ಬೆಂಗಳೂರು: ಮಳೆ ಬಂದರೆ ಈಜುಕೊಳದಂತಾಗುವ ಕೆಳಸೇತುವೆ, ಕಾಮಗಾರಿ ಮುಗಿದರೂ ಈಡೇರದ ಉದ್ದೇಶ, ಕೆಳಸೇತುವೆ ಹೆಸರಿನಲ್ಲಿ ಅಗೆದ ರಸ್ತೆಗಳಿಗೆ ದೊರೆತಿಲ್ಲ ಮುಕ್ತಿ...

ಇದು ಕೊಡಿಗೇಹಳ್ಳಿ ರೈಲ್ವೆ ಕೆಳಸೇತುವೆ ಕಾಮಗಾರಿಯ ಕಥೆ. ರೈಲು ಬಂದಾಗ ಗೇಟ್ ಹಾಕಬೇಕಾಗಿದ್ದ ಸ್ಥಿತಿ ತಪ್ಪಿಸಲು ಆರಂಭವಾದ ಈ ರೈಲ್ವೆ ಅಂಡರ್‌ಪಾಸ್ ಉದ್ಘಾಟನೆಗೊಂಡು ವರ್ಷಗಳೇ ಕಳೆದಿವೆ.

ಕೊಡಿಗೇಹಳ್ಳಿಯಿಂದ ತಿಂಡ್ಲು, ಸಹಕಾರ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದ್ದು, ರೈಲ್ವೆ ಇಲಾಖೆ ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿ 2014ರಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಅಮೆಗತಿಯಲ್ಲಿ ನಡೆದ ಕಾಮಗಾರಿಯಿಂದಾಗಿ ಐದು ವರ್ಷಗಳ ಕಾಲ ಇಲ್ಲಿನ ನಿವಾಸಿಗಳು ಪಡಿಪಾಟಲು ಎದುರಿಸಬೇಕಾಗಿ ಬಂತು. ಕೊನೆಗೂ 2019ರ ಏಪ್ರಿಲ್‌ನಲ್ಲಿ ಈ ಕೆಳಸೇತುವೆ ವಾಹನಗಳ ಸಂಚಾರಕ್ಕೆ ಮುಕ್ತವಾಯಿತು.

ಸೇತುವೆಯ ಅಡಿಯಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿರುವುದನ್ನು ಬಿಟ್ಟರೆ ನಾಲ್ಕು ಕಡೆಯ ಸರ್ವೀಸ್ ರಸ್ತೆಗಳು ಅಂದಿನಿಂದ ಅಭಿವೃದ್ಧಿಯನ್ನೇ ಕಂಡಿಲ್ಲ. ಐದಾರು ವರ್ಷಗಳಿಂದ ದೂಳಿನ ನಡುವೆಯೇ ಸ್ಥಳೀಯರು ಬದುಕು ಸಾಗಿಸುತ್ತಿದ್ದಾರೆ.

ಅಂಡರ್‌ಪಾಸ್‌ಗೆ ಹರಿದು ಬರುವ ಮಳೆ ನೀರು ಮುಂದೆ ಹೋಗಲು ಬೇಕಾದ ಒಳಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಸಮಸ್ಯೆ ಹೆಚ್ಚಿಸಿದೆ. ಸಣ್ಣ ಮಳೆ ಬಂದರೂ ಅಂಡರ್‌ಪಾಸ್ ತುಂಬಿಕೊಳ್ಳುತ್ತದೆ. ಅದರೊಟ್ಟಿಗೆ ಒಳಚರಂಡಿ ನೀರು ಸೇರಿಕೊಳ್ಳುತ್ತದೆ.

‘ಮಳೆ ಬಂದು ನೀರು ತುಂಬಿಕೊಂಡರೆ ತಿಂಡ್ಲು, ವಿದ್ಯಾರಣ್ಯಪುರ, ಸಹಕಾರನಗರದ ಕಡೆಗೆ ಹೋಗಬೇಕಾದ ಜನರು ಕೆನರಾ ಬ್ಯಾಂಕ್ ಲೇಔಟ್ ಕಡೆಯಿಂದ ಮೂರ್ನಾಲ್ಕು ಕಿಲೋ ಮೀಟರ್ ಸುತ್ತು ಹಾಕಬೇಕಾದ ಸ್ಥಿತಿ ಇದೆ. ನೀರು ತುಂಬಿಕೊಂಡಾಗ ಬಿಬಿಎಂಪಿ ಮತ್ತು ಜಲಮಂಡಳಿ ಸಿಬ್ಬಂದಿ ಮೋಟಾರ್‌ಗಳನ್ನು ತಂದು ಅದನ್ನು ಹೊರ ಹಾಕುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಹೀಗಾಗಿ, ಅಂಡರ್‌ಪಾಸ್ ಯೋಜನೆಯ ಉದ್ದೇಶವೇ ಬುಡಮೇಲಾಗಿದೆ’ ಎಂದು ಸ್ಥಳೀಯರು ದೂರುತ್ತಾರೆ.

‘ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ರೈಲ್ವೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು’ ಎಂದು ಟಾಟನಗರದ ಬಿ.ಮುನೇಗೌಡ ತಿಳಿಸಿದರು.

‘ಒಳಚರಂಡಿ ಸ್ಥಳಾಂತರಿಸಲು ಮತ್ತು ರೈಲ್ವೆ ಹಳಿಯ ಬಳಿ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಸಂಸದ ಡಿ.ವಿ. ಸದಾನಂದಗೌಡ ಪತ್ರ ಬರೆದಿದ್ದಾರೆ’ ಎಂದು ಅವರು ವಿವರಿಸಿದರು.

ರೈಲು ಹಳಿ ದಾಟುವ ಅಪಾಯ
ರೈಲ್ವೆ ಕೆಳ ಸೇತುವೆ ಮೇಲಿನ ರೈಲ್ವೆ ಹಳಿಗಳ ಬದಿಯಲ್ಲಿ ಆವರಣ ಗೋಡೆ ಇಲ್ಲದಿರುವುದು ಅಪಾಯಗಳಿಗೆ ಆಹ್ವಾನ ನೀಡುತ್ತಿದೆ.

ಬೆಂಗಳೂರು–ಹೈದರಾಬಾದ್ ಸಂಪರ್ಕ ಕಲ್ಪಿಸುವ ಪ್ರಮುಖ ರೈಲು ಮಾರ್ಗ ಇದಾಗಿರುವುದರಿಂದ ಸಾಕಷ್ಟು ಎಕ್ಸ್‌ಪ್ರೆಸ್ ರೈಲುಗಳು ಇದರಲ್ಲಿ ಸಂಚರಿಸುತ್ತವೆ. ಶಾಲಾ ಮಕ್ಕಳು ಅಪಾಯ ಲೆಕ್ಕಿಸದೇ ಹಳಿ ದಾಟಬೇಕಾಗಿದೆ.

ಎರಡೂ ಬದಿಯಲ್ಲಿ ಕೂಡಲೇ ಆವರಣ ಗೋಡೆ ನಿರ್ಮಿಸುವಂತೆ ಅಗತ್ಯ ಇದ್ದರೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಈ ಬಗ್ಗೆ ಸಂಸದ ಡಿ.ವಿ. ಸದಾನಂದಗೌಡ ಅವರೂ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದಾರೆ.

ರಾಜಧಾನಿ ಎಕ್ಸ್‌ಪ್ರೆಸ್ ತಡೆ: ಎಚ್ಚರಿಕೆ
ಮಲ ಹೊರುವ ಪದ್ಧತಿ ಈಗ ಜಾರಿಯಲ್ಲಿ ಇಲ್ಲ. ಆದರೆ, ರೈಲ್ವೆ ಕೆಳ ಸೇತುವೆಯಲ್ಲಿ ಸಂಚರಿಸುವ ಎಲ್ಲರ ಮೇಲೆ ಒಳ ಚರಂಡಿ ನೀರಿನ ಸಿಂಚನವಾಗುತ್ತಿದೆ. ಈ ಕಾಮಗಾರಿಯನ್ನು ಸಂಪೂರ್ಣವಾಗಿ ರೈಲ್ವೆ ಇಲಾಖೆಯ ಸುಪರ್ದಿಗೆ ವಹಿಸಿದ್ದೇ ದೊಡ್ಡ ತಪ್ಪು ಎಂಬಂತಾಗಿದೆ. ಸಮಸ್ಯೆಯನ್ನು ಕೂಡಲೇ ಸರಿಪಡಿಸದಿದ್ದರೆ ರೈಲ್ವೆ ಇಲಾಖೆಗೆ ಲಿಖಿತ ಮಾಹಿತಿ ನೀಡಿ ಸುತ್ತಮುತ್ತಲ 10 ಸಾವಿರಕ್ಕೂ ಹೆಚ್ಚು ಜನರೊಂದಿಗೆ ರಾಜಧಾನಿ ಎಕ್ಸ್‌ಪ್ರೆಸ್ ತಡೆದು ಪ್ರತಿಭಟನೆ ನಡೆಸಲಾಗುವುದು.
–ಕೆ.ಎನ್.ಚಕ್ರಪಾಣಿ, ಬಿಜೆಪಿ ಮುಖಂಡ

ಅಂಕಿ–ಅಂಶ
* ₹120 ಕೋಟಿ:ರೈಲ್ವೆ ಕೆಳಸೇತುವೆ ಯೋಜನೆಯ ಒಟ್ಟು ಮೊತ್ತ
* 73:ಕಾಮಗಾರಿ ಸಲುವಾಗಿ ಸ್ವಾಧೀನಪಡಿಸಿಕೊಂಡಿರುವ ಕಟ್ಟಡಗಳು
*80 ಅಡಿ:ಕೆಳಸೇತುವೆ ರಸ್ತೆಯ ಅಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.