ಬೆಂಗಳೂರು: ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ಕರ್ನಾಟಕವೂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಸತತ ನಾಲ್ಕು ದಿನಗಳ ಕಾಲ ನಡೆಸಿರುವ ಕಾರ್ಯಾಚರಣೆಯು ಕಾಂಗ್ರೆಸ್ ಪಾಳೆಯದಲ್ಲಿ ದಿಗಿಲು ಹುಟ್ಟಿಸಿದೆ. ₹ 94 ಕೋಟಿ ನಗದು ವಶಕ್ಕೆ ಪಡೆದಿರುವ ಪ್ರಕರಣವು ‘ಕೈ’ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ದಟ್ಟವಾಗುತ್ತಿದೆ.

ರಾಜ್ಯದ ವಿವಿಧೆಡೆ, ತೆಲಂಗಾಣ, ಆಂಧ್ರಪ್ರದೇಶ ಮತ್ತು ದೆಹಲಿಯಲ್ಲಿ ಐ.ಟಿ ಅಧಿಕಾರಿಗಳು ಗುರುವಾರ ಆರಂಭಿಸಿದ್ದ ಕಾರ್ಯಾಚರಣೆ ಭಾನುವಾರ ಅಂತ್ಯಗೊಂಡಿದೆ. ಭಾರಿ ಪ್ರಮಾಣದ ಅಘೋಷಿತ ನಗದು ದಾಸ್ತಾನು ಮಾಡಿದ್ದ ಗುತ್ತಿಗೆದಾರ ಪ್ರದೀಪ್, ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಕೃಷ್ಣಪ್ಪ, ಅವರ ನಿಕಟವರ್ತಿಯಾಗಿರುವ ವಾಸ್ತುಶಿಲ್ಪಿಯೊಬ್ಬರ ಜತೆಗೆ ನಂಟು ಹೊಂದಿರುವವರ ಪತ್ತೆಗೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಐ.ಟಿ ಅಧಿಕಾರಿಗಳ ಕಾರ್ಯಾಚರಣೆಯ ಬೆನ್ನಲ್ಲೇ ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ದೌಡಾಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ರಹಸ್ಯ ಸಭೆ ನಡೆಸಿದರು. ಪಕ್ಷದ ಇತರ ಮುಖಂಡರನ್ನು ಹೊರಗಿಟ್ಟು ಗೋಪ್ಯ ಸಭೆ ನಡೆಸಿದ ನಾಯಕರು, ಐ.ಟಿ ಅಧಿಕಾರಿಗಳು ನಾಲ್ಕು ದಿನಗಳಿಂದ ನಡೆಸಿದ ಕಾರ್ಯಾಚರಣೆ ಕುರಿತು ಸಮಾಲೋಚನೆ ನಡೆಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಮತ್ತು ವೇಣುಗೋಪಾಲ್ ಅವರ ಬೆಂಗಳೂರು ಭೇಟಿ ನಿಗದಿಯಾಗಿರಲಿಲ್ಲ. ಇಬ್ಬರೂ ದಿಢೀರ್ ರಾಜಧಾನಿಗೆ ದೌಡಾಯಿಸಿರುವುದಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯೇ ಕಾರಣ. ನಗದು ಪತ್ತೆ ಪ್ರಕರಣವನ್ನು ರಾಜ್ಯದ ಸರ್ಕಾರದ ಪ್ರಮುಖರಿಗೆ ತಳುಕು ಹಾಕುವ ಪ್ರಯತ್ನ ನಡೆದಲ್ಲಿ ಅದನ್ನು ಎದುರಿಸುವ ಕಾರ್ಯತಂತ್ರದ ಕುರಿತು ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಂಬಿಕಾಪತಿ ಅವರ ಮಗ ಪ್ರದೀಪ್ ಮನೆಯಲ್ಲಿ ₹ 42 ಕೋಟಿ ನಗದು ಪತ್ತೆಯಾಗಿತ್ತು. ಗುತ್ತಿಗೆದಾರ ಸಂತೋಷ್ ಕೃಷ್ಣಪ್ಪ ಮನೆಯಲ್ಲಿ ₹ 45 ಕೋಟಿ ಸಿಕ್ಕಿದೆ. ರಾಜ್ಯದ ಕೆಲವು ಪ್ರಭಾವಿ ರಾಜಕಾರಣಿಗಳ ನಿಕಟವರ್ತಿಗಳೇ ಈ ಇಬ್ಬರ ಮನೆಗಳಲ್ಲಿ ನಗದು ಇಟ್ಟಿದ್ದರು ಎಂಬ ಸಂಶಯ ಆದಾಯ ತೆರಿಗೆ ಅಧಿಕಾರಿಗಳಿಗೆ ಇದೆ. ರಾಜಕಾರಣಿಗಳ ಜತೆ ನಂಟು ಹೊಂದಿರುವ ಕೆಲವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಜಾರಿ ನಿರ್ದೇಶನಾಲಯವೂ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಿದ್ಧತೆಯಲ್ಲಿದೆ.

₹ 102 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಬೆಂಗಳೂರು: ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ಮತ್ತು ದೆಹಲಿಯ 55 ಸ್ಥಳಗಳ ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ದಾಳಿಮಾಡಿ ನಾಲ್ಕು ದಿನಗಳ ಕಾಲ ನಡೆಸಿದ ಶೋಧದಲ್ಲಿ ₹ 94 ಕೋಟಿ ನಗದು ಸೇರಿದಂತೆ ₹ 102 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಗುರುವಾರ ಬೆಳಿಗ್ಗೆಯಿಂದ ಆರಂಭವಾಗಿದ್ದ ಕಾರ್ಯಾಚರಣೆ ಭಾನುವಾರ ಪೂರ್ಣಗೊಂಡಿದೆ.

ಈ ಅವಧಿಯಲ್ಲಿ ಗುತ್ತಿಗೆದಾರರು ಅವರ ಸಹಚರರು ಮತ್ತು ಉದ್ಯಮಿಗಳಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಟಣೆ ತಿಳಿಸಿದೆ. ₹ 8 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳು ಹಾಗೂ ವಿದೇಶಿ ನಿರ್ಮಿತ 30 ದುಬಾರಿ ಬೆಲೆಯ ಕೈ ಗಡಿಯಾರಗಳು ವಶಪಡಿಸಿಕೊಂಡ ಆಸ್ತಿಗಳಲ್ಲಿ ಸೇರಿವೆ. ವಾಚ್ಗಳನ್ನು ಖಾಸಗಿ ಕಂಪನಿಯೊಂದರ ನೌಕರನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮಂಡಳಿ ಮಾಹಿತಿ ನೀಡಿದೆ. ‘ಗುತ್ತಿಗೆದಾರರು ನಕಲಿ ಖರೀದಿ ಮತ್ತು ವೆಚ್ಚದ ದಾಖಲೆಗಳನ್ನು ಸೃಷ್ಟಿಸಿ ಆದಾಯವನ್ನು ಕಡಿಮೆ ತೋರಿಸಿ ತೆರಿಗೆ ವಂಚಿಸುತ್ತಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಉಪ ಗುತ್ತಿಗೆದಾರರಿಂದ ಹೆಚ್ಚಿನ ದರದಲ್ಲಿ ಖರೀದಿ ಮಾಡಿದ ದಾಖಲೆಗಳನ್ನೂ ಸೃಷ್ಟಿಸಿರುವುದು ಪತ್ತೆಯಾಗಿದೆ’ ಎಂದು ತಿಳಿಸಿದೆ. ಕಾಮಗಾರಿಗಳ ಗುತ್ತಿಗೆಯನ್ನು ಬಳಸಿಕೊಂಡು ಅಪಾರ ಪ್ರಮಾಣದ ಲೆಕ್ಕಪತ್ರವಿಲ್ಲದ ನಗದನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಅಘೋಷಿತ ಆದಾಯವನ್ನು ಹೊಂದಲಾಗಿದೆ. ಸರಕುಗಳ ಸ್ವೀಕೃತಿಗೆ ಸಂಬಂಧಿಸಿದ ದಾಖಲೆಗಳಲ್ಲೂ ಅಕ್ರಮ ಪತ್ತೆಯಾಗಿದೆ. ದಾಖಲೆಯಲ್ಲಿರುವ ಖರೀದಿ ಪ್ರಮಾಣ ಮತ್ತು ಸಾಗಣೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಸಿಬಿಡಿಟಿ ಹೇಳಿದೆ.

ಕೆಲವು ಗುತ್ತಿಗೆದಾರರು ಉಪ ಗುತ್ತಿಗೆದಾರರ ಜತೆ ವಹಿವಾಟು ನಡೆಸಿದಂತೆ ಬೋಗಸ್ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಕೆಲವರು ಕಾಮಗಾರಿಯೇತರ ವೆಚ್ಚವನ್ನು ಲೆಕ್ಕಪತ್ರದಲ್ಲಿ ತೋರಿಸಿದ್ದಾರೆ. ‘ಸಂಪರ್ಕ’ ವೆಚ್ಚವನ್ನೂ ಲೆಕ್ಕಪತ್ರಗಳಲ್ಲಿ ಉಲ್ಲೇಖಿಸಿರುವುದು ಪತ್ತೆಯಾಗಿದೆ ಎಂದು ತಿಳಿಸಿದೆ. ಈ ಗುತ್ತಿಗೆದಾರರು ಉದ್ಯಮಿಗಳು ಮತ್ತು ಅವರ ಸಹಚರರು ಭಾರಿ ಪ್ರಮಾಣದ ನಗದು ವಹಿವಾಟನ್ನು ಅಘೋಷಿತವಾಗಿ ನಡೆಸಿರುವುದಕ್ಕೆ ದಾಖಲೆಗಳು ಸಿಕ್ಕಿವೆ. ಅಂತಹ ವಹಿವಾಟಿನ ಕುರಿತು ಲೆಕ್ಕಪತ್ರಗಳಲ್ಲಿ ಯಾವುದೇ ಉಲ್ಲೇಖವಿಲ್ಲ. ತೆರಿಗೆದಾರರು ಉಪ ಗುತ್ತಿಗೆದಾರರು ಮತ್ತು ಕೆಲವು ನಗದು ನಿರ್ವಾಹಕರ ಬಳಿ ಈ ರೀತಿಯ ಅಕ್ರಮಕ್ಕೆ ಸಾಕ್ಷ್ಯಗಳು ಲಭಸಿವೆ ಎಂದು ಮಾಹಿತಿ ನೀಡಿದೆ. ತೆರಿಗೆ ವಂಚನೆ ಅಘೋಷಿತ ನಗದು ವಹಿವಾಟು ಗುತ್ತಿಗೆಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರದ ಹಾಳೆಗಳು ಪುಸ್ತಕಗಳು ಡಿಜಿಟಲ್ ಡೇಟಾ ಸೇರಿದಂತೆ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ನಕಲಿ ಸ್ವಾಮಿಗೆ ತಕ್ಕ ಉತ್ತರ

ಡಿಕೆಶಿ ‘ಯಾರ್ಯಾರಿಗೆ ಏನೇನು ಉತ್ತರ ಕೊಡಬೇಕೋ ಖಂಡಿತ ಕೊಡುತ್ತೇನೆ. ಹೈ ವೋಲ್ಟೇಜ್ಗೂ ಕೊಡುತ್ತೇನೆ ಲೋ ವೋಲ್ಟೇಜ್ಗೂ ಕೊಡುತ್ತೇನೆ. ನಕಲಿಗಳಿಗೂ ಕೊಡುತ್ತೇನೆ ಲೂಟಿಗಳಿಗೂ ಕೊಡುತ್ತೇನೆ ಎಲ್ಲರಿಗೂ ಕೊಡುತ್ತೇನೆ. ಸ್ವಲ್ಪ ಕಾಯಿರಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿಡಿಮಿಡಿಗೊಂಡರು. ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಜತೆಗಿನ ಸಭೆಯ ಬಳಿಕ ಸಿಟ್ಟಿನಿಂದಲೇ ಪತ್ರಕರ್ತರೊಂದಿಗೆ ಮಾತನಾಡಿದ ಅವರು ‘ನಾಯಕರು ಮತ್ತು ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಹಣ ಸಂಗ್ರಹಿಸುವ ಗುರಿ ನೀಡಿದೆ’ ಎಂಬ ಬಿಜೆಪಿ ಜೆಡಿಎಸ್ ನಾಯಕರ ಆರೋಪಕ್ಕೆ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದರು. ‘ನಾನು ಹೇಡಿ ಅಲ್ಲ. ಹೆದರಿ ಎಲ್ಲಿಯೂ ಓಡಿ ಹೋಗಲ್ಲ. ಮಾಜಿ ಮುಖ್ಯಮಂತ್ರಿ ನಕಲಿ ಸ್ವಾಮಿ ಬ್ಲ್ಯಾಕ್ಮೇಲರ್ ಲೂಟಿ ರವಿ ಎಲ್ಲರಿಗೂ ತಕ್ಕ ಉತ್ತರ ಕೊಡುತ್ತೇನೆ. ಅವರದೆಲ್ಲ ಬಿಚ್ಚಿಡುತ್ತೇನೆ’ ಎಂದರು. ‘ಅವರಿಗೆ (ಬಿಜೆಪಿ ಜೆಡಿಎಸ್) ಆದಾಯ ತೆರಿಗೆ ಇಲಾಖೆಯ ಪ್ರಕ್ರಿಯೆ ಗೊತ್ತಿಲ್ಲ. ಅವರು ಏಜೆಂಟರಂತೆ ಮಾತನಾಡುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಅವರಂತೆ ಮಾತನಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.