಿಚಕ್ಷಣಾ ದಳದ ಡಿವೈಎಸ್‌ಪಿ ಎಂ.ಮಲ್ಲೇಶ್​​ ಅವರು ನೀಡಿದ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

‘ಎಲ್ಲ ಆರೋಪಿಗಳು ಸೇರಿ ಚಲ್ಲಘಟ್ಟದ ಸರ್ವೇ ನಂ.13 ಹಾಗೂ 58ರಲ್ಲಿನ 6 ಎಕರೆಗೆ ನಕಲಿ ದಾಖಲೆ ಸೃಷ್ಟಿಸಿದ್ದರು. ಜಮೀನಿನ ಮೂಲ ಮಾಲೀಕ ಮೂಡ್ಲಪ್ಪ ಅವರಿಗೂ ಆರೋಪಿಗಳಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಅಧಿಕಾರಿಗಳ ಜತೆಗೆ ಶಾಮೀಲಾಗಿ ಕಂದಾಯ ಇಲಾಖೆಯಿಂದ ನಕಲಿ ದಾಖಲೆ ಪಡೆದುಕೊಳ್ಳಲಾಗಿತ್ತು. ನಕಲಿ ದಾಖಲೆಗಳನ್ನು ಬಿಡಿಎಗೆ ಸಲ್ಲಿಸಿ, ಆಸ್ತಿಯ ಮಾಲೀಕರು ತಾವೇ ಎಂದು ಹೇಳಿಕೊಂಡು ₹70 ಕೋಟಿ ಮೌಲ್ಯದ ಆಸ್ತಿಗೆ ಪರಿಹಾರ ಕೋರಿದ್ದರು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಆಸ್ತಿಯನ್ನು ಪರಿಶೀಲಿಸಿ ವರದಿ ನೀಡಲು ನೇಮಕವಾಗಿದ್ದ ಬಿಡಿಎ ವಿಶೇಷ ಭೂಸ್ವಾಧೀನ ಅಧಿಕಾರಿ ಸುಧಾ, ಸರ್ವೇಯರ್​ ಪಿ.ಎನ್.ರವಿಪ್ರಕಾಶ್ ಅವರು ಪರಿಶೀಲನೆ ನಡೆಸದೇ ಆಸ್ತಿಗೆ ಸಂಬಂಧವಿಲ್ಲದ ವ್ಯಕ್ತಿ ಉಮೇಶ್ ಅವರು ನೀಡಿದ್ದ ನಕಲಿ ದಾಖಲೆ ಆಧರಿಸಿ ವರದಿ ಸಿದ್ಧಪಡಿಸಿ, ಬಿಡಿಎಗೆ ತಪ್ಪು ಮಾಹಿತಿ ನೀಡಿದ್ದರು’ ಎಂದು ಉಲ್ಲೇಖಿಸಲಾಗಿದೆ.

‘ಆಶ್ರಯ ಯೋಜನೆ’ಗೆ ಕಾಯ್ದಿರಿಸಿರುವ ಜಮೀನು ಆಗಿದ್ದರೂ ರವಿಪ್ರಕಾಶ್ ಮತ್ತು ಸುಧಾ ಅವರು ಭೂಪರಿಹಾರಕ್ಕೆ ಅರ್ಹವಾಗಿರುವ ಜಮೀನು ಎಂದು ಸುಳ್ಳು ನಕಾಶೆ ತಯಾರಿಸಿದ್ದರು’ ಎಂದು ವಿವರಿಸಲಾಗಿದೆ.

ಪ್ರಾಥಮಿಕ ವಿಚಾರಣೆ
ಈ ಅಕ್ರಮದ ಸಂಬಂಧ ಗೋವಿಂದರಾಜು ಎಂಬವರು ಬಿಡಿಎಗೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಾಥಮಿಕ ವಿಚಾರಣೆ ಹಾಗೂ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಲಾಗಿತ್ತು. ತಜ್ಞರು ವರದಿ ನೀಡಿದ್ದು ವರದಿಗಳಲ್ಲಿ ಆರೋಪಿಗಳು ಕೃತ್ಯದಲ್ಲಿ ಭಾಗಿ ಆಗಿರುವುದು ಪತ್ತೆಯಾಗಿ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ದಕ್ಷಿಣ ಉಪ ವಿಭಾಗದ ಉಪ ವಿಭಾಗಾಧಿಕಾರಿ ಶಿವಣ್ಣ ಅವರು ಆರೋಪಿಗಳು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸದೇ 2021ರ ಜ.19ರಂದು ಪುಟ್ಟಮ್ಮ ಹೆಸರಿಗೆ ಖಾತೆ ಬದಲಾವಣೆ ಮಾಡಲು ಬೆಂಗಳೂರು ದಕ್ಷಿಣ ತಾಲ್ಲೂಕು ವಿಶೇಷ ತಹಶೀಲ್ದಾರ್‌ಗೆ ಆದೇಶ ನೀಡಿ ಕೃತ್ಯದಲ್ಲಿ ಭಾಗಿ ಆಗಿದ್ದಾರೆ’ ಎಂದು ಎಫ್‌ಐಆರ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

‘ಆಸ್ತಿಯ ಮಾಲೀಕ ಮೂಡ್ಲಪ್ಪ ಅಲಿಯಾಸ್ ಮೂಡ್ಲಯ್ಯ ಅವರು 1976ರಲ್ಲಿ ನಿಧನರಾಗಿದ್ದಾರೆ. 1992ರಲ್ಲಿ ಆಸ್ತಿಯ ಪೋಡಿ ಆಗಿದೆ. 2019–2020ರಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಆರೋಪಿಗಳು ‘ರಿಲೀಸ್ ಡೀಡ್’ ಮಾಡಿಕೊಂಡಿದ್ದಾರೆ. ಪುಟ್ಟಮ್ಮ ಹೆಸರಿಗೆ 57,498 ಚದರ ಅಡಿಗಳಿಗೆ ಭೂಪರಿಹಾರ ಮಂಜೂರಾತಿಗೆ ದಾಖಲೆಗಳ ಸಲ್ಲಿಕೆ ಆಗಿವೆ. ಆದರೆ, ಪರಿಹಾರ ಬಿಡುಗಡೆ ಆಗಿಲ್ಲ. ಹೀಗಾಗಿ, ವಂಚನೆ ಮಾಡಿದ ಖಾಸಗಿ ವ್ಯಕ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT