ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆ.27ರೊಳಗೆ ಇಲಾಖೆ ವಿಚಾರಣೆ ಆರಂಭಿಸಿ: ಬಿಬಿಎಂಪಿ

2008ರಿಂದ ಗಾಂಧಿನಗರ, ಮಲ್ಲೇಶ್ವರ, ರಾಜರಾಜೇಶ್ವರಿನಗರ ವಲಯಗಳಲ್ಲಿ ಅವ್ಯವಹಾರ
Published : 19 ಸೆಪ್ಟೆಂಬರ್ 2024, 23:30 IST
Last Updated : 19 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಬಿಬಿಎಂಪಿಯ ಗಾಂಧಿನಗರ, ಮಲ್ಲೇಶ್ವರ ಹಾಗೂ ರಾಜರಾಜೇಶ್ವರಿನಗರ ವಲಯಗಳಲ್ಲಿ 2008ರಿಂದ ನಡೆದಿರುವ ಅಕ್ರಮದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದ ತನಿಖಾ ಸಮಿತಿ ವರದಿಯ ಶಿಫಾರಸಿನಂತೆ ಸೆಪ್ಟೆಂಬರ್‌ 27ರೊಳಗೆ ಇಲಾಖಾ ವಿಚಾರಣೆ ಆರಂಭಿಸಬೇಕು’ ಎಂದು ವಿಧಾನ ಪರಿಷತ್‌ನ ಸರ್ಕಾರಿ ಭರವಸೆಗಳ ಸಮಿತಿ ಬಿಬಿಎಂಪಿಗೆ ಸೂಚಿಸಿದೆ

‘ಮೂರು ವಲಯಗಳ ಎಂಜಿನಿಯರಿಂಗ್ ವಿಭಾಗಗಳೂ ಸೇರಿದಂತೆ 198 ವಾರ್ಡ್‌ಗಳಲ್ಲಿ 2008ರಿಂದ ನಡೆದಿದೆ ಎನ್ನಲಾದ ಅ್ಯವಹಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿಯನ್ನು ಸರ್ಕಾರ ರಚಿಸಿತ್ತು. ಸಮಿತಿಯು ಅಂತಿಮ ವರದಿಯನ್ನು ಸಲ್ಲಿಸಿದ್ದು, ವಿಧಾನ ಪರಿಷತ್‌ನ ಭರವಸೆಗಳ ಸಮಿತಿಯಲ್ಲಿ ಅದನ್ನು ವಿವರವಾಗಿ ಚರ್ಚಿಸಲಾಗಿದೆ. ಹೀಗಾಗಿ, ತನಿಖಾ ವರದಿಯನ್ನು ಆಧರಿಸಿ ಮುಂದಿನ 15 ದಿನಗಳೊಳಗಾಗಿ (ಸೆ.27) ಇಲಾಖಾ ವಿಚಾರಣೆಯನ್ನು ಆರಂಭಿಸಿ ವರದಿ ನೀಡಬೇಕು’ ಎಂದು ಸಮಿತಿ ಸೂಚಿಸಿದ್ದು, ‘ಇದರಂತೆ ಕ್ರಮವಾಗಬೇಕು’ ಎಂದು ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ಟಿಪ್ಪಣಿ ಮೂಲಕ ಆದೇಶಿಸಿದೆ.

‘ಪ್ರಸ್ತುತ ಸೇವೆಯಲ್ಲಿರುವ ಆಪಾದಿತರ ಪ್ರತ್ಯೇಕ ಪಟ್ಟಿ ಮಾಡಿ, ಅವರು ಪ್ರಸ್ತುತ ಯಾವ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಕೋಷ್ಠಕ ರೂಪದಲ್ಲಿ ಸಿದ್ಧಪಡಿಸಬೇಕು. ನಿವೃತ್ತರಾಗಿರುವವರು, ಮರಣ ಹೊಂದಿದವರ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಿ ಒದಗಿಸಬೇಕು’ ಎಂದು ಸೂಚಿಸಲಾಗಿದೆ.

ಪ್ರಕರಣವೇನು?: ಮಲ್ಲೇಶ್ವರ, ಗಾಂಧಿನಗರ ಹಾಗೂ ರಾಜರಾಜೇಶ್ವರಿನಗರಗಳಲ್ಲಿ 2008-09ನೇ ಸಾಲಿನಿಂದ 2011-12ರವರೆಗೆ ಕೈಗೊಂಡಿದ್ದ ₹1,539 ಕೋಟಿ ಮೊತ್ತದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಬಿಲ್‌ ರಿಜಿಸ್ಟರ್‌, ಅಳತೆ ಪುಸ್ತಕಗಳಿಗೆ ತಾಳೆ ಹೊಂದುತ್ತಿರಲಿಲ್ಲ. ಸುಮಾರು 10 ಸಾವಿರ ಕಾರ್ಯಾದೇಶಗಳು ನಕಲಿ ಎಂಬುದೂ ಕಂಡುಬಂದಿತ್ತು. ಅಂದಿನ ಆಯುಕ್ತ ಸಿದ್ದಯ್ಯ ಅವರು, ಈ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಬಿಎಂಟಿಎಫ್‌ಗೆ ಪ್ರಕರಣವನ್ನು 2011ರ ನವೆಂಬರ್‌ನಲ್ಲಿ ವಹಿಸಿದ್ದರು.

ನವೆಂಬರ್‌ 19ರಂದು ಬಿಎಂಟಿಎಫ್‌ ಪೊಲೀಸ್‌ ಠಾಣಾ ಕಚೇರಿ ಹಾಗೂ ಕಂಪ್ಯೂಟರ್‌ ಕೊಠಡಿಯಲ್ಲಿ ಬೆಂಕಿ ಅನಾಹುತವಾಗಿ, ಕಂಪ್ಯೂಟರ್ ಹಾಗೂ ಕಡತಗಳು ಭಸ್ಮವಾಗಿದ್ದವು. ಪಾಲಿಕೆ ಕೌನ್ಸಿಲ್‌, ವಿಧಾನಮಂಡಲಗಳಲ್ಲಿ ಈ ಬಗ್ಗೆ ಹೆಚ್ಚು ಆಕ್ರೋಶ ವ್ಯಕ್ತವಾದ ಮೇಲೆ ಸರ್ಕಾರ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿ 2017ರಲ್ಲಿ ಅಂತಿಮ ವರದಿ ಸಲ್ಲಿಸಿತ್ತು. 

 ಟಿ.ಎ ಶರವಣ
 ಟಿ.ಎ ಶರವಣ
ಎಚ್.ಎನ್.ನಾಗಮೋಹನ್ ದಾಸ್
ಎಚ್.ಎನ್.ನಾಗಮೋಹನ್ ದಾಸ್

ಸೆ.21ರೊಳಗೆ ಅಧಿಕಾರಿಗಳ ಪಟ್ಟಿ: ಶರವಣ ‘ನಾಗಮೋಹನ್‌ ದಾಸ್‌ ಅವರ ಸಮಿತಿ ವರದಿ ನೀಡಿ ಹಲವು ವರ್ಷಗಳಾಗಿದ್ದರೂ ಬಿಬಿಎಂಪಿ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅವರಿಗೆ 15 ದಿನಗಳಲ್ಲಿ ಇಲಾಖೆ ತನಿಖೆ ಆರಂಭಿಸುವಂತೆ ಸೆ.13ರಂದು ನಡೆದ ಭರವಸೆಗಳ ಸಮಿತಿ ಸಭೆಯಲ್ಲಿ ಸೂಚಿಸಲಾಗಿದೆ. ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲ ಎಂಜಿನಿಯರ್‌ಗಳ ಹಾಗೂ ಅಧಿಕಾರಿಗಳ ಪಟ್ಟಿಯನ್ನು ಸೆ.21ರೊಳಗೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ’ ಎಂದು ವಿಧಾನ ಪರಿಷತ್‌ನ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಟಿ.ಎ. ಶರವಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ವರದಿ ಒಪ್ಪಲಾಗಿದೆ ಕ್ರಮವಾಗಲಿ: ನಾಗಮೋಹನ್‌ ದಾಸ್‌ ‘ಮಲ್ಲೇಶ್ವರ ಗಾಂಧಿನಗರ ಹಾಗೂ ರಾಜರಾಜೇಶ್ವರಿನಗರ ವಲಯಗಳಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಕೂಲಂಕಷವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸರ್ಕಾರ ಈ ವರದಿಯನ್ನು ಒಪ್ಪಿ ನಿರ್ಣಯವನ್ನೂ ಮಾಡಿದೆ. ಆದರೆ ಕ್ರಮವಾಗಿರಲಿಲ್ಲ. ಈಗಲಾದರೂ ಆ ಬಗ್ಗೆ ಕ್ರಮವಾಗುತ್ತಿದ್ದರೆ ಅದು ಉತ್ತಮ ಬೆಳವಣಿಗೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT