ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡದ ದುರಾಭಿಮಾನವೂ ಮತಾಂಧತೆ: ಕ್ಯಾ.ಗೋಪಿನಾಥ್‌

Published : 8 ಸೆಪ್ಟೆಂಬರ್ 2024, 11:11 IST
Last Updated : 8 ಸೆಪ್ಟೆಂಬರ್ 2024, 11:11 IST
ಫಾಲೋ ಮಾಡಿ
Comments

ಬೆಂಗಳೂರು: ‘ಕನ್ನಡ, ಕನ್ನಡಿಗ ಎಂದು ಅತಿಯಾದ ಅಂಧಾಭಿಮಾನ ಹೊಂದುವುದು ಕೂಡ ಒಂದು ರೀತಿಯ ಮತಾಂಧತೆ’ ಎಂದು ಉದ್ಯಮಿ ಕ್ಯಾ. ಜಿ.ಆರ್‌. ಗೋಪಿನಾಥ್‌ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ‘ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಶಿವಸೇನೆ ತರಹ ನಾವು ಆಗಬಾರದು. ಅವರು ಮರಾಠೇತರರ ಮೇಲೆ ಮಾಡಿದ ದಂಗೆ ಇಲ್ಲಿ ಮಾಡಬಾರದು. ಭಾಷಾ ಮೀಸಲಾತಿಯಿಂದ ಭ್ರಷ್ಟಾಚಾರ ಹೆಚ್ಚಳಿದೆ. ಕನ್ನಡಿಗರಿಗೇ ಮೊದಲ ಆದ್ಯತೆಗಳಿವೆ. ಆದರೆ, ಅರ್ಹರು ಬಾರದೇ ಇದ್ದಾಗ ಉದ್ಯೋಗ ಖಾಲಿ ಬಿಡಲು ಆಗುವುದಿಲ್ಲ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಬಗ್ಗೆ ರಾಜ್ಯ ಸರ್ಕಾರ ಯಾರಲ್ಲಿಯೂ ಚರ್ಚೆ ಮಾಡದೇ ನಿರ್ಧಾರ ಕೈಗೊಂಡಿದೆ. ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ’ ಎಂದು ಸಲಹೆ ನೀಡಿದರು.’ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘2029ರ ಹೊತ್ತಿಗೆ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಕ್ಷೇತ್ರಗಳು 800ಕ್ಕೆ ಹೆಚ್ಚಳವಾಗಲಿದೆ. ಕರ್ನಾಟಕದಲ್ಲಿ 28 ಕ್ಷೇತ್ರಗಳಿದ್ದುದು 36ಕ್ಕೇರಲಿದೆ. ಅದೇ ಹೊತ್ತಿಗೆ ಉತ್ತರ ಪ್ರದೇಶದಲ್ಲಿ 80 ಇದ್ದಿದ್ದು 120 ಆಗಲಿದೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ 190 ಆಗಲಿದ್ದು, ಉತ್ತರ ಭಾರತದಲ್ಲಿ 610 ಕ್ಷೇತ್ರಗಳು ಇರಲಿವೆ. ಆಗ ಹಿಂದಿ ಪರ ಯಾವುದೇ ನಿರ್ಧಾರ ಕೈಗೊಂಡರೂ ನಾವು ಒಪ್ಪಿಕೊಳ್ಳಬೇಕಾದ ಸನ್ನಿವೇಶ ಉಂಟಾಗಲಿದೆ’ ಎಂದು ಎಚ್ಚರಿಸಿದರು.

ಹಿಂದಿ ಶೇ 66ರಷ್ಟು ವೇಗದಲ್ಲಿ ಬೆಳೆಯುತ್ತಿದೆ. ಕನ್ನಡ ಶೇ 3.7 ವೇಗದಲ್ಲಿ ಕುಂಟುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದೆ ಕನ್ನಡ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

‘ಪ್ರತಿಭೆಗೆ ಆದ್ಯತೆ ಎನ್ನುವುದು ಹುಳುಕುಗಳನ್ನು ಮುಚ್ಚಿಕೊಳ್ಳಲು ಅಡ್ಡ ಹಿಡಿಯುವ ಗುರಾಣಿ. ಕನ್ನಡಿಗರಲ್ಲಿ ಪ್ರತಿಭೆ ಇಲ್ವ? ಖಾಸಗಿ ಸಂಸ್ಥೆಗಳು ಪ್ರತಿಭೆಯನ್ನಷ್ಟೇ ನೋಡಿ ನೇಮಕಾತಿ ಮಾಡಿಕೊಳ್ಳುತ್ತಿರುವುದಲ್ಲ ಎಂಬುದು ಸುಖದೇವ್ ಥೋರಟ್‌ ನಡೆಸಿದ್ದ ಸ್ಟಿಂಗ್ ಆಪರೇಶನ್‌ನಲ್ಲಿ ಬಯಲಾಗಿದೆ. ಇಲ್ಲಿನ ನೆಲ, ಜಲ, ಸಂಪನ್ಮೂಲಗಳನ್ನು ಪಡೆದು ಸ್ಥಾಪಿಸುವ ಉದ್ಯಮಗಳಿಗೆ ಯಾವ ಕೌಶಲದ ಉದ್ಯೋಗಿಗಳು ಬೇಕೋ ಆ ಕೌಶಲವನ್ನು ಕಲಿಸುವ ಕೆಲಸ ಆಗಬೇಕು’ ಎಂದು ಬರಹಗಾರ್ತಿ ಯು.ಟಿ. ಆಯೇಶಾ ಪರ್ಝಾನ ಹೇಳಿದರು.

‘ಒಂದೇ ಭಾಷೆ, ಒಂದೇ ಜಾತಿ, ಸಮುದಾಯ ಎಂದು ಯಾವುದೇ ಸಂಸ್ಥೆಗಳಲ್ಲಿ ಇರಬಾರದು. ಎಲ್ಲ ಭಾಷೆ, ಸಮುದಾಯದವರು ಇರಬೇಕು. ಇಲ್ಲದೇ ಇದ್ದರೆ ಆವಿಷ್ಕಾರಗಳು ನಿಂತು ಹೋಗುತ್ತವೆ’ ಎಂದು ಇನ್‌ಸೈಟ್ಸ್‌ಐಎಎಸ್‌ ಸಂಸ್ಥಾಪಕ ವಿನಯಕುಮಾರ್‌ ಜಿ.ಬಿ. ತಿಳಿಸಿದರು.

‘ಕನ್ನಡಿಗರು ಎಂದು ಉದ್ಯೋಗ ಬಡವರಿಗೆ, ದಲಿತರಿಗೆ ಬುಡಕಟ್ಟು ಸಮುದಾಯಗಳಿಗೆ ಸಿಗುವುದಿಲ್ಲ. ವರ್ಗ ಮತ್ತು ಜಾತಿ ವ್ಯವಸ್ಥೆಯಲ್ಲಿ ಮೇಲಿರುವವರೇ ಉದ್ಯೋಗ ಪಡೆಯುತ್ತಾರೆ. ಈ ಎಲ್ಲ ಅಂಶಗಳು ಕನ್ನಡಿಗರಿಗೆ ಮೀಸಲಾತಿಯಲ್ಲಿ ಒಳಗೊಳ್ಳದೇ ಇದ್ದರೆ ಈ ಮೀಸಲಾತಿಯೇ ಬಾಲಿಶ’ ಎಂದು ಪ್ರಾಧ್ಯಾಪಕ ಸಿ.ಜಿ. ಲಕ್ಷ್ಮೀಪತಿ ಪ್ರತಿಪಾದಿಸಿದರು.

‘ಭಾಷಾವಾರು ಪ್ರಾಂತ್ಯಗಳಾದ ಮೇಲೆ ಭಾಷಾವಾರು ಪ್ರಾತಿನಿಧ್ಯ ಕೇಳುವುದು ತಪ್ಪಲ್ಲ. ಉದ್ಯೋಗಕ್ಕಾಗಿ ಜರ್ಮನ್‌ ಮತ್ತಿತರ ದೇಶಗಳಿಗೆ ಹೋಗಬೇಕಿದ್ದರೆ ಹೇಗೆ ಆಯಾ ದೇಶಗಳ ಭಾಷೆ ಕಲಿಯಬೇಕೋ, ಹಾಗೆಯೇ ಉದ್ಯೋಗಕ್ಕಾಗಿ ಕರ್ನಾಟಕಕ್ಕೆ ಬರುವವರು 6 ತಿಂಗಳು ಕನ್ನಡ ಕಲಿತು ಬರಬೇಕು. ಕನ್ನಡಿಗರಿಗೆ ಉದ್ಯೋಗ ನೀಡುವವರಿಗೆ ಸರ್ಕಾರವು ಪ್ರೋತ್ಸಾಹವಾಗಿ ಕೊಡುಗೆಗಳನ್ನು ನೀಡಬೇಕು’ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ ಗಿರೀಶ್‌ ಕಾರ್ಗದ್ದೆ ಸಲಹೆ ನೀಡಿದರು.

ಸಮನ್ವಯಕಾರರಾಗಿ ನಾಟಕಕಾರ ಜಯರಾಮ್‌ ರಾಯಪುರ ಕಾರ್ಯನಿರ್ವಹಿಸಿದರು. ಚಿಂತನಶೀಲ ಸಮಾಜಮುಖಿ ವಿಶೇಷ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT